ಒಡಲ ಬೆಂಕಿಯ ಚಿಗುರು ವಿಜಯಾದಬ್ಬೆ
ಇನ್ನು ಒಂದು ವರ್ಷದಲ್ಲಿ ಒಂದು ಸಂಕಲನ ತಯಾರಾಗುತ್ತದೆ. ಮಾತಿನಲ್ಲಿ ಸಂಪೂರ್ಣ ಭರವಸೆಯಿತ್ತು. ಅವರ ನಗು ನಮ್ಮ ಎದೆಯ ಮೇಲೆಲ್ಲಾ ಚೆಲ್ಲಿತು. ಅವರ ಕವನಗಳನ್ನು ಓದಿರಲಿಲ್ಲ ಅವರ ನಗುವಿಗಿಂತ ಸುಂದರ ಕವನ ಮತ್ತೊಂದಿರಲು ಸಾಧ್ಯವೆ ಇಲ್ಲ ಎನ್ನುವ ನಿಲುವಿಗೆ ನಾನೇ ಅಲ್ಲದೇ ಯಾರಾದರೂ ಬರಬಹುದಿತ್ತು.
ಈಗ ತಾನೆ ಬರೆಯಲು ಆರಂಭಿಸಿದ ಯುವ ಕವಿಯಂತೆ ತನ್ನ ಸಂಕಲನದ ಬಗ್ಗೆ ಮಾತನಾಡಿದವರು ನಾಡು ಕಂಡ ಅತ್ಯುತ್ತಮ ಚಿಂತಕಿ, ಕವಯತ್ರಿ, ಸಂಘಟಕಿ, ಹೋರಾಟಗಾರ್ತಿ, ಡಾ|| ವಿಜಯಾದಬ್ಬೆ. ತೊಂಭತ್ತರ ದಶಕದಲ್ಲಿ ಕರ್ನಾಟಕದ ಲೇಖಕಿಯರ ಸಂಘದಿಂದ ಅತ್ಯಂತ ಕ್ರಿಯಾಶೀಲರಾಗಿದ್ದವರು ವಿಜಯಾದಬ್ಬೆ. ನಂತರದ ದಿನಗಳ ಲೇಖಕಿಯರಲ್ಲಿ ಅವರ ಪ್ರಭಾವವನ್ನು ಕಾಣಬಹುದು. 2000 ನೇ ಇಸವಿಯಲ್ಲಿ ಭೀಕರ ಅಪಘಾತವೊಂದಕ್ಕೆ ಈಡಾಗಿ ಸತತ ನಾಲ್ಕು ತಿಂಗಳು ಕೋಮಾ ಸ್ಥಿತಿಯಲ್ಲಿದ್ದವರು. ನಂತರದ ಅವರ ಚೇತರಿಕೆ ಅವರ ಸುಪ್ತ ಪ್ರಜ್ಞೆಯೊಳಗಿನ ದಿಟ್ಟತನಕ್ಕೆ ಸಾಕ್ಷಿ. ಇಲ್ಲಿಗೆ ಹದಿಮೂರು ವರ್ಷಗಳು ಶಕ್ತಿ ಶಾಲಿ ಲೇಖಕಿ, ಚಿಂತಕಿಯನ್ನು ಸಾವು ಕಬಳಿಸುವ ಯತ್ನ ಮಾಡಿತ್ತು. ಹದಿಮೂರು ವರ್ಷಗಳಲ್ಲಿ ಸಾವಿಗೆ ಸರಿಯಾದ ಉತ್ತರ ಕೊಟ್ಟವರು ಡಾ|| ವಿಜಯಾದಬ್ಬೆ. ಆ ಕಾಲಕ್ಕೆ ಹದಿನೆಂಟು ಉತ್ತಮ ಕೃತಿಗಳನ್ನು ನೀಡಿ ತಮ್ಮ ಸಮಕಾಲೀನ ಲೇಖಕಿಯರೊಂದಿಗೆ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದವರು. ಅಷ್ಟು ಕೃತಿಗಳನ್ನು ನೋಡಿದ ನಂತರ ಈ ಹದಿಮೂರು ವರ್ಷಗಳಲ್ಲಿ ನಾವು ಅದೆಷ್ಟು ಕಳೆದುಕೊಂಡೆವು ಎಂಬುದನ್ನು ನೆನಪಿಸಿಕೊಂಡರೆ ನೋವಾಗುತ್ತದೆ.
ತಿರುಗಾಡಬಹುದಾ…? ಅಂತ ಕೇಳಿದಕ್ಕೆ “ಓಹ್ ಆರಾಮಾಗಿ ಈ ಊರು (ದಬ್ಬೆ) ನನಗೆ ಅಂತ್ಯತ ಪ್ರಿಯ ಇಲ್ಲಿನ ಮಲೆನಾಡಿನ ವಾತಾವರಣಕ್ಕೆ ಒಂದು ಸೊಬಗಿದೆ. ಮನೆಯ ಮುಂದಿರುವ ದೊಡ್ಡ ಕಾಂಪೌಡಿನ ಒಳಗೆ ತಿರುಗಾಡುತ್ತೇನೆ. ಡಾಕ್ಟರ್ ಹೇಳಿದ ಸಣ್ಣಪುಟ್ಟ ವ್ಯಾಯಮ ಮಾಡುತ್ತೇನೆ” ಎಂದು ಹೇಳುವಾಗ ಅಲ್ಲೇ ಇದ್ದ ಅವರ ತಮ್ಮ ನಾಗರಾಜುರವರು “ಇವರ ರಿಕವರಿ ನಮಗೆ,ಅಚ್ಚರಿಯನ್ನುಂಟು ಮಾಡಿದೆ. ಇವರಿಗೆ ಮೈಸೂರಿನಲ್ಲಿ ಟ್ರೀಟ್ ಮೆಂಟ್. ಅಲ್ಲಿನ ವೈದ್ಯರು ಕೆಲವು ರೋಗಿಗಳನ್ನು ಖಾಯಿಲೆಯನ್ನು ಹೇಗೆ ಎದುರಿಸಬೇಕು. ಎಂಬುದನ್ನು ನೋಡಲು ಇಲ್ಲಿಗೆ ಕಳುಹಿಸುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ಇವರು ಖುಷಿಯೆಂದರೆ ಮತ್ತೆ ಬರೆಯುತ್ತಿರುವುದು ಸಂತೋಷವಾಗುತ್ತಿದೆ”ಎಂದರು.
ವಿಜಯಾ ಮೇಡಮ್ “ಕಥೆಗಳನ್ನು ಬರೆದಿದ್ದೇನೆ ಕವನಗಳು ಸಾಕಷ್ಟಿವೆ. ಬೆಂಗಳೂರಿನ ಪ್ರಕಾಶಕರೊಬ್ಬರು ಮಾತನಾಡಿದ್ದರೆ. ಸಮಗ್ರ ಸಾಹಿತ್ಯದ ಒಂದು ಪುಸ್ತಕವು ಬರಲಿದೆ” ಎಂದು ಉತ್ಸಾಹದಿಂದ ಹೇಳಿದರು. “ನಾನು ಹೇಳಿದೆನಲ್ಲ ನನ್ನ ಈ ಊರು ಬರೆಯಲು ಸರಿಯಾದ ಜಾಗ ಅಂತ ಎಂದು ನಕ್ಕರು. ಅವರನ್ನೂ ಓದಿ ಕವಿಯಾಗುವುದು ಬೇರೆ, ಅವರ ನಗುವಿನ ಬೆಡಗಿನಲ್ಲೇ ಅಸಂಖ್ಯಾತ ಕವನಗಳಿವೆ.
ನಾನು ಓದುವ ಕೊಠಡಿ ಮೇಲೆ ಇದೆ ಎಂದು ತೋರಿಸಲು ಹೊರಟರು. ಅವರೊಟ್ಟಿಗೆ ಮೇಲಿನ ಕೊಠಡಿಗೆ ಹೋದರೆ ಅಚ್ಚುಕಟ್ಟಾದ ಒಂದು ಗ್ರಂಥಾಲಯ. ಹಲವು ಅಪರೂಪದ ಪುಸ್ತಕಗಳು, ಒಂದು ಕಿಟಕಿ, ಕಿಟಕಿಯಾಚೆಗಿನ ಹಸಿರು, ಹಸಿರು ಕಿಟಕಿಯ ಪಕ್ಕ ಒಂದು ಟೇಬಲ್ ಕೂರಲಿಕ್ಕೆ ಒಂದು ಆರಾಮು ತಿರುಗುವ ಕುರ್ಚಿ. ಯಾವಾಗಲೂ ಆಗುವಂತೆ ನನಗೆ ಸಣ್ಣ ಅಸೂಯೆಯುಂಟಾಗಿ ಅವರ ಮುಖ ನೋಡಿದೆ. ಅವರು ನಕ್ಕರು ಅಸೂಯೆ ಕವನವಾಗುತ್ತಿತ್ತು.
ಅವರ “ಇತಿಗೀತಿಕೆ” ಎಂಬ ಕವನ ಸಂಕಲನವನ್ನು ಕೊಟ್ಟರು ಮೊದಲು ಕವನದ ಕೆಲವು ಸಾಲು ಅಲ್ಲಾಡಿಸಿ ಬಿಟ್ಟಿತು.
ಮೆದುಳೊಳಗಿನ ಮಬ್ಬಿನ ಗೋಡೆ
ಅರಿವ ಒಳಗೆ ಬಿಡದೆ ತಡೆದ ನಿಮಿಷ
ಜೀವ ಅಲುಗಿಸುತ್ತಿದ್ದ ಏನೋ ಹೆದರು
ಹುಂ ಉಹುಃಗಳ ನಡುವೆ ಸಿಕ್ಕಿ ಸೋತ ಹೃದಯ
ಇದುವರೆಗೆ ವಿಜಯಾದಬ್ಬೆಯವರನ್ನು ಓದದೇ ನಾನು ಅದ್ಯಾವ ಸೀಮೆಯ ಸಾಹಿತ್ತಾಸಕ್ತ ಅನ್ನಿಸಿತು. ಅವರೊಡನೆ ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡಲು ಮನಸ್ಸು ಹಾತೊರೆಯುತ್ತಿತ್ತು. ಹಾ. ಮಾ ನಾಯಕರ ಬಗ್ಗೆ ಮಾತನಾಡಿದರು.ನಾಗಚಂದ್ರನ ಬಗ್ಗೆ ಸಂಶೋಧನೆ ಮಾಡಲು ಹೊರಟಾಗ ಗೈಡ್ ಆಗಿದ್ದವರು ಹಾ. ಮಾ. ನಾಯಕರು. ಮುಂದೆ ನನಗೆ ಕೆಲಸ ಸಿಗುವ ವಿಚಾರದಲ್ಲೂ ಅವರು ಸಾಕಷ್ಟು ಶ್ರಮಿಸಿದರು ಎಂದು ಪ್ರೀತಿಯಿಂದ ನೆನಪಿಸಿಕೊಂಡರು.
” ನೀವು ಇತ್ತೀಚೆಗೆ ಬರೆದದ್ದನ್ನು ನೋಡಬಹುದಾ” ಅಂದಾಗ ಖಂಡಿತ ಎಂದು ಬರೆದ ಕವನಗಳನ್ನು ತೋರಿಸಿದರು. ನಮ್ಮ ಪ್ರೀತಿಯ ಹೆಚ್. ಎಲ್.ಮಲ್ಲೇಶಗೌಡರು ಹೇಳಿದ ಮಾತು ನೆನಪಾಯಿತು. ಸರಿಯಾಗಿ ನಡೆಯಲು ಬರುವವನಿಗೆ ಪ್ರಯತ್ನ ಪಟ್ಟರೂ ಅಡ್ಡಾದಿಡ್ಡಿ ನಡೆಯಲು ಸಾಧ್ಯವಿಲ್ಲ”.
2000ದ ಆಚೆಗಿನ ವಿಜಯಾ ದಬ್ಬೆಯನ್ನು ಪುನರ್ ಪ್ರತಿಷ್ಠಾಪಿಸುವ ಕವನಗಳು ಅದರಲ್ಲೂ ವಿಷಾದದ ಬಗ್ಗೆ ಬರೆದಿದ್ದ ಒಂದು ಕವನ ತುಂಬ ಅತ್ಯುತ್ತಮವಾದುದು ಅವರಿಗೆ ಗ್ರಹಿಕೆಯಲ್ಲಿ ಸ್ವಲ್ಪ ಸಮಸ್ಯೆಯಿದ್ದರೂ ಅವರ ಸುಪ್ರ ಪ್ರಜ್ಞೆಯ ಸಾಮ್ರಾಜ್ಯದಲ್ಲಿ ಕಾವ್ಯ ಅಲುಗಾಡಲಿಲ್ಲ. ಇದನ್ನು ಪ್ರಕಟಿಸಲಾ….? ಅಂದೆ. ಸದ್ಯಕ್ಕೆ ಬೇಡ ಅಂದು ನಕ್ಕರು. ಅವರು ನಕ್ಕ ಮೇಲೆ ಯಾರು ಮಾತನಾಡುವುದು ಸಾಧ್ಯವಿರಲಿಲ್ಲ.
ಅವರ ಪುಸ್ತಕಗಳನ್ನು ಇಡದೇ ಇದ್ದರೆ ನನ್ನ ಹಾಡ್ಲಹಳ್ಳಿ ಪಬ್ಲಿಕೇಷನ್ ಗೆ ಬೆಲೆ ಇರುವುದಿಲ್ಲ ಅನ್ನಿಸಿ ಅವರ ಪುಸ್ತಕಗಳನ್ನು ಕೇಳಿದೆ, ಕೆಲವನ್ನು ಕೊಟ್ಟು ಉಳಿದವನ್ನು ಮೈಸೂರಿನಿಂದ ತರಿಸಿಕೊಡುವುದಾಗಿ ಹೇಳಿದರು. ಗೆಳೆಯ ಚಿನ್ನೇನಹಳ್ಳಿ ಸ್ವಾಮಿ ಹಾಗೂ ನಾನು ಹೊರಗೆ ಬಂದಾಗ ಕುಳಿತ್ತಿದ್ದ ಅವರ ತಂದೆ ತಾಯಿಯನ್ನೂ ಪರಿಚಯಿಸಿದರು. ತಂದೆಗೆ 94 ವರ್ಷ ಅಂದರು, ಮೂವತ್ತು ಚಿಲ್ಲರೆಯ ನಮಗೆ ನಾಚಿಕೆಯಾಗಲೇ ಬೇಕಿತ್ತು. ನಾವು ಹೊರಟ ನಂತರ ನೀವು ಬಂದಿದ್ದು ತುಂಬಾ ಖುಷಿಯಾಯಿತು. ಅಂದರು ನಾವು ಮತ್ತೆ ಮತ್ತೆ ತೊಂದರೆ ಕೊಡುವ ಬೆದರಿಕೆಯನ್ನು ಹಾಕಿ ಗೇಟಿನ ಬಳಿ ಬಂದು ತಿರುಗಿ ನೋಡಿದಾಗ ಟಾಟಾ ಎನ್ನುವಂತೆ ಕೈ ಬೀಸಿದರು. ದಬ್ಬೆಯಲ್ಲಿ ಸುಂದರ ನಗುವಿನ ಪ್ರಭುದ್ದ ಕವನಗಳಿದ್ದವು.









ಡಾ. ವಿಜಯ ದಬ್ಬೆಯವರು ಇಷ್ಟೊಂದು ಸುಧಾರಿಸಿಕೊಂಡಿರುವ ಸಂಗತಿ ತಿಳಿದು ಬಹಳ ಬಹಳ ಸಂತೋಷವಾಯಿತು, ವ್ಯಕ್ತಿಯಾಗಿ, ಕವಿಯಾಗಿ ಮತ್ತು ಕರ್ನಾಟಕದ ಮಹಿಳಾಚಳುವಳಿಗಳ ನಿರ್ಮಾಪಕರಲ್ಲಿ ಒಬ್ಬರಾಗಿ ಅವರು ಬಹಳ ದೊಡ್ಡವರು. ಹಲವು ಬಗೆಯ ದುರಂತಗಳನ್ನು ಮೀರಿ, ಧೀರೆಯಂತೆ ಬಾಳಿರುವ ಅವರಿಗೆ ಅಭಿನಂದನೆ ಮತ್ತು ಶುಭಾಶಯಗಳು. ಲೇಖನ ಬರೆದ ಪ್ರಸನ್ನ ಚಲಂರಿಗೆ ಕೂಡ ನಾನು ಋಣಿ.
ತುಮಕೂರಿನ ಲೇಖಕಿಯರ ಸಂಘದವರು ಒಮ್ಮೆ ಅವರನ್ನು ಭೇಟಿ ಮಾಡಿ ಬಂದಿದ್ದಾಗ ಇಷ್ಟೊಂದು ಸುಧಾರಣೇ ಕಂಡಿರಲಿಲ್ಲ. ಒಳ್ಳೇದಾಯ್ತು.ಡಾ.ವಿಜಯಾ ಅವರು ಆಘಾತವನ್ನು ಎದುರಿಸಿದ ರೀತಿಯೇ ಒಂದು ಅಪರೂಪದ ಕತೆ !ಅವರ ಕುಟುಂಬ ವರ್ಗದವರ ಒತ್ತಾಸೆ ಅಪರೂಪದಲ್ಲಿ ಅಪರೂಪದ್ದು. ಮೇಡಮ್ ಮತ್ತೆ ಕನ್ನಡಕ್ಕೆ ದಕ್ಕಲಿ.
ಡಾ. ವಿಜಯಾ ದಬ್ಬೆಯವರ ಬಗ್ಗೆ ಆರೋಗ್ಯದ ಬಗ್ಗೆ ತಿಳಿದು ಖುಷಿಯಾಯ್ತು.
ಲೇಖಕರಿಗೂ ಅವಧಿಗೂ ವಂದನೆಗಳು.ವಿಜಯಾ ದಬ್ಬೆಯವರ ಮಾತುಗಳನ್ನು ಕೇಳಲಿಚ್ಚಿಸುವವರು
ಈ ಯುಟ್ಯೂಬ್ ಚಿತ್ರ ನೋಡಬಹುದು http://www.youtube.com/watch?v=iy5DXX4_JNw
ವಿಜಯ ದಬ್ಬೆ ಅವರು ನಿತ್ಯ ಚಿಂತನಶೀಲರು…..ಅವರ ಆರೋಗ್ಯ ಸುಧಾರಣೆಯನ್ನು ಕೇಳಿ ಸಂತೋಷ ಆಯಿತು
ವಿಜಯಾ ಮ್ಯಾಮ್ ಚೆನ್ನಾಗಾಗಿರುವುದನ್ನು ನೋಡಿ ತುಂಬ ಖುಷಿಯಾಯಿತು.
ಎಲ್ಲ ಸರಿಯಿದ್ದಿದ್ದರೆ ನನ್ನ ಮೊದಲ ಕಥಾಸಂಕಲನಕ್ಕೆ ಅವರದೇ ಮುನ್ನುಡಿಯಿರುತ್ತಿತ್ತು.
ವಿಧಿ ಅದಾಗಗೊಡಲಿಲ್ಲ.
ಗುರುತು ಹಿಡಿಯುತ್ತಾರೆನೋ ಎಂಬ ಆಸೆಯಾಗ್ತಿದೆ.
ದಬ್ಬೆಗೆ ಹೋಗಿ, ನೋಡಿ ಬರಬೇಕು.
ಧನ್ಯವಾದ ಪ್ರಸನ್ನಚಲಂ ಅವರೇ.
ಪ್ರಿಯ ಪ್ರಸನ್ನ,
ಮೇಡಂ, ಲೇಖಕಿ ಡಾ. ವಿಜಯಾ ದಬ್ಬೆ ಬಗ್ಗೆ ನೀವು ಬರೆದು ನಮಗೆಲ್ಲಾ ತಿಳಿಸಿದ್ದು ಸಂತೋಷವಾಯಿತು.೮೦ರ ದಶಕದ ಆರಂಭದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದೆ. ಸರಸ್ವತಿಪುರಂನ ೨ನೇ ಮೇನ್ನ ತೆಂಗಿನತೋಟದ ಪಕ್ಕದಲ್ಲಿ ಮೂವರು ಗೆಳೆಯರು ಕಾರುಶೆಡ್ನಲ್ಲಿ ಕೈ ಅಡುಗೆ ಮಾಡಿಕೊಂಡು ಓದುತ್ತಿದ್ದೆವು. ಇವತ್ತು ನಮ್ಮ ಜೊತೆ ಇಲ್ಲದ ಪುಸ್ತಕ ಪ್ರೀತಿಯ ಗೆಳೆಯ, ಲೇಖಕ, ಕೊಲ್ಕತ್ತ ನ್ಯಾಷನಲ್ ಲೈಬ್ರರಿಯಲ್ಲಿ ಸಹಾಯಕ ಗ್ರಂಥಾಲಯಾಧಿಕಾರಿಯಾಗಿದ್ದ ಜಿ.ಕುಮಾರಪ್ಪ (ಆಗ ಕುಮಾರ ಬಸಾಪುರ ಎಂಬ ಹೆಸರಲ್ಲಿ ಬರೆಯುತ್ತಿದ್ದರು) ನನ್ನ ರೂಂಮೆಟ್. ಅವರು ಕನ್ನಡ ಎಂ.ಎ. ಓದುತ್ತಿದ್ದರು. ಅವರಿಗೆ ವಿಜಯಾ ಮೇಡಂ ಪಾಠ ಮಾಡುತ್ತಿದ್ದರು. ಕುಮಾರಪ್ಪ ಅವರ ಬಗ್ಗೆ ಉತ್ಸಾಹದಿಂದ ಮಾತಾಡುತ್ತಿದ್ದರು. ವೈಯಕ್ತಿಕವಾಗಿ ನಾನೂ ಅವರನ್ನು ಬಲ್ಲವನಾಗಿದ್ದೆ. ಅವರ ಸರಸ್ವತಿಪುರಂನ ಮನೆ ಮುಂದೆಯೇ ನನ್ನ ಸೋದರಮಾವ, ಕುವೆಂಪು ಹಾಗು ಅಡಿಗರ ಕಾವ್ಯದ ಭಕ್ತರಾದ ಜಯದೇವ ಕುರ್ಕಿ ಅವರ ೫ನೇ ಮೇನ್ ಮನೆಗೆ ನಡೆದು ಹೋಗುತ್ತಿದ್ದೆ. ಮೇಡಂ, ಅವರ ತಂಗಿ (ನನ್ನ ಮಾಮನ ಮಗಳು ಉಷಾಳ ಗೆಳತಿ)ಯರನ್ನು ಮುಖಾಮುಖಿ ಆಗಿಯೇ ಹೋಗುತ್ತಿದ್ದೆ. ಆಗಲೇ ಮೆಡಂ ತಮ್ಮ ವೈಚಾರಿಕ ಬರಹಗಳ ಮೂಲಕ ಗುತಿರ್ಸಿಕೊಂಡಿದ್ದರು. ಅವರ ಆ ಚಿಂತನೆಯೇ ಮನುಷ್ಯ ಪ್ರೀತಿಗೆ ಹಾತೊರೆದಿದ್ದು….
ಇರಲಿ,ಅವರ `ಇರುತ್ತವೆ’ ಕವನ ಸಂಕಲನ (ನನ್ನ ನೆನಪು ಸರಿ ಇದ್ದರೆ…)’ಬೆಥೂನೆ’ಮೊದಲಾದ ಕೃತಿಗಳು ನಮ್ಮನ್ನು ಸೆಳೆದದ್ದು ನಿಜ. ಅಣೇಕ ವಷರ್ಗಳ ನಂತರ ಅವರು ಮೊದಲಿನ ಸ್ಥಿತಿಗೆ ಮರಳುತ್ತಿರುವುದು ಸಂತೋಷ. ಅವರನ್ನು ಶೀಘ್ರ ನಾನೂ ನೋಡುವ ಮಾತಾಡುವ ಕಾತುರದಲ್ಲಿ ಇದ್ದೇನೆ.
ಆರ್.ಜಿ. ಹಳ್ಳಿ ನಾಗರಾಜ
ಡಾ. ವಿಜಯಾ ದಬ್ಬೆ ಅವರ ಕುರಿತ ಲೇಖನ ಚೆನ್ನಾಗಿದೆ. ಅವರು ಇನ್ನೂ ಹೆಚ್ಚು ಗುಣಮುಖರಾಗಿ ಮತ್ತಷ್ಟು ಬರೆಯುವಂತಾಗಲಿ ಎಂದು ಆಶಿಸುತ್ತೇನೆ…
-ರಮೇಶ್ ಹಿರೇಜಂಬೂರು
ನಾನು ಹಾಸನದ ಜನತಾಮಾಧ್ಯಮ ದಿನಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದಾಗ ಪತ್ರಿಕೆಯ 33ನೇ ವರ್ಷದ ನೆನಪಿಗಾಗಿ 4 ಪುಟಗಳ ವಿಶೇಷ ಸಂಚಿಕೆಯನ್ನು ತರಬೇಕೆಂದು ನಿರ್ಧರಿಸಲಾಗಿತ್ತು. ಜಿಲ್ಲೆಯ ಹತ್ತು ಜನರ ಕುರಿತು ಸಂಚಿಕೆಯಲ್ಲಿ ಪರಿಚಯ ಮಾಡಿಕೊಡುವ ಯೋಜನೆ ಹಕೊಕೊಂಡಿದ್ದವು. ಆಗ ವಿಜಯಾದಬ್ಬೆ ಮೇಡಂ ಬಗ್ಗೆ ಸಣ್ಣ ಪರಿಚಯ ಮಾಡಿಕೊಡಲು ಹೋಗಿ ಒಂದೈದು ಕಾಲಂ ಆಗಿತ್ತು. ಅದನ್ನು ಎಡಿಟ್ ಮಾಡಲು ಮನಸಾಗದೆ ಹಾಗೇ ಬಿಟ್ಟಿದ್ದೆವು. ಇಲ್ಲಿ ಬಗ್ಗೆ ಬರೆದಿದ್ದು ಕಡಿಮೆಯಾಯಿತು. ಇನ್ನಷ್ಟು ಇಂಪ್ರೆಸ್ ಅಗಿರಬೇಕಿತ್ತು ಎನಿಸಿತು.
ವಿಜಯ ದಬ್ಬೆಯವರು ಚೇತರಿಸಿಕೊಂಡು ಮತ್ತೆ ಬರೆಯಲು ಪ್ರಾರಂಭಿಸಿದ್ದು ತುಂಬಾ ಸಂತೋಷದ ಸಂಗತಿಯಾಗಿದೆ. ಅವರಿಂದ ಇನ್ನಷ್ಟು ಸಾಹಿತ್ಯ್ರ್ ಕೃತಿಗಳು ಹೊರಬರಲಿ. ಉದಯಕುಮಾರ ಹಬ್ಬು ಕಿನ್ನಿಗೋಳಿ
ಕಾದಂಬರಿಗಾರ್ತಿ ತ್ರಿವೇಣಿಯವರ ನಂತರ ಯುವಲೇಖಕಿಯರ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ವಿಜಯಾ ದಬ್ಬೆ. ಬರೆವಣಿಗೆಯಲ್ಲಿ ಮಾತ್ರವಲ್ಲ, ಸಹ ಬರಹಗಾರರೊಂದಿಗಿನ ಮಾತುಕತೆ, ಒಡನಾಟದಲ್ಲಿ ಕೂಡ ನೈಜ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದ ವ್ಯಕ್ತಿ. ಅವರ ಹೆಜ್ಜೆಯ ಜಾಡನ್ನು ಹಿಡಿದು ಮುಂದುವರಿದ ನಮಗೆ ಅವರ ಚೇತರಿಕೆಗಿಂತ ಬೇರೆ ಒಳ್ಳೆ ಸುದ್ದಿ ಏನಿದೆ? ೧೯೯೯ರಲ್ಲಿ ಅವರೊಂದಿಗೆ ಕಳೆದ ೩ ದಿನಗಳು ನನಗೆ ಅವಿಸ್ಮರಣೀಯ. -ಗೀತಾ ಶೆಣೈ
ವಿಜಯದಬ್ಬೆ ಮೇಡಂರವರ ವಿಚಾರ,. ಸಾಮಾಜಿಕ ಜವಾಬ್ದಾರಿ ಪ್ರೀತಿಯನ್ನು ಹತ್ತಿರದಿಂದ ನೋಡಿದ ಎಲ್ಲರಿಗೂ ವೇದ್ಯವಾಗುವು ವಿಷಯವಾಗಿತ್ತು.. ಮಹಿಳಾ ಪ್ರಜ್ಷೆಯ ದ್ಯೋತಕವಾಗಿ ನಿಭರ್ಿತಿಯಿಂದ ವಿಚಾರ ಮಂಡಿಸುತ್ತಿದ್ದ ಅವರು ಅಪಘಾತದ ನಂತರ ಇಷ್ಟರ ಮಟ್ಟಿಗೆ ಸಹಜ ಸ್ಥಿತಿಯತ್ತ ಮರಳುತ್ತಿರುವುದು ಅವರ ವಿದ್ಯಾಥರ್ಿಯಾದ ನನಗೆ ತುಂಬಾ ಸಂತೋಷವನ್ನುಂಟು ಮಾಡಿತು. ಅವರ ಬಗ್ಗೆ ತಿಳಿಸಿದ್ದಕ್ಕಾಗಿ ವಂದನೆಗಳು.
ವಿಜಯಾ ದಬ್ಬೆಯವರ ಚೇತರಿಕೆಯ ಬಗ್ಗೆ ತಿಳಿದು ಅತ್ಯಾನಂದವಾಯಿತು. ಅವರು ಕರ್ನಾಟಕ ಲೇಖಕಿಯರ ಸಂಘಕ್ಕೆ ಬಹಳ ಹತ್ತಿರದ ಲೇಖಕಿ. ಮುಖ್ಯವಾಗಿ ಮಹಿಳಾ ಚಿಂತನೆಗೆ ಒಂದು ನಿರ್ದಿಷ್ಟ ಆಯಾಮ ಕಲ್ಪಿಸಿಕೊಟ್ಟವರು. ಅವರ ಆಘಾತವಾದಾಗ ನಾವೆಲ್ಲಾ ನಮ್ಮ ಮನೆಯಲ್ಲೇ ಒಬ್ಬರಿಗೆ ಆಘಾತವಾದಷ್ಟು ನೋವುಂಡಿದ್ದೆವು. ಎರಡು ಬಾರಿ ಅವರನ್ನು ನೋಡಲು ಹೋಗಿದ್ದಾಗಲೂ ಅವರು ಸುಧಾರಿಸುವರೆನ್ನುವ ಆಸೆಯೇ ನಮಗಿರಲಿಲ್ಲ. ಮಾನಸಿಕ ಆಘಾತದಿಂದ ಹೊರಬರುವುದು ಕೆಲವರಿಗಷ್ಟೇ ಸಾಧ್ಯ. ಅದನ್ನು ಹದಿಮೂರು ವರ್ಷದ ನಂತರವಾದರೂ ವಿಜಯಾ ಸಾಧಿಸಿರುವುದು ಬಹಳ ಖುಷಿಕೊಟ್ಟಿದೆ. ಅವರು ಮೊದಲಿನಂತಾಗಲಿ, ಪುನಹ ಎಲ್ಲರಿಗೂ ಮಾರ್ಗದರ್ಶಿಯಾಗಿ ನಿಲ್ಲುವಂತಾಗಲಿ ಎನ್ನುವ ಹಾರೈಕೆ ನನ್ನದು.- ಉಷಾ ರೈ