ಟಿ.ಎಸ್. ಶ್ರವಣ ಕುಮಾರಿ
ನಾವು ಚಿಕ್ಕವರಿದ್ದಾಗ ಪ್ರತಿ ಬೇಸಗೆ ರಜದಲ್ಲೂ, ರಜ ಶುರುವಾದ ಮರುದಿನವೇ ನಮ್ಮ ಪಯಣ ತಾತನ ಊರು ಚಿತ್ರದುರ್ಗಕ್ಕೆ. ನಮ್ಮಂತೆಯೇ ಮಿಕ್ಕ ಎಲ್ಲ ದೊಡ್ಡಮ್ಮಂದಿರೂ, ಚಿಕ್ಕಮ್ಮಂದಿರೂ ಕೂಡಾ ಮಕ್ಕಳೊಡನೆ ಬಂದು ಸೇರಿಕೊಂಡು ತಾತನ ಮನೆಯೆಲ್ಲಾ ನಗು, ಗದ್ದಲದಿಂದ ತುಂಬಿ ಹಬ್ಬದ ವಾತಾವರಣ ಮೂಡುತ್ತಿತ್ತು. ಅಷ್ಟೊಂದು ಮಕ್ಕಳು ಸೇರಿರುವಾಗ, ಆ ವಯಸ್ಸಿನಲ್ಲಿ, ಊರೆಲ್ಲಾ ಸುತ್ತಾಡುವ ಹುಮ್ಮಸ್ಸಿರುವಾಗ ಮನೆಯಲ್ಲೇ ಬೆಲ್ಲ ಜಜ್ಜಿದ ಕಲ್ಲಿನಂತೆ ಕೂತಿರುವುದು ನಮಗೆ ಹೇಳಿಸಿದ್ದೇ?!
ಏನೋ ನೆಪವನ್ನು ಮಾಡಿಕೊಂಡು ನಮ್ಮ ಮಕ್ಕಳ ಪಟಾಲಂ ಅಲ್ಲೇ ಮುಂದಿನ ಬೀದಿಯಲ್ಲಿದ್ದ ದೊಡ್ಡಮ್ಮನ ಮನೆಗೋ, ಅಥವಾ ನಾಲ್ಕಾರು ರಸ್ತೆಗಳ ಹಿಂದೆ ಪೂನಾ ಬೆಂಗಳೂರು ಹೈವೇಗೆ ಹತ್ತಿರದಲ್ಲಿದ್ದ ವಾವೆಯಲ್ಲಿ ನಮಗೆ ಸೋದರತ್ತೆಯಾಗಬೇಕಾದ ಸಾವಿತ್ರಮ್ಮತ್ತೆಯ ಮನೆಗೋ ಅವರು ಕಾಫಿ ಬೆರಸುವ ಸಮಯಕ್ಕೆ ಸರಿಯಾಗಿ ಒಂದು ಸವಾರಿ ಹೊರಟು ಅಲ್ಲಿ ವಕ್ರಿಸುತ್ತಿದ್ದೆವು.
ಊರಿಂದ ಬಂದ ಮಕ್ಕಳೆನ್ನುವ ಅಭಿಮಾನದಿಂದಲೋ ಇಲ್ಲವೇ ʻನಾಚಿಗೆ ಹೇಚಿಗೆ ಊರಾಚೆಗೆʼ ಎನ್ನುವಂತೆ ಕಾಫಿ ಸಿಗುವ ತನಕ ನಾವೂ ಆ ಜಾಗವನ್ನು ಬಿಟ್ಟೇಳುತ್ತಿರಲಿಲ್ಲ ಎನ್ನುವ ಕಾರಣಕ್ಕೋ ಅಂತೂ ಅರ್ಧರ್ಧ ಲೋಟವಾದರೂ ಕಾಫಿ ಸಿಗುತ್ತಿತ್ತು! ನಮ್ಮ ಉದ್ದೇಶ ಸಫಲವಾದ ಮೇಲೆ ಮತ್ತೆ ನಮಗಲ್ಲಿ ಏನು ಕೆಲಸ? ಆ ಬೀದಿ, ಈ ಬೀದಿ ಸುತ್ತಾಡುತ್ತಾ ಊಟದ ಹೊತ್ತಿಗೆ ಮನೆ ಸೇರುತ್ತಿದ್ದೆವು.
ಆದರೆ ಸಾವಿತ್ರಮ್ಮತ್ತೆಯ ಮನೆಗೆ ಬೆಳ್ಳಂಬೆಳಗ್ಗೆ ಹೋಗುವುದಕ್ಕೂ ಒಂದು ಸಕಾರಣವಿತ್ತು. ಅವರ ಮನೆಯ ಸುತ್ತಲೂ ಮಲ್ಲಿಗೆ, ಕನಕಾಂಬರ, ಗುಲಾಬಿ, ದಾಸವಾಳ ಹೀಗೆ ಎಲ್ಲಾ ಗಿಡಗಳಿರುವ ಒಂದು ಸುಂದರವಾದ ಹೂದೋಟವಿತ್ತು. ಹುಟ್ಟಿದ್ದ ಒಂದೇ ಮಗುವನ್ನು ಕಳೆದುಕೊಂಡಿದ್ದ ಅವರು ತಮ್ಮ ಮನೆಯ ಸುತ್ತಲಿದ್ದ ತೋಟವನ್ನು ಮಕ್ಕಳಿಗಿಂತಲೂ ಹೆಚ್ಚು ಜತನದಿಂದ ನೋಡಿಕೊಳ್ಳುತ್ತಿದ್ದರು.
ಬೇಸಗೆಯಲ್ಲಿ ತಾತನ ಮನೆಯ ಗಿಡಗಳೆಲ್ಲಾ ಕ್ಷಾಮಕಾಲದ ದನಕರುಗಳಂತೆ ಹೇಗೋ ಜೀವ ಹಿಡಿದುಕೊಂಡಿರುವಾಗ ಅವರ ಮನೆಯ ತೋಟ ಮಾತ್ರಾ ಹಸಿಮೇವನ್ನು ತಿಂದ ಕರಾವಿನಂತೆ ನಳನಳಿಸುತ್ತಿರುತ್ತಿತ್ತು. ಹಾಗಾಗಿ ತಾತ ʻಅವರ ಮನೆಗೆ ಹೋಗಿ ಪೂಜೆಗೊಂದಿಷ್ಟು ಹೂವು ತನ್ನಿʼ ಎನ್ನುವುದೇ ತಡ, ಹಿಗ್ಗಿನಿಂದ ಹೊರಡುತ್ತಿದ್ದೆವು.
ಮೊದಲು ಸೀದಾ ಪೂನಾ ಬೆಂಗಳೂರು ಹೈವೇಗೆ ಹೋಗಿ ಅಲ್ಲಿನ ಕಟ್ಟೆಯ ಮೇಲೆ ಕುಳಿತು, ಒಂದಷ್ಟು ಹೊತ್ತು ರಭಸದಿಂದ ಭರ್ರೋ ಎಂದು ಓಡಾಡುವ ಲಾರಿಗಳನ್ನೆಲ್ಲಾ ನೋಡಿ ಚಪ್ಪಾಳೆ ತಟ್ಟುತ್ತಾ, ಎಣಿಸುತ್ತಾ ಕುಳಿತಿದ್ದು, ನಂತರ ಸಾವಕಾಶವಾಗಿ ಅತ್ತೆಯ ಮನೆಗೆ ಹೋಗಿ ಹೂವನ್ನು ಕೇಳುತ್ತಿದ್ದೆವು.

ಅವರ ಮನೆಯ ಹೂದೋಟದ ವಿಷಯವನ್ನು ಹೇಳುವಾಗ ಈ ವಿಷಯವನ್ನಂತೂ ಹೇಳಲೇಬೇಕು. ಪುಟ್ಟಣ್ಣ ಕಣಗಾಲರು ದುರ್ಗದಲ್ಲಿ ʻನಾಗರ ಹಾವುʼ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾಗ ತಮ್ಮ ನಟೀಮಣಿಯರನ್ನು ಇವರ ಮನೆಯ ಮುಂದಿನ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿರಿಸಿದ್ದರು. ಇವರ ತೋಟದ ಆಕರ್ಷಣೆಗೆ ಬಿದ್ದ ನಾಯಕಿಯರಾದ ಆರತಿ ಮತ್ತು ಶುಭಾ ಇವರನ್ನು ಓಲೈಸಿಕೊಂಡು ಆ ಗಿಡಗಳ ಹೂವನ್ನು ದಿನದಿನವೂ ತಮ್ಮ ಮುಡಿಗೇರಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರಂತೆ.
ʻಬಾರೇ ಬಾರೇ ಚಂದದ ಚೆಲುವಿನ ತಾರೆʼ ಎಂದು ವಿಷ್ಣುವರ್ಧನ್ ಹಾಡಿದಾಗ ತೇಲುತ್ತಾ ಬಂದ ಆರತಿಯ ಜಡೆಯಲ್ಲಿ ಹಾರುತ್ತಿದ್ದ ಕನಕಾಂಬರದ ದಂಡೆಯಲ್ಲಿ ಸಾವಿತ್ರಮ್ಮತ್ತೆಯ ಬೆವರಿನ ಹನಿಯಿದೆ! ಈಗ ಸಾವಿತ್ರಮ್ಮತ್ತೆಯೇ ಕೈಲಾಸವಾಸಿಯಾಗಿ, ಅವರ ಮನೆಯ ಹೂವಿಗೇ ಐವತ್ತು ವರ್ಷವಾಗುತ್ತಾ ಬಂದರೂ ಇನ್ನೂ ಬಾಡದೆಯೇ ಆ ನಟೀಮಣಿಯರ ತಲೆಯಲ್ಲಿ ಹೂವುಗಳು ನಗುತ್ತಿವೆ. ಇನ್ನು ಆ ಚಿತ್ರ ಇರುವಷ್ಟು ಕಾಲವೂ ನಗುತ್ತಲೇ ಇರುತ್ತವೆ!
ಆ ವಿಷಯ ಪಕ್ಕಕ್ಕಿಟ್ಟು ಈಗ ನಮ್ಮ ಪುಷ್ಪ ಸಂಗ್ರಹಣಕ್ಕೆ ಬರೋಣ. ಅವರಿಗೋ ನಮ್ಮನ್ನು ಕಂಡರೇ ರಾಮಾಯಣದ ಸುಂದರ ಕಾಂಡದಲ್ಲಿ ಫಲಪುಷ್ಟವನವನ್ನೆಲ್ಲಾ ವಿಧ್ವಂಸ ಮಾಡಿದ ಕಪಿಗಳ ನೆನಪುಕ್ಕುತ್ತಿತ್ತೋ ಏನೋ… (ಹಾಗೆಯೇ ಇದ್ದೆವೆನ್ನುವುದು ಬೇರೆಯ ವಿಷಯ). ಚಿಕ್ಕ ಮಾವನವರು ಹೇಳಿಕಳಿಸಿರುವಾಗ ʻಇಲ್ಲʼ ಎನ್ನಲಾಗದೆ, ಪ್ರಾಣಪದಕವೇ ಆಗಿರುವ ತೋಟದಲ್ಲಿ ನಮ್ಮನ್ನು ಮನಬಂದಂತೆ ಕಿತ್ತುಕೊಳ್ಳಲು ಬಿಡಲಾಗದೆ, ತಮ್ಮ ಮಡಿಯಿಂದಾಗಿ ನಮ್ಮನ್ನು ಮುಟ್ಟಿಕೊಂಡು ಕಿತ್ತುಕೊಡಲಾಗದೆ ಒದ್ದಾಡಿ ಹೋಗುತ್ತಿದ್ದರು.
ʻಆ ಗಿಡ ಮುಟ್ಬೇಡಿ, ಈ ಗಿಡಕ್ಕೆ ಕೈ ಹಾಕ್ಬೇಡಿ, ಹುಷಾರಾಗಿ ಹೆಜ್ಜೆ ಇಡಿ, ಪುಟ್ಟ ಪುಟ್ಟ ಸಸೀನ ತುಳಿದ್ಬಿಡ್ಬೇಡಿʼ ಎನ್ನುತ್ತಾ ನೂರೆಂಟು ನಿಬಂಧನೆಗಳನ್ನು ವಿಧಿಸುತ್ತಾ ನಮ್ಮ ಪುಷ್ಪ ಸಂಗ್ರಹಣ ಕಾರ್ಯ ಮುಗಿಯುವವರೆಗೂ ಅಲ್ಲೇ ನಿಂತು ನಿಗಾವಣೆ ಮಾಡುತ್ತಿದ್ದರು. ಕೆಲವು ಸಲವಂತೂ ನಾವು ಹೋಗುವ ಮೊದಲೇ ಎಲ್ಲಾ ಹೂಗಳನ್ನೂ ತಾವೇ ಬಿಡಿಸಿಟ್ಟಿದ್ದು ಹೋದ ತಕ್ಷಣ ತಮ್ಮ ಹೂಬುಟ್ಟಿಗೊಂದಷ್ಟನ್ನು ಸುರಿದು ಮುಂದಿನ ಅಪಾಯವನ್ನು ತಪ್ಪಿಸಿಕೊಳ್ಳುತ್ತಿದ್ದರು.
ಅತ್ತೆಯೋ ಮಡಿಯೆಂದರೆ ಮಡಿ. ಸದಾಕಾಲವೂ ಮಡಿಯಲ್ಲೇ ಇರುತ್ತಿದ್ದರು. ಅದರ ಪರಾಕಾಷ್ಟೆ ಎಲ್ಲಿಗೆ ಹೋಗುತ್ತಿತ್ತೆಂದರೆ ನಮ್ಮ ಶೇಷಣ್ಣ ಮಾವ ಕಾಫಿ ಕುಡಿಯಲು ಒಂದು ಗಾಜಿನ ಲೋಟವನ್ನಿಟ್ಟುಕೊಂಡಿದ್ದರು. ಕಾಫಿಯಾದ ತಕ್ಷಣ ನಮ್ಮತ್ತೆ, “ಲೋಟ ತೊಗೊಳಿ ಕಾಫಿ ಸುರೀತೀನಿ” ಎಂದು ಗಂಡನ ಲೋಟಕ್ಕೆ ಮೇಲಿನಿಂದ ಎತ್ತಿ ಕಾಫಿ ಸುರಿಯುತ್ತಿದ್ದರು. ಅದನ್ನು ಕುಡಿದ ಮೇಲೆ ಮಾವ ಲೋಟವನ್ನು ತೊಳೆದುಕೊಂಡು ಬಂದು ಮತ್ತೆ ಆ ಕಿಟಕಿಯ ಕಟ್ಟೆಯಲ್ಲಿ ಬೋರಲು ಹಾಕಬೇಕಿತ್ತು.
ಹಾಗಾಗಿ ನಾವು ಹೋದಾಗ ನಮಗೆಲ್ಲಾ ಕಾಫಿ ಕೊಡುವುದೆಂದರೆ ಅವರಿಗೆ ಪರಮ ಸಂಕಟವೇ. “ಅಯ್ಯೋ, ಮಕ್ಳೆಲ್ಲಾ ಬಂದಿದೀರ. ಒಂದ್ಲೋಟ ಕಾಫಿನಾದ್ರೂ ಕೊಡೋಣಾಂದ್ರೆ ಆ ಹಾಳಾದ್ ಬಾಬಣ್ಣ ಇವತ್ತು ಹಾಲೇ ತಂಕೊಟ್ಟಿಲ್ಲ. ನಿನ್ನೆ ಉಳ್ದಿದ್ ಹಾಲಲ್ಲೇ ಮಾಡ್ಕೊಂಡ್ವಿ ಖರ್ಚಾಗೋಯ್ತು” ಎಂದು ಅಲವತ್ತುಕೊಂಡರೆ ನನಗಿಂತ ತುಸುವೇ ದೊಡ್ಡವನಾಗಿದ್ದ ನನ್ನ ಸೋದರಮಾವ “ಅಯ್ಯೋ ಅತ್ಗೇ, ಯಾಕ್ ಒದ್ದಾಡ್ತೀರಾ, ನಾನಿಲ್ಲೇ ಸಂಗಪ್ಪನ್ ಮನೇಗೋಗಿ ತಂಕೊಡ್ತೀನಿ ಪಾತ್ರೆ ಕೊಡಿ.

ನಿಮ್ಗೂ ಇನ್ನೊಂದ್ಸಲ ಕುಡ್ಯಕ್ಕಾಗತ್ತೆ” ಅನ್ನುತ್ತಿದ್ದ ಭಂಡಬಿದ್ದು. “ಸರೀನಪ್ಪಾ” ಎನ್ನುತ್ತಾ ಒಳಹೋಗಿ “ಅಯ್ಯೋ ನನ್ ಬುದ್ಧೀಗಿಷ್ಟು! ನಾನು ಸ್ನಾನಕ್ಕೋಗಿದ್ದಾಗ ತಂಕೊಟ್ಟಿದಾನೇನೋ, ನೋಡೇ ಇಲ್ಲ” ಎನ್ನುತ್ತಾ ವಿಧಿಯಿಲ್ಲದೆ ನಮಗೆಲ್ಲಾ ಕಾಫಿ ಕೊಟ್ಟು “ಲೋಟಗಳನ್ನೆಲ್ಲಾ ತೊಳ್ದು ಅಲ್ಲೇ ಕಟ್ಟೇ ಮೇಲೆ ಬೋರಲು ಹಾಕ್ಬಿಡಿ” ಎನ್ನುವ ಜೊತೆಗೇ “ನೀರು ಸುರಿದ್ಬಿಡ್ಬೇಡಿ, ನಾಜೂಕಾಗಿ ಬಳಸಿ” ಎನ್ನಲು ಮರೆಯುತ್ತಿರಲಿಲ್ಲ. ನಂತರ ಹುಣಿಸೇ ನೀರನ್ನು ಚಿಮುಕಿಸಿ ಒಳಗೆ ತೆಗೆದುಕೊಳ್ಳುತ್ತಿದ್ದರೇನೋ… ಅವರೇನಾದರೂ ಮಾಡಿಕೊಳ್ಳಲಿ, ನಮಗೆ ಕಾಫಿ ಗಿಟ್ಟಿತಲ್ಲಾ!
ಅತ್ತೆಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅವರಿಗೆ ಏನನ್ನೇ ಆದರೂ ಎಸೆಯದಿರುವ, ಉಳಿಸಿಟ್ಟುಕೊಳ್ಳುವ ವ್ಯಸನ. ಮೈಸೋಪನ್ನಾಗಲೀ, ಬಟ್ಟೆ ಒಗೆಯುವ ಸೋಪನ್ನಾಗಲೀ ಅದು ಸವೆದು ಕಾಸಿನಷ್ಟಗಲವಾಗಿ, ಉಪಯೋಗಿಸಲು ಸಾಧ್ಯವಿಲ್ಲ ಎಂದಾದರೆ ಅದನ್ನು ಜತನವಾಗಿ ಒಣಗಿಸಿ ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳುತ್ತಿದ್ದರು.
ಅದಕ್ಕವರು ಕೊಡುತ್ತಿದ್ದ ಕಾರಣ “ಎಂದಾದರೊಂದು ದಿನ”, ಸೋಪೆಲ್ಲಾ ಖಾಲಿಯಾಗಿ, ಸಿಗ್ದೇನೇ ಇರೋ ದಿನ ಬಂದ್ಬಿಟ್ರೆ… ಆಗ ಇವಾದ್ರೂ ಇರತ್ತಲ್ವಾ?” ಅವರ ಈ ತರ್ಕಕ್ಕೆ ನಾವೇನು ಹೇಳೋಣ! ಇಟ್ಟುಕೊಳ್ಳಲಿ ಅವರ ಡಬ್ಬಿ, ಅವರ ಪೆಟ್ಟಿಗೆ! ಅವರ ಟ್ರಂಕಿನಲ್ಲಿ ಇನ್ನೂ ಇಂತಹ ಹಲವಾರು ಅಪೂರ್ವ ನಿಧಿಗಳ ವಸ್ತು ಸಂಗ್ರಹಾಲಯವೇ ಇತ್ತು ಎಂದು ಕೇಳಿದ್ದೇನೆ.
ಇನ್ನು ನೀರಿನ ವಿಷಯಕ್ಕೆ ಬಂದರಂತೂ ಇಡೀ ದುರ್ಗ ನೀರಿಗೆ ಹಾಹಾಕಾರ ಪಡುತ್ತಿದ್ದರೆ ಅತ್ತೆಯ ಮನೆಯಲ್ಲಿ ಸಮೃದ್ಧಿ! ಪಾತ್ರೆಗಳಿರಲಿ, ಖಾಲಿಯಾದ ಗಾಜಿನ ಭರಣಿಗಳಲ್ಲೂ, ಕಡೆಗೆ ಲೋಟ ಬಟ್ಟಲಲ್ಲಿ ಸಹಾ ನೀರನ್ನು ಹಿಡಿದಿಟ್ಟುಕೊಂಡಿರುತ್ತಿದ್ದರು. ಮತ್ತೆ ನೀರು ಬಂದ ದಿನ ಉಳಿದದ್ದು ಬಚ್ಚಲ ಮನೆಗೆ, ಪಾತ್ರೆ ಬಟ್ಟೆಗೆ, ತೋಟಕ್ಕೆ ಎಂದು ಬಳಸಿ, ಅಡುಗೆ ಮನೆಗೆ ಮಾತ್ರಾ ಹೊಸನೀರು.
ಬಳಸುವಾಗಲೂ ಹನಿಹನಿಯನ್ನೂ ಎಣಿಸುವಂತೆ ಬಳಸುತ್ತಿದ್ದರು. ಅಕ್ಕಿ, ಬೇಳೆ, ತರಕಾರಿ ಹಾಗೆಯೇ ಮಧ್ಯೆ ಮಧ್ಯೆ ಕೈ ತೊಳೆದ ಅಡುಗೆಮನೆಯ ನೀರೆಲ್ಲಾ ತೋಟವನ್ನು ಸೇರುತ್ತಿತ್ತು. ಇಂದಿನ “ನೀರನ್ನು ಉಳಿಸಿ” ಅಭಿಯಾನಕ್ಕೆ ಅವರಿಗಿಂತ ಸೂಕ್ತವಾದ ಬ್ಯಾಂಡ್ ಅಂಬ್ಯಾಸಿಡರ್ ಇನ್ನೊಬ್ಬರಿಲ್ಲ ಎನ್ನುವುದು ನನ್ನ ಸ್ಪಷ್ಟವಾದ ನಿಲುವು!
ಅತ್ತೆಗೆ ಯಾವುದೇ ವಸ್ತುವನ್ನಾಗಲೀ ಬಳಸಿ ಮುಗಿಸಿಬಿಡುವುದೆಂದರೆ, ಅಥವಾ ಎಸೆದುಬಿಡುವುದೆಂದರೆ ಅದೇನೋ ಭಯ! ಮುಂದೆ ಅದು ಸಿಗತ್ತೋ ಇಲ್ಲವೋ! ಯಾವತ್ತೋ ಒಂದಿನ ಬೇಕಾದ್ರೆ ಎನ್ನುವ ಆತಂಕ ಅವರನ್ನು ಬಿಟ್ಟಿದ್ದೇ ಇಲ್ಲ. ಅವರ ಮನೆಯಲ್ಲಿ ರೇಡಿಯೋ ಸಂಶೋಧನೆಯಾದ ಹೊಸತರಲ್ಲಿ ತೆಗೆದುಕೊಂಡಿದ್ದು ಇವರವರೆಗೂ ಬಂದಿದ್ದ ಒಂದು ಪುರಾತನ ರೇಡಿಯೋ ಇತ್ತು. ಅದೂ, ಹಾಡುವಷ್ಟು ಕಾಲ ಹಾಡಿ, ಮಾತಾಡುವಷ್ಟು ಕಾಲ ಮಾತನಾಡಿ ಕಡೆಗೊಂದು ದಿನ ಅದರ ಗಂಟಲು ಕಟ್ಟಿ, ಯಾವ ಉಪಚಾರಕ್ಕೂ ಬಗ್ಗದೆ ಮೌನವಾಗಿ ಮಲಗಿಬಿಟ್ಟಿತು.
ಅದನ್ನು ಎಸೆದುಬಿಟ್ಟರೆ ಅತ್ತೆಯ ಹೆಸರಿಗೇ ಅವಮಾನ! ರಿಪೇರಿ ಮಾಡಿಸಿಕೊಡುವಂತೆ ಇಂಜಿನಿಯರ್ ಆಗಿದ್ದ ನಮ್ಮ ದೊಡ್ಡಮ್ಮನ ಮಗ ಗುಂಡೂರಾಯನ ಬೆನ್ನು ಬಿದ್ದರು. ಅವನೂ ಪಾಪ, ಪ್ರಾಮಾಣಿಕವಾಗಿ ಹಲವು ಕಡೆ ಪ್ರಯತ್ನ ಪಟ್ಟ. ಅದರ ರಿಪೇರಿಗೆ ಬೇಕಾದ ಅಂಗಾಗಗಳೇ ಸಿಗದೇ ಹೋಗಿ, ಇನ್ನೊಂದು ಯಾವುದಾದರೂ ಅದೇ ಮಾಡೆಲ್ಲಿನ ರೇಡಿಯೋ ಗುಜರಿಯಲ್ಲಿ ಸಿಕ್ಕರೆ(?) ಅದರ ಅಂಗಗಳು ಉಪಯೋಗಿಸಿಕೊಳ್ಳುವ ಸ್ಥಿತಿಯಲ್ಲಿದ್ದರೆ(?) ಆಗ ರಿಪೇರಿ ಮಾಡಿಕೊಡುತ್ತೇನೆಂದು ಅಂತೂ ಒಬ್ಬ ರಿಪೇರಿಯವನು ಒಪ್ಪಿಕೊಂಡು ಇಟ್ಟುಕೊಂಡ.

ಅವತ್ತಿನಿಂದ ಗುಂಡಣ್ಣನನ್ನು ಕಂಡಾಗೆಲ್ಲಾ “ಏನಪ್ಪಾ ಗುಂಡಾ, ನಮ್ಮ ಮಾಣಿಕ್ಯದ ಹಾಗೆ ಅಂತಾ ಚೆನ್ನಾಗಿದ್ದ ರೇಡಿಯೋ ಯಾರದೋ ಅಂಗಡಿಯಲ್ಲಿ ಕೂತಿದೆಯಲ್ಲಪ್ಪ. ರಿಪೇರಿ ಆಗಲ್ಲ ಅಂತ ವಾಪಸ್ಸಾದರೂ ಕೊಟ್ಟುಬಿಟ್ಟರೆ ಹೋಯ್ತು ಅಂದ್ಕೊಂಡು, ಅದನ್ನ ಬಚ್ಚಲ ಒಲೆಗೆ ಹಾಕಿ, ಹಂಡೆ ನೀರು ಕಾಯಿಸಿಕೊಂಡು ತಲೆಗೆ ಸ್ನಾನ ಮಾಡಿಬಿಡ್ತೀನಿ” ಎಂದು ಅತ್ತೆಯದು ಒಂದೇ ವರಾತ.
ತಡೆಯಲಾಗದೆ “ಸಧ್ಯಕ್ಕೆ ಇದನ್ನ ಉಪಯೋಗಿಸಿಕೊಳ್ತಿರಿ” ಎಂದು ನಮ್ಮ ಗುಂಡಣ್ಣ ಒಂದು ಹೊಸ ಟ್ರಾನ್ಸಿಸ್ಟರನ್ನು ತಂದುಕೊಟ್ಟರೂ, ಇನ್ನೂ ತಮ್ಮ ಅಮೂಲ್ಯ ಆಸ್ತಿಯ ಬಗೆಗಿನ ಮೋಹ ಹೋಗದೆ “ಅಂದ್ರೆ ಇನ್ನು ಅದನ್ನ ಮರೆತಹಾಗೇನಾಪ್ಪಾ” ಎಂದು ಕಣ್ಣಲ್ಲಿ ನೀರು ತಂದುಕೊಂಡರು. ಗುಂಡಣ್ಣ ತಲೆಚಚ್ಚಿಕೊಂಡ.
ಇಂತಾ ಅತ್ತೆಗೆ ಒಮ್ಮೆ ನೆಂಟರ ಮನೆಯ ಮದುವೆಗೆ ಬಂದಿದ್ದಾಗ, ಧರ್ಮಾವರದಿಂದ ರೇಶ್ಮೆ ಸೀರೆಗಳನ್ನು ತಂದು ಮಾರುತ್ತಿದ್ದ ನಮ್ಮ ದೊಡ್ಡಪ್ಪ ತಂದಿದ್ದ ಒಂದು ಸೀರೆಯ ಮೇಲೆ ಇನ್ನಿಲ್ಲದ ಮನಸ್ಸಾಯಿತು. ಕೊಳ್ಳುವ ಮನಸ್ಸು, ಆದರೆ ಪರ್ಸಿನಲ್ಲಿದ್ದ ಹೊಸ ಹೊಸ ನೋಟುಗಳನ್ನು ಖರ್ಚು ಮಾಡಲು ಇಷ್ಟವಿಲ್ಲ. ಸಾಕಷ್ಟು ಚೌಕಾಸಿ ಮಾಡಿದರು. ದೊಡ್ಡಪ್ಪನೂ ʻಅಯ್ಯೋ ಪಾಪʼ ಎಂದು ಸಾಧ್ಯವಿದ್ದಷ್ಟು ಕಡಿಮೆಯೇ ಮಾಡಿಕೊಂಡರು.
ಅಂತೂ ಒಂದು ದರಕ್ಕೆ ಬಂದು ನಿಂತಾಗ ಪರ್ಸನ್ನು ತೆಗೆದು ಹೊಸನೋಟುಗಳನ್ನು ಎಣಿಸುತ್ತಾರೆ… ಸೀರೆಯನ್ನು ನೋಡುತ್ತಾರೆ… ಅರ್ಧ ಗಂಟೆಯಾದರೂ ಅವರಿಂದ ʻಹೊಸನೋಟೋ?ʼ ʻಸೀರೆಯೋ?ʼ ನಿರ್ಧರಿಸಲು ಸಾಧ್ಯವಾಗಲೇ ಇಲ್ಲ. ಕಡೆಗೆ ದೊಡ್ಡಪ್ಪ ಸೀರೆಯ ಗಂಟನ್ನು ಕಟ್ಟಿ “ದುಡ್ಡು ಪರ್ಸಲ್ಲಿಟ್ಕೋ ಸಾವಿತ್ರಮ್ಮ” ಅಂದರು; “ಹಂಗಂತೀರಾ…?” ಎಂದು ಅವರ ಮುಖವನ್ನೇ ಒಂದೆರಡು ಕ್ಷಣ ನೋಡಿ ತಲೆಯಾಡಿಸುತ್ತಾ ʻಅದೇ ಸರಿʼ ಎನ್ನುವ ತೀರ್ಮಾನಕ್ಕೆ ಬಂದು ಸಮಾಧಾನದಿಂದ ಅಲ್ಲಿಂದೆದ್ದರು.
ಹುಟ್ಟಿದ್ದ ಒಂದೇ ಮಗುವನ್ನು ನ್ಯೂಮೋನಿಯಾದಿಂದ ಕಳೆದುಕೊಂಡಿದ್ದ ಸಾವಿತ್ರಮ್ಮತ್ತೆ, ಶೇಷಣ್ಣ ಮಾವರಿಗೆ ಅದೆಷ್ಟು ಕೊರಗಿತ್ತೋ, ಎಂತಹ ಅಭದ್ರತೆ ಕಾಡುತ್ತಿತ್ತೋ ಎಂದು ಇಂದು ಅನ್ನಿಸುತ್ತದೆ. ನಮ್ಮ ತಾತನೂ ತೀರಿಕೊಂಡು, ಶೇಷಣ್ಣ ಮಾವನೂ ಕಾಲವಾದ ಮೇಲೆ ಅತ್ತೆ ದುರ್ಗವನ್ನು ಬಿಟ್ಟು ಅವರ ಸಂಬಂಧಿಕರಿರುವ ಮಧುಗಿರಿಯಲ್ಲಿ ಒಂದು ಮನೆ ಮಾಡಿಕೊಂಡು ತಮ್ಮ ಕಡೆಯ ದಿನಗಳನ್ನು ಕಳೆದರಂತೆ.
ಕೂಡು ಕುಟುಂಬದ ವ್ಯವಸ್ಥೆಯಿದ್ದ ಆ ಕಾಲದಲ್ಲಿ ಹೀಗೆ ಒಂಟಿಯಾಗಿ ಬದುಕಬೇಕಾದ ಪ್ರಸಂಗಗಳು ಅಷ್ಟಾಗಿ ಬರುತ್ತಿರಲಿಲ್ಲ. ಆದರೆ ಇವರಿಗೆ ಯಾವುದೇ ಭದ್ರವಾದ ಆಸರೆಯಿಲ್ಲದ್ದರಿಂದ ಅವರು ಅಷ್ಟೊಂದು ಪಿಸುಣತನದಿಂದ, ಎಲ್ಲವನ್ನೂ ಕೂಡಿಟ್ಟುಕೊಳ್ಳುವ ಮನೋಭಾವದಿಂದ ಇದ್ದರೇನೋ. “ನನಗ್ಯಾರಪ್ಪಾ ಇದಾರೆ, ಮಕ್ಕಳಾ ಮರಿಯಾ…” ಎಂದು ಅವರು ಸದಾ ಹೇಳುತ್ತಿದ್ದುದು ಈಗಲೂ ನೆನಪಾಗುತ್ತದೆ.






ಪ್ರಕಟಿಸಿದ್ದಕ್ಕೆ ಧನ್ಯವಾದಗಳು
ಬಹಳ ಇಷ್ಟವಾಯ್ತು ಮೇಡಮ್