-ಪಿ ಎಸ್ ಅಮರದೀಪ್
ಪ್ರತಿದಿನ ಸಾವಿನ ಸುದ್ದಿಗಳನ್ನು ನೋಡುತ್ತಿದ್ದರೆ ಸಹಜ ಸಾವುಗಳಿಗಿಂತ ಈಗಿನ ದಿನಗಳಲ್ಲಿ ಅಸಹಜ ಸಾವುಗಳ ಸಂಖ್ಯೇನೇ ಹೆಚ್ಚು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ. ಅಪಘಾತದಿಂದ, ಪ್ರವಾಹದಿಂದ, ವಾಸಿಯಾಗದ ಖಾಯಿಲೆಗಳಿಂದ, ಹತ್ಯೆಗಳಿಂದ, ಆತ್ಮಹತ್ಯೆಗಳಿಂದ ಹೀಗೆ. ಅದ್ಯಾಕೆ ಅಷ್ಟು ಸಾವುಗಳಾಗುತ್ತವೋ ಸುದ್ದಿಯಾಗುತ್ತವೋ ಲೆಕ್ಕವೇ ಇಲ್ಲ.
ಪಾಪ ಪುಣ್ಯ ಕರ್ಮ ಇತ್ಯಾದಿ ಅನ್ನುವಂತೆಯೇ ಇಲ್ಲ. ಎಲ್ಲವೂ ಹೌದು ಮತ್ತು ಅಲ್ಲ. ತಮ್ಮದಲ್ಲದ ತಪ್ಪಿಗೂ ಜೀವ ಬಲಿಯಾಗುತ್ತವೆ. ದ್ವೇಷ, ಸಿಟ್ಟು ಅಸೂಯೆಗೆಂದೇ ತಲೆ ತೆಗೆಯುವವರರು. ಬೆಳಿಗ್ಗೆ ನಗುತ್ತಿದ್ದ ಮೊಗದಲ್ಲಿ ಸಂಜೆಗಾಗಲೇ ವಾಸಿಯಾಗದ ಖಾಯಿಲೆ ಪತ್ತೆ. ಇನ್ನೇನು ವಾಸಿಯಾಯ್ತು ಅನ್ನವಾಗಲೇ ದಿನಗಳ ಅಂತರದಲ್ಲೇ ಸಾವು.
“ಎಲ್ಲವೂ ಚೆನ್ನಾಗಿತ್ತು; ಒಳ್ಳೆಯ ಗಂಡ/ಹೆಂಡತಿ, ಮಕ್ಕಳು, ಮನೆ ಮತ್ತು ಸಂಬಂಧಗಳು… ಆದರೆ ದುಡ್ಡಿನ ಭೂತ, ಮೈಯೊಳಗಿನ ಸೊಕ್ಕು ಮತ್ತು ತೆವಲಿಗೆ ಸಂಗಡಿಗರು ಸಿಕ್ಕ ನಂತರ ಬದುಕು ಹರಿದು ಹನ್ನೆರಡು ಬಾಗಿಲಾಯಿತು” ಎಂಬಂತೆ ಕೆಲವರ ಸಾವನ್ನು ನೋಡುತ್ತೇವೆ. ಅಂಥವರದು ಒಂದೋ ತಾವೇ ಸಾವನ್ನು ತಂದುಕೊಳ್ಳುತ್ತಾರೆ ಇಲ್ಲವೇ ಅಂತಹ ಸಹವಾಸವೇ ಸಾವನ್ನು ಮನೆ ಬಾಗಿಲಿಗೆ ತಂದು ನಿಲ್ಲಿಸಿರುತ್ತದೆ.
ಗಮನಿಸಿ ನೋಡಿ, ನೋಡದೇ ಇರುವ ಅಥವಾ ಪರಿಚಯವಿದ್ದು ಹೆಚ್ಚು ಒಡನಾಡವಿರದ ವ್ಯಕ್ತಿಗಳ ಬಗ್ಗೆಯೂ ಅವರ ಸಾವಿನ ನಂತರ ಅವರ ಬಗ್ಗೆ ಜನ ಅನುಕಂಪದಿಂದ ಒಳ್ಳೆಯ ಮಾತಾಡಿದಾಗ ಅವರ್ಯಾರೆಂದು ಇನ್ನಷ್ಟು ಪರಿಚಯವಾಗುತ್ತಾರೆ. ನಮ್ಮ ನಡುವೆಯೇ ಇರುವ ಪರಿಚಿತ ಮುಖಗಳು ಅದೆಷ್ಟೇ ಗುರುತಿಸಿಕೊಂಡವರಾಗಿರಲಿ ತಾವು ಮಾಡಿಕೊಂಡ ಹಣಕಾಸಿನ ಲಫಡಾಗಳು, ಪಾಶ್ ಜಿಂದಗಿ ಅಮಲಿನೊಂದಿಗೆ ಗಂಟುಬಿದ್ದ ಟೆಂಪೊರರಿ ಶನಿಗಳ ಸಹವಾಸದಿಂದ ಹಣ, ಬಂಗಾರ, ಸಂಬಂಧ ಮುಖ್ಯವಾಗಿ ನಂಬಿಕೆಯನ್ನೇ ಕಳೆದುಕೊಂಡು ಹತಾಶೆಯಿಂದ ಸಾವಿಗೆ ಮುಖವೊಡ್ಡಿದವರ ಬಗ್ಗೆ ಕೇಳಿ ನೋಡಿ… ಅಂಥ ಸಾವಿಗೆ ಯಾವುದೇ ಕನಿಕರವಿರುವುದಿಲ್ಲ.

ಕಳೆದ ವಾರ ಎರಡು ಸಾವುಗಳ ಬಗ್ಗೆ ಕೇಳಿ ಒಬ್ಬರ ಅಂತಿಮ ಸಂಸ್ಕಾರಕ್ಕೆ ಹೊರಡಬೇಕಾಗಿ ಬಂತು…
ಒಂದು: ಅದು ಅತಿ ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಖಾಯಿಲೆ ಇಡೀ ದೇಹವನ್ನು ಘಾಸಿಗೊಳಿಸಿ ಮೊನ್ನೆ ದೀಪಾವಳಿ ಹಬ್ಬದ ಮುಂದೆ ದೇವಸ್ಥಾನಗಳಿಗೆ ಪ್ರವಾಸ ಹೋಗಿ ಬಂದು ಎಲ್ಲರೊಂದಿಗೆ ಮಾತಾಡಿ ಹಾಗೆ ಹೋಗಿ ಹೀಗೆ ಬಂದುಬಿಡ್ತೀನಿ ಅಂತ ಆಸ್ಪತ್ರೆ ಸೇರಿದ ದಿನಗಳ ಅಂತರದಲ್ಲೇ ಶವವಾಗಿ ಬಂದ ವ್ಯಕ್ತಿಯದು. ಖಾಯಿಲೆ ಒಳಗಿದ್ದೂ ಹೊರಗೆ ತೋರಿಸಿಕೊಳ್ಳದೇನೇ ಆಗಿದ್ದೋ ಅಥವಾ ಬಂದದ್ದಾಗಿದೆ ಇನ್ನೇನು ಕೊರಗುವುದು ಎನ್ನುವ ತಟಸ್ಥ ನಿಲುವೋ… ಒಟ್ಟಿನಲ್ಲಿ ಸಾವಂತೂ ಆಗಿಬಿಟ್ಟಿತು…
ಸತ್ತ ವ್ಯಕ್ತಿಯ ಮಣ್ಣಿಗೆ ಬಂದವರು ಮೃತರ ಬಾಲ್ಯದಿಂದ ಸಾವಿನ ದಿನದವರೆಗೆ ಕಂಡಂತೆ “ಭಾಳ ಸಂಭಾವಿತ ಗುಣ, ನಾಕ್ ಮಂದಿ ನೋಡಿ ಕಲೀಬೇಕ್ ನೋಡು” ಅನ್ನುತ್ತಿದ್ದರು. ಹೆಣಕ್ಕೇನೂ ಕೇಳುತ್ತಿದ್ದಿಲ್ಲ..
ಎರಡು: ಸಕಾಲಕ್ಕೆ ಎಲ್ಲರಿಗೂ ಸಂಸ್ಕಾರಕ್ಕೂ ಸುದ್ದಿ ಮುಟ್ಟಿಸಲೂ ಆಗದಂತೆ ಇದ್ದವರಲ್ಲಿ ಮುಜುಗರ ಉಂಟು ಮಾಡಿದ ಇನ್ನೊಬ್ಬರ ಆತ್ಮಹತ್ಯೆಯ ಸಾವು. ಆ ಸಾವಿನ ನಂತರದಲ್ಲಿ ಅನುಕಂಪಕ್ಕಿಂತ ವಿಷಾದವನ್ನೇ ತೋರಿಸಿ ದೂರದಿಂದಲೇ ನಿಂತು ನೋಡಿದವರ ಸಂಖ್ಯೆ ಹೆಚ್ಚು..
ನಾನು ಅಂತಿಮ ಸಂಸ್ಕಾರಕ್ಕೆ ಹೋದ ಸ್ಮಶಾನದಲ್ಲಿ ಅದಾಗಲೇ ಶವಕ್ಕೆ ಅಗ್ನಿಸ್ಪರ್ಶವಾಗಿ ಬೂದಿಯಾಗಿದ್ದ ಜಾಗವದು. ಆ ಶವ ಆಗಲೇ ಸುಟ್ಟು ಬೂದಿಯಾಗಿ ಸಂಸ್ಕಾರಕ್ಕೆ ಬಂದಿದ್ದವರಾಗಲೇ ತಮ್ಮ ನಿತ್ಯ ಜೀವನಕ್ಕೆ ಮರಳಿರುತ್ತಾರೆ. ಸತ್ತವರಿನ್ನು ಅವರ ಮನೆಯ ಗೋಡೆಯ ಫೋಟೋ ಮತ್ತು ಅವರ ನೆನಪಿನ ಭಾಗ ಅಷ್ಟೇ…
ಆದರೆ ಅಲ್ಲೊಂದು ಸಾಕು ನಾಯಿ ಆ ಶವ ಸುಟ್ಟು ಬೂದಿಯಾದ ಜಾಗದಲ್ಲಿ ಶೋಕದಿಂದ ಮಲಗಿದೆ. ಅಲ್ಲಿದ್ದವರಿಗೆ ಅದೊಂದು ಸ್ಮಶಾನ, ಅಲ್ಲೊಂದು ಶವ ಸುಟ್ಟಿದ್ದಾರೆ ನಂತರ ಆ ಬೂದಿಯಲ್ಲಿ ನಾಯಿ ಬೆಚ್ಚನರಸಿ ಮಲಗಿದಂತಷ್ಟೇ ಕಾಣುತ್ತದೆ.
ನಾನು ಈ ಫೋಟೋ ತೆಗೆಯುವ ಸಮಯದಲ್ಲೇ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ;
“ಅದು ಸಾಕುನಾಯಿ ಸರ್ರ” ಅಂದ.
ನಾನಂತೂ ಸತ್ತರೆ ನನ್ನ ದೇಹದಾನ ಮಾಡೆಂದು ದಾಖಲಿಸಿ ಮನೆಯಲ್ಲಿ ಹೇಳಿಬಿಟ್ಟಿದ್ದೇನೆ. ಈ ನಾಯಿಯನ್ನು ನೋಡಿದ ತಕ್ಷಣ ಅನ್ನಿಸಿದ್ದು ಸಾವು ಸಾರ್ಥಕವಾಗಬೇಕು, ಒಬ್ಬರ ನೆನಪಾಗಬೇಕು. ಹಿಂಡು ಮಂದಿ ನಮ್ಮ ಫೋಟೋ ಮೆರವಣಿಗೆ ಮಾಡುವುದು ಬೇಕಿಲ್ಲ. ಸದ್ದಿಲ್ಲದೇ ಮನಸಿನಲ್ಲೇ “ಬದ್ಕಿದ್ರ ಹಿಂಗ್ ಬದುಕ್ಬೇಕ್” ಅನ್ನೋ ಥರಾ ಉತ್ತೇಜನವಾಗಬೇಕೇ ಹೊರತು ಉಪೇಕ್ಷೆ ಮಾಡುವಂತಿರಬಾರದು…
ಮನುಷ್ಯ ಬದುಕಿರುವಾಗಲೇ ಯಾರಿಗೂ ಬೇಡವಾಗುವಂತೆ ಬದುಕಿದರೆ ಯಾರೂ ಮೂಸು ನೋಡದ “ಅವನದು/ಅವಳದು ನಾಯಿಪಾಡು” ಅನ್ನುತ್ತಾರೆ… ಆದರೆ ಆ ನಾಯಿ ಸತ್ತ ಒಬ್ಬರ ಶವ ಬೂದಿಯಾದ ಸ್ಮಶಾನದಲ್ಲಿ ಅದರ ಮುಂದೆ ಸಂಬಂಧಿಕರ್ಯಾರೂ ಇರದಿದ್ದರೂ ಮಲಗಿ ಶೋಕಿಸುತ್ತಿರುವುದನ್ನು ನೋಡಿದಾಗ ನನಗನ್ನಿಸಿದ್ದು; ಮೂಕ ಪ್ರಾಣಿಯೂ ದು:ಖಿಸುತ್ತಿದೆಯೆಂದರೆ ಸತ್ತ ವ್ಯಕ್ತಿ ಬದುಕಿದ್ದಾಗ ಹೇಗಿದ್ದಿರಬಹುದು ಮತ್ತು ಸತ್ತ ಮೇಲೂ ಮನುಷ್ಯರ ಮಧ್ಯೆ ಹೆಸರಾಗಿ ಬದುಕಿರಲು ಇದೊಂದು ಉದಾಹರಣೆ..
ಸ್ಮಶಾನ ಮೌನ ಅನ್ನೋದು ಬಹುಶಃ ಇದಕ್ಕೇ ಇರಬೇಕು…ಇಲ್ಲಿ ಯಾವುದೂ ಮಾತಾಗಿ ಹೊರ ಬರುವುದಿಲ್ಲ… ಹೌದಲ್ಲವೇ?!!!!






0 Comments