ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.
ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.
ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.
ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…
16
ಅಣ್ಣಾನ ಫೋನ್ ಬಂದಾಗಿಂದ ನನ್ನ ಮನಸಿನ್ಯಾಗ ಮತ್ತ ಮತ್ತ ಏಕಾ ನನ್ನ ಕಡೆ ದೈನಾಸಬಟ್ಟ ನೋಡಿದ ಆ ದೃಷ್ಟೀನs ಮೂಡೂದು. ಏನೂ ತಿಳೀದ ಅಯೋಮಯ ಸ್ಥಿತಿಯೊಳಗ ಹುಕ್ಕೇರಿಗೆ ಹೊಂಟೆ ನಾ. ಅದಷ್ಟs ನನಗ ಗೊತ್ತು. ಸುರೇಶನೂ ಏನೂ ಮಾತಾಡ್ಲಿಲ್ಲ. ಮಕ್ಕಳಿಗೂ ಈಗ ಅಷ್ಟ ತಿಳೀತಿತ್ತು. ಮಗಳು ಎಂಟನೇ ಕ್ಲಾಸ್ ನ್ಯಾಗ ಇದ್ಲು , ಮತ್ತ ಸಣ್ಣ ಮಗಾ ಆರನೇ ಕ್ಲಾಸ್. ಅವರೂ ತಾಂವ ತಾಂವs ಏನೋ ಗುಸು ಗುಸು , ಪಿಸು ಪಿಸು ಮಾತಾಡಿಕೋತಿದ್ರು. ನನಗಂತೂ ಏನೂ ಕೇಳಸ್ತಿದ್ದಿಲ್ಲ, ಕಾಣಸೂತಿದ್ದಿಲ್ಲಾ. ಕಣ್ಣಾಗ ಒಂದೇ ಒಂದ ಹನಿ ನೀರೂ ಇದ್ದಿದ್ದಿಲ್ಲ. ಏನೋ ಹೌ ಹಾರಿಧಂಗ ಆಗಿ ಥಂಡಾ ಹೊಡದ ಕೂತ ಬಿಟ್ಟಿದ್ದ ನಾ. ತಲಿಯೊಳಗ ಏನರೇ ಬರ್ತಿದ್ರ ಏಕಾಂದs ಸಾಲ ಸಾಲ ನೆನಪು; ಕೇಳಸ್ತಿದ್ರ ಏಕಾ ‘ ಅಕ್ಕವ್ವಾ ‘ ಅಂತ ಕರದ್ಹಾಂಗ; ಕಾಣಸ್ತಿದ್ರ ಆಕೀ ಗಡಾಬಡಾ ಓಡಾಟಾ; ಅಷ್ಟೇ.
ಎಷ್ಟ ಹೊತ್ತ ಅದs ತಂದ್ರಿಯೊಳಗ ಇದ್ದೋ ಗೊತ್ತಿಲ್ಲ ನಂಗ; ಕಾರು ನಿಂತಾಗನs ಎಚ್ಚರಾ. ಆಕಡೆ ಈಕಡೆ ನೋಡಿದ್ರ ನಮ್ಮ ಹುಕ್ಕೇರಿ ಮನಿ ಮುಂದನs ಬಂದ ನಿಂತೀವಿ!
ಹವುರಗ ಕಾರ ಬಿಟ್ಟು ಇಳದ ನೋಡ್ದೆ; ಅದೇ ನಂದೇ ಮನೀನೇ; ಅದೇ ದೊಡ್ಡ ಅಂಗಳಾ; ಅಂಗಳ ತುಂಬ ನಿಂತ ಅವೇ ಹೂವಿನ ಗಿಡಾ; ಗಿಡದ ತುಂಬ ಸುರದ ಹೂವು. ಆದರೂ ಸುದ್ಧಾ ಎಲ್ಲಾ ಏನೋ ಖಾಲಿ ಖಾಲಿ. ಆ ಅರಳಿದ ಹೂವು ಯಾಕೋ ಏನೋ ಕಳಕೊಂಡ ಹತಾಶ ಭಾವ ತುಂಬ್ಕೊಂಡ ಹಾಂಗ ಕಾಣಸಿದು ನಂಗ. ಮನಿ ಏಕದಂ ಶಾಂತ. ಆದ್ರ ಈ ಮೌನದಾಗ ಯಾವ ಮಾತೂ ಇದ್ದಿದ್ದಿಲ್ಲಾ. ಹೆಪ್ಪು ಗಟ್ಟಿ ಹೋದಂಥಾ ಮೌನ ಇದು. ಬಾಗಿಲಿಗೆ ಬಂದು ಒಂದ ನಿಮಿಷ ನಿಂತೆ. ಅವ್ವಾ ಬಂದ್ಲು. “ಬಾ ಅಕ್ಕವ್ವಾ ಒಳಗ. ನಿವಾಳಸ ಕುಸುಮಾ ಅಂತ ಹೇಳ್ಳಿಕ್ಕ ಯಾರಿಲ್ಲ ಬಾ” ಅಂದ್ಲು. ಅವ್ವಾನ ಮಾತು ನನ್ನ ಜಾಗರಕ್ಕ ತಂತು. ನಾ ಅನ್ಕೊಂಡ ಹಂಗನ ಏಕಾ ಈಗ ಇರಲಿಲ್ಲ. ನನ್ನ ಮದವಿ ಆಗಿ ಹದಿನೈದೂವರಿ ವರ್ಷ ಆಗಿತ್ತು ಆಗ. ಮೂರೂ ಮಕ್ಕಳು ದೊಡ್ಡಾವ್ರ ಆಗಿದ್ರು. ಆದ್ರೂ ನಾ ಊರಿಂದ ಬಂದ ಕೂಡಲೇ ನನ್ನ ಅಲ್ಲೇ ಬಾಗಲದಾಗs ನಿಂದರ್ಸಿ ಅವ್ವಾನ ಕಡಿಂದ ನಿವಾಳಿಸಿ ಛಲ್ಲಿಸಿ ಆ ಮ್ಯಾಲನs ಒಳಗ ಬಾ ಅಂತಿದ್ಲು ನಮ್ಮ ಏಕಾ. ನನಗೊಬ್ಬಾಕಿಗೇ ಅಲ್ಲಾ, ಎಲ್ಲಾ ಮೊಮ್ಮಕ್ಕಳಿಗೂ ಅಷ್ಟs. ನಾ ಅವ್ವಾನ ಮಾರಿ ನೋಡ್ದೆ. ಅವ್ವಾ “ಬಾ ಮೊದ್ಲ ಒಳಗ ಬಾ ಅಕ್ಕವ್ವಾ” ಅಂದ್ಲು. ನಾ ಆ ಮನಿ ಏಕಾ ಇಲ್ಲದ ಆ ಮನಿ ಒಳಗ ಕಾಲಿಟ್ಟೆ. ನನ್ನ ಮನ:ಸ್ಥಿತಿ ಆಗ ಹೆಂಗಿತ್ತು ಅಂಬೂದರ ಅರ್ಥ ನನಗ ಇಂದೂ ಆಗಿಲ್ಲಾ.

ಒಳಗ ಹೋದೆ. ಅಣ್ಣಾಂದು ಆರಾಮ ಕುರ್ಚಿ ಖಾಲಿ ಇತ್ತು. ಅಲ್ಲೇ ಇದ್ದ ಪಲ್ಲಂಗ (cot) ಮ್ಯಾಲ ಪ್ರಕಾಶ (ನನ್ನಣ್ಣ), ಪ್ರಮೋದ (ನನ್ನ ದೊಡ್ಡ ತಮ್ಮ) ಕೂತಿದ್ರು. ಇನ್ನಿಬ್ರ ತಮ್ಮಂದ್ರು ಆನಂದ ಮತ್ತ ಪ್ರದೀಪ ಒಳಗ ಇದ್ರ ಅನಸ್ತದ. ಪ್ರಕಾಶ ಬಂದು ನನ್ನ ಕೈ ಹಿಡದ ಒಳಗ ಕರಕೊಂಡ ಹೋದಾ. ಮೊದಲಿನ ನಡಮನಿ ದಾಟಿ ಒಳಗಿನ ನಡಮನಿಗ ಹೋದ್ರ ಅಣ್ಣಾ ಅಲ್ಲೆ ಗ್ವಾಡಿಗೆ ಆನಕೊಂಡ ಕೂತಿದ್ರು. ಅವರ ಮಾರಿ ನೋಡ್ದೆ; ಅವರು ನನ್ನ ನೋಡಿದ್ರು. ಅವರ ಕಣ್ಣ ಒಳಗ ಅಲ್ಲಿ ಹೊರಗ ಅಂಗಳದಾಗ ಹೂವಿನ ಮಾರಿ ಮ್ಯಾಲ ಕಂಡ ಕಳೇನs ಅಗದೀ ಥೇಟ್ ಇಲ್ಲೂ ಅದs ಕಳೇನs ನನಗ ಕಾಣಿಸ್ತು. ಇಂದಿನ ತನಕಾ ಒಮ್ಮೆ ಸುದ್ಧಾ ಕಂಡಿದ್ದಿಲ್ಲ ಅದು; ಏಕಾ ಅದರ ಮುಂದ ದಪ್ಪ ಗಟ್ಟಿ ಗ್ವಾಡಿಗತೆ ನಿಂತಿದ್ಲೋ ಏನೋ! ಅಲ್ಲೇ ಅವರ ಪ್ರೀತಿಯ ಹೆಂಡತಿ, ನಮ್ಮವ್ವ ಇದ್ಲು; ಮುಂದ ಎಲ್ಲಾ ಮಕ್ಕಳು – ಸೊಸೆಂದ್ರು, ಅಳೆಂದ್ರು ಇದ್ರು. ಮನೀ ತುಂಬ ಮೊಮ್ಮಕ್ಕಳು ಓಡಾಡ್ತಿದ್ದು. ಆದ್ರ ನನಗ್ಯಾಕೋ ನಮ್ಮ ಅಣ್ಣಾನ ಮಾರಿ ಮ್ಯಾಲ ಏನೋ ಒಂದು ವಿಚಿತ್ರ ಒಂಟಿತನ ಕಂಡ್ತು.
ಮುಂದ ಹೋಗಿ ಅವರ ಇದರಿಗೆ ಕೂತೆ. “ಅಕ್ಕವ್ವಾ ನಾ ಇಂದ ಖರೇ ಪರದೇಶಿ ಆದ ನೋಡ. ಅಪ್ಪಂದಂತೂ ನನಗ ನೆನಪs ಇಲ್ಲಾ. ನಾ ಸಣ್ಣಾವ ಇದ್ದಾಗ ಐನಾಪೂರದಾಗ ನನಗ ಎಲ್ಲಾರೂ ‘ ಪರದೇಶಿ ಕೂಸ’ ಅನ್ನಾವ್ರು. ನನಗ ಹಂಗಂದ್ರ ಏನಂತ ಗೊತ್ತೇ ಆಗಿದ್ದಿಲ್ಲ. ಹಂಗಿದ್ಲು ನಿಮ್ಮ ಏಕಾ, ನನ್ನ ಅವ್ವ ಸೋನವ್ವ. ಈಗ ಸೋನವ್ವ ಹೋದ್ಲು; ನನ್ನ ಈ ತುಂಬಿದ ಮನಿಯೊಳಗ, ಈ ಜಾತ್ರಿಯೊಳಗ ನಾ ಎಲ್ಲಿದ್ದೀನ ಅನೂದೇ ತಿಳೀಧಂಗ ಆಗೇದ. ವಿಚಿತ್ರ ಅನಸಲಿಕ್ಹತ್ತೇದ ಏನೋ ಒಂದ ನಮೂನಿ. ಏನಂತಾರ ಇದಕ ತಿಳೀವಲ್ಲತ ಅಕ್ಕವ್ವಾ” ಅಂತ ಕಣ್ಣೀರ ಹಾಕಲಿಕ್ಹತ್ರ ಅಣ್ಣಾ.
ನಮ್ಮ ಅಣ್ಣಾ ಭಾಳ ಕಟ್ಟುನಿಟ್ಟಿನ ಮನಶಾ; ಭಾಳ ಸಿಟ್ಟಿನವರೂ ಹೌದು. ಆದರ ಅಷ್ಟs ಹೆಂಗರುಳು. ನಮ್ಮ ಏಕಾನ ಮಗಾ ಅವರು; ಬಲೆ ಗಟ್ಟಿ ಗುಂಡಿಗಿಯವರು . ಈಗ ಅವರನ್ನ ಹಂಗ ನೋಡಿ ನನಗ ಹೊಟ್ಯಾಗ ಕಲಿಬಿಲಿ ಆಧಂಗಾತು. ನಾ ಅಳ್ಳೀಕ್ಹತ್ತೆ. ಪ್ರಕಾಶ, ಪ್ರಮೋದ, ಆನಂದ ಪ್ರದೀಪ ಎಲ್ಲಾರೂ. ನನ್ನ ತಂಗಿ ವಿದ್ಯಾ ಬಂದು ನನ್ನ ಮಗ್ಗಲಕ ಕೂತ್ಲು. ಸುರೇಶ ಕಣ್ಣೊರೆಸಿಗೋತ ಗಾಬರಿ ಒಳಗ ಸುಮ್ಮ ನಿಂತಿದ್ದ ಹುಡಗೂರನೆಲ್ಲಾ ಪಡಸಾಲಿಗೆ ಕರಕೊಂಡ ಹೋದ್ರು. ಇಷ್ಟ ಮನಿ ತುಂಬ ಮಂದಿ ಇದ್ವಿ. ಆದರ ಆ ಒಂದು ಜೀವ ಇಲ್ಲದ್ದು ಖಪ್ಪಸಧಾಂಗ ಆಗಿತ್ತು. ಆಕಿ ಮಲಗಿದ್ದ ಖೋಲಿ ಕಡೆ ನೋಡೂ ಧಾಡಸಪಣ ಆಗಲಿಲ್ಲ ನಂಗ. ಎಲ್ಲಾರೂ ಗಪ್ಪ ಕೂತಿದ್ವಿ ಕಣ್ಣ ತುಂಬಿ ಹರಿಯೂದರ ಖಬರ ಇಲ್ಲದ.
ಅಣ್ಣಾ ಹೇಳಿದ್ರು -” ಅಕ್ಕವ್ವಾ, ಮೊನ್ನೆ ಸೋಮವಾರ ನಿನ್ನ ಕಳಿಸಿ ಒಂಚೂರ ಹಣ್ಣು ಅದು ತಗೊಂಡ ಬರೂ ತನಕಾ ಐದೂವರೀನs ಆತು. ಹಂಗs ಬರೂ ಮುಂದ ಪೋಸ್ಟಾಫೀಸಗ ಹೋಗಿ ಪ್ರಕಾಶನ ಮನಿಗೆ ಫೋನ್ ಮಾಡ್ದೆ. ಸೀಮಾ ಒಬ್ಬಾಕಿನs ಇದ್ರ ಹೆಂಗ ಹೇಳೂದು ಅನಕೋತನs ಫೋನ್ ಮಾಡಿದರ ಪ್ರಕಾಶನs ಫೋನ್ ತಗೊಂಡ. ಲಗೂ ಬಂದಿದ್ದಂತ ಅಂವಾ. ಅಂದ ಆಫೀಸಿಂದ. ಅಂವಗ ಏಕಾನ ತಬ್ಬೇತದ್ದ ಎಲ್ಲಾ ಮಜಕೂರ ಹೇಳಿ, “ಬಂದs ಬಿಡ್ರೆಪಾ ಎಲ್ಲಾರೂ ಅಂತ ಹೇಳಿ ಮತ್ತ ಗಾಬರಿ ಆಗಬ್ಯಾಡ್ರಿ. ಸಣ್ಣು ಸಣ್ಣು ಹುಡಗೂರು ಹುಪ್ಪಡಿನ್ನ ಕರಕೊಂಡು ಬರೂದು. ಎಲ್ಲಾ ಶಿಸ್ತಿತ , ಜಪ್ಪಿಸಿಕೊಂಡ ಬರ್ರಿ. ಜ್ವಾಕಿಲೆ ಬರ್ರಿ ” ಅಂತ ಹೇಳಿ ಮನಿಗೆ ಬಂದೆ ಅಕ್ಕವ್ವಾ. ಮನಸಿನ್ಯಾಗ ಏನೋ ಒಂಥರಾ ಕಳವಳಕಾರಿ ಕಸಿವಿಸಿ. ಏಕಾನ ಹತ್ರ ಹೋಗಿ ನಿಂತ ಸೋನವ್ವಾ ಅಂದು ಕರದೆ. ಅಗದೀನs ತ್ರಾಸಬಟ್ಟ ಕಣ್ಣು ತಗದ್ಲು. ಆಕೀ ಕಣ್ಣ ನೋಡಿ ಯಾಕೋ ಗಾಬರಿ ಆತು.ಕಣ್ಣ ಪೂರಾ ಒಣಾ ಒಣಾ. ಕಳೇನ ಇಲ್ಲಧಂಗ ಪೂರಾ ನಿಸ್ತೇಜ ಆಗಿದ್ದು. ಅಗದೀ ದೈನಾಸ ಕಳೆ ತುಂಬಿ ಹೋಗಿತ್ತ ನೋಡ ಕಣ್ಣಾಗ. ನನಗ ಅಲ್ಲೆ ನಿಂದರಿಕ್ಕಾಗಲೇ ಇಲ್ಲ. ಹೊರಗ ಬಂದು ಕೂತ ಬಿಟ್ವ ನೋಡವಾ.
ನನಗಿಂತಾ ಕುಸುಮಾನs ಗಟ್ಟಿ ಅನಸ್ತು. ” ಹಿಂಗ್ಯಾಕ ಕೂತೀರಿ ಏಳ್ರಿ. ಏನೇನಾಗ್ತದ ಅದನ ನೋಡ್ಲಿಕ್ಕೇ ಬೇಕು. ಬಂಧಾಂಗ ತಗೋಳಿಕ್ಕೇ ಬೇಕಲಾ.” ಅಂದ್ಲು. ಅದೂ ಖರೇನಲಾ ಅಕ್ಕವ್ವಾ. ಆದ್ರ ಯಾಕೋ ಅದು ನನ್ನ ಕೈಲೆ ಆಗಧಂಗ ಆಗಿತ್ತು. ಭಾಳ ಸಂಕಟ ಆಗ್ತಿತ್ತು. ಎದ್ದ ಒಳಗ ಹೋಗಿ ದೇವರಿಗೆ ನಮಸ್ಕಾರ ಮಾಡಿ ಕುಸುಮಾ ಮಾಡಿ ಕೊಟ್ಟ ಛಾ ಕುಡದೆ “ಅಂತ ಹೇಳಿ ಮತ್ತ ಸುಮ್ಮನಾದ್ರ ಅಣ್ಣಾ. ಹೊರಗ ಹೋಗೂ ಮುಂದ , ಮನೀಗೆ ಬಂದಮ್ಯಾಲ ದೇವರಿಗೆ, ಅದರ ಜೋಡೀನs ಏಕಾಗೂ ತಪ್ಪದ ನಮಸ್ಕಾರ ಮಾಡೂ ರೂಢಿ ನಮ್ಮ ಅಣ್ಣಾಂದು. ಆ ಹೊತ್ತ ಅದನ ಸುದ್ಧಾ ಮರತಿದ್ರು ಅಣ್ಣಾ. ಹೆಗಲ ಮ್ಯಾಲಿನ ಟಾವೆಲ್ ಲೇ ಕಣ್ಣು ಮೋತಿ ಒರಸಿ ಕೊಂಡು ಮತ್ತ ಹೇಳ್ಳಿಕ್ಹತ್ರು ಅಣ್ಣಾ.
“ಅಕ್ಕವ್ವಾ ನೀ ಮೊನ್ನೆ ಹೋದಿ ನೋಡು, ಅಂದs ಮುಂದ ಒಂದ ಮೂರ- ನಾಕ ತಾಸಿನ್ಯಾಗ ಏಕಾನ ಮೈಮ್ಯಾಲಿನ ಶುದ್ಧಿ ಒಳಗ ಹೇರಪೇರ ಆಗಲೀಕ್ಹತ್ತು. ಯಾವಾಗರೇ ಒಮ್ಮೆ ಒಂಚೂರ ಕಣ್ಣ ತಗ್ಯಾಕಿ; ಖರೆ ಅದರಾಗ ಏನ ಜೀಂವ ಇರಲಿಲ್ಲ ಅಕ್ಕವ್ವಾ. ನಂದು, ಕುಸುಮಾಂದು ಗುರ್ತರೇ ಹಿಡೀತಿದ್ಲೋ ಇಲ್ಲೋ ಗೊತ್ತಾಗಲಿಲ್ಲ. ಬುಧವಾರ ಅಂದ್ರ ನಿನ್ನೆ ಮುಂಜಾನೆ ಹುಡಗೂರೆಲ್ಲಾ ಬೆಂಗಳೂರಿಂದ ಬಂದ್ರು. ಗೋಕಾಂವಿಂದ ವಿದ್ಯಾನೂ ಬಂದ್ಲು. ಎಲ್ಲಾರನೂ ನೋಡಿದ್ಲು; ಇಷ್ಟ ಮಾತ್ರ ಖರೆ ನೋಡ. ಮನೀ ಪೂರಾ ತುಂಬಿತ್ತು. ಗಲಾಗಲಾ ಗದ್ದಲ ಆಕಿ ಮರಿಮಕ್ಕಳದು. ವಿದ್ಯಾ ಮಧ್ಯಾಂದಾಗ ಗೋಕಾಕಕ್ಕ ತಿರಗಿ ಹೋದ್ಲು. ಮುಂದ ಸಂಜೀನ್ಯಾಗ ಯೋಳೂವರಿ ಅಷ್ಟೊತ್ತಿಗೆ ಏಕಾನೂ ಹೊಂಟ ಹೋದ್ಲು; ಈ ಭsರ ಜಾತ್ರ್ಯಾಗ ಹೋದ್ಲು ಸೋನವ್ವ.” ಮುಂದ ಮಾತಾಡ್ಲಿಲ್ಲ ಅಣ್ಣಾ.
ಖರೇ ಹೇಳ್ಬೇಕಂದ್ರ ನಾವೆಲ್ಲಾ ನಮ್ಮನಿಯೊಳಗ ನೋಡಿದ ಮೊದಲ ಸಾವಿದು. ನಾ ಅಲ್ಲೆ ನನ್ನ ಅತ್ತೀಮನ್ಯಾಗ ನನ್ನ ದೊಡ್ಡ ಭಾವನವರು ಮತ್ತ ನಮ್ಮ ಅತ್ತಿಯವರು ಹೋದಾಗಿನ ಆ ಅನುಭವ ಇತ್ತು. ಆದರೂ ಅವರಿಬ್ರೂ ಆಸ್ಪತ್ರಿಯೊಳಗs ತೀರಿಕೊಂಡಿದ್ರು. ಇದು ಮನೀಯೊಳಗs ಆತು. ಸಾವಕಾಶ ನಮ್ಮಣ್ಣ ಪ್ರಕಾಶ ಹೇಳ್ದಾ – ” ಅಕ್ಕಣ್ಣಿ, ಅವ್ವಾ- ಅಣ್ಣಾ ಅಲ್ಲೆ ಖೋಲ್ಯಾಗ ಏಕಾನ್ನ ಹಿಡ್ಕೊಂಡ ಕೂತಾರ. ನಾ ಭರಾಭರಾ ಬಂದು ಕೈಕಾಲ ತೊಳ್ಕೊಂಡು ದೇವರ ಮುಂದ ದೀಪಾ ಹಚ್ಚಿ ನಮ್ಮ ಏಕಾ ಏನೂ ತ್ರಾಸಿಲ್ಲದ ಹೋಗಲಿ ಸ್ವರ್ಗಕ್ಕ ಅಂತ ಬೇಡಕೊಂಡೆ ನೋಡ ” ಅಂತ ಅಂದಾ. ಇದಕ್ಕ ಏನೂ ಹೇಳಲಿಕ್ಕೆ ಗೊತ್ತಾಗಲಿಲ್ಲ ನಂಗ. ಏಕಾ ಅಂದ್ರ ನಮಗ ಪ್ರತ್ಯಕ್ಷ ದೈವ ಆಗಿದ್ಲು. ಈ ಮೈಲಿಗಿ, ಸೂತಕಾ ಇದ್ಯಾವದರದೂ ಕಲ್ಪನಾ, ಗೊಡವೀನ ಇರಲಿಲ್ಲ ಅಲ್ಲಿ. ಹಂಗs ಅದರ ಕಲ್ಪನಾನೂ ಇರಲಿಲ್ಲ. ನನಗ ಒಂಚೂರ ಚೂರ ಗೊತ್ತಾಗಿತ್ತು.ನಮಗ ಅಣ್ಣಾನ ಕಡಿಂದ ಯಾವ ಬಳಗನೂ ಇರಲಿಲ್ಲ. ಏನಿದ್ರೂ ನಮ್ಮ ಅವ್ವಾನ ತೌರಮನಿ ಕಡಿಂದನs. ಅಜ್ಜಾ – ಅಜ್ಜಿ, ಮಾಮಾ- ಮಾಮಿ, ಮಾವಶಿ – ಕಾಕಾಗೋಳು ಮತ್ತ ಅವರ ಮಕ್ಕಳು. ಇದs ಅಷ್ಟ ಗೊತ್ತ ನಮಗ.
ಮತ್ತ ನಮ್ಮ ಆಣ್ಣಾನ ಕಡೆ ನೋಡಿ ಎಲ್ಲಾರನೂ ಒಮ್ಮೆ ನೋಡ್ದೆ. ಎಲ್ಲಾರ ಕಣ್ಣೂ ಮಂಜು ಮಂಜೇ. ನಮ್ಮ ಅಣ್ಣಾ – ಅವ್ವಾನ ಮದವಿ ಆಗಿ ನಾಲ್ವತ್ತು ವರ್ಷ ಆಗಿತ್ತು. ಅಷ್ಟ ವರ್ಷಗಳ ಬಿಡದ ಸೋಬತಿ ಏಕಾಂದು ನಮ್ಮ ಅವ್ವಾಗ. ಇದ್ದೊಬ್ಬ ಮಗನ ಆಸರ ಬಿಟ್ಟು ಹೋಗಬೇಕೆಲ್ಲಿ ನಮ್ಮ ಏಕಾ? ಹೋದ್ರ ಒಂದ ಬೆಳವಿ; ಇಲ್ಲಾಂದ್ರ ಐನಾಪೂರದಾಗ ಇದ್ದ ಅಕ್ಕ ಭಾಗವ್ವನ ಮನಿ. ಅಕ್ಕಾ -ತಂಗಿ ಬಲೆ ಏಕೋಂಕಿ. ಅಷ್ಟ ಬಿಟ್ಟ ಹುಕ್ಕೇರಿ ಮನೀನೇ ಕಾಯಂ ನಮ್ಮ ಏಕಾಗ. ಮನೀ- ಮಕ್ಕಳದು ಜವಾಬ್ದಾರಿ ಪುಟ್ಟ ಪೂರಾ ನಮ್ಮ ಅವ್ವಾ, ಅಣ್ಣಾ ಕೂಡಿ ಹೊತ್ತಿದ್ರೂ ಮ್ಯಾಲ ಏಕಾ ಇದ್ದಾಳ ಅನೂದ ಒಂದ ಇತ್ತು. ಹಿಂಗಾಗಿ ನಮ್ಮ ಅವ್ವಾಗೂ ದಿಕ್ಕ ತಪ್ಪಿಧಂಗ ಆಗಿತ್ತು.
ಅವ್ವಾ, ಏಕಾಂದು ಅಖಂಡ ನಾಲ್ವತ್ತು ವರ್ಷಗಳ ಜೋಡಿ; ವರ್ಷ ಅಲ್ಲಾ, ಎರಡ ವರ್ಷ ಅಲ್ಲಾ . ಯಾವಾಗ್ಯಾವಗರೆ ತಕರಾರು, ತಗಾದಿ ಬರತಿದ್ದು. ಸಣ್ಣಪುಟ್ಟ ವಾದಸ್ಯಾಟ ಆಗ್ತಿದ್ದು; ಇಲ್ಲಾ ಅಂತಿಲ್ಲ. ಆದರ ಅವೇನ ಜಮಾದಾಗ ಹಿಡ್ಯೂವಂಥಾವಲ್ಲ. ಇಂಥಾ ಅತ್ತಿ- ಸೊಸಿ ಸಂಬಂಧ, ಜೋಡಿ ಇಂದ, ಈಗ ದಿಕ್ಕ ತಪ್ಪಿ ಅನಾಥ ಆಗಿತ್ತು. ಅದs ಹಿಂದ ಹೇಳಿಧಾಂಗ ಸಮಯಕ್ಕ ಯಾರದೇನ ಭಿಡೆ; ಕಾಲಗ ಯಾರದೇನ ಅಂಜಿಕಿ, ದರಕಾರ, ಕಾಳಜಿ! ನಿಮ್ಮ ದು:ಖ, ಕಣ್ಣೀರು, ಸಂಕಟಾ ನಿಮಗ. ನಮ್ಮ ಕೆಲಸ ನಮಗ ಅನ್ನೋ ನಿರ್ಭಾವುಕ ಜೋಡಿ ಈ ಸಮಯ ಮತ್ತ ಕಾಲ.
ಆ ದು:ಖದ ನೋವಿನ ಮಬ್ಬಿನ್ಯಾಗೂ ಒಂದ ವಿಚಾರ ಹೆಂಗೋ ಮಿಂಚಿತ ನನ್ನ ತಲ್ಯಾಗ. ಅದನ್ನ ಹೇಳ್ದೆ ಅಣ್ಣಾಗ -” ಅಣ್ಣಾ ಏಕಾ ಎಷ್ಟ ಪುಣ್ಯಾದ್ದ ಜೀವ ನೋಡ್ರಿ ಅಣ್ಣಾ. ಹೆಂಗಸರದು ಪಕ್ಷಾ ಮಾಡಾಂಗಿಲ್ಲಾ. ಆದರ ನಮ್ಮ ಏಕಾ ಹೋದದ್ದs ಪಕ್ಷಮಾಸದಾಗ. ಅಂದ್ರ ಆಕಿ ಶ್ರಾದ್ಧ ಪಕ್ಷಮಾಸದಾಗನs ಬರ್ತದ. ಅಣ್ಣಾ, ಇನ್ನೂ ಒಂದ ವಿಶೇಷ ನಿಮ್ಮ ಲಕ್ಷ್ಯದಾಗ ಬಂದದ ಏನು?” ಅಂದೆ. ” ಅರೆ, ಹೌದಲs ಅಕ್ಕವ್ವಾ! ಏಕಾಂದ ಏನ ಪುಣ್ಯಾದ್ದ ಸಾವು ಅಂತೇನಿ. ಕಡೀ ಒಂದ ತಿಂಗಳ ಕಷ್ಟಬಟ್ಲು, ನವದ್ಲು. ಮತ್ತ ಜೀವಾ ಈ ದೇಹಾನ ಬಿಟ್ಟು , ಎಲ್ಲಾ ಹರಕೊಂಡ ಹೋಗೂದು ಅಷ್ಟ ಸರಳ ಏನು?” ಅಂದು,” ಇನ್ನೊಂದ ವಿಶೇಷ ಏನ ಅಕ್ಕವ್ವಾ?” ಅಂತ ಕೇಳಿದ್ರು.
“ಅಣ್ಣಾ, ಏಕಾ ಹೋದದ್ದು ಪಕ್ಷಮಾಸ ದ್ವಾದಶಿ ದಿನಾ. ಆ ಹೊತ್ತ ಸನ್ಯಾಸಿಗಳ ಪಕ್ಷ ಇರ್ತದ ಅಣ್ಣಾ.” ಅಂದೆ. ಅಣ್ಣಾ ಒಂದ ಗಳಿಗಿ ಸುಮ್ಮ ಕೂತ್ರು. ಕಣ್ತುಂಬ ನೀರ ತಂದು ಹೇಳಿದ್ರು –
“ಆಕಿ ಹಂಗs ಇದ್ಲಲಾ ಅಕ್ಕವ್ವಾ ಮತ್ತ. ಏನ ಸುಖಾ ಕಂಡ್ಲ ಹೇಳು. ತನ್ನ ದೇಹ ದಂಡನಾ ಒಂದs ಆಕಿ ಜೀವನ ಆಗಿತ್ತು. ಕಡಿಕಡೀಕ ದೇಹ ಪೂರಾ ಸವದು ಎಲವು – ತೊಗಲಾ ಅಂಟಗೊಂಡಿದ್ದು. ಎಲವು ಒತ್ತಾವ ಸೋನವ್ವಾ; ಗಾದಿ ಮ್ಯಾಲ ಮಲಕೋ ಅಂತ ಎಷ್ಟ ಹೇಳಿದ್ರೂ ಕೇಳಲಿಲ್ಲ. ಇನ್ನ ಪ್ರದೀಪನ ಮಗಾನೂ ಹುಟ್ಟಿದ ಮ್ಯಾಲ ಎರಡೂ ಜೋಡಿ ಗಂಡು ಮರಿಮಕ್ಕಳ ಜೋಡಿ ಹೂ ಹಾರಸೂಣು ಅನೂದ್ರಾಗ ಹೋಗೇ ಬಿಟ್ಲ ನೋಡ. ಅದನೂ ಕಾಣಲಿಲ್ಲ ಆ ಜೀವ”. ಅಂದ್ರು. ಮತ್ತ ಹೇಳಿದ್ರು -” ಈಗ ಶ್ರಾದ್ಧ ತಿಥಿ ತ್ರಯೋದಶಿ ಬೀಳ್ತದ; ಖರೆ ಹೋದದ್ದಂತೂ ದ್ವಾದಶಿನೇ” ಅಂದ್ರು. ಖರೆನs ನನಗ ಒಂಥರಾ ವಾಚಾ ಇಲ್ಲದ ಆಶ್ಚರ್ಯ ಆತು. ಸಾವಿನೊಳಗೂ ತನ್ನದ ಒಂದು ಘನತೆ ಉಳಿಸಿಕೊಂಡ ತೋರಿಸಿದ ದೊಡ್ಡ ಜೀವಾ ಅನಿಸ್ತು. ಮತ್ತೇನೂ ಮಾತಾಡದ ಸುಮ್ಮನಾದೆ.
ಮೂರನೇ ದಿನ ಅಸ್ತಿ ಆರಿಸಿ ವಿಸರ್ಜಿಸಿ ಬಂದ ಅಣ್ಣಾ ಹೇಳಿದ್ರು -” ಕುಸುಮಾ ನಿಮ್ಮ ಅತ್ತಿ ಹೆಜ್ಜಿ ಹೆಜ್ಜಿಗೆ ತನ್ನ ಸ್ವಂತದ ದೊಡ್ಡ ಗುಣಾ ತೋರಸ್ಲಿಕ್ಹತ್ಯಾಳ ನೋಡ. ಅದs ಹೂಬೇಹೂಬ ತನ್ನ ಜೀವನದ ತುಂಬ ತೋರಿಸಿಧಂಗನs.”
ಅಂತ ಅಂದ್ರು. ಏನೂ ಹೊಳೀಲಿಲ್ಲ ನಮಗ. ಅಣ್ಣಾನ ಮಾರಿ ನೋಡಕೋತ ಸುಮ್ಮ ಕೂತ್ವಿ. ಅಣ್ಣಾ ಅಸ್ತಿ ಸಂಚಯಕ್ಕ ಒಂದು ಪಂಜಾ ಒಯ್ಯೂದ ಮರತ ಬಿಟ್ಟಾರ. ಅಲ್ಲಿ ಹೋದಮ್ಯಾಲ ಏನ ಮಾಡೂದಂತ ಆಕಡಿಕಡೆ ನೋಡೂದ್ರಾಗ ಅಲ್ಲೇ ಏಕಾಂದೇ ಸೀರಿ ಬಿದ್ದಿತ್ತಂತ. ಅದs ಸೀರಿ ತುಂಡ ಮಾಡಿ ಒಗದು ಅದರಾಗ ಅಸ್ತಿ ಎಲ್ಲಾ ಕಟಗೊಂಡ ಹೋಗಿ ನದಿ ಒಳಗ ವಿಸರ್ಜನ ಮಾಡಿ ಬಂದಿದ್ರು ಅಣ್ಣಾ.” ನಿಮ್ಮ ಏಕಾಗ ಯಾರ ಭಿಡೆದಾಗನೂ ಬೀಳೂದ ಇಲ್ಲ ನೋಡ್ರೆಪಾ. ತಂದs ಸೀರಿ ತುಂಡನs ಸಾಕ ಅಂದ್ಲು ಆಕಿ” ಅಂತ ಹೇಳಿದ್ರು ಅಣ್ಣಾ. ಏನ ಹೇಳಬೇಕನೂದೂ ಅಜೀಬಾತ ಸುಝಾಸಲಿಲ್ಲ ಆ ವ್ಯಾಳ್ಯಾಕ್ಕ.
ಯಾವದ. ನಿಲ್ತದ? ದಿನಾ ಉಗಾಸ್ತಿತ್ತು; ಏರತಿತ್ತು, ಇಳದ ಸಂಜಿ ಆಗ್ತಿತ್ತು; ಕತ್ತಲ ತುಂಬಿ ರಾತ್ರಿ ಆಗ್ತಿತ್ತು; ಮತ್ತ ಆ ಕತ್ತಲನ ಸರಿಸಿ ಮೂಡಲ ಹರದು ಬೆಳಕಿನ ಜೋಡಿ ಮತ್ತೊಂದ ದಿನಾ ಹುಟ್ಟತಿತ್ತು. ಆ ಹೊಸಾ ದಿನದ ಜೋಡಿ ನಮನ್ನ ಸುತ್ತಿಕೊಂಡ ಮಬ್ಬನೂ ಒಂಚೂರ ಕರಗತಿತ್ತು. ಈ ಹತ್ತ ದಿನದ ಸೂತಕದ ಅರ್ಥನೂ ಇದs ಹೌದು ಅಂತ ಅನಸ್ತಿತ್ತು ನಂಗೆ. ದೊಡ್ಡಾವರು ಹೇಳೋದನ್ನ ಕೇಳಿದ್ದೆ; ಹತ್ತು ದಿನದ ಸೂತಕದಾಗ ದಿನ ದಿನಕ್ಕ ನಮ್ಮ ಮತ್ತು ನಮ್ಮನ್ನ ಬಿಟ್ಟು ಆ ಲೋಕಕ್ಕ ಹೋದವರ ಋಣಾನುಬಂಧದ ಗಾಠಿ ಸಡ್ಲ ಆಕೋತ ಕಡೀಕ ಹತ್ತನೇ ದಿನಾ ಪೂರಾ ಬಿಚ್ಚಿ ಆ ಆತ್ಮ ಎಲ್ಲಾ ಬಂಧ ಕಡಕೊಂಡು ಬಿಂಬದೊಳಗ ಸೇರಲಿಕ್ಕೆ ಧಾವಿಸ್ತದಂತ. ಇದ್ದೀತೇನ ಹಂಗ ಅಂತ ವಿಚಾರ ನಂಗ. ಹಂಗಾರ ಈ ಸಂಬಂಧಗಳು ಅಷ್ಟ ಹಗರ? ಗೊತ್ತಿಲ್ಲ. ಬಹುಶಃ ಇದೂ ಉತ್ತರ ಇಲ್ಲದ ಪ್ರಶ್ನೀನ.
ಆ ಹತ್ತ ದಿನದಾಗ ಭೆಟ್ಟಿಯಾಗಲಿಕ್ಕೆ, ಮಾತಾಡಸ್ಲಿಕ್ಕೆ ಬರೂದ್ರಾಗನೂ ಒಂದ ಅರ್ಥ ಅದ ಅನಸ್ತದ. ಬಂದಾವ್ರ ಮುಂದ ಅದೇ ವಿಷಯ ಮಾತಾಡಿ ಮಾತಾಡಿ ಅತ್ತು ಮನಸೂ ಪೂರಾ ಖಾಲಿ ಆಗಿ ಬಿಡ್ತದೋ ಏನೋ! ನೂರು ತರ್ಕ, ವಿಚಾರ, ಚಿಂತನದಾಗ ಮುಳಗಿ ಬಿಟ್ಟಿತ್ತ ಈ ನನ್ನ ಮನಸು.

ಏಕಾನ ದಿನ – ಕರ್ಮ ಎಲ್ಲಾ ಅಣ್ಣಾ ನರಸೋಬನ ವಾಡಿಗೆ ಹೋಗಿ ಅಲ್ಲೆ ಕೃಷ್ಣಾ ತೀರದಾಗ ಮಾಡ್ಕೊಂಡ ಬಂದ್ರು. ಅಣ್ಣಾನ ಜೋಡಿ ನನ್ನ ತಮ್ಮ ಪ್ರಮೋದನೂ ಹೋಗಿದ್ದ. ಆ ಮ್ಯಾಲ ಸೀಬಾಯಿ (ಶುಭದ ದಿನ) ಹುಕ್ಕೇರಿ ಮನಿಯೊಳಗ ಮಾಡಿದ್ವಿ. ನಮ್ಮ ಏಕಾನ ಒಬ್ಬೇ ಒಬ್ಬ ನೆಗೆಣ್ಣಿ ಸರಸಕ್ಕ ಅಂದ್ರ ನಮ್ಮಜ್ಜ ರಾವಸಾಹೇಬ್ರ ತಮ್ಮ ವಕೀಲ ಅಪ್ಪಾಸಾಹೇಬ ಮುತಾಲಿಕ ದೇಸಾಯರ ಹೆಂಡತಿ ಆಗ ಮಗನ ಜೋಡಿ (ಅವರೂ ದತ್ತಕ ಮಗ; ಅವರಿಗೆ ಮಕ್ಕಳಿರಲಿಲ್ಲ) ಅಮೇರಿಕದಾಗ ಇದ್ಲು. ಹಿಂಗಾಗಿ ಆ ದಿನ ಏಕಾನ ಅತ್ತೀಮನಿ ಕಡೀ ಬಳಗ ಅಂದ್ರ ಯಮುತಾಯಿ ಮಗ- ಸೊಸಿ ಇಬ್ರೇ. ಎಲ್ಲಾ ಮುಗದ್ಹಾಂಗ ಆದು ಧಾರ್ಮಿಕ ವಿಧಿ – ವಿಧಾನಗಳು. ಒಂದು ಮಹಾನ್ ಅಧ್ಯಾಯಕ್ಕ ತೆರಿ ಬಿದ್ಧಂಗಾತು.
ಎಷ್ಟ ದಿನಾ ಅಲ್ಲಿರಲಿಕ್ಕಾದೀತು? ಸಣ್ಣ ಹಂಗ ಎಲ್ಲಾರ ಮಾರಿ ತಮ್ಮ ತಮ್ಮ ಕೆಲಸಾ, ಮಕ್ಕಳ ಸಾಲಿ, ಅಭ್ಯಾಸ, ಮನಿ ಅಂತ ಆಕಡೆ ಹೊಳ್ಳಿಕ್ಹತ್ತು. ನನ್ನ ಮಕ್ಕಳ ಜೋಡಿ ನನ್ನ ಭಾವನ ಮಗಳು ಇದ್ಲು ಗರಗದಾಗ. ಸುರೇಶನೂ ಹೋಗಿದ್ರು. ನನ್ನ ಅಣ್ಣ- ತಮ್ಮಂದರದೂ ರಜಾ ಮುಗ್ತಿತ್ತು. ಅವರೂ ಬೆಂಗಳೂರಿಗೆ ಹೊಂಟ ನಿಂತ್ರು; ವಿದ್ಯಾ ಗೋಕಾಕಕ್ಕ, ನಾ ಗರಗಕ್ಕ. ಅಂದ ಅಣ್ಣಾ ಒಂದ ಮಾತ ಹೇಳಿದ್ರು – ” ಇಷ್ಟ ದಿವಸ ಮುಂಜಾನೆ ಎದ್ದ ಕೂಡಲೇ ದೇವರ ಜೋಡಿ ಸೋನವ್ವಗೂ ನಮಸ್ಕಾರ ಮಾಡೇ ನನ್ನ ದಿನಾ ಸುರು ಆಗ್ತಿತ್ತು. ಹಂಗs ಮುಗೀನೂತಿತ್ತು. ಕರ್ಣಗ ಹುಟ್ಟಿನಿಂದs ಬಂದ ಕವಚದ್ಹಾಂಗ ನನಗ ಸೋನವ್ವ, ಏಕಾ ಒಂದ ಕವಚ ಆಗಿದ್ಲು. ಇನ್ನ ಮುಂದಿನ ದಿನಗೋಳ ಜೋಡಿ ಹೆಂಗ ಹೊಂಡತೀನೋ ಅಂಬೂದನ್ನ ನೋಡಬೇಕು ” ಅಣ್ಣಾನ ಗಂಟ್ಲ ಕಟ್ತು. ನಮ್ಮೆಲ್ಲರ ಬಾಯಿ ಕಟ್ಟಿತ್ತು.
ಪ್ರಕಾಶ ಹೇಳಿದ; ” ಅಣ್ಣಾ ನಿಮ್ಮದು ಇಲ್ಲಿದೆಲ್ಲಾ ಅವರಾಸ್ಕೋರಿ. ಮುಂದಿನ ವಾರ ಪ್ರಮೋದ ಬಂದ ನಿಮ್ಮಿಬ್ರನ್ನೂ ಬೆಂಗಳೂರಿಗೆ ಕರಕೊಂಡ ಬರ್ತಾನ ” ಅಂದಾ. ಆದ್ರ ನನ್ನ ಮಗಾ ಅಲ್ಲಿದ್ದ. ಅದೂ ಅಲ್ಲದ ಹಂಗ ಮನಿ ಕೀಲಿ ಹಾಕಬಾರದು ಅನೂದು ಒಂದ ರಿವಾಜು . ಅದಕ ಅಣ್ಣಾ , ” ಈಗ ಬ್ಯಾಡಾ. ಸ್ವಲ್ಪ ದಿನಾ ಹೋಗ್ಲಿ. ದೀವಳಿಗ್ಗೆ ಅಲ್ಲೇ ಬರ್ತೀವು” ಅಂದ್ರು. ಆಗ ನನ್ನ ಮಗಾನೂ ಸೂಟಿಗೆ ನಮ್ಮ ಕಡೆ ಬರಾಂವಿದ್ದ. ಹೂಂ ಅಂದಾ ನಮ್ಮಣ್ಣ. ಆದ್ರೂ ಯಾಕೋ ಹುಕ್ಕೇರಿ ಮನಿ ಕೀಲಿ ಹಾಕೂದ ಅಂದ ಕೂಡಲೇ ಏನೋ ತಳಮಳ ಆತು. ಒಬ್ರೂ ತಿರುಗಿ ನೋಡದೇ, ಕಣ್ಣ ಒರಸಿಕೊಳ್ಳೋ ಗೋಜಿಗೂ ಹೋಗದೆ ಹೊರಟ ಬಿಟ್ವಿ. ನನ್ನ ಮಗಾ ಅಜ್ಜಾ ಅಜ್ಜಿ ಕೈ ಹಿಡ್ಕೊಂಡ ನಿಂತಿದ್ದಾ.
ನನ್ನ ಎದೀಯೊಳಗ ಅಣ್ಣಾನ ಮಾತು ರಿಂಗಣಿಸ್ತಿತ್ತು. ಏಕಾಂದು – ಅಣ್ಣಾಂದು ಅವ್ವಾ ಮಗನ ಸಂಬಂಧ ಹೌದು; ಆದ್ರ ಅದು ಅಣ್ಣಾನ ಜೀವನದಾಗ ಎಂಥಾ ಮುಖ್ಯ ಭೂಮಿಕಾ ಇತ್ತು; ಎಷ್ಟ ಗಟ್ಟಿ ಪಾಯಾ ಹಾಕ್ತು ಅಂಬೂದು ಕಲ್ಪನಾಕ್ಕ ಸಿಗೂದು ಕಷ್ಟ. ಏಕಾ ಒಂದ ಗಟ್ಟಿ ಬೇರ ಆಗಿದ್ಲು ಅಣ್ಣಾ ಬೆಳೀಲಿಕ್ಕೆ. ಏಕಾನ್ನ ಬಿಟ್ರ ಅಣ್ಣಾಗ ಏನಿತ್ತು? ಅವ್ವಾ ಬಂದ್ರನೂ ಆ ಅದರ ಜಾಗಾ ಹಂಗs ಭದ್ರ ಇತ್ತು. ಯಾವ ವ್ಯಾಖ್ಯೆ ಇಲ್ಲದ್ದದು. ನೋಡಿದವ್ರಿಗೇ ಗೊತ್ತಾಗೂ ಹಂಗಿತ್ತದು. ಅಪ್ಪ ಅಂಬಾವ್ರು ಒಬ್ರಿರ್ತಾರ ಅನೂದ್ರ ಅರ್ಥ ಆಗೂಕಿಂತಾ ಮೊದಲs ಅಪ್ಪ ಇಲ್ಲವಾದ ಕೂಸು ನಮ್ಮಣ್ಣಾ. ಅವರ ಪ್ರಪಂಚನs ಏಕಾ ಅಂದ್ರ ಸೋನವ್ವ ಆಗಿದ್ಲು. ಅಸಂಖ್ಯ ನೆನಪು, ವಿಚಾರದಾಗ ಏಕಾ ಒಂದ ತುದಿ; ಅಣ್ಣಾ ಒಂದ ತುದಿ. ಯಾವ್ಯಾವ ವಿಚಾರ ತಲ್ಯಾಗ ಬಂದೂನೋ ತಿಳೀಧಾಂಗ ಎಲ್ಲಾ ಅಸ್ಪಷ್ಟ;
ಪೂರಾ ಅಸ್ಪಷ್ಟ…..
| ಇನ್ನು ಮುಂದಿನ ವಾರಕ್ಕೆ |






“ಅಕ್ಕವ್ವಾ ನಾ ಇಂದ ಖರೇ ಪರದೇಶಿ ಆದ ನೋಡ.”
ಅಂತ ಅನಿಸಿಕೊಂಡ ಏಕಾನ ಶಿಲ್ಪಿ ಲೇಖಕಿಯಷ್ಟೇ ಅಲ್ಲ ಅವರನ್ನು ಹಿಂಬಾಲಿಸಿದ ನನ್ನಂಥ ಓದುಗರ ಪಡೆಯೇ ಇಂದು ಪರದೇಶಿ ಭಾವನೆಯನ್ನು ಹೊತ್ತಿದ್ದಾರೆಂದರೆ ಅತಿಶಯೋಕ್ತಿಯಲ್ಲ. ಎಂದೂ ಎಲ್ಲಕಡೆಯೂ ಸಾವುಗಳನ್ನು ನೋಡಿಯೂ ಕಾಗದದ (ಇಲ್ಲ ಮೊಬೈಲ್ ಯಾ ಪಿ ಸಿ ಪರದೆಯ ) ಮೇಲೆ ಓದಿದ ಸಾವು ಇಷ್ಟು ಪರಿಣಾಮ ಮಾಡಬೇಕೆಂದರೆ ಆ ಅಕ್ಷರದ ಶಕ್ತಿಯೇ ಕಾರಣ ! ಏಕಾನ ಜೀವನ್ಮುಖಿ ವ್ಯಕ್ತಿಯ ಜೀವನದ ವೈಭವವನ್ನೇ ಆಗಲಿ, ಸ್ಮಶಾನ ಶೂನ್ಯತೆಯನ್ನೇ ಆಗಲಿ ವರ್ಣಿಸುವ ಅವರ ಭಾಷೆಯ ಸೊಗಡು, ಮೊನಚು ಎಲ್ಲರಿಗೂ ತಾಗಿದೆ. ಎಲ್ಲರ ಅಶ್ರುತರ್ಪಣದೊಂದಿಗೆ ಮೊಮ್ಮಗಳ ಬರಹಕ್ಕೆ ಅಭಿನಂದನೆಯೂ ಇಲ್ಲಿ ಸೇರಿದೆ. ಶ್ರೀವತ್ಸ ದೇಸಾಯಿ
ನಿಮ್ಮ ಮನಮುಟ್ಟುವ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.. ನಮ್ಮ ಏಕಾ ಹೋಗಿ ಸುಮಾರು ಮೂವತ್ತಮೂರು ವರ್ಷಗಳಾದರೂ ಆ ನೋವು, ಗಾಯದ ತೀವ್ರತೆ ಕಡಿಮೆ ಆಗಿಲ್ಲ. ಅಂದವಳು ನಮ್ಮ ಏಕಾ. ಪ್ರತಿ ಹೆಜ್ಜೆ, ಪ್ರತಿ ಗಳಿಗೆ ಅವಳ ನೆನಪಿಸದೇ ಸಾಗುವುದೇ ಇಲ್ಲ. ಇನ್ನೊಮ್ಮೆ ಧನ್ಯವಾದಗಳು ವಂದನೆಗಳೊಂದಿಗೆ ಸರ್.
ಏಕಾನನ್ನು ಪ್ರತಿ ಓದುಗನ/ಳ ಮನೆಯ ಸದಸ್ಯೆಯನ್ನಾಗಿಸಿದ ಅವಧಿಗೆ ಅನಂತ ಧನ್ಯವಾದಗಳು.
ಎಂದೂ ಕಾಣದ, ಒಡನಾಡದ ” ಏಕಾ ” ಓದುಗರಿಗೆ ಆತ್ಮೀಯರಾದರು. ಜೀವನ ಹೇಗೆ ನಿಭಾಯಿಸಿ ಸುಂದರಗೊಳಿಸ ಬಹುದು, ಹೇಗೆ ಎಲ್ಲರ ಆನಂದದಲ್ಲಿ ಆನಂದ ಕಾಣಬಹುದು ಎಂಬುದಕ್ಕೆ” ಏಕಾ ” ರ ಜೀವನ ಮಾದರಿ. ಓದುಗರನ್ನು ಮೋಡಿಗೊಳಿಸಿದ ನಿಮ್ಮ ಬರವಣಿಗೆಯ ಶೈಲಿ ಅಭಿನಂದನೀಯ. ಕಳೆದ ಅಂಕಣ ಓದಿದಾಗಲಿಂದ ಏನೋ ಕಳೆದುಕೊಳ್ಳುತ್ತಿರುವ ಅನುಭವ. ಅವರ ಅಗಲಿಕೆ ನಾವೇ ಅನುಭವಿಸುತ್ತಿರುವೆವು. ಮನೋಜ್ಞ ಬರಹಕ್ಕೆ ವಂದನೆ. ಅವಿಸ್ಮರಣೀಯ “ಏಕಾ ” ಸ್ಮೃತಿಯಲ್ಲಿ ಅಮರ…
ಏನೂ ಹೇಳಲಿಕ್ಕೆ ತಿಳೀತಿಲ್ಲ ಶೀಲಾ. ನಿಮ್ಮ ಪ್ರತಿಕ್ರಿಯೆ ನೇರ ಎದೆಯಾಳಕ್ಕೇ ಇಳಿದಂತೆ. ಹೌದು ಶೀಲಾ ನೀವು ಹೇಳಿದಂತೆ ನನಗೂ ಈ ಎರಡು ಕಂತು ಬರೀಯೂದು ಭಾಳ ಕಷ್ಟ ಆತು. ನಿಮ್ಮ ಈ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು.
ಕಾಯಕವೇ ಕೈಲಾಸ ಎಂದು ನಂಬಿದ,
ನಂಬಿದಂತೆ ಬದುಕಿದ
ಏಕಾತಾಯಿಯವರು
ನಮ್ಮಂತಹ ಹಲವಾರು ಓದುಗರಿಗೆ
ಆದರ್ಶಪ್ರಾಯರಾಗಿದ್ದಾರೆ.
ರಮೇಶ ಪಟ್ಟಣ.ಕಲಬುರಗಿ
ನಿಮ್ಮ ಅನಿಸಿಕೆಗೆ ತುಂಬ ಧನ್ಯವಾದಗಳು ಸರ್. ಹೌದು, ಏಕಾ ಇದ್ದದ್ದೇ ಹಾಗೆ. ಇಂದಿಗೂ ನನ್ನ ಪ್ರತಿ ಹೆಜ್ಜೆಗೂ, ಪ್ರತ ಕ್ಷಣಕ್ಕೂ ಅವಳ ನೆನಪು ಸುಳಿಯದೆ ಇಲ್ಲ. ಇನ್ನೊಮ್ಮೆ ಧನ್ಯವಾದಗಳು ರಮೇಶ ಸರ್.