ರಹಮತ್ ತರೀಕೆರೆ
‘ಮರಣಾಂತಾನಿ ವೈರಾಣಿ ನಿವೃತ್ತಂ ನಃ ಪ್ರಯೋಜನಂ’ (ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು) -ರಣರಂಗದಲ್ಲಿ ಶವವಾಗಿ ಬಿದ್ದ ರಾವಣನ ಸಂಸ್ಕಾರ ಮಾಡಲು ನಿರಾಕರಿಸುವ ವಿಭೀಷಣನಿಗೆ ರಾಮ ಹೇಳುವ ಮಾತಿದು. ಮಹಾಭಾರತದಲ್ಲಿ ಭೀಮ ಇಂಥದೇ ದುಡುಕನ್ನು ಮತ್ತೆಮತ್ತೆ ಮಾಡುತ್ತಾನೆ. ಹಾಗಲ್ಲ ಎಂದು ಧರ್ಮರಾಯ ವಿವೇಕ ಹೇಳುತ್ತಾನೆ. ಸತ್ತಹೆಣದ ಜತೆ ವೈರ ಸಾಧಿಸುವುದು ವಿಭೀಷಣನ ಅಥವಾ ಭೀಮನ ವೈಯಕ್ತಿಕ ಸ್ವಭಾವದ ಸಮಸ್ಯೆ ಆಗಿರಲಿಲ್ಲ.
ಯುದ್ಧಸಂಸ್ಕೃತಿಯುಳ್ಳ ಬಹುತೇಕ ಎಲ್ಲ ಸಮಾಜಗಳಲ್ಲೂ ಮೃತದೇಹವನ್ನು ಅನಾದರಿಸುವ ರೂಢಿ ಬೇರೆಬೇರೆ ವಿಧಗಳಲ್ಲಿ ಸಹಜವಾಗಿ ನೆಲೆಸಿತ್ತು. ಇದನ್ನು ಶೌರ್ಯದ ವಿಸ್ತರಣೆಯಾಗಿಯೂ ನೋಡಲಾಗುತ್ತಿತ್ತು. ಆದರೆ ಅದು ತಪ್ಪೆಂದು ಹೇಳುವ ಅಮರ್ದಿನ ನುಡಿಗಳನ್ನೂ ಅವೇ ಸಮಾಜಗಳು ಹುಟ್ಟಿಸಿಕೊಂಡವು. ಶವವನ್ನು ಅಪಮಾನಿಸದಂತೆ ಆಧುನಿಕ ರಾಜ್ಯಾಂಗಗಳು ನಿಯಮ ರೂಪಿಸಿಕೊಂಡವು. ಅಂತಾರಾಷ್ಟ್ರೀಯ ಒಪ್ಪಂದಗಳು ಏರ್ಪಟ್ಟವು.
ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞನೂ ಸ್ಪಾರ್ಟಾದ ಶಾಸಕನೂ ಅಗಿದ್ದ ಚಿಲಾನ್, ಸತ್ತವರನ್ನು ಅಗೌರವಿಸುವ ವಿರುದ್ಧ ಆಡಿದ ಮಾತೊಂದು ಖ್ಯಾತವಾಗಿದೆ- ‘ಡಿ ಮಾರಟಿಯಸ್ ನಿಲ್ ನಿಸಿ ಬೊನಂ’ (ಮೃತರಾದವರ ಬಗ್ಗೆ ಕೇಡನಾಡಬೇಡ) ಇದಕ್ಕೆ ಕಾರಣ, ಯುದ್ಧದಲ್ಲಿ ಎದುರಾಳಿಯ ಕಳೇಬರವನ್ನು ಗೆದ್ದವರು ಅಪಮಾನಿಸುವ ಪದ್ಧತಿ ಗೀಕರಲ್ಲಿ ವ್ಯಾಪಕವಾಗಿದ್ದುದು. ಇಂತಹದೊಂದು ಪ್ರಸಂಗವನ್ನು ಹೋಮರನ ತನ್ನ ಇಲಿಯಡ್’ ಕಾವ್ಯದಲ್ಲಿ ಚಿತ್ರಿಸುತ್ತಾನೆ. ಅಖಿಲಿಸನು ತನ್ನ ಎದುರಾಳಿಯಾಗಿದ್ದ ಹೆಕ್ಟರನ ಶವವನ್ನು ರಥಕ್ಕೆ ಕಟ್ಟಿ ಧೂಳಿನಲ್ಲಿ ಎಳೆದಾಡಿಸುತ್ತಾನೆ.

ಶವವನ್ನು ತುಂಡರಿಸಿ ನಾಯಿಗಳಿಗೆ ಉಣಿಸಲು ಘೋಷಿಸುತ್ತಾನೆ. ಆಗ ಗ್ರೀಕರ ಪರವಾಗಿದ್ದ ದೇವತೆಗಳೇ ಇದು ತಪ್ಪೆಂದು ಬುದ್ಧಿ ಹೇಳುತ್ತಾರೆ. ಸ್ವತಃ ದೇವತೆಗಳ ಒಡೆಯ ಜ್ಯೂಸನೇ ಈ ಬಗ್ಗೆ ತನ್ನ ತೀರ್ಪನ್ನು ಕೊಡುತ್ತಾನೆ. ಶವಾಪಮಾನ ಯುದ್ಧದಲ್ಲಿ ಆಗುವ ಬಗೆ ಒಂದಾದರೆ, ನಾಗರಿಕ ಸಮಾಜದಲ್ಲಿದು ಮತ್ತೊಂದು ಬಗೆಯಲ್ಲಿ ಸಂಭವಿಸುತ್ತದೆ. ನಿರ್ದಿಷ್ಟ ಸಮುದಾಯದ ಮೇಲೆ ಮತಧರ್ಮ ಮತ್ತು ಸಿದ್ಧಾಂತಗಳು ವ್ಯವಸ್ಥಿತವಾಗಿ ದ್ವೇಷವನ್ನು ಉತ್ಪಾದಿಸುತ್ತವೆ. ಅದನ್ನು ಧಾರಣ ಮಾಡಿದವರು, ತಾವು ಶತ್ರುವೆಂದು ಭಾವಿಸುವ ವ್ಯಕ್ತಿ ಜೀವಂತವಿದ್ದಾಗ ಮಾತ್ರವಲ್ಲ ಸತ್ತ ಬಳಿಕವೂ ದ್ವೇಷಿಸುತ್ತಾರೆ.
ನಮ್ಮ ಕೆಲವು ಮಾಧ್ಯಮಗಳು ತಾವು ಎದುರಾಳಿಗಳೆಂದು ಪರಿಭಾವಿಸಿದವರ ಮರಣದ ವರದಿ ಮಾಡುವುದನ್ನು ಗಮನಿಸಬೇಕು. ಅಲ್ಲಿ ಮರಣದ ಸಾನಿಧ್ಯದಲ್ಲಿ ಹುಟ್ಟುವ ವಿಷಾದದ ಗಾಂಭೀರ್ಯವಿರುವುದಿಲ್ಲ. ಬದಲಿಗೆ ಘನತೆಗೆಟ್ಟ ಕುಹಕದ ಗೇಲಿಯಿರುತ್ತದೆ. ಇದನ್ನು ಜ್ಯೂಗಳ ವಿಷಯದಲ್ಲಿ ನಾಜಿಗಳು ಮಾಡಿದರು. ಇಸ್ಲಾಮಿಕ್ ಸ್ಟೇಟಿನ ಉಗ್ರರು ತಾವು ಅಪಹರಿಸಿದ ವ್ಯಕ್ತಿಗಳ ಜತೆ ಮಾಡಿದರು. ಭಾರತದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿದವರು ಆಕೆಯನ್ನು ಸಾಮಾನ್ಯವಾಗಿ ಕೊಲ್ಲುತ್ತಾರೆ. ಆಕೆಯ ಮೃತದೇಹದ ಮರ್ಮಾಂಗದಲ್ಲಿ ಕಠಿಣವಸ್ತುವನ್ನು ತೂರಿಸಿದ, ಸಿಗರೇಟಿನಲ್ಲಿ ದೇಹವನ್ನು ಸುಟ್ಟ ಕಲೆಗಳಿದ್ದ ವರದಿಯಾಗುತ್ತದೆ. ನಕ್ಸಲರನ್ನು ಕಾಡಿನಲ್ಲಿ ಕೊಂದಾಗಲೂ ಪ್ರಾಣಿಗಳಂತೆ ಬೊಂಬುವಿಗೆ ಅವರ ಕೈಕಾಲು ಕಟ್ಟಿ ಹೊತ್ತುತರುವ ಚಿತ್ರಗಳಿವೆ. ಸವರ್ಣೀಯರು ದಲಿತರ ವಿಷಯದಲ್ಲೂ ಇದನ್ನು ಮಾಡಿರುವರು.
ಈ ವಿಕೃತಿಯನ್ನು ಅಮೆರಿಕನ್ ಜನಾಂಗವಾದಿಗಳು ಸ್ಥಳೀಯ ರೆಡ್ಇಂಡಿಯನರ ವಿಷಯದಲ್ಲಿ ಮಾಡಿದರು. ಇದ್ದಾಗ ಕಾಡಿದರು ಸತ್ತಾಗ ಹೊಯ್ಕೊಂಡರು’ ಅಂತ ಗಾದೆಯಿದೆ. ಬದುಕಿರುವಾಗ ಕಾಡಿದವರು ಸತ್ತಮೇಲೆ ಹೆಣಕ್ಕೆ ಅಪಮಾನ ಮಾಡಿದರೆಷ್ಟು ಬಿಟ್ಟರೆಷ್ಟು ಎಂದು ಒಮ್ಮೊಮ್ಮೆ ಅನಿಸುತ್ತದೆ. ನಿಜ. ಅಪಮಾನಗಳಿಗೆ ಶವ ಪ್ರತಿಕ್ರಿಯಿಸುವುದಿಲ್ಲ. ಆದರೆ ಅದು ತನ್ನ ಬಗ್ಗೆ ಆಡಿಕೊಳ್ಳುವವವರನ್ನು ತನ್ನನ್ನು ನಡೆಸಿಕೊಳ್ಳುವವರನ್ನು ಮೌನವಾಗಿದ್ದು ಮೌಲ್ಯಮಾಪನ ಮಾಡುತ್ತದೆ. ಅಸ್ಸಾಮಿನಲ್ಲಿ ಸತ್ತಿರುವುದು ಬಡ ಬಂಗಾಳಿ ರೈತನಲ್ಲ. ಅವನ ದೇಹದ ಜತೆ ನಡೆದುಕೊಳ್ಳುತ್ತಿರುವ ನಾಗರಿಕ ಸಮಾಜ. ರೈತನೆದೆಯ ಮೇಲೆ- ಬಹುಶಃ ಅವನ ಕಿರುಜೀವ ಇನ್ನೂ ಉಳಿದಿತ್ತು- ಫೊಟೊಗ್ರಾಫರ್ ಬಿಜಯಶಂಕರ್ ಹೈಜಂಪ್ ಮಾಡಿ ತುಳಿದಾಗ ಬೂಟುಗಾಲಿನ ರಭಸಕ್ಕೆ, ಆತನ ಕೈ ನೆಲದಿಂದ ತುಸು ಮೇಲೆದ್ದಿತು-ಈಗಿದು ಅನಗತ್ಯ ಎನ್ನುವಂತೆ.

ಶರ್ಮ ಎಂಬ ತರುಣ, ದಿಲ್ಲಿ ಪೋಲಿಸರೆದುರೇ ಪೌರತ್ವ ಕಾಯಿದೆ ವಿರೋಧಿಸುವವರಿಗೆ ಪಿಸ್ತೂಲನ್ನು ಗುರಿಹಿಡಿಯುವ ಚಿತ್ರಪಟವೊಂದು ಪ್ರಸಿದ್ಧವಾಗಿದೆಯಷ್ಟೆ. ಅದನ್ನು ತೆಗೆದ ಫೋಟೊಗ್ರಾಫರ್ ದಾನಿಶ್, ಪಿಸ್ತೂಲಧಾರಿಯಲ್ಲಿರುವ ಅಮಾನುಷತೆಯನ್ನು ಲೋಕಕ್ಕೆ ಕಾಣಿಸುವುದಕ್ಕಾಗಿ ಜೀವಭಯ ಬಿಟ್ಟು ತೆಗೆದಿದ್ದ. ಮುಂದೆ ದಾನಿಶನನ್ನು ಆಫಘಾನಿಸ್ತಾನದ ತಾಲಿಬಾನಿಗಳು ಕೊಂದರು. ಆತನ ಮೃತದೇಹದೊಡನೆ ಅಮಾನುಷವಾಗಿ ನಡೆದುಕೊಂಡರು ಎಂದೂ ವರದಿಗಳಿವೆ. ಆದರೆ ಇಲ್ಲಿ ಪೋಲಿಸರೆದುರೇ ಇನ್ನೂ ಕುಟುಕು ಜೀವಿವರುವ ಅಸಹಾಯಕ ವ್ಯಕ್ತಿಯ ಮೇಲೆ ಮತ್ತೊಬ್ಬ ಫೊಟೊಗ್ರಾಫರ್ ಬೂಟುಗಾಲಲ್ಲಿ ನರ್ತನ ಮಾಡುತ್ತಾನೆ. ವೃತ್ತಿ ಒಂದೇ. ಮನೋವೃತ್ತಿ ಬೇರೆ. ಎಂಥಾ ವೈರುಧ್ಯ?
ಎಲ್ಲ ಸಮಾಜಗಳಲ್ಲೂ ಸಿದ್ಧಾಂತ ಮತ ಧರ್ಮ ಜಾತಿ ಲಿಂಗಾಧಾರಿತ ದ್ವೇಷಗಳು ನಾನಾರೂಪದಲ್ಲಿ ಅಡಗಿಕೊಂಡಿರುತ್ತವೆ. ಅವು ಮನೆಯೊಳಗಿನ ಬೆಂಕಿಯಂತೆ. ಬಸವಣ್ಣನವರು ಹೇಳುವಂತೆ ‘ಮನೆಯ ಬೆಂಕಿ ತನ್ನ ಸುಟ್ಟಲ್ಲದೆ ನೆರೆಮನೆಯ ಸುಡದು’. ನಂಜನ್ನೇರಿಸಿಕೊಂಡ ಬಿಡಿ ವ್ಯಕ್ತಿಗಳು ಲೋಕದೆದುರು ಅಪರಾಧಿಗಳಾಗಿ ಕಾಣಿಸುತ್ತಾರೆ. ಕಾನೂನಿನ ಶಿಕ್ಷೆಯನ್ನೊ ಸಮಾಜದ ತುಚ್ಛೀಕಾರವನ್ನೊ ಎದುರಿಸುತ್ತಾರೆ. ಈ ಅರ್ಥದಲ್ಲಿ ಬಿಜಯಶಂಕರ್ ದ್ವೇಷಸಿದ್ಧಾಂತಗಳ ಬಲಿಪಶು ಕೂಡ.
ಒಂದು ಬಲಿಪಶು ಮತ್ತೊಂದು ಬಲಿಪಶುವನ್ನು ತುಳಿಯುತ್ತಿದೆ. ಆದರೆ ವ್ಯಕ್ತಿಗಳಲ್ಲಿ ದ್ವೇಷ ತುಂಬುವ ಸಿದ್ಧಾಂತ, ಮತಧರ್ಮ ಮತ್ತು ಮಾಧ್ಯಮಗಳು ತೆರೆಮರೆಯಲ್ಲೇ ಉಳಿಯುತ್ತವೆ. ಅದರಲ್ಲೂ ಹಿಂಸೆಗೆ ಕಾನೂನಿನ ಬಲ ಹೊಂದಿರುವ ಪ್ರಭುತ್ವದ ಕ್ರೌರ್ಯ ಕಾಣಿಸುವುದೇ ಇಲ್ಲ.ಆದರೆ ಏರಿದ ನಂಜು ಒಂದಲ್ಲಾ ಒಂದು ದಿನ ಇಳಿಯಲೇಬೇಕು. ಗೋಧ್ರಾದಲ್ಲಿ ಕಬ್ಬಿಣದ ರಾಡನ್ನು ಹಿಡಿದು ಕೊಲ್ಲುವ ಆವೇಶದಲ್ಲಿ ಹೂಂಕರಿಸಿದ ಚಮ್ಮಾರಿಕೆ ಮಾಡುತ್ತಿದ್ದ ಅಶೋಕಮೋಚಿ, ನಂಜಿಳಿದ ಬಳಿಕ ಪರಿತಾಪಪಟ್ಟು, ಕೈಬೆರಳಿಗೆ ಬ್ಯಾಂಡೇಜು ಸುತ್ತಿಕೊಂಡು ಕಂಬನಿಯಾಗಿದ್ದ ಚಪ್ಪಲಿ ಅಂಗಡಿಯ ಅನ್ಸಾರಿಯ ಜತೆಗೂಡಿದ್ದನ್ನು ಈ ನಾಡು ಕಂಡಿದೆ.






0 Comments