ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.
ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.
ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.
ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…
23
ಒಂದ ಮಾತು ನಾ ಎಷ್ಟೋ ಸರ್ತೆ ವಿಚಾರ ಮಾಡೇ ಮಾಡ್ತೇನಿ ಮತ್ತ ಅದs ಮಾತs, ಅಗದೀ ಚೂರೂ ಬದ್ಲಾಗದs ಹಂಗೇ ಅನಕೋತಿನಿ – ಹೌದು; ಖರೇನ ನಮ್ಮ ಅವ್ವಾ ಅಷ್ಟ ಧಾಡಸಿ ಹೆಣ್ಮಗಳ ಅಲ್ಲ. ಈಕೀನ ಧರತೀನ ಬ್ಯಾರೆ; ಏಕಾನ ಧೀಟೇ ಬ್ಯಾರೆ. ಒಬ್ಬರ ಹಾಂಗ ಮತ್ತೊಬ್ಬರು ಇರೂದಿಲ್ಲ. ನಮ್ಮ ಅವ್ವಾ ಗಿಡಕ್ಕ ಹಬ್ಬಿ ನಿಂತ ಬಳ್ಳಿ ಹಾಂಗ. ಅಗದೀ ಸಹಜೀಕ ಆ ಧರತಿ. ಅವ್ವಾಗ ಆಕಿ ಬದುಕಿನ ಕಡೀ ಗಳಗೀ ತನಕಾ ಅಣ್ಣಾಂದ ನೆರಳಿನ ದೊಡ್ಡ ಆಸರ ಇತ್ತು; ಅಣ್ಣಾ ಆಕಿ ಬಾಜೂಕನs ಇದ್ರು. ಅದೂ ಅಲ್ಲದ ಆಕಿಗೆ ಬೇಕೋ , ಬ್ಯಾಡೋ ಏಕಾ ಪ್ರತಿ ಗಳಿಗಿ ಆಕಿ ಸೋಬತಿ ಇದ್ಲು ತನ್ನ ಕಡಿ ಉಸಿರ ಇರೂ ತನಕಾ ; ತನ್ನ ಜೀವಾ ಒತ್ತಿ ಇಟ್ಟು ಏನು ಬೇಕಾದ್ರೂ ಸಂಭಾಳಸೂ ಛಾತಿ ಇದ್ದ ಒಂದ ಹಿರಿ ಜೀವ ಅದು. ಆರೂ ಮಕ್ಕಳು ಅವ್ವಾನ ಸುತ್ತಗಡೆ ಕೂತು ಅಂದ್ರ ಹೊರಗ ಹೆಜ್ಜಿ ಇಡಲಿಕ್ಕೆ ಅಕಿಗೆ ಸಂದೇ ಇರತಿದ್ದಿಲ್ಲ. ಬಹುತೇಕ ಹೊರಗ ಒಂದ ಬ್ಯಾರೆ ಪ್ರಪಂಚ ಅದ ಅಂಬೂದೂ ಆಕಿ ಆಗ ಮರತ ಬಿಡ್ತಿದ್ಲೋ ಏನೋ! ಅಂವಗ ಕೆಮ್ಮ ಬಂತು; ಈಕಿಗೆ ನೆಗಡಿ ಬಂತು; ಅಂವಾ ಮೂರ ತಿಂಗಳ ಪರೀಕ್ಷಾದಾಗ ಸಾಯನ್ಸ್ ಬರೋಬ್ಬರಿ ಮಾಡಿಲ್ಲ; ಈಕಿ ವಾಕ್ ಸ್ಪರ್ಧಾದಾಗ ಒಂದನೇ ನಂಬರ್ ಬಂದ ಖುಷಿ. ಹಿಂಗೇ ಒಂದs, ಎರಡs! ನೂರಾ ಎಂಟ ವಿಚಾರ, ಹಜಾರ ಲೆಕ್ಕಾಚಾರ ಆಕೀವು , ತನ್ನ ಸುತ್ತ ಮುತ್ತ ಗಿರಕಿ ಹೊಡ್ಯೂ ಅಂಥಾವ. ಅದಕs ಜೋಶಿ ವಕೀಲರ ಹೆಂಡತಿ ಅಸರಂತ ಅನಾವ್ರು ತಮ್ಮ ಮಗಳು ಮುಂದ – “ಕುಸುಮ ತಾಯಿ ಒಂದ ದಿನಾ ಏನ ಕಟ್ಟಿ ಮ್ಯಾಲ ಕೂತು ಹರಟಿ ಹೊಡಕೋತ ವ್ಯಾಳ್ಯಾ ಹಾಕೂದನ ನೋಡಿಲ್ಲ ನೋಡು” ಅಂತ. ಹಿಂಗ ನಮ್ಮ ಅವ್ವಾನ ಪ್ರಪಂಚನs ಬ್ಯಾರೆ.
ಏಕಾ ಮಾತ್ರ ಇದನ್ನೆಲ್ಲಾ ಬೇಡಿ ಬರಲಿಲ್ಲ. ಆಕಿ ಬಟಾ ಬಯಲನ್ಯಾಗ ನಿಂತ ಒಂಟಿ ಗಿಡಧಂಗ ಇದ್ಲು. ಅಕಿಗೆ ನೆಳ್ಳ ಹಿಡ್ಯಾವ್ರ ಯಾರೂ ಇದ್ದಿದ್ದಿಲ್ಲ. ಉಲ್ಟಾ ಆಕೀನs ಬ್ಯಾರೇದಾವ್ರಿಗೆ ನೆಳ್ಳ ಕೊಡು ಇಷ್ಟಗಲ ಹರಡಿ ನಿಂತ ಆಲದ ಮರಾ ಆಗಿದ್ಲು. ಎಷ್ಟೋ ಬೀಳಲು ಆ ಗಿಡಕ್ಕ. ಆ ಗಾಳಿ, ಮಳಿ, ಥಂಡಿ, ಬಿಸಲು ಬಡದ ಬಡದ ಆಕಿ ಮೈ ಅಷ್ಟs ಏನ ಬಂತು, ಆಕಿನs ದಡ್ಡ ಬಡದ ಗಟ್ಟಿ ಆಗಿ ಬಿಟ್ಟಿದ್ಲು. ಆ ಮಾನಲೆ ನೋಡಿದ್ರ ಆಕಿ ಪ್ರಪಂಚ ಭಾಳ ದೊಡ್ಡದು. ಹದಿನೆಂಟ ವರ್ಷಕ್ಕನs ಒಂಟಿ ಆಗಿ ದಿಕ್ಕ ತಪ್ಪಿ ಮಗನ ಜೋಡಿ ತೌರಮನಿ ಹೊಕ್ಕಾಕಿ ಈ ಮಂದಿ ಕಡೆ ಬೆನ್ನ ಮಾಡಿ, ಆ ಕಡೆ ಆ ಗ್ವಾಡಿ ಕಡೆ ನೋಡಕೋತ ನೋಡಕೋತ, ಅಲ್ಲೇ ಆಕಿ ಈ ಜಗತ್ತಿನ ಚಿತ್ರಾ ಲೆಕ್ಕ ಇಲದಷ್ಟ ನೋಡಿದ್ಲು; ಒಬ್ಬೊಬ್ರಿಗೇ ಇರೂ ಬಣ್ಣ ಬಣ್ಣದ ಮಾರಿ ನೋಡಿದ್ಲು. ಆ ಗ್ವಾಡಿ ನೋಡಿ, ನೋಡಿ ಹಂಗs ಥೇಟ್ ಆ ಗ್ವಾಡಿಯೊಳಗಿನ ಕಟದ ಕಲ್ಲಿನಗತೆ ತಯಾರ ಆದ್ಲು; ಆ ಕಲ್ಲಿನ ಗ್ವಾಡಿಗೂ, ತನಗೂ ಫರಕs ಇಲ್ಲ ಅಂತ ಅನಿಸಿ ಹೊರಗ ಬಿದ್ಲು. ‘ ವಿಚಾರ ಮಾಡ ಸೋನಿ’ ಅಂದ ಅಪ್ಪಗ ರೋಕಠೋಕ ಜವಾಬ ಕೊಟ್ಲು ; ” ಅಪ್ಪಾ, ಈಗ ನಾಕ ವರ್ಷ ಆ ಗ್ವಾಡಿ ಬಾಜೂಕ ಮಲಗಿ, ಅದನ್ನ ನೋಡಿ ನೋಡಿ ನಾನೂ ಥೇಟ್ ಹಂಗೇ ಆಗಿನಿ” ಅಂದ್ಲು. ಒಂದ ಕಲ್ಲ ಚಪಡಿ ಎದಿ ಮ್ಯಾಲ ಬಿಗದ ಕಟ್ಟಿ, ಯಾವ ಬಣ್ಣನs ಇಲ್ಲದ ಒಂದ ಪಡದೆ ಇಳಿಬಿಟ್ಲು ಚೂರೂ ಅಕಡಿಕಡೆ ಆಗಧಂಗ. ಹೊರಗ ಬಂದ ನೋಡಿ ಆಕಿ ಜೀವನದ ಜೀವ ಆಗಿದ್ದ ಅಣ್ಣಪ್ಪನ ಅಂದ್ರ ನಮ್ಮ ಅಣ್ಣಾನ ಸುತ್ತ ಮುತ್ತ ಹರಡಿದ್ದ ಮುಳ್ಳಿನ ಮ್ಯಾಲ ತಾ ನಡದು ಅಣ್ಣಾನ್ನ ಕಾಯ್ದಳು. ಹಿಂಗಾಗಿ ಅಳತಿಗೆ ಸಿಗದ ಹರಿವು ಆಕಿ ಬಾಳಿಗೆ. ಆಕಿದು ವಸುಧೈವ ಕುಟುಂಬಕಂ. ಅದನ್ನ ಆಕಿ ಹೇಳೂದ ಬೇಕೇ ಆಗಿದ್ದಿಲ್ಲ; ನೋಡಾವ್ರ ದೃಷ್ಟಿ ಪಕ್ಕಾ ಆಗಿದ್ರ ಅದು ಸರsಳ ಅವರ ಎದೀಗೇ ಇಳಿತಿತ್ತು.
ಇದನ್ನೆಲ್ಲಾ ನೋಡ್ತಿದ್ದ ನನಗ ಒಂದ ಮಾತು ಪಕ್ಕಾ ಪಟಾಸ್ತು. ಒಬ್ಬೊಬ್ಬರ ಬದುಕಿನ್ಯಾಗ ಒಂದೊಂದ ರಾಗ. ಅದರದರ ಥಾಟ ಅದಕ. ಒಂದನೊಂದಕ ಹೋಲಿಕಿ ಮಾಡದ ಆ ರಾಗದ ಜಾಡ ಹಿಡದ ನಡದು ಆ ಜಾಡಿನ್ಯಾಗ ಸಿಕ್ಕದ್ದನ್ನ ಆರಿಸಿ ಆರಿಸಿ ಜೋಳಿಗಿಗಿ ಹಾಕೋತ ನಡದ್ರ ಸಾಕು; ಜೋಳಿಗಿ ತುಂಬಿದ ಈ ಬದುಕಿನ ಸಪ್ತ ಸ್ವರಗಳು, ಬದುಕಿನ ಸಾರನs ಹಾದಿ ತೋರಸ್ಕೋತ ಹೊಂಡತದ. ನಮ್ಮ ಏಕಾ ಯೋಗಿ ಆದ್ರ ನಮ್ಮ ಅವ್ವಾ ಕರ್ಮ ಯೋಗಿ. ನಮ್ಮ ಅವ್ವಾನ ನಿಸ್ವಾರ್ಥ, ನಿರಪೇಕ್ಷತೆ ಒಳಗ ಅಡಗಿದ್ದ ಸ್ವಾರ್ಥ ಅಲ್ಲದ ಸ್ವಾರ್ಥಕ್ಕ ಭಾಳ ಮಾರಿ ಇದ್ದು. ಇಬ್ರೂ ಅಸರಂತ ಜೀವಾ ತೇಯ್ದವರೇ; ಒಂದೊಂದ ರೀತಿಯೊಳಗ. ಇನ್ನ ಅಣ್ಣಾಂದು ಬ್ಯಾರೆ ಥರಾ. ಆ ಗಂಧಾನ ತಣ್ಣೆಳಲ ಹಾದಿಗೆ ಹಂದರಾ ಮಾಡಿ ಹಾಸಿದ ಜೀವಗಳು ಅವು.

ನಮ್ಮ ಅಣ್ಣಾನ ಇರಿಸರಿಕಿ, ನಡವಳಿಕಿ ನೋಡಿ ನನಗ ಅವರೊಂದು ವಿಶೇಷ ವ್ಯಕ್ತಿತ್ವ ಅನಸೂದು. ಏಕಾನ ಮ್ಯಾಲ ಕರಳಾಗಿನ ಅಂತ:ಕರಣ ಉಕ್ಕಿ ಹರದ್ರ, ಅವ್ವಾನ ಮ್ಯಾಲ ಎದಿ ತುಂಬಿ ಬರೂ ಪ್ರೀತಿ ಅವರದು; ಅಗದೀ ತಮ್ಮದs ಜೀವದ ಇನ್ನೊಂದ ಬಾಜೂ ಇದ್ಧಂಗ. ಹೊರಗಿಂದ ಬಂದು ದೇವರಿಗೆ, ಆಮ್ಯಾಲ ಏಕಾಗ ನಮಸ್ಕಾರ ಮಾಡಕೋತನs, “ಕುಶಮಿ ಚಹಾ ಮಾಡ” ಅನಾವ್ರು. ಬರಬರತ, ನಾ ಸ್ವಲ್ಪ ಸ್ವಲ್ಪ ಬೆಳಧಂಗ ಅಣ್ಣಾನ ಈ ಧರತಿ ನನಗೆ ಈ ಬದುಕಿನ ಹೊಸಾ ಅರ್ಥ ತಿಳಸ್ತಿತ್ತು. ಒಂದs ವ್ಯಾಳ್ಯಾಕ್ಕ ಸುತ್ತಲಿನ ಎಲ್ಲಾನೂ ಸಂಭಾಳಿಸಿ, ನಿಸ್ತರಿಸೂದು ಹೆಂಗ ಅಂಬೂದರ ಕಡೆ ಒಂದ ಬೆಳಕ ಚಲ್ಲಿ, ದಿನದಿನಕ ಅದು ನಿಚ್ಚಳ ಆಕೋತ ಹೋತು. ನನ್ನ ಬದುಕಿನ ತುಂಬ ನಂಜೋಡೀನ ಇದ್ದ ಆ ಬೆಳಕಿನ್ಯಾಗ ಒಂಚೂರೂ ತಡಬಡಿಸದs ನಡೀಲಿಕ್ಕೆ ಹಚ್ಚಿತು ನಾ ಕಾಲಿಟ್ಟ ಅವಿಭಕ್ತ ಕುಟುಂಬದಾಗ; ಹಂಗs ನಂದೇ ಸಂಸಾರದ ಹಜಾರ ಗೊಂದಲದಾಗ.
ಒಂದs ಒಂದ ದಿನಾ ಅಣ್ಣಾ ಅವ್ವಾನ್ನ ಬಿಟ್ಟು ಚಹಾ ಕುಡೀತಿದ್ದಿಲ್ಲ. ತಾಂವ ಕುಡಿಯೂ ಆ ಒಂದ ಕಪ್ಪಿನಾಗಿಂನs ಒಂದ ಬಶಿ ಆಕೀಗ ಕೊಟ್ಟು ಕುಡ್ಯಾವ್ರು – ಪತ್ನಿ ಪಾಲ ಅದು. ಅದರ ಜೋಡಿ ಹೊರಗಿನ ಸುದ್ದಿ – ಸುಕಾಲಾ ಎಲ್ಲಾ ನಡೀತಿತ್ತು; ಮುದ್ದಣ – ಮನೋರಮೆಯರ ಸಲ್ಲಾಪದ ತದ್ರೂಪು. ಒಟ್ಟ ಮನಿ ತುಂಬ ಒಂದ ಹಿತಕರ ಗಾಳಿ ಯಾವದs ರೊಕ್ಕಾ, ಐಶ್ವರ್ಯನ ಮೀರಿ ನಿಂತದ್ದು. ಎಲ್ಲಾ ಹೌದು, ಖರೇ ಮತ್ತ ನಾ ಇನ್ನೊಮ್ಮೆ ಹೇಳ್ತೀನಿ; ನಮ್ಮ ಈ ಆಲದ ಮರದಂಥಾ ಕುಟುಂಬದ ಬೇರು ನಮ್ಮ ಏಕಾ. ಬೇಕಾದಂಥಾ ಪ್ರಸಂಗ ಬರಲಿ; ಅದಕ ಎದಿಗೊಡ್ಲಿಕ್ಕ ತಯಾರs ಆಕಿ.
ನಾ ಒಂಬತ್ತನೇ ಕ್ಲಾಸ್‌ನ್ಯಾಗ ಇದ್ದಾಗ ನಮ್ಮ ಅಣ್ಣಾ ಸೀನೀಯರ್ ಎಂ.ಎ.ಕ್ಕ ಇದ್ರು. ಮನ್ಯಾಗ ಪ್ರಕಾಶನ್ನ ಬಿಟ್ಟು ನಾವಷ್ಟ ಹುಡಗೂರು, ಅವ್ವಾ, ಏಕಾ ಅಷ್ಟ ಇದ್ವಿ. ರಾಶಿ ವ್ಯಾಳ್ಯಾ; ಬೆಳವಿದ ಮುಗಧಂಗ ಆಗಿತ್ತು. ನಾವಷ್ಟs ಆಗ್ತೀವಂತ ಏಕಾ ಒಂದ ವಾರ ಅಷ್ಟs ಹೋಗಿ ರಾಶಿ ಮುಗಿಸಿ ಎಲ್ಲಾ ಹೊಂದಿಗಿ ಹಚ್ಚಿ ಬಂದಿದ್ಲು. 1967 ರ ಡಿಸೆಂಬರ್ ತಿಂಗಳ ಅದು. ಯಾಕೋ ಎರಡ ದಿನದಿಂದ ಮಳಿ ಹಿಡದ ಬಿಟ್ಟಿತ್ತು. ಆ ದಿವಸ ಡಿಸೆಂಬರ್ 11 ನೇ ತಾರೀಖು; ಯಾಕೋ ಮಳಿಗೂ ದಿಕ್ಕ ತಪ್ಪಿತ್ತೋ ಏನೋ, ಹಿಡದ ಹನಿ ಕಡದಿದ್ದಿಲ್ಲ. ಜಾಪೂರ ಹೊಲದ ರೈತ ಬಂದಿದ್ದ. “ಏನ ಮಾಡೂನ್ರಿ ಅಕ್ಕಾಗೋಳ; ರಾಶಿ ಕಣಾ ಎಲ್ಲಾ ಒದ್ದಿ ಮುದ್ದಿ ಆಗೇತ್ರಿ. ಜ್ವಾಳರೇ ಮತ್ತಷ್ಟ ಹಸಿ ಹಿಡದ್ದಾವ್ರಿ. ಅಲ್ಲೆ ಬಿಟ್ರ ಒಣಗಾಕ ವಾವs ಇಲ್ರಿ; ಜ್ವಾಳ ಮಳಕಿ ಬಂದ ಮುಗ್ಗ ಆಕ್ಕಾವ್ರಿ. ವರ್ಷದ ದುಡಮಿ ಹೊಳ್ಯಾಗ ಹುಂಚಿ ಹಣ್ಣ ತೊಳಧಂಗರೀ ಲೆಕ್ಕ” ಅಂತ ಮಾರಿ ಸಣ್ಣದ ಮಾಡಕೊಂಡ ಕೂತಾ. ಎಲ್ಲಾರೂ ಗಪ್ಪs ಕೂತ್ರು. ಕಡೀಕ ಏಕಾ ಹೇಳಿದ್ಲು “ಹೌದೋಪಾ, ನನಗೂ ಅದs ಚಿಂತಿ. ನಾ ಒಂದ ಹೇಳಲಿ? ಜ್ವಾಳಾ ಹಸೀವನs ಚೀಲಾ ತುಂಬಿ ಪಾಲ ಮಾಡಿ ಬಿಡು; ನಮ್ಮ ಪಾಲಿನ್ನು ಇಲ್ಲೆ ನಮ್ಮ ಈ ಎರಡೂ ನಡಮನ್ಯಾಗ ಹರವಿ ಬಿಡ್ರಿ. ಇಲ್ಲೇ ಆರಿಕೋತಾವ; ಹಂಗs ನಿಮದ ನಿಮ್ಮ ಮನ್ಯಾಗ ಹರವಿ ಬಿಡ್ರಿ. ಕಡೀಕ ಒಂದಿನಾ ಛಣಾ ಛಣಾ ಬಿಸಲ ಬಿತ್ತಂದ್ರ ಅಷ್ಟ ಛಲೋತ್ನಾಗಿ ಬಿಸಲ ತಿನಿಸಿ ಚೀಲಾ ತುಂಬಿ ಬಿಡೋಣಂತ. ಏನಂತೀ” ಅಂದ್ಲು ಏಕಾ. “ಆತ್ರಿ ಅಕ್ಕಾಗೋಳ; ಹಂಗs ಮಾಡೂನ್ರಿ. ನಾ ಗಾಡಿ ಹೂಡಿ ಜ್ವಾಳಾ ತುಂಬಕೊಂಡ ಬರೂತನಕಾ ಹೊತ್ತ ಮುಣಗಿ ತಾಸ ಆದೋತ್ರಿ” ಅಂದ ಆತ. “ಆಗಲಿ ಬಿಡ; ಫಸಲ ಅಷ್ಟ ಜ್ವಾಕೀಲೆ ಮುಟ್ಟಿಸಿ ಬಿಡು ಆತ ” ಅಂದ್ಲು ಏಕಾ.ಗೋಣ ಹಾಕಿ ಚಹಾ ಕುಡದ ಕಪ್ಪು ಬಶಿ ತೊಳದಿಟ್ಟ ಹೋದಾ ಆತ.
ರಾತ್ರಿ ಒಂಬತ್ತs ಹೊಡೀತು ಜ್ವಾಳದ ಗಾಡಿ ಬರಲಿಕ್ಕೆ. ಲೈಟಂತೂ ಮುಂಜಾನಿಂದನs ಇರಲಿಲ್ಲ. ಆ ಕತ್ತಲದಾಗ, ಲಾಟೀನು, ಗುಬ್ಬಿ ಚಿಮಣಿ ಮಬ್ಬ ಬೆಳಕಿನ್ಯಾಗ ವೈನಾಗಿ ಜ್ವಾಳಾ ಅಲ್ಲಿಂದಿಲ್ಲಿಗೆ ಹರಡಿದ್ರು ರೈತರು. ಅಂಚಗುಂಟ ಇಷ್ಟ ಘಡತರ ದಪ್ಪ ವಂಡಿ ಕಟ್ಟಿದ್ರು, ಜ್ವಾಳ ಮನಿ ತುಂಬ ಚಲ್ಲ್ಯಾಡಬಾರದು ಅಂತ. ಹೋಗೂ ಮುಂದ ಆ ರೈತ ಒಂದ ಮಾತ ಹೇಳಿ ಹೋದಾ – “ಅಕ್ಕಾಗೋಳ, ಜರಾ ಜ್ವಾಕಿರೀ. ಅಣ್ಣಾಗೋಳೂ ಊರಾಗ ಇಲ್ಲ. ಈ ಕೆಡಗಾಲ ಮಳಿ ಬ್ಯಾರೆ ಎಲ್ಲಾರ ಹೊಲದಾಗಿನ ಜ್ವಾಳಾ ಕಾಡಿಗಿ ಬಿದ್ಧಂಗ ಮಾಡೇತಿ. ನಮ್ಮ ಜ್ವಾಳಾ ಮುತ್ತ , ಮುತ್ತ ಆಗ್ಯಾವ್ರಿ. ಹುಷಾರರೀ ಅಕ್ಕಾಗೋಳ” ಅಂದಾ. ನಮ್ಮ ಏಕಾ “ಆತಪಾ” ಅಂದ್ಲು. ಊಟಾ ಗೀಟಾ ಆತು; ನಮ್ಮ ಏಕಾನ ಫರಾಳೂ ಆತು. ಏಕಾ ಆ ಹರವಿದ ಜ್ವಾಳದ ರಾಶಿ ಮಗ್ಗಲಿಗೇ ಮಲಕೊಂಡ್ಲು ಅಜ್ಜಗಾವಲಾಗಿ. ನಾವೆಲ್ಲಾ ಅವ್ವಾನ ಜೋಡಿ ಪಡಸಾಲ್ಯಾಗ ಮಲಗಿದ್ವಿ . ಎದ್ಯಾಗ ಒಂಚೂರ ಅಂಜಿಕಿ ತುಂಬಕೊಂಡಿತ್ತು. ಎರಡೂ ಖೋಲಿ ನಡವಿನ ಹೊಸಲ ಮ್ಯಾಲ ಒಂದ ಕಂದೀಲ ಹಚ್ಚಿ ಸಣ್ಣ ಮಾಡಿ ಇಟ್ಲು ನಮ್ಮ ಅವ್ವಾ.
ನಡರಾತ್ರಿ ದಾಟಿ ಎರಡ ಮೂರ ತಾಸು ಆಗಿರಬೇಕು; ಗಡಾಗಡಾ ನೆಲಾ ನಡಗಲಿಕ್ಹತ್ತು. ಖಿಡಕಿ, ಬಾಗಲಾ ಬಡಕೋಳ್ಳಿಕ್ಹತ್ತು. ಸುಂಯ್ಯ ಅಂತ ಅದೇನೋ ವಿಚಿತ್ರ ಆರ್ಭಾಟದ ಭಯಾನಕ ಸಪ್ಪಳಾ. ಎಲ್ಲಾರೂ ಘಾಬರಿನೋ ಗಾಬರಿ. ಕಂದೀಲ ಉಳ್ಳಿ ಆರಿ ಹೋಗಿತ್ತು. ಏಕಾ ಅಂತೂ ಯಾರೋ ಕಳ್ಳರು ಬಂದಾರ ಅಂತ ಎದ್ಲು. ಹೊರಗ ಗುಜು ಗುಜು ಗದ್ಲಾ, ಮಾತು. ಭಯಂಕರ ಭೂಕಂಪ ಅದು; ಕೊಯ್ನಾ ಕೇಂದ್ರ ಅದಕ. ನಮ್ದು ಮಹಾರಾಷ್ಟ್ರ ಬಾರ್ಡರ್ ಸೀಮಿ. ಹಿಂಗಾಗಿ ಅರ್ಭಾಟ ಜೋರನ ಇತ್ತು. “ಅವ್ವಾ ಭೂಕಂಪ ಇದು, ಹೊರಗ ಹೋಗೋಣ ಅಂದ್ರ ಬಿಡವಳ್ಳು ಅವ್ವಾ. ನಡಗಿಕೋತ ನಿಂತ ಬಿಟ್ಟಾಳ. ಏಕಾನs ಅಡರಾಸಿ ಬಂದು ಬಾಗಿಲ ತಗದು, ಕಣ್ಣಾಗ ಬಟ್ಟ ತಿವದ್ರೂ ಗೊತ್ತಾಗದ ಆ ಕತ್ತಲಿನಾಗ ಎಲ್ಲಾರನೂ ಮುಂದ ಹಾಕೊಂಡು ಹೊರಗ ರಸ್ತೆಕ್ಕ ಬಂದ್ಲು. ಓಣಿ ಮಂದಿ ಎಲ್ಲಾ ಅಲ್ಲಿ ಜಮಾಸಿತ್ತು. ನಾ ಅವ್ವಾನ ಮಾರಿ ನೋಡ್ದೆ; ಆಕಿ ಬಗಲಾಗ ನಾಲ್ಕ ವರ್ಷದ ಮಗು ವಿದ್ಯಾನ್ನ ಗಟ್ಟಿ ಅವಚಿಗೊಂಡು, ಆರ ವರ್ಷದ ಪ್ರದೀಪನ ಕೈ ಹಿಡ್ಕೊಂಡ ಗದಗುಟ್ಲಿಕ್ಹತ್ಯಾಳ. ಮಾರಿ ಮ್ಯಾಲ ಅಂಜಿಕಿ ಪೂರಾ ಹಾಸಿಬಿಟ್ಟದ; ಹಂಗs ಏಕಾನ ಕಡೆ ನೋಡಿದಾಗ ಒಂದ ಮಾತು ಮನಸಿನ್ಯಾಗ ಯಾಕೋ ಹೊಳೀತು;” ಆ ಹಸೀ ಜ್ವಾಳಕ್ಕ ಆಧಂಗ ನಮಗೂ ಏಕಾ ಅಜ್ಜಗಾವಲಾಗ್ಯಾಳ” ಅನಿಸ್ತು. ನಮ್ಮ ಅವ್ವಾ ಸ್ವಲ್ಪ ಮೆತ್ತಗಿನ ಹೆಣ್ಮಗಳು. ಕೆಲಸದ ವಿಷಯಕ ಅಲ್ಲಾ; ಈ ಗಟ್ಟಿತನದ ವಿಚಾರದಾಗ. ಆಸರ ಬೇಕಿತ್ತು ಆಕಿಗೆ ಗಟ್ಟಿ ಆಗಲಿಕ್ಕೆ.
ಅಣ್ಣಾ, ಏಕಾ ಇಬ್ರೂ ರಾಶಿ ಹೊತ್ತಿನ್ಯಾಗ , ಒಂದೊಂದು ಸಲಾ ಏನರೆ ಅಡಗಾಣಿಸಿದಾಗ ಅಲ್ಲೇ ಬೆಳವ್ಯಾಗs ಇರಬೇಕಾಗ್ತಿತ್ತು ಅಣ್ಣಾಗೂ. ಆಗ ಕಮ್ಮಕ್ಕಜ್ಜಿ ನಮ್ಮ ಜೋಡಿಗೆ ಇಲ್ಲೆ ನಮ್ಮ ಮನಿಗೆ ಮಲಕೋಳಿಕ್ಕ ಬರ್ತಿದ್ರು ರಾತ್ರಿ. ನಾವೆಲ್ಲಾ ಸಣ್ಣಾವ್ರ ಇದ್ದಾಗಿನ ಸುದ್ದಿ ಇದು. ಆ ಸರ್ತೆನೂ ಏಕಾ ಅಂತೂ ಆತು; ಅಣ್ಣಾನೂ ಅಲ್ಲೇ ಇದ್ರು. ದsರ ಸರ್ತೆಧಂಗ ಕಮ್ಮಕ್ಕ ಬಂದ್ರು ನಮ್ಮ ಜೋಡಿಗೆ, ಮಲಕೋಳಿಕ್ಕೆ. ನಾವೆಲ್ಲಾರೂ ನಡಮನ್ಯಾಗ ಅಲ್ಲಿಂದಿಲ್ಲಿಗೆ ಗಾದಿಗಳನ ಹಾಕಿ ಒಂದೇ ಕಡೆ ಮಲಕೋತಿದ್ವು. ಎಲ್ಲಾರೂ ಭಾಳ ಧೈರ್ಯಸ್ಥರೇ! ಆ ಸರ್ತೆ ನಮ್ಮಣ್ಣ ತನ್ನ ಗೆಳ್ಯಾ, ಬಾಜೂ ಮನಿ ಪೀಪೂನ್ನೂ ಮಲಕೋಳಿಕ್ಕೆ ಕರಕೊಂಡ ಬಂದಾ. ನಮ್ಮ ಪ್ರಕಾಶನೂ ಥೇಟ್ ಅವ್ವಾನ ಹಂಗೇ; ಸಣ್ಣ ಹಂಗೆ ನಾನೂ ಅಷ್ಟೇ! ನಮಗೂ ಎಲ್ಲಾ ಪೀಪೂ ಫ್ರೆಂಡೇ; ಎಲ್ಲಾರೂ ಕೂಡೇ ಸ್ಟಾಪ್ ಆಡ್ತಿದ್ದದ್ದು ನೆನಪದ. ಅಂವಾ ಪ್ರಕಾಶನಕಿಂತಾ ಒಂದ ವರ್ಷ ದೊಡ್ಡಾಂವಾ. (ನಂಗೆ ಅವನ ಖರೇ ಹೆಸರು ಇಂದೂ ಗೊತ್ತಿಲ್ಲ; ಅಂವಾ ಈಗ ಎಲ್ಲಿದ್ದಾನ ಅದೂ ಗೊತ್ತಿಲ್ಲ). ಆ ದಿನಾ ರಾತ್ರಿ ಸುಮಾರ ಎರಡ ಎರಡೂವರಿ ಆಗಿದ್ದೀತು; ನಡವಿನ ಬಾಗಲಾ ತಗಧಂಗ ಸಪ್ಪಳಾಗಿ ಕಮ್ಮಕ್ಕಗ ಎಚ್ಚರಾಗೇದ. ನೋಡ್ತಾರ; ಇಷ್ಟೆತ್ತರ ಮನಶ್ಯಾ ಚಾದರ ಪೂರಾ ಸುತಗೊಂಡ ಮುಸಕ ಹಾಕೊಂಡ , ಒಂದ ಕಾಲ ಹೊಸಲ ಆ ಕಡೆ, ಒಂದ ಈ ಕಡೆ ಇಟಗೊಂಡ ನಿಂತಾನ! ಎಕಡಿಂದ ಬಂದಾ, ಎಕಡೆ ಹೊಂಟಾನ ಗೊತ್ತs ಆಗವಲ್ಲತು! ಅವರೂ ಗಾಬರಿ ಆಗಿ ಕುಸುಮಕ್ಕಾ, ಕುಸುಮಕ್ಕಾ ಅಂತ ಅವ್ವಾನ್ನ ಎಬಸ್ಯಾರ. ನಮ್ಮವ್ವ ಎಚ್ಚರಾಗಿ ಚೀರಲಿಕ್ಕ ಬಾಯಿ ತಗದಾಕಿ ಮತ್ತ ಗಟ್ಟಿ ಬಾಯಿ ಮುಚ್ಚಿ ನೋಡಕೋತ ಗಪ್ಪಗಾರ ಕೂತ್ಲು. ನನಗ, ಪ್ರಕಾಶಗೂ ಎಚ್ಚರಾತು ಖರೇ ಏನ ಮಾಡಾವ್ರ ನಾವು! ಪ್ರಕಾಶ ಬ್ಲ್ಯಾಂಕೆಟ್ ಗಟ್ಟಿ ಸುತಗೊಂಡ ಮುದ್ದಿ ಆಗಿ ಮಲಗಿದಾ. ಐದ ನಿಮಿಷ ಆತು. ಆ ಮನಶ್ಯಾನೂ ಅಗಳಾಡದs ಹಂಗs ಸುಮ್ಮನ ನಿಂತಾನ. ಕಡೀಕ ಕಮ್ಮಕ್ಕನs ಎದ್ದು ” ಅರೆ ಬಾಬಾ ಕೋಣರೇ ತೂ; ಇಥೆ ಕಾಯ ಕರಾಯಲಾಗಲಾಸ “(ಯಾರಪಾ ನೀ, ಇಲ್ಲೇನ ಮಾಡ್ಲೀಕ್ಹತ್ತೀ) ಅಂತ ಜೋರಲೆ ಕೇಳಿದ್ರು ದಬಾಸಿ. ಆದರೂ ಒಂದಿಲ್ಲಾ, ಎರಡಿಲ್ಲಾ; ಸುಮ್ಮ ನಿಂತ ಬಿಟ್ಟಾನ. ಕಮ್ಮಕ್ಕ ಹಾಸಿಗಿ ಬಿಟ್ಟ ಎದ್ದು, ಸೊಂಟಾ ಬಾಗಿಸಿ ಕೊಂಡs ( ಅವರ ನಡಾ ಬಾಗಿತ್ತು) ಸರಾ ಸರಾ ಹೋಗಿ ಅವನ ಚಾದರ ಹಿಡದು ಜಗ್ಗಿದ್ರು; ಆ ಝೀರೋ ಬಲ್ಬ್ ನ ಮಬ್ಬ ಬೆಳಕಿನ್ಯಾಗ ನೋಡಿದ್ರ , ಅಂವಾ ಪೀಪ್ಯಾ! ಅಂವನ್ನ ಅಗಳ್ಯಾಡಿಸಿ ಎಚ್ಚರ ಮಾಡಿದ್ರು. ಪಾಪ ಅಂವಾ ನಾಚಿಕೊಂಡ ಬಂದು ಮುಸಕ ಹಾಕೊಂಡ ಮಲಗಿದಾಂವಾ ಮುಂಜಾನೆ ಅವ್ವಾ ಅಂವಗ, ಕಮ್ಮಕ್ಕಗ ಚಹಾ ಮಾಡೂದ್ರಾಗ ಯಾರಿಗೂ ಹೇಳದ ಕೇಳದ ಪಾರ! ಅಂವಗ ನಿದ್ದ್ಯಾಗ ಓಡಾಡೂ ಸವಯ(ಚಾಳಿ) ಇತ್ತಂತ. ಮರುದಿನ ಮುಂಜಾನೆ ಅವನ ವೈನಿ ಮಾಲೂತಾಯಿ ಅವ್ವಾಗ ಹೇಳಿದ್ರು.” ಕುಸುಮ ತಾಯಿ, ಗಾಬರಿ ಆದ್ರೇನು? ನಾ ಮರತೆ ಹೇಳ್ಳಿಕ್ಕೆ. ಅಜ್ಜಿಬಾತ ಲಕ್ಷಾತ ನಂಹಿ ಆಲ ಮಲಾ.( ನನಗ ಲಕ್ಷ್ಯಕ್ಕs ಬಂದಿಲ್ಲ)”.

ನಮ್ಮ ಅವ್ವಾ ಹಿಂಗ ಒಂಚೂರ ಮೆತ್ತಗ ಇದ್ಲ ಖರೆ ತನ್ನ ದಣಿವಿನ ಖಬರ ಇಲ್ಲದ ಮಕ್ಕಳನ ಜೋಪಾನ ಮಾಡೂ ಆ ಜೀವದ ಸಹನ ಶಕ್ತಿನೂ ಭಾಳ ಮಜಬೂತ ಇತ್ತು. ಆದರ ಮಕ್ಕಳೇನರೆ ಪರೀಕ್ಷಾದಾಗ ಮಾರ್ಕ್ಸ್ ಕಡಿಮಿ ತಗದ್ರು, ಅಭ್ಯಾಸದಾಗ ಹೈಗೈ ಮಾಡಿದ್ರು ಅಂದ್ರ ಆಕಿ ಸಹನ ಶಕ್ತಿದು ಕಟ್ಟಿ ಒಡೀತಿತ್ತು. ಭಾರೀ ಜೋರ ಸಿಟ್ಟು ಬರೂದು. ಒಮ್ಮೊಮ್ಮೆ ಆ ಸಿಟ್ಟು ಅಸಹಾಯಕತಾಕ್ಕ ತಿರಗಿ ಕಣ್ಣೀರಿಡತಿದ್ಲು; ಹತಾಶ ಆಗ್ತಿದ್ಲು. ಮತ್ತ ಆರ ಮಕ್ಕಳ ಸೌಭಾಗ್ಯ ಏನ ಸುಮ್ಮನನs! ಆದರ ಅಲ್ಲೆ ಇಲ್ಲೆ ಒಂಚೂರ ಹೊಳ್ಳಾಡಿದ್ರೂ ಯಾವ ಅಧ್ವಾನ್ನನೂ ಆಗದs ಸರಳ ರೂಳ ಮ್ಯಾಲs ಆಕಿ ಸಂಸಾರ ನಡೀತು.
ಇದನ ಬಿಟ್ರ ನಾ ಆಕಿದು ಸಹನ ಶಕ್ತಿದು ತಾರೀಫ ಮಾಡ್ಲಿಕ್ಕೆ ಇನ್ನೂ ಜಬರ್ದಸ್ತ್ ಕಾರಣ ಅದ. ಹುಡಗೀನ್ನ ಮದವಿ ಮಾಡಿ ಕೊಡೂ ಮುಂದ ಅತ್ತಿ – ಮಾವಾ ಆಕಿ ಸೋಬತೀನ ಇರಾವ್ರ ಅಂದ್ರ ಮದವಿ ಮಾಡ್ಕೋಳಿಕ್ಕೇ ಹಿಂದ ಮುಂದ ನೋಡ್ತಾರ ಹುಡಗೀರು ; ಮದವಿ ಆದ್ರೂ ಸಂಬಂಧಗಳು ಹಂಗಂಗs ಇರೂದೇ ಭಾಳ. ಆದ್ರ ನಮ್ಮ ಅವ್ವಾ ಮದವಿ ಆಗಿ ಬಂದ ಆ ಕ್ಷಣದಿಂದನs ಏಕಾ ನಮ್ಮನ್ನೆಲ್ಲಾ ಬಿಟ್ಟು ಹೋಗೂ ತನಕಾ ಅಂದ್ರ ಬರೋಬ್ಬರಿ ನಾಲ್ವತ್ತ ವರ್ಷ ಏಕಾನ ಜೋಡೀನ ಇದ್ಲು; ಏಕಾಗೂ ಮತ್ತೆಲ್ಲೂ ಹೋಗಲಿಕ್ಕಾಗು ಸಾಧ್ಯತಾನs ಇರಲಿಲ್ಲ. ಅದೂ ಅಲ್ಲದ ಏಕಾ ಇಲ್ಲದ ಯಾವುದs ಕೆಲಸ ಸಾಗೂದ ಕಷ್ಟ ಇತ್ತು. ಅದು ಏಕಾನ ಯಜಮಾನಿಕಿ ಅಂತ ಅಲ್ಲ; ಹಕೀಕತ್ತು ಹಂಗೇ ಇತ್ತು. ಅಣ್ಣಾ ಅವ್ವಾಗ ಛೇಡಸ್ತಿದ್ರು- ” ಕುಸುಮಾಗ ಅನ್ನಾ, ಹುಳಿ, ಝುಣಕಾ ಅಷ್ಟ ಬರತದ ಮಾಡ್ಲಿಕ್ಕೆ. ಭಕ್ರಿ, ಹೋಳಿಗಿ ಬರೂದೇ ಇಲ್ಲಾ” ಅಂತ. ಅದೇನ ಅಕ್ಷರಶಃ ಖರೇ ಅಂತ ಅಲ್ಲ. ಆದ್ರ ನಮ್ಮ ಏಕಾ ಹೆಂಗ ಇದ್ಲು ನಮಗೆಲ್ಲಾ ಅನೂದ ಕಲ್ಪನಾಕ್ಕ ಎಟಕಿಧಂಗ ಆಗ್ತದ. ತೊಲಿ ಸಿಡದಲ್ಲಿ ಖಂಬ ಅನೂ ಹಾಂಗ. ಇಷ್ಟಿದ್ರೂ ಮನಶ್ಯಾ ಅಂದ ಮ್ಯಾಲ ಯಾವದೋ ಒಂದ ಗಳಿಗಿ ಒಳಗ ತಂದು ತನ್ನದಷ್ಟ ಅಂಬೂ ಸ್ವಾತಂತ್ರ್ಯ ಬೇಕು ಅನಸಿದ್ರ ಅಜೀಬಾತ ತಪ್ಪಿಲ್ಲ. ನಮ್ಮ ಏಕಾ ಯಾತರಾಗೂ ಏನೂ ಉಸಾಬರಿ ಮಾಡಾಕಿ ಅಲ್ಲಾ. ಸೊಸಿ ಅಂದ್ರ ಭಾಳ ಅಕ್ಕರತಿ ಆಕೀಗೆ. ಎಲ್ಲಾ ಅಗದೀ ಬರೋಬ್ಬರಿ. ಆದ್ರ ನಾ ಅವ್ವಾನ ಈ ಅಖಂಡ ಸಹನಾದ್ದ ತಾರೀಫು ಅಗದೀ ಮನಸ ತುಂಬಿ ಮಾಡ್ತಿನು. ಆಗಾಗ ಸಣ್ಣಪುಟ್ಟ ವಾದಸ್ಯಾಟ, ಧುಸುಮುಸು ಆದ್ರೂ ಮತ್ತ ಅತ್ತಿ- ಸೊಸಿ ಏಕೋಂಕಿನೇ. ಸೊಸಿ ಆಗಿ ಹೆಂಗ ಸಮರ್ಥ ಆಗಿ ನಿಭಾಯಿಸಿದ್ಲೋ ಹಂಗs ಅತ್ತಿ ಆಗೀನೂ ಅಗದೀ ವ್ಯವಸ್ಥಿತ ನಿಭಾಯಿಸಿದ್ಲು ನಮ್ಮ ಅವ್ವಾ.
ಏಕಾ ಹೋದ ಒಂದ ವರ್ಷಕ್ಕನs ಅವ್ವಾನ ತಬ್ಬೇತ ಬಿಗಡಾಸಿಗೋತ ಹೋತು. ಕಡೀಕ ಪರಿಸ್ಥಿತಿ ಇಲ್ಲಿಗೆ ಬಂತಲಾ ಹುಕ್ಕೇರಿ ಬಿಟ್ಟು ತನ್ನ ಮಕ್ಕಳ ಕಡೆ ಬೆಂಗಳೂರಿಗೆ ಕಾಯಂ ತರೀಕ ಬರಬೇಕಾತು; ಜಡ್ಡನೂ ಜೋಡೀನs ಕರಕೊಂಡು. ಮಕ್ಕಳ ಕಡೆ ಬಂದ್ಲು,; ತನ್ನ ತುಂಬ ಸಂಸಾರದಾಗ ಮತ್ತ ಮುಳಗಿದ್ಲು ನಮ್ಮ ಅವ್ವಾ ಕಷ್ಟನೋ ಸುಖಾನೋ ನೋವಿಲ್ಲದಾಗ ನಕ್ಕಳು; ಇದ್ರೂ ಮರತು ನಕ್ಳು; ಬರೋಬ್ಬರಿ. ಖರೆ ಹಿಂಗ ಬ್ಯಾಡಾಗಿತ್ತು. ಅದು ನಮ್ಮ ಇಚ್ಛಾ; ಆದರ ಆ ಮ್ಯಾಲಿನಾವನ ಇಚ್ಛಾ!?
| ಇನ್ನು ಮುಂದಿನ ವಾರಕ್ಕೆ |






ಈ ಸರಣಿಯ ನಿಯಮಿತ ಓದುಗರು ಈ ಕಂತನ್ನು ‘ನವರಸಭರಿತ’ ಅಂಡಾದ್ಧ್ ಸುಳ್ಳಲ್ಲ. ಅತ್ತೆ ಸೊಸೆಯರ ವ್ಯುಕ್ತಿತ್ವದ ಪೂರ್ಣ ಪರಿಚಯ. ಮಗನ ಸುತ್ತಲಿನ ಮುಳ್ಳು ತುಳಿದು ಸರ್ಪಗಾವಲಿಟ್ಟ ಏಕಾ ಕೊಯ್ನಾ ಭೂಕಂಪದ ಗಳಿಗೆಯಲ್ಲಿ ಹಸಿ ಕಾಳನ್ನೂ ಅದೇ ರೀತಿ ಕಾಯುವ ರೀತಿಯ ವರ್ಣನೆ; motherhen round her brood’ ತರ ಸೊಸೆ ! ‘ಗ್ವಾಡಿ ಬಾಜೂಕ ಮಲಗಿ, ಅದನ್ನ ನೋಡಿ ನೋಡಿ ನಾನೂ ಥೇಟ್ ಹಂಗೇ ಆಗಿನಿ’ ಅನ್ನುವ ಏಕಾ . Sleepwalker ಪೀಪ್ಯಾನ ಘಟನೆಯಲ್ಲಿ ಟೆನ್ಷನ್ ಹಾಸ್ಯ ಎಲ್ಲ!
‘ಆ ಜಾಡಿನ್ಯಾಗ ಸಿಕ್ಕದ್ದನ್ನ ಆರಿಸಿ ಆರಿಸಿ ಜೋಳಿಗಿಗಿ ಹಾಕೋತ ನಡದ್ರ ಸಾಕು;ಜೋಳಿಗಿ ತುಂಬಿದ ಈ ಬದುಕಿನ ಸಾರನs’ ಅನ್ನುವ ಲೇಖಕಿ. ಒಂದು ತಲೆಮಾರಿನ ಕಾವ್ಯಮಯ ವರ್ಣನೆ ಇದು . ಸರಣಿಯ ಓದುಗರಿಗೆ ಸ್ಪೇಷಲ್ ! ‘ಆ ಗಂಧಾನ ತಣ್ಣೆಳಲ ಹಾದಿಗೆ ಹಂದರಾ ಮಾಡಿ’
‘ತೊಲಿ ಸಿಡದಲ್ಲಿ ಖಂಬ’ ಇನ್ನಷ್ಟು ಬರಲಿ. ಇಂಥ ಮಾತುಗಳು:! ಶ್ರೀವತ್ಸ ದೇಸಾಯಿ
ಈ ಸರಣಿಯ ನಿಯಮಿತ ಓದುಗರು ಈ ಕಂತನ್ನು ‘ನವರಸಭರಿತ’ ಅಂದದ್ದು ಸುಳ್ಳಲ್ಲ. ಅತ್ತೆ ಸೊಸೆಯರ ವ್ಯುಕ್ತಿತ್ವದ ಪೂರ್ಣ ಪರಿಚಯ – ಮಗನ ಸುತ್ತಲಿನ ಮುಳ್ಳು ತುಳಿದು ಸರ್ಪಗಾವಲಿಟ್ಟ ಏಕಾ ಕೊಯ್ನಾ ಭೂಕಂಪದ ಗಳಿಗೆಯಲ್ಲಿ ಹಸಿ ಕಾಳನ್ನೂ ಅದೇ ರೀತಿ ಕಾಯುವ ರೀತಿಯ ವರ್ಣನೆ; motherhen round her brood’ ತರ ಸೊಸೆ ! ‘ಗ್ವಾಡಿ ಬಾಜೂಕ ಮಲಗಿ, ಅದನ್ನ ನೋಡಿ ನೋಡಿ ನಾನೂ ಥೇಟ್ ಹಂಗೇ ಆಗಿನಿ’ ಅನ್ನುವ ಏಕಾ . Sleepwalker ಪೀಪ್ಯಾನ ಘಟನೆಯಲ್ಲಿ ಟೆನ್ಶನ್ , ಹಾಸ್ಯ ಎಲ್ಲ ಉಂಟು!
‘ಆ ಜಾಡಿನ್ಯಾಗ ಸಿಕ್ಕದ್ದನ್ನ ಆರಿಸಿ ಆರಿಸಿ ಜೋಳಿಗಿಗಿ ಹಾಕೋತ ನಡದ್ರ ಸಾಕು;ಜೋಳಿಗಿ ತುಂಬಿದ ಈ ಬದುಕಿನ ಸಾರನs’ ಅನ್ನುವ ಲೇಖಕಿ. ಒಂದು ತಲೆಮಾರಿನ ಕಾವ್ಯಮಯ ವರ್ಣನೆ ಇದು . ಸರಣಿಯ ಓದುಗರಿಗೆ ಸ್ಪೇಷಲ್ ! ‘ಆ ಗಂಧಾನ ತಣ್ಣೆಳಲ ಹಾದಿಗೆ ಹಂದರಾ ಮಾಡಿ’
‘ತೊಲಿ ಸಿಡದಲ್ಲಿ ಖಂಬ’ ಇನ್ನಷ್ಟು ಬರಲಿ. ಇಂಥ ಮಾತುಗಳು! ಶ್ರೀವತ್ಸ ದೇಸಾಯಿ
ತಪ್ಪದೇ ಆಸ್ಥೆ ಯಿಂದ ಓದಿ , ಅಷ್ಟೇ ಆಸಕ್ತಿ ಪೂರ್ಣ ಸ್ಫೂರ್ತಿದಾಯಕ ಪ್ರತಿಕ್ರಿಯೆ ತಿಳಿಸುವ ನಿಮಗೆ ಅನಂತ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ಹೌದು; ಒಂದೊಂದು ಹೆಜ್ಜೆಯೂ ಒಂದೊಂದು ಅಣಿಮುತ್ತು ನಮಗೆ. ಹಾಗೇ ಇತ್ತು ನಮ್ಮ ಏಕಾ, ಅಣ್ಣಾ, ಅವ್ವಾನ ಬದುಕು, ರೀತಿ ನೀತಿ, ನಡೆ ನುಡಿ. ನಿಜಕ್ಕೂ ಒಂದು ನೀತಿ ಚಿಂತಾಮಣಿ ಥರಾ.
ಪೀಪೂನ ಆ ಘಟನೆ ನನ್ನನ್ನು ಇಂದೂ ಅದೇ ಥರಾನೇ ನಗುವಂತೆ ಮಾಡೋದು ಖರೆ; ಅದೇ ಸ್ವಚ್ಛ ನಗು. ನಮ್ಮಣ್ಣನ ಮಲಗಿದ ವೈಖರೀನೂ! ನಿಜ ಆ ದಿನ ಕಳೆದೇ ಹೋದ್ವಲಾ ಅಂತ ನೋವು ನಂಗೆ.
ಇನ್ನೊಮ್ಮೆ ಧನ್ಯವಾದಗಳು ಸರ್.
” ಏಕಾ ಯೋಗಿ, ಅವ್ವಾ ಕರ್ಮಯೋಗಿ ಮತ್ತು ಅಣ್ಣ ಈ ಮೂವರ ಜೀವನ ಆದರ್ಶಪ್ರಾಯ. ಇವರು “ತಣ್ಣೆಲ ಹಾದಿಗೆ ” ಹಾಕಿದ ಸುಂದರ ಹಂದರದಲ್ಲಿ ನೀವೆಲ್ಲ ಬೆಳೆದ ದೃಶ್ಯಗಳ ವರ್ಣನೆ ಓದುತ್ತ ಈಗ ನಿಜದಲ್ಲಿ ನಡೆಯುತ್ತಿರುವಂತಿದೆ. ಮಳೆಗೆ ಸಿಕ್ಕ ಜೋಳದ ರಾಶಿ, ಭೂಕಂಪ, ಪೀಪುನ ನಿದ್ದೆಯಲ್ಲಿ ನಡೆಯುವ ಚಾಳಿ ಈ ಎಲ್ಲ ಪ್ರಸಂಗಗಳನ್ನು ಓದುತ್ತ ಭಯ ಮತ್ತು ನಗು ಮನದಲ್ಲಿ ಮುಖದಲ್ಲಿ ಮೂಡಿತು. ಆರೂ ಮಕ್ಕಳ ಮಧ್ಯದಲ್ಲಿರುವ ಅವ್ವಾಗೆ ಹೊರಗೆ ಹೋಗಲು ಸಂದಿ ಇರಲಿಲ್ಲ…ತಾಯಿಯ ಭಧ್ಯತೆ ತಿಳಿಸುವದು…
ಶೀಲಾ ತುಂಬ ಸುಂದರ ಪ್ರತಿಕ್ರಿಯೆ ನಿಮ್ಮದು .ನೇರವಾಗಿ ನನ್ನ ಭಾವನೆಗಳನ್ನೇ ನಿಮ್ಮ ಮಾತುಗಳಲ್ಲಿ, ಶೈಲಿಯಲ್ಲಿ ಓದುವಂತೆ ಅನಿಸ್ತಿದೆ ನಂಗೆ. ನಿಮ್ಮ ತಡವಿಲ್ಲದ ಓದು,ಅದಕ್ಕೋಂದು ಅಷ್ಟೇ ತ್ವರಿತ ಪ್ರತಿಕ್ರಿಯೆ! ಧನ್ಯವಾದಗಳು ಶೀಲಾ. ನಿಮ್ಮ ಈ ಥರದ ಪ್ರೋತ್ಸಾಹ ಸದಾ ನನ್ನ ಬೆನ್ನಿಗಿರಲಿ.