ಸರೋಜಿನಿ ಪಡಸಲಗಿ ಅಂಕಣ- ಅಸಹಾಯಕತೆ ಒಂದ ಇತ್ತು ಅಲ್ಲೆ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

25

 ನಮ್ಮ ಸುಧಾ ಮಾವಶಿ ತೀರಕೊಂಡದ್ದು 1993  ಮಾರ್ಚದಾಗ ನಾ ಹಿಂದ  ಬರಧಾಂಗ. ಅಂದ್ರ ಆವಾಗ ನಮ್ಮ ಅವ್ವಾನ  ತಬ್ಬೇತ ಬಿಗಡಾಸಿ ಈ ಅಡ್ನಾಡ ಜಡ್ಡ ಕೂಡಿದ್ದು ತಿಳದು ಬರೋಬ್ಬರಿ ಸವ್ವಾ ವರ್ಷ ಆಗಿತ್ತು. ಒಂಚೂರ ಅಲ್ಲೆ, ಒಂಚೂರ  ಇಲ್ಲೆ ಅಂತ ಮೈ ತುಂಬ, ಎಲ್ಲಾ ಕಡೆ  ಆ  ಜಡ್ಡು  ಸೆಡ್ಡ ಹೊಡದ  ಅಡ್ಡಾಡಿಕೋತ ನಮ್ಮ ಅವ್ವಾನ್ನ  ಹಣ್ಣ ಹಣ್ಣ ಮಾಡ್ಲಿಕ್ಹತ್ತಿತ್ತು. ಮೊದ್ಲs ಮೆತ್ತಗಿನ ಹೆಣ್ಮಗಳು ನಮ್ಮ  ಅವ್ವಾ. ಈ ತ್ರಾಸು,  ನೋವಲೇ  ನಲಗಿ  ಹೋಗಿದ್ಲು. ನಾವೆಲ್ಲಾ  ಅದನ ನೋಡಿ ಸಂಕಟಬಡೂದ ಅಷ್ಟ ಬಿಟ್ಟು ಏನ ಮಾಡಹಂಗ ಇದ್ವಿ? ಏನಿತ್ತ ನಮ್ಮ ತಾಬೇದಾಗ. ಇಂಥಾದ್ರಾಗs ನಮ್ಮ ಅವ್ವಾಗೂ ಸಣ್ಣ ಝಟಕಾ ಹಾರ್ಟ್ ಅಟ್ಯಾಕ್‌ದ ಬಂತ ಹೋತು. ಅದರಾಗಿಂದ  ಪಾರಾಗಿ  ಬಂದ್ಲು ನಮ್ಮ  ಅವ್ವ. ಆಕೀದು  ಇನ್ನೂ ಭಾಳ ಬಾಕಿ ಇತ್ತು ಅನಭೋಗಸುದು.

ನಮ್ಮ  ಅವ್ವಾ  ಭಾಳ ಸಮಾಧಾನ, ಸಹನ ಶೀಲ. ಆದರ ಆಕಿ ನಳ್ಳಾಟ  ಆ  ಗಡಿ ದಾಟಿ ನಡದು ‌ ನಮ್ಮನ್ನ ನಡಗಸ್ತಿತ್ತು ಅಂದ್ರ ಅದೆಂಥಾ ಭಯಾನಕ ಬ್ಯಾನಿ ಅದು ಅನಸ್ತಿತ್ತು. ನಾವು ದೀಡ, ಎರಡ  ತಿಂಗಳಿಗೊಮ್ಮೆ  ಹೋಗಿ  ಬರತಿದ್ವಿ ಬೆಂಗಳೂರಿಗೆ. ಜೀವ  ತಡೀತಿದ್ದಿಲ್ಲ. ನಮ್ಮ ಅಣ್ಣ ತಮ್ಮಂದಿರು, ಅವರ  ಹೆಂಡಂದ್ರು  ಅಷ್ಟ ಪರಿ ಮಾಡೂದ  ನೋಡಿ  ನಮಗ ಒಂಥರಾ  ನಿಶ್ಚಿಂತಿ, ಸಮಾಧಾನ  ಜೋಡಿ ಭಿಡೆನೂ ಅನಸೂದು. ನಾವ ಬಂದಾಗರೆ  ಒಂದ ನಾಕ ದಿನಾ  ಅವರಿಗೂ ಒಂಚೂರ ಹಗರ ಅನಸೀತು ಅಂತ ಅನಸೂದು. ಹಂಗ ಒಂದ ನಾಕ ದಿನಾ ಹೋದಾಗನs ‌‌ಆಕಿ  ನರಳೂದು ಕೇಳಿ ತಡೀಲಿಕ್ಕಾಗದ ಆಕಿ ತುಡಗಲೆ ಅತ್ತ ಬರತಿದ್ದ ನಾ. ಇನ್ನ ಅಣ್ಣಾ ಅಂತೂ ಅಸರಂತ ಆಕಿ  ಬಾಜೂಕನs ಇರಾವ್ರು. ಅವರಿಗೆ  ಹೆಂಗ  ಆಗ್ತಿರಬೇಕು ಅದು ನಮ್ಮ ಕಲ್ಪನಾಕ್ಕ ಸಿಗೂದು ಸಾಧ್ಯನs ಇದ್ದಿದ್ದಿಲ್ಲಾ. ಅಣ್ಣಾ ಆಮ್ಯಾಲ  ಅವ್ವಾ ಹೋದ ಮ್ಯಾಲ ಸುದ್ಧಾ, ಅವ್ವಾ ಜೋರಲೆ ನಳ್ಳಿಧಾಂಗ, ಕರದದ್ದ ಕೇಳಿಧಂಗ ಆಗಿ ಗಡದ್ದ ನಿದ್ಯಾಗ ಇದ್ದಾವ್ರು, ” ಹಾಂ ಬಂದ ಕುಶಮಿ” ಅಂತ  ಹಡಬಡಿಸಿ  ಏಳ್ತಿದ್ರು.

 ನನಗ  ಈಗ  ಇನ್ನೊಮ್ಮೆ  ಅಣ್ಣಾನ  ಮಾರಿ ಮ್ಯಾಲ ಅದs ಅಸಹಾಯಕತಾ  ಕಾಣಸ್ತಿತ್ತು ಏಕಾನ  ಕಡಿಗಾಲಕ್ಕ  ಕಂಡಂಥಾದು. ಹಂಗs ಅನಸೂತಿತ್ತು; ಇನ್ನ ಇದು ನಮ್ಮ ಅಣ್ಣಾನ ಸೋಬತಿ ಕಾಯಂ ಉಳೀತದೋ ಏನೋ ಅಂತ. ದಿನಾ ದಿನಾ ಅವ್ವಾನ ತಬ್ಬೇತ ಭಾಳ ಕೆಡ್ಲಿಕ್ಹತ್ತು. ನಾವು ಧಾರವಾಡದಾಗ ಕಟ್ಟಿಸಿದ್ದ ಹೊಸಾ ಮನಿದು ವಾಸ್ತು ನವೆಂಬರ್‌ದಾಗ ಮುಗಿಸಿ ಡಿಸೆಂಬರ್‌ದಾಗ ಅವ್ವಾನ ಜೋಡಿ ಇರಲಿಕ್ಕ ಬಂದಿದ್ದ ನಾ. ನಮ್ಮ ಮನಿ ವಾಸ್ತುದ ಮುಂದ ಒಂಚೂರ ಬೇಷ ಇದ್ದ ನಮ್ಮ ಅವ್ವಾನ ತಬ್ಬೇತ ಆ ಮ್ಯಾಲ ನಾ ಡಿಸೆಂಬರ್‌ದಾಗ ಬಂದಾಗ ಭಾಳ ಹದಗೆಟ್ಟಿತ್ತು. ಹೆಂಗ ಸಂಭಾಳಸೂದು ತಿಳೀಧಂಗ ಆಗಿತ್ತು. 

ನಮ್ಮದು ಅಲ್ಲೆ ಧಾರವಾಡದಾಗ  ಹೊಸಾ ಮನಿಗೆ  ಸಾಮಾನ ಸಾಗಿಸಿ ಹೊಂದಸೂ ಕೆಲಸಾ ಬಾಕಿ ಇತ್ತು. ಆದರ ಅವ್ವಾ ಹೀಂಗ ಇದ್ದಾಗ ಅದೆಲ್ಲಾ ಬ್ಯಾಡ  ಅಂತ ಗಪ್ಪ ಕೂತಿದ್ದೆ. ನಾ  ಹಿಂದ ಬರದೀನಿ – ಅಣ್ಣಾಗ ತಮ್ಮದು, ಅವ್ವಾಂದು  ಇಬ್ಬರದೂ ಅಂತ್ಯದ ಬಗ್ಗೆ ತಿಳಿದಿತ್ತು  ಅನಸ್ತದ ಅಂತ. ಅದು ನಕ್ಕೀನೇ. ಆ ದಿನಾ ಅಜಮಾಸು  ಡಿಸೆಂಬರ್ ಕಡೀವಾರದಾಗ ಇದ್ದೀತು.  ಅಣ್ಣಾ ನನ್ನ ಕರದು  ಹೇಳಿದ್ರು – “ಅಕ್ಕವ್ವಾ  ಇನ್ನ ನಿಮ್ಮ  ಹೊಸಾ ಮನಿಗೊಮ್ಮೆ ಎಲ್ಲಾ  ಸಾಮಾನ ತಂದ ಹಾಕೋಳದ ಠೀಕ  ಅನಸ್ತದ. ಮುಂದ ಮುಂದ ಹಾಕೂದ  ಬ್ಯಾಡಾ. ಎಪ್ರಿಲ್, ಮೇ ಅಂತ  ಕೂಡುದ  ಬ್ಯಾಡಾ. ಪಟ್ಟನ ಧಾರವಾಡಕ  ಹೋಗಿ  ಆ  ಕೆಲಸಾ  ಮುಗಿಸಿ ಬಂದ  ಬಿಡು” ಅಂದ್ರು.  ನಾ  ಅಣ್ಣಾನ ಮೋತಿ ಒಮ್ಮೆ, ಅವ್ವಾನ  ಖೋಲಿ  ಒಮ್ಮೆ ನೋಡಿ ಸುಮ್ಮನ ಕೂತದ್ದ ನೋಡಿ  ಅಣ್ಣಾ ಮತ್ತ  ಹೇಳಿದ್ರು “ಹೌದು. ಎಪ್ರಿಲ್ ಮೇ ಮೊದಲ ಬ್ಯಾಡಾ. ಅದನ್ನ  ತಲ್ಯಾಗಿಂದ  ತಗದ  ಬಿಡು. ನೀ ಈಗ  ಹೋಗಿ ಬಂದ  ಬಿಡು” ಅಂತ ನನ್ನ  ಜೋರಾವರೀಲೆ ಕಳಸಿದ್ರು  ಅಣ್ಣಾ. ಜನೇವರಿ ಒಳಗ  ಮನಿ  ಹೊಂದಿಸಿಕೊಳೂದು  ಆಗಿ ಎಲ್ಲಾ ಒಂದ  ನಿಟ್ಟ ಆತು. ಹುಡುಗರೂ ಎಲ್ಲಾ  ದೊಡ್ಡ ಕ್ಲಾಸ್‌ನ್ಯಾಗ  ಇದ್ರು. ಸಣ್ಣ ಮಗಾ  ಪಿಯುಸಿ, ಮಗಳು ಬಿ.ಎಸ್.ಸಿ. ಎರಡನೇ ವರ್ಷ, ದೊಡ್ಡ ಮಗಾ ಬಿ.ಇ. ಕಡೀ ಸೆಮೆಸ್ಟರಗಿದ್ದ. ನನಗೆಲ್ಲಾ ಯಾಕೋ  ಅಭsವ ಅನಸ್ಲಿಕ್ಹತ್ತಿತ್ತು. ಅವ್ವಾನ  ಆರೋಗ್ಯದಾಗ  ಒಂಚೂರ  ಏನರೇ ಹೆಚ್ಚು ಕಡಿಮಿ  ಆತಂದ್ರ  ಎದಿ ಧಸ್ ಅನೂದು; ಒಂದ  ಬಾ ಅಂದ್ರ  ಹತ್ತ ವಿಚಾರ  ಬರೂವು. ಹೌಹಾರಿ  ಬೆಂಗಳೂರಿಗೆ  ಓಡೂದು  ಹಿಂಗೇ  ನಡದಿತ್ತು. ಅರ್ಧಾ ಜೀವ  ಇಲ್ಲೆ  ಧಾರವಾಡದಾಗ; ಅರ್ಧಾ  ಜೀವ  ಬೆಂಗಳೂರಾಗ. ಒಟ್ಟ ಏನೋ ಹೌಲಧೌಲ ನಡದ  ಬಿಟ್ಟಿತ್ತು  ದಿನ ದಿನಕ್ಕೂ ಒಂಥರಾ. ಅದs ಗೊಂದಲದಾಗ ಒಂದ ವಿಚಾರ ಬಂತು; ಭಾಳ  ಲಾಯಕ್ಕಾದ  ವಿಚಾರ. ನಮ್ಮ ಮನಿಗೆ ಒಬ್ಬ ಬಾಯಿ ಅಲ್ಲೆ  ಧಾರವಾಡದಾಗ, ಭಕ್ರಿ, ಚಪಾತಿ  ಮಾಡ್ಲಿಕ್ಕ  ಬರ್ತಿದ್ಲು. ಆಕೀಗೇ  ಒಂದೆರಡ ತಿಂಗಳ ಎಲ್ಲಾ  ಅಡಿಗಿ  ಮಾಡಿಟ್ಟ ಹೋಗಲಿಕ್ಕ ಹೇಳ್ದೆ. ಒಂಚೂರ  ನಿರ್ಧಾಸ್ತ  ಅನಿಸ್ತು ಮನಸಿಗೆ.

ಇಷ್ಟಾಗೂದ್ರಾಗ  ಎಪ್ರೀಲ್  ಎರಡನೇ ವಾರ ಇದ್ದೀತು; ಆಗ  ಒಂದಿನಾ ಪ್ರಕಾಶಂದು  ಫೋನ್ ಬಂತು. “ಅವ್ವಾ ಯಾಕೋ  ಭಾಳೇ ಹಣ್ಣ ಆಧಂಗ ಅನಸ್ತದ. ಯಾಕೋ  ಅಭರೋಸ  ಭಾಳ  ಅನಸ್ತದ. ತಾಬಡತೋಬ ಬಂದ ಬಿಡ್ರಿ ಅಕ್ಕಣ್ಣಿ,  ನೀನು ವಿದ್ಯಾ ಇಬ್ರೂ. ಆಕಿಗೂ  ಫೋನ್  ಮಾಡೀನಿ” ಅಂದಾ. ಆಕಿ ಗೋಕಾಕದಿಂದ, ನಾ ಧಾರವಾಡದಿಂದ  ಲಗೇಚ  ಹೋದ್ವಿ. ಎಂಟ – ಹತ್ತ ದಿನಾ  ಇದ್ದೀವು. ನಂಗ  ಹುಡಗೂರ  ಪರೀಕ್ಷಾದ್ದ ಚಿಂತಿನೂ  ತಿನ್ನಲಿಕ್ಹತ್ತಿತ್ತು. ಇನ್ನೆರಡ ದಿನಾ  ಇದ್ದು ವಾಪಸ್  ಹೊರಟ್ವಿ  ನಾವು. ಖರೇ ಅಂದ್ರ ಅದು ಒಂದ  ಕಠಿಣಾತಿ ಕಠಿಣ  ಪ್ರಸಂಗ; ಇರಲಾರೆ – ಹೊರಡಲಾರೆ  ಅನೂಹಂಗ. ಬರೂ ಮುಂದ  ಅವ್ವಾಗ “ಹೋಗಿ ಬರತೀವ ಅವ್ವಾ” ಅಂತ  ಹೇಳಿದಾಗ  ನಮ್ಮ ಅವ್ವ  ಬಾಕಿ ಏನೂ ಹೇಳಲಿಲ್ಲ. ಬರೇ “ಅಕ್ಕಾ, ಅಕ್ಕವ್ವಾ, ಅಕ್ಕಣ್ಣಿ ಅಕ್ಕವ್ವಾ; ವಿದ್ಯಾ, ವಿದ್ಯಿ, ವಿದ್ಯಕ್ಕಾ, ವಿದ್ಯಾ” ಇಷ್ಟಂದ್ಲು. ಕಣ್ಣ ಮುಚ್ಚಿದ್ಲು  ಮಲಗಿದಲ್ಲೇ. ಆಕಿ  ಜಡ್ಡಿನ  ಕಾವಿಗೆ, ನಳ್ಳಾಟದ  ಸಂಕಟಕ್ಕ ಕಣ್ಣೀರ ಬತ್ತೇ ಹೋಗಿದ್ವೋ ಏನ  ಆಕಿಗೆ  ಕಣ್ಣೀರ  ತಗೀಲಿಕ್ಕೆ  ತಾಕತ್ತ  ಇಲ್ಲದ್ದಕ್ಕ ಆಕಿ  ಕಣ್ಣಾಗ  ಇದ್ದ  ಚೂರಪಾರ  ನೀರೂ   ಚಿಮ್ಮಿ ನಮ್ಮ ಕಣ್ಣಾಗಿಂದನs  ಸುರಿಲೀಕ್ಹತ್ವೋ ಏನೋ! ಅವ್ವಾ  ಅನ್ಲಿಕ್ಕೆ  ಧನೀನ  ಹೊರಗೆ  ಬರಲಿಲ್ಲ. ಅಣ್ಣಾ  ಟಾವೆಲ್‌ಲೆ  ಬಾಯಿ ಮುಚ್ಕೊಂಡ  ಇನೊಂದ  ಖೋಲ್ಯಾಗ  ಹೋಗಿ  ಕೂತ್ರು; ಕಣ್ಣ ತುಂಬಿ  ಕೆರಿ  ಆಗಿದ್ದು. ಹೀಂಗ  ಇದ್ದ  ಅಣ್ಣಾನ್ನ, ಹಂಗ  ಇದ್ದ  ಅವ್ವಾನ್ನ  ಬಿಟ್ಟು ಬಂದ್ವಿ ಕಲ್ಲ ಕಟ್ಟಿಧಾಂಗ ಆಗಿದ್ದ ಕಾಲ ಕಿತ್ತಿ ಇಟಗೋತ.

 ನಾ  ಬೆಂಗಳೂರಿಂದ  ಬಂದ  ಭಾಳ  ಅಂದ್ರ ಒಂದ  ಎಂಟ – ಹತ್ತ ದಿನಾ  ಆಗಿದ್ದೀತು. ಅಂದು  ಮೇ ಮೂರನೇ ತಾರೀಖು; ಆಗಿ ಹುಣ್ಣಿವೆ. ಮೂರೂ ಸಂಜಿ ಬೆಂಗಳೂರಿಂದ ಫೋನ್  ಬಂತು – ಅವ್ವಾ ಭಾsಳ  ಸೀರಿಯಸ್  ಕಂಡೀಷನ್ನ್ಯಾಗ  ಇದ್ದಾಳ. ತಾಬಡತೋಬ  ಹೊಂಟ ಬರ್ರಿ ಅಂತ. ವಿದ್ಯಾಗೂ ಫೋನ್ ಮಾಡಿದ್ರು. ವಿದ್ಯಾ ಮತ್ತ ಆಕಿ  ಗಂಡ  ರಾಜಗೋಪಾಲ  ಅಲ್ಲಿಂದನs  ಅಥಣಿ – ಬೆಂಗಳೂರ  ಬಸ್ಸಿಗೆ  ಹತ್ತಿದ್ರು; ನಾನು – ಸುರೇಶ  ಇಲ್ಲೆ  ಧಾರವಾಡದಿಂದ  ಅದೇ  ಬಸ್ಸ ಹಿಡ್ಯೂದು ಅಂತ  ಠರಾವಾತು.

ನಾವು  ಮನಿ  ಬಿಡೂ  ಮುಂದ  ಬೆಂಗಳೂರಿಂದ ಮತ್ತ  ಫೋನ್ ಬಂತು. ನನ್ನ  ಮಗಳು  ಫೋನ್  ತಗೊಂಡ್ಲು. ಆಕಿ  ಚೆಹರಾನs  ಬದ್ಲಾತು. ನಾ, “ಏನs ಏನಂತ” ಅಂದೆ. “ಏನಿಲ್ಲ ಅಮ್ಮಾ. ವಿದ್ಯಾ ಮಾವಶಿ ಮತ್ತ ಕಾಕಾ  ಬಿಟ್ಟಾರಂತ. ನೀವೂ ಅದs  ಬಸ್ಸಿಗೇ ಹತ್ರಿ ಅಂತ  ಮಾಮಾ ಹೇಳಿದಾ” ಅಂದ್ಲು. ನನಗೇನ  ಅದು  ಒಂಚೂರೂ  ಖರೆ  ಅನಸಲಿಲ್ಲ. ಆದ್ರ ಪರಿಸ್ಥಿತಿ  ಹಂಗಿತ್ತು; ಏನ  ಹೇಳಿದ್ದನ್ನ  ನಂಬ್ಲಿಕ್ಕೆ ಬೇಕಿತ್ತು. ನಾವಿನ್ನೂ  ಬೆಂಗಳೂರ  ಮುಟ್ಟೂದಿತ್ತು. ಇದರಿಗೆ  ಪೂರಾ  ಅಶಗಿದು, ಇಡೀ ರಾತ್ರಿ ಇತ್ತು. ಇಲ್ಲೆ  ಸಣ್ಣ ಮಗಂದು, ಮಗಳದು  ಪರೀಕ್ಷಾ ಸುರು ಆಗಿತ್ತು. ನನ್ನ ಮಗಳು  ನನಗ ಯಾವ ಜನ್ಮದ ಅವ್ವನೋ ಏನೋ;  ಆಗೂ, ಈಗೂ  ಕಾಯಂ ನನ್ನ  ಬೆನ್ನಿಗಿರತಾಳ  ಆಕಿ. ಬೇಕಾದ ಪರಿಸ್ಥಿತಿ ಇರಲಿ ಅದು. ಆಕಿ ಥೇಟ್  ನನ್ನ ನೆರಳೇ!  ಅದೇ ಗಟ್ಟಿತನ, ಅದೇ ಸ್ಥೈರ್ಯ. ಆ ಕೂಸು, ಆ ಸಣ್ಣ ಹುಡುಗಿ ನಂಗ ಹೇಳಿದ್ಲು – “ಅಮ್ಮಾ ಜಪ್ಪಿಸಿಕೊಂಡ  ಹೋಗಿ ಬರ್ರಿ. ಇಲ್ಲಿದೇನೂ  ನೀ ಕಾಳಜಿ  ಮಾಡಬ್ಯಾಡ. ನಾ ನೋಡ್ಕೋತೀನಿ ಎಲ್ಲಾ” ಅಂದ್ಲು. ಎಲ್ಲಾ ಭಾರಾ ದೇವರ ಮ್ಯಾಲ ಹಾಕಿ  ಹೊಂಟ್ವಿ ನಾವು. 

ಧಾರವಾಡ  ಬಸ್ಸ್ ಸ್ಟ್ಯಾಂಡ್‌ಗೆ  ಬಂದ್ವಿ. ಅಥಣಿ – ಬೆಂಗಳೂರ  ಬಸ್ಸು ಬಂತು. ಖಿಡಕ್ಯಾಗ ವಿದ್ಯಾ  ಕೈ ಮಾಡಿದ್ಲು. ನಾನು, ಸುರೇಶ ಹತ್ತಿದ್ವು.  ವಿದ್ಯಾ  ನನಗ  ತನ್ನ ಬಾಜೂಕನs  ಜಾಗಾ  ಹಿಡದಿದ್ಲು.  ಯಾಕೋ ಗೊತ್ತಿಲ್ಲಾ ನಂಗ;  ಇಂದೂ ಗೊತ್ತಾಗಿಲ್ಲ. ಆ ಗಳಿಗಿ  ಇಂದೂ ಕಣ್ಣಾಗಿಂದ  ಚೂರೂ ಅಕಡೀಕಡೆ  ಆಗಿಲ್ಲ. ವಿದ್ಯಾನ್ನ  ನೋಡಿದ ಕೂಡಲೇ  ತಲೀ ಮ್ಯಾಲಿಂದ  ದೊಡ್ಡ   ಬಂಡಿಗಲ್ಲ  ಸರಧಾಂಗ  ಆತು. ಮನಸೂ ಒಂಚೂರ  ಹಗರ ಆತು. ನನಕಿಂತಾ  ಆಕಿ ಭಾಳ ಸಣ್ಣಾಕಿ. ಅಂಥಾದು  ಆಕಿನ್ನ ನೋಡಿ ನಂಗ  ಹಂಗ್ಯಾಕ  ಅನಿಸ್ತು ನಂಗಿನ್ನೂ  ತಿಳದೇ ಇಲ್ಲ. ಮುಳಗಾಂವಗ  ಹುಲ್ಲಕಡ್ಡಿ  ಆಸರ  ಅಂದ್ರ ಇದೇ  ಇದ್ದೀತು ಪಕ್ಕಾ. ಆಪುಲಕಿ ಭಾವ ಉಮಡಾಶಿ ಬಂತು. ಅದರಾಗ  ಮನಸು ಥೋಡೆ  ತಹಬಂದಿಗೆ  ಬಂಧಂಗಾಗಿ  ವಿದ್ಯಾನ್ನ  ಕೇಳ್ದೆ. “ವಿದ್ಯಾ, ಅವ್ವಾಗ  ಏನಾಗಿರ  ಬೇಕು?” ಅಂದೆ. ಆಕಿ ನನ್ನ  ಕಡೆ ನೋಡಿ, “ನಡದs  ಇರತದಲಾ  ಆಕಿ ತಬ್ಬೇತದ್ದು  ಅದೇ  ದಿನಾ ಏನರೇ ಹೇರಪೇರ  ಆಗೂದು. ಹಂಗs  ಏನರೇ  ಆಗಿರಬೇಕು. ಹಣ್ಣೂ ಭಾಳ ಆಗ್ಯಾಳ; ಆ ಬ್ಯಾನಿ  ಕಾಲಾಗ ಸೋತ ಹೋಗ್ಯಾಳ ನಮ್ಮ ಅವ್ವ” ಅಂತ ಅಂದ್ಲು. ನಾ ಏನೂ  ಅನದ ಹಂಗs  ಸೀಟಿಗೆ  ತಲಿ ಆನಿಸಿ  ಘಟ್ಟಿ  ಕಣ್ಣ ಮುಚ್ಚಿದೆ. ಮುಚ್ಚಿದ  ಕಣ್ಣಾಗ  ನೂರಾರು ಚಿತ್ರ  ತೇಲಲಿಕ್ಹತ್ತು ಅಲ್ಲಿ  ತುಂಬಿ ನಿಂತ ನೀರಾಗ. ಮತ್ತ ಕಣ್ಣ ತಗದು  ವಿದ್ಯಾನ್ನ  ನೋಡ್ದೆ. ಯಾಕೋ ಆಗ ನನ್ನ  ಆರೋಗ್ಯದ್ದೂ  ಸ್ವಲ್ಪ ತಕರಾರ  ನಡದಿತ್ತು. ವಿದ್ಯಾ, “ಅಕ್ಕಣ್ಣಿ  ಸ್ವಲ್ಪ  ಕಣ್ಣ ಮುಚ್ಚಿ ಮಲಕೋ” ಅಂದ ಆಕಿ ಮೋತಿ  ಮ್ಯಾಲೂ  ಮಬ್ಬ ಕಳೆ; ಅದರ ಮ್ಯಾಲ  ಆಳ ನೋವು  ಢಾಳ ಹಂಗೆ ತನ್ನ ಶಿಕ್ಕಾ ಒತ್ತಿತ್ತು. ಸಣ್ಣಾಕಿ ಆಕಿ; ಭರೆ ಮೂವತ್ತೆರಡ ವರ್ಷ ಅಕಿಗೆ ಆಗ. ಕಸಿವಿಸಿ ಆತು. ಮತ್ತ ಕಣ್ಣ ಮುಚ್ಚಿದೆ. 

ಹೌದು,  ಕಣ್ಣ ಮುಚ್ಚೂದು  ನನ್ನ  ಕೈಯಾಗ ಇತ್ತು. ಆದ್ರ ತಲಿ ತುಂಬ ನಡದ ಜಾತ್ರಿ  ಗದ್ದಲಾ ನಿಲಸೂ  ತಾಕತ್ತ ಮಾತ್ರ  ಅಜೀಬಾತ  ಇದ್ದಿದ್ದಿಲ್ಲ. ನಾವು  ಮೊನ್ನಿ  ಸರ್ತೆ ಬರೂ ಮುಂದ  ಅವ್ವಾ  “ಅಕ್ಕಾ, ಅಕ್ಕವ್ವಾ; ವಿದ್ಯಾ, ವಿದ್ಯಕ್ಕಾ” ಅಂತ  ಹಲಬಿದ್ದು, ಮತ್ತ ಮತ್ತ  ಕಿಂವ್ಯಾಗ  ಗುಂಯ್ಯ ಅನ್ಲಿಕ್ಹತ್ತಿತ್ತು. ಅವ್ವಾ  ಕರಧಂಗ  ಕೇಳಸೂದು.  ತಾಯಿ  ಕರಳ  ಅದು. ನಂಗ  ಯಾಕೋ ಪಟಕ್ಕನ  ನಮ್ಮಣ್ಣ  ಪ್ರಕಾಶ  ತನ್ನ M.S. ಮತ್ತ Phd. ಮಾಡ್ಲಿಕ್ಕೆ ಕೆನಡಾಕ್ಕ  ಹೋಗಿದ್ದು  ನೆನಪಾತು; ಆಗೂ  ಅವ್ವಾ ಹೀಂಗನ  ಹಲಬತಿದ್ಲು. ನನ್ನ ಮಗಳು ಹುಟ್ಟಿದ್ಲು ಆಗ. ಹಿಂಗಾಗಿ  ಬಾಣಂತನ  ಸಲುವಾಗಿ ಮೂರ ತಿಂಗಳ ಅಲ್ಲೇ ಅಂದ್ರ ಹುಕ್ಕೇರಿಯೊಳಗs  ಇದ್ದೆ ನಾ. ಅವ್ವಾ  ನಂಜೋಡಿ  ನನ್ನ  ಖೋಲ್ಯಾಗನs  ಮಲಗತಿದ್ಲು.  ಒಂದ  ರಾತ್ರಿ ಏನ  ಆಕಿ  ಕಣ್ಣೀರ  ತಗ್ಯೂದು  ತಪ್ಪತಿದ್ದಿಲ್ಲಾ. ಒಂದs  ಒಂದ  ದಿನಾ ಏನ  ಕಣ್ತುಂಬ  ನಿದ್ದಿ  ಮಾಡಿದ್ದ  ನಾ  ನೋಡ್ಲಿಲ್ಲ.  “ಅಕ್ಕವ್ವಾ, ಪ್ರಕಾಶ  ತಿರಗಿ  ಬರತಾನಲಾ? ಅಲ್ಲೇ ಏನ  ಇರೂದಿಲ್ಲ  ಹೌದಲ್ಲೊ? ಇಲ್ಲೆ ಬಂದು ಇಲ್ಲಿ ಹುಡಗಿನ್ನೇ  ಮದವಿ ಆಗ್ತಾನಲಾ” ಅನಾಕಿ. ಒಂದ ಇಪ್ಪತ್ತ  ಸರ್ತೆ  ಅದನೇ  ಕೇಳಾಕಿ. ಇದು ಸಾಧಾರಣ 45 – 46 ವರ್ಷದ  ಹಿಂದಿನ  ಮಾತು. ಆಗ  ಈ  ಹೊರದೇಶಕ್ಕ  ಪತ್ರ ಹೋಗಲಿಕ್ಕೆ – ಬರಲಿಕ್ಕೆ ಸರ್ವೇ ಸಾಧಾರಣ ಹದಿನೈದ  ದಿನಾ  ಬೇಕs  ಬೇಕಾಗ್ತಿತ್ತು. ಫೋನಿಂದಂತೂ  ಬ್ಯಾಡದು;  ದೊಡ್ಡ ಪಡಿಪಾಟ್ಲ. ತಿಂಗಳ – ದೀಡ ತಿಂಗಳಿಗೊಮ್ಮೆ  ಪ್ರಕಾಶಂದ  ಫೋನ್  ಬರೂದು, ಅದೂ ಪೋಸ್ಟ್ ಆಫೀಸ್‌ಗೆ.  ಅಣ್ಣಾನೇ  ಅಲ್ಲೇ  ಹೋಗಿ  ಮಾತಾಡಿ  ಬರ್ತಿದ್ರು. ಮಗನ ಧನಿ  ಸುದ್ದಾ ಕೇಳದs  ಆ  ತಾಯಿ  ಕರಳು  ಒದ್ದಾಡ್ತಿತ್ತು. ನಾನs ಆಕೀನ್ನ  ಸಮಾಧಾನ  ಮಾಡ್ತಿದ್ದೆ  ಆಗ. ಆ ನೆನಪಲೆ  ಮುಚ್ಚಿದ ಕಣ್ಣಾಗಿಂದ  ನೀರು  ಗಲ್ಲದ ಮ್ಯಾಲ  ಇಳದಾಗ  ನಾ  ಕಣ್ಣ ತಗದ  ನೋಡಿದ್ರ  ವ್ಯಾಳ್ಯಾ  ನಿಂತಲ್ಲೇ ನಿಂತ ಹಂಗ ಅನಿಸ್ತು.

ಮತ್ತ  ಕಣ್ಣ ಮುಚ್ಚಿದೆ. ಆ ಕತ್ತಲು, ಆ ರಾತ್ರಿ. ಅದರಾಗ  ಬಸ್ಸಿಂದs  ಒಂದ ಸಪ್ಪಳಾ.  ಆ ಮೌನದಾಗ  ನೋವಿಂದನ  ಸಾಮ್ರಾಜ್ಯ. ಆ ನೀರವ ಕತ್ತಲದಾಗ  ಅವ್ವಾನ  ಧನಿ  ಕೇಳಿಸ್ಧಂಗ, ಏಕಾ ಬಂದ ನಿಂತ  ತಲಿ ಮ್ಯಾಲ ಕೈ  ಆಡಿಸ್ಧಂಗ  ಹತ್ತ  ಹಳವಂಡ. ಅವ್ವಾ  ನನ್ನ ಮುಂದ  ಒಂದೆರಡ  ಸರ್ತೆ  ಅಂದಿದ್ಲು – “ಅಕ್ಕವ್ವಾ ಎಲ್ಲಾರೂ ಎಲ್ಲಾತಕೂ  ಕರ್ಮ, ಕರ್ಮ ಅನೂದ ಕೇಳಿ ಕೇಳಿ  ನನಗ  ಒಮ್ಮೊಮ್ಮೆ ಅನಸ್ತದ ನೋಡು; ಈ  ಕರ್ಮದ ಹುಟ್ಟರೇ  ಎಲ್ಯದ ಅಂತ. ಹುಡಕ್ಯಾಡಿ ನೋಡಬೇಕ ನೋಡ ಅದನ. ಅಕ್ಕವ್ವಾ  ನಾನು,  ನಿಮ್ಮ ಏಕಾ  ಕೂಡೇ ಎಷ್ಟ ಬಾರಿ  ಹೊರಗ  ಕೂತೀವ  ನೋಡು. ಸಂಕಟ  ಆಗೂದ ನಂಗ. ಯಾಕ ಅಂತ ತಿಳೀತದ  ನಿಂಗೂ. ನಾಕನೇ  ದಿವಸ  ಒಳಗ ಬರಬೇಕಾದ್ರ  ಏಕಾ ಇನ್ನೂ  ಕತ್ಲ ಕತ್ಲ  ಇರಬೇಕಾದ್ರನs  ಹಳ್ಳಕ್ಕ  ಹೋಗಿ  ಅಲ್ಲೆ  ನೀರಾಗ  ಮುಣಗಿ ಮುಣಗಿ  ಎದ್ದು, ಮೈಲಿಗಿ  ಕಳಕೊಂಡು  ಬೆಳಗ  ಹರಿಯೂದ್ರಾಗ  ಒದ್ದೀಲೆ  ಮನಿಗೆ  ಬರ್ತಿದ್ರು. ಇದ್ಯಾವ  ಕರ್ಮ ಹೇಳ ಅಕ್ಕವ್ವಾ. ಅದೂ ಹಿಂಗs ಆ ಕರ್ಮಾ ಸವಸೂದು! “ಅನಾಕಿ. ಒಮ್ಮೆಲೆ  ಮೆಟ್ಟಿಬಿದ್ದು ಕಣ್ಣ ತಗದೆ ನಾ. ಈ ಕರ್ಮದ  ಮಾತ ಈಗ ಯಾಕ  ನೆನಪಿಗೆ  ತಂದ್ಲು ನಮ್ಮ ಅವ್ವಾ ಅನಿಸ್ತು. ತಲಿ ಗಿರಗಿಟ್ಲಿ ಆಡಿಧಂಗಾಗಿ  ಗಟ್ಟಿ  ಸೀಟ ಹಿಡ್ಕೊಂಡ ಮತ್ತ ಕಣ್ಣ ಮುಚ್ಚಿದ್ರೂ ನೂರಾ ಎಂಟ  ಹಳವಂಡಗೋಳ ಸಂತಿ. ಅದರಾಗs  ಯಾವಾಗೋ  ಒಂಚೂರ  ಕಣ್ಣ ಹತ್ತಿರಬೇಕು. ಮನಸು  ಹುಕ್ಕೇರಿ  ಮನೀಗ  ಹೋಗಿ  ಅಲ್ಲಿ  ಸಂದಿ ಸಂದಿ ಬಿಡಧಾಂಗ  ಮನಸೋಕ್ತ  ತಿರಗ್ಯಾಡಿ ಬಂತು. ಬುಟ್ಟಿ ತುಂಬ ಹೂ ಹರದ “ಅವ್ವಾ  ಹೂ ಹರದ  ಇಟ್ಟೀನ ನೋಡ” ಅಂತ ನಾ ಹೇಳಿಧಂಗಾಗಿ  ಆ  ಅಜಾನ  ಸ್ಥಿತಿಯೊಳಗs  ಪಟ್ಟನ ಎಚ್ಚರಾಗಿ  ನಿಚ್ಚಳಾದೆ ಅದೂ  ಪೂರಾ ನಿಚ್ಚಳನೂ ಅಲಧಂಗ.

ಬೆಳಗ  ಆತು; ಬೆಂಗಳೂರೂ  ಬಂತು ಅಂತ ಗೊತ್ತಾದ್ರೂ  ಎಲ್ಲಿದ್ದೀನ  ಅಂಬೂದು ತಿಳೀದಂಥ ಅರೆ ಮರವಿನ  ಸ್ಥಿತಿ ನಂದು. ವಿದ್ಯಾ  ಒಬ್ಬಾಕಿ ಜೋಡಿ  ಇದ್ಲ  ಅಂತ  ಠೀಕ  ಇತ್ತು. ಮನೀಗೆ  ಹತ್ರ ಬಂಧಂಗ ಒಂದ ನಮೂನಿ  ಎದಿ ಒಡಕಿ. ನಾವs ಅವ್ವಾನ ತ್ರಾಸ  ನೋಡ್ಲಿಕ್ಕಾಗದ  ಎಷ್ಟೋ ಸರ್ತೆ ನಮ್ಮ ಅವ್ವಾನ್ನ  ಯಾಕ  ಒಯ್ಯವಲ್ಲಾ  ಆತ, ಆ  ದೇವರು  ಅಂತ  ಅನ್ಕೊಂಡಿದ್ದು  ಖರೆ. ಅಣ್ಣಾನ  ಅಳಲಿನ್ಯಾಗೂ  ಅದs  ಧನಿ  ಕೇಳಸಿಧಂಗ  ಆಗ್ತಿದ್ದದ್ದೂ ಖರೆ.  ಆದ್ರ ಈಗ  ಅದs, ಹಂಗs ಆಗಿದ್ರ  ಅನಿಸಿ  ಕೈಕಾಲ  ಥಣ್ಣಗ  ಆಧಂಗ  ಅನಿಸ್ತು. ಆ ಪರಿಸ್ಥಿತಿ  ಹೆಂಗ  ನಿಭಾಸೂದು, ನಮ್ಮ ಅಣ್ಣಾನ  ಮಾರಿ ನೋಡೂ ಧಾಡಸಪಣ ಅದ ಏನ ಅನ್ಕೊಂಡ  ಹಂಗ ಮನಿ ಹತ್ರನ ಬಂದಾಗ ಅಲ್ಲಿ  ಮಂದಿ ಓಡಾಟ  ಕಾಣಿಸಿ ವಿದ್ಯಾ ನನ್ನ ನೋಡಿದ್ಲು, ನಾ ಆಕಿನ್ನ. ನಮ್ಮ ಅವ್ವಾ ನಮ್ಮನ್ನ ಎಲ್ಲಾರನೂ  ಬಿಟ್ಟ ಹೋದದ್ದು ಖಾತ್ರಿ ಆತು ನಾವು  ಮನಿ  ಗೇಟ್  ತಗ್ಯೂದಕ್ಕs ನಮ್ಮ ಅಣ್ಣ ಪ್ರಕಾಶ  ಕಣ್ಣು ಮಾರಿ  ಕೆಂಪ ಕೆಂಪ ಮಾಡ್ಕೊಂಡ ಧಡಾ ಧಡಾ  ಅಟ್ಟಾ ಹತ್ತಿ ಹೋದಾಗ. ನಮ್ಮನ್ನ  ನೋಡೂದಾಗಲಿಲ್ಲ ಅಂವಗ. ಅವ್ವಾ  ಹಿಂದಿನ ದಿನಾನs  ಅಂದ್ರ 1996 ಮೇ, ಮೂರನೇ ತಾರೀಖು, ಆಗಿ ಹುಣ್ಣಿವೆ, ಶುಕ್ರವಾರ ಸಂಜೀಕನ ಈ ನೋವು, ಸಂಕಟಾ  ಎಲ್ಲಾ ನೀಗಿ  ಶಾಂತ  ಆಗಿ ಬಿಟ್ಟಿದ್ಲು; ಎಲ್ಲಾದ್ರಾಗಿಂದನೂ ಮುಕ್ತ ಆಗಿ ಬಿಟ್ಟಿದ್ಲ ನಮ್ಮ ಅವ್ವ. ನಾವು ಮನಿ  ಬಿಡೂ ಮುಂದ ಬಂದ  ಫೋನ್ ಅದೇ!

ಒಂದ ಗಳಿಗಿ  ಏಕಾ ಹೋದದ್ದ ನೆನಪಿಗೆ ಬಂತು.ಈಗ  ಬರೋಬ್ಬರಿ ಐದೂವರಿ  ವರ್ಷದ ಹಿಂದ  ಹೀಂಗs  ಹುಕ್ಕೇರಿ ಮನಿ ಬಾಗಲದಾಗ ನಿಂತಿದ್ದೆ. ಅಂದ ನಮ್ಮಣ್ಣ ಮತ್ತ ಪ್ರಮೋದ  ಕೈ ಹಿಡದ  ಒಳಗ  ಕರಕೊಂಡ  ಹೋಗಿದ್ರು. ಆ ಮಟ್ಟಿಗೆ  ಶಾಂತ  ಇದ್ರು ಅವರು. ಆದ್ರ  ಈ ಹೊತ್ತ ಎಲ್ಲಾ ಮುಗದ  ಹೋತ ಅಂಬೂ ಅಂಥಾ ಸಂಕಟ ಇದು. ಆಗ ಜೋಡ ಮೇಟಿ ಖಂಬಧಂಗ ಅವ್ವಾ, ಅಣ್ಣಾ  ಇದ್ರು. ನೆತ್ತಿ ಮ್ಯಾಲ  ಘಟ್ಟಿ ಮುಟ್ಟ ಛತ್ತದ ನೆರಳ  ಇತ್ತು. ಆದ್ರ ಇಂದ  ಗಾಡಿ  ಒಗ್ಗಾಲಿ ಆಗಿ  ನಿಂತ ಹಾಂಗ  ಆಗಿತ್ತು. ಒಂಟಿ ಆಗಿ  ನಿಂತ ನಮ್ಮ ಅಣ್ಣಾನ  ಮಾರಿ  ತುಂಬ  ನೂರಾ ಎಂಟ ಗೆರಿ. ಆ ಮಾರಿ  ತುಂಬ  ಅವ್ವಾ  ಅನುಭೋಗಿಸಿದ  ಆ  ನೋವು ಯಾತನಾ  ಗಟ್ಟಿ ತಳಾ  ಊರಿ ಬಿಟ್ಟಿದ್ದು. ಪ್ರತಿ  ನಿರಿಗಿ ಒಳಗ  ಒಂಟಿತನದ  ನೆರಳು. 

ನಮ್ಮ ಅಣ್ಣಾನ ಮಾರಿ  ಮ್ಯಾಲ ಒಂದು ಹೇಳಲಿಕ್ಕ ಬಾರದಂಥಾ ಕಳೆ, ಎಲ್ಲಾ  ಕಳದ  ಕೊಚ್ಚಿಕೊಂಡ  ಹೋದ ಆ ಸಮುದ್ರದ  ದಂಡಿ ಮ್ಯಾಲ ಪೂರಾ ಖಾಲಿ ಆಗಿ ನಿಂತಾಗ ಕಾಣೋ  ಅಸಹನೀಯ  ಅಸಹಾಯಕತೆ! ಹೌದು ಆ ಹತಾಶ   ಅಸಹಾಯಕತೆ  ಒಂದs ಅಲ್ಲಿತ್ತು! 

ಅಷ್ಟೇ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Shrivatsa Desai

  “ ಮಾರಿ ತುಂಬ ನೂರಾ ಎಂಟ ಗೆರಿ.. ಪ್ರತಿ ನಿರಿಗಿ ಒಳಗ ಒಂಟಿತನದ ನೆರಳು.”ಮತ್ತೆ ಆ ಪುಟ್ಟ ಸಾಲು, ಅದರ ಆಳದಲ್ಲಿ ಭಾವಗಳು. ಎಂಥದ್ದೇ ಆಗಲಿ, ಯಾರದ್ದೇ ಆಗಲಿ, ಎಲ್ಲೇ ಆಗಲಿ, ವಿದಾಯದ ನೋವು- ಅದನ್ನು ಓದುಗ ತನ್ನದೇ ಅನಿಸುವದು ಬರಹದ ಚಮತ್ಕಾರ. “ ಈ ಕರ್ಮದ ಹುಟ್ಟರೇ ಎಲ್ಯದ ಅಂತ. ಹುಡಕ್ಯಾಡಿ ನೋಡಬೇಕ ” ಅನ್ನುವಲ್ಲಿ ಅರ್ಧ ಶತಮಾನದ ಹಿಂದಿನ ಹೆಂಗಸರು ಪಡುತ್ತಿದ್ದ ಮಾಸಿಕ ರಿಚುವಲ್ ದ ವರ್ಣನೆ ಯಿದ್ದು ಇಂದು ಈ ಆಚರಣೆ ಇಲ್ಲ ಅನಿಸುವಷ್ಟು ಬದಲಾದ ಸಾಮಾಜದ ಚಿತ್ರ ಸ್ವಾಗತಾರ್ಹ ಅನಿಸುತ್ತದೆ. ಮಗಳು ಇಲ್ಲಿ ದೊಡ್ಡವಳಾದುದು ಒಂದೇ ದಿನದಲ್ಲಿ (ಲೇಖಕಿ)ಅವ್ವನನ್ನು ತಾಯಿಯಂತೆ ಬೀಳ್ಕೊಟ್ಟು ಹೋಗಿ ಬಾ ಅಂತ ಧೈರ್ಯ ತುಂಬಿದಾಗಲೇ!

  ಪ್ರತಿಕ್ರಿಯೆ
  • Sarojini Padasalgi

   ಆ ದಿನ ನೋಡಿದ ನಮ್ಮ ಅಣ್ಣಾನ ಮಾರಿ ನಾ ಎಂದೂ ಮರೀಲಾರೆ. ನಿಮ್ಮ ರೆಸ್ಪಾನ್ಸ್ ನಿಜಕ್ಕೂ ಮನೆ ತಟ್ಟುವಂಥದು. ಹೆಣ್ಮಕ್ಕಳೇ ಹಾಗಲ್ವಾಸರ್? ಮಗಳ ಹೃದಯದಲ್ಲಿ ತಾಯಿ ಮಮತೆ ಸೆಲೆಯೊಡೆಯಲು ತಡವೇ ಇಲ್ಲ. ನಮ್ಮ ಅವ್ವಾ ತಾ ಹೋಗು ಮುಂದೆ ನನ್ನ ಮಗಳನ್ನ ನನಗಾಗಿ ತನ್ನ ಸ್ಥಾನದಲ್ಲಿಟ್ಟು ಹೋದ ಹಾಗಿದೆ. ಶಂಭರ್ ಟಕ್ಕೇ.
   ಧನ್ಯವಾದಗಳು ನಿಮ್ಮ ಅಮೂಲ್ಯ ರೆಸ್ಪಾನ್ಸ್ ಗೆ.

   ಪ್ರತಿಕ್ರಿಯೆ
  • ಶೀಲಾ ಪಾಟೀಲ

   ಅಂಕಣದ ತಲೆ ಬರಹ ” ಅಸಹಾಯಕತೆ ಒಂದ ಇತ್ತ ಅಲ್ಲೆ….” ಎನ್ನುವದು ಓದುತ್ತ ಹೋದಂತೆ ಪ್ರತೀ ಶಬ್ದಗಳಲ್ಲಿ ತೋರುತ್ತದೆ . ಅಸಹನೀಯ ಚಡಪಡಿಕೆ ಉಂಟಾಗುತ್ತದೆ. ಮಗಳಲ್ಲಿ ಏಕಾಳ ಧೈರ್ಯ, ಅವ್ವಾನ ಸಹನೆ ಬಂದಿರುವ ಕಾರಣ ನಿಮಗೆ ತಾಯಿಯ ಜೊತೆ ಸ್ವಲ್ಪವಾದರೂ ವೇಳೆ ಕಳೆಯಲು ಸಾಧ್ಯವಾಯಿತು. ಬರಹ ಮನದ ತುಮುಲ ಹೇಳುತ್ತ ಸಾಗುತ್ತದೆ. ಓದುಗನಿಗೇ ತಾಯಿಯನ್ನು ಅಗಲಿದ ಅನುಭವ….

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: