ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧಾರವಾಡದಲ್ಲಿ 'ಸಾಹಿತ್ಯ ಸಂಭ್ರಮ': ಯಾರಿಗೆ ಬೇಕು? ಯಾಕೆ ಬೇಕು?

ಜೈಪುರದಲ್ಲಿ ಲಿಟರೇಚರ್ ಫೆಸ್ಟಿವಲ್ ನೋಡಿ ಬಂದ ಗಿರಡ್ಡಿ ಗೋವಿಂದರಾಜ, ಸಮೀರ್ ಜೋಷಿ ಹಾಗೂ ಇತರರು ಧಾರವಾಡದಲ್ಲಿಯೂ ಒಂದು ಕನ್ನಡ ಲಿಟರೇಚರ್ ಫೆಸ್ಟಿವಲ್ ನಡೆಸುವ ಹುಕಿಗೆ ಬಿದ್ದಿದ್ದಾರೆ. ಈ ಸಂಭ್ರಮದ ಬಗ್ಗೆ ಆಗಲೇ ಅಪಸ್ವರ ಎದ್ದಿದೆ. ಪಾಟೀಲ ಪುಟ್ಟಪ್ಪನವರು ಈ ‘ಸಾಹಿತ್ಯ ಸಂಭ್ರಮ’ದ ಹಿಂದಿರುವ ಮನಸ್ಸನ್ನು ಟೀಕಿಸಿದ್ದಾರೆ. ಲೋಕಾಯುಕ್ತ ತನಿಕೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಭ್ರಮ ಯಾರಿಗಾಗಿ, ಯಾಕಾಗಿ ಎನ್ನುವ ಪ್ರಶ್ನೆ ಖಂಡಿತಾ ಎದ್ದಿದೆ. ಈ ಸಂಭ್ರಮದ ಬಗ್ಗೆ ಜೋಗಿ ನಿರುದ್ವಿಗ್ನವಾಗಿ ಆದರೆ ಖಡಕ್ಕಾಗಿ ಕೆಲವು  ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಯನ್ನು ನಾವು ‘ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿದ್ದೇವೆ. ಜುಗಾರಿ ಕ್ರಾಸ್ ಹೇಳಿ ಕೇಳಿ ಚರ್ಚೆಗಾಗಿಯೇ ಇರುವ ವೇದಿಕೆ.

ಬನ್ನಿ ಪಾಲ್ಗೊಳ್ಳಿ ನಿಮ್ಮ ಅನಿಸಿಕೆ, ಅಭಿಪ್ರಾಯ ಬರೆದು ಕಳಿಸಿ.

.

“ಸಾಹಿತ್ಯ ಸಮ್ಮೇಳನದಲ್ಲಿ ಶಸ್ತ್ರ-ಶಾಸ್ತ್ರ”

– ಜೋಗಿ

ಸಾಹಿತ್ಯ ಆಸಕ್ತರು ಶ್ರೀಮಂತರಾಗಿರಬೇಕು ಎಂದೂ, ಸಾಹಿತ್ಯ ಸಮ್ಮೇಳನ ಶ್ರೀಮಂತರಿಗಷ್ಟೇ ಮೀಸಲು ಎಂದೂ ಧಾರವಾಡ ಸಾಹಿತ್ಯ ಸಂಭ್ರಮ ಪರಿಗಣಿಸಿದೆಯಾ? ಜೈಪುರ ಸಾಹಿತ್ಯ ಸಮ್ಮೇಳನದ ಕುರಿತು ಬರೆಯುತ್ತಾ ಗಿರಡ್ಡಿ ಹೇಳುವ ‘ಕೋಟ್ಯಂತರ ರೂಪಾಯಿಗಳ ವ್ಯವಹಾರ!’ ಇಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ಆಗಿದೆಯಾ? ತನ್ನ ವಿಚಿತ್ರ ರೂಪರೇಷೆ ಮತ್ತು ವಿಶೇಷ ಕಟ್ಟುಪಾಡುಗಳಿಂದ ಧಾರವಾಡ ಸಾಹಿತ್ಯ ಸಮ್ಮೇಳನ ನಗೆಪಾಟಲು ಮತ್ತು ವಿರೋಧಕ್ಕೆ ಗುರಿಯಾದಂತಿದೆ.
ಸರ್ಕಾರಿ ಕೃಪಾಪೋಷಿತ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಫೆಬ್ರವರಿ 9ರಿಂದ 11ರ ತನಕ ಬಿಜಾಪುರದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಧಾರವಾಡದಲ್ಲಿ, ಜನವರಿ 25ರಿಂದ 27ರ ತನಕ ಮೂರು ದಿನದ ಸಾಹಿತ್ಯ ಸಂಭ್ರಮವೊಂದು ನಡೆಯಲಿದೆ. ಹೀಗಾಗಿ ಈ ವರುಷ ಸಾಹಿತಿಗಳಿಗೆ ಡಬಲ್‌ ಬೆನಿಫಿಟ್‌ ಸ್ಕೀಮು ಜಾರಿಯಾಗಿದೆ. ಅಲ್ಲಿ ಸಲ್ಲದವರು ಇಲ್ಲಿಯೂ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲಬಹುದು.
ಧಾರವಾಡದಲ್ಲಿ ನಡೆಯಲಿರುವುದು ಜೈಪುರ ಲಿಟರೇಚರ್‌ ಫೆಸ್ಟಿವಲ್‌ ಮಾದರಿಯ ಸಮ್ಮೇಳನ. ಜೈಪುರ್‌ ಲಿಟರರಿ ಫೆಸ್ಟಿವಲ್‌ಗೊಂದು ಇತಿಹಾಸವಿದೆ. 2006ರಲ್ಲಿ ಶುರುವಾದ ಆ ಸಮ್ಮೇಳನದ ಹಿಂದೆ ವಿಲಿಯಲ್‌ ಡಾಲ್‌ರಿಂಪಲ್‌, ನಮಿತಾ ಗೋಖಲೆ, ಸಂಜಯ್‌ ರಾಯ್‌ ಮುಂತಾದವರಿದ್ದಾರೆ. ಇಡೀ ವರ್ಷ ಅವರು ಸಾಹಿತ್ಯೋತ್ಸವದ ಸ್ವರೂಪ ಹೇಗಿರಬೇಕು ಅನ್ನುವುದನ್ನು ನಿರ್ಧರಿಸುತ್ತಾರೆ. ದೇಶವಿದೇಶಗಳಿಂದ ಲೇಖಕರು ಬರುತ್ತಾರೆ. ತರುಣ ತರುಣಿಯರು ಭಾಗವಹಿಸುತ್ತಾರೆ. ಕಮ್ಮಟ, ಗಾಯನ, ಗೋಷ್ಠಿ, ಚರ್ಚೆಗಳು ನಡೆಯುತ್ತವೆ. ಕಳೆದ ವರುಷದ ಸಮ್ಮೇಳನದಲ್ಲಿ ಗಿರೀಶ್‌ ಕಾರ್ನಾಡ್‌ ಮತ್ತು ಎಚ್‌ ಎಸ್‌ ಶಿವಪ್ರಕಾಶ್‌ ಭಾಗವಹಿಸಿದ್ದರು. ಈ ಬಾರಿ ಜನವರಿ 24ರಿಂದ 28ರ ತನಕ ನಡೆಯಲಿರುವ ಜೈಪುರ ಸಮ್ಮೇಳನದಲ್ಲಿ ಚಂದ್ರಶೇಖರ ಕಂಬಾರ ಭಾಗವಹಿಸಲಿದ್ದಾರೆ.
ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಜೈಪುರ್‌ ಸಾಹಿತ್ಯ ಸಮ್ಮೇಳನವೇ ಸ್ಫೂರ್ತಿ ಎಂದು ಧಾರವಾಡ ಸಾಹಿತ್ಯ ಸಂಭ್ರಮದ ಅಧ್ಯಕ್ಷ ಗಿರಡ್ಡಿ ಗೋವಿಂದರಾಜು ಹೇಳಿದ್ದಾರೆ. ‘ಕಳೆದ ವರ್ಷ ಜೈಪುರ ಲಿಟರೇಚರ್‌ ಫೆಸ್ಟಿವಲ… ನೋಡಲು ಧಾರವಾಡದಿಂದ ನಾವು ನಾಲ್ಕು ಜನ – ನಾನು, ರಮಾಕಾಂತ ಜೋಶಿ, ಲೋಹಿತ ನಾಯ್ಕರ್‌ ಮತ್ತು ಶಶಿಧರ ನರೇಂದ್ರ – ಜೈಪುರಕ್ಕೆ ಹೋಗಿದ್ದೆವು. ಭಾರತದ ಬೇರೆ ಬೇರೆ ಭಾಷೆಗಳ ಮತ್ತು ಪರದೇಶಗಳ ಅನೇಕ ಬರಹಗಾರರು ಅದರಲ್ಲಿ ಪಾಲ್ಗೊಂಡಿದ್ದರು. ಕೋಟ್ಯಂತರ ರೂಪಾಯಿಗಳ ವ್ಯವಹಾರ! ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ ತರುಣರ ಹಿಂಡುಗಳು ಅಲ್ಲಿ ಅಲೆದಾಡಿಕೊಂಡಿದ್ದವು. ಭಾರತೀಯ ಭಾಷೆಗಳು ಅದೃಶ್ಯವಾಗಿದ್ದವು. ಇದನ್ನೆಲ್ಲ ನೋಡಿ, ಒಂದು ಬಗೆಯ ಪರಕೀಯ ಭಾವನೆ, ನಮ್ಮದಲ್ಲದ ಯಾವುದನ್ನೋ ದೂರದಿಂದ ನೋಡಿದ ಅನುಭವ ನಮಗಾಯಿತು. ತಿರುಗಿ ಬರುತ್ತ, ನಾವೂ ಇಂಥದೊಂದು ಉತ್ಸವವನ್ನು ಹಮ್ಮಿಕೊಳ್ಳಬಾರದೇಕೆ ಎಂಬ ವಿಚಾರ ಸುಳಿದಾಡತೊಡಗಿತು. ಅದು ಧಾರವಾಡದಲ್ಲಿ ನಡೆಯಬೇಕು ಮತ್ತು ಕನ್ನಡ ಸಾಹಿತ್ಯಕ್ಕೆ ಸೀಮಿತವಾಗಿರಬೇಕು ಎಂದು ಮಾತಾಡಿಕೊಂಡೆವು.’
ಆ ಹುಮ್ಮಸ್ಸಿನಲ್ಲೇ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಶುರುವಾಯಿತು. ಮಾಮೂಲಿ ವಿಚಾರ ಸಂಕಿರಣ ಮತ್ತು ಸಾಹಿತ್ಯ ಸಮ್ಮೇಳನಕ್ಕಿಂತ ಇದು ಭಿನ್ನವಾಗಿರುತ್ತದೆ. ಇಲ್ಲಿ ಭಾಷಣಕ್ಕಿಂತ ಓದು, ಸಂಭಾಷಣೆ, ಮಾತುಕತೆ, ಚರ್ಚೆ ಮುಂತಾದವೇ ಮುಖ್ಯವಾಗಿರುತ್ತವೆ. ನೂರು ಜನ ಸಾಹಿತಿಗಳು ರಾಜ್ಯದ ಒಳಹೊರಗಿನಿಂದ ಬರುತ್ತಾರೆ ಎಂದು ಗಿರಡ್ಡಿ ಹೇಳಿಕೊಂಡಿದ್ದಾರೆ. ಗಿರಡ್ಡಿ ಗೋವಿಂದರಾಜ, ಚೆನ್ನವೀರ ಕಣವಿ, ಜಿ.ಎಸ್‌. ಆಮೂರ, ಗಿರೀಶ ಕಾರ್ನಾಡ, ಎಂ.ಎಂ. ಕಲಬುರ್ಗಿ, ರಮಾಕಾಂತ ಜೋಶಿ, ವೀಣಾ ಶಾಂತೇಶ್ವರ- ಹೀಗೆ ಹತ್ತಾರು ಸಾಹಿತಿಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಈ ಮಧ್ಯೆ ತಕರಾರಿಗೆ ಕಾರಣವಾಗಿರುವುದು ಜೈಪುರ ಮಾದರಿಯನ್ನು ಧಾಸಾಸಂ ಆರಿಸಿಕೊಂಡದ್ದು. ಜೈಪುರ ಸಮ್ಮೇಳನ ಪ್ರತಿನಿಧಿಗಳಿಗೆ ದಿನಕ್ಕೆ 2500 ರೂ. ಪ್ರತಿನಿಧಿ ಶುಲ್ಕವನ್ನೂ ಐದೂ ದಿನಗಳ ನೋಂದಣಿಗೆ 10,000 ರೂ. ಪ್ರತಿನಿಧಿ ಶುಲ್ಕವನ್ನೂ ನಿಗದಿ ಮಾಡಿದೆ. ಕೇವಲ ನೋಂದಾಯಿತ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ. ಅದರ ಜೊತೆಗೆ ಹತ್ತಾರು ಕಟ್ಟುಪಾಡುಗಳನ್ನೂ ಸಾಹಿತ್ಯಾಸಕ್ತರು ಪಾಲಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಫೋಟೋ ಐಡಿ ಹೊಂದಿರಬೇಕು. ಅರ್ಜಿಗಳನ್ನು ನಿರಾಕರಿಸುವ ಹಕ್ಕು ಸಮಿತಿಗಿದೆ. ಸಮ್ಮೇಳನದಲ್ಲಿ ಎಲ್ಲೆಂದರಲ್ಲಿ ಓಡಾಡುವಂತಿಲ್ಲ. ಗೌರವದಿಂದ ವರ್ತಿಸಿ, ಶಸ್ತ್ರಾಸ್ತ್ರ ತರಕೂಡದು, ಮದ್ಯಪಾನ, ಧೂಮಪಾನ, ಮಾದಕ ದ್ರವ್ಯ ಸೇವನೆ ಕೂಡದು ಮುಂತಾದ ಕಟ್ಟುಪಾಡುಗಳನ್ನು ಪ್ರತಿನಿಧಿಗಳು ಪಾಲಿಸಬೇಕಾಗುತ್ತದೆ. ಸುಮಾರು ಒಂದು ಲಕ್ಷ ಮಂದಿ ಸೇರುವ, ದೇಶವಿದೇಶಗಳ ಪ್ರತಿನಿಧಿಗಳು ಭಾಗವಹಿಸುವ ಕಾರ್ಯಕ್ರಮ ಆಗಿರುವುದರಿಂದ ಅವೆಲ್ಲ ಸಹಜ. ಅದರಲ್ಲೂ ವಿದೇಶಿ ಪ್ರತಿನಿಧಿಗಳು ಅವೆಲ್ಲವನ್ನೂ ನಿರೀಕ್ಷಿಸುತ್ತಾರೆ.
ಧಾರವಾಡ ಸಾಹಿತ್ಯ ಸಂಭ್ರಮ ಅವೇ ಕಟ್ಟುಪಾಡುಗಳನ್ನು ನಕಲು ಮಾಡಲು ಹೋಗಿ ನಗೆಪಾಟಲಿಗೆ ಗುರಿಯಾಗಿದೆ. ಜೈಪುರ ಸಮ್ಮೇಳನದ ನಿಯಾಮವಳಿಗಳ ಪಟ್ಟಿಯನ್ನು ಯಥಾವತ್ತಾಗಿ ಅನುವಾದ ಮಾಡಿ ನೀಡಿದಾಗ ಆಗಿರುವ ಪ್ರಮಾದಗಳು ಇವು:
1. ಪ್ರತಿ ನೋಂದಣಿಯು ಕೇವಲ ಒಬ್ಬರಿಗೆ ಮಾತ್ರ ಕ್ರಮಬದ್ಧವಾಗಿರುತ್ತದೆ. ಅದನ್ನು ಇನ್ನೊಬ್ಬರಿಗೆ ವರ್ಗಾಯಿಸಲು ಬರುವುದಿಲ್ಲ.
2. ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಕೊರಳಿನಲ್ಲಿ ಧರಿಸಬೇಕು. ಗುರುತಿನ ಚೀಟಿ ಇಲ್ಲದೇ ಯಾರಿಗೂ ಪ್ರವೇಶವಿಲ್ಲ.
3. ಸಾಹಿತ್ಯ ಸಂಭ್ರಮಕ್ಕೆ ಪ್ರವೇಶ ನೀಡುವುದನ್ನು ಕಾಯ್ದಿರಿಸಲಾಗಿದೆ.
4. ಅನುಚಿತ ವರ್ತನೆಗಾಗಿ ಸಭಾಂಗಣದಿಂದ, ಕಾರ್ಯಕ್ರಮದ ಸ್ಥಳದಿಂದ ಹೊರಗೆ ಕಳಿಸುವ ಅಧಿಕಾರ ಸಂಘಟಕರಿಗೆ, ಅವರ ಪರವಾಗಿ ಕಾರ್ಯನಿರ್ವಹಿಸುವ ಅಧಿಕಾರಿ/ ಸಿಬ್ಬಂದಿ/ ಸ್ವಯಂ ಸೇವಕರಿಗೆ ಕಾಯ್ದಿರಿಸಲಾಗಿದೆ.
ಈ ನಿಯಮಾವಳಿಗಳನ್ನು ಸಹಿಸಿಕೊಳ್ಳಬಹುದೆಂದು ಒಪ್ಪುವವರೂ ವರ್ತನೆಯ ಕುರಿತು ಹಾಕಿರುವ ಕಟ್ಟುಪಾಡುಗಳ ಬಗ್ಗೆ ಸಿಟ್ಟಾಗಿದ್ದಾರೆ. ಅವು ಹೀಗಿವೆ:
1. ಪ್ರತಿಯೊಬ್ಬರೂ ಸಭ್ಯವಾಗಿ ವರ್ತಿಸಬೇಕು.
2. ಗೋಷ್ಠಿ ನಡೆದಾಗ ಯಾರಿಗೂ ಮಧ್ಯ ಪ್ರವೇಶಿಸಿ ಮಾತನಾಡುವ ಅವಕಾಶವಿರುವುದಿಲ್ಲ.ಗೋಷ್ಠಿಯ ಸಂಚಾಲಕರು ಅನುಮತಿ ನೀಡಿದರೆ ಮಾತ್ರ ಪ್ರಶ್ನೆ ಕೇಳಲು ಅವಕಾಶ ಇರುತ್ತದೆ.
3. ಕಾರ್ಯಕ್ರಮದ ಪ್ರವೇಶಸ್ಥಳ/ ಸಭಾಂಗಣದಲ್ಲಿ ಮದ್ಯ, ತಂಬಾಕು ಅಥವಾ ಮಾದಕ ವಸ್ತುಗಳನ್ನು ಸೇವಿಸಬಾರದು.
4. ಕಾರ್ಯಕ್ರಮದ ಪ್ರವೇಶಸ್ಥಳ/ ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದು.

***

ಸಾಹಿತ್ಯ ಸಮ್ಮೇಳನಕ್ಕೆ ಶಸ್ತ್ರಾಸ್ತ್ರ ತರಬಾರದು ಅನ್ನುವುದನ್ನು ಸಾಹಿತಿಗಳಿಗೆ ಹೇಳುವುದು ತರವೇ? ಖಡ್ಗವಾಗಲಿ ಕಾವ್ಯ ಅಂತ ಘೋಷಿಸಿದ ಸಾಹಿತ್ಯ ಪರಂಪರೆ ನಮ್ಮದು. ಮಾದಕ ವಸ್ತುವನ್ನೋ ಮದ್ಯವನ್ನೋ ಯಾವುದಾದರೂ ಸಾಹಿತ್ಯ ಸಮ್ಮೇಳನದಲ್ಲಿ ತಂದು ಕುಡಿದ ಉದಾಹರಣೆ ಇದೆಯಾ? ಗೋಷ್ಠಿಯ ಮಧ್ಯೆ ಮಾತಾಡಬಾರದು ಅನ್ನುವುದು ಅವರೇ ಹೇಳಿರುವ ಮಾತು, ಸಂಭಾಷಣೆ ಮತ್ತು ಚರ್ಚೆಯ ಸ್ವರೂಪಕ್ಕೆ ವಿರುದ್ಧವಾದದ್ದಲ್ಲವೇ? ಪ್ರತಿನಿಧಿಗಳಿಗೆ 1500 ರೂ. ಶುಲ್ಕ ಇಟ್ಟ ನಂತರವೂ ವಸತಿ ಮತ್ತು ರಾತ್ರಿಯೂಟದ ವ್ಯವಸ್ಥೆ ಇಲ್ಲ ಎನ್ನುವುದು ಎಷ್ಟು ಸರಿ?
ಇದಕ್ಕಿಂತ ಮುಖ್ಯ ಪ್ರಶ್ನೆ ಎಂದರೆ, ಸಾಹಿತ್ಯ ಸಂಭ್ರಮ ಕೇವಲ ಕನ್ನಡಕ್ಕೆ ಸೀಮಿತವಾಗಿದೆ. ಗೋಷ್ಠಿಗಳಲ್ಲಿ ಭಾಗವಹಿಸುವ ಬಹುತೇಕ ಲೇಖಕರು ಕನ್ನಡಿಗರೇ. ಅವರ ಪುಸ್ತಕಗಳು ಲಭ್ಯವಿವೆ. ಅವರ ಭಾಷಣಗಳನ್ನು ಜನ ಅಲ್ಲಲ್ಲಿ ಕೇಳುತ್ತಲೇ ಇರುತ್ತಾರೆ. ಅಂಥ ಲೇಖಕರ, ಭಾಷಣಕಾರರ ಮಾತುಗಳನ್ನು ಕೇಳಲು ದುಡ್ಡು ಕೊಟ್ಟು ಬರುವವರು ಇದ್ದಾರಾ? ಈಗಾಗಲೇ ನೂರು ಲೇಖಕರನ್ನು ಸಮ್ಮೇಳನದ ಸಂಪನ್ಮೂಲ ವ್ಯಕ್ತಿಗಳೆಂದು ಪರಿಗಣಿಸಿ, ಅವರ ಊಟ ವಸತಿ ಪ್ರಯಾಣಗಳನ್ನು ಟ್ರಸ್ಟ್‌ ವಹಿಸಿಕೊಂಡಿದೆ. ಇನ್ನುಳಿದ ಮುನ್ನೂರು ಮಂದಿ 1500 ರೂ. ಶುಲ್ಕ ತೆತ್ತು ಬರುತ್ತಾರೆಂದು ನಿರೀಕ್ಷಿಸಬಹುದಾ? ವಸತಿ, ಊಟ, ಪ್ರಯಾಣದ ಖರ್ಚು ಸೇರಿ ಸಮ್ಮೇಳನಕ್ಕೆ ಹತ್ತು ಸಾವಿರ ಖರ್ಚು ಮಾಡುವಷ್ಟು ಧನಿಕ ಸಾಹಿತ್ಯಾಭಿಮಾನಿಗಳು ಇದ್ದಾರಾ?
ಸಾಹಿತ್ಯ ಆಸಕ್ತರು ಶ್ರೀಮಂತರಾಗಿರಬೇಕು ಎಂದೂ, ಸಾಹಿತ್ಯ ಸಮ್ಮೇಳನ ಶ್ರೀಮಂತರಿಗಷ್ಟೇ ಮೀಸಲು ಎಂದೂ ಧಾರವಾಡ ಸಾಹಿತ್ಯ ಸಂಭ್ರಮ ಪರಿಗಣಿಸಿದೆಯಾ ಎಂಬುದು ಬಹುತೇಕ ಲೇಖಕರು ಕೇಳುತ್ತಿರುವ ಪ್ರಶ್ನೆ. ಜೈಪುರ ಸಾಹಿತ್ಯ ಸಮ್ಮೇಳನದ ಕುರಿತು ಬರೆಯುತ್ತಾ ಗಿರಡ್ಡಿ ಹೇಳುವ ‘ಕೋಟ್ಯಂತರ ರೂಪಾಯಿಗಳ ವ್ಯವಹಾರ!’ ಇಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ಆಗಿದೆಯಾ ಎಂಬ ಪ್ರಶ್ನೆಯೂ ಬರುತ್ತಿದೆ. ಸಮ್ಮೇಳನ ಶುರುವಾಗುವ ಮೊದಲೇ ಲೆಕ್ಕ ಕೇಳಲು ಹೊರಟವರೂ ಇದ್ದಾರೆ!
ತನ್ನ ವಿಚಿತ್ರ ರೂಪರೇಷೆ ಮತ್ತು ವಿಶೇಷ ಕಟ್ಟುಪಾಡುಗಳಿಂದ ಧಾರವಾಡ ಸಾಹಿತ್ಯ ಸಮ್ಮೇಳನ ನಗೆಪಾಟಲಿಗೆ ಗುರಿಯಾದಂತಿದೆ. ಇದಕ್ಕೆ ಪರ್ಯಾಯವಾಗಿ ಮತ್ತೂಂದು ಸಾಹಿತ್ಯ ಸಮ್ಮೇಳನವನ್ನು ಅದೇ ದಿನಾಂಕಗಳಲ್ಲಿ ಧಾರವಾಡದಲ್ಲೇ ನಡೆಸುವ ಕುರಿತೂ ಮತ್ತೂಂದು ಸಾಹಿತ್ಯ ಬಳಗ ಯೋಚಿಸುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ.ಅಂದರೆ ಧಾರವಾಡ ಸಾಹಿತ್ಯ ಸಂಭ್ರಮ ಸಾಹಿತಿಗಳನ್ನು ಒಗ್ಗೂಡಿಸುವ ಬದಲು ಒಡೆಯುತ್ತಿದೆಯಾ?
ಹಾಗಿದ್ದರೆ, ಎರಡು ಸಾಹಿತ್ಯ ಸಮ್ಮೇಳನಗಳನ್ನು ತಡೆದುಕೊಳ್ಳುವಷ್ಟು ಔದಾರ್ಯ ಕನ್ನಡಿಗರಿಗೆ ಇಲ್ಲವೇ? ಹೊಸದೊಂದು ಪ್ರಕ್ರಿಯೆ ಆರಂಭವಾಗುತ್ತಿರುವಾಗಲೇ ಅದನ್ನು ಸದೆಬಡಿಯಬೇಕೇ? ಖಾಸಗಿಯಾಗಿ ಕವಿತೆ ಕೇಳಿಸಿ, ಪ್ರವೇಶ ಶುಲ್ಕ ಇಡುವುದು ತಪ್ಪಾ ಎಂಬುದು ಸಮ್ಮೇಳನವನ್ನು ಸಮರ್ಥಿಸಿಕೊಳ್ಳುವವರ ಪ್ರಶ್ನೆ. ಕನ್ನಡ ಸಾಹಿತಿಗಳನ್ನು ನೋಡುವುದಕ್ಕೆ ಕನ್ನಡಿಗರೇ ದುಡ್ಡು ಕೊಡಬೇಕಾ ಎಂದು ಧಾರವಾಡ ಮಂದಿ ತಮಾಷೆಯಾಗಿ ಕೇಳುತ್ತಿದ್ದಾರೆ. ಶಸ್ತ್ರ ತರೋಲ್ಲ, ಶಾಸ್ತ್ರ ತರಬಹುದಾ ಅಂತ ಶಾಸ್ತ್ರಿಗಳು ಕೇಳಿದ್ದಿನ್ನೂ ವರದಿಯಾಗಿಲ್ಲ!

(ಉದಯವಾಣಿ, ಬೆಂಗಳೂರು)

 

‍ಲೇಖಕರು G

17 January, 2013

12 Comments

  1. K.V.Tirumalesh

    ಜಯಪುರ ಫೆಸ್ಟಿವಲಿನ ಎಲಿಟಿಸಂ ಕರ್ನಾಟಕಕ್ಕೂ ಕಾಲಿರಿಸಿತೆ?! ದುರದೃ‍ಷ್ಟ. ಧಾರವಾಡದ ಪ್ರಾಯೋಜಕರು ಮಕ್ಕಿಕಾಮಕ್ಕಿಯಾಗಿ ಭಟ್ಟಿಯಿಳಿಸಿದ ನಿಯಮಾವಳಿಗಳು ಖಂಡನೀಯ, ವ್ಯಕ್ತಿಗೌರವಕ್ಕೆ ಹಾನಿ. ನಿಜವಾದ ಸಾಹಿತಿಗಳು ಸೇರಬೇಕಾದ್ದು ಸಂತೆಮಾಳಗಳಲ್ಲಿ, ಕಾಫಿಹೌಸ್ ಗಳಲ್ಲಿ. ಧಾರವಾಡದಲ್ಲಿ ನಡೆಯುತ್ತಿರುವುದು ಒಂದು ಅಣಕ. ಇದರಿಂದ ದೂರವಿರುವುದೇ ಒಳ್ಳೆಯದು.
    ಜೋಗಿ, ಥ್ಯಾಂಕ್ಸ್.
    ಕೆ.ವಿ.ತಿರುಮಲೇಶ್

  2. ಅಶೋಕ ಶೆಟ್ಟರ್

    ಧಾರವಾಡ ಸಾಹಿತ್ಯ ಸಂಭ್ರಮದ ಅಧ್ಯಕ್ಷರಿಗೊಂದು ಬಹಿರಂಗ ಪತ್ರ
    ಡಾ. ಗಿರಡ್ಡಿ ಗೋವಿಂದರಾಜ
    ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ (ರಿ)
    ಇವರಿಗೆ
    ಡಿಯರ್ ಸರ್,
    ಇದೇ (ಜನವರಿ, ೨೦೧೩) ೨೫,೨೬,೨೭ರಂದು ತಾವು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ತಾವು ಕಳಿಸಿದ ಮುದ್ರಿತ ಓಲೆ ತಲುಪಿದೆ. ಮೊದಲಿಗೆ ತಮ್ಮ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ.
    ತಾವು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ. ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಧಾರವಾಡದ ಈ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ,ಗುಂಪು, ಜಾತಿ,ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ ಸಾಹಿತ್ಯ,ಸಂಗೀತ,ವಿಮರ್ಶೆ,ಚಿತ್ರಕಲೆ,ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು,ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ,ಪ್ರೀತಿ,ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು “ಇನ್ನೊಂದು ಹೊಸ ಪ್ರಯೋಗ” ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ.ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವದಿಲ್ಲ.
    ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ನೀವು ಹೇಳಿದ್ದೀರಿ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ತಮಗೆ ತೋಚಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಒಕ್ಕನೆಯೇ ಸಾಕ್ಷಿ. “ಮೊದಲಿಗೇ ಅಲ್ಲಮ ಪ್ರಭುವಿಗೆ ಶರಣಾರ್ಥಿ ಕೂಡಿ ಕುಂತ ಜನಕೆಲ್ಲ ನಮ್ಮ ನಮನ ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರವಹಿಸುವವರೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಧಾರವಾಡದಲ್ಲಿ ತಾವು ಹಲವಾರು ದಶಕಗಳಿಂದ ಇದ್ದೀರಿ. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೀರಿ. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾಗಿ ಅಸಭ್ಯವಾಗಿ ವರ್ತನೆಯನ್ನು ಕಂಡಿದ್ದೀರಿ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದೀರಿ? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದೀರಿ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೆ ಧಾರವಾಡದ ಮಂದಿ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯ ತಮಗೆ ಕಂಡಿತು? ಏಕೆ ಇಂಥ ಹಾಸ್ಯಾಸ್ಪವ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದೀರಿ?
    ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವದಿಲ್ಲ ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು….! ಹೇಳಿ, ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದು?
    ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಆದರೆ ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶದಲ್ಲಿ ತಾವು ಸಂಭ್ರಮಿಸಬಯಸುತ್ತಿದ್ದೀರಿ. ತಮ್ಮ ಸಂಭ್ರಮಕ್ಕೆ ಶುಭವಾಗಲಿ
    ಅಶೋಕ ಶೆಟ್ಟರ್
    ಧಾರವಾಡ
    ೧೬ ಜನವರಿ ೨೦೧೩

  3. Guruve

    ಈ ಸಾಹಿತ್ಯ ಸಮ್ಮೇಳನ ಜೈಪುರ ಸಮ್ಮೇಳನವನ್ನು ಅನುಸರಿಸಿಲ್ಲ.. ಯಾಕೆಂದರೆ ಜೈಪುರ ಸಮ್ಮೇಳನಸ ಯಾವುದೇ ಘೋಷ್ಠಿಗಳಲ್ಲಿ ಉಚಿತವಾಗಿ ಭಾಗವಹಿಸಬಹುದು ನೊಂದಣಿ ಕಡ್ಡಾಯ ಅಷ್ಟೇ! ದುಡ್ಡು ಕೊಟ್ಟು ನೊಂದಾಯಿಸಿದವರಿಗೆ ವಿಶಿಷ್ಟ ಭಕ್ಷ್ಯಭೋಜನಗಳನ್ನೂ ಮತ್ತು ದಿನದ ಕೊನೆಯ ಸಂಗೀತ ಕಛೇರಿಗೆ ಪ್ರವೇಶ ಕೊಡುತ್ತಾರೆ. ಇನ್ನೊಮ್ಮೆ ಒತ್ತಿ ಹೇಳುವುದಾದರೆ, ಉಚಿತವಾಗಿ, ಮುಕ್ತವಾಗಿ ಯಾವುದೇ ಘೋಷ್ಠಿಗಳಲ್ಲಿ ಭಾಗವಹಿಸಬಹುದು. [ ಜೋಗಿ ಅವರಿಗೆ ಯಾರು ತಪ್ಪು ಮಾಹಿತಿ ಒದಗಿಸಿದರೋ ಗೊತ್ತಿಲ್ಲ.]
    ಧಾರವಾಢದ ಈ ಸಂಭ್ರಮದ ಆಯೋಜಕರೂ ಇದನ್ನೇ ಮಾಡಬಹುದಿತ್ತು.. ಆಸಕ್ತರು ಉಚಿತವಾಗಿ ಭಾಗವಹಿಸಬಹುದು, 1500 ರೂ ಕೊಟ್ಟವರಿಗೆ 3 ಸ್ಟಾರ್ ಹೋಟೆಲಿನಲ್ಲಿ ವಸತಿ, ಭೋಜನ 3 ಬಾಟಲ್ ಬೀಯರ್ ಕೊಡುತ್ತೀವಿ ಎನ್ನಬಹುದಿತ್ತು. ಅಥವಾ ಖಾಸಗಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ನಮ್ಮ ಆಕ್ಷೇಪವಿರುತ್ತಿರಲಿಲ್ಲ, ಬದಲಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂತಾದ ಇಂತಹ ಸರಕಾರೀ ಸಂಘ ಸಂಸ್ಥೆಗಳ ಪ್ರಾಯೋಜಕತ್ವ ಮೇಲೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕೊಡುವುದು ಅವಶ್ಯಕ.
    ಇನ್ನು ಜೈಪುರ ಸಾಹಿತ್ಯ ಸಮ್ಮೇಳನದಲ್ಲೇ ವೈನ್ ಶಾಪ್ ತೆಗೆದು ವೈನ್ ಮಾರಿದ್ದಾರೆ. ಸಿಗರೇಟ್ ಹೊಗೆಯ ಘಾಟಿಗೂ ಎನೂ ಕಮ್ಮಿ ಇಲ್ಲ. ಪ್ರಶ್ನೆಗಳನ್ನು ಮಾಡರೇಟ್ ಮಾಡುವವನಿದ್ದರೂ, ಕೇಳುವ ಮುಕ್ತ ಅವಕಾಶವಂತೂ ಎಲ್ಲರಿಗೂ ಇದೆ.

  4. Hareesh

    ನಾನ್ ರೆಸಿಡೆಂಟ್ ಸಾಹಿತ್ಯ: ನಮ್ಮೊಡನಿದ್ದೂ ನಮ್ಮಂತಾಗದ..
    ‘ಜನವರಿ ೨೫, ೨೬, ೨೭ರಂದು ನಡೆಯಲಿರುವ ಸಾಹಿತ್ಯ ಸಂಭ್ರಮಕ್ಕೆ ಧಾರವಾಡ ಸಜ್ಜಾಗುತ್ತಿದೆ. ಈ ಸಂಭ್ರಮ ಅಂತಿಂಥದಲ್ಲ! ನಾನ್‌ರೆಸಿಡೆಂಟ್ ಸಾಹಿತಿಗಳು, ಮತ್ತೆ ನೋಡಲು ಸಿಗಲಾರದವರು, ಪ್ರಶಸ್ತಿ ಪಡೆದವರು, ಪಡೆಯಲು ಕ್ಯೂ ನಿಂತವರು, ಎಲ್ಲರೂ ಇಲ್ಲಿ ನೆರೆಯುತ್ತಾರೆ. ಪುಷ್ಪಕ ವಿಮಾನಗಳಲ್ಲಿ ಸ್ವರ್ಗದಿಂದ ಧರೆಗಿಳಿವವರನ್ನು ನೋಡಲು ಇಂದೇ ನಿಮ್ಮ ಪ್ರವೇಶ ಕಾಯ್ದಿರಿಸಿಕೊಳ್ಳಿ, ಏಕೆಂದರೆ ಮೊದಲು ಬಂದ ೨೫೦ ಜನರಿಗಷ್ಟೇ ಪ್ರವೇಶ.
    ನೀವು ಧಾಸಾಸಂದಲ್ಲಿ ಪಾಲ್ಗೊಳ್ಳಬಯಸುವಿರಾದರೆ ಮೊದಲು ಪ್ರತಿನಿಧಿ ಶುಲ್ಕ ೧೫೦೦ ರೂಪಾಯಿ ಹಾಗೂ ಹೋಗಿಬರುವ ಪ್ರಯಾಣಕ್ಕೆ ಮತ್ತು ರಾತ್ರಿ ಊಟವಸತಿಯ ಖರ್ಚಿಗೆ ಕಿಸೆಯಲ್ಲಿ ಹಣವಿದೆಯೇ ನೋಡಿಕೊಳ್ಳಿ. ಹಣವಿಲ್ಲವೇ? ಕ್ಷಮಿಸಿ, ನಿಮ್ಮ ಕತೆಕವಿತೆಕಾಳಜಿಗಳು ಪ್ರವೇಶಕ್ಕೆ ಅರ್ಹತೆ ಒದಗಿಸುವುದಿಲ್ಲ. ನೆನಪಿಡಿ: ಕತೆಕವಿತೆಗಳಿಂದ ಹೊಟ್ಟೆ ತುಂಬುವುದಿಲ್ಲ.
    ವಿಶೇಷ ಸೂಚನೆ: ವಿದ್ಯಾರ್ಥಿಗಳಿಗೆಂದೇ ಭಾರೀ ವಿಶೇಷ ರಿಯಾಯ್ತಿ ನೀಡಲಾಗಿದೆ. ಪ್ರತಿನಿಧಿ ಶುಲ್ಕ ಕೇವಲ ಒಂದು ಸಾವಿರ ಮಾತ್ರ.
    ಪ್ರವೇಶಕ್ಕೆ ಅನುಮತಿ ನೀಡುವ ಹಕ್ಕು ಕಾದಿರಿಸಲಾಗಿದೆ. ಪ್ರವೇಶ ಗಿಟ್ಟಿಸಿದವರು ನಿಮ್ಮ ಪೆನ್ನು, ಸಿಗರೇಟು ವಗೈರೆ ಶಸ್ತ್ರಾಸ್ತ್ರಗಳನ್ನೆಲ್ಲ ತ್ಯಜಿಸಿ ಬನ್ನಿ. ಬಾಯಿ ಮುಚ್ಚಿಕೊಳ್ಳಲು ಬಟ್ಟೆ ಕಡ್ಡಾಯ. ಏಕೆಂದರೆ ಸಭ್ಯತೆಗೆ ಮೊದಲ ಪ್ರಾಶಸ್ತ್ಯ. ನಿಮ್ಮ ಪ್ರಶ್ನೆ, ಚರ್ಚೆ ಡೀಸೆಂಟ್ ಅಲ್ಲದಿದ್ದರೆ ಹೊರಹಾಕುವ, ಉಳಿದ ಅವಧಿಗೆ ಒಳಬಿಟ್ಟುಕೊಳ್ಳದೇ ಇರುವ ಎಲ್ಲ ಹಕ್ಕು ಸಂಘಟಕರಿಗಿದೆ.’
    ***
    ಇಂಥ ವಿಕಟ ಮಾತುಗಳಲ್ಲಲ್ಲದೇ ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮ ಕುರಿತ ಬರಹ ಟೇಕ್ ಆಫ್ ಆಗುವುದಿಲ್ಲ.
    ಮೊದಲ ಬಾರಿಗೆ ಧಾರವಾಡದ ಸಾಹಿತ್ಯ ವಲಯದ ದಿಗ್ಗಜರು ಸೇರಿ ನಡೆಸುತ್ತಿರುವ ಈ ಸಂಭ್ರಮವನ್ನು ಸಂಘಟಿಸಿದ ಉದ್ದೇಶ, ಅದರ ನಿಯಮ ನಿಬಂಧನೆಗಳತ್ತ ಕಣ್ಣು ಹಾಯಿಸಿದರೆ ಜನಪರ ಸಾಹಿತ್ಯ, ಚಳುವಳಿ, ಕನ್ನಡಭಾಷೆ ಇಂಥ ಮಾತುಗಳಿಗೆ ಅವರ ನಿಘಂಟುಗಳಲ್ಲಿ ಏನರ್ಥವಿದೆ ಎಂಬ ಕುತೂಹಲವಾಗುತ್ತದೆ. ಭಾರೀ ಪ್ರತಿನಿಧಿ ಶುಲ್ಕ ವಿಧಿಸಿ ೪೦ ಲಕ್ಷ ಖರ್ಚಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬರಬಹುದೆಂದು ನಿರೀಕ್ಷಿಸಿರುವುದು ಕೇವಲ ೪೦೦ ಜನ ಮಾತ್ರ. ಉದ್ದೇಶಿತ ವೆಚ್ಚದಲ್ಲಿ ೧೦ ಲಕ್ಷ ಕನ್ನಡ ಸಂಸ್ಕೃತಿ ಇಲಾಖೆಯದು. ಧಾರವಾಡ ವಿಶ್ವವಿದ್ಯಾಲಯ ತನ್ನ ಸ್ಥಳವನ್ನು ಉಚಿತವಾಗಿ ಬಳಸಿಕೊಳ್ಳಲು ಅನುಮತಿ ನೀಡಿದೆ. ಪ್ರತಿದಿನ ಬೆಳಿಗ್ಗೆ ತಿಂಡಿಯಿದೆ, ಮಧ್ಯಾಹ್ನ ಊಟವಿದೆ. ಅದಕ್ಕೂ ಪ್ರಾಯೋಜಕರನ್ನು ಹುಡುಕಲಾಗುತ್ತಿದೆ. ರಾತ್ರಿ ಊಟ ಮತ್ತು ವಸತಿ ನಿಮ್ಮದೇ. ಅಲ್ಲಿ ಪುಸ್ತಕ ಮಳಿಗೆ ಹಾಕಬಯಸುವವರು ೧೫೦೦ ರೂ. ಶುಲ್ಕ ನೀಡಬೇಕು. ಅಲ್ಲಿಗೆ ಬರುವವರು ಸಭ್ಯವಾಗಿ ವರ್ತಿಸಬೇಕು. ಅಸಭ್ಯ ಪ್ರಶ್ನೆ, ಚರ್ಚೆಗೆ ಅವಕಾಶವಿಲ್ಲ.
    ಕೆಲವೇ ಜನ ಭಾಗವಹಿಸಬಹುದಾದ ಇಂಥ ಡಿಸೈನರ್ ಕಾರ್ಯಕ್ರಮ ಯಾರಿಗಾಗಿ? ಸರ್ಕಾರ ಸಾಕುತ್ತಿರುವ ಎಷ್ಟೋ ಬಿಳಿಯಾನೆಗಳ ಯಾದಿಯಲ್ಲಿ ಇಂಥ ಇನ್ನೊಂದನ್ನು ಸೇರಿಸುವ ಅಗತ್ಯವಾದರೂ ಏನಿತ್ತು? ಇದಾದ ಎರಡೇ ವಾರಗಳಲ್ಲಿ ಧಾರವಾಡಕ್ಕೆ ಹತ್ತಿರದ ಬಿಜಾಪುರದಲ್ಲಿ ಕೋಟ್ಯಂತರ ವೆಚ್ಚದ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವಾಗ ಹದಿನೈದು ದಿನ ಮೊದಲು ಈ ಹೈ ಪ್ರೊಫೈಲ್ ಕಾರ್ಯಕ್ರಮ ನಡೆಸುವ ಉದ್ದೇಶ ಏನು?
    ಸಾಹಿತ್ಯ ಕಲೆಗಳು ದಂತ ಗೋಪುರದಲ್ಲಿ ಹುಟ್ಟಿ ಬೆಳೆಯಲಿಲ್ಲ. ಅವು ಕೇರಾಫ್ ಫುಟ್‌ಪಾತ್ ಅರಳಿ ಈ ನೆಲೆ ತಲುಪಿವೆ. ಕೇಳುಗ, ಓದುಗನೇ ಅದರ ಜೀವಾಳ. ಹಾಗಿರುವಾಗ ಕಾಸಿದ್ದರೆ ಬಂದು ಕೇಳು, ಇಲ್ಲದಿದ್ದರೆ ಹೊರಗಿರು ಎನ್ನುವ ನಿಯಮ ಕನ್ನಡ ಸಾಹಿತ್ಯ ಪರಂಪರೆಗಷ್ಟೇ ವಿರೋಧಿಯಲ್ಲ, ಜನ ವಿರೋಧಿಯೂ ಆಗುತ್ತದೆ. ಕನ್ನಡ ಸಾಹಿತ್ಯಕ್ಕೆ ಅನನ್ಯವಾದ ಒಂದು ಜನಸ್ನೇಹಿ, ಜನಪರ ಪರಂಪರೆಯಿದೆ. ಮೌಖಿಕ ಪರಂಪರೆಯೂ ಕೂಡಾ ಕೇಳುಗನಿಗೆ ‘ಶರಣು’ ಎಂದೇ ಹೇಳಲು ಶುರುಮಾಡುತ್ತದೆ. ರಾಜಾಶ್ರಯ ನೆಚ್ಚದೇ ಜನಸಾಮಾನ್ಯರ ನಡುವೆ ಬದುಕಿ ಬರೆದ ಕವಿಗಳಿದ್ದಾರೆ. ಮನೆಮನೆಗೆ ಪುಸ್ತಕ ಹೊತ್ತು ಮಾರಿ ಪುಸ್ತಕ ಪ್ರೀತಿ ಹೆಚ್ಚಿಸಿದ ಗಳಗನಾಥರಂಥವರಿದ್ದಾರೆ. ಟಿಎಡಿಎ ಗೊತ್ತೇ ಇಲ್ಲದೆ ಊರೂರಿಗೆ ಒಂದು ಭಾಷಣ, ಕವಿತೆ ಕೇಳಲಿಕ್ಕೆ, ಹೇಳಲಿಕ್ಕೆ ತಿರುಗುವವರಿದ್ದಾರೆ. ಹೋರಾಟ ಚಳುವಳಿಗಳ ಮೂಲಕ ಜನರ ನಡುವಿನಿಂದಲೇ ರೂಪುಗೊಂಡ ಸಾಹಿತಿಗಳಿದ್ದಾರೆ. ಸಾಹಿತ್ಯ ಹುಟ್ಟುವುದೂ, ಬೆಳೆಯುವುದೂ ಜನಸಂವೇದನೆಯಿಂದ, ಜನರಿಗಾಗಿ ಎನ್ನುವುದಾದರೆ ಅಂಥ ಕತೆ, ಕವಿತೆ, ಚರ್ಚೆಗಳನ್ನು ಮುಚ್ಚಿದ ಬಾಗಿಲಿನ ಒಳಗೆ ನಡೆಸಿದರೆ ಅದನ್ನು ಸಾಹಿತ್ಯ ಸಂಭ್ರಮವೆನ್ನುವುದು ಹೇಗೆ?
    ಕಿಸೆಯಲ್ಲಿ ಕಾಸಿಲ್ಲದವ ಒಳಬರಲು ಅಯೋಗ್ಯನೆಂದು ನಿರ್ಧರಿಸುವ ಇಂಥ ಸಮ್ಮೇಳನಗಳು ಆಳದಲ್ಲಿ ಜನರಿಂದ ಸಾಹಿತಿಗಳನ್ನು, ಸಾಹಿತ್ಯವನ್ನು ದೂರ ಒಯ್ಯುವ; ಸಾಹಿತ್ಯವನ್ನೂ ಮಾರುಕಟ್ಟೆಯನ್ನಾಗಿಸುವ; ಯಾವುದು ಹೊರಗೆ ಯಾವುದು ಒಳಗೆ ಎಂದು ಮೊದಲೇ ನಿರ್ಧರಿಸಿ ಪ್ರತ್ಯೇಕತಾ ನೀತಿಯನ್ನು ಬೆಳೆಸುವ; ಚರ್ಚೆ-ವಾಗ್ವಾದ-ಠರಾವುಗಳ ನೈಜ ಸ್ಫೂರ್ತಿಯನ್ನೇ ನಾಶ ಮಾಡುವ ಕನ್ನಡ ವಿರೋಧಿ ಚಟುವಟಿಕೆಯಾಗಿದೆ. ಈಗ ಎಲ್ಲೆಡೆ ಪ್ರವೇಶಿಸಿರುವ ಕಾರ್ಪೋರೇಟ್ ಸಂಸ್ಕೃತಿ ಸಾಹಿತ್ಯ ಲೋಕವನ್ನೂ ಭ್ರಷ್ಟಗೊಳಿಸಿದ ಸೂಚನೆಯಾಗಿದೆ. ಒಂದೆಡೆ ಬನ್ನಿ ಎಂದು ಕರೆದರೆ ಬಟ್ಟೆ ಇಸ್ತ್ರಿ ಮಾಡಿಕೊಂಡು ಕವಿಗಳು ಓಡೋಡಿ ಬರುತ್ತಾರೆಂದು ಭಾವಿಸುವ ಬಂಡವಾಳಶಾಹಿ ಸಾಹಿತ್ಯ ಸಂಘಟಕರು; ಮತ್ತೊಂದೆಡೆ ಕೇಳುಗರನ್ನು ‘ಪೇಯಿಂಗ್ ಕೆಪಾಸಿಟಿ’ ಮೇಲೆ ಮೊದಲೇ ನಿರ್ಧರಿಸುವ ಶ್ರೇಷ್ಠತೆಯ ವ್ಯಸನಿಗಳು – ಇದರ ನಡುವೆ ನಿಜವಾದ ಸಾಹಿತಿ-ಸಾಹಿತ್ಯ ಎಲ್ಲೋ ಸೊರಗುತ್ತದೆ.
    ಸಾರ್ವಜನಿಕ ಆಡಂಬರ ಮತ್ತು ಕೀಳು ಅಭಿರುಚಿಯ ವಿಜೃಂಭಣೆಯನ್ನು ಮೆಚ್ಚುವ ಗುಣ ಜನಸಾಮಾನ್ಯರಲ್ಲೂ ಕಾಣತೊಡಗಿದೆ. ಆದರೆ ಬರಹಗಾರನೂ ಹಾಗೇ ಆದರೆ? ಬರಹಗಾರನಿಗೆ ಇಂಥವಕ್ಕೆಲ್ಲ ಸಿಟ್ಟೇ ಬಾರದೆ ಸಿನಿಕನಾದರೆ? ಬಂದರೂ ಆ ಸಿಟ್ಟು ಬರೀ ನೈತಿಕ ಆಕ್ರೋಶದಲ್ಲಿ ಕೊನೆಗೊಂಡರೆ? ಆಗ ದುಷ್ಟಕೂಟಗಳು ಬೆಳೆಯುತ್ತಲೇ ಹೋಗುತ್ತವೆ. ಆದರೆ ಕನ್ನಡದ ಅನನ್ಯ ಪರಂಪರೆಯನ್ನು ಹಾದುಬಂದ, ಚಳುವಳಿ-ಸಿದ್ಧಾಂತಗಳಿಂದ ತಮ್ಮ ತಾತ್ವಿಕತೆ ರೂಪಿಸಿಕೊಂಡ ಅನೇಕ ಸೂಕ್ಷ್ಮ ಮನಸ್ಸುಗಳು ವ್ಯವಹಾರದ ಕಸರತ್ತಿನಂತಿರುವ ಈ ಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ಸಾಹಿತ್ಯದ ದುರಂತವಾಗಿ ಕಾಣುತ್ತಿದೆ.
    ಆದರೂ ಕಾಲ ಮಿಂಚಿಲ್ಲ. ಮನೆಯೊಳಗೆ ಕಸ ಬೀಳುತ್ತಲೇ ಇರುತ್ತದೆ, ಅದನ್ನು ಗುಡಿಸಿ ಎಸೆಯುತ್ತಲೇ ಇರಬೇಕು. ಧೈರ್ಯವಾಗಿ ಯೋಚಿಸುವ ಮನಸ್ಸುಗಳು ಒಂದೆಡೆ ಸೇರಿ ಜನಸ್ನೇಹಿಯಲ್ಲದ ಸಾಹಿತ್ಯಿಕ ಸಂಭ್ರಮಾಚರಣೆಗಳನ್ನು ವಿರೋಧಿಸಬೇಕು. ಆ ನೆವದಲ್ಲಿ ಜನಪರ ಕಾಳಜಿಯ ಮನಸ್ಸುಗಳು ಒಂದಾಗಬೇಕು.
    ಈ ‘ಸಂಭ್ರಮ’ದ ಎಡಬಲ ತಿಳಿಯದೇ ಅದರಲ್ಲಿ ಭಾಗವಹಿಸಹೊರಟ ಹಿರಿಯರೇ, ಸ್ನೇಹಿತರೇ, ಹೊರಬನ್ನಿ. ಎಲ್ಲಕ್ಕೂ ಇದ್ದೇ ಇದೆ ಪರ್ಯಾಯ..
    – ಡಾ. ಎಚ್. ಎಸ್. ಅನುಪಮಾ.

  5. ಅಶೋಕವರ್ಧನ ಜಿ.ಎನ್

    ಸಗಟು ಖರೀದಿ, ಪುಸ್ತಕೋದ್ಯಮದ ಸರ್ಕಾರೀಕರಣದ ವಿರುದ್ಧ ನಾನು ಅಷ್ಟುದ್ದಕ್ಕೆ ಹೋರಾಡಿಕೊಂಡು ಬಂದಾಗ “ನಮಗೆ ಪ್ರಶಸ್ತಿ ಬಂದರೆ, ನಮಗೆ ಪ್ರಕಾಶಕ ಸಿಕ್ಕರೆ (ಅವನು ಪುಸ್ತಕವನ್ನೇನಾದರೂ ಮಾಡಿಕೊಳ್ಳಲಿ), ಬದಲಾದ ಕಾಲಕ್ಕೆ ‘ರಾಜಮನ್ನಣೆ’” ಎಂದು ನೂರೆಂಟು ನೆಪಗಳ ಮರೆಯಲ್ಲಿ ಲಾಭ ಗಿಂಜಿದವರೆಲ್ಲಾ ಈಗ ಹಲ್ಲು ಮಸೆಯುವುದು ನೋಡಿ ನನಗೆ ನಗೆಯು ಬರುತಿದೆ. ಸರಕಾರದ ಸಹಾಯದಲ್ಲೇ ಸ್ವಂತ ಖಾಸಗಿ ಸಂಸ್ಥೆಯ ಸ್ಮರಣ ಸಂಪುಟಗಳನ್ನು ಭಾರೀ ಬೆಲೆಯಲ್ಲಿ ಪ್ರಕಟಿಸಿ, ನಿಜ ಓದುಗರಿಗೆ ಮುಟ್ಟಿಸಬಲ್ಲ ಬಿಡಿ ಮಾರುಕಟ್ಟೆಯನ್ನು (ಪುಸ್ತಕ ವ್ಯಾಪಾರಿಗಳನ್ನು) ಧಿಕ್ಕರಿಸಿ ಮತ್ತೆ ಸರಕಾರಕ್ಕೇ ಮಾರಿದ (ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರು!, out sourcing ಇನ್ನೂ ‘ಮರ್ಯಾದೆ/ಮಾನ್ಯತೆ’ಯನ್ನೇ ಪಡೆಯದ ಕಾಲಕ್ಕೆ ಊರೂರುಗಳಲ್ಲಿ ಪುಸ್ತಕ ಮೇಳಗಳನ್ನು ‘ಯಶಸ್ವಿಯಾಗಿ’ ನಡೆಸಿದ ಜಾಣರ, ಫಲಾನುಭವಿಗಳ (ಕೆಲವು ಮಂದಿ ಕೇವಲ ಇತಿಹಾಸಕ್ಕೆ ಮಣಿದು ಮುಗ್ಧವಾಗಿಯೂ ಹೆಸರು ಕೊಟ್ಟವರಿರಬಹುದು) ಈ ಕೂಟವನ್ನು ಪ್ರಶ್ನಿಸುವುದಲ್ಲ. ನಂಬಿ ಹಣ ಕೊಟ್ಟ/ ಕೊಡುವ (ಸರಕಾರವೂ ಸೇರಿದಂತೆ) ಪ್ರಾಯೋಜಕರನ್ನು ಪ್ರಶ್ನಿಸಿ, ಈಗಲೂ ಸ್ವಾರ್ಥ ಮರೆತು ಈ ಸಮ್ಮೇಳನವನ್ನು ಎಲ್ಲರೂ ಬಹಿಷ್ಕರಿಸಿ.

  6. ಅಶೋಕವರ್ಧನ ಜಿ.ಎನ್

    ಅರೆಮನಸ್ಸಿನಲ್ಲಿ, ಅವಸರದಲ್ಲಿ ಆಗ ಟಿಪ್ಪಣಿಸುವಾಗ ಬಿಟ್ಟುಹೋದ ಅಂಶ. ಆಸಕ್ತರು ಪುಸ್ತಕೋದ್ಯಮದ ಕುರಿತು ನನ್ನ ಹಳೆಯ ಕ್ಡತಗಳನ್ನು ನೋಡಲಿಚ್ಛಿಸುವವರು ನನ್ನ ಜಾಲತಾಣದಲ್ಲಿ, ಪುಸ್ತಕೋದ್ಯಮ ವಿಭಾಗವನ್ನು (ಸೇತು ಹೀಗಿದೆ: http://www.athreebook.com/search/label/%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B3%8B%E0%B2%A6%E0%B3%8D%E0%B2%AF%E0%B2%AE) ನೋಡಬಹುದು. ಇನ್ನೂ ಹೆಚ್ಚಿನ ಓದಿಗೆ ಸದ್ಯ ಮುದ್ರಣದಲ್ಲಿಲ್ಲದ ನನ್ನದೇ ಪುಸ್ತಕ – ಪುಸ್ತಕ ಮಾರಾಟ ಹೋರಾಟವನ್ನೂ ನೋಡಬಹುದು.
    ಅಶೋಕವರ್ಧನ

  7. s.gangadharaiah

    ಕಣ್ಣು,ಕಿವಿ,ಬಾಯಿಗಳನ್ನು ಮುಚ್ಚಿಸಿ ಸಾಹಿತ್ಯವನ್ನು ‘ಸಂಭ್ರಮಿಸುವ ’ಈ ಪರಿಯನ್ನು‘ಅನನ್ಯ’ವೆಂದು ಭಾವಿಸಿ ಸಂಭ್ರಮಿಸ ಹೊರಟಿರುವ ಸಾಹಿತಿಗಳಿಗೆ ಹಾಗೂ ಸಂಘಟಕರುಗಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.ನೆರೂಡನಂತಹ ಮಹಾಕವಿಗಳು ಕಾವ್ಯವನ್ನು ಹಾಗೂ ಸಾಹಿತ್ಯದ ಸಂವೇದನೆಗಳನ್ನು ಜನರ ನಡುವೆ,ಅದರಲ್ಲೂ ಅತ್ಯಂತ ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋದ ಹೊತ್ತಿನ ಸಾಹಿತ್ಯದ ನಿಜ ಸಾರ್ಥ್ಯಕ್ಯದ ಅನೇಕ ಮಾದರಿಗಳು ನಮ್ಮ ಕಣ್ಣೇದುರಿಗೆ ಇನ್ನೂ ಜೀವಂತವಾಗಿರುವಾಗಲೇ,ಜನಸಾಮಾನ್ಯರನ್ನು ದೂರವಿಟ್ಟು ನಡೆಸ ಹೊರಟಿರುವ ಇಂಥಹ ಸಾಹಿತ್ಯದ ಚಟುವಟಿಕೆಗಳನ್ನು ಜನವಿರೋಧಿ ಅನ್ನದೆ ವಿಧಿಯಿಲ್ಲ.ನನಗಂತೂ ಇದೊಂದು ಆರ್.ಎಸ್.ಎಸ್.ಭೈಠಕ್ನಂತೆ ಭಾಸವಾಗುತ್ತಾ ಗಾಬರಿ ಹುಟ್ತಿಸುತ್ತಿದೆ.
    ಎಸ್.ಗಂಗಾಧರಯ್ಯ

  8. geleya

    allama, sharipa, bendre inta kavigalannu kandavaru ide kannadadavare? sahitya, vimarshe, samshodane kasuvillade kusiyuttiruvaga adakke kasuvu taruvudakke enu beku emba kasubu aritavare kannadada mandi? fine, best for all…..

  9. Meti Mallikarjun

    ಹಲವು ದಶಕಗಳಿಂದಲೂ ಕನ್ನಡದ ಹೆಸರಾಂತ ವಿಮರ್ಶಕರೆಂದೆ ಬೀಗುತ್ತ ಬಂದಿರುವವರಿಗೆ ಕನ್ನಡ ಸಾಹಿತ್ಯವು ಅರ್ಥವಾಗಿಲ್ಲ ಮತ್ತು ಕನ್ನಡದ ಮನಸ್ಸೂ ಗೊತ್ತಾಗಿಲ್ಲ. ಆವತ್ತು ನವ್ಯ ಸಾಹಿತ್ಯ ಹಾಗೂ ವಿಮರ್ಶೆ ಹೆಸರಿನಿಂದ ಕನ್ನಡಕ್ಕೆ ಅಪಚಾರ ಮಾಡಿದವರು ಇವತ್ತು ಜಯಪೂರು ಸಾಹಿತ್ಯ ಉತ್ಸವದ ಹೆಸರಿನಲ್ಲಿ ಇಂತಹ ಪರದೇಶಿ ಸಾಹಿತ್ಯ ಸಂಭ್ರಕ್ಕೆ ಮುಂದಾಗಿದ್ದಾರೆಂದು ಕಾಣುತ್ತದೆ. ಇದೊಂದು ವೈಯಕ್ತಿಕ ಗುರುತಿನ ರೋಗವೇ ಸರಿ. ಇದನ್ನು ಆ ಭುವನೇಶ್ವರಿ ತಾಯಿನೇ ಸರಿಮಾಡಬೇಕೆಂದು ತೋರುತ್ತದೆ. ಜಯಪೂರಿನ ಸಾಹಿತ್ಯ ಸಮ್ಮೇಳನವೇ ಇವರಿಗೇಕೆ ಮಾದರಿಯಾಯ್ತು ಎಂದೆಲ್ಲ ಪ್ರಶ್ನೆಗಳಿಗೆ ಅತ್ಯಂತ ಸರಳ ಉತ್ತರವಿದೆ. ಅದೇನೆಂದರೆ ಇವರಿಗೆ ಬೇರೆ ಏನನ್ನು ಸೃಜನಶೀಲವಾಗಿ ಮಾಡುವುದು ಅಸಾಧ್ಯವಾಗಿರುವುದೇ ಇಂತಹ ಅನಾಚಾರಕ್ಕೆ ಕಾರಣವಾಗಿದೆ.

  10. b peer basha

    ಶ್ರೀಸಾಮಾನ್ಯನಿಗೆ ತಲುಪಬೇಕಿದ್ದ ಸಾಹಿತ್ಯವನ್ನು ಕಾರ್ಪೋರೇಟ್ ಮಾರುಕಟ್ಟೆಯಲ್ಲಿಟ್ಟು ಮಾರಲು ಹೊರಟವರನ್ನು ಸಾಹಿತಿಗಳೆನ್ನುವುದಕ್ಕಿಂತ ದಲ್ಲಾಳಿ ಅಥವಾ ಏಜೆಂಟರೆಂದು ಕರೆಯುವುದೇ ಸರಿ.ಒಂದು ಕಾಲಕ್ಕೆ ಸಾಹಿತ್ಯ ವಿಮರ್ಶಕರೆಂದು ಪ್ರಖ್ಯಾತರಾದವರೇ ಈ ಕೆಲಸಕ್ಕಿಳಿದಿರುವುದು ದುರಂತವೇ ಸರಿ. ಅಷ್ಟೇ ಅಲ್ಲ ಇದು ಅಪಾಯ ಕೂಡ. ಸಾಹಿತ್ಯದ ಹೆಸರಿನಲ್ಲಿ ಟಕೀಟು ಷೋ ಮಾಡಿ ಲಾಭಮಾಡಿಕೊಳ್ಳಬಹುದು ಎಂದು ಒಮ್ಮೆ ಖಾತ್ರಿಯಾದರೆ ಕನ್ನಡ ಸಾಹಿತ್ಯ ದುರಂತದ ಯಾವ ಅತಿರೇಕ ತಲುಪುವುದೋ ಊಹಿಸುವುದು ಕಷ್ಟ. ಸಾಂಸ್ಕೃತಿಕ ಸಜ್ಜನಿಕೆಯ ಪರಂಪರೆಯನ್ನು ಹೊಂದಿರುವ ಜನ ಧಾರವಾಡದ ಘನತೆಗೆ ತಕ್ಕುದಲ್ಲದ ಇಂತಹ ಜನತೆ ಕಾರ್ಯಕ್ರಮಗಳನ್ನು ನಡೆಯಲು ಬಿಡಬಾರದು. ಪ್ರತಿಯೊಬ್ಬರೂ ಪ್ರತಿಭಟಿಸಬೇಕು, ವಿರೋಧಿಸಬೇಕು. ಧಾರವಾಡದ ಸಂಘ-ಸಂಘಟನೆಗಳು ಈ ಕಾರ್ಯಕ್ರಮ ಆಗದಂತೆ ತಡೆಯಬೇಕು. ಮುಖ್ಯವಾಗಿ ಕನಿಷ್ಟವಾದರೂ ಸಂವೇದನಾಶೀಲತೆ, ವಿಚಾರವಂತಿಕೆ ಇರುವ ಯಾವ ಲೇಖಕರೂ ಈ ಗೋಷ್ಟಿಗಳಲ್ಲಿ ಭಾಗವಹಿಸಬಾರದು. ಈ ಬಗ್ಗೆ ಈ ಹಿರಿಯರು ಈ ಕ್ಷಣದಿಂದ ಯೋಚಿಸುವಂತಾಗಲಿ ಇಲ್ಲವೇ ಸಾಹಿತ್ಯದ ಜನಪರತೆಯನ್ನು ಪ್ರತಿಪಾದಿಸುವ ಓದುಗ ಹಾಗೂ ಲೇಖಕರು ಇವರನ್ನು ತಿರಸ್ಕರಿಸುವಂತಾಗಲಿ.

  11. ಉದಯಕುಮಾರ್ ಹಬ್ಬು

    ನಾನಂತೂ ಧಾರವಾಡದ ಸಮ್ಮೇಳನಕ್ಕೆ ಹೊರಟಿದ್ದೇನೆ. ಅಲ್ಲಿ ಇನ್ನೂ ಹೆಚ್ಚಿನ ಸಂಭ್ರಮದ ಅವಾಂತರ ಕಣ್ಣಾರೆ ಕಂಡು ಕೈ ಸುಟ್ಟುಕೊಂಡು ಬರಬೇಕಾದೀತು. ಮುಂದೆ ಅಲ್ಲಿನ ಅವಾಂತರವನ್ನು ನಿಮ್ಮಲ್ಲಿ ಹಂಚಿಕೊಳ್ಳುವೆ. ನನಗೆ ಬೇರೆ ಕೆಲಸವಿಲ್ಲ. ಮೂರು ದಿನಗಳನ್ನು ಕಳೆಯಲು ಹೊರಟಿರುವೆ. ಅಲ್ಲಿ ನೋಡಿಕೊಂಡು ಬಂದು ನಿಮಗೆ ತಿಳಿಸುವೆ. ಉದಯಕುಮಾರ್ ಹಬ್ಬು,ಕಿನ್ನಿಗೋಳಿ, 574150 ಸಂಚಾರಿವಾಣಿ 9902761720

  12. nageshwar

    ಕನ್ನಡ ನವೋದಯ ವಿಮರ್ಶೆ ಹಾಗೂ ನವ್ಯವಿಮರ್ಶೆಗಳನ್ನು ಸರಳವಾಗಿ, ಸರಿಯಾತಿ ಅರ್ಥ್ೈಸಲಾರದ ಬರಹಗಾರರು ಕನ್ನಡದಲ್ಲಿ ಇನ್ನೂ ಬಾರದಿರುವುದು ವಿಪರ್ಯಾಸ. ಸಾಹಿತ್ಯಸಮ್ಮೇಳನಗಳು ಮೇಲ್ಕಂಡ ಈ ಕಾರಣಗಳಿಂದಾದರೂ ಗಮನಸೆಳೆಯುತ್ತವಲ್ಲಾ ಎಂಬುದೇ ಸಮಾದಾನ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading