ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಮಾಜಿಕ ಅಸಮಾನತೆಯ ಬಿಡುಗಡೆಯ ಬೆಲ್ಲದ ದೋಣಿ

14 ನೇ ತಾರೀಕು ಸಂಜೆ 7 ಗಂಟೆಗೆ ಮೈಸೂರು ಕಿರು ರಂಗಮಂದಿರದಲ್ಲಿ ಬಹುರೂಪಿ ನಾಟಕೋತ್ಸವದ ಅಂಗವಾಗಿ, ಈ ನಾಟಕ ‘ಬೆಲ್ಲದ ದೋಣಿ’ ಪ್ರದರ್ಶನ ಕಾಣುತ್ತಿದೆ.

-ಡಾ ರುದ್ರೇಶ್ ಅದರಂಗಿ

‘ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿದೊಡೆ ಕಹಿಯಹುದಲ್ಲದೆ ಸಿಹಿಯಪ್ಪುದೇ?’ ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಸಾಮಾಜಿಕ ಕ್ರಿಯೆ ಮತ್ತು ಫಲವನ್ನು ಕುರಿತಾಗಿ ರೂಪಕಾತ್ಮಕವಾಗಿ ಹೇಳಿದ್ದಾರೆ. ವಚನಕ್ಕೆ ಪೂರಕವಾಗಿ ತಳ ಸಮುದಾಯದವರಿಗೆ ಅಸಮಾನತೆಯ ಸಮಾಜದಲ್ಲಿ ಎಷ್ಟು ಪ್ರಯತ್ನಿಸಿದರೂ ಸಮಾನತೆಯೆಂಬುದು ಮರೀಚಿಕೆಯಾಗಿದೆ ಎಂಬ ಸಂದೇಶವನ್ನು ಸಾರುವ ನಾಟಕ ಹನೂರು ಚನ್ನಪ್ಪನವರು ರಚಿಸಿರುವ ಬೆಲ್ಲದ ದೋಣಿ ನಾಟಕ. ಸಿ.ಎಂ. ನರಸಿಂಹಮೂರ್ತಿಯವರ ರಂಗವಾಹಿನಿ ತಂಡವು ರೂಬಿನ್ ಸಂಜಯ್ ನಿರ್ದೇಶನದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತಲ್ಲದೆ, ಚಿಂತನೆಗೆ ಆಸ್ಪದವನ್ನುಂಟುಮಾಡಿತು.

ತಳ ಸಮುದಾಯದ ಗಾಲೂರಯ್ಯ ಶ್ರೇಣೀಕೃತ ಸಮಾಜದಲ್ಲಿ ಅಸಮಾನತೆಯ ನೋವನ್ನು ಹುಟ್ಟಿದಾಗಿನಿಂದ ಅನುಭವಿಸಿದವನು. ಎಲ್ಲೆಲ್ಲಿಯೂ ತಾರತಮ್ಯವನ್ನು ಕಂಡವನಷ್ಟೇ ಅಲ್ಲದೆ, ಅನುಭವಿಸಿದವನೂ ಆಗಿದ್ದಾನೆ. ಕೆಲವರಿಗೆ ಹುಟ್ಟಿನಿಂದಲೇ ಗೌರವಗಳು ಪ್ರಾಪ್ತಿಯಾದರೆ, ಜಾತಿಯ ಕಾರಣದಿಂದಾಗಿ ಶೋಷಣೆ, ಅಪಮಾನ, ಅಸ್ಪೃಶ್ಯತೆ ಹಾಗೂ ಅಸಮಾನತೆಗಳನ್ನು ಅನುಭವಿಸಿದವನು. ಹುಟ್ಟು ಬಡವನಾದರೂ ಸ್ವಾಭಿಮಾನಿ. ಮನೆ ಬಡತನವಾದರೂ ಮನ ಘನವಾದುದು. ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡುವ ಇವನಿಗೆ, ಧನಿಕ ಪಣಗಾರರಿಗೆ ದೊರಕುವ ಗೌರವಗಳನ್ನು ಕಂಡು ತಾನೂ ಅಂಥ ಗೌರವ, ಸಮಾನತೆಯನ್ನು ಪಡೆಯಬೇಕೆಂಬ ಆಸೆ ಚಿಗುರೊಡೆಯುತ್ತದೆ. ಸಾಲಗಾರರ ಶೂಲ ಎದೆಯನ್ನು ಇರಿಯುತ್ತಿದ್ದರೂ ಸಮಾನತೆ ಮತ್ತು ಸ್ವಾಭಿಮಾನಕ್ಕಾಗಿ ಏನೆಲ್ಲವನ್ನೂ ಮಾಡಬಲ್ಲ. ತಾನು ಅಯ್ಯಪ್ಪ ಮಾಲೆಧಾರಿಯಾದರೆ ಎಲ್ಲರೂ ನನ್ನನ್ನು ‘ಸ್ವಾಮಿ’ ಎಂದು ಕರೆಯುತ್ತಾರೆ ಎಂಬ ಆಸೆ ಬಲವಾಗತೊಡಗುತ್ತದೆ. ಊರಿನ ಹಟ್ಟಿಯವರೊಂದಿಗೆ ಪಣಗಾರರ ಹೊಲದಲ್ಲಿ ದುಡಿಯುವ ಗಾಲೂರಯ್ಯ ಅಯ್ಯಪ್ಪ ಮಾಲೆ ಧರಿಸುತ್ತಾನೆ. ಇದಾದರೂ ದೇವರ ಭಕ್ತಿಗಿಂಥ ಸಮಾನತೆಗಾಗಿ.

ಮಾಲೆಧಾರಿಯಾದ ಗಾಲೂರಯ್ಯನನ್ನು ಕಂಡು ಸಾಲಗಾರರ ಕಿರುಕುಳಕ್ಕೆ ಮಾಲೆಧಾರಿಯಾಗಿದ್ದಾನೆಂದು ಹಾಸ್ಯ ಮಾಡಿದವರೇ ಹೆಚ್ಚು. ಗಾಲೂರಯ್ಯನ ಹೆಂಡತಿ, ಅವ್ವ ಅಂಕಿ ‘ಸ್ವಾಮಿ’ ಎಂದು ತನ್ನನ್ನು ಕರೆದಾಗ ಸ್ವರ್ಗಕ್ಕೆ ಮೂರೇ ಗೇಣು ಎಂದೆನಿಸುತ್ತದೆ. ಊರೊಟ್ಟಿನವರಿಗಿಂಥ ಪಣಗಾರರು ತನ್ನನ್ನು ಒಮ್ಮೆಯಾದರೂ ‘ಸ್ವಾಮಿ’ ಎಂದು ಕರೆಯುತ್ತಾರೆಂದು ಬಯಸುತ್ತಾನೆ. ಆಳುಗಳೊಟ್ಟಿಗೆ ಧನಿಕರ ತೋಟದಲ್ಲಿ ಕೆಲಸ ಮಾಡುವಾಗ ಪಣಗಾರರು ಹೆಸರನ್ನು ಹಿಡಿದು ಕರೆದು, ಇನ್ನೂ ಕೆಲಸವಾಗಿಲ್ಲವೆಂದು ವ್ಯಗ್ರಗೊಳ್ಳುತ್ತಾರೆ. ಅವರಿಗೆ ತಾನು ಮಾಲೆಯಾಕಿರುವುದು ಗೊತ್ತಿಲ್ಲವೆಂದು ಭಾವಿಸಿ ‘ಸ್ವಾಮಿ ಅಯ್ಯಪ್ಪ ಮಾಲೆಯಾಕಿದ್ದೇನೆ. ನೀವು ಸ್ವಾಮಿ ಎಂದು ಕರೆಯಬೇಕು’ ಎಂದು ತನ್ನ ಅಸ್ತಿತ್ವದ ಇರುವಿಕೆಯನ್ನು ತೋರಗೊಡುತ್ತಾನೆ. ಅದನ್ನು ಕಂಡ ಧನಿಕರು ‘ನೀ ಯಾವ ಸೀಮೆ ಸ್ವಾಮಿಯೋ ಬಡ್ಡೀಮಗನೇ? ಮೋಟಾರ್ ಮೇಲಕ್ಕೆ ಎತ್ತಲೇ’ ಎಂದು ಅಬ್ಬರಿಸುತ್ತಾರೆ.

ಧನಿಕರ ಆ ಒಂದು ಮಾತು ಸಮಾನತೆಯ, ಸ್ವಾಭಿಮಾನದ ಗಾಲೂರಯ್ಯನ ಬಲೂನಿಗೆ ಸೂಜಿಯನ್ನು ಚುಚ್ಚಿದಂತಾಗುತ್ತದೆ. ಏನು ಮಾಡಿದರೂ ಇಲ್ಲಿ ಇಷ್ಟೆಯೇ ಎಂದು ಮನದೊಳಗೆ ಕದಲುತ್ತಾನೆ. ಬಾವಿಯಲ್ಲಿ ಬಿದ್ದ ಮೋಟಾರನ್ನು ಹೊರಕ್ಕೆ ತೆಗೆದುಕೊಂಡು ಬರಲು ಆಳಕ್ಕೆ ಇಳಿಸುತ್ತಾರೆ. ಅಲ್ಲೂ ಧನಿಕರಿಗೆ ಮೋಟಾರಿನ ಚಿಂತೆಯೇ ಹೊರತು ಗಾಲೂರಯ್ಯನ ಜೀವದ ಬಗೆಗಲ್ಲ. ಮೋಟಾರನ್ನು ಮೇಲಕ್ಕೆ ಎತ್ತಿದರೂ ಗಾಲೂರಯ್ಯ ಆಳು ಬಾವಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಗಾಲೂರಯ್ಯ ಏನಾದರೂ ಸತ್ತರೆ ಏನೆಂದು ಪಣಗಾರರು ತನ್ನ ಮೇಲೆ ಆರೋಪ ಬರದಹಾಗೆ ಉಪಾಯ ಹೂಡುತ್ತಾರೆ. ಹಗ್ಗದ ನೆರವಿನಿಂದ ಮೇಲಕ್ಕೆ ಬಂದ ಗಾಲೂರಯ್ಯನಿಗೆ ವಾಸ್ತವದ ಜ್ಞಾನೋದಯವಾಗುತ್ತದೆ. ಅದಾದರೂ ಮೂರು ಸಮಸ್ಯೆಗಳ ಪರಿಹಾರಕ್ಕೆ ಬುದ್ಧನಿಗೆ ಜ್ಞಾನೋದಯವುಂಟಾದ ಹಾಗೆ. ಎಲ್ಲವನ್ನು ತೊರೆದ ಗಾಲೂರಯ್ಯ ಹೊರಡುವುದು ಬುದ್ಧನ ಮಾರ್ಗದತ್ತ. ಬುದ್ಧ ದೇವ ತೋರಿದ ಮಾರ್ಗವೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ. ಸಂವಿಧಾನದ ಬೆಳಕಿನಲ್ಲಿ ಸಮಾನತೆ, ಸ್ವಾಭಿಮಾನವನ್ನು ಕಾಣುತ್ತಾನೆಂಬ ಆಶಯದೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ನಾಟಕದ ವಸ್ತು ಕಿರಿದಾದರೂ ಇದರ ಆಶಯ ಮತ್ತು ಉದ್ದೇಶವು ಹಿರಿದಾದುದು. ತಳಸಮುದಾಯದವರು, ಶೋಷಿತರು, ದುರ್ಬಲರು, ಮಹಿಳೆಯರು, ಕಾರ್ಮಿಕರಾದಿಯಾಗಿ ಎಲ್ಲರೂ ಸಂವಿಧಾನದಿಂದ ಬಾಳಿನಲ್ಲಿ ಬೆಳಕನ್ನು ಕಾಣಬಲ್ಲರೆಂಬ ಉದಾತ್ತ ತತ್ವವು ನಾಟಕದಲ್ಲಿ ಅಡಗಿದೆ.

ಬೆಲ್ಲದ ದೋಣಿ ನಾಟಕವನ್ನು ನಿರ್ದೇಶಕರಾದ ರೂಬಿನ್ ಸಂಜಯ್ ಅವರು ಕಿರು ರಂಗಮಂದಿರ, ವಿಶಾಲ ಅಂಗಣ, ಎಲ್ಲಿ ಬೇಕಾದರೂ ಪ್ರಯೋಗಿಸುವಂತೆ ವಿನ್ಯಾಸ ಮಾಡಿದ್ದಾರೆ. ದೇವಸ್ಥಾನದ ದೃಶ್ಯ, ಗಾಲೂರಯ್ಯನ ಮನೆ, ಬೀದಿ, ತೋಟ ಹೀಗೆ ಲಘು ದೃಶ್ಯಗಳನ್ನು ಸರಳವಾದ ರಂಗ ಸಜ್ಜಿಕೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ತಾಂತ್ರಿಕವಾದ ರಂಗ ಸಜ್ಜಿಕೆಗಳಿಗಿಂತಲೂ ಆಶಯವನ್ನು ಪ್ರಧಾನವಾಗಿಸಿದ್ದಾರೆ. ನಾಟಕದ ಆಶಯಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ನಿರ್ದೇಶಿಸಿರುವ ನಿರ್ದೇಶಕರ ಕೌಶಲ್ಯ ಶ್ಲಾಘನೀಯವಾದುದು. ನಾಟಕದ ಏಕತಾನತೆಗೆ ಮುಲಾಮಿನಂತ ಅಂಕಿ ಪಾತ್ರವನ್ನು ವಿಸ್ತರಿಸಿದ್ದಾರೆ. ಅಂಕಿ ಪಾತ್ರದಲ್ಲಿ ಪುಷ್ಪಲತ ಸಹಜಾಭಿನಯದಿಂದ ಗಮನ ಸೆಳೆಯುತ್ತಾರೆ. ಅವರ ಲವಲವಿಕೆಯ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗುವುದಾದರೂ ನಾಟಕದ ಆಶಯಕ್ಕೆ ಚ್ಯುತಿಬಾರದಂತೆ ನೋಡಿಕೊಳ್ಳುವುದೂ ಮುಖ್ಯ. ಏಕೆಂದರೆ ಸಹಪಾತ್ರವೇ ಪ್ರಧಾನ ಪಾತ್ರವಾಗಬಾರದು. ಗಾಲೂರಯ್ಯನಾಗಿ ರಾಜು ಸರಳವಾಗಿ ಅಭಿನಯಿಸಿದ್ದಾರೆ, ಆಂಗಿಕ ನಿಲುವಿಗೆ ತುಸು ಗಮನಕೊಟ್ಟರೆ ಮತ್ತಷ್ಟು ಪಾತ್ರ ಗಟ್ಟಿಗೊಳ್ಳುತ್ತದೆ.

ನಾಟಕದಲ್ಲಿ ತಾಂತ್ರಿಕವಾಗಿ ಸಂಗೀತ, ಬೆಳಕು, ಪ್ರಸಾದನ, ವಸ್ತಾçಲಂಕಾರಗಳು ಹಿಂದೆ ಸರಿದು ಗಾಲೂರಯ್ಯನಿಗೆ ಹೆಚ್ಚಿನ ವೇದಿಕೆಯನ್ನು ಕಲ್ಪಿಸಿವೆ. ಇದಾದರೂ ನಿರ್ದೇಶಕರು ಮಾಡಿಕೊಂಡ ಒಂದು ಚೌಕಟ್ಟೇ? ನಾಟಕವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳು ಇವೆ. ಮುಖ್ಯವಾಗಿ ನಾಟಕದ ಆಶಯಕ್ಕೆ ಚ್ಯುತಿ ಬರಬಾರದು. ಭಾರತ ದೇಶದ ಮುಂದಿನ ಹೆಜ್ಜೆಗುರುತುಗಳನ್ನು, ಬುದ್ಧ ಮಾರ್ಗವನ್ನು, ಸಂವಿಧಾನ ನಮಗೆ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ನಾಟಕವು ತನ್ನ ಒಡಲಲ್ಲಿಟ್ಟುಕೊಂಡು ದಿಕ್ಸೂಚಿಯಾಗಿದೆ. ಇದಕ್ಕಾಗಿ ನಾಟಕಕಾರರಾದ ಹನೂರು ಚನ್ನಪ್ಪನವರು ಮತ್ತು ಸ್ವತಃ ಗಾಯಕರೂ ಆದ ರಂಗವಾಹಿನಿ ತಂಡದ ಅಧ್ಯಕ್ಷರಾದ ಸಿ ಎಂ ನರಸಿಂಹಮೂರ್ತಿಯವರು ಅಭಿನಂದನಾರ್ಹರು.

‍ಲೇಖಕರು Admin

8 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading