ನಮ್ಮ ನಡುವಿನ ಸಮಾಜಪರ ಚಿಂತಕಿ, ಪಿ ಸಾಯಿನಾಥ್ ಪ್ರಶಸ್ತಿ ಪಡೆದ ಪತ್ರಕರ್ತೆ ವಿ ಗಾಯತ್ರಿಯವರ ಹೊಸ ಪುಸ್ತಕ ಬರುತ್ತಿದೆ.
ಅದರ ಮುಖಪುಟ ಮತ್ತು ಆಶಯನುಡಿ ಇಲ್ಲಿದೆ :
ಆಶಯ ನುಡಿ
ಪ್ರಸ್ತುತದಲ್ಲಿ ವ್ಯವಸಾಯದ ಪ್ರಗತಿಗೆ ತೊಡಕಾಗಿರುವುದೆಂದರೆ, ಭೂಮಿ ತಾಯಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವುದು, ವ್ಯವಸಾಯಕ್ಕೆ ಅಗತ್ಯವಾದ ಜೈವಿಕ ಸಂಪನ್ಮೂಲ ನಾಶವಾಗಿರುವುದು, ಭಾರತೀಯ ಬೇಸಾಯವನ್ನು ಕಟ್ಟಿಕೊಟ್ಟ ಹಿರಿಯರ ಜ್ಞಾನ ಭಂಡಾರಕ್ಕೆ ಶಾಶ್ವತವಾಗಿ ಬೀಗ ಜಡೆದು ಬಿಟ್ಟಿರುವುದು.
ನಮ್ಮ ಹಿರಿಯರು ಪ್ರತಿ ಪ್ರದೇಶದ ವಾಯುಗುಣ, ಮಣ್ಣು, ಜೀವ ಸಂಕುಲಗಳಿಗನುಸಾರವಾಗಿ ಕೃಷಿ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡಿದ್ದರು. ನೆಲವನ್ನು ಭೂದೇವಿ ಎಂದು ಪೂಜಿಸುತ್ತಿದ್ದರು, ಲಾಭದ ವಸ್ತು ಎಂದು ನೋಡುತ್ತಿರಲಿಲ್ಲ. ತಮ್ಮಲ್ಲಿನ ಸಂಪನ್ಮೂಲವನ್ನು, ಜ್ಞಾನವನ್ನು ಇನ್ನೊಬ್ಬರಿಗೆ ದಾರಾಳವಾಗಿ ಹಂಚುತ್ತಿದ್ದರು. ನಮ್ಮಂತೆಯೇ ಅವರೂ ಚನ್ನಾಗಿರಲಿ ಎಂದು ಹರಸುತ್ತಿದ್ದರು. ಸಂಪತ್ತು ಅನ್ನುವುದನ್ನು ಜಾನುವಾರು, ಮೇವು, ಜಮೀನಿನ ಮಣ್ಣುಗಳಲ್ಲಿ ಕಾಣುತ್ತಿದ್ದರು. ಅದನ್ನು ಜಾಣತನದಿಂದ ಬಳಸಿಕೊಂಡು ಭೂಮಿಯ ಫಲವತ್ತತೆ ಕಾಪಾಡುತ್ತಿದ್ದರು. ಜೊತೆಗೆ ಕೃಷಿಗೆ ಪೂರಕವಾದ ಪರಿಸರ ವ್ಯವಸ್ಥೆಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಿದ್ದರು. ಊರಿಗೊಂದು ಗುಂಡುತೋಪು, ಗೋಕಟ್ಟೆ ಇರುತ್ತಿತ್ತು. ಸ್ಥಳ ವೃಕ್ಷಗಳನ್ನು, ಸಾಲು ಮರಗಳನ್ನು ಯಾವುದೇ ಲಾಭದ ದೃಷ್ಟಿ ಇಲ್ಲದೆ ಕರ್ತವ್ಯವೆಂಬಂತೆ ಹಾಕಿ ಬೆಳೆಸುತ್ತಿದ್ದರು. ಇವು ಕೃಷಿಗೆ ತಮ್ಮ ಸೇವೆಗಳನ್ನು ಒದಗಿಸುತ್ತಿದ್ದವು. ಅವುಗಳಲ್ಲಿ ಮನೆಮಾಡಿದ ಜೇನುಗಳ ಪರಾಗಸ್ಪರ್ಶದಿಂದ ಸಂಮೃದ್ಧವಾಗಿ ಇಳುವರಿಯಾಗುತ್ತಿತ್ತು. ಮರಗಿಡಗಳಲ್ಲಿ ಗೂಡಾದ ಹಕ್ಕಿಪಕ್ಕಿಗಳು ಬೆಳೆಗಳಿಗೆ ಬಿದ್ದ ಹುಳಗಳನ್ನು ತಿಂದು ಸ್ವಚ್ಚ ಮಾಡುತ್ತಿದ್ದವು.
ಮರಗಳಿಂದ ಭೂಮಿಗೆ ಯತೇಚ್ಛವಾದ ಎಲೆ ಗೊಬ್ಬರ ಸಿಗುತ್ತಿತ್ತು. ಭೂಮಿಯ ತಾಪಾಂಶ ತಗ್ಗಿ ತಂಪಾಗಿರುತ್ತಿತ್ತು. ಬರಗಾಲದಲ್ಲಿ ಮರಗಿಡಗಳು ಜಾನುವಾರುಗಳನ್ನು ಸಾಕುತ್ತಿದ್ದವು. ಕಟ್ಟಿಗೆಗೆ ಪರದಾಡಬೇಕಾಗಿರಲಿಲ್ಲ. ಜನ ಜಾನುವಾರಿಗೆ ಬೇಕಾದ ಔಷಧಿ ಪದಾರ್ಥಗಳು ಇಲ್ಲೇ ಸಿಕ್ಕಿಹೋಗುತ್ತಿದ್ದವು. ಜನ ಜಾನುವಾರಿನ ಆರೋಗ್ಯ ಕಾಪಾಡುವ ಜ್ಞಾನ ಸ್ಥಳೀಯ ವೈದ್ಯರಲ್ಲಿತ್ತು. ರೋಗದಿಂದ ನರಳುವ ಸ್ಥಿತಿ ಇರಲಿಲ್ಲ.
ಸ್ವಾತಂತ್ರ್ಯಾನಂತರ ನಮ್ಮವರಿಗೆ ಒಂದು ವಿಚಿತ್ರ ಕೀಳರಿಮೆ ಪ್ರಾರಂಭವಾಯಿತು. ನಾವು ಬಹಳ ಹಿಂದುಳಿದ ಜನ, ಪಾಶ್ಚಿಮಾತ್ಯರಂತೆ ಆಗಬೇಕು ಎಂದು ಹಾತೊರೆಯತೊಡಗಿದರು. ಆ ವೇಳೆಗಾಗಲೇ ಅಮೆರಿಕ, ಯುರೋಪಿನಲ್ಲಿ ಪರಿಸರ ನಾಶದ ಪರಿಣಾಮ ಬಲವಾಗಿ ಆಗಿತ್ತು. ಪಶ್ಚಿಮದ ಹಾದಿ ಹಿಡಿದರೆ ನಾಶವಾಗುತ್ತೇವೆ ಎಂಬ ಅರಿವು ಚನ್ನಾಗಿ ಇದ್ದರೂ ವ್ಯಾಮೋಹಕ್ಕೆ ಬಿದ್ದು ನಮ್ಮವರು ದೇಶವನ್ನು ಪಾಶ್ಚಿಮಾತ್ಯರಿಗೆ ಮೇಯುವ ಭೂಮಿಯಾಗಿ ಕೊಟ್ಟರು.
ಅಮೆರಿಕ-ಯುರೋಪಿನವರು ಜಂಟಿ ನೀತಿ ಮಾಡಿಕೊಂಡು ಪ್ರಪಂಚ ಆಳಲು ಬಂದರು. ಹಸಿರು ಕ್ರಾಂತಿಯ ಹೆಸರಲ್ಲಿ ಸಂಮೃದ್ಧಿಯಾಗಿದ್ದ ಕೃಷಿ ಜ್ಞಾನ, ಕೃಷಿ ವ್ಯವಸ್ಥೆಗಳು, ಜೈವಿಕ ವ್ಯವಸ್ಥೆಗಳನ್ನು ಒಂದೊಂದಾಗಿ ನಾಶ ಮಾಡಿದರು. ಗುಂಡು ತೋಪು ಕಡಿದರು, ಮಹಾನ್ ವೃಕ್ಷಗಳನ್ನು ಕ್ಷಣಮಾತ್ರದಲ್ಲಿ ಕಡಿದುರುಳಿಸಿದರು. ಮರುಭೂಮಿಯಿಂದ ಮಲೆನಾಡಿನವರೆಗೆ ಆಯಾಯ ಹವಾಗುಣಕ್ಕೆ, ವೈವಿಧ್ಯಮಯ ಮಣ್ಣಿಗೆ, ಸಂಪನ್ಮೂಲ ಲಭ್ಯತೆಗೆ ಹೊಂದಿಕೊಂಡು ಜೀವಿಸುತ್ತಿದ್ದ ಜೀವ ಕೋಟಿಯನ್ನು, ಪ್ರಾಣಿ, ಸಸ್ಯ ಸಂಕುಲವನ್ನು, ಜಾನುವಾರು, ಬೀಜಗಳನ್ನು ನಾಶಮಾಡಿದರು. ನಮ್ಮ ಇಡೀ ತಳಿ ವೈವಿಧ್ಯತೆಯೇ ದರೋಡೆಯಾಗಿ ಹೋಯಿತು. ಈ ಲೂಟಿ ಇವತ್ತಿಗೂ ಮುಂದುವರೆದಿದೆ.
ವಿದೇಶಿ ಪ್ರವಾಸದಲ್ಲಿ ಮುಳುಗಿಹೋದ ನಮ್ಮ ವಿಜ್ಞಾನಿಗಳು ವಿನಾಶಕಾರಿ ತಂತ್ರಜ್ಞಾನಗಳನ್ನು ನಮ್ಮ ರೈತರ ಕೈಗೆ ಕೊಟ್ಟರು. ‘ಏಕಬೆಳೆ ಪದ್ಧತಿಯಲ್ಲಿ ಅತ್ಯಧಿಕ ಉತ್ಪಾದನೆ ಮಾಡಿದವನೇ ಅತ್ಯುತ್ತಮ ರೈತ’ ಎಂದು ಹೇಳುತ್ತಾ ದೋಚುವವನನ್ನು ಪುರಸ್ಕರಿಸಿದರು. ನಾವು ನಮ್ಮ ಅದ್ಭುತವಾದ ತಳಿ ಸಂಪತ್ತನ್ನು ನಾಶಮಾಡಿ ನಮ್ಮದಲ್ಲದ ಯಾವುದನ್ನೋ ಬೆಳೆಯತೊಡಗಿದೆವು. ಪ್ರದೇಶಾಧಾರಿತ ಕೃಷಿ ಜೀವ ವೈವಿಧ್ಯತೆ, ಕೃಷಿ ಪರಿಸರ ಪ್ರದೇಶಗಳನ್ನು ಉಳಿಸಿಕೊಳ್ಳದೆ ಹೋದೆವು. ಸರ್ವನಾಶವಾದ ಮೇಲೆ ಇವತ್ತು ಏನು ಮಾಡಬೇಕೊ ಗೊತ್ತಿಲ್ಲದೆ ಒದ್ದಾಡುತ್ತಿದ್ದೇವೆ. ಮೂರ್ಖರಂತೆ ಸಾಮಾನ್ಯ ಮನುಷ್ಯ ಬದುಕಲು ಏನು ಬೇಕೋ ಅದನ್ನು ಬಿಟ್ಟು ಬೇರೆಲ್ಲ ಮಾಡುತ್ತಿದ್ದೇವೆ.
ಇಂಥ ವಿಲಕ್ಷಣ ಸನ್ನಿವೇಶದಲ್ಲಿ ಛಲಬಿಡದೆ ಪರ್ಯಾಯಗಳನ್ನು ಹುಡುಕುತ್ತಾ ಹೊರಟಿದ್ದಾರೆ ಇಲ್ಲಿರುವ ಸಾಧಕರು. ಹೆಣ್ಣು ಮಕ್ಕಳು ತೋರುತ್ತಿರುವ ದೃಢ ನಿಶ್ಚಯದಿಂದಾಗಿ ಇದು ಬಹುಕಾಲ ಉಳಿಯುತ್ತದೆ ಎಂಬ ಭರವಸೆ ಇದೆ. ಈ ಪ್ರಯತ್ನಗಳು ಶರವೇಗದಲ್ಲಿ ಹರಡುತ್ತಾ ಹೋದರೆ ಮಾತ್ರ ವಿನಾಶಕ್ಕೆ ಕಡಿವಾಣ ಸಾಧ್ಯ. ಇದಕ್ಕೆ ಸರ್ಕಾರಗಳ ಇಚ್ಛಾಶಕ್ತಿ ಅತ್ಯಗತ್ಯ. ಇಲ್ಲದಿದ್ದರೆ ರೈತರು ಮತ್ತು ರೈತರನ್ನು ಪರಪುಟ್ಟಗಳಂತೆ ಅವಲಂಬಿಸಿರುವ ಕಾರ್ಪೋರೆಟ್ ಪ್ರಪಂಚ ಇಬ್ಬರೂ ಇನ್ನಷ್ಟು ತೀವ್ರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಅ. ನ. ಯಲ್ಲಪ್ಪರೆಡ್ಡಿ







0 Comments