
ಸಾವಿತ್ರಿ ಶ್ಯಾನುಭಾಗ
*
ಪುಸ್ತಕ: ರೌದ್ರಾವತರಣಂ
ಲೇಖಕರು : ಅನಂತ ಕುಣಿಗಲ್
ಬೆಲೆ: ೧೫೦
ಪುಟ: ೧೫೨
ಪ್ರಕಾಶನ: ಅವ್ವ ಪುಸ್ತಕಾಲಯ
*
ಬೇಟೆಗಾರನ ಬದುಕು,ಕಾಡಿನ ಸುತ್ತಾ ತಿರುಗಾಡಿ ಬೇಟೆಯಾಡುವ ಪರಿ,ಅದರಲ್ಲೂ ಸಣ್ಣ ಸ್ಪರ್ಧೆ, ಬಂದೂಕು ಮುರಿದಿದ್ದರೂ ಸಾಧಿಸುವ ಛಲವಿದ್ದರೆ ಅದರಲ್ಲೇ ಬೇಟೆ ಹಿಡಿಯುವ ಚಾಕಚಾಕ್ಯತೆ, ನಾಯಿಯೊಂದಕ್ಕೆ ತರಬೇತಿ ನೀಡಿ ಬೇಟೆ ನಾಯಿಯಾಗಿಸುವ ಪರಿ, ಅವನ ಸಹಚರನಾಗಿ ಸಾಗುತ್ತಾ ನಾಯಿ, ಅವರ ಮನೆಯ ಒಂದು ಭಾಗವಾಗಿ, ಊರಲ್ಲಿ ಜಾತ್ರೆಯ ಹೊತ್ತಿನಲ್ಲಿ ಮಾಂಸಹಾರದ ಅಡುಗೆ ನಿಷಿದ್ಧವಾದರೂ ಬೇಟೆನಾಯಿಗೆ ಮಸಾಲೆ ಹಾಕದೇ ಮಾಂಸ ತಿಂದು ಅಭ್ಯಾಸವಿಲ್ಲದಿರೆ ಅದಕ್ಕೆ ಬೇಯಿಸಲೇ ಬೇಕಾದ ಅನಿವಾರ್ಯತೆ ಹೀಗೆ ಕಾಡಿನ ಸುತ್ತ ಬದುಕಿ, ಅಲ್ಲಿನ ಪರಿಸರದಲ್ಲಿ ನಮ್ಮನ್ನು ಕರೆದುಕೊಂಡು ಹೋಗುವ ‘ರಾದ್ರಾವರಣಂ’ ಕಾದಂಬರಿಯನ್ನು ಈ ಸದ್ಯ ಓದಿದೆ.
ಬಾಬಣ್ಣನ ಬದುಕಿನಲ್ಲಿ ಬೇಟೆ ಹಿಡಿದನೆಂದು ಪೋಲಿಸರು ಕರೆದುಕೊಂಡು ಹೋಗುವುದು ಮಾಮೂಲಿ. ಅವನು ಅಮಾಯಕನಂತೆ ಅವರೊಂದಿಗೆ ಮಾತನಾಡಿ ಹಲವಾರು ಬಾರಿ ತಪ್ಪಿಸಿಕೊಂಡು, ಒಮ್ಮೆ ಸಿಕ್ಕಿಹಾಕಿಕೊಂಡು ಪಾರಾಗಿ ಬರುವ ಪರಿಯೋ ಅದ್ಭುತ.
ಅನಾಥವಾಗಿ, ನಿಜವಾಗಿಯೂ ಅನಾಥನೇ? ಈ ಪ್ರಶ್ನೆಗೆ ಉತ್ತರ ಬಾಬಣ್ಣನಿಗೆ ಮಾತ್ರ ಗೊತ್ತು. ಊರಜನರಿಗೆ ತಿಳಿಯದಂತೆ ಆ ಮಗುವನ್ನು ಸಾಕುವ ಹೊಣೆ ಅವನಿಗೆ ಸಿಗುವಂತೆ ಮಾಡಿದರೆ ಆ ಮಗುವನ್ನು ಅವನಂತೆ ಕುಲುಮೆಗೆ ಇದ್ದಿಲು ತುಂಬಿಸಿ ಊರವರ ಕುಡುಗೋಲು, ಕೊಡಲಿಗಳನ್ನು ಕುಲುಮೆ ಹಿಡಿದು ಕೊಡುವ ಕೆಲಸ, ಬೇಟೆಯಾಡುವ ಕೆಲಸ ಹೀಗೆ ಸಣ್ಣ ಸಣ್ಣ ಅಧ್ಯಾಯಗಳನ್ನು ಹೇಳಿ ಕೊಡುತ್ತಾ ಸಾಗುತ್ತಾನೆ.
ತೇಜಸ್ವಿಯವರ ಹಲವಾರು ಕೃತಿಗಳಲ್ಲಿ ಬೇಟೆ, ಕಾಡಿನ ಪರಿಸರ ಹೀಗೆ ಓದಿರುವ ನಮಗೆ ಅನೇಕ ವರ್ಷಗಳ ನಂತರ ಇಂತಹ ಅರಣ್ಯ ಸಾಹಿತ್ಯ ಓದುವ ಭಾಗ್ಯ ಉಂಟಾಯಿತೇನೋ! ಕಮ್ಮಾರ ಬಾಬಣ್ಣ, ಅವನ ಮನೆಯ ಪರಿಸರ, ನಾಯಿ ಸುತ್ತಾ ಹೆಣೆದಿರುವ ಕಥೆಯಾದರೂ ಈ ಕಥೆಯಲ್ಲಿ ಹಳ್ಳಿಯ ಬದುಕಿನಲ್ಲಿ ಜಾತಿಪದ್ಧತಿ, ಸಿರಿವಂತಿಕೆಯಿಂದ, ಜಾತಿ ಆಧಾರದಿಂದ ಬೇರೆ ಜನರನ್ನು ತುಳಿಯುವ ಪದ್ಧತಿ, ಶಾಲೆಗೆ ಸೇರಿಸಲು ಆರು ವರ್ಷ, ಅಥವಾ ಕಿವಿಗೆ ತಲೆಯ ಹಿಂದಿನಿಂದ ಕೈತಾಗಿಸುವ ಆಗಿನ ಕ್ರಮ, ಗೌಡರ ಮಗಳನ್ನು ಸೇರಿಸಲು ಎರಡೂ ಅಡ್ಡ ಬಂದರೂ ಶಾಲಾ ಮಾಸ್ಟರ್ ಅವಳನ್ನು ಶಾಲೆಗೆ ಸೇರಿಸಿಕೊಳ್ಳಲೇಬೇಕಾದ ಪರಿಸ್ಥಿತಿ, ಹೀಗೆ ಸಾಗುತ್ತ ಹೋಗುವ ಕತೆ ಮುಂದೇನಾಯಿತು? ಎಂದು ಕುತೂಹಲಕಾರಿ ಓದಿಸಿಕೊಂಡು ಹೋಗುವಷ್ಟರಲ್ಲಿ ಮುಂದುವರಿಯುವುದು ಎಂದು ಮುಗಿದು ಕಾದಂಬರಿಯ ಎರಡನೇ ಭಾಗ ಯಾವಾಗ ಓದುವೆವು ಎಂಬ ಕುತೂಹಲಕ್ಕೆಡೆ ಮಾಡಿಕೊಡುವುದು.
ಮಿಲಿಟರಿಗೆ ತನ್ನ ಮಗನನ್ನು ಸೇರಿಸುವ ಆಸೆ ವ್ಯಕ್ತ ಪಡಿಸಿದರೆ ಅದು ಬಾಬಣ್ಣನ ತಪ್ಪೇ? ಕಮ್ಮಾರನ ಮಗ ಓದಿ ದೊಡ್ಡವನಾದರೆ ತಪ್ಪೇನು? ಅವನು ಓದಿ ಮುಂದೆ ಬರಬಾರದೆಂದು ಊರ ಕಾಯುವ ಜೋಗಪ್ಪನಾಗಿಸುವ ನಿರ್ಧಾರ ನೀಡುವ ಐನೋರು ಅವರು ಮಾತ್ರ ತಪ್ಪು ಮಾಡಿದರೆ ಅದು ತಪ್ಪಲ್ಲ, ಬಾಬಣ್ಣನೆಂಬ ಬಡಪಾಯಿ ಕನಸು ಕಾಣುವುದು ಕೂಡ ತಪ್ಪು ಎಂಬಂತೆ ತೀರ್ಪು ನೀಡಿದರೆ ಅದನ್ನು ವಿರೋಧಿಸಲು ಯಾರಿಗೆ ಶಕ್ತಿಯಿದೆ. ಇನ್ನೂ ಶಾಲಾ ಮಾಸ್ಟರ್ ಎಲ್ಲರಿಗೂ ಶಿಕ್ಷಣ ನೀಡುವೆನೆಂದು ಊರ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವುದಕ್ಕಾಗಿ ಹೊರಟರೆ ಅಗಸ್ತ್ಯನಿಗೂ ಶಿಕ್ಷಣ ಬೇಕೆ ಎಂದು ಊರ ಮಕ್ಕಳೂ ಅವನಿಂದ ದೂರ ಸರಿಯಲು ಪ್ರಯತ್ನ ಪಟ್ಟರೆ ಎಷ್ಟು ಸರಿ. ಶಿಕ್ಷಣ ಎಲ್ಲರಿಗೂ ಸಮಾನವಲ್ಲವೇ?
-ಹೀಗೆ ಅನೇಕ ನೀತಿ, ನಿಯಮಗಳನ್ನು ಎತ್ತಿ ಹಿಡಿದು ಕಾದಂಬರಿಯ ತುಂಬಾ ನಮ್ಮನ್ನು ಎಚ್ಚರಿಸುತ್ತಾ, ಊರಜನರ ಹಿರಿಮೆ, ಗರಿಮೆಗಳನ್ನು ಎತ್ತಿಹಿಡಿಯುತ್ತಾ, ತಪ್ಪುಗಳನ್ನು ನಮ್ಮ ಮುಂದಿಟ್ಟು ಎಚ್ಚರಿಸುತ್ತಾ ಸಾಗುವ ರೋಚಕ ಕಾದಂಬರಿಯನ್ನೊಮ್ಮೆ ಎಲ್ಲರೂ ಓದಲೇಬೇಕು. ನಾನು ಅದರ ಮುಂದಿನ ಭಾಗವನ್ನು ಓದುವಂತಳಾಗುವೆ.






0 Comments