ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ: ಬದುಕಿನ ಧಾರಣ ಶಕ್ತಿಯ ಹುಡುಕಾಟ

ಎಂ ಎಸ್ ಆಶಾದೇವಿ ಅವರ ‘ನಡುವೆ ಸುಳಿವ ಆತ್ಮ’ ಇಂದು ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ

ಸವಿತಾ ನಾಗಭೂಷಣ ಅವರ ‘ಕಾಡು ಲಿಲ್ಲಿ ಹೂಗಳು‘ ಸಂಕಲನಕ್ಕೆ ಆಶಾದೇವಿ ಅವರು ಬರೆದಿದ್ದ ಈ ಮುನ್ನುಡಿ ಇಲ್ಲಿದೆ.

ಎಂ ಎಸ್ ಆಶಾದೇವಿ

ಕಾವ್ಯವೆನ್ನುವುದು ‘ಬೀದಿಯ ಪಸರ’ವೂ, ‘ತಗರ ಹೊರಟೆ’ಯೂ ಆಗಿಬಿಡುತ್ತಿದೆಯೇನೋ ಎನ್ನುವ ಆತಂಕ ಎಲ್ಲ ಕಾಲದ ಕಾವ್ಯಪ್ರೇಮಿಗಳನ್ನು ಕಾಡುತ್ತಿರುತ್ತದೆ. ಇಂತಹ ಸನ್ನಿವೇಶದಲ್ಲಿ ‘ಕಾವ್ಯಧ್ಯಾನ’ದ ಬಗ್ಗೆ ನಂಬಿಕೆ ಹುಟ್ಟಿಸುತ್ತಿರುವ ಕವಿಗಳಲ್ಲಿ ಸವಿತಾ ನಾಗಭೂಷಣ ಮುಖ್ಯರು. ಇಷ್ಟಾಗಿ ಸವಿತಾ ಸೇರಿದಂತೆ ಕನ್ನಡದ ಮುಖ್ಯ ಕವಯಿತ್ರಿಯರ ಕಾವ್ಯದ ವಿಭಿನ್ನ ನೆಲೆಗಳನ್ನು ಕುರಿತ ವಿಸ್ತೃತ ಚಚರ್ೆ ನಡೆದಿಲ್ಲವೆಂದೇ ಹೇಳಬೇಕು. ‘ಮಹಿಳಾ ಸಾಹಿತ್ಯ’ ಎನ್ನುವ ವಗರ್ೀಕರಣವನ್ನು ಪ್ರತಿಪಾದಿಸುವುದು ಈ ಮಾತಿನ ಉದ್ದೇಶವಲ್ಲ. ಬದಲಿಗೆ, ಮುಖ್ಯವಾಹಿನಿ ವಿಮಶರ್ೆಯು ಇನ್ನೂ ಸ್ಥಾಪಿತ ಗ್ರಹಿಕೆಗಳಿಂದಲೇ ಲೇಖಕಿಯರನ್ನು ಅಥರ್ೈಸಲು ಪ್ರಯತ್ನಿಸುತ್ತಿದೆ ಎನ್ನುವ ಅರ್ಥದಲ್ಲಿ.

ಲೇಖಕಿಯರನ್ನು ಚಚರ್ಿಸುವ ಹಲವು ಅಧ್ಯಯನ ಮಾದರಿಗಳು ರೂಪುಗೊಂಡಿವೆ. ಬಹುಮುಖ್ಯವಾಗಿ ಮತ್ತು ಸಾಮಾನ್ಯವಾಗಿ ಬಳಕೆಯಾಗುವ ಮೂರು ನೆಲೆಗಳೆಂದರೆ (1) ಸ್ತ್ರೀ ವಿಶಿಷ್ಟ ಅನುಭವ ಮಾದರಿಗಳ ನೆಲೆ (2) ಸ್ತ್ರೀವಾದಿ ಸಿದ್ಧಾಂತಗಳ ನೆಲೆ (3) ಕಾವ್ಯ ಮೀಮಾಂಸೆಯ ನೆಲೆ. ಸ್ತ್ರೀವಾದಿ ಚಿಂತಕರೂ ಸೇರಿದಂತೆ ಇಂದು ಕನ್ನಡ ವಿಮರ್ಶಕರ ಎದುರಿಗಿರುವ ಸವಾಲೆಂದರೆ ಈ ಮೂರೂ ಮಾದರಿಗಳ ಒಳ ಹೆಣಿಗೆಗಳ ನೆಲೆಯೊಂದನ್ನು ರೂಪಿಸುವುದು. ಸಮಕಾಲೀನ ಸಂದರ್ಭದಲ್ಲಿ ಈ ಪ್ರಯತ್ನಕ್ಕೆ ಅಪಾರ ಮಹತ್ವವಿದೆ. ಲೇಖಕಿಯರನ್ನು ವಗರ್ೀಕರಣದಾಚೆಗೆ ತಂದು ಚಚರ್ಿಸಲು ಅಗತ್ಯವಾದ ಸೈದ್ಧಾಂತಿಕ ಹಿನ್ನೆಲೆಯನ್ನು, ತಳಹದಿಯನ್ನು ಈ ಒಳಹೆಣಿಗೆಗಳ ನೆಲೆ ಕಟ್ಟಿಕೊಡುತ್ತದೆ. ಈ ತನಕ ಬಹುತೇಕ ಸಂದರ್ಭಗಳಲ್ಲಿ ಈ ಮೂರೂ ನೆಲೆಗಳನ್ನು ಸಮಾನಾಂತರ ರೇಖೆಗಳೆಂದೇ ತಿಳಿಯಲಾಗುತ್ತಿತ್ತು.

ಪ್ರಧಾನಧಾರೆ ವಿಮಶರ್ೆಯು ಸ್ತ್ರೀವಿಶಿಷ್ಟ ಅನುಭವ ಮಾದರಿಗಳ ನೆಲೆಯಲ್ಲಿ ಮಾತ್ರ ಲೇಖಕಿಯರನ್ನು ಚಚರ್ಿಸುವುದರಲ್ಲಿ ಆಸಕ್ತಿಯನ್ನು ಇನ್ನೂ ಕಳೆದುಕೊಂಡಿಲ್ಲ. ಆದರೆ ಅನುಕೂಲಕರವಾದ ಬೆಳವಣಿಗೆಯೆಂದರೆ, ಇತ್ತೀಚಿನ ದಿನಗಳಲ್ಲಿ ಪ್ರಧಾನಧಾರೆ ವಿಮಶರ್ೆಯು ಸ್ತ್ರೀವಾದಿ ಸಿದ್ಧಾಂತಗಳ ನೆಲೆಯನ್ನು ಸ್ತ್ರೀವಿಶಿಷ್ಟ ಅನುಭವದ ನೆಲೆಗೆ ಬಗ್ಗಿಸಿಕೊಳ್ಳಲು, ಒಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನಗಳ ಅಧ್ಯಯನವೂ ಮುಖ್ಯವೆಂದೇ ತೋರುತ್ತದೆ. ಯಾಕೆಂದರೆ ಈ ಬಗೆಯ ಅಧ್ಯಯನಗಳು ಲಿಂಗರಾಜಕಾರಣದ ಮೂರ್ತ, ಅಮೂರ್ತ ಕಾರ್ಯಮಾದರಿಗಳ ಬಗ್ಗೆ ಅನೇಕ ಸಂಗತಿಗಳನ್ನು ಹೇಳುತ್ತವೆ.

ಪ್ರಧಾನಧಾರೆ ವಿಮಶರ್ೆಯು ಸ್ತ್ರೀ ವಿಶಿಷ್ಟ ಅನುಭವ ಮಾದರಿಗಳನ್ನು ಇತರ ಲೇಖಕರ ‘ಲೋಕಾನುಭವ ದರ್ಶನ’ದ ಜೊತೆಗೆ ಇಡದೆ ಅಂಚಿನಲ್ಲಿ ಇಡುತ್ತದೆ. ಅದನ್ನು ವಿಶಿಷ್ಟವೆಂದೇ ಗುರುತಿಸುತ್ತಲೇ, ಅದು ಸೀಮಿತ ಅನುಭವಗಳ ಲೋಕ ಎಂದು ಗುರುತಿಸುವುದರಲ್ಲಿಯೇ ಅದಕ್ಕೆ ಹೆಚ್ಚಿನ ಆಸಕ್ತಿ. ಹೀಗಾಗಿ ಸಹಜವಾಗಿಯೇ ಅನುಭವಗಳ ಶ್ರೇಣೀಕರಣವೂ ಇಲ್ಲಿ ಘಟಿಸಿ, ಅದೊಂದು ಮಾನದಂಡವೂ ಆಗಿಬಿಡುತ್ತದೆ.

ಹಾಗೆಯೇ ಸ್ತ್ರೀವಾದಿ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಚಚರ್ಿಸುವಾಗಲೂ ಸಾಮಾನ್ಯವಾಗಿ ಚಚರ್ೆಗೆ ಎತ್ತಿಕೊಳ್ಳುವುದು ಸಾಂಸ್ಕೃತಿಕ ಸ್ತ್ರೀವಾದವನ್ನೇ. ಸಾಂಸ್ಕೃತಿಕ ಸ್ತ್ರೀವಾದವು ಸ್ತ್ರೀ ವಿಶಿಷ್ಟ ಲಕ್ಷಣಗಳನ್ನು ಮತ್ತು ಅನುಭವಗಳನ್ನು ಹೆಚ್ಚಿನ ಒತ್ತುಕೊಟ್ಟು ಚಚರ್ಿಸುತ್ತದೆ ಎನ್ನುವುದು ನಿಜ. ಆದರೆ ಇದರ ಹಿಂದಿನ ಖಚಿತ ನಿಲುವು ಮತ್ತು ಉದ್ದೇಶವೆಂದರೆ ಈ ಲಕ್ಷಣಗಳನ್ನು ಲಿಂಗ ತಾರತಮ್ಯದ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವ ದೃಷ್ಟಿಯಿಂದ ಹೆಣ್ಣಿನ ‘ಶಕ್ತಿಕೇಂದ್ರ’ಗಳಾಗಿ ಬದಲಾದ ದೃಷ್ಟಿಕೋನದಲ್ಲಿ ಗುರುತಿಸುವುದು. ಆದರೆ ಮುಖ್ಯವಾಹಿನಿ ವಿಮಶರ್ೆಯ ತೊಡಕಲ್ಲಿದೆಯೆಂದರೆ ಅದು ಈ ‘ಶಕ್ತಿಕೇಂದ್ರ’ಗಳು. ಸ್ತ್ರೀ ವಿಶಿಷ್ಟ ಅನುಭವಗಳ ವೈಭವೀಕರಣವೆಂದೇ ನೋಡಲು ಬಯಸಿ ಅದನ್ನು ಸ್ತ್ರೀವಾದದ, ಅಂತಿಮವಾಗಿ ಹೆಣ್ಣಿನ ಮಿತಿಯೆಂದೇ ಚಚರ್ಿಸಲು ಯತ್ನಿಸುತ್ತದೆ. ಸಹನೆ, ವಾತ್ಸಲ್ಯ, ಅಂತಃಕರಣ, ಮಾತೃತ್ವ…, ಮುಂತಾದವುಗಳು ಅಲ್ಲಿ ಮತ್ತೆ ಮತ್ತೆ ಚಚರ್ೆಗೆ ಒಳಗಾಗುತ್ತವೆ. ಆದರೆ ಈ ಎಲ್ಲ ಮೌಲ್ಯಗಳನ್ನೂ ಗುಣವಿಶೇಷಣಗಳನ್ನೂ ಕುರಿತಂತೆ ಹೆಣ್ಣಿನ ಗ್ರಹಿಕೆಯಲ್ಲಾಗಿರುವ, ಆಗುತ್ತಿರುವ ಬದಲಾವಣೆಯು ಹೆಣ್ಣಿಗೆ ತಂದುಕೊಡಬಹುದಾದ ಆತ್ಮವಿಶ್ವಾಸವನ್ನು ಗ್ರಹಿಸುವಲ್ಲಿ ಪ್ರಧಾನಧಾರೆ ವಿಮಶರ್ೆಯು ಸೋಲುತ್ತದೆ. ಹೆಣ್ಣಿನ ಸಂವೇದನೆಯಲ್ಲಿ ಅಗುತ್ತಿರುವ ಈ ಪಲ್ಲಟಗಳನ್ನು ಗುರುತಿಸಬೇಕಾಗಿರುವುದೇ ಲೇಖಕಿಯರನ್ನು ಕುರಿತು ಚಚರ್ಿಸಲು ನಾವು ರೂಪಿಸಬೇಕಾದ ನೆಲೆ ಎಂದೂ, ಈ ನೆಲೆಯಿಂದಲೇ ಲೇಖಕಿಯರ ಸ್ಥಾನ ನಿದರ್ೇಶನ ಮಾಡಲು ಅಗತ್ಯವಾದ ಹೊಸ ಪರಿಕರಗಳೂ, ಪರಿಕಲ್ಪನೆಗಳೂ ಲಭ್ಯವಾಗುತ್ತವೆ ಎಂದೂ ನಾನು ನಂಬಿದ್ದೇನೆ.

ಸವಿತಾರ ಕಾವ್ಯದ ಬಗ್ಗೆ ಬರೆಯಲು ಹೊರಟು ‘ಮೂಗುತಿ ಭಾರ’ದ ಈ ದೀರ್ಘ ಪೀಠಿಕೆಯನ್ನು ಹಾಕಿಕೊಂಡದ್ದು, ನಮ್ಮ ಸಂದರ್ಭವನ್ನು ಸ್ಪಷ್ಟಪಡಿಸಿಕೊಳ್ಳುವ ದೃಷ್ಟಿಯಿಂದ. ಸವಿತಾ ನಾಗಭೂಷಣರ ಕಾವ್ಯದ ಮೂಲಭೂತ ಲಕ್ಷಣವೇ ನಾನು ಪೀಠಿಕೆಯಲ್ಲಿ ಹೇಳ ಹೊರಟ ಎಲ್ಲ ಸಂಗತಿಗಳಿಗೂ ಅತ್ಯುತ್ತಮ ಉದಾಹರಣೆ. ಕಳೆದ ತಲೆಮಾರಿನ ನಮ್ಮ ಲೇಖಕಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಅಂಶವೆಂದರೆ, ‘ನಾನು ಹೆಣ್ಣು’ ಮತ್ತು ಹೆಣ್ಣಾಗಿರುವುದರ ಕಷ್ಟ ಪರಂಪರೆಗಳ ವಿವರಗಳು. ಸವಿತಾರ ಮೊದಲ ಸಂಕಲನ ‘ನಾ ಬರುತ್ತೇನೆ ಕೇಳು’ ವಿನಲ್ಲಿಯೇ ಈ ವಿವರ ಕಾಣೆಯಾಗಿದೆ. ಹೆಣ್ಣೂ ಸೇರಿದಂತೆ ಶೋಷಿತ ವರ್ಗದ ಬಹಳ ದೊಡ್ಡ ಸವಾಲೆಂದರೆ ‘ತನ್ನ ಘನತೆ’ಯಲ್ಲಿ ನಂಬಿಕೆಯನ್ನು ಕಟ್ಟಿಕೊಳ್ಳುವುದು. ಈ ‘ಆತ್ಮಗೌರವ’ದ ಸಂಪಾದನೆ ಕಷ್ಟಸಾಹಸದ ನಿರಂತರ ಪ್ರಯಾಣ. ಲೋಕ ತನ್ನನ್ನು ಇನ್ನೂ ಅನುಮಾನದ, ಗೊಂದಲದ, ಹತ್ತಿಕ್ಕುವ ಹೊಸದಾರಿಗಳ ಹುಡುಕಾಟದ ಕಣ್ಣಿನಿಂದ ನೋಡುತ್ತಿರುವಾಗಲೇ, ವ್ಯವಸ್ಥೆಯ ಬಗೆಗೆ ಕಡೆಗಣ್ಣಿನ ನೋಟವನ್ನು ಬೀರಿ ಸಾಗುವ ಧೋರಣೆಯೊಂದು ಸವಿತಾರಲ್ಲಿ ಗಟ್ಟಿಯಾಗಿದೆ. ಈ ಧೋರಣೆಯು ಬದುಕಿನ ಬದಲಾವಣೆಯ ಸಹಜ ಗತಿಯೆಂಬಂತೆ ಇವರ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತದೆಯೇ ಹೊರತು, ಉದ್ದೇಶಪೂರ್ವಕ ಸ್ತ್ರೀವಾದಿ ನಿಲುವುಗಳಿಂದ, ಕ್ರಾಂತಿಯ ಉದ್ಘೋಷಗಳಿಂದ ಹೊರಟ ಹಾಗೆ ಕಾಣಿಸುವುದಿಲ್ಲ.

ನಾನು ಆರಂಭದಲ್ಲಿ ಪ್ರಸ್ತಾಪಿಸಿದಂತೆ ಅಧ್ಯಯನದ ನೆಲೆಗಳ ಒಳಹೆಣಿಗೆಯೊಂದು ರೂಪುಗೊಳ್ಳಬೇಕಾಗಿರುವುದು ಎಂದರೆ, ಅವರ ಕಾವ್ಯದ ಸೋಲು – ಗೆಲುವುಗಳ ಜೊತೆ ಜೊತೆಗೇ ಈ ಪಲ್ಲಟದ ಅಂಶವೂ ಚಚರ್ೆಯಾಗಬೇಕಾಗಿರುವುದು ಈ ಹೊತ್ತಿನ ಚಾರಿತ್ರಿಕ ಅಗತ್ಯ. ಈ ಮಾತುಗಳನ್ನು ಹೇಳುತ್ತಿರುವಾಗ ‘ಸ್ತ್ರೀ ಲೋಕ’ದ ಮೂಲಕ ಸವಿತಾ ನಡೆಸಿದ ಭಿನ್ನ ಶೋಧನೆಯೂ ನನ್ನ ಗಮನದಲ್ಲಿದೆ. ಕಾವ್ಯದಲ್ಲಿ ಸಹಜ ಆತ್ಮವಿಶ್ವಾಸದಲ್ಲಿ ಎದುರಿನ ಸವಾಲುಗಳನ್ನು ದೃಷ್ಟಿಯನ್ನು ಬೇರೆಯೆಡೆಗೆ ಹೊರಳಿಸುವುದರ ಮೂಲಕವೇ ದುರ್ಲಕ್ಷಿಸಿ ಮುನ್ನುಗ್ಗುವ ಸವಿತಾ ‘ಸ್ತ್ರೀಲೋಕ’ ಕಾದಂಬರಿಯಲಿ ಪ್ರಜ್ಞಾಪೂರ್ವಕವಾಗಿ, ಖಚಿತ ಉದ್ದೇಶಗಳಲ್ಲಿ ಅವುಗಳನ್ನು ಮುಖಾಮುಖಿಯಾಗಿಸುತ್ತಾರೆ. ಈ ಮುಖಾಮುಖಿಯಲ್ಲಿಯೂ ಅವರು ವ್ಯವಸ್ಥೆಯನ್ನು ಪ್ರಶ್ನಿಸುವ ವಿಧಾನವಾಗಲಿ, ಹೆಣ್ಣಿನ ಸ್ಥಿತಿಗತಿಗಳ ಬಗೆಗಿನ ಅವರ ನಿಲುವುಗಳಾಗಲೀ ಕುತೂಹಲಕರವೇ. ಹೆಣ್ಣಿನ ಪ್ರಜ್ಞೆಯಲ್ಲಿ ವ್ಯವಸ್ಥೆಯ ಸ್ಥಾಪಿತ ಮಾದರಿಗಳು ಶಾಶ್ವತ ಎನ್ನುವ ನಂಬಿಕೆಯನ್ನಷ್ಟೇ ಸ್ತ್ರೀಲೋಕ ಪ್ರಶ್ನಿಸುತ್ತದೆ. ಆ ಸ್ಥಾಪಿತ ಮಾದರಿಗಳೊಳಗಿನ ಬಿರುಕುಗಳನ್ನು, ಪಯರ್ಾಯ ಮಾದರಿಗಳ ಹುಡುಕಾಟವನ್ನು ಅಂತಿಮವಾಗಿ ಬೇರೊಂದು ಕಡೆ ನಾನು ಈಗಾಗಲೇ ಚಚರ್ಿಸಿದಂತೆ ಸ್ವಾಯತ್ತತೆಯ ಕಡೆಗಿನ ಪ್ರಯಾಣದ ಹೆಜ್ಜೆ ಗುರುತುಗಳನ್ನು ಈ ಕಾದಂಬರಿ ದಾಖಲಿಸುತ್ತದೆ. ಹೀಗಾಗಿ ‘ಸ್ತ್ರೀ ಲೋಕ’ ಕಾದಂಬರಿಯು ಮೇಲ್ನೋಟಕ್ಕೆ ಭಿನ್ನ ದಿಕ್ಕಿನ ಹುಡುಕಾಟವಾಗಿ ಕಂಡರೂ ಆಳದಲ್ಲಿ ಆತ್ಮಗೌರವದ ಹುಡುಕಾಟವೇ ಆಗಿರುವುದರಿಂದ ಅವರ ಕಾವ್ಯದ ನಿಲುವುಗಳಿಗೆ ಪೂರಕವಾಗಿರುವಂತೆಯೇ ಕಾಣಿಸುತ್ತದೆ.

ಸವಿತಾ ಮೂಲತಃ ಲಯಗಳ ಹುಡುಕಾಟದ ಕವಿ. ಇದನ್ನು ಸಾಂಗತ್ಯದ ಹುಡುಕಾಟವೆಂದೂ ಕರೆಯಬಹುದು. ಈ ಲಯ, ಸಾಂಗತ್ಯವೆನ್ನುವುದು ಸಿದ್ಧಸ್ಥಿತಿಯಲ್ಲವಲ್ಲ. ಅದೊಂದು ಸಾಧಿಸಿಕೊಳ್ಳಬೇಕಾದ ಸಂದರ್ಭ ಮತ್ತು ಮನಃಸ್ಥಿತಿ. ಈ ತನಕ ಪ್ರಕಟವಾಗಿರುವ ಅವರ ನಾಲ್ಕೂ ಸಂಕಲನಗಳಲ್ಲಿ ಈ ಹುಡುಕಾಟವೆನ್ನುವುದು ಸ್ಥಾಯಿಯೆನ್ನುವಂತೆ ನಿರಂತರವಾಗಿ ನಡೆದಿದೆ. ಪ್ರಕೃತಿ – ಮನುಷ್ಯನ ನಡುವೆ ಸಾಧಿತವಾಗಬೇಕಾಗಿರುವ ಲಯ, ಸಂಬಂಧಗಳ ಬಿಕ್ಕಟ್ಟುಗಳ ನಡುವೆಯೇ ಕಟ್ಟಿಕೊಳ್ಳಬೇಕಾದ ಲಯ, ಬದುಕಿನ ಕನಸು – ವಾಸ್ತವಗಳ ನಡುವೆ ಕಟ್ಟಿಕೊಳ್ಳಬೇಕಾದ ಲಯ… ಈ ಎಲ್ಲವುಗಳನ್ನೂ ಇವರ ಕಾವ್ಯ ಹುಡುಕುತ್ತಲೇ ಇದೆ. ಹಾಗೆ ನೋಡಿದರೆ, ಸವಿತಾರ ಕಾವ್ಯದ ಶೈಲಿಯಲ್ಲಿಯೂ ಈ ಹೊಸ ಲಯದ ಹುಡುಕಾಟವಿದೆ. ಅಭಿವ್ಯಕ್ತಿಯ ನಾಟಕೀಯ ಮಾದರಿಗಿಂತ ಸಾವಧಾನದ, ಸಂಯಮದ, ಕೆಲವೊಮ್ಮೆ ಸ್ವಗತದ ಲಯದಲ್ಲಿಯೂ ಈ ಕವಿ ನಂಬಿಕೆಯಿಟ್ಟಂತೆ ತೋರುತ್ತದೆ. ಕರುಳು ಕತ್ತರಿಸುವ ಅನುಭವದ ಘಳಿಗೆಗಳನ್ನಾಗಲಿ, ಬದುಕನ್ನು ಅರಳಿಸುವ ರೋಮಾಂಚನದ ಘಳಿಗೆಗಳನ್ನಾಗಲಿ ಸವಿತಾ ಹಿಡಿಯುವುದು ಸಾವಧಾನದ ಸಂವಿಧಾನದಲ್ಲಿಯೇ.

ಇವರ ಸಾವಧಾನದ ಶೈಲಿಗೆ ಚಲನಶೀಲತೆಯನ್ನೂ, ವೈವಿಧ್ಯತೆಯ ಸೊಗಸನ್ನೂ ತಂದುಕೊಟ್ಟಿರುವ ಎರಡು ಮುಖ್ಯ ಪ್ರತಿಮೆಗಳೆಂದರೆ ಚಂದ್ರ ಮತ್ತು ಬಣ್ಣ. ಚಂದ್ರನ ಬಗೆಗಂತೂ ಸವಿತಾ ಪರವಶ ಎನಿಸುವಷ್ಟು ಮೋಹಿತರು. ‘ಚಂದ್ರನನ್ನು ಕರೆಯಿರಿ ಭೂಮಿಗೆ’ ಕವನ ಒಂದು ರೀತಿಯಲ್ಲಿ ಅವರ ‘ಮೂಲಾಶಯ’ ಎಂದರೂ ನಡೆಯುತ್ತದೆ.

 

ಕರೆಯಿರಿ ಚಂದ್ರನನ್ನು ಭೂಮಿಗೆ

ನಾನು ನಾನಿರುವಂತೆಯೇ

ನೋಡುವೆ ಒಂದು ಘಳಿಗೆ 1

 

ಚಂದ್ರ ಭೂಮಿಗೆ ಬರಬೇಕೆನ್ನುವ ಅವಾಸ್ತವ ಹಂಬಲವಿಲ್ಲದ, ಅದು ಸಾಧ್ಯವೆಂದು ಒಂದು ಘಳಿಗೆಯಾದರೂ ನಂಬದ ಮನಃಸ್ಥಿತಿ ಈ ಕವಿಯ ಮಟ್ಟಿಗೆ ಬರಡು, ಘೋರ. ಚಂದ್ರನೂ ಸೇರಿದಂತೆ ಬೆಟ್ಟ, ಗುಡ್ಡ, ಹೊಳೆ, ಆಕಾಶ, ನಕ್ಷತ್ರ, ಯಾವುದೂ ಸವಿತಾ ಮಟ್ಟಿಗೆ ಕೇವಲ ಸೌಂದರ್ಯದ ಪ್ರತಿಮೆಗಳಲ್ಲ, ಕವಿ ಸಮಯವೂ ಅಲ್ಲ. ಅವೂ ಸಜೀವ ಪಾತ್ರಗಳೇ ಆಗಿವೆ. ಈ ಪಾತ್ರಗಳೊಂದಿಗೆ ಆಕೆಗೆ ಸ್ನೇಹವಿದೆ, ಜಗಳವಿದೆ, ಅವುಗಳೊಂದಿಗೆ ಜೀವಕೊರಳ ಸಂಬಂಧವನ್ನು ಕಟ್ಟಿಕೊಳ್ಳಬೇಕೆನ್ನುವ ಆಸೆಯೂ ಇದೆ.

 

ಮಾತನಾಡಿಸಬೇಕು

ಹೊರಳುತ್ತಿರುವ ಭೂಮಿಯನ್ನು

ಉರುಳುತ್ತಿರುವ ಸಾಗರವನ್ನು

ಮಾತನಾಡಿಸಬೇಕು

ದೇವರೇ… ಇವರದ್ದು ಯಾವ ಭಾಷೆ?

ಎಂದಾದರೂ ಕೈಗೂಡುವುದೇ ಆಶೆ? 2

 

‘ಹೂವು’ ಪದ್ಯದ ಈ ಮಾತುಗಳನ್ನು ನೋಡಿ

 

ಏ ಹೂವೆ

ನಿನ್ನ ಭಾಷೆ ನನಗೆ ಅರ್ಥವಾಗುವುದು

ನನ್ನ ಆಶೆ ನಿನ್ನಂತೆ ಆಗುವುದು 3

 

ಪ್ರಕೃತಿಯ ಮೂಲ ಪ್ರತಿಮೆಗಳನ್ನೆಲ್ಲ ತಮ್ಮ ಮನೋಭೂಮಿಕೆಯ, ಸಂವೇದನೆಯ ಅಭಿನ್ನ ಭಾಗವಾಗಿಸಿಕೊಳ್ಳುವುದರ ಮೂಲಕ ಮನುಷ್ಯ – ಪ್ರಕೃತಿ ನಡುವೆ ಲಯವನ್ನು ನಿಮರ್ಿಸಿಕೊಳ್ಳುವುದು ಮಾತ್ರವಲ್ಲ, ಇದರಿಂದ ವಿಸ್ತಾರವಾಗಬಹುದಾದ ಬದುಕಿನ ಹರಹಿನ ಬಗೆಗೂ ಕವಿಗೂ ಆಸಕ್ತಿಯಿದೆ. ಆದ್ದರಿಂದಲೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಅದ್ವೈತ ಸಾಧಿಸುವ ಹಂಬಲದ ಅನೇಕ ಕವನಗಳಿವೆ. ಬುದ್ಧ ಮತ್ತು ಹೂವು ಕವನದಲ್ಲಿ ಅವರು ಹೇಳುತ್ತಾರೆ,

 

ಪೂರ್ವಜನ್ಮದ ಸ್ಮರಣೆ

ಅವನು ಹೂವಾಗಿದ್ದ 4

 

ಬುದ್ಧನು ಪ್ರೀತಿ, ಕರುಣೆ ಮುಂತಾದ ಎಲ್ಲ ಅಪರೂಪದ ಮಾನವೀಯ ಗುಣಗಳ ಸಾಕಾರ ರೂಪವಾಗಿದ್ದು ಅವನು ಹಿಂದಿನ ಜನ್ಮದಲ್ಲಿ ಹೂವಾಗಿದ್ದರಿಂದ ಎನ್ನುವ ದೃಷ್ಟಿಕೋನದಲ್ಲಿ ಇದು ಸ್ಪಷ್ಟವಾಗಿದೆ. ಈ ಭಾಗದಲ್ಲಿ ಸವಿತಾ ಅವರ ಕಾವ್ಯವನ್ನು ಮೂಲವಾಗಿಟ್ಟುಕೊಂಡು ಲೇಖಕಿಯರನ್ನು ಚಚರ್ಿಸುವ ಹೊತ್ತಿನಲ್ಲಿ, ಕನ್ನಡ ವಿಮಶರ್ೆಯು ಎದುರಿಸುವ ಕೆಲವು ಸಮಸ್ಯೆಗಳನ್ನು ಸ್ಥೂಲವಾಗಿ ವಿವರಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆರಂಭದಲ್ಲಿಯೇ ಒಂದು ಮಾತನ್ನು ಸ್ಪಷ್ಟಪಡಿಸಬೇಕು. ಕನ್ನಡದ ಯಾವ ವಿಮರ್ಶಕರೂ ಸ್ತ್ರೀವಾದದ ಬಗ್ಗೆಯಾಗಲಿ, ಲೇಖಕಿಯರ ಬಗ್ಗೆಯಾಗಲಿ ಪೂರ್ವಗ್ರಹ ಪೀಡಿತರಲ್ಲ. ಆದರೂ ಅವರು ತಲುಪುವ ತೀಮರ್ಾನಗಳು ಅನೇಕ ಬಾರಿ ಸ್ತ್ರೀವಾದಿ ಚಿಂತಕಿಯರು ತಲುಪುವ ತೀಮರ್ಾನಗಳಿಗಿಂತ ಭಿನ್ನವಾಗಿರುತ್ತವೆ. ಈ ಭಿನ್ನತೆ ಮತ್ತು ತೊಡಕುಗಳನ್ನು ಬಿಡಿಸಿಕೊಳ್ಳುವ ಉದ್ದೇಶದಿಂದ ಈ ಪ್ರಯತ್ನದಲ್ಲಿ ನನಗೆ ಆಸಕ್ತಿಯಿದೆ.

ಸವಿತಾರ ನಾಲ್ಕೂ ಸಂಕಲನಗಳ ಒಟ್ಟು ಓದಿನಿಂದ ವಾತ್ಸಲ್ಯ, ಅಂತಃಕರಣ ಮತ್ತು ತಾಯ್ತನಗಳೇ ಅವರ ಕಾವ್ಯದ ಮೂಲನೆಲೆಗಳೆಂದೂ, ವ್ಯವಸ್ಥೆಯನ್ನು ಈ ಮೂಲಗಳ ಮೂಲಕವೇ ಸವಿತಾ ಮುಖಾಮುಖಿಯಾಗುತ್ತಾರೆಂದೂ ಅಥರ್ೈಸಲು ಸಾಧ್ಯ. ಈ ಗುಣದ ಕಾರಣಕ್ಕಾಗಿಯೇ ಘೋಷಿತ ಸ್ತ್ರೀ ವಾದಿಗಳ ಬರವಣಿಗೆಗಿಂತ ಇವರ ಬರವಣಿಗೆ ಭಿನ್ನವಾಗುತ್ತದೆ ಎನ್ನುವುದೂ ನಿಜವೇ. ಆದರೆ ಕೊನೆಗೂ ಈ ಮೌಲ್ಯಗಳು, ಗುಣವಿಶೇಷಣಗಳು ಮತ್ತೆ ಹೆಣ್ಣನ್ನು ವ್ಯವಸ್ಥೆಯ ಅಪೇಕ್ಷಿತ ಚೌಕಟ್ಟಿಗೇ ತಳ್ಳಿಬಿಡುತ್ತವೆಯಾದ್ದರಿಂದ ಅಂತಿಮವಾಗಿ ಏನನ್ನು ಸಾಧಿಸಿದಂತಾಯಿತು ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಸಮಸ್ಯೆ ಶುರುವಾಗುವುದೇ ಇಲ್ಲಿಂದ. ಸಾಂಸ್ಕೃತಿಕ ಸ್ತ್ರೀವಾದ ಮತ್ತು ಲೇಖಕಿಯರ ಬರವಣಿಗೆ ಎರಡನ್ನೂ ಗ್ರಹಿಸುವ ಮತ್ತು ಅಥರ್ೈಸುವ ಕ್ರಮದಲ್ಲಿರುವ ಸಮಸ್ಯೆ ಇದು. ಕೆಲವು ಕವನಗಳ ಮೂಲಕವೇ ಇದನ್ನು ನೋಡಬಹುದು. ‘ಕೊಂಡ ಹಾಯುವಳು’ ಸವಿತಾರ ಅತ್ಯುತ್ತಮ ಕವನಗಳಲ್ಲೊಂದು

 

ಒಮ್ಮೆ ಮತ್ತೊಮ್ಮೆ

ಮಗದೊಮ್ಮೆ

ಹಾಯುವಳು ಕೊಂಡ

ನೋಡುವನವಳ ಗಂಡ

ದೂರದಿಂದಲೇ ಮಂಕಾಗಿ 5

 

ಇಲ್ಲಿ ಕೊಂಡ ಹಾಯುವುದು ಹೆಣ್ಣಿನ ಬದುಕನ್ನು ಕುರಿತ ಪ್ರತಿಮೆಯಂತೆಯೇ ಅವಳ ಶಕ್ತಿ ಕೇಂದ್ರದ ರೂಪಕವೂ ಹೌದು. ಬದುಕಿನ ಕೊನೆಯಿಲ್ಲದ ಬಿಕ್ಕಟ್ಟುಗಳನ್ನು ಈಕೆ ನಿರಂತರವಾಗಿ ಹಾಯುತ್ತಲೇ ಇದ್ದಾಳೆ. ಕೊಂಡ ಹಾಯುವುದು ಅವಳಿಗೆ ಅನಿವಾರ್ಯ ಕರ್ಮ ಎನ್ನುವುದು ಎಷ್ಟು ನಿಜವೋ ಅದು ಅವಳ ಬದುಕಿನ ಬದ್ಧತೆ ಎನ್ನುವುದೂ ಅಷ್ಟೇ ನಿಜ. ಬದುಕಿನ ಹೋರಾಟದಲ್ಲಿ ಸೋತ ಅಥವಾ ಲಕುಮಿಯ ಬದುಕಿನ ಮೂಲ ಸಮಸ್ಯೆಯೇ ಆಗಿರುವ ಗಂಡ ಮಂಕಾಗಿದ್ದಾನೆ. ಆದರೆ ಲಕುಮಿ ಮಾತ್ರ ನಿಗಿ ನಿಗಿ ಹೊಳೆಯುವ ಕೆಂಡದಂತಹ ಬದುಕಿನ ಕೊಂಡವನ್ನು ಹಾಯುವುದರಲ್ಲಿನ ತನ್ನ ಶ್ರದ್ಧೆಯನ್ನು ಕಳೆದುಕೊಂಡಿಲ್ಲ. ಈ ಇಡೀ ಸನ್ನಿವೇಶವನ್ನು ‘ಸಹನಶೀಲತೆ’ ಎಂದು, ಈ ಸಹನಶೀಲತೆಯೇ ಮೂಲವಾಗಿ ಬದುಕಿನ ಕಷ್ಟ ಪರಂಪರೆಗಳಿಗೆ ಒಳಗಾಗುವ ಅಸಹಾಯಕತೆಯಾಗಿ ಕಾಣುವ ದೃಷ್ಟಿಯೊಂದು. ಇನ್ನೊಂದು ಗಂಡು ಸೋತಾಗಲೂ, ಅಸಹಾಯಕನಾದಾಗಲೂ ಬದುಕಿಗೆ ಬೆನ್ನು ತೋರಿಸದ ಚಿತ್ತಸ್ಥೈರ್ಯದ ಹೆಣ್ಣಿನ ದೃಷ್ಟಿ. ವಿಪಯರ್ಾಸವೆಂದರೆ, ಈ ಎರಡೂ ದೃಷ್ಟಿಕೋನಗಳನ್ನೂ ಸಾಂಸ್ಕೃತಿಕ ಸ್ತ್ರೀವಾದದ ಮೂಲದಿಂದಲೇ ಪಡೆಯಲಾಗುತ್ತದೆ ಎನ್ನುವುದು.

‘ತಂಗಿ ಹುಟ್ಟಿದಳು’ ಕವನ ನೋಡಿ

 

ಹಿಡಿಯಷ್ಟಿರುವ ತಂಗಿಯನು

ಮುಡಿಯಷ್ಟಿರುವ ಅಕ್ಕ

ಅಕ್ಕರೆಯಿಂದ ಅಪ್ಪುವಳು

ಅಭಯ ನೀಡುವಳು 6

 

ಬೇಡದ ಕೂಸನ್ನು, ಹಡೆದವ್ವನಿಗೂ ಸಾಕಾದ ತಂಗಿಯನ್ನು ಇಲ್ಲಿನ ಅಕ್ಕ ಕೇವಲ ಅಕ್ಕರೆಯಿಂದ ಅಪ್ಪುವುದು ಮಾತ್ರವಲ್ಲ, ‘ಅಭಯ’ವನ್ನೂ ನೀಡುತ್ತಾಳೆ. ಈ ಕವನವನ್ನು ಅಕ್ಕರೆಯ, ವಾತ್ಸಲ್ಯದ ನೆಲೆಯಲ್ಲಿ ವ್ಯವಸ್ಥೆಯೊಂದಿಗಿನ ಮುಖಾಮುಖಿ ಎಂದು ಮಾತ್ರ ಗುರುತಿಸಿಬಿಟ್ಟರೆ, ಹೆಣ್ಣಿನ ಬದುಕಿನ ಬದಲಾವಣೆಯ ಪ್ರಕ್ರಿಯೆಯ ಒಂದು ಭಾಗವನ್ನು ಮಾತ್ರ ಗುರುತಿಸಿದಂತಾಗುತ್ತದೆ. ‘ಅಕ್ಕರೆ’ಯ (ಸಾಂಪ್ರದಾಯಿಕ ಮಾತ್ರವಲ್ಲ) ಸ್ತ್ರೀ ವಿಶಿಷ್ಟ, ಸಾರ್ವಕಾಲಿಕ ಮೌಲ್ಯದ ಜೊತೆಯಲ್ಲಿಯೇ, ‘ಅಭಯ’ದ ಹೊಸ ಮೌಲ್ಯವನ್ನೂ ನಾವು ಅವಶ್ಯವಾಗಿ ಗುರುತಿಸಬೇಕು.

‘ಕಿಟಕಿಯಲ್ಲಿ ಚಂದಿರ’ ಇನ್ನೊಂದು ಮುಖ್ಯ ಕವನ. ನಾಯಕಿಯ ಎದುರಿಗೆ ಆಯ್ಕೆಯ ಸಮಸ್ಯೆಯಿದೆ, ಗೊಂದಲವಿದೆ.

 

ಪಕ್ಕದಲ್ಲಿ ಗಂಡನಿರುವ

ತೊಟ್ಟಿಲಲ್ಲಿ ಕಂದನಿರುವ

…………………………

ಹೋಗಿಬಿಡು ಚಂದಿರ*7

 

ಇಲ್ಲಿ ಸಂಕೀರ್ಣ ಮನಃಸ್ಥಿತಿಯೊಂದರ ಚಿತ್ರಣವಿದೆ. ಇದನ್ನು ವ್ಯವಸ್ಥೆಯೊಂದಿಗಿನ ರಾಜಿ ಎಂದೂ, ಸ್ಥಾಪಿತ ಮೌಲ್ಯಗಳ ಮುಂದುವರಿಕೆಯೆಂದೂ ಮಾತ್ರ ವಿವರಿಸಿಕೊಂಡುಬಿಟ್ಟರೆ, ಸಂಕೀರ್ಣ ಮನಃಸ್ಥಿತಿಯನ್ನು ಸರಳೀಕೃತಗೊಳಿಸಿದಂತಾಗುತ್ತದೆ. ಈ ಬಗೆಯ ಸಂಕೀರ್ಣ ಮನಃಸ್ಥಿತಿಯನ್ನು ಚಂದಿರನೇ ರೂಪಕವಾಗಿ ಇತರ ಕವನಗಳಲ್ಲಿಯೂ ಸವಿತಾ ಚಿತ್ರಿಸುತ್ತಾರೆ.

 

ಆ ಚಂದಿರ ನಿನಗೆ ಜೊತೆಯಾದರೂ

ಆಗಬಹುದು ಎಂದು

ಇವಳಿಗೆ ಹೇಳಬೇಕು

ಹೇಗೆ ಹೇಳುವುದು?

 

ಅಥವಾ ‘ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು’ ಕವನದ ಈ ಸಾಲುಗಳನ್ನು ನೋಡಿ,

 

ಸಿದ್ಧಾರ್ಥನ ಪ್ರಿಯ ಮಿತ್ರ, ಮೈತ್ರಿಯೇ ಮಹಾಸೂತ್ರ

ಪ್ರೀತಿಸದೇ ಇರಲಾರೆ ಚಂದ್ರನನ್ನು 9

 

ಸಂಬಂಧಗಳ ನಡುವಿನ ಆಯ್ಕೆಯ ಮತ್ತು ಆದ್ಯತೆಯ ಪ್ರಶ್ನೆಯಾಗಿಯೇ ಇದನ್ನು ವಿವರಿಸಿಕೊಳ್ಳಬೇಕು. ಈ ಕವನಗಳು ರಚನೆಯಲ್ಲಿ ಸರಳವಾಗಿದ್ದೂ, ಸರಳ ತೀಮರ್ಾನಗಳಾಚೆಗಿನ ಹೊರಚಾಚುಗಳನ್ನು ಸೂಚಿಸುತ್ತವೆ.

 

ನಿಜ, ಮೂಲತಃ ಸವಿತಾ ಅದಮ್ಯ ಆಶಾವಾದಿ. ‘ಮೊಟೆ’್ಟ, ‘ಮಹಮ್ಮದನ ಪ್ರೇಮಪತ’್ರ, ‘ಸಮಯವಿದೆಯೆ ಪಪ್ಪಾ’, ‘ರಾಮ – ರಹೀಮ’ ಮುಂತಾಗಿ ಅನೇಕ ಉದಾಹರಣೆಗಳನ್ನು ಕೊಡಬಹುದು. ಈ ಕವನಗಳು ಮುಗ್ಧ ಆಶಾವಾದದಂತೆಯೇ ಕಾಣಿಸುತ್ತವೆ. ಮನುಷ್ಯನ ಇಚ್ಚಾಶಕ್ತಿಯ ಬಗೆಗೆ, ನ್ಯಾಯ ಮತ್ತು ಒಳಿತಿನ ಗೆಲುವನ್ನು ಕುರಿತೂ ಸವಿತಾಗೆ ಅಪಾರ ನಂಬಿಕೆ. ಚರಿತ್ರೆಯ ಎಲ್ಲ ವಿದ್ರೋಹಗಳ, ಧರ್ಮಗಳ ನಡುವಿನ ನಿರಂತರ ಘರ್ಷಣೆಯಾಚೆಗೂ ಇವರಿಗೆ ಸಾಧ್ಯವಾಗಿರುವ ಆಶಾವಾದಿತನ ಸದ್ಯದ ಸನ್ನಿವೇಶದಲ್ಲಂತೂ ವಿಲಕ್ಷಣವಾಗಿಯೇ ಕಾಣಿಸುತ್ತದೆ. ಹಾಗೆಯೇ ‘ಮೊಟ್ಟೆ’ ಕವನದಲ್ಲಿ ಮನುಷ್ಯ ತನ್ನೆಲ್ಲ ವಿಕಾರಗಳನ್ನು ಗೆದ್ದು ಬಿಡಬಹುದಾದ ಸಾಧ್ಯತೆಯೂ.

 

ಒಟ್ಟಂದದಲ್ಲಿ ಸವಿತಾ ಅಪ್ಪಟ ಮಾನವೀಯ ನೆಲೆಯನ್ನು ನಂಬಿದವರು, ಬಯಸುವವರು, ವಾತ್ಸಲ್ಯ, ಅಂತಃಕರಣ, ತಾಯ್ತನ ಈ ಎಲ್ಲ ಸ್ತ್ರೀ ವಿಶಿಷ್ಟ ಅನುಭವಗಳ ವಲಯವನ್ನು ಆಧರಿಸಿಯೇ, ಪ್ರಕೃತಿಯನ್ನು ಒಳಗೊಂಡು ಇನ್ನೂ ಹೆಚ್ಚು ಶಕ್ತವಾದ ಶ್ರೀಮಂತವಾದ, ಬದುಕಲು ಸಹನೀಯವಾದ, ಪ್ರೀತಿಸಲು ಸಾಧ್ಯವಾಗಬಹುದಾದ ಬದುಕನ್ನು ಕಟ್ಟುವುದರಲ್ಲಿ ನಿರತರಾದ ಕವಿ ಇವರು. ದೇವನೂರು ಮಹಾದೇವ ‘ಸವಿತಾ ಕಾವ್ಯ ತಂಗಾಳಿಯಂತೆ’ ಎಂದು ಹೇಳುತ್ತಾರೆ. ತಂಗಾಳಿ ಯಾವಾಗಲೂ ಬೀಸುವುದಿಲ್ಲ ಎನ್ನುವುದೇ ತಂಗಾಳಿಯನ್ನು ಕುರಿತ ಮುಖ್ಯವಾದ ಸಂಬಂಧವನ್ನು, ನಿರೀಕ್ಷೆಯನ್ನು ಹೆಚ್ಚಿಸುತ್ತದೆ, ಮಾತ್ರವಲ್ಲ ತಂಗಾಳಿಯ ಮಹತ್ವವನ್ನು ಹೇಳುತ್ತದೆ. ಸವಿತಾ ಕಾವ್ಯವನ್ನು ಕುರಿತಂತೆ ಎಲ್ಲರಿಗಿರುವ ಪ್ರೀತಿಯನ್ನು, ಭರವಸೆಯನ್ನು, ಅವರ ಕಾವ್ಯದ ಮಹತ್ವವನ್ನು ಇದಕ್ಕಿಂತ ಸಂಕ್ಷಿಪ್ತವಾಗಿ, ಇದಕ್ಕಿಂತ ಒಳ್ಳೆಯ ರೂಪಕದಲ್ಲಿ ಹೇಳಲು ಸಾಧ್ಯವಿಲ್ಲವೇನೋ. ಎಲ್ಲ ಬಗೆಯ ಮಾಲಿನ್ಯಗಳ ಈ ಕಾಲದಲ್ಲಿ ಬದುಕಿನ ಪ್ರೀತಿಯ, ಶುದ್ಧಕಾವ್ಯದ ತಂಗಾಳಿ ಹೆಚ್ಚು ಹೆಚ್ಚು ಬೀಸಲಿ.

ತಮ್ಮ ಕಾವ್ಯದ ಮೂಲಕ ಸವಿತಾ ಹೆಣ್ಣಿನ ವಿಸ್ತಾರವಾಗುತ್ತಿರುವ ಪ್ರಜ್ಞೆಯ, ಸಂವೇದನೆಯ ಜಗತ್ತನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಕಾವ್ಯದ ವಲಯವನ್ನೂ ವಿಸ್ತರಿಸುತ್ತಿದ್ದಾರೆ. ಅವರ ಕಾವ್ಯಕ್ಕೆ ಇನ್ನೂ ಹೆಚ್ಚಿನ ವಿಸ್ತಾರ, ವೈವಿಧ್ಯ ಸಾಧ್ಯವಾಗಲಿ.

 

 

(ಸವಿತಾ ನಾಗಭೂಷಣ ಅವರ ಈವರೆಗಿನ ಕವನಗಳು ‘ಕಾಡು ಲಿಲ್ಲಿ ಹೂಗಳು’ ಸಂಕಲನಕ್ಕೆ ಬರೆದ ಮುನ್ನುಡಿ [2006])

 

 

 

‍ಲೇಖಕರು G

31 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading