ಜಯಶಂಕರ್ ಹಲಗೂರು
ಬಸವರಾಜು ಮೇಗಲಕೇರಿ ಅವರ ಕೃತಿ ‘ಸಿನೆಮಾ ಬಂಡಿ’
ಸಿನಿ ಲೋಕದ ಕುರಿತ ಈ ಪುಸ್ತಕದ ಕುರಿತು ಜಯಶಂಕರ್ ಹಲಗೂರು ಬರೆದ ವಿಮರ್ಶೆ ಇಲ್ಲಿದೆ
ಬಸವರಾಜು ಮೇಗಲಕೇರಿ ಅವರ ಹೊಸ ಪುಸ್ತಕ. ಆಕರ್ಷಕವೂ ಔಚಿತ್ಯಪೂರ್ಣವೂ ಆದ ಹೆಸರು ಹೊತ್ತು ಬಂದಿರುವ ಇದು, ಸಿನಿಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ.
ಕನ್ನಡ ಚಲನಚಿತ್ರ ಚರಿತ್ರೆಗೆ ಒಂದು ಚೌಕಟ್ಟೇ ಇನ್ನೂ ರಚನೆಯಾಗಿಲ್ಲ ಎಂಬುದನ್ನು ನೆನೆದರೆ ಈ ಕೃತಿಯ ಮಹತ್ವ ಹೊಳೆಯುತ್ತದೆ. ಚರಿತ್ರೆಯ ಜೊತೆಗೆ ಸಿನಿಮಾ ಎಂಬ ಸಂಕೀರ್ಣವಾದ ಒಂದು ಕಲಾಕೃತಿಯನ್ನು ಪ್ರವೇಶಿಸುವ ಕಣ್ಣೋಟಗಳನ್ನು ಇಲ್ಲಿ ರೂಪಿಸಲಾಗಿದೆ.
ಮುಖ್ಯವಾಗಿ ಒಬ್ಬ ಸಾಮಾನ್ಯ ನೋಡುಗ ಸಿನಿಮಾ ಲೋಕದ ಬಗೆಗೆ ತನ್ನ ಹುಚ್ಚು, ಮೆಚ್ಚು, ಅಭಿಮಾನಗಳೊಡನೆ ತಳೆಯಬಹುದಾದ ಹಲಬಗೆಯ ಸಹಜ ಕುತೂಹಲಗಳನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಾಗೇ ತಾನು ನೋಡುವ ಸಿನಿಪ್ರಪಂಚ ತನ್ನೊಳಗೆ ಉಂಟುಮಾಡುವ ನಾನಾ ಬಗೆಯ ಭಾವನಾತ್ಮಕ ತಲ್ಲಣಗಳನ್ನು ದಾಖಲಿಸಿದ್ದಾರೆ, ಈ ತಲ್ಲಣಗಳು ತನ್ನ ಎದುರಿಗಿರುವ ಪ್ರಪಂಚದೊಡನೆ ಸ್ಪಂದಿಸುವಷ್ಟು ಸಣ್ಣ ಮಮಕಾರವಿರುವ ಯಾವುದೇ ಮನದ ತಳಮಳಗಳೇ ಆಗಿವೆ.

ಇಲ್ಲಿ ವ್ಯಕ್ತಿಗಳು-ಚಿತ್ರಗಳು-ಬೆಳ್ಳಿ ಹೆಜ್ಜೆಗಳು ಎಂಬ ಮೂರು ಗುಂಪಿನ ಬರಹಗಳಿವೆ. ಸಿನಿಮಾ ಎಂಬ ಮಾಂತ್ರಿಕ ಜಗತ್ತನ್ನು ಸೃಷ್ಟಿಸುವ ನಿರ್ದೇಶಕ, ನಿರ್ಮಾಪಕ, ನಟನಟಿಯರು, ಸಂಗೀತ ಸಂಯೋಜಕರು, ಹಿನ್ನೆಲೆ ಗಾಯಕರು… ಹೀಗೆ ಹಲವು ಮುಖಗಳ ಬಗೆಗೆ ಅತ್ಯುತ್ತಮ ಅಭಿರುಚಿಯ ಬರಹಗಳಿವೆ.
ಜೊತೆಗೆ ಹಲವು, ಕನ್ನಡ – ಭಾರತೀಯ- ವಿದೇಶಿ ಸಿನಿಮಾಗಳ ವಿಮರ್ಶಾ ಬರಹಗಳಿವೆ.
ಸ್ವರ್ಣಕಮಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ತಮ್ಮ “ಸಿನಿಮಾ ಯಾನ” ಕೃತಿಯ ಮೂಲಕ ಕನ್ನಡ ಚಲನಚಿತ್ರ ಚರಿತ್ರೆಯನ್ನು ಬರೆಯಲೆತ್ನಿಸಿದ, ಕನ್ನಡ ಸಿನಿಮಾಲೋಕವನ್ನು ಗ್ರಹಿಸಬೇಕಾದ ದೃಷ್ಟಿಕೋನಗಳನ್ನು ಸೃಷ್ಟಿಸಿದ, ಪ್ರಸಿದ್ಧ ಲೇಖಕರಾದ ಡಾ. ಕೆ. ಪುಟ್ಟಸ್ವಾಮಿ ಅವರು ಈ ಕೃತಿಗೆ ಬರೆದಿರುವ ಮುನ್ನುಡಿಯ ಮಾತುಗಳಿವು :
‘ತಾವು ಆರಿಸಿಕೊಂಡಿರುವ ಚಿತ್ರಗಳನ್ನು ಒಂದು ಐತಿಹಾಸಿಕ ಮತ್ತು ಸಾಮಾಜಿಕ ಭಿತ್ತಿಯಲ್ಲಿಟ್ಟು ಸಮಕಾಲೀನ ಸಂಗತಿಗಳೊಂದಿಗೆ ಮುಖಾಮುಖಿಯಾಗಿಸುವುದು ಬಸವರಾಜು ಅವರ ಬರವಣಿಗೆಯ ವಿಶೇಷ. ಈ ಚಿತ್ರಗಳು ಎತ್ತುವ ಸಾಮಾಜಿಕ ಸಮಸ್ಯೆಗಳನ್ನು ನಿಕಷಕ್ಕೆ ಒಡ್ಡುತ್ತಾರೆ. ಚಿತ್ರಗಳ ಅನನ್ಯತೆಯನ್ನು ಗುರುತಿಸುತ್ತಲೇ ಅವುಗಳ ಸೌಂದರ್ಯದ ಸೊಬಗನ್ನೂ ಅನಾವರಣ ಮಾಡುತ್ತಾರೆ. ಅವರ ವಿಶ್ಲೇಷಣೆಯಲ್ಲಿ ಗಂಭೀರ ಮೀಮಾಂಸಕನೊಬ್ಬ ಬಳಸುವ ಪಾರಿಭಾಷಿಕ ಶಬ್ದಗಳ ದಾಳಿಯಿಲ್ಲ. ಬದಲಾಗಿ ತಮಗೆ ಕಂಡದ್ದನ್ನು ಜನಪ್ರಿಯ ಶೈಲಿಯಲ್ಲಿ, ಪಾರಿಭಾಷಿಕ ಪದಗಳ ಹಂಗಿಲ್ಲದೆ, ಹೃದ್ಯವಾಗಿ ಹೇಳುತ್ತಾ ಸಿನೆಮಾ ಲಕ್ಷಣಗಳನ್ನು ತೋರಿಸುತ್ತಾರೆ.’
ಪಿ. ಲಂಕೇಶರ ಮೇಲಿನ ಅಭಿಮಾನಕ್ಕಾಗಿ ಚನ್ನರಾಯಪಟ್ಟಣ ತೊರೆದು ಲಂಕೇಶ್ ಪತ್ರಿಕೆ ಸೇರಿದ ಬಯಲಸೀಮೆಯನ್ನೇ ಮುರಿದು ತಂದಂತೆ ಇದ್ದ ಬಸವರಾಜ ಎಂಬ ಹಳ್ಳಿಹೈದ “ಬಸು ಮೇಗಲಕೇರಿ” ಆಗಿ ರೂಪ ಪಡೆದು, ಲಂಕೇಶರ ಪುಸ್ತಕ ಮಳಿಗೆಯ ಮಾರಾಟಗಾರನಾಗಿ, ಪತ್ರಿಕೆಯ ಡಿಸೈನರ್ ಆಗಿ, ಪತ್ರಕರ್ತನಾಗಿ, ಬರಹಗಾರನಾಗಿ, ಹಲವು ಪತ್ರಿಕೆಗಳ ಸಂಪಾದಕನಾಗಿ, ನಾಲ್ಕಾರು ಮೌಲಿಕ ಕೃತಿಗಳ ಕರ್ತೃವಾಗಿ, ಸಿನೆಮಾಪ್ರಿಯ ಮತ್ತು ವಿಮರ್ಶಕನಾಗಿ ಹೊಮ್ಮಿದುದೇ ಒಂದು ಮಹಾಯಾನ.






0 Comments