ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕಂಡಂತೆ ‘ಬಿಳಿಯ ಕೋಟು’

ಸರೋಜಿನಿ ಪಡಸಲಗಿ

 ಡಾ. ಜಿ.ಎಸ್. ಮುದಗಲ್ಲ ಅವರ ಆತ್ಮಕಥನ, “ಬಿಳಿಯ ಕೋಟು” ಓದುತ್ತಿದ್ದಂತೆಯೇ ಒಂದು ಕ್ಷಣ ವಿಚಾರ ಎನ್ನಲೋ, ಚಿಂತನೆ ಎನ್ನಲೋ  ತಿಳಿಯದ ತಂದ್ರಿಯಲ್ಲಿ ಮುಳುಗಿದೆ. ಮತ್ತೊಮ್ಮೆ ಕಣ್ಣು  ಹಾಯಿಸಿದೆ, ಮಗದೊಮ್ಮೆ ಓದಿದೆ. ಪ್ರತಿ ಸಲವೂ ಒಂದು ಹೊಸ ಹೊಳವು ಅಲ್ಲಿ ನನಗೆ ಕಂಡಿತು. ಹೌದು ಅದು ಹಾಗೇ. ನಾವೇ  ಸ್ವತಃ ಬರೆದದ್ದಾಗಲೀ, ಇನ್ನೊಬ್ಬರು ಬರೆದದ್ದಾಗಲೀ ಎಷ್ಟು ಸಾರಿ ಓದ್ತೀರೋ ಅಷ್ಟು ಹೊಸತು ಅಲ್ಲಿ ಕಾಣುತ್ತದೆ. ಆದರೆ ಆ ಕೃತಿಗೆ ಓದಿಸಿಕೊಂಡು ಹೋಗುವ ಶಕ್ತಿ, ಗುಣ ಇರಬೇಕು. ಅದು ಡಾ. ಮುದಗಲ್ಲ ಅವರ ಆತ್ಮಕಥನದಲ್ಲಿ ಯಥೇಚ್ಛವಾಗಿದೆ. ಇದೇ ಆ ಪುಸ್ತಕದ, ಬರಹಗಾರನ ಯಶಸ್ಸಿನ ‌‌‌‌‌‌‌‌‌‌‌ಮಾನದಂಡ ಅನ್ನಲು ಯಾವುದೇ ತಪ್ಪಿಲ್ಲ. ಈ ನಿಟ್ಟಿನಲ್ಲಿ ಡಾ. ಮುದಗಲ್ಲ ಅವರು ಇಲ್ಲಿ ಯಶಸ್ವಿಯಾಗಿದ್ದಾರೆ, ಶೀರ್ಷಿಕೆಯ ಆಯ್ಕೆಯಿಂದ ಹಿಡಿದು ಸಮಾಪನದ ಸುಂದರ, ಸತ್ಯ ಹೇಳಿಕೆಯೂ ಸೇರಿ- “ಹಣವಂತನಾದರೆ ಯಶಸ್ವಿಯಾದಂತಲ್ಲ; ಮಾನವೀಯತೆ ಮೈಗೂಡಿಸಿಕೊಳ್ಳಬೇಕು” ಅಂತ ಹೇಳುತ್ತ. ಯಶಸ್ವಿ ವೈದ್ಯರಾದ ಅವರ ಅಂಬೋಣ ಇದೇ ಇರಲೇಬೇಕು. ಅದೇ ವೈದ್ಯರಾದವರ ಧ್ಯೇಯ ವಾಕ್ಯವಲ್ಲವೇ?

“ಬಿಳಿಯ ಕೋಟು” ಓದಿದ ಮೇಲೆ ನನ್ನ ಮನಸ್ಸಿನಲ್ಲಿ  ಫಕ್ಕನೆ ನನಗೇ ಗೊತ್ತಿಲ್ಲದಂತೆ ಒಂದು ಮಾತು ಸುಳಿಯಿತು – ಇದು  ಬರೀ ಡಾ. ಮುದಗಲ್ಲ ಅವರ ಆತ್ಮವೃತ್ತಾಂತ ಅಲ್ಲ; ಪ್ರತಿ ವೈದ್ಯನದೂ ಹೌದು. ಅದರಲ್ಲೂ ಹಳ್ಳಿ, ಸ್ವಲ್ಪ ದೊಡ್ಡದಾದ ಚಿಕ್ಕ ಪಟ್ಟಣ ಅನ್ನಿಸಿಕೊಳ್ಳುವಂಥ ಊರುಗಳಲ್ಲಿ  ಸೇವೆ  ಸಲ್ಲಿಸುವ  ಪ್ರತಿ ವೈದ್ಯನ ಅಂತರಾಳ ಇಲ್ಲಿ ಬಿಚ್ಚಿಟ್ಟಂತಿದೆ. ಅಷ್ಟು ಆಪ್ತ ಬರಹ ಮುದಗಲ್ಲರದು. ಸಮಾಜವನ್ನು ಅತಿ ಹತ್ತಿರದಿಂದ  ನೋಡುವವ ವೈದ್ಯ; ಸಾಮಾನ್ಯರೊಡನೆ ಸಾಮಾನ್ಯನಾಗಿ ಬೆರೆತು‌, ತನ್ನ ಜೀವನದ ಎಳೆಗಳನ್ನು ಅಲ್ಲಿ ಹೆಣೆದು, ತನ್ನವರಲ್ಲದ ತನ್ನವರೊಡನೆ ಬೆರೆತು ಅವರ ಜೀವನಕ್ಕೊಂದು ಬೆಳಕು ನೀಡುವವ ವೈದ್ಯ. ಅಂಥ ಎಲ್ಲ ಉದಾತ್ತ ಜೀವಗಳ ಒಂದು ಸುಖ ದು:ಖ, ನೋವು ನಲಿವೇ ಈ ಕೃತಿಯ ಜೀವತಂತು ಆಗಿರುವುದನ್ನು ನಾನು ಇಲ್ಲಿ ಕಂಡೆ. ಮತ್ತೆ ಮತ್ತೆ ಓದಿದೆ, ಮೆಲುಕು ಹಾಕಿದೆ.

 ಡಾ. ಮುದಗಲ್ಲರವರ  ಬರವಣಿಗೆಯ ಓಘ, ಶೈಲಿ, ಶಿಸ್ತು, ಪ್ರತಿಯೊಂದು ವಿಷಯವನ್ನೂ ಹಿಂಜಿ ಹಿಂಜಿ ಬಿಡಿಸಿ ಇಡುವ ರೀತಿ ಅನನ್ಯ. ತಮ್ಮ ಎಳೆವೆಯಿಂದಲೇ ಶುರು ಮಾಡಿ,ಬಾಲ್ಯ, ತರುಣನಾಗಿ, ಮುಂದೆ ವೈದ್ಯ ವೃತ್ತಿಯನ್ನು ತಮ್ಮ ಜೀವನ ಮಾರ್ಗವನ್ನಾಗಿ ಸ್ವೀಕರಿಸಿ ಯಶಸ್ವಿಯಾಗಿ ದಡ ಮುಟ್ಟಿದ ರೀತಿಯನ್ನು  ತೆರೆದಿಡುವ  ರೀತಿ ಮನೋಜ್ಞ. ಓದುಗನನ್ನು ಅದರಲ್ಲಿ ಪೂರ್ತಿ ಒಂದಾಗಿಸಿ  ಎಲ್ಲೋ ತೇಲಿಸುತ್ತ ತಮ್ಮದೇ ಬಾಲ್ಯ, ಶಾಲಾದಿನಗಳಲ್ಲಿ  ಓಲಾಡುವಂತೆ ಮಾಡಿ  ಮತ್ತೊಮ್ಮೆ ಸವಿನೆನಪುಗಳನ್ನು ಸವಿಯುತ್ತ ಓ ಇದೂ ನಮ್ಮದೇ ಎಂಬ ಆಪ್ತತೆಯಲ್ಲಿ ಮುಳುಗಿಸಿ ಬಿಡುವ ತಾಕತ್ತು ಅವರ ಲೇಖನಿಗಿದೆ. ಆ ಚಿಣಿಫಣಿ (ಚಿನ್ನಿ -ದಾಂಡು) ಆಟ, ಕಾಮನ ಹುಣ್ಣಿಮೆ ಮುಂದೆ ಕುಳ್ಳು ಕಟ್ಟಿಗೆ ಕಳುವಿನಾಟ, ಶಾಲಾದಿನಗಳಲ್ಲಿಯ ಪ್ರತಿ ಚಟುವಟಿಕೆಗಳ ವಿಸ್ತೃತ ವಿವರಣೆ ಕಣ್ಣಿಗೆ ಕಟ್ಟುವಂತೆ ಮುಂದಿರಿಸಿ,

“ಓ ಹೌದು ನಾವೂ ಹೀಗೇ ಇದ್ದಿವಲ್ಲ” ಎಂಬ ತಾದಾತ್ಮ್ಯ ಭಾವನೆ  ಓದುಗನ ಮನಸ್ಸಿನಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿ  ತಮ್ಮ ಬರವಣಿಗೆಯ ಯಶಸ್ಸಿನ ಗುಟ್ಟನ್ನು  ಬಿಚ್ಚಿಟ್ಟ ಹಾಗಿದೆ.

ವೈದ್ಯ ವೃತ್ತಿಯಲ್ಲಿ  ಬರುವ ಪ್ರತಿ ಹೊಸ ದಿನವೂ, ಒಂದೊಂದು ಇರುಳೂ ಜೀವನದ ಒಂದು  ಹೊಸ  ಆಯಾಮವನ್ನು ತೋರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.ಅಂತೆಯೇ ಇಲ್ಲಿ ಡಾ. ಮುದಗಲ್ಲ ಅವರು ಪ್ರಸ್ತಾಪಿಸಿರುವ ಒಂದೊಂದು ಅನುಭವಗಳು ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿವೆ. ಗೆಳೆಯನ  ಆಕಸ್ಮಿಕ ಹೃದಯಾಘಾತ  ಚಿತ್ತ ಕೆದಕಿದರೆ, ಮಲ್ಲಪ್ಪನವರ ಪ್ರಾಣ ಉಳಿಸಿದ್ದು ಸಮಾಜದ ಮತ್ತೊಂದು ಮುಖ ತೋರಿಸಿ ಚಕಿತಗೊಳಿಸ್ತದೆ. ದೊಡ್ಡವರ ಸಣ್ಣತನ, ಸಣ್ಣವರ ದೊಡ್ಡತನ – ಎರಡೂ ಮಗ್ಗಲುಗಳನ್ನು ನೋಡಿಯೂ ನೋಡದಂತೆ ಮುನ್ನಡೆಯ ಕಲಿಸುತ್ತದೆ. ಒಂದೇ ಎರಡೇ ನೂರಾರು ಕಲಿಕೆ ಗಳ ಆಗರವಾಗಿ ತೋರ್ತದೆ ಆ ವಿಶಿಷ್ಟ ಜೀವನ. ಒಬ್ಬ ವೈದ್ಯನ ಪತ್ನಿಯಾಗಿ  ವೈದ್ಯರ ಜೀವನದ ಒಳಹೊರಗನ್ನು ಬಲು ಚೆನ್ನಾಗಿ ಬಲ್ಲ, ಅನುಭವಿಸಿದ  ನಾನು ಅದನ್ನು ಮನಗಂಡು ಬಿಟ್ಟಿದ್ದೇನೆ. ತಾನು, ತನ್ನವರು, ಮನೆ, ಮಕ್ಕಳು ಎಲ್ಲ ಮರೆತು ತನ್ನ ಕೆಲಸದಲ್ಲಿ ವೈದ್ಯ ಒಂದಾಗಿ ಹೋದಾಗ  ಅಷ್ಟೇ ಆತಂಕ, ಜವಾಬ್ದಾರಿಯ ಭಾರದಡಿ ಆತನ  ಕುಟುಂಬವೂ ಸಿಲುಕಿ  ಆತನ ಜೊತೆಗೆಯೇ ಮುಂದೆ ಸಾಗದಿರಲಾಗದೇ  ಒದ್ದಾಡಿ ಹೋಗ್ತದೆ ಎಂಬುದು ಪಕ್ಕಾ. ಅದನ್ನು ಮರೆಯುವಂತಿಲ್ಲ. ಆ ಆತಂಕದ  ಪ್ರಭಾವ ಡಾ.ಮುದಗಲ್ಲರವರ  ಪತ್ನಿಯ ಮೇಲಾಗಿ ಅವರು ನರಳಿದ್ದನ್ನು ಕಂಡೆ ಈ  ಬಿಳಿಕೋಟಿನಲ್ಲಿ. ಆದರೆ ಆ ಕೋಟು ಬಣ್ಣ ಬದಲಿಸುವಂತಿಲ್ಲ. ಇದು ವೈದ್ಯ, ಆತನ ವೃತ್ತಿ. ಅಸಂಖ್ಯ ಅನುಭವಗಳ ಆಗರ “ಬಿಳಿಯ ಕೋಟು”.

ಕೊನೇದಾಗಿ ಹೇಳಬೇಕೆಂದರೆ ಬರವಣಿಗೆಯಲ್ಲಿ ಶಿಸ್ತು, ಒಪ್ಪ, ಓರಣ ಚೊಕ್ಕವಾಗಿ ಎದ್ದು ಕಂಡು “ಬಿಳಿಯ ಕೋಟು” ತುಂಬ ಆಕರ್ಷಕವಾಗಿ ಕಾಣ್ತಿದೆ. ಅದರ ಜೊತೆಗೆ ಡಾ. ಮುದಗಲ್ಲ ಅವರ ಮುಂಬರುವ ಕೃತಿಗಳಲ್ಲಿ ಇನ್ನಷ್ಟು ಬಿಗುವು ಸಶಕ್ತತೆ ಹೆಚ್ಚಿ  ಮತ್ತಷ್ಟು ಪ್ರಭಾವಿ ಕೃತಿಗಳಾಗಿ ಮಿರುಗಲಿ ಅಂತ ಹಾರೈಸ್ತೀನಿ. ಆ ಕಾಲಘಟ್ಟದ ಪ್ರತಿಯೊಂದು ಸಂದುಗೊಂದುಗಳಲ್ಲಿ ಸುಳಿದಾಡಿಸಿ ಜನಮಾನಸದ ಜೀವನ ದರ್ಶನ ಮಾಡಿಸುತ್ತಲೇ ತಮ್ಮ ವೈದ್ಯಜೀವನದ ಒಳಗನ್ನು ತೆರೆದಿಡುತ್ತ, ಸರಳ ಸುಲಲಿತವಾಗಿ ಹರಿಯುತ್ತ ಸರಾಗವಾಗಿ ಓದಿಸಿಕೊಂಡು ಹೋಗುವ ಸಾಹಿತ್ಯಿಕ ಕೃತಿ ಒಂದನ್ನು ನೀಡುವಲ್ಲಿ ಡಾ. ಮುದಗಲ್ಲ ಅವರು ಯಶಸ್ವಿಯಾಗಿದ್ದಾರೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ.

‍ಲೇಖಕರು Admin

4 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading