2010ರಲ್ಲಿ ಟ್ಯುನೀಷಿಯಾದಲ್ಲಿ ಹೊತ್ತಿಕೊಂಡ ಈ ಕಿಡಿ ಈಜಿಪ್ತ್, ಲಿಬಿಯಾ, ಸಿರಿಯಾ, ಯೆಮನ್, ಬಹರೈನ್, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಗಳನ್ನು ದಾಟಿ ನೇರವಾಗಿ ದಿಲ್ಲಿಯ ಜಂತರ್ ಮಂತರ್ ಗೆ ಬಂದು ಝಂಡಾ ಊರಿಯೇ ಬಿಟ್ಟಿತು; ಇದು “ಅರಬ್ ಸ್ಪ್ರಿಂಗ್” ನ ಅವಳಿ ಸಹೋದರ ಜೋಡಿ ಎಂದೆಲ್ಲ ಪುಂಖಾನುಪುಂಖವಾಗಿ ಊದಿದ್ದ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾ ಭಾರತಕ್ಕೂ ಸೀಮೆ ಎಣ್ಣೆ ಸುರಿದು, ಕಡ್ಡಿ ಕೀರಿ ಬೆಂಕಿ ಹಚ್ಚಿಯೇ ಬಿಟ್ಟಿದ್ದವು.
ಆರು ವರ್ಷಗಳ ಹಿಂದೆ 2011 ಎಪ್ರಿಲ್ 5ಕ್ಕೆ ದಿಲ್ಲಿಯ ಜಂತರ್ ಮಂತರ್ ನಲ್ಲಿ ಅಣ್ಣಾ ಹಜಾರೆ ಎಂಬ ರಾಲೇಗಣಸಿದ್ಧಿಯ ಅಣ್ಣಯ್ಯ “ಮೈ ಭೀ ಗಾಂಧಿ” ಎಂದು ಘೋಷಿಸಿಬಿಟ್ಟಿದ್ದರು. ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರುವ ತನಕ ಅನ್ನ-ನೀರು ಮುಟ್ಟುವುದಿಲ್ಲ ಎಂದು ಕುಳಿತ ಈ ಅಭಿನವ ಗಾಂಧಿಗೆ ದೇಶದಾದ್ಯಂತ ಮಾಧ್ಯಮ ಪ್ರೇರಿತ ಬೆಂಬಲ ವ್ಯಕ್ತವಾಯಿತು. ಕೊನೆಗೆ ಸರಕಾರ ಜನಲೋಕಪಾಲ ಮಸೂದೆ ಕರಡು ಸಿದ್ಧಪಡಿಸಲು ಮುಂದಾಗಬೇಕಾಯಿತು.
ಇದೇ ವೇಳೆಗೆ ಭಾರತ ಸ್ವಾಭಿಮಾನ ಆಂದೋಲನ್ ಎಂಬ ಹೆಸರಿನಲ್ಲಿ ವಿದೇಶದಲ್ಲಿ ಅಡಗಿರುವ ಭಾರತದ ಕೋಟಿ ಕೋಟಿ ರೂಪಾಯಿಗಳ ಸಂಪತ್ತನ್ನು ವಾಪಸ್ ತರುವ ಆಂದೋಲನ ದಿಲ್ಲಿಯ ರಾಮಲೀಲಾ ಮೈದಾನವನ್ನು 40 ದಿನಗಳಿಗೆ ಬುಕ್ ಮಾಡುವ ಮೂಲಕ ಜೂನ್ 4, 2011ರಂದು ಆರಂಭವಾಯಿತು ಮತ್ತು ಜೂನ್ 5ರಂದು ಅಲ್ಲಿಗೆ ಪೊಲೀಸ್ ದಾಳಿ ನಡೆದು ಬಾಬಾ ರಾಮ್ ದೇವ್ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ – ಪತಂಜಲಿ ಎಂಬ ಮೆಗಾಬ್ರಾಂಡ್ ಲೋಕಮುಖಕ್ಕೆ ಪರಿಚಿತವಾಯಿತು. ಪರಿಣಾಮವಾಗಿ 2009-10ರಲ್ಲಿ ಬರೀ 163 ಕೋಟಿ ರೂಪಾಯಿಗಳದಾಗಿದ್ದ ಈ ದೇಸೀ ಬ್ರಾಂಡ್ ಊರ್ಧ್ವಮುಖಿಯಾಗಿ ಬೆಳೆಯತೊಡಗಿ, ಇಂದು 16-17ಕ್ಕೆ 10,000 ಕೋಟಿ ರೂಪಾಯಿಗಳ ಅಲ್ಟ್ರಾ ಮೆಗಾ ಬ್ರಾಂಡ್ ಆಗಿ ಬೆಳೆದು ನಿಂತಿದೆ.
ಈ ನಡುವೆ, 2011 ಆಗಸ್ಟ್ ವೇಳೆಗೆ ಟೀಮ್ ಅಣ್ಣಾ ಮತ್ತು ಟೀಮ್ ಸರಕಾರಗಳ ನಡುವಿನ ಜಗಳಬಂದಿ ತಾರಕಕ್ಕೇರುತ್ತಾ ಸಾಗಿ, ಆಗಸ್ಟ್ 15, 2011ರಂದು ಅಣ್ಣಾ ತಾನು ಮರುದಿನದಿಂದ ಮತ್ತೆ ಉಪವಾಸ ಕೂರಲಿದ್ದೇನೆ ಎಂದು ಪ್ರಕಟಿಸಿದರು. ಸರಕಾರ ಅಣ್ಣಾ ತಂಡವನ್ನು ಮುನ್ನೆಚ್ಚರಿಕೆ ಬಂಧನಕ್ಕೆ ಗುರಿಪಡಿಸಿದಾಗ ದೇಶದಾದ್ಯಂತ ಎದ್ದ “ಮೈ ಭೀ ಅಣ್ಣಾ” ಕೂಗು ಮುಂದಿನ 12 ದಿನಗಳ ಕಾಲ ದೇಶವನ್ನು ಮತ್ತು ಅಂದಿನ ಕೇಂದ್ರ ಸರಕಾರವನ್ನು ಅಂತರಾಟದಲ್ಲಿ ನಿಲ್ಲಿಸಿತು.
ಹೀಗೆ ಆರಂಭಗೊಂಡು, ಆಯಕಟ್ಟಿನ ಸಮಯಗಳಲ್ಲೆಲ್ಲ ತನ್ನನ್ನು ಉಂಟುಮಾಡಿಕೊಳ್ಳುತ್ತಾ ಹೋದ ಈ ಆಂದೋಲನ, ಮುಂದೆ 2014ರಲ್ಲಿ ದಿಲ್ಲಿಯಲ್ಲಿ ಕೇಜ್ರಿವಾಲ್ ನೇತ್ರತ್ವದ ಆಮ್ ಆದ್ಮಿ ಪಕ್ಷದ ಸರಕಾರ ಮತ್ತು ಕೇಂದ್ರದಲ್ಲಿ ನರೇಂದ್ರಮೋದಿ ನೇತ್ರತ್ವದ ಸರ್ಕಾರಗಳು ಆಡಳಿತಕ್ಕೆ ಬರಲು ಕಾರಣವಾದದ್ದು ಈಗ ಚರಿತ್ರೆ.
ಹೀಗೆ ಅಂದಿನ ಸರ್ಕಾರದ ಮೂಗು ಒತ್ತಿ ಬಾಯಿ ಕಳೆಯಿಸುವ ಮೂಲಕ 2013 ಡಿಸೆಂಬರ್ ವೇಳೆಗೆ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ 2013 ಜಾರಿಗೆ ಬಂದಿತ್ತು.
ಈ ಇಡಿಯ ಆಂದೋಲನದ ಬ್ಯಾಕ್ ಸೀಟ್ ಚಾಲನೆ ನಡೆಸಿತ್ತೆನ್ನಲಾದ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ ಈವತ್ತಿಗೂ ಲೋಕಪಾಲರ ನೇಮಕ ಆಗಿಲ್ಲ. ಕಾಯಿದೆಯನ್ವಯ ಲೋಕಾಯುಕ್ತರ ನೇಮಕಕ್ಕೆ ಪ್ರಧಾನಿ, ಸ್ಪೀಕರ್, ಪ್ರತಿಪಕ್ಷ ನಾಯಕರು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮತ್ತು ಒಬ್ಬರು ನ್ಯಾಯ ತಜ್ನರನ್ನೊಳಗೊಂಡ ಸಮಿತಿ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಆದರೆ ಪ್ರತಿಪಕ್ಷ ನಾಯಕರಾಗಲು ಈಗ ಅಸ್ತಿತ್ವದಲ್ಲಿರುವ ಅತಿದೊಡ್ಡ ಪ್ರತಿಪಕ್ಷದ (ಕಾಂಗ್ರೆಸ್) ಬಳಿ ಅಗತ್ಯ ಸಂಖ್ಯೆ ಇಲ್ಲದಿರುವ ನೆಪದಲ್ಲಿ ವಿಳಂಬ ಮಾಡಲಾಗುತ್ತಿದೆ. ಈ ವಿಳಂಬವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಲಾಗಿದ್ದು, ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ನ್ಯಾಯಾಲಯದ ಮುಂದೆ ಈಗ ಲೋಕಪಾಲರ ನೇಮಕಾತಿ ಮಾಡಲು ಆಯ್ಕೆ ಸಮಿತಿಯಲ್ಲಿ ಪ್ರತಿಪಕ್ಷ ನಾಯಕರ ಅರ್ಹತೆಗೆ ಆಗಬೇಕಾಗಿರುವ ತಾಂತ್ರಿಕ ಬದಲಾವಣೆಗೆ ಪಾರ್ಲಿಮೆಂಟು ಇನ್ನೂ ಒಪ್ಪಿಗೆ ನೀಡಿಲ್ಲ ಎಂಬ ಕಾರಣ ನೀಡಿ, ಲೋಕಪಾಲರ ನೇಮಕ ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಹಾಗಾಗಿ ಇಡಿಯ ಲೋಕಪಾಲ ನೇಮಕ ಪ್ರಕ್ರಿಯೆ ಈವತ್ತು ತಳಕಚ್ಚಿ ಕೂತಿದೆ. ಹಿಂದೆಲ್ಲ ಕ್ಷಣಕ್ಷಣಕ್ಕೂ ಎದ್ದು ಸಂಚಲನ ಮೂಡಿಸುತ್ತಿದ್ದ ಅಣ್ಣಾ ಮತ್ತವರ ಟೀಮ್ ಈವತ್ತು ಕಣ್ಣುಗಳಿಗೆ ಗಾಂಧಾರಿ ಪಟ್ಟಿ ಕಟ್ಟಿಕೊಂಡು ಕುಳಿತಿದೆ. ಅದಕ್ಕಿಂತ ಮಿಗಿಲಾಗಿ, ದೇಶದ ನ್ಯಾಯವಂತ ಪತ್ರಿಕೆಗಳು ಈ ಬಗ್ಗೆ ಮರೆತೇ ಬಿಟ್ಟಿದ್ದು, “ಸರ್ ಜೀ ಕಲ್ ಸ್ಟ್ರೈಕ್” ಎನ್ನುತ್ತಿವೆ! ನಮ್ಮ ದೇಶದ ಮಾಧ್ಯಮಗಳ ಮುಖಕ್ಕೆ ಇದಕ್ಕಿಂತ ಒಳ್ಳೆಯ ಕನ್ನಡಿ ಬೇಕೇ?





0 Comments