ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿನ ಬಾಗಿಲಲ್ಲಿದ್ದ ನನ್ನವ್ವನ ಮಗುವಾಗಿ ಸಾಕಿದೆ..

ಕೆ.ಮಹಾಂತೇಶ, ದಾವಣಗೆರೆ
ಅದು ಮಾಗಿಯ ಚಳಿ. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ. ಮೈಕೊರೆಯುವ ಚಳಿಗಾಳಿಗೆ ನನ್ನವ್ವ ಗುಬ್ಬಿಯಾಗಿದ್ದಳು. ಕ್ಯಾನ್ಸರ್ ಎನ್ನುವ ರಕ್ಕಸ‌ ಕಾಯಿಲೆ ಅವಳನ್ನು ಮೆಲ್ಲ ಮೆಲ್ಲ ತಿಂದು ಹಾಕುತ್ತಿತ್ತು.
ಬೆಂಗಳೂರಿನ ಕಿದ್ವಾಯಿಯಲ್ಲಿ ಆರು ತಿಂಗಳು ಮಕ್ಕಳು ಮೊಮ್ಮಕ್ಕಳಾದಿಯಾಗಿ ನಿಂತು ಚಿಕಿತ್ಸೆ ಮಾಡಿಸಿದ್ದೆವು. ಆದರೂ ಹಿಂಬಂದಿ‌‌ ಮೂಲಕ ಮತ್ತೆ ದಾಳಿ ಆರಂಭಿಸಿತ್ತು ಆ‌ ಮಹಾಮಾರಿ. ಮತ್ತೆ ಚಿಕಿತ್ಸೆ ನೀಡಿದಾಗ ಅದು ಅವಳಿಗೆ ಸರಿ ಹೊಂದಲಿಲ್ಲ. ಅದಾಗಿ ಒಂದು ದಿನ ರೈಲಿನಲ್ಲಿ ಟಿಕೇಟ್ ಮಾಡಿಸಿ ಊರಿಗೆ ಕರೆದೊಯ್ಯುತ್ತಿದ್ದೆ. ರೈಲ್ವೆ ಪ್ಲಾಟ್ ಫಾರಂ ನ ಕಲ್ಲು ಬೆಂಚಿನ ಮೇಲೆ ನನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದೆ.

ಒಳಗೆ ಬೆಂಕಿಯಾಗಿ ಸುಡುತ್ತಿದ್ದ ನೋವನ್ನು ತಣಿಸಲು ಹೊರಗೆ ನಾನು ಆಕೆಯ ಮೈ ಹೊತ್ತುತ್ತಿದೆ. ಆ ಒಳಗಿನ ನೋವನ್ನು ತಾಳೆಲಾರದೆ ಆಕೆ ಅಪ್ಪಾ ಅಪ್ಪಾ ಅಂತಹ ಮುಲುಕುತ್ತಿದ್ದಳು.. ಮೇಲಿಂದ ನಾನು ಇಲ್ಲ ಬಿಡವ್ವ ಆರಾಮಾಗುತ್ತಿಯಾ ಎಂದು ಮಾತಿನ ಮುಲಾಮು ಅಚ್ಚುತ್ತಿದ್ದೆ….
ನಮಗಾಗಿ ಬೆಳೆಗೆದ್ದು ಪೇಟೆಯಲ್ಲಾ ಸುತ್ತಾಡಿ ಅವರಿವರ ಕೈಕಾಲು ಹಿಡಿದು ಹಣ್ಣು ಹಂಪಲು ಮಾರಿ ನಮ್ಮನ್ನು ಸಾಕಿದ್ದಳು ಆಕಿ. ಎಷ್ಟೋ ಬಾರಿ ಹಲವು ರೋಗಗಳಿಗೆ ತುತ್ತಾಗಿ ಸತ್ತು ಬದುಕಿದ್ದಳು ಮತ್ತು ಹೊಟ್ಟೆ ಬಟ್ಟೆ ಕಟ್ಟಿ ನಮ್ಮನ್ನು ಸಲಹಿದ್ದಳು. ಅಂತಹ ನನ್ನವ್ವನನ್ನು ನಾನು ಸೇರಿ ನಾಲ್ಕು ಜನ ಅಣ್ಣ-ತಮ್ಮಂದಿರು, ನಮ್ಮ ಇಡೀ ಕುಟುಂಬದ ಹೆಣ್ಮಕ್ಕಳು ಮತ್ತು ಒಂಭತ್ತು ಜನ ಮೊಮ್ಮಕ್ಕಳು ಇಡಿಯಾಗಿ ಅವಳ ನೋವಿನೊಂದಿಗೆ ನಿಂತಿದ್ದೆವು ಎಂಬ ಹೆಮ್ಮೆ ಇದೆಯಾದರೂ, ಆದರೆ ಅವಳ ಒಳ ನೋವನ್ನು ಹಂಚಿಕೊಳ್ಳುಲು ಸಾಧ್ಯವಾಗಲಿಲ್ಲ..
ಅವಳು ಸಾವಿನ ಆ ಕೊನೆಗಾಲದಲ್ಲಿ ನಾನು ಜೊತೆಗಿರಬೇಕೆಂದು ಚಡಪಡಿಸುತ್ತಿದ್ದಳು. ಆದರೆ ನನಗೋ ಅವಳ ನೋವನ್ನು ಹತ್ತಿರದಿಂದ ಕಂಡು ಅಳುನೇ ಬರುತ್ತಿತ್ತು. ಹೀಗಾಗಿ ಪ್ರತಿದಿನ ಈಗ ಬರ್ತಾನೆ‌ ನಾಳೆ ಬರ್ತೇನೆ ಅಂತಾ ದಿನಾ ದೂಡಿದೆ.. ಊರಿಂದ ಯಾವುದೇ ಕರೆ ಬಂದರೂ ಎದೆಯಲ್ಲಿ ಢವ..ಢವ.. ಆದರೆ ಹೋದರೆ ಅವಳು ಅನುಭವಿಸುವ ನೋವು ನೋಡಲು ಅಸಾಧ್ಯವಾಗಿತ್ತು.
ಅದು 2011 ರ ಸೆಪ್ಟೆಂಬರ್ 3 ಬೆಳೆಗ್ಗೆ 4 ಗಂಟೆ ಅಂತೂ ಒಂದು ಪೋನ್ ಕರೆ ನನ್ನವ್ವನ ಸಾವನ್ನು ವಿವರಿಸಿತು. ಕೊನೆಗೂ ನನ್ನ ಕನವರಿಕೆಯಲ್ಲಿ ಅವಳು ನಮ್ಮಿಂದ ದೂರವಾಗಿದ್ದಳು.
ಆದರೆ ಅವಳು ಎಂದಾದರೂ ದೂರವಾಗಲೇಬೇಕಿತ್ತು ನಿಜ. ಆದರೆ ಮಕ್ಕಳಾದ ನಾವೆಲ್ಲ ಸೇರಿ ಅವಳನ್ನು ಸಂತೋಷದಿಂದ ಕೊನೆ ಕ್ಷಣದವರೆಗೂ ಅಕ್ಷರಶಃ ಮಗುವಿನಂತೆ ಸಲಹಿ ಕಳಿಸಿಕೊಟ್ಟೆವು. ಸ್ವತಃ ಸೋಬಾನಾ‌ ಹಾಗೂ ಶಿಶುನಾಳರ ನೂರಾರು ತತ್ವಪದಗಳನ್ನು ತನ್ನ ಕಂಠಸಿರಿಯಾಗಿ ಹೊಂದಿದ್ದ ನಮ್ಮವ್ವ ಅದನ್ನು ನಮಗೆಲ್ಲ ಧಾರೆ ಎರೆದಳು ಮತ್ತು ತನ್ನ ಸಾವಿನ‌ ನೋವನ್ನು ಮರೆಯಲು ಹಾಡುತ್ತಲೇ ಹಾಡುತ್ತಲೇ ಬದುಕು ಮುಗಿಸಿದಳು.
ಜಿ.ಎನ್.ಮೋಹನ್ ಅವರು ಸಮಾಜವಾದಿ ನಾಯಕ‌ ಕುಮಟಾ ಅವರ ಪತ್ನಿ ರತ್ನಮ್ಮ ಅನಾಥಶ್ರಮದಲ್ಲಿ ಸಾವಿಗೀಡಾದ ದುರ್ದೈವದ ಸಂಗತಿ ಬರೆದಿದ್ದನ್ನು ಓದಿ ಮನಸ್ಸಿಗೆ ಘಾಸಿಯಾಯಿತು. ಹಾಗೆ ಇಂದು ನನ್ನವ್ವ ಅಗಲಿದ ದಿನ. ಯಾರ ತಾಯಿ ದೂರವಾದಾಗಲೂ‌ ನನಗೆ ನನ್ನವ್ವನನ್ನು ಕಳೆದುಕೊಂಡ ಭಾವ‌‌ ಕಾಡುತ್ತದೆ.
ತಾಯಿ ರತ್ನಮ್ಮಗೆ ನಮ್ಮಂಥ ಸಾವಿರ‌ ಮಕ್ಕಳ ನಮನಗಳು.

‍ಲೇಖಕರು avadhi

9 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading