ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಹನಾ ಹೆಗಡೆ ‘ಸೂರ್ಯನ ನೆರಳು’

ಅಭಿನವದ ಹೊಸ ಪುಸ್ತಕ ‘ಸೂರ್ಯನ ನೆರಳು’

ಮೂಲ: ರೈಷಾರ್ಡ್ ಕಪುಶಿನ್‍ಸ್ಕಿ
ಕನ್ನಡಕ್ಕೆ: ಸಹನಾ ಹೆಗಡೆ.

‘ಸೂರ್ಯನ ನೆರಳು’ ಎಂಬ ಈ ಕೃತಿಯ ಪ್ರಾರಂಭದಲ್ಲಿ ಆಫ್ರಿಕಾದಲ್ಲಿ ಅವನು ಕೈಗೊಂಡ ಸಾಹಸಗಳ ಚಿತ್ರವಿದೆ.

1962ರಲ್ಲಿ ದರ್-ಎಸ್-ಸಲಾಂಗೆ ಹೋದಾಗ ಅವನ ಕಿವಿಗೆ ಸದ್ಯದಲ್ಲೇ ಉಗಾಂಡ ಸ್ವತಂತ್ರವಾಗಲಿರುವ ಸುದ್ದಿ ಕೇಳಿಸುತ್ತದೆ. ಅವನು ಮತ್ತು ಅವನ ಸ್ನೇಹಿತ ಲಿಯೋ ಕೂಡಲೇ ವನ್ಯಜೀವನದಿಂದ ತುಂಬಿತುಳುಕುತ್ತಿರುವ ಸೆರೆಂಗೆಟಿಯ ಮೂಲಕ ಕಂಪಾಲಾಕ್ಕೆ ಹೊರಡುತ್ತಾರೆ. ಸೆರೆಂಗೆಟಿಯಲ್ಲಿ “ಎಲ್ಲವೂ ಅಸಂಭವನೀಯ-ವೆನ್ನುವಂತೆ, ನಂಬಲಸಾಧ್ಯವೆನ್ನುವಂತೆ ಗೋಚರಿಸುತ್ತದೆ.

ಪ್ರಪಂಚದ ಹುಟ್ಟನ್ನು ಕಣ್ಣಾರೆ ನೋಡುತ್ತಿರುವೆವೇನೋ ಎಂಬಂತೆ ಭೂಮಿ, ಆಕಾಶ, ನೀರು, ಸಸ್ಯ ಹಾಗೂ ಪ್ರಾಣಿಸಂಕುಲಗಳೆಲ್ಲ ಇದ್ದು ಆಡಮ್ ಮತ್ತು ಈವ್‍ರ ಜನ್ಮವಿನ್ನೂ ಆಗಿರದಿದ್ದ ಕ್ಷಣಗಳಿಗೆ ಸಾಕ್ಷಿಯಾದೆವೇನೋ ಎನ್ನುವ ಭಾವನೆ ತುಂಬಿಕೊಳ್ಳುತ್ತದೆ. ಇದು ಈಗಷ್ಟೇ ಮೈದಳೆದ ಪ್ರಪಂಚ. ಮನುಕುಲದ ಅಸ್ತಿತ್ವವೇ ಇಲ್ಲದ ಕಾರಣ ಪಾಪದ ಸೋಂಕು ಇನ್ನೂ ತಾಕಿರದ ಲೋಕ. ಕಲ್ಪಿಸಿಕೊಳ್ಳಬಹುದಾದದ್ದನ್ನು ನೋಡಲೂ ಸಾಧ್ಯವಿರುವ ಜಗತ್ತು.” ಹಾಗಾಗಿ ನಕ್ಷೆಗಳಿಲ್ಲದ ಅವರು ದಾರಿ ತಪ್ಪುತ್ತಾರೆ. “ದಿಗಂತದವರೆಗೂ ಹಬ್ಬಿದಂತೆ ಕಾಣುವ ಬೃಹತ್ ಗಾತ್ರದ” ಕಾಡೆಮ್ಮೆಗಳನ್ನು ಎದುರಿಸುತ್ತಾರೆ.

“ಮಾರ್ಗದ ಮಧ್ಯದಲ್ಲಿದ್ದ ಎಮ್ಮೆಗಳು… ನಿಧಾನಕ್ಕೆ ಅರೆನಿದ್ರಾವಸ್ಥೆಯಲ್ಲಿಯೇ ಸ್ವಲ್ಪ ಸ್ವಲ್ಪ ಜರುಗತೊಡಗಿದವು. ಕಾರು ಅವುಗಳ ಬದಿಯನ್ನು ಸವರಿಕೊಂಡೇ ಹೋಗುತ್ತಿದ್ದರೂ ಅವು ಅಗತ್ಯಕ್ಕಿಂತ ಹೆಚ್ಚು ಒಂದು ಸೆಂಟಿಮೀಟರ್ ಕೂಡ ಸರಿಯುತ್ತಿರಲಿಲ್ಲ.” ಆದರೂ ಅವರು ಎದೆಗುಂದುವುದಿಲ್ಲ. ಬಿಸಿಲು ಇಡೀ ಮೈಯನ್ನು ಉರಿಸುತ್ತದೆ. ಎಲ್ಲೆಡೆ ಬೆಂಕಿಯುಗುಳುವ ಗಾಳಿ ಪ್ರವಹಿಸುತ್ತದೆ. ಕಪುಶಿನ್‍ಸ್ಕಿ ಭ್ರಮಾಧೀನನಾಗುತ್ತಾನೆ. ಎಲ್ಲೆಂದು ಸ್ಪಷ್ಟವಾಗಿ ತಿಳಿಯದ ಜಾಗವನ್ನು ತಲುಪಿದಾಗ ಅವನು ‘ಅರ್ಧ ಸತ್ತಂತೆ’ ಆಗಿರುತ್ತಾನೆ.

ಒಂದು ಬಂಕಿನ ಮೇಲೆ ಕುಸಿದುಬಿದ್ದಾಗ ಅವನ ಕೈಯಿಗೆ ಕೆಲವೇ ಅಂಗುಲಗಳಷ್ಟು ದೂರವಿರುತ್ತದೆ, ಭಯಂಕರವಾದೊಂದು ಈಜಿಪ್ಷಿಯನ್ ಸರ್ಪ. ಲಿಯೊ ಆ ಸರ್ಪದ ಮೇಲೊಂದು ತಗಡಿನ ಡಬ್ಬವನ್ನು ಮಗುಚಿ ಹಾಕಿದ್ದೇ ಅದು ಇಡೀ ಗುಡಿಸಲನ್ನು ನಡುಗಿಸುವಂತೆ ಸದ್ದುಮಾಡುತ್ತದೆ. ಅಂತೂ ಇಂತೂ ಅವರು ಕಂಪಾಲಾವನ್ನು ತಲಪುವಹೊತ್ತಿಗೆ ಕಪುಶಿನ್‍ಸ್ಕಿ ಜ್ವರದಿಂದ ಬಡಬಡಿಸುತ್ತಾನೆ. ಹಾಗೂ ಹೀಗೂ ಚೇತರಿಸಿಕೊಳ್ಳುವ ಹೊತ್ತಿಗೆ ಅವನಿಗೆ ಕ್ಷಯರೋಗ ತಗಲಿದ ಸೂಚನೆ. ಹಾಗೆ ನೋಡಿದರೆ, ಈ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಅವನು ಬೆವರಿನಿಂದ ತೊಯ್ದುಹೋಗಿದ್ದಾನೆ.

-ಅಶೋಕ ಹೆಗಡೆ
(ಮುನ್ನುಡಿಯಿಂದ)

‍ಲೇಖಕರು avadhi

18 November, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading