ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಹನಾ ಹೆಗಡೆ ಅನುವಾದಿಸಿದ ಕಾದಂಬರಿ ‘1984’

ಸಹನಾ ಹೆಗಡೆ

ಕೃತಿ : ‘1984’
ಮೂಲ ಇಂಗ್ಲಿಷ್ : ಜಾರ್ಜ್ ಆರ್ವೆಲ್
ಕನ್ನಡಕ್ಕೆ : ಸಹನಾ ಹೆಗಡೆ
ಪ್ರಕಾಶನ : ಕುವೆಂಪು ಭಾಷಾ ಭಾರತಿ

ಈ ಕೃತಿಯು ಈಗಾಗಲೇ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆಯೇ ಎನ್ನುವ ಬಗ್ಗೆ ನನ್ನ ಬಳಿ ಖಚಿತ ಮಾಹಿತಿಯಿಲ್ಲ. ಸಾಹಿತ್ಯಕ-ವೈಚಾರಿಕ ಬರಹಗಳ ಓದು, ಭಾಷಣ, ಚರ್ಚೆ, ಸಂವಾದಗಳಲ್ಲಿ ಮತ್ತೆ ಮತ್ತೆ ಉಲ್ಲೇಖಿಸಲ್ಪಡುವ ಆರ್ವೆಲ್‌ನನ್ನು ಒಂದು ದಿನ ನಾನು ಅನುವಾದಿಸುತ್ತೇನೆಂಬ ಕಲ್ಪನೆಯೂ ನನಗಿರಲಿಲ್ಲ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಅಂತಹದೊಂದು ಅವಕಾಶದ ಪ್ರಸ್ತಾಪ ಬಂದಾಗ ಒಂದಿನಿತೂ ಯೋಚಿಸದೇ ಒಪ್ಪಿಕೊಂಡಿದ್ದೆ.

ಅನುವಾದ, ಭಾಷಾಂತರ, ತರ್ಜುಮೆ, ಕನ್ನಡೀಕರಣ, ಕನ್ನಡಿಸು, ಕನ್ನಡ ಆವೃತ್ತಿ ಇತ್ಯಾದಿ ವಿವಿಧ ಹೆಸರುಗಳಿಂದ ಉಲ್ಲೇಖಿಸಲ್ಪಡುವ ಸೃಜನಶೀಲ ಪ್ರಕ್ರಿಯೆಗೆ ಅನುಸೃಷ್ಟಿಯೆಂಬ ಪದ ಬಳಕೆ ಅತ್ಯಂತ ಸೂಕ್ತವಾದುದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಆದರೂ ವಾಡಿಕೆಯಲ್ಲಿ ಅನುವಾದ ಎಂಬ ಪದವೇ ಹೆಚ್ಚಾಗಿ ಬಳಕೆಯಲ್ಲಿರುವ ಕಾರಣ, ಅದನ್ನೇ ಇಟ್ಟುಕೊಂಡು ಮುನ್ನಡೆಯಬೇಕಿದೆ. ಯಾವುದೇ ಭಾಷೆಯು ಬೆಳವಣಿಗೆ ಹೊಂದಲು, ಅದರ ಶ್ರೀಮಂತಿಕೆಯನ್ನು ಇನ್ನಷ್ಟು ಹೆಚ್ಚಿಸಲು ಅನುವಾದವೆಂಬ ಕೌಶಲ್ಯಪೂರ್ಣ ಹಾಗೂ ಬೌದ್ಧಿಕ ಚಟುವಟಿಕೆಯೊಂದು ಅತ್ಯಗತ್ಯ ಎನ್ನುವುದನ್ನು ಅಲ್ಲಗಳೆಯಲಾಗದು.

ಮಾಹಿತಿ, ಸಂಸ್ಕೃತಿಗಳ ವಿನಿಮಯವಿಲ್ಲದೇ ಯಾವ ಬದುಕೂ ಬೆಳೆಯದು. ಏಕಕಾಲಕ್ಕೆ ಕಲೆಯೂ ವಿಜ್ಞಾನವೂ ಆಗಿರುವ, ಅನ್ವಯಿಕ ಭಾಷಾಶಾಸ್ತ್ರದ ಈ ಶಾಖೆಯನ್ನು ಶೈಕ್ಷಣಿಕ ನೆಲೆಯಲ್ಲಿ ಭಾಷಾಂತರ ಅಧ್ಯಯನ ಎಂಬ ಹೆಸರಿನಲ್ಲಿ ಅದಾಗಲೇ ಗುರುತಿಸಲಾಗುತ್ತಿದ್ದರೂ ಅದಕ್ಕೆ ಸಾಂಸ್ಥಿಕ ನೆಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಸಿಗುವ ಲಕ್ಷಣಗಳು ಕಾಣುತ್ತಿರುವುದು ಇಪ್ಪತ್ತೊಂದನೆಯ ಶತಮಾನದ ಎರಡನೇ ದಶಕದಲ್ಲಷ್ಟೇ. ಇದಕ್ಕೆ ಕಾರಣ, ಜಾಗತೀಕರಣ, ಉದಾರೀಕರಣ, ನಗರೀಕರಣದಂತಹ ಬೆಳವಣಿಗೆಗಳಿಂದಾಗಿ ಮುಕ್ತವಾಗಿ ತೆರೆದುಕೊಂಡ ಸಮಾಜ, ಸಮುದಾಯಗಳು ಹಾಗೂ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಜ್ಞಾನ, ತಂತ್ರಜ್ಞಾನಗಳು. ಕಾಲ, ದೇಶ, ಸನ್ನಿವೇಶಕ್ಕೆ ತಕ್ಕಂತೆ ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದಗಳು ಆಗುವ ಹಾಗೆಯೇ ಬದಲಾದ ಕಾಲಘಟ್ಟವೊಂದು ತನ್ನದೇ ಅನುವಾದಗಳನ್ನು ಮಾಡಿಸಿಕೊಳ್ಳುತ್ತದೆ ಎಂಬ ಮಾತಿದೆ.

ಭಾಷೆಯೊಂದರ ಸಂರಚನೆ, ಪದಕೋಶದಲ್ಲಿ ಆಗುವ ಬದಲಾವಣೆಗಳು ಮತ್ತು ಒಟ್ಟಾರೆ ಜಾಗತಿಕ, ರಾಷ್ಟ್ರೀಯ ಅಥವಾ ಸ್ಥಳೀಯ ಸಂದರ್ಭದಲ್ಲಿ ಕೃತಿಯು ಹೊಂದಿರುವ ಪ್ರಸ್ತುತತೆ ಇವು ಅದಾಗಲೇ ಅನುವಾದಗೊಂಡಿರುವ ಕೃತಿಯನ್ನೂ ಮತ್ತೆ ಮತ್ತೆ ಅನುವಾದಕ್ಕೆ ತೆರೆದುಕೊಳ್ಳುವಂತೆ ಮಾಡುತ್ತವೆ. ರಾಜಕೀಯ ವಿಡಂಬನೆಗಳಿಂದ ಕೂಡಿದ ತನ್ನ ಬರಹಗಳಿಂದಾಗಿ ವಿಶ್ವವಿಖ್ಯಾತನಾದ ಬ್ರಿಟಿಷ್ ಲೇಖಕ ಜಾರ್ಜ್ ಆರ್ವೆಲ್‌ನ ಪ್ರಸಿದ್ಧ ಕಾದಂಬರಿ ‘1984’ ನ್ನು ಅನುವಾದಿಸುವ ಅವಕಾಶ ನನಗೆ ಒದಗಿ ಬಂದಿದ್ದು ಹೀಗೆ. ಲಿಂಗ, ವರ್ಗ, ಜಾತಿ, ಮತ, ಧರ್ಮ, ಸಿದ್ಧಾಂತಗಳ ಸುಳಿಯಲ್ಲಿ ಸಿಕ್ಕು ಮನುಷ್ಯ ಮೂಲಭೂತವಾಗಿ ತಾನು ಏನು ಎನ್ನುವುದನ್ನೇ ಮರೆತಿರುವ ಕಾಲಘಟ್ಟದಲ್ಲಿ ಈ ಕೃತಿಯು ಇನ್ನಷ್ಟು ಪ್ರಸ್ತುತವಾಗಿದೆ, ಊಹಿಸಲೂ ಅಸಾಧ್ಯವಾದ ಮಟ್ಟಿಗಿನ ತಣ್ಣನೆಯ ಕ್ರೌರ್ಯ, ಅದು ಯಾರಲ್ಲಾದರೂ ಇರಬಹುದು, ನಮ್ಮೊಳಗೂ ಇದ್ದಿರಲು ಸಾಧ್ಯ ಎಂಬ ಕಟುಸತ್ಯವನ್ನು ಅನಾವರಣಗೊಳಿಸುತ್ತದೆ.

ಮಾನವನ ಯೋಚನೆಗಳು ಸಂಕೀರ್ಣವಾಗುತ್ತ ಹೋದಂತೆ, ಭಾಷೆ ಕೂಡ ಸಂಕೀರ್ಣವಾಗುತ್ತ ಹೋಗುತ್ತದೆ ಎಂಬ ಮಾತು ಬಹುಶಃ ಈ ಕಾದಂಬರಿಗೆ ತುಂಬಾ ಚೆನ್ನಾಗಿ ಅನ್ವಯಿಸುತ್ತದೆ. ಅನುವಾದ ಪ್ರಕ್ರಿಯೆ ಸಹಜವಾಗಿಯೇ ಸಾಕಷ್ಟು ಸವಾಲುಗಳನ್ನೊಡ್ಡಿದೆ. ಓದುಗರ ದೃಷ್ಟಿಯಿಂದ ಸರಳಗೊಳಿಸುವಿಕೆಯು ಪ್ರಯೋಜನಕಾರಿ ಎನ್ನುವುದನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡೇ ಮೂಲಕೃತಿಯ ಆಶಯಗಳನ್ನು ತೆಳುವಾಗಿಸದಂತೆ ಎಚ್ಚರವನ್ನೂ ವಹಿಸಲಾಗಿದೆ. Big Brother, Thought Police, Doublethink ಮುಂತಾದ ಪದಗಳು ಕಾದಂಬರಿಯ ಓದಿನಾಚೆಗೂ ವಿಸ್ತರಿಸಿಕೊಂಡು ಜನರ ಮಾತುಕತೆಯಲ್ಲಿ, ಸಾಹಿತ್ಯಿಕ, ರಾಜಕೀಯ ಸಂವಾದ, ಚರ್ಚೆಗಳಲ್ಲಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಓದುಗರಿಗೆ connect ಆಗಲು ಹೆಚ್ಚು ಸಹಾಯವಾಗುತ್ತದೆ ಎಂಬ ಕಾರಣಕ್ಕೆ, ಮೊದಲ ಬಾರಿಗೆ ಇಂತಹ ಪದಗಳು ಬಂದಾಗ, ಇಂಗ್ಲಿಷ್‌ನಲ್ಲಿ ಬರೆದು ಅದರ ಮುಂದೆಯೇ ಅನುವಾದಿತ ರೂಪವನ್ನು ಕೊಡಲಾಗಿದೆ.

ನಂತರದಲ್ಲಿ ಅನುವಾದಿತ ರೂಪಗಳನ್ನಷ್ಟೇ ಬಳಸಲಾಗಿದೆ. ಕೆಲವು ಪದಗಳ ಇಂಗ್ಲಿಷ್ ರೂಪಗಳು ಅದಾಗಲೇ ಕನ್ನಡದಲ್ಲಿ ಸಾಮಾನ್ಯವಾಗಿ ಕಂಡುಬಂದ ಕಾರಣ, ಅದಕ್ಕೆ ಏನಾದರೂ ಒಂದು ಕನ್ನಡ ಪದವನ್ನು ಇಟ್ಟುಬಿಡಲೇ ಬೇಕು, ಇಲ್ಲದಿದ್ದರೆ ಟಂಕಿಸಬೇಕು ಎನ್ನುವ ಹಠಕ್ಕೆ ಬೀಳದೆ, ಅವುಗಳನ್ನು ಹಾಗೆಯೇ ಇಟ್ಟುಕೊಂಡು ಅನುವಾದವನ್ನು ಮುಂದುವರೆಸಲಾಗಿದೆ. ಮೂಲ ಕೃತಿಯಲ್ಲಿ ಮಹತ್ವದ್ದಾದ ಕೆಲವು ಪದಗಳನ್ನು ದೊಡ್ಡಕ್ಷರ, ಓರೆ ಅಕ್ಷರಗಳಲ್ಲಿ ಇಡಲಾಗಿದ್ದು, ಕನ್ನಡಕ್ಕೆ ತರುವಾಗ ಅವುಗಳನ್ನು ಸಂದರ್ಭಾನುಸಾರವಾಗಿ ದೊಡ್ಡ, ಓರೆ ಮತ್ತು ದಪ್ಪಕ್ಷರಗಳಲ್ಲಿ ಇಡಲಾಗಿದೆ.

1984 – ನನ್ನ ಪಾಲಿಗೆ, ಒಂದು ಕಾದಂಬರಿಯಾಗಿ ಹೇಗೆ ಮನಸ್ಸಿನಲ್ಲಿ ಉಳಿಯಬಲ್ಲದೋ ಅದರ ಅನುವಾದ ಪ್ರಕ್ರಿಯೆಯೂ ಅಷ್ಟೇ, ಬಹುಕಾಲ ನೆನಪಿನಲ್ಲಿ ಉಳಿಯುವಂತಹದು. ಅಧಿಕಾರ, ರಾಜಕೀಯ, ಕುತಂತ್ರ, ಹಿಂಸೆ, ಅಪನಂಬಿಕೆ, ಅಭದ್ರತೆ, ಯುದ್ಧ, ಕ್ಷೋಭೆ, ಮಾನವನ ಅತೃಪ್ತ ವಾಂಛೆಗಳು, ಲಾಲಸೆ, ವಿಕ್ಷಿಪ್ತ ಮನಃಸ್ಥಿತಿ, ಕಾಮ, ಪ್ರೇಮ ಎಲ್ಲದರ ಸುತ್ತ ಸುತ್ತುತ್ತಲೇ ಕೃತಿಯೊಂದು ಅನುವಾದ ಕ್ರಿಯೆಯಲ್ಲಿ ಸಂಪೂರ್ಣ ತೃಪ್ತಿಯನ್ನು ತಂದುಕೊಟ್ಟ ಭಾವ ಶಾಶ್ವತವಾದುದು.

‍ಲೇಖಕರು Admin

3 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading