
ಅತಿಥಿ ದೇವೋ ಭವ
|ಕಳೆದ ಸಂಚಿಕೆಯಿಂದ|
“ಅತಿಥಿ ದೇವೋ ಭವ” ಅಂತ ನಮ್ಮ ದೊಡ್ಡವರು ಹೇಳಿದ ಮಾತು ಚಾಚೂ ತಪ್ಪದಂತೆ ಚಾಲ್ತಿಯಲ್ಲಿ ತಂದು ಪಾಲಿಸಲು ಹಚ್ಚಿತು ನನಗೆ ನನ್ನ ಪತಿಯ ಈ ಡಾಕ್ಟರ್ ಉದ್ಯೋಗ ಹಾಗೇ ಜೊತೆಗೆ ಈ ಹಳ್ಳಿಗಳ ವಾಸ. ನಾ ಮೊದಲೇ ಹೇಳಿದಂತೆ ನಮ್ಮ ಹೆಚ್ಚು ಪಾಲು ಜೀವನ ಹಳ್ಳಿಗಳಲ್ಲೇ ಕಳೀತು. ಈಗ ನಾನು ಇಲ್ಲಿ ಹೇಳ್ತಾ ಇರೋದು ಬಂಕಾಪುರದ್ದೇ ಇನ್ನೊಂದು ಘಟನೆ.
ತಿಳವಳ್ಳಿ, ಹಾಗೂ ಗರಗನಲ್ಲಿಯ ಅನುಭವ ಕಥನ ಮುಂದೆ. ಆದರೆ ಒಂದು ಮಾತು ಮಾತ್ರ ಅಗದೀ ಖರೇ, ನಾನು ಎದುರಿಸಿದ ಪ್ರತೀ ಘಟನೆ ಕಹಿಯೋ , ಸಿಹಿಯೋ ನನ್ನ ಬಾಳ ಹಾದಿಯಲಿ ತನ್ನ ಅಚ್ಚಳಿಯದ ಛಾಪು ಮೂಡಿಸಿ ಮುಂದೆ ನೂರು ಬಾಗಿಲು ತೆರೆದು ದಾರಿ ತೋರುವ ಹರಿಕಾರ ಆಯ್ತು.
ಯಾವುದೇ ರೀತಿಯ ಸೌಲಭ್ಯ, ಸೌಕರ್ಯಗಳಿಲ್ಲದ, ಅರೆಗಾಡಿನಂತಿದ್ದ ಈ ಹಳ್ಳಿಗಳ ವಸತಿ ನನಗೆ ಜೀವನದ ಹಲವು ಆಯಾಮಗಳನ್ನು ತೋರಿಸಿ ವಿರಾಟ್ ರೂಪ ದರ್ಶನ ಮಾಡಿಸ್ತು. ಎಂಥದೇ ಪರಿಸ್ಥಿತಿ ಬಂದರೂ ಥಟ್ಟನೇ ಅದಕ್ಕೊಂದು ದಾರಿ ಹುಡುಕಲು ಕಲಿಸ್ತು. ಜೀವನದಲ್ಲಿ ‘ಇಲ್ಲ’ ಎಂಬ ಶಬ್ದಕ್ಕೆ ಎಡೆಗೊಡದ ನನ್ನ ಮನೋಭಾವಕ್ಕೆ ಇನ್ನಷ್ಟು ಗಟ್ಟಿತನ, ಪುಷ್ಟಿ ತುಂಬಿತು ಆ ಪರಿಸರ, ಆ ಪರಿಸ್ಥಿತಿ.
ನಾವು ಬಂಕಾಪುರದಲ್ಲಿದ್ದದ್ದು 1979ರಿಂದ 1985ರ ವರೆಗೆ, ಒಟ್ಟು ಹತ್ತತ್ರ ಏಳು ವರ್ಷ. ಆವಾಗ ಈ ಹಳ್ಳಿಗಳ ಪರಿಸ್ಥಿತಿ ಈಗಿನಷ್ಟೂ ಸುಧಾರಣೆ ಕಂಡಿರಲಿಲ್ಲ. ಸಾರಿಗೆ ಸಂಚಾರ ವ್ಯವಸ್ಥೆಯೂ ಅಷ್ಟಕ್ಕಷ್ಟೇ, ಹೆಚ್ಚು ಕಡಿಮೆ ಅಧ್ವಾನ್ನ ಅನ್ನೋ ಥರಾ ಅಂತಾನೇ ಅನಕೊಳ್ಳಿ. ಆಗಿನ ಹೈವೇಗಳ ಪರಿಸ್ಥಿತಿ ಎಲ್ರಿಗೂ ನೆನಪಲ್ಲಿರೋದೇ. ಅಂದ ಮೇಲೆ ಈ ಚಿಕ್ಕ ಚಿಕ್ಕ ಗ್ರಾಮಗಳ ರಸ್ತೆ ವ್ಯವಸ್ಥೆ, ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.
ಕರೆಂಟ್ ಇತ್ತು. ಆದರೆ ಹೇಗಿತ್ತು, ಎಂತಿತ್ತು ಎಂಬುದು ಬಹುಶಃ ಯಾರದೇ ಕಲ್ಪನಾಶಕ್ತಿಗೆ ಒಂದು ಸವಾಲು ಒಡ್ಡೀತು. ಹಳ್ಳಿಯಾದ್ರೂ ತರಕಾರಿ ವಾರಕ್ಕೊಮ್ಮೆ ನಡೆವ ಸಂತೆಯಲ್ಲೇ ಕೊಂಡುಕೋಬೇಕು. ಆದರೆ ತುಂಬ ಚೆನ್ನಾಗಿರೋದು. ಆ ರುಚಿ ಮರೆಯುವಂತಿಲ್ಲ. ಹಾಲು, ಮೊಸರು ಬೆಣ್ಣೆ ಸಮೃದ್ಧಿ. ನಿಜ ಹೇಳಬೇಕೆಂದರೆ ನಾವು ಧಾರವಾಡಕ್ಕೆ ಬಂದ ನಂತರ ಈ ಡೈರಿ ಹಾಲಿಗೆ ಹೊಂದಿಕೊಳ್ಳಲಾಗದೇ ಸ್ವಲ್ಪ ದಿನ ಗೌಳಿಯ ನೀರು ಹಾಲಿಗೇ ಶರಣು ಹೋಗುವುದು ಅನಿವಾರ್ಯವಾಯಿತು.
ಇನ್ನು ಅಲ್ಲಿ ಬಂಕಾಪುರದಲ್ಲಿದ್ದಾಗ ನಮ್ಮ ದಿನನಿತ್ಯದ ದಿನಸಿನೂ ನಾವು ಹುಬ್ಬಳ್ಳಿಯಿಂದಲೇ ತರಬೇಕಾಗ್ತಿತ್ತು. ಇನ್ನುಳಿದ ಕಡೆಯೂ ಅದೇ ಪರಿಸ್ಥಿತಿ.ಅದನ್ನು ಮುಂದೆ ಬರೀತೀನಿ. ಬರೋ ಹೋಗೋ ಜನ ವಿಪರೀತ. ಹೀಗಾಗಿ ನಮ್ಮ ದಿನಸಿ ಸ್ಟಾಕ್ ಯಾವಾಗಲೂ ಭರ್ತಿ ಇರಬೇಕಾಗಿತ್ತು. ಹೊರಗೆ ಒಳ್ಳೇ ಹೊಟೇಲ್ ಗಳಿಲ್ಲ, ಮನೆಗೆ ಅಡಿಗೆಯವರು ಸಿಕ್ಕಿರಲಿಲ್ಲ. ಅದಕ್ಕೇ ಆ ಬರೋ ಹೋಗೋ ಅತಿಥಿಗಳ ತಿಂಡಿ, ಊಟ, ಚಹಾಪಾಣೀ ಜವಾಬ್ದಾರಿ ನನ್ನ ಹೆಗಲಿಗೇ.
ವೈದ್ಯಾಧಿಕಾರಿ ಜೊತೆಗೆ ಅಲ್ಲಿನ ಆಡಳಿತಾಧಿಕಾರಿಯೂ ಆಗಿದ್ರಿಂದ ಹಾಸ್ಪಿಟಲ್ ಗೆ ಬರುವ ಅಸಂಖ್ಯ ಅಧಿಕಾರಿಗಳ, ಅತಿಥಿಗಳ ಚಹಾ ಕಾಫಿ ಸರಬರಾಜಿಗಂತೂ ಲೆಕ್ಕವೇ ಇರಲಿಲ್ಲ. ಮೂರು ಟೀ ಸೆಟ್ ರೆಡಿ ಯಾವಾಗಲೂ. ಒಂದು ಇಟ್ಟು ಇನ್ನೊಂದು ಒಯ್ಯುವುದು ಆಯಾ ಗಂಗಮ್ಮನ ಕೆಲಸ. ರಾಮಣ್ಣ, ಸೋಮಣ್ಣರೂ ಬರ್ತಿದ್ರು ಅನ್ನಿ.

ನಮ್ಮ ಕ್ವಾರ್ಟರ್ಸ್ ಹಾಗೂ ಆಸ್ಪತ್ರೆಗೆ ಮಧ್ಯೆ ಒಂದು 50 – 60 ಮೀಟರ್ನಷ್ಟು ಅಂತರ ಇತ್ತು. ಅಲ್ಲಿ ಆಸ್ಪತ್ರೆಯ ಮೆಟ್ಟಿಲು ಇಳಿಯುತ್ತಲೇ ಗಂಗಮ್ಮ ‘ಬಾಯರ’ ಅಂತ ಕೂಗಿದ್ರೆ ನನ್ನ ಮಕ್ಕಳು ಹೇಳೋರು – ‘ಅಮ್ಮಾ ಗಡಗಡ ಗಂಗಮ್ಮಾ ಬಂದ್ಲು. ಚಹಾ ಕಾಫಿ ಏನಾದರೂ ಬೇಕಾಗಿರಬೇಕು. ಸ್ಟೌವ್ ಹೊತ್ತಿಸು’ ಅಂತ. ಅವಕ್ಕೂ ಗೊತ್ತಾಗಿ ಬಿಟ್ಟಿತ್ತು. ಆಗಿನ್ನೂ ನನ್ನ ಹತ್ರ ಗ್ಯಾಸ್ ಸ್ಟೌವ್ ಇರ್ಲಿಲ್ಲ. ಅಲ್ಲಿಗೆ ಬಂದ ಎರಡೇ ತಿಂಗಳಲ್ಲಿ ತಗೋಬೇಕಾಯ್ತು. ಸೀಮೆ ಎಣ್ಣೆ ಸ್ಟೌವ್ ಮೇಲೆ ಕೆಲಸ ನಡೆಸೋ ಸಾಧ್ಯತೆಯೇ ಇರಲಿಲ್ಲ. ಅದೂ ಬಂತು.
ದಿನಗಳಂತೂ ಕಾಲಿಗೆ ಚಕ್ರ ಕಟ್ಟಿಕೊಂಡು ಧಡ ಭಡ ಉರುಳುತ್ತಲೇ ಹೋಯ್ತು ಹೊಸ ಹೊಸ ನೋಟ ತೋರಿಸುತ್ತಾ. ನನಗೂ ಈಗ ಅಲ್ಲಿನ ಪ್ರತಿಯೊಬ್ಬರೂ – ಅಟೆಂಡರ್ ರಾಮಣ್ಣ, ಸೋಮಣ್ಣ, ಆಯಾ ಗಂಗಮ್ಮ, ಡ್ರೈವರ್ ಬಿಸ್ತಿ, ಅಲ್ಲೇ ಆಸ್ಪತ್ರೆ ಆವರಣದಲ್ಲಿಯೇ ಇರುವ
ಸಿಸ್ಟರ್ ಗಳು, ಹೆಲ್ತ್ ವರ್ಕರ್ಸ್, ಲೇಡಿ ಡಾಕ್ಟರ್, ICDS ಮೆಡಿಕಲ್ ಆಫೀಸರ್ (Integrated Child Development Scheme ನ ಅಧಿಕಾರಿಗಳು) ಎಲ್ಲಾ ಅವರವರ ಕುಟುಂಬ ಗಳೊಂದಿಗೆ ನಮ್ಮವರೇ ಆಗಿ ಬಿಟ್ರು ಒಟ್ಟಲ್ಲಿ ಎಲ್ಲಾ ಒಂದು ದೊಡ್ಡ ಬಳಗ, ಒಂದೇ ಮನೆಯವರು ಅನ್ನೋ ಥರ. ICDS ಮೆಡಿಕಲ್ ಆಫೀಸರ್ ಹೆಂಡತಿ ಯಂತೂ ನನ್ನ ಒಳ್ಳೇ ಸ್ನೇಹಿತೆ ಆದ್ರು. ಈಗಲೂ ನಮ್ಮ ಸ್ನೇಹ ಹಾಗೇ ಇದೆ ದೂರ ದೂರ ಇದ್ರೂ. ಹೀಗೆ ನನ್ನ ಹೊರಲೋಕ ವಿಶಾಲವಾದಂತೆ ನನ್ನ ಮನದ ಗೂಡಿನ ಪ್ರತಿ ಕಿಂಡಿಯೂ ತೆರೆಯುತ್ತಾ ಹೋಯ್ತು.
ನನಗೇ ಗೊತ್ತಿಲ್ಲದಂತೆ ನಾ ಭಾಳ ದೊಡ್ಡವಳಾಗಿ ಬಿಟ್ಟಿದ್ದೆ, ಬೆಳೆದು ಬಿಟ್ಟಿದ್ದೆ. ಅಗಣಿತ ಅನುಭವಗಳ ಗೂಡಾಗಿ ಬಿಟ್ಟಿದ್ದೆ. ಅಲ್ಲಿ ಬರುವ ಪ್ರತಿ ಪೇಷಂಟ್ ಗಳ ಕಾಳಜಿ ತಗೋಬೇಕು ಅನಿಸೋ ಅಷ್ಟು ಸರಳ ಜನ. ಅದಕ್ಕೆ ಅಪವಾದಗಳು ಇರ್ಲಿಲ್ಲ ಅಂತೇನಲ್ಲ. ಎಲ್ಲರೂ ಒಂದೇ ಥರ ಇರೋದಿಲ್ಲ ಅನ್ನೋದನ್ನ ಒಪ್ಪಲೇ ಬೇಕು ಅಲ್ವಾ? ಆದರೆ ಆ ಅನುಭವಗಳು, ನೆನಪುಗಳು ನನಗೆ ಇಂದಿಗೂ ಅಮೂಲ್ಯ.
ಜೀವನದ ಹಲಬದಿಗಳನ್ನು ತೋರಿದ ಆ ದಿನಗಳನ್ನು, ಆ ಜನರನ್ನು ಹೇಗೆ ಮರೆಯಲಿ? ಸ್ವಲ್ಪ ಭಾವುಕಳಾಗಿ ಬಿಟ್ಟೆ ಕಳೆದ ದಿನಗಳ ಆ ನೆನಪಲ್ಲಿ ಮುಳುಗಿ. ಈಗ ಇಲ್ಲೊಂದು ಘಟನೆ ಹೇಳ್ತೀನಿ. ಆಗ ನಾ ಯಾಕೆ ಇಷ್ಟು ಭಾವುಕಳಾದೆ ಎಂಬುದರ ಕಲ್ಪನೆ ಬರಬಹುದು.
ಆಗಿನ್ನೂ ಅದೇ ಹೊಸದಾಗಿ ಫ್ಯಾಮಿಲಿ ಪ್ಲಾನಿಂಗ್ ನ ಲ್ಯಾಪ್ರೋಸ್ಕೋಪಿಕ್ ಆಪರೇಷನ್ ಶುರು ಆಗಿತ್ತು. ಆಗ ಈ ಲ್ಯಾಪ್ರೋಸ್ಕೋಪಿಕ್ ಆಪರೇಷನ್ ಗೆ ಪೇಷಂಟ್ ಗಳನ್ನು ಹುಬ್ಬಳ್ಳಿಗೇ ಕರೆದುಕೊಂಡು ಹೋಗ ಬೇಕಾಗಿತ್ತು. ಟ್ಯೂಬೆಕ್ಟಮಿ ಆಪರೇಷನ್ ನನ್ನ ಗಂಡನೇ ಇಲ್ಲೇ ಅಂದರೆ ಬಂಕಾಪುರ ಆಸ್ಪತ್ರೆ ಲೇ ಮಾಡ್ತಿದ್ರು. ಆ ದಿನ ಅದು ಮೊದಲ ಸಲ ಆಯೋಜಿಸಿದ್ದ ಲ್ಯಾಪ್ರೋಸ್ಕೋಪಿಕ್ ಆಪರೇಷನ್ ಕ್ಯಾಂಪ್.
30 ಜನ ಮಹಿಳೆಯರನ್ನು ಆಪ್ರೇಷನ್ ಗಾಗಿ ಹುಬ್ಬಳ್ಳಿಗೆ ಕರೆದೊಯ್ಯುವ ತಯಾರಿ ನಡೆದಿತ್ತು. ಆಸ್ಪತ್ರೆಲಿ ಗಲಾಟೆಯೋ ಗಲಾಟೆ. ನನ್ನ ಮನೆಲೂ ಅಷ್ಟೇ. ಮೇಲಿಂದ ಮೇಲೆ ಚಹಾ, ಕಾಫಿ, ಹಾಲು ಸರಬರಾಜು ನಿರಂತರ ನಡೆದೇ ಇತ್ತು. ಇದರ ಜೊತೆಗೆ ನಾ ಇನ್ನೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೆ ನನ್ನ ಮನೇಲಿ. ನಮ್ಮ ಸ್ಟಾಫ್ ನರ್ಸ್, ದಿನ ತುಂಬಿದ ಚೊಚ್ಚಲು ಬಸಿರಿಗೆ ಕುಬುಸದ್ದು- ಸಂಜೆ 5.30 ಕ್ಕೆ. ಇಡ್ಲಿ, ಚಟ್ನಿ, ಶಿರಾ, ಕಾಂದಾ ಭಜಿ ಬಾದಾಮ್ ಹಾಲು, ಬಾಳೆಹಣ್ಣು ಇದಿಷ್ಟು ಮೆನು.

ಆಪರೆಷನ್ ಗೆ ಕೇಸುಗಳನ್ನು ಹುಬ್ಬಳ್ಳಿಗೆ ಕರೆದೊಯ್ಯುವ ಬಸ್ ನಾಲ್ಕು ಗಂಟೆಯಾದ್ರೂ ಇನ್ನೂ ಬಂದಿರಲಿಲ್ಲ. ಅವರೆಲ್ಲ ಹಸಿದು ಬಿಟ್ಟಿದ್ರು. ಚಿಕ್ಕ ಚಿಕ್ಕ ಮಕ್ಕಳು ಜೊತೆಯಲ್ಲಿ. ಕೆಲವು ಬಾಣಂತಿಯರು, ಆ ಎಳೇಕಂದಮ್ಮಗಳನ್ನು ನೋಡಿಕೊಳ್ಳಲು ಅಜ್ಜಿಯೋ, ಅತ್ತೆಯೋ ಜೊತೆಗೆ. ಒಟ್ಟು 48 ಜನ ಇದ್ರು ಸುಮಾರು. ಸುರೇಶ ಅವರ ಫರ್ಮಾನು ಬಂದೇ ಬಿಡ್ತು ಗಂಗಮ್ಮನ ಮೂಲಕ. “ಬಾಯರ ಆ ಮಂದಿಗೆಲ್ಲ ತಿಂಡಿ ಚಹಾದ ವ್ಯವಸ್ಥೆ ಮಾಡಬೇಕಂತ್ರಿ. ಬಸ್ಸು ಬರೋದು ಇನ್ನೂ ತಡಾ ಆಕ್ಕೇತಂತ್ರಿ. ಅವರೆಲ್ಲ ಹಸದಾರ್ರಿ. ಅದಕ ಗಡಾನ ಮಾಡಬೇಕಂತ್ರಿ” ಅಂದ್ಲು. ಏನು ಮಾಡಬೇಕು ಹೇಳಿ. ಒಬ್ರಲ್ಲ, ಇಬ್ರಲ್ಲ, ಒಟ್ಟು 48 ಜನ! ನಾ ಏನೇ ಮಾಡಿದ್ರೂ ಧಂಡಿಯಾಗೇ ಮಾಡ್ತಿದ್ದೆ.
ಯಾವ ಹೊತ್ತಲ್ಲಿ ಯಾರು, ಎಷ್ಟು ಜನ ಹೇಗೆ ಬರ್ತಾರೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಹೇಳಿದ್ನೆಲಾ ನಾ ಬೆಳೆದು ಬಿಟ್ಟಿದ್ದೆ ಅಂತ! ಆದರೆ ಕುಬುಸದ ಕಾರ್ಯಕ್ರಮ ಕ್ಯಾನ್ಸಲ್ ಮಾಡಬೇಕಾಯ್ತು. ಎರಡನ್ನೂ ಒಟ್ಟಿಗೆ ಮ್ಯಾನೇಜ್ ಮಾಡೋದು ಕಷ್ಟಸಾಧ್ಯ ಅನಿಸ್ತು. ಅಲ್ಲದೇ ನಾನೂ ಇಲ್ಲಿ ಸುಮಾರು ಜನಕ್ಕೆ ಕರೆದಿದ್ದೆ. ಎಲ್ಲರಿಗೂ ಅಷ್ಟು ಇಡ್ಲಿ ಹಿಟ್ಟು ಸಾಕಾಗ್ತದೋ ಇಲ್ವೋ ಅನುಮಾನ.ಅದಕ್ಕೇ ಹಾಗೇ ನಿರ್ಧಾರ ಮಾಡಿ ಗಂಗಮ್ಮಗೆ
ಹೇಳ್ದೆ – “ಗಂಗಮ್ಮಾ ಇನ್ನರ್ಧ ತಾಸು ಬಿಟ್ಟು ಅವರನ್ನೆಲ್ಲ ಕರಕೊಂಡು ಬಾ” ಅಂತ. ಸರಿ ಶುರು ಆಯ್ತು ನನ್ನ ಕೆಲಸ- ಎರಡೂ ಗ್ಯಾಸ್ ಸ್ಟೌವ್ ಮೇಲೆ ಒಂದೊಂದು, ಸೀಮೆ ಎಣ್ಣೆ ಸ್ಟೌವ್ ಮೇಲೆ ಒಂದು ಕುಕ್ಕರ್ ಇಟ್ಟೆ. ಎರಡು ಸ್ಟ್ಯಾಂಡ್ ನನ್ನದಿತ್ತು, ಇನ್ನೊಂದು ಸಂಧ್ಯಾ (ICDS M.O.ಅವರ ಹೆಂಡತಿ) ಹತ್ರ ತಗೊಂಡು ಬಂದ್ಲು ಸೀತವ್ವ. ಶಿರಾ ಮಾಡಿ ಆಗಿತ್ತು. ಸ್ವಲ್ಪ ಬೇಸನ್ ಲಾಡು ಇತ್ತು ಮನೇಲಿ. ಎರಡು ದಿನಗಳ ಮೊದಲು ನಮ್ಮ ತಂದೆ ಬಂದು ಹೋಗಿದ್ರು.
ನಮ್ಮ ಅವ್ವ ಕೊಬ್ಬರಿ ಬರ್ಫಿ ಕಳಸಿದ್ಲು ಅವರ ಜೊತೆ. ಸೀತವ್ವ ಚಟ್ನಿ ತಿರುವಿ ಇಟ್ಟಳು. ಮಿಕ್ಸಿ ಇರ್ಲಿಲ್ಲ ನನ್ನ ಹತ್ರ ಆಗ. ಈ ಗಲಾಟೆ ಆದ ಮರುವಾರವೇ ತಗೊಂಡು ಬಂದೆ ಅನ್ನಿ. ರಾಮಣ್ಣ ಹೋಗಿ ತನ್ನ ಮಗಳು ಗಿರಿಜಾ ನ್ನೂ ಕರಕೊಂಡು ಬಂದ. ಸರಿ ನಮ್ಮ ಪಾಹುಣೆ ಎಲ್ಲಾ ಬಂದ್ರು ಹಸಿದು ಹಸಿದು. ಆಗ ಪೇಪರ್ ಪ್ಲೇಟ್ಸ್ ಚಾಲ್ತಿ ಯಲ್ಲಿರಲಿಲ್ಲ. ಅದಕ್ಕೇ ಮುತ್ತುಗದೆಲೆಯ ಕಟ್ಟು ಯಾವಾಗಲೂ ಇರ್ತಿತ್ತು ನನ್ನ ಮನೇಲಿ. ಬಾಳೆಎಲೆನೂ ಸ್ವಲ್ಪ ಕಷ್ಟವೇ ಅಲ್ಲಿ ಸಿಗೋದು. ನೀರಿನ ತಾಪತ್ರಯವೂ ಬಹಳ ಅಲ್ಲಿ.
ನನ್ನ ಪುಣ್ಯ- ಆ ದಿನವೇ ನೀರು ಬಂದಿತ್ತು. ಹಸಿದು ಬಂದ ಅವರಿಗೆಲ್ಲ ಇಡ್ಲಿ ಚಟ್ನಿ, ಶಿರಾ- ಬೇಸನ್ ಉಂಡಿ- ಕೊಬ್ಬರಿ ಬರ್ಫಿ ಎಲ್ಲಾ adjust ಮಾಡಿ ಹೊಟ್ಟೆ ತುಂಬ ತಿನಿಸಿದ್ದಾಯ್ತು. ಬಾಳೆಹಣ್ಣು- ಹಾಲು ಕುಡಿದ ಮಕ್ಕಳ ಮುಖದ ಮೇಲೆ ನಗು ಮೂಡಿಸ್ತು.ಆದರೆ ಆ ಹಸಿದ ಮಕ್ಕಳ ಅತ್ತಿತ್ತ ಹುಡುಕುವ ಮುಗ್ಧ ಕಣ್ಣುಗಳು, ಆ ತಾಯಂದಿರ ಕಣ್ಣ ಕೃತಜ್ಞತೆಯ ಕಣ್ಣೀರ ಸೆಲೆ ಇಂದಿಗೂ ನನ್ನ ಕಣ್ಣನ್ನು ತುಂಬಿ ತುಳುಕಿಸ್ತದೆ. “ಯವ್ವಾ ನೀ ಸಣ್ಣಾಕಿ. ಆದ್ರ ನಮ್ಮವ್ವನಕಿಂತಾ ಹೆಚ್ಚು, ದೊಡ್ಡಾಕಿ ಆಗಿ ಬಿಟ್ಟಿ ಯವ್ವಾ ನೀ.ನಿನ್ನ ಹೊಟ್ಟಿ ಥಣ್ಣಗಿರಲಿ. ನಿನ್ನ ಬಳ್ಳಿ ಹಬ್ಬಲಿ ಯವ್ವಾ. ಡಾಕ್ಟರ್ ಸಾಹೇಬ್ರು ನಮ್ಮ ಅಪ್ಪಾರ ಯವ್ವಾ.ಆದರ ನೀ ಒಂದ ಕೈ ಮ್ಯಾಗ ಯವ್ವಾ!”
ನೀವೇ ಹೇಳಿ – ಮರೆಯಲಾದೀತಾ ಆ ಎದೆಯಾಳದ ಒದ್ದೆ ಮಾತುಗಳನ್ನು? ಆ ನನ್ನವರಲ್ಲದ ನನ್ನವರನ್ನು ? ಇನ್ನೇನು ಬೇಕು ಹೇಳಿ ಈ ಜೀವಕ್ಕೆ? ಅಮೂಲ್ಯ ಅಲ್ವಾ ಈ ನೆನಪುಗಳು? ನನ್ನ ಮಕ್ಕಳು, ನನ್ನ ಹಿಂದೆ ನಿಂತು ಬೆರಗು ಗಣ್ಣರಳಿಸಿ ಬಗ್ಗಿ ಬಗ್ಗಿ ನೋಡುತ್ತಿದ್ದ ನನ್ನ ಪುಟ್ಟ ಮಕ್ಕಳು ಇಂದು ಬೆಳೆದು ದೊಡ್ಡವರಾಗಿದ್ದಾರೆ. ಕುಡಿ ಚಿಗುರೊಡೆದು ಬಳ್ಳಿ ಹಬ್ಬಿದೆ. ನಮ್ಮನ್ನು ಅದರಡಿಯ ನೆರಳಲ್ಲಿ ತಂಪಾಗಿರಿಸಿದ್ದಾರೆ.
|ಮುಂದಿನ ಸಂಚಿಕೆಯಲ್ಲಿ|






Comment
ಸರಣಿ ಚೆನ್ನಾಗಿ ಬರುತ್ತಿದೆ. ಒಂದು ಕಾಲಘಟ್ಟದ ಬದುಕಿನ ಚಿತ್ರಣದೊಂದಿಗೆ. ಮುಗ್ಧ ಹಳ್ಳಿಯವರ ಮನಸ್ಸನ್ನು ಮತ್ತು ಮಾನವೀಯ ಸಂಬಂಧಗಳನ್ನು. ಕಣ್ಣಮುಂದೆ ಬಿಚ್ಚಿಟ್ಟ ಎರಡೇ ದಿನದಲ್ಲಿ ಬೆಳೆದು ಮುಗಿಲು ಮುಟ್ಟಿದ ಡಾಕ್ಟರ್ ಹೆಂಡತಿಯ ಬೆಳವಣಿಗೆ, ಆಕೆಯ ಮನೋಸ್ಥೈರ್ಯ ಮೆಚ್ಚುವಂಥದು. ಇದನ್ನು ಆರಂಭ ಮಾಡಿದ ಅವಧಿಗೆ ಅಭಿನಂದನೆಗಳು! ಶ್ರೀವತ್ಸ ದೇಸಾಯಿ.
ಅವಧಿಗೆ ಧನ್ಯವಾದಗಳು.
ಶ್ರೀವತ್ಸ ದೇಸಾಯಿಯವರು ಹೇಳಿದಂತೆ ನನಗೇ ಗೊತ್ತಿಲ್ಲದಂತೆ ಬೆಳೆದು ಬಿಟ್ಟಿದ್ದೆ ನಾ! ತುಂಬ ಧನ್ಯವಾದಗಳು ತಮಗೆ ಆಸ್ಥೆಯಿಂದ ಓದಿ ಪ್ರತಿಕ್ರಿಯಿಸಿದ್ದಕ್ಕೆ!
ನನ್ನ ಹಳ್ಳಿ ದಿನಗೋಳೂ ನೆಪ್ಪಾದವು ಮೇಡಂ.
ನಮಸ್ಕಾರ
ನೆನಪಿನ ಗಣಿಯಲ್ಲಿ ಸದಾಕಾಲವೂ ಉಳಿಯುವಂತ ರತ್ನಗಳು ಇಂತ ನೆನಪುಗಳು
ನಮಸ್ಕಾರ ಸರ್ . ಹೌದು ಖಂಡಿತಾ ಒಂದು ನೆನಪು ಇನ್ನೊಂದು ನೆನಪಿನ ಎಳೆಯನ್ನು ಎಳೆದು ಹೆಣೀತಾ ಹೋಗ್ತಾರೆ.ಧನ್ಯವಾದಗಳು ತಮಗೆ.
ತುಂಬಾ ಚೆನ್ನಾಗಿ ಹೇಳಿದ್ರಿ ಶ್ರವಣಕುಮಾರಿಯವರೇ. ಜೀವನ ಪರ್ಯಂತ ನಮ್ಮ ಜೊತೆಗೇ ಉಳಿಯುವ , ಅಳಿಯದ ಅನರ್ಘ್ಯ ರತ್ನಗಳು ಇವು! ತುಂಬಾ ಧನ್ಯವಾದಗಳು ಮೇಡಂ!
ಬಹಳ ಬಹಳ ಇಷ್ಟವಾಯ್ತು. ಒಟ್ಟಿಗೇ ನಲವತ್ತೆಂಟು ಹೊಟ್ಟೆಗಳ ಹಸಿವು ತಣಿಸುವುದು ಅದರಲ್ಲೂ ಏಕಾಏಕಿ ಬಂದ ಸಂದರ್ಭದಲ್ಲಿ ನಿಭಾಯಿಸುವುದು ಎಷ್ಟು ಕಷ್ಟವೆಂಬುದು ನನಗೆ ಗೊತ್ತು. ಸಹನೆಯಿಂದ ಎಳೆಬಾಣಂತಿಯರು , ಮಕ್ಕಳು , ಮುದುಕಮ್ಮರ ಹೊಟ್ಟೆ ತುಂಬಿಸಿದ ನಿಮ್ಮ ಕೈಗಳಿಗೆ ಸದಾ ಒಳ್ಳೆಯದಾಗಲಿ. ನಿಮ್ಮ ಸರಣಿ ನಿಲ್ಲಿಸಬೇಡಿ.
ತುಂಬಾ ಧನ್ಯವಾದಗಳು ಲಲಿತಾ ಮೇಡಂ! ಅವೆಲ್ಲ ಈ ಜೀವನದ ಕೊನೆಯವರೆಗೂ ಉಳಿವ ವಿಶಿಷ್ಟ ಅನುಭವಗಳು. ಕೆಲವು ಸಲ ಪೇಚಾಟ ಕ್ಕೂ ಇಟ್ಟುಕೊಂಡದ್ದಿದೆ. ಅದು ಮೂರನೇ ಕಂತಿನಲ್ಲಿದೆ.ಭೀಭತ್ಸ, ಭಯಾನಕ ಅನುಭವ ಗಳಿಗೂ ಎದೆಯೊಡ್ಡಿದ್ದಿದೆ.ಮುಂದೆ ಬರ್ತಾ ಹೋಗ್ತವೆ.ಎಲ್ಲೂ ಅತಿರಂಜನೆ ಇಲ್ಲ.ಸರಳವಾಗಿ ಹೇಳ್ತಾ ಹೋಗ್ತಿದೀನಿ.ಈ ಅವಕಾಶ ಒದಗಿಸಿದ್ದಕ್ಕೆ ಅವಧಿಗೆ ಅನಂತ ವಂದನೆಗಳೊಂದಿಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಗಂಟನ್ನು ಇನ್ನಷ್ಟು ಬಿಚ್ಚಿ ಖಾಲಿ ಮಾಡಲು ಪ್ರೇರೇಪಿಸುತ್ತದೆ ನಂಗೆ.ಅವಕಾಶ ಸಿಕ್ರೆ ಖಂಡಿತಾ ನಿಲ್ಲಿಸದೇ ಮುಂದುವರಿಸ್ತೀನಿ ಮೇಡಂ.ಅನಂತ ಧನ್ಯವಾದಗಳು ಮೇಡಂ.