ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಸರ್ರಾ, ನಾನ್ ಉತ್ಪ್ರೇಕ್ಷೆಯಿಂದ ಮಾತನಾಡುತ್ತಿಲ್ಲ್ರೀ. ನಿಜ ಹೇಳ್ತೀನಿ..''

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 24

ಬಸಪ್ಪನ ಸೋದರಾತಿಥ್ಯ

avadhi-column-rahul bw-edited2

ದುರ್ಗಾದೇವಿಯ ದೇವಸ್ಥಾನದ ಎದುರಿಗೇ ಇದ್ದ ಎಂ.ಬಿ.ಪಾಟೀಲ ಪ್ರೌಢಶಾಲೆಯನ್ನು ತಲುಪಿದೆ. ನನಗೆ ಆ ರಾತ್ರಿಯ ಮಟ್ಟಿಗೆ ಉಳಿದುಕೊಳ್ಳಲು ವಾಸ್ತವ್ಯದ ವ್ಯವಸ್ಥೆ ಮಾಡಿಕೊಡುವಂತೆ ಕೋರಿಕೊಂಡಾಗ, ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕಲಿಸುತ್ತಿರುವ ಶಿಕ್ಷಕ ಬಸವರಾಜ್ ಎಲಿಗಾರ್ ಅಲಿಯಾಸ್ ಬಸಪ್ಪರವರು ನನ್ನನ್ನು ತಮ್ಮ ಮನೆಗೇ ಕರೆದುಕೊಂಡು ಹೋದರು.
ತುಸು ದೂರದಲ್ಲೇ ಇದ್ದ ಅವರ ಮನೆ ತಲುಪಿದಾಗ ಅವರ ಐದು ವರ್ಷದ ಮಗ ಓಡಿ ಬಂದು ನನ್ನನ್ನು ‘ಅಣ್ಣಾ’ ಎಂದು ಬಿಗಿಯಾಗಿ ಅಪ್ಪಿಕೊಂಡನು. ನನಗೂ ಹಾಗೂ ಬಸಪ್ಪನವರಿಗೂ ಅಚ್ಚರಿಯೋ ಅಚ್ಚರಿ. ಮಗುವೇ ನನ್ನ ಕೈ ಹಿಡಿದುಕೊಂಡು ಒಳಗೆ ಕರೆದುಕೊಂಡು ಹೋಗಿ ನನ್ನ ಜೊತೆ ತುಸು ಹೊತ್ತು ಆಟವಾಡಿದ. ಅಮ್ಮ ಮತ್ತು ಮಗು ಪ್ರತೀ ಶುಕ್ರವಾರದಂತೆ ಆ ದಿನವೂ ಅಜ್ಜನ ಊರಿಗೆ ಹೊರಟಿದ್ದರಿಂದ, ನನ್ನನ್ನು ತಮ್ಮ ಜೊತೆ ಊರಿಗೆ ಬರುವಂತೆ ಒತ್ತಾಯಿಸಿದ. ಈ ಮಗುವ ಗುಣವೇ ಹೀಗೆಯೋ? ಅಥವಾ ನನ್ನನ್ನು ಬೇರೆ ಯಾರೋ ಎಂದು ತಪ್ಪು ತಿಳಿಯಿತೇ? ಎಂಬ ಪ್ರಶ್ನೆ ಮೂಡಿತು.
avadhi- column- rahul- low res- editedಬಸಪ್ಪನವರು ಅವರಿಬ್ಬರನ್ನು ಕರೆದುಕೊಂಡು ಹರಿಹರದಲ್ಲಿ ಊರಿಗೆ ಬಸ್ಸನ್ನೇರಿಸಿ ಬಂದರು. ನಂತರ ನಾವಿಬ್ಬರೂ ಕೂಡಿ ಹರಿಹರದ ರಾಮಕೃಷ್ಣಾಶ್ರಮಕ್ಕೆ ಹೋಗಿ ಅಲ್ಲಿ ನಡೆಯುತ್ತಿದ್ದ ಗುರು ಪೂರ್ಣಿಮೆಯಲ್ಲಿ ಪಾಲ್ಗೊಂಡೆವು. ಪಾರ್ಥನೆಯ ನಂತರ ಪ್ರಸಾದ ವಿನಿಮಯವಾಯಿತು. ನಂತರ ನನಗೆ ಸ್ವಾಮೀಜಿಯವರ ಪರಿಚಯವಾಯಿತು. ನನ್ನ ನಂಬಿಕೆಯ ಅನುಗುಣವಾಗಿ ಕೆಲಸ ಮಾಡಿದ್ದೇ ಆದರೆ ಈ ಪ್ರಯಾಣ ನಾನು ಅಂದುಕೊಂಡ ಯಶಸ್ಸು ಸಿಗುತ್ತದೆಂಬ ಭರವಸೆ ನೀಡಿದರು. ಲೋಕದ ಜನರ ಜೊತೆ ಹೆಣಗುವುದು ಅಷ್ಟು ಸುಲಭವಲ್ಲ ಎಂಬ ಎಚ್ಚರಿಕೆಯನ್ನೂ ಕೊಟ್ಟರು. ನಾನು ಏನು ಮಾತನಾಡದೇ ನನ್ನ ಕಿವಿಗಳಿಗೆ ಕೆಲಸಕೊಟ್ಟೆ.
ಇಷ್ಟೆಲ್ಲಾ ಆಶಾವಾದದ ಮಾತುಗಳ ಪಾತ್ರೆಯಲ್ಲಿ ಹುಳಿ ಹಿಂಡಲು ಯಾರಾದರೂ ಇರಬೇಕಲ್ಲವೇ? ತನ್ನ ಮುಖವನ್ನು ಗಂಟಿಕ್ಕಿಕೊಂಡು ನಮ್ಮ ಮಾತುಗಳನ್ನು ಕೇಳುತ್ತಿದ್ದ ಒಬ್ಬರನ್ನು ಸ್ವಾಮೀಜಿಯವರು ಪ್ರತಿಕ್ರಿಯೆ ಕೇಳಿದರು. ತಾನು ಬರೀ ವಾಸ್ತವವನ್ನು ಮಾತನಾಡುವ ಋಷಿಮುನಿಯಂತೆ ಬಿಂಬಿಸಿಕೊಂಡ ಅವರ ಮಾತಿನ ಉದ್ದಕ್ಕೂ ನಿರಾಶಾವಾದದ ಗಂಧವಿತ್ತು. ಸ್ವಾಮೀಜಿಯು ನನ್ನ ಪ್ರತಿಕ್ರಿಯೆ ಕೇಳಿದರು. ಅದಕ್ಕೆ ನಾನು
“ತಾವು ಅನ್ಯತಾ ಭಾವಿಸಬಾರದು. ನಾನು ಇಂತಹ ಚರ್ಚೆಗಳಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ. ಸಮಸ್ಯೆಗಳನ್ನು ಒದರುವ ವಿದ್ವಾಂಸರು ನಮ್ಮ ದೇಶದಲ್ಲಿ ಬಹಳ ಜನರಿದ್ದಾರೆ. ಇಂತಹ ಅರಳೀಕಟ್ಟೆ ಚರ್ಚೆಗಳಿಂದ ಸಮಸ್ಯೆಗಳು ಮಾಯವಾಗುವುದಿಲ್ಲ.” ಎಂದು ಹೇಳಿದೆ.
ನಮ್ಮ ಋಷಿ ಮುನಿಯ ಯಜ್ಞವನ್ನು ನೀರೆರಚಿ ಭಂಗಮಾಡಿದ್ದಾಯಿತು. ತನ್ನನ್ನು ತಾನು ನಿಭಾಯಿಸಿಕೊಂಡು ಮತ್ತೆ ಮಾತಾಡಲು ಶುರುಮಾಡಿದವರು ಯಾವುದೋ ಪ್ರತಿಷ್ಟಿತ ಕಾಲೇಜಿನ ಪ್ರಾಂಶುಪಾಲರು ಎಂಬುದು ನನಗೆ ನಂತರ ಗೊತ್ತಾಯಿತು. ಅಂತಹ ದೊಡ್ಡ ಸ್ಥಾನದಲ್ಲಿದ್ದುಕೊಂಡು ತನ್ನಲ್ಲಿರುವ ಯುವ ಸಮೂಹವನ್ನು ಬಳಸಿಕೊಂಡು ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡದೇ ಬರೀ ಟೊಳ್ಳು ಮಾತನಾಡುವವರ ಇಂತಹ ನಾಯಕತ್ವದಲ್ಲಿ ಒಬ್ಬ ಸಮಾಜಮುಖಿ ನಾಗರೀಕ ಹೊರ ಹೊಮ್ಮುವುದು ಸಾಧ್ಯವೇ? ಎಂಬ ಪ್ರಶ್ನೆ ಮೂಡಿತು. ಆ ಋಷಿಮುನಿ ಆಶ್ರಮದಿಂದ ತೊಲಗಿದ ನಂತರ ಸ್ವಾಮೀಜಿಯವರು ನನ್ನ ಜೊತೆ ಮಾತಾಡಿ ನನ್ನಲ್ಲಿ ಮತ್ತೆ ಆಶಾಭಾವನೆ ಮೂಡಿಸಿದರು. ಅವರ ಆಶಿರ್ವಾದ ಪಡೆದು ಪ್ರಸಾದವನ್ನು ಸ್ವೀಕರಿಸಿ ಮನೆ ಸೇರಿದೆವು.
ಬಸಪ್ಪನವರ ಸ್ನೇಹಿತರಾದ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾದ ಮಂಜುನಾಥ್‍ರವರ ಪರಿಚಯವಾಯಿತು. ವಿಜ್ಞಾನದ ಬಗ್ಗೆಯಾಗಲಿ, ಊಟ ತಿಂಡಿಗಳ ಪ್ರಕಾರದಲ್ಲಾಗಲಿ, ಜೀವನದ ಮಜಲುಗಳ ಬಗ್ಗೆಯಾಗಲೀ ಅವರು ಬಹಳ ತಿಳಿದಂತಹವರು ಎನಿಸಿತು. ಗಿಡಮೂಲಿಕೆಗಳು ಮತ್ತು ಆಹಾರ ಪದ್ಧತಿಯ ಬಗ್ಗೆ ಅವರಿಗಿದ್ದ ಜ್ಞಾನ ನನ್ನನ್ನು ಅಗಾಧವಾಗಿ ಸೆಳೆಯಿತು. ಮಂಜುರವರು ಹೋದ ನಂತರ ನಾನು ಮತ್ತು ಬಸಪ್ಪನವರು ತಡ ರಾತ್ರಿಯವರೆಗೂ ನಮ್ಮ ಮಾತು ಮುಂದುವರಿಸಿದೆವು.
ಬಸಪ್ಪನವರ ವಿದ್ಯಾರ್ಥಿ ಜೀವನದಲ್ಲಿ ನಡೆದ ಘಟನೆಗಳು, ಹೋರಾಟಗಳು, ಅವರಿಗಿದ್ದ ಎಡ ಪಂಥೀಯ ಮತ್ತು ಬಲ ಪಂಥೀಯರ ಜೊತೆಗಿನ ಒಡನಾಟ, ಹೋರಾಟದಿಂದ ಆಧ್ಯಾತ್ಮದ ಕಡೆಗೆ ತಿರುಗಿದ ಕಾರಣ, ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಚಿಂತನೆಗಳು ಮತ್ತು ಇನ್ನಿತರರ ವಿಷಯಗಳ ಬಗ್ಗೆ ಬಹಳ ಚರ್ಚೆಮಾಡಿದೆವು. ಸುಂದರ್‍ಲಾಲ್ ಬಹುಗುಣ, ಎಲ್ಲಪ್ಪ, ಸುರೇಶ್ ಹೆಬ್ಳಿಕರ್, ಮೇಧಾ ಪಾಟ್ಕರ್, ಚ.ನ.ಅಶೋಕ ಹಾಗೆಯೇ ಸಾಲು ಮರದ ತಿಮ್ಮಕ್ಕನ ಕೆಲಸಗಳ ಬಗ್ಗೆಯೂ ಚರ್ಚೆಗಳಾದವು. ಆದರೆ ನನಗೆ ಬಹಳವಾಗಿ ಕಾಡಿದ್ದು, ನನ್ನನ್ನು ಯೋಚನಾಕ್ರಾಂತನಾಗಿ ಮಾಡಿ ನಿದ್ರೆ ಬರದಂತೆ ಮಾಡಿದ್ದು ಅವರ ಈ ಕೆಳಗಿನ ಮಾತುಗಳು.
“ಸರ್ರಾ, ನಾನ್ ಉತ್ಪ್ರೇಕ್ಷೆಯಿಂದ ಮಾತನಾಡುತ್ತಿಲ್ಲ್ರೀ. ನಿಜ ಹೇಳ್ತೀನಿ. ನಿಮ್ಮಲ್ಲಿ ಏನೋ ಒಂದು ತರಹ ಸಳೆತ ಐತಿ. ನೀವು ಹೋದಲೆಲ್ಲಾ ಒಂದು ದೊಡ್ಡ ಆಶಾಭಾವನೆ ಶಕ್ತಿ ಅಂದ್ರಾ ಪಾಸಿಟಿವ್ ಎನರ್ಜಿ ಹೋಯ್ತಿದ್ದೀರಿ” ಎಂದರು. ನಾನು ಕತ್ತಲೆಯಲ್ಲಿ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. “ನಿಮ್ಗಾ ಆ ಪ್ರಕೃತಿ ಅಂತಹ ಶಕ್ತಿ ಕೊಟ್ಟಾಳ. ನೀವ್ ಬಂದ್ ಕೇಳ್ದಾಗ, ಆ ಕೇಳಿದ ರೀತಿ ನನ್ನನ್ನು ಎರಡೇ ಕ್ಷಣದಲ್ಲಿ ಸೆಳೆದುಬಿಟ್ಟಿತು. ಕೆಲವೇ ಕ್ಷಣಗಳಲ್ಲಿ ನಿಮ್ಮನ್ನ ನಮ್ ಮನೀಗಾ ಕರ್‍ಕೊಂಡ್ ಹೋಗ್‍ಬೇಕು ಅಂತಾ ನಿರ್ಧರಿಸಿಬಿಟ್ಟೆ. ಮನೇಗ್ ಬಂದ ತಕ್ಷಣ ನನ್ನ ಮಗಾ ಎಷ್ಟೋ ವರ್ಷದ ಬಾಂಧವ್ಯವಿದ್ದಂತೆ ನಿಮ್ಮನ್ನು ಓಡಿಬಂದು ತಬ್ಬಿಕೊಂಡು ಮುದ್ದಾಡಿದ. ಪರಿಚಯಸ್ತರಲ್ಲದವರ ಜೊತೆ ಅವನು ಹಾಗೆ ಅಕ್ಕರೆಯಿಂದ ಮಾತನಾಡಿದ್ದೇ  ಕಂಡಿಲ್ಲ” ಎಂದರು. ನಾನು ಅವರು ಹೇಳಿದ್ದೆಲ್ಲಾ ನಿಜವೇ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ನಿದ್ರೆಗೆ ಜಾರಿದೆ.
ಶನಿವಾರ ಬೆಳಿಗ್ಗೆ ಬೇಗನೇ ಶಾಲೆ ಶುರುವಾಗುವುದರಿಂದ ನಾವು ಬೇಗನೇ ಎದ್ದು ಸ್ನಾನ ಮುಗಿಸಿ ಶಾಲೆಗೆ ದೌಡಾಯಿಸಿದೆವು. ನಾವು ಹೋದಾಗ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡುತ್ತಿದ್ದರು. ನಿಂತು ಗೌರವಕೊಟ್ಟೆವು. ನಂತರ ಮುಖ್ಯೋಪಾಧ್ಯಾಯರು ಮೊದಲ ಅಂತಸ್ತಿನ ಒಂದು ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ನನ್ನ ಉಪನ್ಯಾಸಕ್ಕೆ ಅನುವು ಮಾಡಿಕೊಟ್ಟರು. ಬಸವರಾಜುರವರು ನನಗೆ ಸ್ವಾಗತ ಭಾಷಣಮಾಡಿದರು. ಬುದ್ಧನ ಮಗನ ಹೆಸರೂ ರಾಹುಲ್, ಇವರ ಹೆಸರೂ ರಾಹುಲ್ ಎಂದು ನನ್ನನ್ನು ಬಣ್ಣಿಸಿದರು.
friendsನಂತರ ಶುರುವಾದ ನನ್ನ ಉಪನ್ಯಾಸ ಮಕ್ಕಳ ಸಣ್ಣ ಪುಟ್ಟ ತಪ್ಪುಗಳನ್ನು ಸರಿದೂಗಿಸಿಕೊಂಡು ಸಂವಾದ ನಡೆಸಿ, ತಮಾಷೆಯ ನಾಟಕಗಳ ಜೊತೆಯಲ್ಲಿ ಮುಗಿಯಲು ಎರಡು ಗಂಟೆ ಹಿಡಿಯಿತು. ಅಲ್ಪ ಗದ್ದಲದಿಂದಲೇ ಶುರುವಾಗಿದ್ದ ಉಪನ್ಯಾಸ, ಮುಗಿಯುವ ಹೊತ್ತಿಗೆ ಮಕ್ಕಳಲ್ಲಿ ಶಿಸ್ತು ಬೆಳೆದು ಏಕಾಗ್ರತೆಯಿಂದ ಕೇಳಿ ತಿಳಿದುಕೊಂಡರು. ನಂತರ ಅಲ್ಲೇ ಖಾರದಿಂದ ಭಾರವಾಗಿದ್ದ ಚಿತ್ರಾನ್ನವನ್ನು ತಿಂದು ಮುಂದಿನ ಶಾಲೆಯಾದ ದುರ್ಗಾಮಾತಾ ಪ್ರೌಢಶಾಲೆಯಲ್ಲೂ ಹೋಗಿ ಅಲ್ಲೂ ಒಳ್ಳೆಯ ಉಪನ್ಯಾಸ ಕೊಟ್ಟು ಮುಗಿಸಿದೆ. ಆ ಶಾಲೆಯಲ್ಲೂ ಉಪ್ಪಿಟ್ಟು ಚಹಾ ಕೊಟ್ಟು ಉಪಚರಿಸಿದರು.
ಶಾಲೆಯ ನಂತರ ಬಸಪ್ಪನವರು ತಮ್ಮ ಊರಿಗೆ ಹೋಗ ಬೇಕಾಗಿದ್ದರಿಂದ, ಶನಿವಾರ ಮತ್ತು ಭಾನುವಾರದ ವಾಸ್ತವ್ಯ ಎಲ್ಲಿ ಮಾಡುವುದು ಎಂಬ ಚಿಂತೆ ಶುರುವಾಯಿತು. ಎಲ್ಲೂ ವ್ಯವಸ್ಥೆಯಾಗುವ ಸೂಚನೆಗಳು ಕಾಣುತ್ತಿರಲಿಲ್ಲ. ನನಗಿಂತ ನನ್ನ ವಾಸ್ತವ್ಯದ ಬಗ್ಗೆ ಬಸಪ್ಪನವರೇ ಜಾಸ್ತಿ ತಲೆಕೆಡಸಿಕೊಂಡಿದ್ದರು. ನನಗೆ ವಾಸ್ತವ್ಯವನ್ನು ಕಲ್ಪಿಸುವ ಶಪಥ ಮಾಡಿದಂತಿತ್ತು. ಅಳೆದು ತೂಗಿ ಯೋಚನೆಮಾಡಿ, ನನ್ನ ವಾಸ್ತವ್ಯಕ್ಕೆ ತಮ್ಮ ಮನೆಯ ಕೀಲಿಕೈಯನ್ನೇ ಕೊಡಲು ಮುಂದೆ ಬಂದರು. ಒಂದು ದಿನದ ಮುಂಚೆ ತಾನೇ ಪರಿಚಯವಾದ ನನಗೆ ತಮ್ಮ ಮನೆಯನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದರೆ ನನಗೆ ಗಾಬರಿಯಾಗುವುದಿಲ್ಲವೇ? ಅವರನ್ನು ಒತ್ತಾಯಿಸಿ ತಮ್ಮ ಊರಿಗೆ ಹೋಗದೆ ಕುಮಾರಪಟ್ಟನಂನಲ್ಲೇ ಉಳಿಯುವಂತೆ ಮಾಡಿದೆವು.
ಯಾವ ಜನ್ಮದ ಋಣವೋ?
ಯಾವ ಪುಣ್ಯದ ಫಲವೋ?
ನಿನಗೆ ನಾ ಯಾರು? ಎನಗೆ ನೀ ಯಾರು?
ನಿನ್ನ ಮನೆಯ ಅನ್ನ ಉಂಡ ನಾ ತಮ್ಮ,
ಎನಗೆ ಮಮತೆ ತೋರಿದ ನೀ ಅಣ್ಣ,
ಎನ್ನ ನಕ್ಕು ನಲಿಸಿದ ನೀ ಸ್ನೇಹಿತ,
ಎನಗೆ ಮಾರ್ಗ ತೋರಿದ ನೀ ಗುರುವು,
ನನ್ನ ಅನಾಥ ಪ್ರಜ್ಞೆಗೆ ನೀ ತಂದೆ,
ನನಗೆ ಪಾಠ ಹೇಳಿದ ನೀ ಶಿಕ್ಷಕನು,
ರಕ್ತ ಹಂಚಿ ಬದುಕದ ನೀ ಎನಗೆ ಬಂಧುವಲ್ಲವೇ? ಓ ಪ್ರಕೃತಿ.
ಮಧ್ಯಾಹ್ನದ ಹೊತ್ತಿಗೆ ನಾವಿದ್ದ ಬಸಪ್ಪನವರ ಮನೆಗೆ ಅವರ ಸ್ನೇಹಿತ ಮಂಜುನಾಥ್‍ರವರೂ ಬಂದು ನಮ್ಮ ಮಾತಿಗೆ ಸೇರಿದರು. ಒಬ್ಬ ವೈರಾಗ್ಯದಿಂದ ಓಡಾಡುತ್ತಿರುವವ, ಇನ್ನೊಬ್ಬ ಎಡಪಂಥೀಯ-ಬಲಪಂಥೀಯ ಹೊರಾಟ ಮಾಡಿದವ, ಮೂರನೆಯವ ವಿಜ್ಞಾನದಲ್ಲಿ ಆಸಕ್ತ. “ಬಡೇ ಕೋ ಬಡೇ ಮಿಲೇ ದೋಚಾರ್ ಬಾತ್, ಗದ್ದೇ ಕೋ ಗದ್ದೇ ಮಿಲೇ ದೋಚಾರ್ ಲಾತ್” ಎಂಬ ಮಾತು ಅಕ್ಷರಸಹ ಸತ್ಯ. ಇದರ ತಾತ್ಪರ್ಯ ಇಷ್ಟೇ. ನಾಲ್ಕು ಜನ ಬುದ್ಧಿವಂತರು ಸೇರಿದರೆ ನಾಲ್ಕಾರು ಒಳ್ಳೆ ಚರ್ಚೆಗಳು ನಡೆಯುತ್ತವೆ. ಅದೇ ನಾಲ್ಕು ಕತ್ತೆಗಳು ಸೇರಿದರೆ ನಾಲ್ಕೈದು ಒದೆ ಬೀಳುತ್ತದೆ ಎಂದು.
ಮೊದಲು ಈ ಭಾಗದ ಜನರ ಉಪ್ಪಿಟ್ಟಿನ ಮೇಲಿನ ಪ್ರೀತಿಯ ಬಗ್ಗೆ ಚರ್ಚೆಯಾಯಿತು. ಹೌದು, ನಾನು ನನ್ನ ಈ ಪ್ರಯಾಣದಲ್ಲಿ ಉಂಡ ಊಟದ ಶೇಕಡ ಅರವತ್ತು ಬರೀ ಉಪ್ಪಿಟ್ಟು. ಎದ್ದರೆ ಉಪ್ಪಿಟ್ಟು, ಬಿದ್ದರೆ ಉಪ್ಪಿಟ್ಟು. ಈಗಿನ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಸೇರಿ ಬರೀ ಅಂಕಗಳ ಪ್ರತೀಶತವನ್ನು ಕಾರ್ಯಾಲಯದ ಬೋರ್ಡಿನ ಮೇಲೆ ಬರೆದಿರುತ್ತಾರೆ. ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾದರು ಹಾಗೂ ಎಷ್ಟು ಮಕ್ಕಳು ಉನ್ನತ ಅಂಕಗಳನ್ನು ಪಡೆದರು ಎಂಬುದರಿಂದ ಸಮಾಜಕ್ಕೆ ಏನು ಪ್ರಯೋಜನ? ವಿಜ್ಞಾನ ಓದಿದ ಮಕ್ಕಳಲ್ಲಿ ಪರಿಸರ ಅಥವಾ ಪ್ರಕೃತಿಯ ಬಗ್ಗೆ ಅರಿವಿಲ್ಲ. ಸಮಾಜ ಶಾಸ್ತ್ರ ಓದಿದ ಮಕ್ಕಳು ಸಮಾಜದ ಬಗ್ಗೆ ತಲೆಕೆಡಸಿಕೊಳ್ಳವುದಿಲ್ಲ. ಗಣಿತ ಶಾಸ್ತ್ರ ಕರಗತ ಮಾಡಿಕೊಂಡ ಮಕ್ಕಳು ಜೀವನದ ಲೆಕ್ಕಾಚಾರದಲ್ಲಿ ಸೋಲುತ್ತಾರೆ. ಸ್ವಚ್ಛತೆಯ ಬಗ್ಗೆ ಗಮನವಿಲ್ಲ, ದೇಶ ಪ್ರೇಮವಿಲ್ಲ, ಸೇವಾ ಮನೋಭಾವದ ಕೊರತೆ, ನಂಬಿಕೆಯೆಂಬುದು ಪಾತಾಳಕ್ಕೆ ಸೇರಿದೆ.
ಹಾಗಾಗಿ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಪಾಠಕ್ಕಿಂತ ಮಿಗಿಲಾಗಿ ಮೌಲ್ಯಗಳನ್ನು ಹೇಳಿಕೊಡಬೇಕು. ಸಮಾಜದ ಮೌಲ್ಯಗಳು ಹಾಗೂ ದೇಶ ಪ್ರೇಮವನ್ನು ಎತ್ತಿಹಿಡಿಯುವಂತಹ ಕೆಲಸಗಳಾಗಬೇಕು. ಬೋರ್ಡಿನ ಮೇಲೆ ಅಂಕಗಳ ವಿವರ ಬರೆಯುವ ಬದಲು ಮೌಲ್ಯಗಳ ಪ್ರತೀಶತ ಬರೆಯಬೇಕು. ಎಷ್ಟು ಮಕ್ಕಳು ಪರಿಸರ ಪ್ರೇಮಿಗಳಾದರು. ಎಷ್ಟು ಮಕ್ಕಳು ಸ್ವಚ್ಛತೆಯ ರೂವಾರಿಗಳಾದರು. ಎಷ್ಟು ಮಕ್ಕಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಎಷ್ಟು ಮಕ್ಕಳು ಆಟಗಳಲ್ಲಿ ಗೆದ್ದಿದ್ದಾರೆ. ಎಷ್ಟು ಮಕ್ಕಳು ಪ್ರಬಂಧ, ಲೇಖನಗಳನ್ನು ಬರೆಯಬಲ್ಲರು, ಎಷ್ಟು ಮಕ್ಕಳು ಸ್ವಂತತನದಿಂದ ಕವನ ಕಥೆಗಳನ್ನು ಬರೆಯಬಲ್ಲರು. ಎಷ್ಟು ಮಕ್ಕಳು ಪ್ರವಾಸ ಮಾಡಿದ ಅನುಭವ ಪಡೆದಿದ್ದಾರೆ. ಆಗ ಮಾತ್ರ ಶಕ್ತ ಸಮಾಜವನ್ನು ಕಟ್ಟಬಹುದು ಎಂಬ ಅನಿಸಿಕೆ ವ್ಯಕ್ತವಾಯಿತು.
ನಡಿಗೆ, ಬೈಸಿಕಲ್ ಮತ್ತು ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುವುದರ ಕಡೆಗೆ ನಮ್ಮ ಚರ್ಚೆ ತಿರುಗಿತು. ಮನುಷ್ಯನು ಭೂಮಿಗೆ ಬಂದಾಗ ಅವನಿಗಿದ್ದ ಸಂವಹನಾ ಮೂಲವೆಂದರೆ ನಡಿಗೆ. ಸಾಧ್ಯವಾದಷ್ಟು ಬೈಸಿಕಲ್ ಅಥವಾ ಸಾರ್ವಜನಿಕ ಸಾರಿಗೆ ಉಪಯೋಗಿಸಿ, ತುಂಬಾ ಅವಶ್ಯಕತೆ ಬಿದ್ದರೆ ಮಾತ್ರ ಸ್ವಂತ ವಾಹನಗಳಾದ ಬೈಕು, ಕಾರು ಬಳಸುವುದು ಬುದ್ಧಿವಂತಿಕೆ. ಈಗ ಏನಾಗಿದೆ? ನಾವೆಲ್ಲರೂ ವೇಗದ ಜೀವನಕ್ಕೆ ಮಾರು ಹೋಗಿದ್ದೇವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ವಂತ ವಾಹನದಲ್ಲಿ ಸಂಚರಿಸಿ ಬೇಗನೇ ತಲುಪುವ ಆತುರ. ಹಾಗೆ ಮಾಡಿದರೆ ಇತರ ಜನರ ಜೊತೆ ಸಂಪರ್ಕ ಬೆಳೆಯುವುದಾದರೂ ಹೇಗೆ? ಸೇವಾ ಮನೋಭಾವ ಮೂಡುವುದಾದರೂ ಹೇಗೆ?
ನಾನು ಎಷ್ಟೋ ಜನರನ್ನು ಕಂಡಿದ್ದೇನೆ. ಅವರುಗಳಿಗೆ ಮೂರು ಮತ್ತೊಂದು ಜನರ ಪರಿಚಯವಿದ್ದರೆ ಅದೇ ದೊಡ್ಡ ವಿಷಯ. ಅಷ್ಟೇ ಜನರ ಒಡನಾಟದಲ್ಲಿ ಬದುಕಿ ಸಾಯುತ್ತಾರೆ. ಅದೇ ನಡೆದಾಡಿದರೆ ಮೊದಲು ದಾರಿಯಲ್ಲಿ ಸಿಕ್ಕವರ ಮುಖ ಪರಿಚಯವಾಗಿ ನಂತರ ಸ್ನೇಹಕ್ಕೆ ತಿರುಗುತ್ತದೆ. ಸಾರ್ವಜನಿಕ ಸಾರಿಗೆಯಾದ ಬಸ್ಸು, ರೈಲಿನಲ್ಲಿ ಹೊಸ ಪರಿಚಯಗಳು ಹುಟ್ಟಿಕೊಳ್ಳುತ್ತವೆ. ನಿಮ್ಮ ಬಿಕ್ಕಳಿಕೆಗೆ ಬೇರೆಯವರು ನೀರು ಕೊಡುತ್ತಾರೆ. ಸಹ ಪ್ರಯಾಣಿಕರ ಮಕ್ಕಳು ಅತ್ತರೆ ನೀವು ಹಣ್ಣು, ಮಿಠಾಯಿ ಕೊಟ್ಟು ಸುಧಾರಿಸುತ್ತೀರಿ. ನಿಮ್ಮ ಹೊಟ್ಟೆ ಹಸಿವಿಗೆ ಯಾರದೋ ತಿಂಡಿ. ಊರು ಕೇರಿ ವಿಚಾರಿಸುತ್ತೀರಿ. ಮಳೆ ಬೆಳೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಎಷ್ಟೋ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಕಂಡುಕೊಳ್ಳುತ್ತೀರಿ. ನನಗೂ ಈ ಪ್ರಯಾಣದಲ್ಲಿ ಇದೇ ಅನುಭವವಾಯಿತು. ಸಾರ್ವಜನಿಕ ಸಾರಿಗೆಯಿಂದ ರಸ್ತೆ ಅಗಲೀಕರಣ, ಹೆದ್ದಾರಿಗಳ ಅವಶ್ಯಕತೆ ಆದಷ್ಟು ತಗ್ಗುತ್ತದೆ.
ನಮ್ಮ ಅವಶ್ಯಕತೆ ಆಸೆಗಳನ್ನು ಹದ್ದುಬಸ್ತಿನಲ್ಲಿ ಇಟ್ಟರೆ ಕಾರ್ಖಾನೆಗಳ ಉತ್ಪಾದನೆ ತನ್ನಿಂತಾನೆ ಕಡಿಮೆಯಾಗುತ್ತದೆ. ಅವರು ತಾನೆ ಸುಖಾಸುಮ್ಮನೆ ಉತ್ಪಾದನೆ ಮಾಡಿಕೊಂಡು ಏನು ಮಾಡುತ್ತಾರೆ. ಮನುಷ್ಯನೇ ಇವತ್ತಿನ ಜಗತ್ತಿನಲ್ಲಿರುವ ಸಮಸ್ಯೆಗಳಿಗೆ ಕಾರಣ. ಮನುಷ್ಯನಿಗೆ ಮನುಷ್ಯನೇ ವೈರಿ. ಮನುಷ್ಯನು ಬೇರೆಲ್ಲಾ ಜೀವಿಗಳಿಗೂ ಕೂಡ ವೈರಿಯೇ. ಈಗೇನಾದರು ನಾವು ಇದರ ಅಡ್ಡ ಪರಿಣಾಮ ಅನುಭವಿಸುವುದರಿಂದ ತಪ್ಪಿಸಿಕೊಂಡರೆ, ನಮ್ಮ ಮಕ್ಕಳು ಖಂಡಿತಾ ಅನುಭವಿಸುತ್ತಾರೆ. ಅನುಭವಿಸುವ ಕರ್ಮದಿಂದ ಮಾತ್ರ ತಪ್ಪಿಸಿಕೊಳ್ಳಲಾಗುವುದಿಲ್ಲ.hands
ಮಧ್ಯಾಹ್ನದ ಊಟಕ್ಕೆ ಬಸಪ್ಪನವರೇ ಚಿತ್ರಾನ್ನ ಮಾಡಿದರು. ಮಂಜುರವರು ತಮ್ಮ ಮನೆಯಿಂದ ರೊಟ್ಟಿ, ಪಲ್ಯ ತಂದು ನಾವು ಮೂರು ಜನ ಒಟ್ಟಿಗೇ ಕುಳಿತು ಮಧ್ಯಾಹ್ನದ ಊಟ ಉಂಡೆವು. ನಂತರ ನಮ್ಮ ಚರ್ಚೆ ಶಿಕ್ಷಕರ ವೇತನ, ಜವಾಬ್ದಾರಿಗಳು ಮತ್ತು ವೃತ್ತಿ ಗೌರವ ಬಗ್ಗೆ ತಿರುಗಿತು. ಶಿಕ್ಷಕ ವೃತ್ತಿಯೆಂಬುದು ಪ್ರಧಾನಿ ಹುದ್ದೆಗಿಂತಲೂ ಜವಾಬ್ದಾರಿಯುತ ಮತ್ತು ಶ್ರೇಷ್ಟ ಹುದ್ದೆ. ಆದರೂ ಸಮಾಜದಲ್ಲಿ ಶಿಕ್ಷಕರ ಬಗ್ಗೆ ಹಾಗೂ ಶಿಕ್ಷಕರಿಗೆ ಅವರ ವೃತ್ತಿಯ ಬಗ್ಗೆ ಅಷ್ಟು ಆತ್ಮಗೌರವ ಕಾಣಿಸಲಿಲ್ಲ. ಪ್ರತೀ ವೃತ್ತಿಯ ಗೌರವವನ್ನು ವೃತ್ತಿಯಿಂದ ದೊರೆಯುವ ಸಂಬಳದಿಂದ ಅಳೆಯುತ್ತಿದ್ದರು. ಈಗಿನ ಶೋಚನೀಯ ಸ್ಥಿತಿಗೆ ಇದೇ ಕಾರಣ.
ಲೋಕದ ಅಷ್ಟ ದಿಕ್ಕುಗಳಿಗೂ ಶ್ರೀಮಂತಿಕೆಯೇ ಮಾನದಂಡ. ನೂರಾರು ವರ್ಷಗಳ ಹಿಂದೆ ಶಿಕ್ಷಕ ಅಥವಾ ಗುರುಗಳೆಂದರೆ ಅದಮ್ಯ ಗೌರವ. ಅವರುಗಳ ಮುಂದೆ ನಿಂತು ಮಾತನಾಡುವ ಧೈರ್ಯ ಸ್ವತಃ ರಾಜನಿಗೆ ಇರಲಿಲ್ಲ. ಆಗಿನ ಗುರುಗಳಿಗೂ ಅಷ್ಟೆ, ಏನು ಗಾಂಭಿರ್ಯ, ಏನು ಶ್ರದ್ಧೆ, ಏನು ವಿದ್ವತ್. ಈಗಲೂ ಅದೇ ಪರಿಸ್ಥಿತಿ ನಿರ್ಮಾಣ ಮಾಡಬೇಕಿದೆ. ಶಿಕ್ಷಕರಿಗಿದ್ದ ಗೌರವಗಳನ್ನು ಮರು ಪ್ರತಿಷ್ಠಾಪಿಸಬೇಕಿದೆ. ಶಿಕ್ಷಕರೂ ಕೂಡ ಅವರ ವೃತ್ತಿಪರತೆ ಮೆರೆದು ಇತರರಿಗೆ ಮಾದರಿಯಾಗಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಸಮಾಜವೂ ಕೂಡ ಶಿಕ್ಷಕರ ಆರ್ಥಿಕ ಸ್ಥಿತಿಗತಿಗಳನ್ನು ಬದಿಗೊತ್ತಿ ಅವರಿಗೆ ಗೌರವದೊಂದಿಗೆ ಸಕಲ ಸೌಲಭ್ಯ ಹಾಗೂ ಸಹಕಾರ ಕೊಡಬೇಕಿದೆ.
ಓ ನನ್ನ ಪ್ರೀತಿಯ ಶಿಕ್ಷಕ,
ನೀ ಎನ್ನ ದೇಶದ ರಕ್ಷಕನೋ.
ನಲಿಸಿ ಕಲಿಸಿ ನೀ ಮಾಡುವ ಪಾಠ,
ವಿವಿಧ ವಿಷಯಗಳ ರಸದೂಟ.
ನೀ ಯಾರಿಗೇನು ಕಡಿಮೆಯೋ?
ನೀ ಜ್ಞಾನ ಚಿಮ್ಮುವ ಚಿಲುಮೆಯೋ.
ವೈದ್ಯ ವಕೀಲ ಅಭಿಯಂತರ,
ನಿನ್ನ ಋಣದಿ ಬದುಕುವರು ನಿರಂತರ.
ನೀ ಧೃತಿಗೆಡಬೇಡವೋ,
ನೀ ಜಗವ ಬೆಳಗುವ ದೀಪವೋ.
ನಡೆಸು ಭಾಷೆಗಳ ಅಭಿಯಾನ,
ಕಲಿಸು ಗಣಿತ ಸಮಾಜ ವಿಜ್ಞಾನ.
ಉತ್ತಮ ನಾಗರೀಕರನ್ನು ಕೊಡುವ, ನೀ ಕಾರ್ಖಾನೆಯೂ,
ರೋಗಗ್ರಸ್ತ ಸಮಾಜಕೆ ನೀ ದವಾಖಾನೆಯೂ.
ಒಂದೇ ದಿನದಲ್ಲಿ ನಾವು ಮೂರೂ ಜನ ಎಷ್ಟೋ ವರ್ಷದ ಸೇಹಿತರಂತೆ ನಮ್ಮ ಮನಸ್ಸಿನಲ್ಲಿದ್ದದನ್ನು ಹೊರಹಾಕಿ ಬಹಳ ಸಹಜ ರೀತಿಯಲ್ಲಿ ಮಾತನಾಡುತ್ತಿದ್ದೆವು. ಸಂಜೆಯ ಚಹಾ ಕೂಟದ ನಂತರ ಮತ್ತೆ ಬಾಲ್ಯ ನೆನಪುಗಳನ್ನು ಮೆಲಕು ಹಾಕಿಕೊಂಡು ಸಾಕಷ್ಟು ತಮಾಷೆ ಮಾಡಿದರು. ನಂತರ ಅವರ ಅವಿಭಕ್ತ ಕುಟುಂಬಗಳ ಕಷ್ಟ ಸಂತೋಷಗಳನ್ನು ಹೇಳಿದರು. ಹೇಗೆ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳಾಗುತ್ತಾರೆ ಎಂಬುದನ್ನು ಕೆಲವು ಉದಾಹರಣೆಗಳನ್ನು ನೀಡಿ ವಿವರಿಸಿದರು. ರಾತ್ರಿಯ ಊಟಕ್ಕೆ ಸೊಪ್ಪು, ತರಕಾರಿ, ಎರಡು ತರಹದ ಪಲ್ಯ, ಜೊತೆಗೆ ರೊಟ್ಟಿ, ಜೋಳದ ಮುದ್ದೆ, ಬಾಳೆ ಹಣ್ಣು. ನಂತರ ಅರ್ಧ ಗಂಟೆ ನಡಿಗೆಯ ಜೊತೆಯಲ್ಲೇ ಚರ್ಚೆಗಳು ಶುರುವಾದವು. ಚರ್ಚೆ ಮುಗಿದು ಮಲಗುವಾಗ ರಾತ್ರಿ ಎರಡಾಗಿತ್ತು.
ಅಣ್ಣ ತಮ್ಮಂದಿರೋ ದಾಯಾದಿಗಳೋ?
ಒಂದೇ ಜಾತಿಯ ಬೀಜಗಳ ಬಿತ್ತಿದರೂ,
ಒಂದೇ ಮಣ್ಣಿನ ಫಲವತ್ತತೆಯಲ್ಲಿ ಬೆಳೆದರೂ,
ಒಂದು ಹೂವಿನ ಗಿಡ, ಮತ್ತೊಂದು ಮುಳ್ಳಿನ ಗಿಡ.
ಒಂದರಲ್ಲಿ ನಾವೆಂಬ ಭಾವನೆ, ಮತ್ತೊಂದರಲ್ಲಿ ನಾನೆಂಬ ಅಹಂ.
ಹಾಕಿದ ನೀರು, ಗೊಬ್ಬರವೆಲ್ಲಾ ಸಮವೇ ಆದರೂ,
ಒಂದರಲ್ಲಿ ರಸದ ಭಾವ, ಮತ್ತೊಂದರಲ್ಲಿ ವಿಷದ ಭಾವ.
ಮೈಯೆಲ್ಲಾ ಮುಳ್ಳಾದರೇನು, ಗುಲಾಬಿ ಗಿಡವಾದೀತೆಂಬ ನಂಬಿಕೆ,
ನಂಬಿಕೆಗಳ ಮೋಡ ಸರಿದು, ನಿಜದ ಬೆಳಕು ಚೆಲ್ಲಲು ಸಮಯ ಹಿಡಿಯಿತು.
ಹೂವಿನ ಗಿಡದ ನೆರಳಿನಲ್ಲಿ ಬೆಳೆದರೇನು?
ಮುಳ್ಳಿನ ಗಿಡ, ಹೂವಿನ ಗಿಡವಾದೀತೆ?
ತನ್ನದನ್ನು ತ್ಯಾಗಮಾಡಿದ ಹೂವಿನ ಗಿಡ ದೇವರ ಮುಡಿ ಸೇರಿತು.
ಅದನ್ನು ಪಡೆದ ಮುಳ್ಳಿನ ಗಿಡ ಹೊಲದ ಬೇಲಿಯಾಯಿತು.
ದೇವರ ಮುಡಿಯಲ್ಲಿದ್ದ ಹೂವು, ನೋವಿನಲ್ಲಿ ಸೊರಗಿತು,
ಬೇಲಿಯಲ್ಲಿದ್ದ ಮುಳ್ಳಿನ ಗಿಡ, ಅದರ ಅರಿವೇ ಇಲ್ಲದಂತೆ ಬೆಳೆಯಿತು.
ದಾರಿ ಕಾಣದ ಹೂವಿನ ಗಿಡದಲ್ಲಿ ಹತಾಶ ಪ್ರಶ್ನೆ ಮೂಡಿತು,
ನಾವು ಅಣ್ಣ ತಮ್ಮಂದಿರೋ ದಾಯಾದಿಗಳೋ? ಓ ಪ್ರಕೃತಿ.
journeyಭಾನುವಾರ ಬೆಳಿಗ್ಗೆ ಆರಕ್ಕೆ ಎದ್ದು ಮೂರೂ ಜನ ಹರಿಹರದ ಕಡೆಗೆ ನಡೆದುಕೊಂಡು ತುಂಗಭದ್ರಾ ನದಿಯ ದಡದಲ್ಲಿ ಕುಳಿತು ಸ್ವಲ್ಪ ವ್ಯಾಯಾಮ ಮಾಡಿ, ಭದ್ರೆಯ ಹರಿವಿನ ಮೆರುಗನ್ನು ಸವಿಯುತ್ತಾ ಕುಳಿತೆವು. ಬೆಳಗಿನ ಸೂರ್ಯನ ಕಿರಣಗಳು ನದಿ ನೀರಿನ ಅಲೆಗಳ ಮೇಲೆ ಬೆಳಕು ಚೆಲ್ಲಿ ಕಣ್ಣುಗಳಿಗೆ ಬೆಳಗಿನ ಮುದ ನೀಡುತ್ತಿತ್ತು. ಮನೆಗೆ ವಾಪಸ್ ಬಂದು ಸ್ನಾನ ಮಾಡಿ, ಮಂಜು ಅವರ ಮನೆಯಲ್ಲಿ ತಿಂಡಿ ತಿಂದು ಕೆಲವು ಕೆಲಸಗಳನ್ನು ಇಟ್ಟುಕೊಂಡು ದಾವಣಗೆರೆಗೆ ಹೊರಟೆವು. ಹರಿಹರದಿಂದ ದಾವಣಗೆರೆಗೆ ಕೇವಲ ಹತ್ತು ಮೈಲುಗಳ ದೂರ.
ಹೋಗುವ ದಾರಿಯಲ್ಲಿ ಗಮನಿಸುತ್ತಿದ್ದಾಗ ಸಕ್ಕರೆ ಕಾರ್ಖಾನೆಯ ಹತ್ತಿರ ಒಂದು ತಪೋವನ, ಅದರ ಹಿಂದೆ ಎರಡು ಗುಡ್ಡಗಳ ಕೊರೆತ ಎದ್ದು ಕಾಣುತ್ತಿತ್ತು. ಹಾಗೇ ಮುಂದೆ ಹೋಗಿ ಬಲಕ್ಕೆ ಸಿಗುವ ಕೆರೆಯನ್ನು ದಾಟಿ, ನಗರವನ್ನು ಹೊಕ್ಕರೆ ಎಡಕ್ಕೆ ಸುಸಜ್ಜಿತ ಜಿ.ಎಮ್.ಐ.ಟಿ ತಾಂತ್ರಿಕ ಕಾಲೇಜು ಮತ್ತು ಅದರ ಹಿಂದಿನ ಮಿನಿ ವಿಧಾನಸೌಧ ನೋಡುಗರ ಕಣ್ಣ ಸೆಳೆದು ಸ್ವಾಗತಿಸುತ್ತವೆ. ಒಂದು ತಿಂಗಳಲ್ಲಿ ನಾನು ಮೈಸೂರು ತಲುಪುವುದು ಕಷ್ಟ ಸಾಧ್ಯವಾದ್ದರಿಂದ, ಒಂದು ಹಳೇ ಉಪಯೋಗಿಸಿದ ಬೈಸಿಕಲ್ಲು ಪಡೆದು ಪ್ರಯಾಣಿಸಬೇಕೆಂದು ಅನಿಸಿತು. ಮೂರ್ನಾಲ್ಕು ಬೈಸಿಕಲ್ಲು ಮಾರಾಟ ಮಳಿಗೆಗಳಿಗೆ ತಿರುಗಿದರೂ ಪ್ರಯೋಜನವಾಗಲಿಲ್ಲ.
ಹಾಗೇ ದಾವಣಗೆರೆ ಸುತ್ತಾಡಿಕೊಂಡು ಬಸಪ್ಪನವರ ತಂಗಿಯ ಮನೆಗೆ ಹೋಗಿ ಭರ್ಜರಿ ಊಟದ ಸತ್ಕಾರ ಸ್ವೀಕರಿಸಿದೆವು. ಅಲ್ಲಿಂದ ಹರಿಹರಕ್ಕೆ ವಾಪಸ್ಸು ಬರುವಷ್ಟರಲ್ಲಿ ಬಿಸಿಲಿನಲ್ಲಿ ಬೆಂದು ಸುಸ್ತಾಗಿತ್ತು. ಸಂಜೆಯ ತನಕ ನಿದ್ರೆ ಮಾಡಿ ವಿಶ್ರಮಿಸಿಕೊಂಡೆವು. ಬಸಪ್ಪನವರು ಸಂಜೆಯ ಧ್ಯಾನ ಮುಗಿಸಿ ಏನೋ ಬರೆಯುತ್ತಾ ಕುಳಿತರು. ಮಂಜು ತಮ್ಮ ಕುಟುಂಬದವರೊಡನೆ ದಾವಣಗೆರೆಗೆ ಹೋಗಿದ್ದರಿಂದ ಸಂಜೆಯಲ್ಲಿ ಯಾವ ಚರ್ಚೆಗಳೂ ನಡೆಯಲಿಲ್ಲ. ಊಟದ ಹೊತ್ತಿಗೆ ಮಂಜುರವರ ಮನೆಗೆ ಹೋಗಲು ಸಿದ್ಧರಾದೆವು.
ಆಗ ಬಸಪ್ಪನವರು ತಾವು ಎರಡು ದಿನಗಳಿಂದ ನನ್ನ ಜೊತೆಗಿದ್ದ ಅನುಭವಗಳನ್ನು ಮತ್ತು ನನ್ನ ಕೆಲಸದ ಮೇಲಿನ ಅನಿಸಿಕೆಗಳನ್ನು ಕೂಲಂಕುಷವಾಗಿ ನಾಲ್ಕು ಪುಟಗಳ ಲೇಖನ ಬರೆದು ಓದಿದರು. ನನಗಂತೂ ಮಾತುಗಳೇ ಹೊರಡಲಿಲ್ಲ. ನನ್ನ ಮೇಲಿನ ಅವರ ಅಭಿಮಾನವನ್ನು ಕಂಡು ನಾನು ಭಾವುಕನಾದೆ. ಮಂಜುರವರ ಮನೆಯಲ್ಲಿ ರಾತ್ರಿಯ ಊಟ ಮುಗಿಸಿ, ನಾನು ಬಸಪ್ಪ ಇಬ್ಬರೂ ಮನೆಗೆ ಹಿಂತಿರುಗೆದೆವು. ರಾತ್ರಿಯ ಬಹಳ ಹೊತ್ತಿನ ತನಕ ನಮ್ಮ ಮಾತಿನ ದಾಟಿ ಹತ್ತಾರು ದಾರಿ ಹಿಡಿಯಿತು. ಬಸಪ್ಪನವರು ನನ್ನ ಜೊತೆ ಪ್ರಯಾಣದಲ್ಲಿ ನಡೆದುಕೊಂಡು ಬಂದು ಬಿಡಬೇಕು ಎಂದು ಒಂದು ಕ್ಷಣ ನಿರ್ಧರಿಸಿದ್ದರಂತೆ. ಅದನ್ನು ನನ್ನ ಹತ್ತಿರ ಹೀಗೆ ನಿವೇದಿಸಿಕೊಂಡರು.
“ಸರ್, ನಿಮ್ಮ ವ್ಯಕ್ತಿತ್ವದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ನಿಮ್ಮ ಈ ಎಲ್ಲಾ ಕೆಲಸಗಳನ್ನು ಪ್ರಕೃತಿಯೇ ಮಾಡಿಸುತ್ತಿದ್ದಾಳೆಂದು ನಾ ನಂಬಿದ್ದೇನೆ. ಅವಳ ಸೂಚನೆಗಳನ್ನು ನೀವು ಪಾಲಿಸುತ್ತಿದ್ದೀರಿ ಅಷ್ಟೇ. ಹಾಗಾಗಿಯೇ ನೀವು ಹೋದಲ್ಲೆಲ್ಲಾ ನಿಮಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳುತ್ತಿದ್ದಾಳೆ. ನನಗೆ ಒಂದೆರಡು ಸಲ ಅನಿಸಿತ್ತು, ನಾನು ಕೂಡ ನಿಮ್ಮ ಪ್ರವಾಸದಲ್ಲಿ ಜೊತೆಯಾಗಿ ನಡೆದುಕೊಂಡು ಬಂದು ಬಿಡಲೇ ಎಂದು. ಹೀಗೇ ದಾರಿಯಲ್ಲಿ ಸಿಗುವ ಊರಿಗೆ ಒಬ್ಬಬ್ಬರನ್ನು ಸೇರಿಸಿಕೊಂಡು ಹೊರಟರೆ ಮೈಸೂರು ಮುಟ್ಟುವ ತನಕ ಒಂದು ದೊಡ್ಡ ಜಾಥಾ ಆಗಿ ಪರಿವರ್ತನೆಯಾಗಿ ಇನ್ನೂ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬಹುದಿತ್ತು ಎಂದುಕೊಂಡೆ.
ಆದರೆ ಈ ಯೋಚನೆಯ ಮೂಲ ನನ್ನದಲ್ಲ. ಇದು ನಿಮ್ಮ ಧೃಡಮನಸ್ಸಿನಿಂದ ಮೂಡಿದ ಜಾಗೃತಿ. ಹಾಗಾಗಿ ಈಗೇನಾದರು ನಾನು ಬರೀ ನಿಮ್ಮ ಪ್ರಭಾವದಿಂದಲೇ ಈ ಪ್ರವಾಸದಲ್ಲಿ ಪಾಲ್ಗೊಂಡರೆ, ಮಾರ್ಗ ಮಧ್ಯೆ ಏನಾದರು ಕುಂಟು ನೆಪ ನೀಡಿ, ನಾನು ವಾಪಸ್ಸು ಬರುವುದಂತೂ ಖಂಡಿತ. ಹಾಗಾಗಿ ನಾನು ಬರುತ್ತಿಲ್ಲ” ಎಂದರು. ನಾನು ಕೂಡ ಅವರ ಮಾತನ್ನು  ಒಪ್ಪಿ ಸಮ್ಮತಿಸಿದೆ.
ಬಸಪ್ಪನವರ ಜೊತೆ ನನ್ನ ಚರ್ಚೆ ಮುಂದುವರಿಯಿತು. ಈಗಿನ ಸಮಾಜದ ದುರ್ಗತಿಯೆಂದರೆ ಜನರು ಸಂಸಾರಿಗಳ ಮಾತೂ ಕೇಳುವುದಿಲ್ಲ. ಸ್ವಾಮೀಜಿ/ಸನ್ಯಾಸಿಗಳ ಮಾತೂ ಕೇಳುವುದಿಲ್ಲ. ಸಂಸಾರಿಗಳು ಏನಾದರು ನೀತಿ ಪಾಠಮಾಡಿದರೆ ಇವ ಯಾವ ದೊಡ್ಡ ಮನುಷ್ಯ ಎಂದು ಅಸಡ್ಡೆ ಮಾಡುತ್ತಾರೆ. ಇವನೆಂತಹ ಯೋಗ ಮಾಡಿ ಸಿದ್ಧಿ ಪಡೆದು ಮಾತನಾಡುತ್ತಿದ್ದಾನೆಯೇ? ಎಂದು ಪ್ರಶ್ನಿಸುತ್ತಾರೆ. ಸನ್ಯಾಸಿಗಳೇನಾದರು ಪ್ರವಚನ ಮಾಡಿದರೆ, ಇವ ಏನು ಸಂಸಾರಿಯೇ. ಸಂಸಾರದಲ್ಲಿ ಹೆಣಗುವ ಕಷ್ಟ ಇವನಿಗೇನು ಗೊತ್ತು? ಎಂಬ ಪ್ರಶ್ನೆ ಮೂಡುತ್ತದೆ.
ಮಾತುಗಳನ್ನಾಡುವುದು ತುಂಬಾ ಸರಳ, ಸಂಸಾರಿಯಾಗಿ ಅನುಷ್ಟಾನಗೊಳಿಸುವುದು ಬಹಳ ಕಷ್ಟ ಎಂದು ಅಪಹಾಸ್ಯ ಮಾಡುತ್ತಾರೆ. ಬಹುಶಃ ಆ ದೇವರೇ ಬಂದು ಹೇಳಿದರೂ, ಅವನನ್ನೂ ಕೂಡ ಜರಿದು ಕಳಿಸಬಲ್ಲರು ನಮ್ಮ ಜನ. ಇಷ್ಟೆಲ್ಲಾ ಚರ್ಚಿಸಿ ಮುಗಿದಾಗ ರಾತ್ರಿ ಎರಡಾಗಿತ್ತು.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 182 ಮೈಲುಗಳು]

‍ಲೇಖಕರು avadhi

7 July, 2016

2 Comments

  1. basavaraja

    The best article your suffering lot in your journey I wish reach your goal what thought

  2. ರಾದ

    Thank you Basappa sir 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading