ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಲ ಸಾಯೋದಿಲ್ಲ..

ಆ ಹಳ್ಳಿಯ ಜನ ಬೆಳಗಾಗುತ್ತಿದ್ದಂತೆ ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ತೊಡಗುವದು ಸಾಮಾನ್ಯವಾಗಿತ್ತು. ಗಂಡಸರು, ಎತ್ತುಗಳ ಗಂಟೆ ನಾದಕ್ಕೆ ಹೆಜ್ಜೆ ಹಾಕುತ್ತಾ ಹೊಲದ ಕಡೆ ಹೋದರೆ,  ಹೆಂಗಸರು ಅಡುಗೆ ಮಾಡಿ ಮಕ್ಕಳಿಗೆ ಶಾಲೆಗೆ ಕಳಿಸಿ ಬುತ್ತಿ ಕಟ್ಟಿಕೊಂಡು ಹೊಲದ ಕಡೆ ಹೋಗುತಿದ್ದರು. ಅವರಲ್ಲಿ ಬಸಪ್ಪನ ಕುಟುಂಬವೂ ಒಂದು, ಸುಮಾರು ವರ್ಷಗಳಿಂದ ಆತ ಒಕ್ಕಲುತನ  ಮಾಡಿಕೊಂಡ ಬಂದಿದ್ದ ಆದರೆ ವಯಸ್ಸಿನ ಕಾರಣ ಸಧ್ಯ ಒಕ್ಕಲುತನ ಮಾಡಲು ಆಗದೆ ಸುಮ್ಮನೆ ಕುಳಿತುಕೊಳ್ಳುವಂತಾಯಿತು. ಮಗ ಕೂಡ ಒಕ್ಕಲುತನ ಮುಂದುವರೆಸಲು ಆಸಕ್ತಿ ತೋರದೆ ಓದಿನ ಕಡೆ ಗಮನಹರಿಸಿದ ಇದರಿಂದ ಅನಿವಾರ್ಯವಾಗಿ ತನ್ನ ಎತ್ತು ಮಾರಿ ಜಮೀನು ಮತ್ತೊಬ್ಬರಿಗೆ ಪಾಲಿಗೆ ಹಚ್ಚಿದ, ಪಾಲು ಹೋಗಿ ಲಾಭವಾಗದೆ ಸಂಕಟ ಎದುರಿಸತೊಡಗಿದ.

ಬಸಪ್ಪ ಅಂದು ಎದ್ದು ಮುಖ ತೊಳೆದು ಒಂದು ಕಪ್ಪ ಗರಂ ಚಹಾ ಕುಡಿದ ಆದರೆ ಮಾಗಿಯ ಚಳಿ ಮೈ ನಡುಗಿಸಿತು. ಬಿಸಿಲಿಗೆ ಮೈಯೊಡ್ಡಿದರೆ ಸ್ವಲ್ಪ ಸಮಾಧಾನವಾಗಬಹುದು ಅಂತ ನಡು ಊರ ಕಟ್ಟೆಕಡೆ ಹೆಜ್ಜೆಹಾಕಿದ, ಅಷ್ಟರಲ್ಲೇ ಚನ್ನವೀರಪ್ಪನ ನೌಕರರು ಅವನಿಗೆ ದಾರಿಯಲ್ಲೇ ತಡೆದು ನಮ್ಮ ಮಾಲೀಕರು ನಿನಗ ಕರಕೊಂಡು ಬರಲು ಹೇಳ್ಯಾರ ನಡಿ ಅಂತ ಖಡಕ್ಕಾಗಿ ಹೇಳಿದರು, ಅವರ ಮಾತು ಬಸಪ್ಪನ ಎದೆ ಧಸಕ್ ಎನಿಸಿತು, ಮರು ಮಾತನಾಡದೆ ಅವರ ಜೊತೆ ಹೆಜ್ಜೆಹಾಕಿದ. ಮುಂದೊಬ್ಬರು ಹಿಂದೊಬ್ಬರಾಗಿ ಅವನಿಗೆ ಅಪರಾಧಿಗಿ ಕರಕೊಂಡು ಹೊರಟಂತೆ ಹೊರಟರು. ಹೋಟೆಲು ಕಿರಾಣಿ ಅಂಗಡಿ, ಗುಡಿ ಗುಂಡಾರದ ಮುಂದೆ ಕುಳಿತವರು ಆತನ ಕಡೆ ನೋಡಿ, ಬಸಪ್ಪಗ ಹಿಂಗ ಕರಕೊಂಡ ಹೊಂಟಾರಂದ್ರ ಸಾಲದ ವಿಷಯಾನೇ ಇರಬೇಕು, ಸಾಲಾ ತೊಗೊಳ್ಳೋ ಮುಂದ ಹಾಲು ಬಾನಾ ಉಂಡಂಗಾಗಿತ್ತು ಈಗ ಕಿಬ್ಬದಿಯ ಕೀಲು ಮುರಿದಂಗಾಗಿದೆ, ಮನುಷ್ಯನ ನಂಬರ ಒನ್ ಶತ್ರು ಅಂದರೆ  ಸಾಲಾ ಅಂತ ವಿಶ್ಲೇಷಿಸಿದರು, 

ಎತ್ತಲಾರದ ಸಾಲಾ ಮಾಡಿದರ ಹಿಡಕೊಂಡು ಹೋಗದೇ ಬಿಡ್ತಾರಾ? ಯಾಕ ಮಾಡಬೇಕು? ಹಾಸಿಗೆ ಇದ್ದಷ್ಟು ಕಾಲು ಚಾಚಿದರ ಇಂತಹ ಸ್ಥಿತಿ ಬರ್ತಿತ್ತಾ ? ಅಂತ ಇನ್ನೂ ಕೆಲವರು  ವ್ಯಂಗ್ಯವಾಡಿದರು,  

ಸಾಲಾ ಯಾರು ಮಾಡೋದಿಲ್ಲ? ಸಂಸಾರಕ ಕಡಿಮೆ ಬಿದ್ದರ ಎಲ್ಲರೂ ಮಾಡಲೇಬೇಕು ಅವನೂ ಮಾಡ್ಯಾನ ಪಾಪ ಆದರ ಕಾರಣಾಂತರಗಳಿಂದ ವಾಪಸ ಕೊಡೋದು ಆಗಿಲ್ಲ ಅಂತ ಅವರಲ್ಲೇ ಒಬ್ಬಿಬ್ಬರು ಬಸಪ್ಪನ ಪರ ವಹಿಸಿದರು. 

ಅವರ ಮಾತು ಬಸಪ್ಪನ ಕಿವಿಗೆ ಬಿದ್ದಾಗ ಮನಸ್ಸಿಗೆ ನೋವಾಯಿತು ನಾನೇನು ದುಷ್ಚಟಕ್ಕ ಸಾಲಾ ಮಾಡಿಲ್ಲ ಸಂಸಾರದ ಸಲುವಾಗೇ ಮಾಡೀನಿ ಆದರೆ ಏನು ಮಾಡೋದು ಇತ್ತೀಚಿಗೆ ಲಾಭ ಇಲ್ಲದೆ ಸಾಲಾ ತೀರಿಸಲಾಗಿಲ್ಲ  

ಅಂತ ದಾರಿಯುದ್ದಕ್ಕೂ ಯೋಚಿಸಿದ. 

ನೌಕರರರು ಆತನಿಗೆ ಸೀದಾ ಕರಕೊಂಡ ಹೋಗಿ ಚನ್ನವೀರಪ್ಪನ ಮುಂದೆ ನಿಲ್ಲಿಸಿದರು, ಆತ ಬಸಪ್ಪನ ಮುಖ ಸಿಟ್ಟಿನಿಂದ ನೋಡಿ

“ನಾನು ಸಾಲಾ ಕೊಡ್ತೀನಂತ ಬೋರ್ಡ್‌ ಹಾಕಿದ್ದನಾ? ನೂರಾರು ಸಲ ಸಲಾಂ ಹೊಡೆದು ಸಂಸಾರಕ ಅದು ಕಮ್ಮೀ ಬಿದ್ದಾದ ಇದು ಕಮ್ಮೀ ಬಿದ್ದಾದ  ಅಂತ ಸಾಲಾ ತೊಗೊಂಡು ಹೋದೆ, ಈಗ ವಾಪಸ್ ಕೊಡೊ ವಾಯದಾ ಮುಕ್ತಾಯವಾಗಿ ತಿಂಗಳ ಕಳೆದರೂ ಈ ಕಡೆ ಮುಖಾನೇ ಮಾಡಿಲ್ಲ ಮತ್ತದೇ ನೆವ ಹೇಳಲು ಶುರು ಮಾಡಿದರೆ ನಾನು ಕೇಳೋದಿಲ್ಲ ಇವತ್ತು ಏನಾದರೊಂದು ಫೈಸಲಾ ಆಗೇಬೇಕು ಅಂತ  ಖಡಕ್ಕಾಗಿ ಹೇಳಿದ, ಬಸಪ್ಪ ಮಜಬೂರಾಗಿ ಶೂನ್ಯ ದಿಟ್ಟಿಸತೊಡಗಿದ, ನಿನ್ನ ಬಾಯಿಂದ ಒಂದು ಮಾತು ಕೂಡ ಬರ್ತಿಲ್ಲ ಕಲ್ಲಗಂಬ ನಿಂತಂಗ ನಿಂತೀದಿ, ನಿನಗ ಏನಾದರು ಮಾನ ಮರ್ಯಾದೆ ಇದೆಯಾ? ಸಾಲಾ ಚುಕ್ತಾ ಮಾಡೋ ತನಕ ನೀನು  ಎಲ್ಲೂ ಹೋಗಬೇಡ ಇಲ್ಲೇ ಕೂತಿರು” ಅಂತ ಅವಾಜ ಹಾಕಿ ಹೊರಟು ಹೋದ.  

ಸುತ್ತಮುತ್ತಲಿನ ಜನ ಚನ್ನವೀರಪ್ಪನ ಅಂಗಡಿಯ ಮುಂದೆ ಜಮಾಯಿಸಿದರು. ಬಸಪ್ಪ  ಪಾಪ ಸಂಭಾವಿತ ಮನುಷ್ಯ ಸಾಲಾ ಎಲ್ಲಿಗೆ ಹೋಗ್ತಾದೆ ಈ ವರ್ಷ ಕೊಡದಿದ್ದರೆ ಮುಂದಿನವರ್ಷ ಕೊಟ್ಟಾನು ಆದರ ಚನ್ನವೀರಪ್ಪ ಹಿಂಗೆಲ್ಲಾ  ಕೂಡಿ ಹಾಕಿ ಅವಮಾನ ಮಾಡೋದು ಸರಿಯಲ್ಲ, ನಮ್ಮ ಹತ್ರ ಹಣ ಇದ್ದಿದ್ದರೆ ನಾವೇ ಸಹಾಯ ಮಾಡ್ತಿದ್ದೇವು ಆದರೆ ಏನು ಮಾಡೋದು ನಮ್ಮ ಪರಿಸ್ಥಿತಿಯೂ ಹಾಗೇ ಇದೆ ಅಂತ 

ಕನಿಕರ ಹೊರ ಹಾಕಿದರು, ಮೊದಲು ಚನ್ನವೀರಪ್ಪನ ಸಾಲಾ ಚುಕ್ತಾ ಮಾಡು ಆತ ಎಂಥವನು ಅಂತ ಇಡೀ ಊರಿಗೆ ಗೊತ್ತು ಸುಮ್ಮನೇ ಆತನ ಕೈಗೆ ಸಿಕ್ಕು ಹೈರಾಣಾಗಬ್ಯಾಡ ಅಂತ ಇನ್ನೂ ಕೆಲವರು ಎಚ್ಚರಿಕೆ ಕೊಟ್ಟರು. ಬಸಪ್ಪ ಯಾವ ಪ್ರತಿಕ್ರಿಯೆ ನೀಡದೆ ಶೂನ್ಯ ದಿಟ್ಟಿಸಿದ, 

ಬಸಪ್ಪನಿಗೆ ಕೂಡಿ ಹಾಕಿದ ಸುದ್ದಿ ಊರ ತುಂಬ ಹರಡಿತು ಆದರೆ ಚಿನ್ನವ್ವಳಿಗೆ ಗೊತ್ತೇ ಆಗಲಿಲ್ಲ ಪಕ್ಕದ ಮನೆ ಸುಬ್ಬವ್ವ ಬಂದು ಹೇಳಿದಾಗ ತಲೀಮ್ಯಾಲ ಆಕಾಶವೇ ಕಳಚಿ ಬಿದ್ದಂತಾಯಿತು. ಆತನ ಹತ್ರಾ ಸಾಲಾ ಮಾಡಬ್ಯಾಡ ಅಂತ ಮೊದಲೇ ಹೇಳಿದ್ದೆ ಆದರೆ ನನ್ನ ಮಾತೇ ಕೇಳಲಿಲ್ಲ ಈಗ ಎಲ್ಲರ ಮುಂದ ನಮ್ಮ ಮಾನ ಮರ್ಯಾದೆ ಹರಾಜ ಆಗ್ತಿದೆ ಅಂತ ಕಣ್ಣೀರು ತೆಗೆದಳು. ಯಾರ ಬಳಿಯಾದ್ರು ಕೈಗಡ ಹಣ ಕೇಳಿ ಸಾಲಾ ಮುಟ್ಟಿಸಬೇಕೆಂದರೆ ಯಾರ ಹತ್ರಾನೂ ಹಣ ಸಿಗೋದಿಲ್ಲ ಸಧ್ಯ ಚನ್ನವೀರಪ್ಪನ ಕೈಕಾಲು ಬಿದ್ದು ಗಂಡನಿಗೆ ಬಿಡಿಸಿಕೊಂಡು ಬರೋದೊಂದೇ ದಾರಿ ಅಂತ ಮರುದಿನ ಚನ್ನವೀರಪ್ಪನ ಅಂಗಡಿಗೆ ಬಂದಾಗ ಗಂಡ ಮೂಲೆಯೊಂದರಲ್ಲಿ ಮುಖ ಸಪ್ಪಗ ಮಾಡಿ ಕುಳಿತಿದ್ದ, ರಾತ್ರಿ ಊಟ ನಿದ್ದೆ ಇಲ್ಲದೆ ಕಾಲ ಕಳೆದದ್ದು ಅವಳ ಕಣ್ಣಂಚಿನಲ್ಲಿ ನೀರೂರಿಸಿತು. 

ಇದೊಂದು ವರ್ಷ ನಮಗ ಟೈಮ ಕೊಡ್ರಿ ಮುಂದಿನ ವರ್ಷ ನಿಮ್ಮ ಸಾಲದ ಅಸಲು ಬಡ್ಡಿ ಸೇರಿ ಚುಕ್ತಾ ಮಾಡ್ತೀವಿ ಅಂತ ಕೈ ಜೋಡಿಸಿ ಆತನಿಗೆ ಬೇಡಿಕೊಂಡಳು. 

“ನಿನ್ನ ಗಂಡನ ಮೇಲೆ ನನಗೆ ನಂಬಿಕೆ ಇಲ್ಲ ಅವನಿಗೆ ವಯಸ್ಸಾಗಿದೆ ತೀರಿ ಹೋದರೆ ನಾನೇನು ಮಾಡಲಿ ನನ್ನ ಸಾಲದ ಗ್ಯಾರಂಟಿ ಯಾರು ಕೊಡ್ತಾರೆ” ಅಂತ ಪ್ರಶ್ನಿಸಿದ. 

ನನ್ನ ಗಂಡನ ಮೇಲೆ ನಂಬಿಕೆ ಇರದಿದ್ದರೆ ನನ್ನ ಮಗನ ಹೆಸರಿಗೆ ಹೊಸ ಸಾಲ ಪತ್ರ ಬರೆದು ಕೊಡುತ್ತೇನೆ ಅಂತ ಭರವಸೆ ನೀಡಿದಳು ಆಗ ಚನ್ನವೀರಪ್ಪ ಒಪ್ಪಿಕೊಂಡು ಬಿಟ್ಟು ಕಳಿಸಿದ. 

ಬಸಪ್ಪನಿಗೆ ತಾತ್ಕಾಲಿಕ ಬಿಡುಗಡೆ ಸಿಕ್ಕರೂ ಚನ್ನವೀರಪ್ಪ ಆಡಿದ  ಮಾತು ತಲೆಯಲ್ಲಿ ಪದೇ ಪದೇ ಕೊರೆಯತೊಡಗಿತು ಸಾಲದ ಜೊತೆ ಆತನ ಮಾತಿಗೂ ಬಡ್ಡಿ ಸಮೇತ ವಾಪಸ್ ಕೊಡಬೇಕು ಅಂತ ನಿರ್ಧರಿಸಿದ. 

ಆ ವರ್ಷ ಬೆಳೆ ಚನ್ನಾಗಿ ಬಂದಿತು ತಕ್ಷಣ ಬಸಪ್ಪ ಸಾಲದ ಹಣ ತೆಗೆದುಕೊಂಡು ಚನ್ನವೀರಪ್ಪನ ಬಳಿ ಬಂದ, ಪೂರ್ತಿ ರೊಕ್ಕ ತಂದಿದಿಯಾ? ಅಂತ ಆತ ಪ್ರಶ್ನಿಸಿದಾಗ ಹ್ಞೂಂ ತಂದಿದ್ದೇನೆ ಮೊದಲು ಲೆಕ್ಕ ಮಾಡು ಕಡಿಮೆ ಬಿದ್ದರೆ ಚಿಂತೆ ಮಾಡಬೇಡ, ನಾವಿಬ್ರೂ ಒಂದಿನ ಸಾಯಬಹುದು ಆದರೆ ಸಾಲ ಸಾಯೋದಿಲ್ಲ ಅಂತ ಹೇಳಿದ, ಆತನ ಮಾತು ಚನ್ನವೀರಪ್ಪನಿಗೆ ಬಾಣದಂತೆ ನಾಟಿತು, ಬಿಳಿಬಿಳಿಯಾಗಿ ಕಣ್ಣು ಬಿಟ್ಟು ಯೋಚಿಸತೊಡಗಿದ. 

‍ಲೇಖಕರು Admin

25 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading