ಲಂಕೇಶರ ನೆನಪು
ಜಗದೀಶ್ ಕೊಪ್ಪ
ಧಾರವಾಡದಲ್ಲಿ ಸಂಭ್ರಮಿಸುವ ಮನಸ್ಸುಗಳು ಸಾಹಿತ್ಯ ಸಂಭ್ರಮವನ್ನು ಅನುಭವಿಸುತ್ತಿವೆ. ನಾನು ಮಾತ್ರ ಹದಿಮೂರು ವರ್ಷಗಳ ಹಿಂದೆ ಇದೇ ದಿನ ಇನ್ನಿಲ್ಲವಾದ ಗುರುವಿನಂತಿದ್ದ, ನನ್ನ ತಲೆಮಾರಿಗೆ ನೈತಿಕತೆಯ ಗಡಿರೇಖೆಯಂತ್ತಿದ್ದ ಲಂಕೇಶರನ್ನು ಸಂಕಟ ಮತ್ತು ಸೂತಕದಂತಹ ವಾತಾವರಣದಲ್ಲಿ ನೆನೆಯುತ್ತಾ ಕೂತಿದ್ದೇನೆ.

ಈ ಧಾರವಾಡದ ಸಂಭ್ರಮಕ್ಕೆ ಲಂಕೇಶರು ಇದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬುದನ್ನು ಊಹಿಸುತ್ತಾ ಕುಳಿತಿದ್ದೇನೆ. ಅವರು ಬದುಕಿದ್ದಾಗ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಬೃಹನ್ನಳೆಯರಂತಿದ್ದವರೆಲ್ಲಾ ಈಗ ಭೀಮಾಜರ್ುನರಾಗಿ ಕಂಗೊಳಿಸುತ್ತಿರುವುದನ್ನು ಕಂಡು ಅಚ್ಚರಿ ಪಟ್ಟಿದ್ದೇನೆ.
ಯಾವುದೇ ಕಾವ್ಯ, ಕಥೆ, ಕಾದಂಬರಿ ಅದು ಓದಿದನಂತರವೂ ಓದುಗನನ್ನು ಕಾಡುವಂತಿದ್ದರೆ ಅದು ಶ್ರೇಷ್ಠ ಕೃತಿ ಎಂಬ ಮಾತಿದೆ. ಅದೇ ರೀತಿ ಒಬ್ಬ ವ್ಯಕ್ತಿ; ತಾನು ಅಳಿದ ನಂತರವೂ ಸಮಾಜವನ್ನು, ಒಂದು ತಲೆಮಾರನ್ನು ತನ್ನ ಚಿಂತನೆಗಳಿಂದ ಕಾಡುತ್ತಿದ್ದರೆ, ಅಂತಹ ಒಂದು ಜೀವ ಕೂಡ ನನ್ನ ಪಾಲಿಗೆ ಶ್ರೇಷ್ಟವಾದದು. ಇವೊತ್ತಿಗೂ ಈ ಭಾರತದ ನೆಲದಲ್ಲಿ ಗಾಂಧಿ, ಅಂಬೇಡ್ಕರ್ ಮುಂತಾದವರು ಕಾಡುವುದು ಈ ಕಾರಣಕ್ಕಾಗಿಯೇ.
1980ರ ಡಿಸಂಬರ್ ತಿಂಗಳು ಎಂದು ನೆನಪು. ನನ್ನ ಪ್ರಿಯ ಮಿತ್ರರಲ್ಲಿ ಒಬ್ಬರಾದ ಮಂಗ್ಳೂರ ವಿಜಯ ಸಂಪಾದಿಸಿದ್ದ ‘ ಕಪ್ಪು ಜನರ ಕೆಂಪು ಕಾವ್ಯ ಎಂಬ ಕವನ ಸಂಕಲನಕ್ಕಾಗಿ ಮುನ್ನುಡಿ ಬರೆದುಕೊಡಲು ಲಂಕೇಶರನ್ನು ವಿನಂತಿಸಿಕೊಳ್ಳಲಾಗಿತ್ತು. ಅವರು ಅದೇ ವರ್ಷ ಲಂಕೇಶ್ ಪತ್ರಿಕೆ ಪ್ರಾರಂಭಿಸಿ ಕೆಲಸದ ಒತ್ತಡದಲ್ಲಿದ್ದರು. ಆದರೂ ಕೂಡ ಗೆಳೆಯರ ಮನವಿಯನ್ನು ತಿರಸ್ಕರಿಸಲಾಗದೇ ಒಂದು ಇನ್ಲ್ಯಾಂಡ್ ಅಂಚೆ ಕಾಗದದಲ್ಲಿ ಕವಿತೆಯ ರೂಪದಲ್ಲಿ ಮುನ್ನುಡಿ ಬರೆದು ಕಳಿಸಿದ್ದರು. ಆ ಮುನ್ನುಡಿಯ ಕೆಲವು ಸಾಲುಗಳು ಮಾತ್ರ ನನಗೆ ಈಗಲೂ ನೆನಪಿವೆ. ಅವು ಹೀಗಿದ್ದವು.
ಗೆಳೆಯರೆ, ನಿಮ್ಮ ಕವಿತೆ
ನನಗೆ ತಲುಪಿದೆ
ಈಗಿನ ಜನರೆದೆಗೆ
ಕವಿತೆಯಿರಲಿ,
ಕತ್ತಿ ಕೂಡ ತಲುಪಾಗದ ಸ್ಥಿತಿ.
ಲಂಕೇಶರು ಆಗಿನ ಜನರ ಮನಸ್ಥಿತಿಯನ್ನು ಗಮನಿಸಿ ಈ ಮಾತುಗಳನ್ನು ಬರೆದರಾ? ಅಥವಾ ಸಾಹಿತ್ಯವನ್ನು ಸಂಭ್ರಮದ ನೆಪದಲ್ಲಿ ಸರಕಾಗಿಸುತ್ತಿರುವ ಈಗಿನ ದಲ್ಲಾಳಿಗಳನ್ನು ಊಹಿಸಿ ಈ ಮಾತುಗಳನ್ನು ಬರೆದರಾ? ಗೊತ್ತಿಲ್ಲ. ಇರಲಿ, ಲಂಕೇಶರನ್ನು ಅವರ ಕೊನೆಯ ದಿನ ಬೇಟಿ ಮಾಡಿ ಉಪದೇಶದ ಮಾತುಗಳನ್ನು ಕೇಳಿದ ಸಂತೃಪ್ತಿ ಹಾಗೂೆ ಮಂಡ್ಯದ ನನ್ನ ಮನೆಯಲ್ಲಿ ಅವರಿಗೆ ಊಟ ಹಾಕುವ ಅದೃಷ್ಟವನ್ನು ತಪ್ಪಿಸಿಕೊಂಡ ಸಂಕಟ ಈ ಎರಡು ಸಂಗತಿಗಳು ನನ್ನನ್ನು ಇಂದಿಗೂ ಕಾಡುತ್ತಿವೆ.
ಲಂಕೇಶರಿಗೆ ಮಂಡ್ಯ ಮತ್ತು ಅಲ್ಲಿನ ಜನರ ಮೊಂಡಾಟ, ಮುಗ್ಧತೆ ಇವುಗಳ ಬಗ್ಗೆ ವಿಚಿತ್ರವಾದ ವ್ಯಾಮೋಹವಿತ್ತು. ಪ್ರತಿ ಬಾರಿ ಮಂಡ್ಯಕ್ಕೆ ಬಂದರೆ, ಅಥವಾ ಮೈಸೂರಿಗೆ ಹೋಗುವಾಗ ಅವರ ಒಡನಾಡಿ ಪ್ರೊ.ಹೆಚ್. ಎಲ್. ಕೇಶವಮೂರ್ತಿ ಮನೆಯಲ್ಲಿ ಸ್ವಲ್ಪ ಹೊತ್ತು ಕಾಲಕಳೆದು ಮಂಡ್ಯದ ರಾಜಕೀಯ, ಸಾಮಾಜಿಕ ಸ್ಥಿತಿಗತಿ ತಿಳಿದು ಮನಸಾರೆ ನಕ್ಕು ಹೋಗುತ್ತಿದ್ದರು. ಆರಂಭದಲ್ಲಿ ಅವರು ನೀಲು ಪದ್ಯಗಳನ್ನು ಬರೆಯಲು ಪ್ರಾರಂಭಿಸಿದಾಗ ನೀಲುವನ್ನು ಮಂಡ್ಯದ ಹೆಣ್ಣು ಮಗಳು ಎಂಬಂತೆ ಬಿಂಬಿಸುತ್ತಿದ್ದರು.
ಮಂಡ್ಯದ ಪುಟ್ಟ ಮರಗಳ
ಜೊತೆ ಬದುಕುವ ನನಗೆ
ಅತ್ಯಂತ ಪ್ರಿಯವಾದದ್ದು
ಪ್ರೇಮ, ಪ್ರಕೃತಿ,ಮತ್ತು ಕೆಲಸ.
ಇಂತಹ ಸುಮಾರು ಐವತ್ತಕ್ಕೂ ಹೆಚ್ಚು ಪದ್ಯಗಳನ್ನು ಅವರು ಬರೆದಿದ್ದಾರೆ. ಅವರು ಪ್ರಗತಿರಂಗ ಕಟ್ಟಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದ ದಿನಗಳಲ್ಲಿ ಮಂಡ್ಯದಲ್ಲಿ ನಡೆದ ಒಂದು ಸಮಾರಂಭದಲ್ಲಿ ಗದ್ದಲ ಉಂಟಾಯಿತು. ಇದರಿಂದ ಬೇಸರಗೊಂಡ ಅವರು, ನಂತರದ ದಿನಗಳಲ್ಲಿ ಮಂಡ್ಯದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಬಿಟ್ಟಿದ್ದರು.
ಹದಿಮೂರು ವರ್ಷಗಳ ಹಿಂದೆ ನಾನು ಉದಯ ಟಿ.ವಿ. ಗೆ ಸೇರಿರಲಿಲ್ಲ. ಮಂಡ್ಯ ನಗರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮನೆ ಮಾಡಿಕೊಂಡು ವಾಸವಾಗಿದ್ದೆ. ಎರಡು ಸಾವಿರದ ಇದೇ ಜನವರಿ ತಿಂಗಳ ಜನವರಿ ಮೊದಲವಾರದಲ್ಲಿ ಮಂಡ್ಯನಗರದ ಗೆಳೆಯರೆಲ್ಲಾ ಲಂಕೇಶರನ್ನು ಕರೆಸಬೇಕೆಂದು ನಿರ್ಧರಿಸಿ, ಕೇಶವಮೂರ್ತಿಯವರ ಬೆನ್ನು ಬಿದ್ದೆವು. ಮಂಡ್ಯ ಜಿಲ್ಲೆಯಲ್ಲಿ 1980ರಲ್ಲಿ ರೈತಸಂಘವನ್ನು ಕಟ್ಟಲು ಶ್ರಮಿಸಿ, ನಂತರ ಜನತಾದಳ ಸೇರಿ ದೇವೆಗೌಡರು ಮುಖ್ಯಮಂತ್ರಿಯಾದಾಗ ಸಚಿವನಾಗಿ ಸೇವೆ ಸಲ್ಲಿಸಿದ್ದ ನಮ್ಮ ಗೆಳೆಯ ಎಸ್.ಡಿ. ಜಯರಾಂ ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟ ಎಸ್.ಡಿ. ಜಯರಾಮ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಅವರ ನೆನಪಿನಲ್ಲಿ ಪ್ರತಿ ವರ್ಷ ಜನವರಿ 26ರಂದು ತಲಾ ಹದಿನೈದು ಸಾವಿರ ರೂಪಾಯಿಗಳ ಮೂರು ಪ್ರಶಸ್ತಿಗಳನ್ನು ನೀಡುತ್ತಿದ್ದೆವು. ( ಸಮಾಜಸೇವೆ, ಸಾಹಿತ್ಯ, ಮತ್ತು ಕ್ರೀಡೆ) ಪ್ರಶಸ್ತಿಯ ಆಯ್ಕೆ ಸಮಿತಿ ಅದ್ಯಕ್ಷನಾಗಿದ್ದ ನಾನು 2000 ದ ಜನವರಿ ಮೊದಲ ವಾರ ಬೆಂಗಳುರಿಗೆ ಹೋಗಿ ಲಂಕೇಶರನ್ನು ಕಂಡು ಮಂಡ್ಯಕ್ಕೆ ಬರುವಂತೆ ವಿನಂತಿಸಿಕೊಂಡೆ. ಅವರಿಗೆ ನನ್ನ ಬಗ್ಗೆ ವಿಚಿತ್ರವಾದ ಪ್ರೀತಿ ಇತ್ತು.
1995ರಲ್ಲಿ ಬಿಡುಗಡೆಯಾಗಿದ್ದ ನನ್ನ ಸುಮ್ಮಾನದ ಪದ್ಯಗಳು’ ಕವನ ಸಂಕಲನ ಮತ್ತು 1998ರಲ್ಲಿ ಬಿಡುಗಡೆಯಾಗಿದ್ದ ಅಣುವೆಂಬ ಸದ್ದಿಲ್ಲದ ಸಾವ ಕುರಿತು ಈ ಕೃತಿಗಳನ್ನು ಅವರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಇದಕ್ಕಿಂತ ಹೆಚ್ಚಾಗಿ ಕೇವಲ 42ನೇ ವಯಸ್ಸಿಗೆ ಮಧುಮೇಹ ರೋಗಕ್ಕೆ ತುತ್ತಾಗಿದ್ದ ನನ್ನ ಬಗ್ಗೆ ಅವರಿಗೆ ಅಪಾರ ಕರುಣೆಯಿತ್ತು.
ನನ್ನ ಮನವಿಯನ್ನು ಒಪ್ಪಿದ ಲಂಕೇಶರು ಸಮಾರಂಭದಲ್ಲಿ ಯಾವುದೇ ರಾಜಕೀಯ ವ್ಯಕ್ತಿ ಇರಬಾರದು ಎಂಬ ಷರತ್ತು ವಿಧಿಸಿದರು. ಅವರು ಮಂಡ್ಯಕ್ಕೆ ಬರುವುದು ನನಗೆ ಮತ್ತು ಗೆಳೆಯರಿಗೆ ಅಪಾರ ಸಂತೋಷವನ್ನುಂಟು ಮಾಡಿತು. ಆ ವರ್ಷದ ಸಮಾರಂಭವನ್ನು ವಿಭಿನ್ನವಾಗಿ ಲಂಕೇಶರ ಆಶಯದಂತೆ ರೂಪಿಸಿದ್ದೆವು. ಲಂಕೇಶರ ಆತಿಥ್ಯದ ಹೊಣೆಯನ್ನು ನಾನು ಹೊತ್ತಿದ್ದೆ.
ಸಮಾರಂಭದ ಹಿಂದಿನ ದಿನ ಅಂದರೆ ಜನವರಿ 25 ಮಂಡ್ಯ ನಗರದಿಂದ ಬೆಂಗಳೂರಿಗೆ ಹೋಗಿ ಅವರ ಕಛೇರಿಯಲ್ಲಿ ಬೆಳಿಗ್ಗೆ 11ಕ್ಕೆ ಬೇಟಿ ಮಾಡಿ, ರಾತ್ರಿ ಊಟದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದೆ. ಸಮಾರಂಭಕ್ಕೆ ಕಾರು ತೆಗೆದುಕೊಂಡು ಬರುವುದು ಬೇಡ ಎಂದು ನನಗೆ ತಾಕೀತು ಮಾಡಿದ ಮೇಷ್ಟ್ರು ‘ ನಾನು ಮತ್ತು ಬಸವರಾಜು ನನ್ನ ಕಾರಿನಲ್ಲಿ ಬರ್ತೀವಿ, ಮೈಸೂರನಿಂದ ರಾಮ್ ದಾಸ್ ಮತ್ತು ಮಂಡ್ಯದಿಂದ ಕೇಶವಮೂರ್ತಿ ಅವರನ್ನು ರಾತ್ರಿ ಮನೆಗೆ ಊಟಕ್ಕೆ ಕರಿ’ ಎಂದರು. ಬೇರೆ ಯಾರನ್ನು ಊಟಕ್ಕೆ ಆಮಂತ್ರಿಸಬೇಡ ಎಂದು ಎಚ್ಚರಿಸಿದರು. ಅವರ ಕಛೇರಿಯಿಂದ ನಾನು ಹೊರಡುತ್ತಿದ್ದಂತೆ ಏನೋ ಜ್ಞಾಪಿಸಿಕೊಂಡವರಂತೆ ಮತ್ತೆ ಕರೆದು ಕೂರಿಸಿಕೊಂಡು ಮಜ್ಜಿಗೆ ತರಿಸಿ ಕುಡಿಸಿ ಮಂಡ್ಯ ಜಿಲ್ಲೆಯಲ್ಲಿ ಅಪವ್ಯಯವಾಗುತ್ತಿರುವ ನೀರನ್ನು ಕುರಿತು ಮಾತನಾಡಿದರು. ‘ ನೀವು ಮಂಡ್ಯದ ಜನ ನೀರನ್ನು ಮಿತವಾಗಿ ಬಳಸುವುದನ್ನು ರೂಢಿಮಾಡಿಕೊಳ್ಳಬೇಕು, ನೀವೆಲ್ಲಾ ಮಂಡ್ಯದಲ್ಲಿರುವ ಬುದ್ಧಿವಂತರು ರೈತರನ್ನು ಈ ವಿಷಯದಲ್ಲಿ ತರಬೇತುಗೊಳಿಸಬೇಕೆಂದು ಹೇಳಿದರು. ನಾಳೆ ನಾನು ಮಂಡ್ಯದಲ್ಲಿ ಇದೇ ವಿಷಯ ಕುರಿತು ಮಾತನಾಡ್ತಿನಿ ಕಣೊ ಎಂದರು. ಆಯ್ತು ಸಾರ್ ಎಂದು ಹೇಳಿ ಮಂಡ್ಯಕ್ಕೆ ಹಿಂತಿರುಗಿದೆ.
ಜನವರಿ 26ರ ರಾತ್ರಿ ನನ್ನ ಪ್ರೀತಿ ಮೇಷ್ಟ್ರರ ಊಟಕ್ಕಾಗಿ ಮನೆಯಲ್ಲಿ ನಾಟಿ ಕೋಳಿ ಸಾರು, ಬಿಸಿ, ಬಿಸಿ, ರಾಗಿ ಮುದ್ದೆ, ಕೆರೆಯಿಂದ ಹಿಡಿದು ತಂದ ತಾಜಾ ಮೀನುಗಳ ಪ್ರೈ, ಮತ್ತು ಗೋಡಂಬಿ, ದ್ರಾಕ್ಷಿ, ಮತ್ತು ತುಪ್ಪದಲ್ಲಿ ಉರಿದ ಶಾವಿಗೆ ಪಾಯಸ, ನಂಜನಗೂಡಿನ ರಸಬಾಳೆ ಹಣ್ಣು, ಮೈಸೂರಿನ ವೀಳ್ಯದಚಿಗುರೆಲೆ, ರಾತ್ರಿಯ ಪಾಟರ್ಿಗೆ ಉರಿದ ಗೋಡಂಬಿ ಮತ್ತು ಉಪ್ಪು, ಖಾರ ಹಾಕಿ ಪ್ರೈ ಮಾಡಿದ ಶೇಂಗಾ ಬೀಜ ಎಲ್ಲವು ಸಿದ್ದವಾಗಿದ್ದವು.
25ರ ನಡುರಾತ್ರಿ ತಮ್ಮ ಮನೆಯ ಬೆಡ್ರೂಂ ನಲ್ಲಿ ನಿದ್ರೆಗೆ ಜಾರಿದ ಮೇಷ್ಟ್ರು ಮತ್ತೇ ಹಿಂತಿರುಗಿ ಬಾರದ ಜಾಗಕ್ಕೆ ಜಾರಿ ಹೋಗಿದ್ದರು. 26ರ ಬೆಳಿಗ್ಗೆ ಸುಮಾರು 6-30ರ ಸಮಯದಲ್ಲಿ ನನ್ನ ಮನೆಯ ದೂರವಾಣಿಗೆ ಕರೆ ಮಾಡಿದ ಪ್ರೊ. ಹೆಚ್. ಎಲ್. ಕೆ. ಜಗದೀಶ್ ಲಂಕೇಶ್ ಹೋಗಿಬಿಟ್ಟರು ಎಂದು ಹೇಳಿ ಒಂದೇ ಸಮನೇ ಬಿಕ್ಕಳಿಸಿ ಅಳತೊಡಗಿದರು. ನಾನು ಏನಾಯ್ತು ಸಾರ್ ಎಂದು ಕೇಳುತ್ತಿದ್ದರೆ ಅವರು ಆ ಕಡೆ ಪೋನ್ ನಲ್ಲಿ ರೋಧಿಸುತ್ತಿದ್ದರು. ಕೂಡಲೇ ಅವರ ಮನೆಗೆ ಹೋದೆ. ನಂತರ ಕಾರ್ಯಕ್ರಮ ರದ್ದು ಪಡಿಸಿ ಗೆಳೆಯರೆಲ್ಲಾ ಬೆಂಗಳೂರಿನತ್ತ ಹೊರಟೆವು.
ಮನೆಯ ಮಧ್ಯ ಹಾಲ್ ನಲ್ಲಿ ಮೇಷ್ಟ್ರರನ್ನು ಮಲಗಿಸಿಲಾಗಿತ್ತು. ಅವರ ಪಾರ್ಥಿವ ಶರೀರದ ಮುಂದೆ ಬಹಳ ವರ್ಷಗಳ ಕಾಲ ಅವರ ಮಗನಂತೆ, ಗೆಳೆಯನಂತೆ, ಸಖನಂತೆ, ಸಹೋದ್ಯೋಗಿಯಂತೆ ಕಾಲ ಕಳೆದಿದ್ದ ಮಿತ್ರ ಬಸವರಾಜ್ ತನ್ನ ಎರಡು ಕೈಗಳನ್ನು ಕಿಬ್ಬೊಟ್ಟೆ ಮೇಲಿಟ್ಟುಕೊಂಡು ಯಾರೋ ಲಂಕೇಶರ ಶವದ ಮುಂದೆ ಪ್ರತಿಷ್ಟಾಪಿಸಿ ಹೋದ ಶಿಲೆಯೇನೊ ಎಂಬಂತೆ ನಿಂತಿದ್ದರು.
ನನ್ನ ಪ್ರಜ್ಞೆಯ ಭಾಗದಂತಿದ್ದ ಮೇಷ್ಟ್ರಿಗೆ ಕೇವಲ ಎರಡು ದಿನ ಆಯಸ್ಸು ಹೆಚ್ಚಿಗೆ ಕೊಟ್ಟಿದ್ದರೆ ನನ್ನದೊಂದು ಆಸೆ ಪೂರೈಸುತ್ತಿತ್ತು ಎಂಬ ಸಂಕಟ ಆ ದಿನ ಆರಂಭವಾದದ್ದು ಇಂದಿಗೂ ನನ್ನೊಳಗೆ ಶಾಶ್ವತವಾಗಿ ಉಳಿದು ಬಿಟ್ಟಿದೆ. ಧಾರವಾಡದ ಸಾಹಿತ್ಯ ಸಂಭ್ರಮದ ನೆಪದಲ್ಲಿ ಈದಿನ ಏಕೊ ಕಾಣೆ ಲಂಕೇಶರು ಪದೆ ಪದೆ ನೆನಪಾದರು.






really a heart touching memory.. thank you jagadish sir
ಹೃದಯ ಭಾರವಾಗಿಸಿದ ಲೇಖನ.
ಬೆರಳತುದಿಯಿಂದಲ್ಲ, ಎದೆಯೊಳಗಿಂದ ಬರೆದವರು ಅವರು.
ಅಂತವರಿಲ್ಲದೆ ದಿಕ್ಕುತಪ್ಪುತ್ತಿದ್ದೇವೇನೊ ಎನಿಸುತ್ತದೆ.
ಅವರು ಅನುವಾದಿಸಿದ “ಈಡಿಪಸ್ ಮತ್ತು ಅಂತಿಗೊನೆ”ಕೃತಿಯ ಅಧ್ಯಯನ ಶುರುಮಾಡಿ ಒಂದು ವರ್ಷವಾಯಿತು.
ಇನ್ನೂ ಅಪೂರ್ಣ ಎನಿಸಿ, ಪ್ರಕಟಣೆ ಮುಂದೂಡುತ್ತಲೇ ಇದ್ದೇನೆ.
ಇನ್ನೂ ಇನ್ನೂ ಕಂಡುಕೊಳುವುದೇನೊ ಇದೆ ಎಂಬಂತಿರುವ ಅಂತಿಗೊನೆ
ಇನ್ನೂ ಅಳುತ್ತಿದ್ದಾನೆ ಎಂಬಂತಿರುವ ಈಡಿಪಸ್…
ಅನುವಾದವು ಕೂಡ ಹೇಗೆ ಶ್ರೇಷ್ಠವಾಗಿರಬಲ್ಲುದು ಎಂಬುದನ್ನು ತೋರಿಸಿಕೊಟ್ಟವರು ಲಂಕೇಶ್.
preetiya jagadeesh koppa,
ee lekhanavannu ivattu tadavaagi odide. tumbaa chennaagide.
gauri lankesh
koneya saalinalli vishesha arthavide.