ಸಹನಾ ಹೆಗಡೆ
ಜಿಕೆಆರ್ ಸರ್ ಅವರ ಬರಹ, ಕವಿತೆಗಳನ್ನು ಅಲ್ಲಲ್ಲಿ ಆಗಾಗ ಓದಿದ್ದರೂ ಅವರ ಪರಿಚಯವಾಗಿದ್ದು ಕಾವ್ಯ-ಕೇಳಿ ವಾಟ್ಸಾಪ್ ಗುಂಪಿನಲ್ಲಿಯೇ. ಕೇಳಿಯ ಯಾವುದೇ ಸಂಗತಿಯಿರಲಿ, ಅವರ ಅಭಿಪ್ರಾಯ, ನಿಲುವುಗಳನ್ನು ಕಾದು ಓದುವ ಹಾಗಿರುವುದರಿಂದ ನಾನು ಅವರ ಅಭಿಮಾನಿಯಾದೆ. ಅಷ್ಟು ತೂಕದ ಮಾತುಗಳು. ಸಾಹಿತ್ಯ ಅಕಾಡೆಮಿಯ ಶಬ್ದನಾ ಕಾರ್ಯಕ್ರಮವೊಂದರಲ್ಲಿ ಅವರನ್ನು ಪ್ರಥಮ ಬಾರಿಗೆ ಭೇಟಿಯಾದೆ. ಅವರದು ನಿಜಾರ್ಥದಲ್ಲಿ ಎತ್ತರದ ನಿಲವು. ಅಖಿಲ ಭಾರತ ಮಟ್ಟದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರಸ್ತುತ ಪಡಿಸಲಾದ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಬೇಕಿದ್ದ ಸಂದರ್ಭದಲ್ಲಿ ಪಂಜಾಬಿ ಕವಿತೆಯೊಂದನ್ನು ಅನುವಾದಿಸಿ ಕೊಡುತ್ತೀರಾ ಎಂಬುದಾಗಿ ಅವರ ಕರೆ ಬಂದಾಗ ಸಂತಸವಾಗಿದ್ದು ಅಷ್ಟಿಷ್ಟಲ್ಲ. ಏನೂ ಅಲ್ಲದ ನನ್ನಲ್ಲಿ ಅಗಾಧ ವಿಶ್ವಾಸ ತೋರಿದ ಅವರು ಆ ಮೂಲಕ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದರು. ರೆಕಾರ್ಡಿಂಗ್ ಗೆ ಹೋದಾಗ ಅವರ ಛೇಂಬರ್ ಗೆ ಹೋದೆ. ತುಂಬಾ ಆತ್ಮೀಯವಾಗಿ ಮಾತನಾಡಿಸಿ, ಮಾತನಾಡಿ, ವೆಂಕಟರಾಮಯ್ಯನವರಂತಹ ಸಾಧಕರನ್ನು ಪರಿಚಯಿಸಿ, ಒಳ್ಳೆಯ ಚಹಾ ಕುಡಿಸಿ, ಶ್ರೀಮತಿ ಮಂದಾರವಲ್ಲಿಯವರ ಗುಬ್ಬಚ್ಚಿ ಸ್ನಾನ ಮತ್ತು ತಮ್ಮ ಸಪ್ತಸ್ವರ (ಅಂಕಣ ಬರಹದ) ಪುಸ್ತಕಗಳನ್ನು ಕೈಗಿತ್ತರು..
ಆಮೇಲೆ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಕೆಲವೇ ಸಮಯದ ಮಟ್ಟಿಗಾದರೂ ಭೇಟಿಯಾಗುವ ಸದವಕಾಶ..ಅಂದು ಅವರು ಆತ್ಮೀಯತೆಯಿಂದ ನೀಡಿದ ತಾರಸಿ ಮಲ್ಹಾರ್ ತುಂಬಾ ಚಂದದ ಪುಸ್ತಕ..ಒಳ್ಳೊಳ್ಳೆಯ ಬರಹಗಳು. ಅವರ ಕವನ ಸಂಗ್ರಹಗಳನ್ನಿನ್ನೂ ನಾನು ಓದಬೇಕಿದೆ. ಚೊಕ್ಕಾಡಿ ಸರ್ ಸನ್ಮಾನದ ಸಂದರ್ಭದಲ್ಲಿ ಮತ್ತೆ ಎಲ್ಲರೊಡನೆ ಮಾತುಕತೆ. ಇಷ್ಟೇ ನಾನವರನ್ನು ನೋಡಿದ್ದು. ಆದರೆ ಜೀವಮಾನದ ಪ್ರಭಾವ ಅವರು ಬೀರಿದ್ದು. ನನ್ನ ಅನುವಾದಿತ ಪುಸ್ತಕ ಸೂರ್ಯನ ನೆರಳು ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನು ಬರೆದು ನನ್ನ ಆತ್ಮವಿಶ್ವಾಸದ ಮಟ್ಟವನ್ನು ಇನ್ನೊಂದೇ ಸ್ತರಕ್ಕೆ ಒಯ್ದುಬಿಟ್ಟರು. ಅವರೊಡನೆ ಮುಕ್ತವಾಗಿ ಸಂವಹಿಸಬಹುದೆಂಬ ಭಾವನೆಯೇ ಎಷ್ಟೆಲ್ಲ Inhibitionಗಳನ್ನು ತೆಗೆದುಹಾಕುತ್ತಿತ್ತು.. ಗೊತ್ತಿರುವುದನ್ನು ಧೈರ್ಯವಾಗಿ ಹೇಳಬಹುದಿತ್ತು
ಗೊತ್ತಿಲ್ಲದಿರುವುದನ್ನು ಧೈರ್ಯವಾಗಿ ಕೇಳಬಹುದಿತ್ತು….. ನಮಗಿನ್ನೇನು ಬೇಕು?
ಅವರೊಡನಿದ್ದಾಗ, ಅವರೊಡಗೆ interact ಮಾಡುವಾಗ ಯಾವಾಗಲೂ ನನಗೆ feel ಆಗುವುದು, ಮಾತುಕತೆ- ಬರಹ- ಅಭಿಪ್ರಾಯ- ಅನಿಸಿಕೆ- ಸಂಬಂಧಗಳು ಎಲ್ಲವನ್ನೂ ‘ಜತನ’ ದಿಂದ ನೋಡಿಕೊಳ್ಳುವ ಒಂದು ಭಾವವಾಗಿತ್ತು…well balanced.ಅಂತಾರಲ್ಲ ಹಾಗೆ. ಎದುರಿಗಿದ್ದವರಲ್ಲಿಯೂ ಒಂದು secured feelingನ್ನು ಹುಟ್ಟಿಸುವ ವ್ಯಕ್ತಿತ್ವ, ಮನೋಧರ್ಮ..
ಇಂತಹ ವ್ಯಕ್ತಿಗಳೆಲ್ಲ ಇರುವ ಗುಂಪಿನಲ್ಲಿ ನಾನೂ ಇದ್ದೇನೆ ಎನ್ನುವುದೇ ನನ್ನ ಪಾಲಿನ ಹೆಮ್ಮೆ…ಯಾಗಿತ್ತು…

ಇವು ನನ್ನ ಅನುವಾದದ ಕುರಿತು ಅವರು ಬರೆದಿದ್ದ ಮಾತುಗಳು….
“ನಿಮ್ಮ ಪುಸ್ತಕವನ್ನು ವೇಳೆ ದೊರೆತಾಗೆಲ್ಲ ಓದುತ್ತಿರುವೆ. ಈ ವಾರ ರಜೆಯಲ್ಲಿರುವೆ. ಹಿಂತಿರುಗಿ ಬಂದಮೇಲೆ ಮುಂದುವರಿಸುವೆ. ತುಂಬಾ interesting ಆಗಿದೆ. ಇದರ ಆಯ್ಕೆಯೇ ನಿಮ್ಮಿಂದ ಬಹಳ ನಿರೀಕ್ಷಿಸುವಂತೆ ಮಾಡಿದೆ.ಇಷ್ಟು ಒಳ್ಳೆಯ ಭಾಷೆಯನ್ನು ನೀವು ಕಾದಿಟ್ಟುಕೊಂಡಿರುವುದು ಸುಲಭದ ಮಾತಲ್ಲ. ಮತ್ತೆ ಬರೆಯುವೆ.”
“ಸಹನಾರಿಗೆ ನಮಸ್ತೆ.
ನಿಮ್ಮ ಕೃತಿ ಓದಿದೆ. ಅಭಿನಂದನೆಗಳು. ಗಂಭೀರ ಮತ್ತು ಗಮನಾರ್ಹ ಕೃತಿ ನೀಡಿರುವಿರಿ. ಇಂಥದೊಂದು ಪುಸ್ತಕವನ್ನು ಆಯ್ದುಕೊಳ್ಳುವಲ್ಲಿಯೇ ನಿಮ್ಮ ಆಸಕ್ತಿ ಮತ್ತು ಆ ಕುರಿತ ಕಾಳಜಿ ತಿಳಿಯುತ್ತದೆ. ಈ ಮೂಲಕ ಕಪುಶಿನ್ ಸ್ಕಿಯನ್ನು ಕನ್ನಡಕ್ಕೆ ಪರಿಚಯಿಸಿರುವಿರಿ. ದಿವಾಕರರ ಮುನ್ನುಡಿ ಅತ್ತ್ಯುತ್ತಮ ಪ್ರವೇಶಿಕೆಯಾಗಿದೆ. ಆಫ್ರಿಕಾ ದೇಶಗಳ ಸ್ಥಿತಿಗತಿಗಳ ಬಗ್ಗೆ ಅದ್ಭುತ ಒಳನೋಟಗಳಿವೆ. ನಾಗರಿಕತೆಯ ಏಳುಬೀಳು, ಅಭಿವೃದ್ಧಿಯ ಹುಸಿಕಲ್ಪನೆ, ಜೀವನ ಹೋರಾಟ, ಹಸಿವು, ಕ್ರೌರ್ಯ, ನಿರಾಶ್ರಿತ ಕನಸು, ವಾಸ್ತವಿಕ ತತ್ವಾರಗಳ ಲೋಕವನ್ನು ದಟ್ಟವಾಗಿ ಪರಿಚಯಿಸಿದೆ. ಕಪುಶಿನ್ ಸ್ಕಿಯಂತಹ ಸಾಹಸಿ ಪತ್ರಕರ್ತರ ಅಗತ್ಯವನ್ನು ಮನಗಾಣಿಸುತ್ತದೆ. ಅವರ ಉಳಿದ ಕೃತಿಗಳನ್ನೂ ಓದುವ ಹಂಬಲ ಮೂಡಿಸಿದೆ.
ಸಮಕಾಲೀನ ಇತಿಹಾಸದ ರಚನೆ ಮತ್ತು ಪುನರ್ರಚನೆಯ ಕುರಿತು ಗಂಭೀರವಾಗಿ ಆಲೋಚಿಸಲು ಇದು ಸಹಾಯ ಮಾಡುತ್ತದೆ. ಚರಿತ್ರೆ ಮತ್ತು ನಾಗರಿಕತೆಯನ್ನು ಕುರಿತಾದ ನಮ್ಮ ತಿಳಿವಳಿಕೆಗಳು ಎಷ್ಟು ಹರಿತವಾಗಬೇಕಿವೆ ಎಂಬುದನ್ನೂ ಈ ಕೃತಿ ಸೂಚಿಸುತ್ತದೆ.
ನಿಮ್ಮ ಅನುವಾದ ಅತ್ಯಂತ ಶ್ರದ್ಧೆಯಿಂದ ಕೂಡಿದೆ. ಅನುವಾದದ ಸೂಚನೆಯನ್ನೇ ಕೊಡದಷ್ಟು ನಿಷ್ಠೆ ಮತ್ತು ಸ್ವಂತಿಕೆಯಿದೆ. ಇಂತಹ ಕೃತಿಯನ್ನು ಅನುವಾದಿಸಲು ಧೈರ್ಯ ಬೇಕು. ನಿಮ್ಮ ಈ ಆಯ್ಕೆ ಮತ್ತು ಇಲ್ಲಿಯ ಯಶಸ್ಸು ಮುಂದೆ ನಿಮ್ಮಿಂದ ಹೆಚ್ಚಿನದನ್ನು ಅಪೇಕ್ಷಿಸುವಂತೆ ಮಾಡಿದೆ. ಶುಭಾಶಯಗಳು. ಹಿಂದೆ ರುವಾಂಡದಲ್ಲಿ ನರಮೇಧವಾಗುತ್ತಿದ್ದಾಗ ನಾನು ಕವಿತೆಯೊಂದನ್ನು ಬರೆದಿದ್ದೆ. ಅದು ನೆನಪಾಯಿತು, ಹಂಚಿಕೊಳ್ಳುತ್ತಿದ್ದೇನೆ.”
ಕವಿತೆಯ ಅನುವಾದವನ್ನು ಕುರಿತು ಅವರು ಮೇಸೇಜ್ ಮಾಡಿದ್ದ ಪ್ರೋತ್ಸಾಹದ ಮಾತು…”ನಿಮ್ಮ ಭಾಷಾ ಬಳಕೆ ಬಂಧ ಎಲ್ಲ ತುಂಬ ಹಿತವಾಗಿವೆ.
ತುಂಬ ಶ್ರದ್ಧೆಯಿಂದ ಮಾಡಿದ್ದೀರಿ. ಕೊನೆಯ ಸಾಲೂ interesting ಆಗಿದೆ .ಆಯ್ತು ಸರಿ ಮಾಡಿಕಳಿಸಿ.
ಪದ್ಯದ ಆರಂಭ ಕುತೂಹಲಕಾರಿಯಾಗಿದೆ. ಆಮೇಲೆ ಅದು sustaine ಆಗಿಲ್ಲ ಅನಿಸಿತು.”
“Very good. ಈಗ ತೃಪ್ತಿಯೆನಿಸುತ್ತದೆ. ನಿಮ್ಮ ಪ್ರಯತ್ನಕ್ಕೆ ,ಆಸಕ್ತಿಗೆ ಶಭಾಷ್. ಇವೊತ್ತು ಕವಿ ಜೊತೆಗೂ ಮಾತಾಡಿ ಬೇಕಿದ್ದರೆ. ನಿನ್ನೆ ಕವಿಗೋಷ್ಠಿ ಚೆನ್ನೈನಲ್ಲಿ ಮುಗಿದಿದೆ.”
ಇಷ್ಟೆಲ್ಲ ಪ್ರೋತ್ಸಾಹ, ಬೆಂಬಲ, ಆಪ್ತ ನುಡಿಗಳಿಗೆ ಇನ್ನು ನಾನು, ನನ್ನಂತಹ ಅದೆಷ್ಟೋ ಜನ ಯಾವ ಕಡೆ ಮುಖ ಮಾಡಬೇಕು? …
ಸರ್ ….
ಹೋಗಲೇಬೇಕಿತ್ತಾ?






ಭಾವಪೂರ್ಣ ಶ್ರದ್ಧಾಂಜಲಿಯಾಗಿದೆ ಈ ನಿಮ್ಮ ಬರಹ