ಸರಳ ನಡೆನುಡಿಯ ನಿಷ್ಕಲ್ಮಶ ಬೆಳದಿಂಗಳ ನಗೆಯ ಮಾನವ್ಯ ಕವಿ ಡಾ. ಬಿ ಎ. ಸನದಿ

ರತ್ನಾ ಮೂರ್ತಿ
ನನಗೆ ಅಣ್ಣನಂತಿದ್ದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ’ ಯವರ ನೆನಪು ಇಂದು ಒತ್ತಿಕೊಂಡು ಬರುತ್ತಿದೆ. ಜೊತೆಗೇ ಅವರಿಲ್ಲವೆಂಬ ನೋವೂ ಹೃದಯವನ್ನು ಹಿಂಡುತ್ತಿದೆ. ಇದೇ ಮಾರ್ಚ್ ೩೧ ಕ್ಕೆ ಅವರು ಕೀರ್ತಿಶೇಷರಾಗಿ ಮೂರುವರ್ಷಗಳಾಗುತ್ತದೆ.
ಹರಿಹರದಲ್ಲಿದ್ದ ನಾನು ಮುಂಬಯಿಯಲ್ಲಿದ್ದ ಡಿ. ವಿ. ಶ್ರೀನಿವಾಸ ಮೂರ್ತಿಯವರನ್ನು ಮದುವೆಯಾಗಿ ಮುಂಬಯಿಗೆ ಹೋದಮೇಲೆ ಚರ್ಚ್ ಗೇಟ್, ಬಾಂದ್ರಾ ಈಸ್ಟ್ ಮತ್ತು ಘಾಟಕೋಪರಿನಲ್ಲಿದ್ದು ನಾವು ಮಾತುಂಗಾ ಪಶ್ಚಿಮದ ಆಫೀಸಿನ ವಸತಿ ಸಮುಚ್ಛಯದಲ್ಲಿ ಬಡ್ತಿಯಾಗಿ ಕೊಟ್ಟಿದ್ದ ಮನೆಗೆ 1985 ನೆಯ ಇಸವಿ ಮೇ ತಿಂಗಳಲ್ಲೇ ಬದಲಾಯಿಸಿದೆವು. ನಮ್ಮ ಕ್ವಾರ್ಟರ್ಸ್ನ ಎದುರಿಗೇ ಇದ್ದರೂ ನಾನು ಅಲ್ಲಿಯ ಕರ್ನಾಟಕ ಸಂಘ ದ ಸಂಪರ್ಕಕ್ಕೆ ಬಂದದ್ದು ಮಾತ್ರ 1988 ರಲ್ಲಿ! ಅದೂ ಅನೂಹ್ಯವಾದ ಘಟನೆಯೊಂದರಿಂದ!
ಮಹೀಂದ್ರ ಅಂಡ್ ಮಹೀಂದ್ರದಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿದ್ದ ನನ್ನ ಸೋದರಮಾವ ಶ್ರೀಎ.ಎಸ್ ನಾಗರಾಜ್ ಅವರ ಆಪ್ತರೂ, ಮುಂಬಯಿ ನಾಟಕ ರಂಗದಲ್ಲಿ ಬಹಳ ಕ್ರಿಯಾಶೀಲರೂ ಆಗಿದ್ದ ಶ್ರೀಮತಿ ಕುಂತಿ ಮತ್ತು ಶ್ರೀ ದುಗ್ಗಪ್ಪಯ್ಯ ದಂಪತಿಗಳು1988 ರ ಆದಿಯಲ್ಲೊಮ್ಮೆ ನಮ್ಮ ಮನೆಗೆ ಬಂದರು.
ಮದುವೆಗೆ ಮುಂಚೆ ನಾನೊಮ್ಮೆ ನಮ್ಮ ಸೋದರ ಮಾವನ ಪ್ರೀತಿಪೂರ್ವಕ ಆಗ್ರಹದ ಮೇರೆಗೆ ಮುಂಬಯಿಗೆ ಹೋಗಿದ್ದಾಗ ಇವರೆಲ್ಲರ ಪರಿಚಯವಾಗಿತ್ತು.
ಹೀಗೇ ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಂತಿ ಅವರು, “ನೀನು ತುಂಬಾ ಪ್ರತಿಭಾವಂತೆ ಅಂತ ನಾಗರಾಜ್ ನಿನ್ನನ್ನು ತುಂಬಾ ಹೊಗಳ್ತಿರ್ತಾರೆ. ಕವನ ನಾಟಕ ಕತೆ ಎಲ್ಲಾ ಬರಿತೀಯಂತೆ. ಶಾಲೆ ಕಾಲೇಜಿನ ಎಲ್ಲಾ ಪಠ್ಯೇತರ ಚಟುವಟಿಕೆಗಳಲ್ಲೂ ತುಂಬಾ ಬಹುಮಾನ ಗಳಿಸಿದೀಯಂತೆ. ಕಾಲೇಜ್ ಚಾಂಪಿಯನ್ ಕೂಡ ನೀನೇ ಆಗಿದ್ಯಂತೆ. ನಿಮ್ಮ ಮಾವ ಹೇಳ್ತಿರ್ತಾರೆ, ನಮ್ಮ ರತ್ನ ಅಂದರೆ ಪ್ರತಿಭಾ ರತ್ನ ಅಂತ. ನಿನ್ನ ಒಂದೆರಡು ಕವನ ಹಾಡು. ಕೇಳ್ಬೇಕು” ಎಂದರು.

ನನ್ನ ಎದೆ ಧಸಕ್ಕೆಂದಿತು. ಶಾಲೆ ಕಾಲೇಜಿನಲ್ಲಿ ಒಂದಿಷ್ಟು ಗೀಚುತ್ತಿದ್ದದ್ದು ಉಂಟು. ನಾಟಕ ಬರೆದು ನಾನೂ ಪಾತ್ರ ಮಾಡಿ ನಿರ್ದೇಶಿಸಿ ಆಡುತ್ತಿದ್ದದ್ದುಂಟು. ಕವನ ಕಟ್ಟಿ ರಾಗ ಹಾಕಿ ಎಲ್ಲರೊಂದಿಗೆ ಹಾಡುತ್ತಿದ್ದುದುಂಟು. ಪದವಿ ಮುಗಿದು ಶಿಕ್ಷಕ ವೃತ್ತಿಗೆ ಸೇರಿದ ಮೇಲೆ ಶಾಲೆಯ ವಾರ್ಷಿಕೋತ್ಸವ ಅಲ್ಲದೆ ಮತ್ತೆ ಕೆಲವು ವಿಶೇಷ ದಿನಗಳ ಆಚರಣೆಗಾಗಿ ನಾನೂ ನನ್ನ ಗೆಳತಿ ಸುಮಾ ಕುಲಕರ್ಣಿ ಸೇರಿ ಇಂಗ್ಲಿಷಿನಲ್ಲಿ ನಾಟಕಗಳನ್ನು ರಚಿಸಿ ನಿರ್ದೇಶಿಸಿ ಆಡಿಸುತ್ತಿದ್ದೆವು (ನಾನು ಕೆಲಸ ಮಾಡುತ್ತಿದ್ದದ್ದು ಆಂಗ್ಲ ಮಾಧ್ಯಮದ ಶಾಲೆ) ಮತ್ತು ನಾನೇ ಕವನಗಳನ್ನೂ ಗೀತರೂಪಕಗಳನ್ನೂ ರಚಿಸಿ, ರಾಗ ಸಂಯೋಜನೆ ಮಾಡಿ, ಹಾಡಿ, ನಿರ್ದೇಶಿಸಿ, ಮೇಕಪ್, ರಂಗಸಜ್ಜಿಕೆ ಮಾಡಿ, ಕೆಲವೊಮ್ಮೆ ಪಾತ್ರಗಳಿಗೆ ಬೇಕಾದ ಕಾಸ್ಟ್ತೂಮ್ಗಳನ್ನೂ ಹೊಲಿದು, ಹೀಗೆ ದಶಾವತಾರ ತಾಳುತ್ತಿದ್ದದ್ದುಂಟು.
ಆದರೆ ಈಗ್ಗೆ ೧೧ ವರ್ಷಗಳಿಂದ ಕೆಲವು ಕತೆಗಳನ್ನು ಮತ್ತು ಶಾಲಾ ಮಕ್ಕಳ ಕಾರ್ಯಕ್ರಮಗಳಿಗಾಗಿ ಏನಾದರೂ ಹೊರತು ಪಡಿಸಿ ಬೇರೆ ಏನನ್ನೂ ಬರೆಯಲು ಸಾಧ್ಯವಾಗಿರಲಿಲ್ಲ. ಎಲ್ಲರೂ ಹರೆಯದಲ್ಲಿ ಕವಿಯಾಗಿರುತ್ತಾರೆ ನಾನೂ ಒಂದಿಷ್ಟು ಏನೋ ಬರೆದೆ ಅಷ್ಟೆ. ನನ್ನಿಂದ ಈಗೇನೂ ಸಾಧ್ಯವಿಲ್ಲ ಎಂದು ಬರವಣಿಗೆಗೆ ಮುಕ್ತಾಯ ಹಾಡಿದ್ದೆ. ಏನೂ ಬರೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಆಗೀಗ ಬೇಸರವಾಗುತ್ತಿದ್ದರೂ ನನಗೆ ಸಾಹಿತ್ಯ ರಚನೆಯ ಯಾವ ಸಾಮರ್ಥ್ಯವೂ ಇಲ್ಲವಲ್ಲ ಎಂದುಕೊಂಡು ಸುಮ್ಮನಾಗುತ್ತಿದ್ದೆ.
ಅಕ್ಕನ ಮಗಳೆಂಬ ಉಕ್ಕುವ ಮಮತೆಯ ಅಭಿಮಾನದಿಂದ ನಮ್ಮ ಸೋದರ ಮಾವ ಹಾಗೆ ಹೊಗಳಿರಬಹುದು ಎಂದುಕೊಳ್ಳದೆ ಇವರು ಪೂರ್ತಿ ನಂಬಿಬಿಟ್ಟಿದ್ದಾರಲ್ಲ ಎಂದು ಖೇದವಾಯಿತು.
ಕುಂತಿ ದುಗ್ಗಪ್ಪಯ್ಯ ದಂಪತಿಗಳ ಮಾತು ಕೇಳಿ, ನನ್ನಲ್ಲಿಲ್ಲದ ಶಕ್ತಿಯ ಬಗ್ಗೆ ಹೊಗಳಿದ್ದಕ್ಕೆ ತುಂಬಾ ದುಃಖ, ಬೇಸರ ಹಾಗೂ ನಾಚಿಕೆಯೂ ಆಗಿ ಅದೇಕೋ ಅರಿಯೆ ಇದ್ದಕ್ಕಿದ್ದಂತೆ ಅಳು ನುಗ್ಗಿ ಬಂತು. ಅಳುತ್ತಲೇ “ಹಾಗೆಲ್ಲ ಸುಮ್ಮನೇ ಹೊಗಳಬೇಡಿ. ಈಗ ೧೧ ವರ್ಷದಿಂದ ನಾನು ವಿಶೇಷವಾದದ್ದೇನೂ ಬರೆದಿಲ್ಲ. ನನಗೆ ಅಂತಹ ಯಾವ ಸಾಮರ್ಥ್ಯವೂ ಇಲ್ಲ” ಎಂದೆ.
ಕುಂತಿಯವರು, “ಅರೇ! ಅದಕ್ಯಾಕೆ ಅಳ್ತೀಯ. ನಿಮ್ಮ ಮಾವ ಸುಮ್ಮ ಸುಮ್ಮನೇ ಯಾರನ್ನೂ ಹಾಗೆ ಹೊಗಳೊಲ್ಲ. ಹಿಂದೆ ಬರೆದದ್ದಾದ್ರೂ ಪರವಾಗಿಲ್ಲ. ಹಾಡು ನೋಡೋಣ. ನಾವು ಕೇಳ್ಬೇಕು” ಎಂದು ಒತ್ತಾಯಿಸಿದರು.
ಹಿರಿಯರಾದ ಅವರಿಗೆ ಒರಟಾಗಿ ಇಲ್ಲ ಎನ್ನಲಾಗದೆ ಒಳಗೆ ಹೋಗಿ ನಾನು ಯಾವಾಗಲೋ ಹೀಗೇ ಏನೊ ಒಂದಿಷ್ಟು ಬರೆದಿದ್ದ ಕವನಗಳನ್ನು ಹುಡುಕಿ ತಂದು, ಒಂದನ್ನು ಆರಿಸಿಕೊಂಡು ಅಳೆದೂ ಸುರಿದೂ ಆ ಕ್ಷಣಕ್ಕೆ ನನಗೆ ತೋಚಿದ ಧಾಟಿಯಲ್ಲಿ ಹಾಡಿದೆ. ಅವರಿಬ್ಬರೂ ಕವನವನ್ನೂ ಅದರ ಗಾಯನವನ್ನೂ ತುಂಬಾ ಮೆಚ್ಚಿದ್ದಲ್ಲದೆ ಪ್ರೀತಿಪೂರ್ವಕ ಒತ್ತಾಯದಿಂದ ಮತ್ತಷ್ಟು ಕವನಗಳನ್ನು ಹಾಡಿಸಿದರು. ನನಗೆ ವಿಸ್ಮಯ ಹಾಗೂ ಗಲಿಬಿಲಿ.
“ನಿನ್ನ ಕವನಗಳು ಚೆನ್ನಾಗಿವೆ. ಕವಿ ಬಿ.ಎ. ಸನದಿಯವರ ಹೆಸರು ಕೇಳಿದೀಯಲ್ವಾ? ಅವರು ಬೊಂಬಾಯಿಯಲ್ಲೇ ಇದ್ದಾರೆ. ಅವರ ವಿಳಾಸ ಕೊಡ್ತೀವಿ. ನಿನ್ನ ಈ ಕವನಗಳನ್ನು ಅವರಿಗೆ ಕಳಿಸು. ತಾವು ಪ್ರಸಿದ್ಧ ಕವಿಯಾದರೂ ಹೊಸಬರನ್ನು ತುಂಬಾ ಪ್ರೋತ್ಸಾಹಿಸ್ತಾರೆ. ಬರೆಯೋದು ಬಿಡಬೇಡ” ಎಂದು ಬೆನ್ನು ತಟ್ಟಿದರು.
ನನಗೆ ತಬ್ಬಿಬ್ಬಾದರೂ ಒಂದಿಷ್ಟು ಉತ್ಸಾಹ ಉಕ್ಕಿದ್ದು ಸುಳ್ಳಲ್ಲ. ಹಳೆಯ ಕವನಗಳ ಕಡತ ತೆಗೆದು ಒಂದು ಹತ್ತು ಹನ್ನೆರಡು ಕವನಗಳನ್ನು ಆರಿಸಿ ಸ್ವಲ್ಪ ಅಳುಕುತ್ತಲೇ ಸನದಿ ಅವರ ವಿಳಾಸಕ್ಕೆ ಅಂಚೆಯಲ್ಲಿ ಕಳಿಸಿ ಅವರ ಪ್ರತಿಕ್ರಿಯೆಗಾಗಿ ಕಾತರದಿಂದ ಕಾಯತೊಡಗಿದೆ.
ವಾರ, ಹದಿನೈದು ದಿನ, ತಿಂಗಳು! ಎರಡು ತಿಂಗಳು! ನಾಲ್ಕು! ಐದು ತಿಂಗಳಾದರೂ ಸನದಿ ಅವರಿಂದ ಯಾವ ಉತ್ತರವೂ ಬಾರದಾದಾಗ ಆತ್ಮ ಭರ್ತ್ಸನೆಯಿಂದ ಕುಗ್ಗಿ ಹೋದೆ.
‘ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಂಡುಬಿಟ್ಟೆನಲ್ಲಾ, ನನ್ನ ಕವನಗಳನ್ನು ನೋಡಿ, ಇವೂ ಕವನವೇ ಎಂದು ಹರಿದು ಕಸದಬುಟ್ಟಿಗೆ ಎಸೆದಿರಬೇಕು. ಕುಂತಿ ದಂಪತಿಗಳು ಉಬ್ಬಿಸಿದರೆಂದು ನಾನು ಎಂತಹ ಮೂರ್ಖತನದ ಕೆಲಸ ಮಾಡಿದೆನಲ್ಲಾ, ಇನ್ನು ಯಾವತ್ತೂ ಯಾರ ಹೊಗಳಿಕೆಗೂ ಮರುಳಾಗಬಾರದು’ ಎಂದುಕೊಂಡು ನಾಚಿಕೆ ಪರಿತಾಪಗಳಿಂದ ಕುಗ್ಗಿಹೋಗುತ್ತಿದ್ದೆ. ಕಡೆಗೆ ನನ್ನ ಯೋಗ್ಯತೆಗೆ ತಕ್ಕ ಪಾಠ ಸಿಕ್ಕಿತು ಎಂದು ಕ್ರಮೇಣ ಮರೆಯತೊಡಗಿದೆ.
ಬರೋಬ್ಬರಿ ಆರು ತಿಂಗಳಾದ ಮೇಲೆ ಸನದಿಯವರಿಂದ ಒಂದು ಪತ್ರ!! ದೊಡ್ಡ ಕವಿಯೊಬ್ಬರಿಂದ ಪತ್ರ ಬಂದಿದೆ! ಅವರು ಏನಾದರೂ ಬರೆದಿರಲಿ. ಬೈದಿದ್ದರೂ ಸರಿಯೆ, ನೋಡೋಣ ಎಂದುಕೊಂಡು ಕವರ್ ಒಡೆದೆ. “ಸೋದರಿ ಶ್ರೀಮತಿ ನಾಗರತ್ನ,” ಎಂದು ಆರಂಭವಾದ ಒಕ್ಕಣಿಕೆಯೇ ಹೃದ್ಯವೆನಿಸಿತು. ಮನಸೂರೆಗೊಂಡಿತು.
“ಉತ್ತರಿಸಲು ಇಷ್ಟೊಂದು ವಿಳಂಬವಾದುದಕ್ಕೆ ಮೊದಲಿಗೆ ನಿಮ್ಮ ಕ್ಷಮೆ ಯಾಚಿಸುವೆ. ನನ್ನ ಬ್ರೀಫ್ ಕೇಸಿನ ಹಲವಾರು ಕಾಗದಗಳ ಸಂದಿಯಲ್ಲಿ ನಿಮ್ಮ ಪತ್ರ ಎಲ್ಲೋ ಸೇರಿಬಿಟ್ಟು ನನ್ನ ಕೆಲಸದ ಒತ್ತಡದಲ್ಲಿ ಮರೆತು ಹೋಗಿತ್ತು. ಈ ದಿನ ಸಿಕ್ಕಿತು. ನಿಮ್ಮ ಕವನಗಳನ್ನೆಲ್ಲಾ ನೋಡಿದೆ. ಚೆನ್ನಾಗಿ ಬರೆದಿದ್ದೀರಿ. ನಿಮ್ಮ ವಿಳಾಸ ನೋಡಿದರೆ ನಮ್ಮ ಕರ್ನಾಟಕದ ಸಂಘದ ಹತ್ತಿರದಲ್ಲೇ ಎಲ್ಲೊ ಇದ್ದೀರಿ ಅನ್ನಿಸುತ್ತೆ. ನಾನು ಇಂಥಿಂಥಾ ದಿನ ಸಂಜೆ ಕರ್ನಾಟಕ ಸಂಘದಲ್ಲಿರುತ್ತೇನೆ. ನನ್ನನ್ನು ಬಂದು ಭೇಟಿ ಮಾಡಿ. ಮಾತಾಡೋಣ.
ವಿಶ್ವಾಸ ಪೂರ್ವಕ….”
ಎಂದು ಬರೆದು ಸಹಿ ಹಾಕಿದ್ದರು.

ಮೇರು ಸದೃಶ ವ್ಯಕ್ತಿಯ ಆ ಸಜ್ಜನಿಕೆ! ತೀರಾ ಸಾಧಾರಣ ವ್ಯಕ್ತಿಯಿಂದ ಕ್ಷಮೆ ಯಾಚಿಸುವ ಸರಳತೆ?!! ಅನನ್ಯ ಸಾಧಕರು ಹೀಗೂ ಇರುವರೇ???!! ನನ್ನ ಕಣ್ಣನ್ನೇ ನಂಬಲಾಗದ ಸ್ಥಿತಿ ನನ್ನದು. ಜೊತೆಗೆ ಏನೋ ಸಂಭ್ರಮ ಉತ್ಸಾಹ.
ನಾನು BSc ಮಾಡಿದ್ದು ದಾವಣಗೆರೆಯ ಕಾಲೇಜಿನಲ್ಲಿ. ಮೈಸೂರು ಬೆಂಗಳೂರು ಧಾರವಾಡದಲ್ಲಿಯಂತೆ ಕಾಲೇಜುಗಳ ಉಪನ್ಯಾಸಕರುಗಳಲ್ಲಿ ಯಾವ ಸಾಹಿತಿಯೂ ನಮ್ಮ ಕಾಲೇಜಿನಲ್ಲಿ ಲೆಕ್ಚರರ್ ಆಗಿರಲಿಲ್ಲ. ಯಾವ ಹೆಸರಾಂತ ಕವಿ ಸಾಹಿತಿಯನ್ನೂ ನಾನು ನೋಡಿಯೂ ಇರಲಿಲ್ಲ.
ಹಾಗಾಗಿ ಕವಿಗಳು ಸಾಹಿತಿಗಳು ಎಂದರೆ ಅವರುಗಳು ಯಾವುದೋ ಬೇರೆ ಗ್ರಹದವರು, ಯಾವುದೋ ಅದ್ಭುತ ಲೋಕದಿಂದ ಬಂದವರು ಎಂಬಂಥ ಬೆರಗು!! ಈಗ, ಇಲ್ಲಿ, ಖ್ಯಾತ ಕವಿ ಸನದಿಯವರ ಪತ್ರ ಬಂದಿದೆ! ಬಂದು ಭೇಟಿಯಾಗಿ ಎನ್ನುತ್ತಿದ್ದಾರೆ. ಕನಸೇನೋ ಎಂಬ ಭ್ರಮೆ!
ಅನೂಹ್ಯವಾದ ಉದ್ವೇಗ ಸಡಗರದಿಂದಲೇ ಎದುರಿಗೇ ಇದ್ದ ಕರ್ನಾಟಕ ಸಂಘಕ್ಕೆ ಒಂದು ದಿನ ಹೋಗಿ, “ಸನದಿಯವರನ್ನು ಭೇಟಿಯಾಗಬೇಕು. ಬರಲು ಹೇಳಿದ್ದಾರೆ” ಎಂದೆ. ನನ್ನ ಹೆಸರು ತಿಳಿದುಕೊಂಡು ಕೆಳಗೆ ಬೇಸ್ಮೆಂಟ್ನಲ್ಲಿದ್ದಾರೆ ಕರೆಯುತ್ತೇವೆ ಕುಳಿತುಕೊಳ್ಳಿ ಎಂದರು.
ನನ್ನ ಜೀವನದಲ್ಲಿಯೇ ಮೊತ್ತ ಮೊದಲಿಗೆ ಖ್ಯಾತ ಸಾಹಿತಿಯೊಬ್ಬರನ್ನು ನೋಡುತ್ತಿದ್ದೇನೆಂಬ ಉತ್ಸಾಹ ಸಂಭ್ರಮ! ನಾಗರತ್ನ ಯಾರು? ಎಂದು ಕೇಳುತ್ತಾ ಬಂದ ವ್ಯಕ್ತಿಯನ್ನು ನೋಡಿ ದಂಗಾಗಿ ಬಿಟ್ಟೆ! ತೆಳು ಕಾಯದ, ಕೃಷ್ಣವರ್ಣದ ತೀರಾ ತೀರಾ ಸಾಧಾರಣ ವ್ಯಕ್ತಿ! ಇವರು ಖ್ಯಾತನಾಮರಾದ ಕವಿಯೇ??!! ಅಪನಂಬಿಕೆ ಬೆರಗಿನಲ್ಲೇ ಚಕ್ಕನೆ ಎದ್ದು ನಿಂತು ನಮಸ್ಕಾರ ಎಂದು ಕೈ ಮುಗಿದೆ. ನಮಸ್ಕಾರ. ಕೂಡವ್ವ ಎಂದ ಧ್ವನಿಯಲ್ಲಿ ತುಳುಕುತ್ತಿದ್ದ ಸರಳತೆಗೆ ಮಾರು ಹೋದೆ.
ನನ್ನ ಬಗ್ಗೆ ವಿಚಾರಿಸಿದರು. ನನ್ನ ಕವನಗಳ ಕುರಿತು ಚರ್ಚಿಸಿದರು. ಈಗ ಇವೆಲ್ಲ ನಿನಗೆ ತೃಪ್ತಿ ಕೊಡದ ಕವಿತೆಗಳಾಗಿರಬಹುದು. ಆದರೆ ನಿನ್ನೊಳಗೆ ಒಬ್ಬ ಒಳ್ಳೆಯ ಕವಯತ್ರಿ ಇದ್ದಾಳೆ. ಲೇಖಕಿ ಇದ್ದಾಳೆ..” ಮಂತ್ರಮುಗ್ಧಳಂತೆ ಅವರ ಪ್ರೋತ್ಸಾಹದಾಯಕ ಹಾಗೂ ದಿಕ್ಸೂಚಿಯಾಗಬಲ್ಲ ಮಾತುಗಳನ್ನು ಕೇಳುತ್ತಾ ಹೋದೆ….
ಅಲ್ಲಿಂದಾಚೆಗೆ ನಾನು ಅವರ ಅಭಮಾನಿಯಾಗಿಬಿಟ್ಟೆ. ನನ್ನ ಹೆಸರಿನ ಬಗ್ಗೆ ಅವರಿಗೆ ಆಕ್ಷೇಪ ಇತ್ತು. ಹೌದು. ಎಸ್. ಎಂ ನಾಗರತ್ನ ಎಂಬ ನನ್ನ ಹುಟ್ಟು ಹೆಸರನ್ನು ನೋಡಿ ನಿಮ್ಮ ಕಡಿ ಅಡ್ಡ ಹೆಸರು ಇರೂದಿಲ್ಲ ಅಂತ ನಂಗ ಗೊತ್ತದೆ. ಆದ್ರ ನಿನ್ನ ಹೆಸರು ರತ್ನಾ ಮೂರ್ತಿ ಅಂತ ಮಾಡ್ಕಳವ್ವ ಬಾಳ ಚೆಂದನ್ನಿಸ್ತದೆ ಎಂದವರೇ ನನಗೆ ಇಷ್ಟವಿಲ್ಲದಿದ್ದರೂ, ನನ್ನ ಅನುಮತಿಗೂ ಕಾಯದೆ ವಾತ್ಸಲ್ಯ ಪೂರ್ವಕ ಒತ್ತಾಯದಿಂದ ಎಲ್ಲ ಕಾರ್ಯಕ್ರಮಗಳಲ್ಲೂ, ಮುಂಬಯಿ ಆಕಾಶವಾಣಿಯ ನನ್ನ ಕವನಗಳು ಲೇಖನಗಳ ಪ್ರಸಾರ ಸಂದರ್ಭದಲ್ಲೂ, ಯಾರಿಗಾದರೂ ಪರಿಚಯ ಮಾಡಿಕೊಡುವಾಗಲೂ ನನ್ನ ಹೆಸರನ್ನು ರತ್ನಾ ಮೂರ್ತಿ ಎಂದೇ ಹೇಳುತ್ತಾ ಹೇಳುತ್ತಾ, ಎಸ್ ಎಂ ನಾಗರತ್ನ ಳನ್ನು ಹಿನ್ನೆಲೆಗೆ ಸರಿಸಿ ರತ್ನಾಮೂರ್ತಿ ಯನ್ನು ಸಾಹಿತ್ಯವಲಯದಲ್ಲಿ ಪ್ರತಿಷ್ಠಾಪಿಸಿಬಿಟ್ಟರು. ಅನಿವಾರ್ಯವಾಗಿ ಅವರ ಹಿರಿತನದ ವಾತ್ಸಲ್ಯಕ್ಕೆ ಬಾಗಿ ಒಪ್ಪಿಕೊಂಡು, ಸಾಹಿತ್ಯ ಹಾಗೂ ಗಮಕ ಕ್ಷೇತ್ರದಲ್ಲಿ ಅದೇ ಹೆಸರು ಸ್ಥಾಯಿಯಾಗಿ ಉಳಿದುಬಿಟ್ಟಿತು. (ಆದರೆ ಈಗಲೂ ನನ್ನೆಲ್ಲ ದಾಖಲೆಗಳಲ್ಲೂ ನನ್ನ ಹುಟ್ಟು ಹೆಸರೇ ಇದೆ.)
ಬೊಂಬಾಯಿ ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕರಾಗಿದ್ದ ಸನದಿಯವರು ನನ್ನ ಸಾಕಷ್ಟು ಕವನಗಳನ್ನು ಪ್ರಸಾರ ಮಾಡಿದರು. ನನಗೆ ಒಡಹುಟ್ಟಿದ ಅಣ್ಣನಂತಾಗಿಬಿಟ್ಟರು.
ಅಲ್ಲಿಂದಾಚೆ ಮುಂಬಯಿಯ ಹಲವಾರು ಕವಿಗೋಷ್ಠಿಗಳಿಗೆ ಕರೆ ಬರುತ್ತಿತ್ತು. ಕರ್ನಾಟಕ ಸಂಘದ ಕಾರ್ಯಕ್ರಮಗಳು, ಕೆಲವಕ್ಕೆ ನಿರೂಪಣೆಗೆ ಅವಕಾಶ ದೊರಕಿತು. ಕರ್ನಾಟಕ ಸಂಘದ ಮಹಿಳಾ ವಿಭಾಗದ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುತ್ತಿದ್ದೆ.
ಕರ್ನಾಟಕ ಸಂಘದಲ್ಲಿಯೇ ನನಗೆ ಹೊರನಾಡಿನ ಪ್ರಖ್ಯಾತ ಸಾಹಿತಿಗಳಾದ ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ವ್ಯಾಸರಾಯ ನಿಂಜೂರ ಇವರೆಲ್ಲರ ಪರಿಚಯವೂ ಆಯಿತು. ಅವರುಗಳ ನಡುವಿನ ವಿದ್ವತ್ಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗುತ್ತಿದ್ದೆ. ಹಿರಿತನದ ಎದುರಿನಲ್ಲಿ ಮೌನವೇ ಹೆಚ್ಚು ಯೋಗ್ಯವೂ ಗೌರವ ತರುವಂಥಹುದೂ ಆದ್ದರಿಂದ ಬೆರಗಿನ ಕಣ್ಣು ಮನಸ್ಸಿನಿಂದ ಎಲ್ಲವನ್ನೂ ನೋಡುತ್ತಾ ಕೇಳುತ್ತಾ ನನ್ನ ಲೋಕ ವಿಸ್ತರಿಸುತ್ತಿತ್ತು.
ಸನದಿಯವರು ಅಪಾರ ವಿದ್ವತ್ತಿದ್ದರೂ ಸರಳತೆಯ ಸಾಕಾರ ಮೂರ್ತಿ. ನನ್ನ ಬಗ್ಗೆ ಅವರ ಧ್ವನಿಯಲ್ಲಿ ಜಿನುಗುತ್ತಿದ್ದ ವಾತ್ಸಲ್ಯ ಸ್ನೇಹಕ್ಕೆ ನಾನು ಮೂಕಳಾಗಿಬಿಡುತ್ತಿದ್ದೆ. ಎಷ್ಟು ಜನುಮದ ಪುಣ್ಯವೋ ಇದು ಎಂದುಕೊಳ್ಳುತ್ತಾ ಸನದಿಯವರ ಪರಿಚಯವಾಗಲು ಕಾರಣೀಭೂತರಾದ ಕುಂತಿ ದಂಪತಿಗಳಿಗೆ ಕರೆ ಮಾಡಿ ವಂದಿಸಿದೆ.
ಒಂದು ದಿನ ನಮ್ಮ ಮನೆಯ ಕರೆಗಂಟೆಯ ಸದ್ದು ಕೇಳಿ ಬಾಗಿಲು ತೆರೆದರೇ…..ಎದುರಿಗೆ ಅದೇ ಶುಭ್ರ ಬೆಳದಿಂಗಳಿನಂತೆ ನಗುತ್ತಾ ನಿಂತಿದ್ದವರು ಸನದಿಯವರು!?
ನೀನು ಕರೀದನs ನಿಮ್ಮ ಮನಿಗೆ ಬಂದೀನಿ ನೋಡವ್ವ ಎಂದರು. ಕರ್ನಾಟಕ ಸಂಘದ ಒಂದು ಹತ್ತು ಹೆಜ್ಜೆಯಷ್ಟೇ ಹತ್ತಿರದಲ್ಲಿ ನಮ್ಮ OCS ಕ್ವಾರ್ಟರ್ಸ್. ಸನದಿಯವರನ್ನು ಮನೆಗೆ ಕರೆಯಬೇಕೆಂಬ ಆಸೆ ಅದಮ್ಯವಾಗಿದ್ದರೂ ನಾನೆಲ್ಲಿ ಅವರೆಲ್ಲಿ. ಅಷ್ಟು ದೊಡ್ಡ ವ್ಯಕ್ತಿಯನ್ನು ಸಲಿಗೆ ವಹಿಸಿ ಮನೆಗೆ ಕರೆಯುವುದು ಉದ್ಧಟತನವಲ್ಲವೇ?? ಅಂತಹ ಮೇರು ಸಾಹಿತಿ ಹಾಗೆಲ್ಲ ನಮ್ಮ ಮನೆಗೆ ಬರುವರೇ?? ಎಂಬ ಅಳುಕಿನಿಂದ ಮನೆಗೆ ಆಹ್ವಾನಿಸಬೇಕೆಂಬ ಅಪೇಕ್ಷೆಯನ್ನು ಒಳಗೇ ಅದುಮಿಕೊಳ್ಳುತ್ತಿದ್ದೆ.
ಆದರೆ! ಈಗ! ಅವರೇ! ತಾವಾಗಿಯೇ!
ನನ್ನ ಸಂತೋಷ ಸಂಭ್ರಮಕ್ಕೆ ಕೊನೆ ಮೊದಲಿರಲಿಲ್ಲ. ಅವರನ್ನು ಹೇಗೆ ಸತ್ಕರಿಸಬೇಕು? ಏನು ಮಾತಾಡಬೇಕು ಎಂಬ ಏನೂ ತೋಚದ ನನ್ನ ಗಲಿಬಿಲಿಯನ್ನು ಚಕ್ಕನೆ ಅರ್ಥ ಮಾಡಿಕೊಂಡು ಅದೇ ತುಂಬು ಬೆಳದಿಂಗಳಿನಂತೆ ನಗೆ ಚೆಲ್ಲುತ್ತಾ ಏನೂ ಗಡಿಬಿಡಿ ಮಾಡ್ಕೊಬೇಡವ್ವಾ. ಸುಮ್ನ ಹಿಂಗ ಬಂದೀನಿ. ಇತ್ತೀಚೆಗೆ ನೀ ಏನು ಬರ್ದಿದೀ ನೋಡೋಣಂತ ಎಂದಾಗಲಂತೂ ನನ್ನ ಕಿವಿಯನ್ನೇ ನಂಬದಂತಾಗಿ ನಿಂತುಬಿಟ್ಟೆ.
ಹನ್ನೊಂದು ಹನ್ನೆರಡು ವರ್ಷಗಳ ಕಾಲ ಕೊರಡಾಗಿಬಿಟ್ಟಿದ್ದ ನನ್ನ ಬರವಣಿಗೆಯ ತರು ಸನದಿಯವರ ಪರಿಚಯವಾಗಿ ಅವರ ಪ್ರೋತ್ಸಾಹ ದೊರೆತ ಮೇಲೆ ತುಸುವೇ ಚಿಗುರತೊಡಗಿದ್ದದ್ದು ನಿಜ. ಅದರೂ ಅವರಿಗೆ ತೋರಿಸುವ ಮಟ್ಟಕ್ಕಿರುತ್ತದೋ ಇಲ್ಲವೋ ಎಂಬ ನನ್ನ ಹಿಂಜರಿಕೆಯನ್ನು ಅರ್ಥಮಾಡಿಕೊಂಡು, ಓದವ್ವಾ ಕೇಳ್ತೀನಿ ಎಂದು ಮತ್ತೆ ಹುರಿದುಂಬಿಸಿದರು.
ಅಂದಿನಿಂದ ಆಗಾಗ್ಗೆ ನಮ್ಮ ಮನೆಗೇ ಬಂದು ನನ್ನ ಕವನಗಳನ್ನು ಓದಿಸಿ ಕೇಳಿ ಅವಶ್ಯ ಎನಿಸಿದ ಕಡೆ ಬದಲಾವಣೆ ಸೂಚಿಸಿ, ಮುಂದಿನ ಸಲ ಬರೋ ಹೊತ್ತಿಗೆ ಇನ್ನೂ ಏನರ ಬರದಿರ್ಲಿಕ್ಕs ಬೇಕು ನೋಡವ್ವ ಎಂದು ಸ್ನೇಹಪೂರ್ವಕವಾಗಿ ಆದೇಶಿಸುತ್ತಿದ್ದರು.
ಸನದಿಯವರ ಸಲಹೆ ಪ್ರೋತ್ಸಾಹದಿಂದಲೇ 1989 ರಲ್ಲಿ ನನ್ನ ಮೊದಲ ಕವನ ಸಂಕಲನ ಕನಸುನ ನನಸುಗಳ ನಡುವೆ ಅವರದ್ದೇ ಆದ ಭಾವನಾ ಪ್ರಕಾಶನದ ಹೆಸರಿನಡಿ ಅವರದ್ದೇ ಮುನ್ನುಡಿಯೊಂದಿಗೆ ಪ್ರಕಟವಾಯಿತು.
1993 ರಲ್ಲಿ ನನ್ನ ಪತಿಗೆ ಬೆಂಗಳೂರಿಗೆ ವರ್ಗವಾಗಿ ನಾವು ಬೆಂಗಳೂರಿಗೆ ನೆಲೆ ಬದಲಾಯಿಸುವವರೆಗೂ, ಎಡವಿದರೆ ಸಿಗುವಷ್ಟು ಹತ್ತಿರದ ಕರ್ನಾಟಕ ಸಂಘ ನನ್ನ ಎರಡನೆಯ ಮನೆಯಂತಾಗಿತ್ತು. ನಾವು ಮುಂಬಯಿ ಬಿಡುವಾಗಲೂ ಸನದಿಯವರು ನನ್ನ ಸಾಹಿತ್ಯದ ಬೆಳವಣಿಗೆಯ ಬಗ್ಗೆ ಅಪಾರವಾದ ಕಾಳಜಿಯಿಂದ ಶ್ರೀ ಸಿ.ಕೆ ನಾಗರಾಜರಾವ್, ಪ್ರೊ ದೊಡ್ಡ ರಂಗೇಗೌಡ, ಪ್ರೊ ಡಿ. ಲಿಂಗಯ್ಯ ಇವರೆಲ್ಲರ ಫೋನ್ ನಂಬರ್ ಕೊಟ್ಟು, ಅವರನ್ನೆಲ್ಲಾ ತಪ್ಪದೆ ಭೇಟಿಯಾಗಬೇಕೆಂದು ತಿಳಿಸಿ, ಅವರುಗಳಿಗೆ ಈ ರತ್ನಾ ಮೂರ್ತಿ ಯ ಪರಿಚಯ ಮಾಡಿಕೊಡುವ ಪತ್ರವನ್ನೂ ಬರೆದುಕೊಟ್ಟರು.
ಬೆಂಗಳೂರಿನ ಸಾಹಿತ್ಯವಲಯದಲ್ಲಿ ಸಾಕಷ್ಟು ಗುಂಪುಗಾರಿಕೆ ಮತ್ತು ಇಸಂಗಳಿವೆ. ನೀನು ಯಾವ ಗುಂಪಿನ ಜೊತೆಗೂ ಗುರುತಿಸಿಕೊಳ್ಳದೆ ನಿನ್ನ ಪಾಡಿಗೆ ನೀನು ಸಾಹಿತ್ಯ ಕೃಷಿಯಲ್ಲಿ ಮುಂದುವರಿಯವ್ವ ಎಂಬ ಎಚ್ಚರಿಕೆಯ ಮಾತನ್ನೂ ಹೇಳಿದರು. ಇದೇ ಕಾಳಜಿಪೂರ್ವಕ ಮಾತು ವ್ಯಾಸರಾಯ ಬಲ್ಲಾಳರಿಂದಲೂ ಬಂದಿತು.
ಬೆಂಗಳೂರಿಗೆ ಬಂದ ಮೇಲೆ ಸನದಿಯವರೊಂದಿಗೆ ಪತ್ರ ವ್ಯವಹಾರ ಇರಿಸಿಕೊಂಡಿದ್ದೆ. ಪ್ರತೀಬಾರಿ ಹೊಸದೇನು ಬರದಿದ್ದೀಯ? ಎಂದು ಮರೆಯದೆ ವಿಚಾರಿಸುತ್ತಿದ್ದರು. ಬೆಂಗಳೂರಿಗೆ ಬಂದಮೇಲೆ ಆಕಸ್ಮಿಕವಾಗಿ ಗಮಕ ವ್ಯಾಖ್ಯಾನದಲ್ಲೂ ನನ್ನನ್ನು ತೊಡಗಿಸಿ ಕೊಂಡು ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಕಾರ್ಯಕ್ರಮ ನೀಡತೊಡಗಿದ್ದನ್ನು ಅರಿತು ಸನದಿಯವರು ನನ್ನ ವ್ಯಾಖ್ಯಾನವನ್ನೊಮ್ಮೆ ಕೇಳುವ ಅಪೇಕ್ಷೆ ಹೊಂದಿದ್ದರು. ಹಾಗೆ ಅವರ ಸಮಕ್ಷಮದಲ್ಲಿ ನನಗೆ ವ್ಯಾಖ್ಯಾನ ಮಾಡುವ ಸೌಭಾಗ್ಯ ದೊರೆಯುವಂತಾಗಲಿ ಎಂದು ನಾನೂ ಉತ್ಸಾಹದಿಂದ ಕಾಯುತ್ತಿದ್ದೆ. ಆದರೆ ಅದು ನೆರವೇರಲಿಲ್ಲ.
ಒಮ್ಮೆ ಗೊರೂರು ಪ್ರತಿಷ್ಠಾನ ದವರು ಕೊಡಮಾಡುತ್ತಿದ್ದ ಪ್ರತಿಷ್ಠಿತ ಗೊರೂರು ಪ್ರಶಸ್ತಿ ಸನದಿಯವರಿಗೂ, ಗೊರೂರು ಕಾವ್ಯ ಪ್ರಶಸ್ತಿ ನನಗೂ ಲಭಿಸಿತು. ಪ್ರಖ್ಯಾತ ಕವಿ ಸನದಿಯವರೊಂದಿಗೆ ಪ್ರಶಸ್ತಿಯ ವೇದಿಕೆಯನ್ನು ಹಂಚಿಕೊಳ್ಳುವುದನ್ನು ಎಂದಾದರೂ ಊಹಿಸಲಾದರೂ ಸಾಧ್ಯವಿತ್ತೇ? ಅದು ನನ್ನ ಬದುಕಿನ ಸಾರ್ಥಕವಾದ ಅಪೂರ್ವ ಘಳಿಗೆಗಳಲ್ಲೊಂದು. ನನ್ನನ್ನು ಮತ್ತೆ ಆ ಸಂದರ್ಭದಲ್ಲಿ ಭೇಟಿಯಾದ ಅವರ ಸಂತೋಷವೂ ಹೇಳತೀರದು ಎಂದ ಮೇಲೆ ನನಗೆ??

ಮುಂದೆ ಅವರೂ ಮುಂಬಯಿ ತೊರೆದು ಅವರ ಬಂಧುಗಳಿದ್ದ ಕುಮಟಾಗೆ ಹೋಗಿ ನೆಲೆಸಿದರು. ನಮ್ಮ ಅರಿವಿಗೆ ಬಾರದಂತೆಯೇ ಪತ್ರ ಬರೆಯುವಿಕೆ ಕ್ರಮೇಣ ನಿಂತು ಹೋಗಿ ಫೋನ್ ಅದರ ಸ್ಥಾನವನ್ನು ಆಕ್ರಮಿಸಿತು. ಹಾಗೆ ಫೋನ್ ಮಾಡಿದಾಗಲೂ ಬಹಳ ಕಾಳಜಿಯಿಂದ ಮನೆಯವರೆಲ್ಲರ ಯೋಗಕ್ಷೇಮ ವಿಚಾರಿಸಿ ಮತ್ತೆ ನನ್ನ ಹೊಸ ಸಾಹಿತ್ಯದ ವಿಚಾರ.
ಈ ನಡುವೆ ಅವರು ಹಿಂದೆ ತಮಗಿಂತ ಚಿಕ್ಕವಳೆಂಬ ಸಲುಗೆ ಮಮತೆಯಿಂದ ನನ್ನನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದುದನ್ನು ಬಹುವಚನದ ಸಂಬೋಧನೆಗೆ ತಿರುಗಿಸಿಕೊಂಡಿದ್ದರು! ನಾನು ಅದೆಷ್ಟೇ ಬಲವಾಗಿ ಆಕ್ಷೇಪಿಸಿದರೂ, ಎಷ್ಟು ಹೇಳಿದರೂ ವೈವಿಧ್ಯಮಯ ಸಾಹಿತ್ಯ ರಚನೆಯಿಂದ ನೀವೀಗ ತುಂಬಾ ಬೆಳೆದುಬಿಟ್ಟಿದ್ದೀರಿ ರತ್ನಾ. ನಿಮ್ಮ ಸಾಧನೆಯನ್ನು ನಾನು ಗೌರವಿಸಬೇಡವೇ? ಎಂದು ನಗುತ್ತಾ ಸಮಜಾಯಿಷಿ ಮಾಡುವ ಉತ್ತರ ಕೊಡುತ್ತಿದ್ದರು. ಆದರೆ ನನಗೆ ಆ ಬಗ್ಗೆ ಅಸಮಾಧಾನವೇ ಉಳಿದುಬಿಟ್ಟದ್ದು ನಿಜ. ಮುಂಬಯಿಯಿಂದ ದೂರ ಬಂದು ಅವರ ಸಲುಗೆಯ ವಾತ್ಸಲ್ಯದಿಂದ ವಂಚಿತಳಾದೆನೇನೋ ಎನಿಸುತ್ತಿತ್ತು.
ಈ ಮಧ್ಯೆ ಅವರ ಸಲಹೆಯಂತೆ ಪ್ರಕಟವಾದ ನನ್ನ ಸೂರ್ಯನ ಮದುವೆ ಎಂಬ ಕಥನ ಕವನ ಸಂಕಲನಕ್ಕೆ ಅವರಿಂದ ಮುನ್ನುಡಿಯ ಆಶೀರ್ವಾದ ದೊರೆತಿತು.
ಸನದಿಯವರನ್ನೊಮ್ಮೆ ಮುಖತಃ ಭೇಟಿಯಾಗಬೇಕೆಂಬ ಹಂಬಲ ಅದಮ್ಯವಾಗುತ್ತಾ ಹೋಯಿತು. ನಿಮ್ಮನ್ನು ಭೇಟಿಯಾಗುವ ಅಪೇಕ್ಷೆ ಇದೆ ಸಾರ್ ಎಂದು ಫೋನ್ ಮಾಡಿದಾಗ ಅವರ ಧ್ವನಿಯಲ್ಲಿ ಪ್ರತಿಧ್ವನಿತವಾದ ಸಂಭ್ರಮ ಸಂತೋಷವನ್ನೆಂತು ಮರೆಯಲಿ.
ಈಗ ಐದಾರು ವರ್ಷಗಳ ಹಿಂದೆ ನನ್ನ ಮಗನೊಂದಿಗೆ ಕುಮಟಾಗೆ ಹೋದಾಗ ಅವರು ಮತ್ತು ಅವರ ಪತ್ನಿ ನೈನಾ ಇಬ್ಬರೂ ನಮಗೆ ತೋರಿದ ಪ್ರೀತಿ ಆದರ ಅದೆಷ್ಟೊಂದು ಬೆಚ್ಚಗಿತ್ತು. ನನ್ನ ಎಲ್ಲಾ ಪ್ರಕಟಿತ ಕೃತಿಗಳನ್ನೂ ಓದುವ ಅಪೇಕ್ಷೆ ತೋರಿದ್ದರಿಂದ ಅದುವರೆವಿಗೂ ಪ್ರಕಟವಾಗಿದ್ದ ನನ್ನ ೨೩ ಕೃತಿಗಳನ್ನೂ ತೆಗೆದುಕೊಂಡು ಹೋಗಿ, ಸನದಿಯವರಿಗೆ ಹಾರ ಹಾಕಿ ಶಾಲು ಹೊದೆಸಿ, ಅವರ ಪತ್ನಿಗೆ ಸೀರೆಯಿತ್ತು ನನ್ನ ಕೃತಿಗಳನ್ನೂ ಅರ್ಪಿಸಿ, ಕೃತಜ್ಞತೆ ಗೌರವದಿಂದ ಬಾಗಿ ನಮಸ್ಕರಿಸಿದೆ.
ನಾವು ಸಸ್ಯಾಹಾರಿಗಳಾದ್ದರಿಂದ ಅಂದು ಅವರ ಮನೆಯಲ್ಲಿ ಪುಷ್ಕಳ ಸಸ್ಯಾಹಾರದೂಟ. ತಮ್ಮ ಮನೆಯನ್ನೆಲ್ಲ ತೋರಿಸಿದರು. ತಾವು ಕೊಂಡುಕೊಂಡಿದ್ದ ಆ ಮನೆಯ ಮುಂದಿನ ಅಂಗಳದಲ್ಲಿ ಬಂಧು ಬಾಂಧವರ ಆಕ್ಷೇಪದ ನಡುವೆಯೂ ಉಳಿಸಿಕೊಂಡಿದ್ದ ತುಳಸೀಗಿಡದ ಬಗ್ಗೆ ಹೇಳಿದರು, ಅದರ ಬಗ್ಗೆ ಬರೆದ ಪದ್ಯ ಓದಿ ಕೇಳಿಸಿದರು. ಅವರ ಮನೆಯ ಸುತ್ತ ಹಾಕಿದ್ದ ಗಿಡಮರಗಳ ಪರಿಚಯ ಮಾಡಿಕೊಟ್ಟರು.
ನೆಂಟರಿಗೂ ಪರಿಚಯ ಮಾಡಿಸಿದರು. ನನ್ನ ನೆಚ್ಚಿನ ಆ ಅಣ್ಣನ ಮನೆಯ ವಾತ್ಸಲ್ಯಪೂರಿತ ಆದರಾತಿಥ್ಯದಲ್ಲಿ ಮಿಂದು ಧನ್ಯವಾಯಿತು ಈ ನನ್ನ ಜೀವ. ಹೊರಡುವಾಗ ಅವರ ಕೆಲವು ಕೃತಿಗಳ ಉಡುಗೊರೆಯಿತ್ತು ತಲೆಯ ಮೇಲೆ ತಮ್ಮ ಅಮೃತ ಹಸ್ತವನ್ನಿಟ್ಟು ಆಶೀರ್ವದಿಸಿದರು.
೨೦೧೯ ರಲ್ಲಿ ಪ್ರಕಟವಾದ ನನ್ನ ಗೌರಮ್ಮನ ವಚನಗಳು ಕೃತಿಗೂ ಅವರ ಅನಿಸಿಕೆಯ ಆಶೀರ್ವಾದ ದೊರಕಿತು. ವಯೋ ಸಹಜವಾಗಿ ಕುಗ್ಗಿದ್ದೇನೆ ದೀರ್ಘವಾಗಿ ಬರೆಯಲಾಗುವುದಿಲ್ಲ ರತ್ನಾ ಎಂದಿದ್ದರು.
ಮತ್ತೊಮ್ಮೆ ಅವರನ್ನು ಭೇಟಿಯಾಗಬೇಕು ಎಂಬ ಅಪೇಕ್ಷೆಯನ್ನು ಈಡೇರಿಸಿಕೊಳ್ಳುವ ಮುಂಚೆಯೇ ನನಗೆ ಅಣ್ಣನಂತೆ, ಗುರುವಿನಂತೆ, ಬಂಧುವಿನಂತೆ ಇದ್ದ, ನನ್ನ ಗೌರವವನ್ನು ಸೂರೆಗೊಂಡಿದ್ದ ಸನದಿಯವರು ಕಾಲನ ತೆಕ್ಕೆಗೆ ಸಿಲುಕಿದ್ದರು. ಅವರ ಅಗಲಿಕೆಗೆ ಹೃದಯ ನೋವಿನಿಂದ ವಿಲಿವಿಲಿ ಒದ್ದಾಡಿತು.
ಸಾಹಿತ್ಯ ಜಗತ್ತಿಗಾಗಿರುವ ನಷ್ಟವಂತೂ ಸರಿಯೇ ಸರಿ, ಆದರೆ ಆ ಮುಗ್ಧ ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ಬೆಳದಿಂಗಳಿನಂತಹ ನಗುವಿನ ಅವರ ನಿಧನದಿಂದಾದ ನಷ್ಟವನ್ನು ಈ ಜನ್ಮದಲ್ಲಿ ನಾನು ಮತ್ತೆ ಹೇಗೆ ತುಂಬಿಕೊಳ್ಳಲಿ???






ಅಂತ:ಕರಣದ ಬರಹ