ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರಳತೆಯೇ ಮೂರ್ತಿವೆತ್ತ ‘ಜರಗನಹಳ್ಳಿ’

ಅರುಣ ರಾವ್ 

ಅಂದು ಶನಿವಾರ. ನನ್ನದೊಂದು ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಬೇಕೆಂದು ಖ್ಯಾತ ಹನಿಗವಿ ಜರಗನಹಳ್ಳಿ ಶಿವಶಂಕರರನ್ನು ವಿನಂತಿಸಿಕೊಳ್ಳಲು ನನ್ನ ಒಬ್ಬ ಗೆಳೆಯರೊಂದಿಗೆ ಜರಗನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತೆರಳಿದೆ. ಆಗ ಸರಿ ಸುಮಾರು ಸಂಜೆ ಆರು ಆರೂವರೆ ಗಂಟೆಯಾಗಿರಬಹುದು. ನಾವು ಬರುತ್ತಿರುವುದಾಗಿ ನನ್ನ ಗೆಳೆಯರು ಮೊದಲೇ ಕರೆ ಮಾಡಿ ಅವರಿಗೆ ತಿಳಿಸಿದ್ದರು. ಏಕೆಂದರೆ ಅವರು ತಮ್ಮ ನಿವೃತ್ತಿಯ ವಯಸ್ಸಿನಲ್ಲಿಯೂ ಹಲವಾರು ಕೆಲಸಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ಗೇಟನ್ನು ತೆರೆದು 
ವಿಶಾಲವಾದ ಆವರಣದ ಒಳಗಡಿ ಇಡುತ್ತಿದ್ದಂತೆಯೇ ನಮ್ಮನ್ನು ಹಲವಾರು ಮರಗಿಡಗಳು ಕೈಬೀಸಿ ಸ್ವಾಗತಿಸಿದವು. ಅಷ್ಟು ಹೆಸರಾಂತ ವ್ಯಕ್ತಿ ನಮ್ಮನ್ನು ಹೇಗೆ ಕಾಣುವರೋ ಎಂಬ ಅಳುಕನ್ನು ಆಹ್ಲಾದಕರವಾದ ಆ ವಾತಾವರಣ ಸ್ವಲ್ಪ ಮಟ್ಟಿಗೆ ದೂರ ಮಾಡಿತು.. 

ಆವರಣದ ಒಂದು ಕಡೆಗೆ ಭವ್ಯವಾದ ಬಂಗಲೆ, ಅದಕ್ಕೆ ಹೊಂದಿಕೊಂಡಂತೆ ಇರುವ ಮತ್ತೊಂದು ಪ್ರತ್ಯೇಕ  ಕಟ್ಟಡ. ಅಲ್ಲಿಯೇ ಒಂದು ಮೇಜಿನ ಹಿಂದೆ ಇದ್ದ ಕುರ್ಚಿಯಲ್ಲಿ ಕುಳಿತಿದ್ದ ಅವರು ‘ಇಲ್ಲೆ ಬನ್ನಿ’ ಎಂದು ನಮ್ಮನ್ನು ನಗುಮೊಗದಿಂದ ಸ್ವಾಗತಿಸಿದರು. ನಾವಿಬ್ಬರೂ ಒಳಗಡಿಯಿಟ್ಟೆವು.  ಸಾಕಷ್ವು ವಿಶಾಲವಾಗಿದ್ದ ಆ ಕೋಣೆಯ ತುಂಬ ಒಪ್ಪವಾಗಿ ಜೋಡಿಸಿಟ್ಟಿದ್ದ ಪುಸ್ತಕಗಳ ರಾಶಿಯನ್ನು ಕಂಡೊಡನೆ ನನಗಾದ ಆನಂದ ಅಷ್ಟಿಷ್ಟಲ್ಲ. ಮತ್ತೊಂದು ಕಡೆ ಅವರಿಗೆ ಬಂದಿದ್ದ ಪ್ರಶಸ್ತಿಗಳು, ಬಿರುದು ಬಾವಳಿಗಳು, ನೆನಪಿನ ಕಾಣಿಕೆಗಳು.

ನಮ್ಮಿಬ್ಬರನ್ನೂ ಕುಳಿತುಕೊಳ್ಳಲು ಹೇಳಿದರು‌. ಅವರ ಮೇಜಿನ ಮುಂದಿದ್ದ ಎರಡು ಕುರ್ಚಿಗಳಲ್ಲಿ ನಾವಿಬ್ಬರೂ ಕುಳಿತೆವು. ಅತ್ಯಂತ  ಸರಳವಾದ ಉಡುಪನ್ನು ಧರಿಸಿದ್ದ ಅವರು ಅವರ ಉಡುಪಿನಂತೆಯೇ ಸರಳತೆಯೇ ಮೈವೆತ್ತ ವ್ಯಕ್ತಿತ್ವದವರು. ಆತ್ಮೀಯವಾಗಿ ಮಾತನಾಡಿಸುತ್ತಾ ವಾತಾವರಣದಲ್ಲಿನ ಬಿಗುವನ್ನು ದೂರ ಮಾಡಿದರು. ಮಾತಿನ ನಡುವೆ ನನ್ನ ಬಾಯಿಂದಲೇ ನನ್ನದೊಂದೆರಡು ಕವನಗಳನ್ನು ಓದಿಸಿ ವಿಮರ್ಶಿಸಿದರು. ಅದರ ಜೊತೆಜೊತೆಗೆ ತಮ್ಮ ಜೀವನದ ಕೆಲವು ಮರೆಯಲಾರದ ಘಟನೆಗಳನ್ನು ನಮ್ಮೊಡನೆ ಹಂಚಿಕೊಂಡರು.

ಈ ಮಧ್ಯೆ ನಾವು ‘ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ’ ಎನ್ನುವಂತೆ ಕಾಫಿ, ಟೀಗಳನ್ನು ಸೇವಿಸಿದ್ದೆವು ಎಂದು ಹೇಳಬೇಕಿಲ್ಕವಷ್ಟೆ. ಮಾತಿನ ನಡುವೆ ಸಮಯ ಹೋದದ್ದೇ ತಿಳಿಯಲಿಲ್ಲ. ಅವರ ಕೊಠಡಿಯಲ್ಲಿದ್ದ ಗಡಿಯಾರ ಒಂಭತ್ತು ಹೊಡೆದಾಗಲೇ ನಮಗೆ ಅದರ ಮೇಲೆ ಗಮನ‌ ಹರಿದದ್ದು. ‘ಸರಿ ಹೊರಡುತ್ತೇವೆ’ ಎಂದಾಗ ‘ಬನ್ನಿ’ ಎನ್ನುತ್ತಾ ಅವರ ಮನೆಯೊಳಗೆ ಕರೆದೊಯ್ದು ತಮ್ಮ ಶ್ರೀಮತಿಯವರನ್ನು ಕೂಗಿ ಕರೆದರು. ನಮಸ್ಕಾರಗಳ ವಿನಿಯೋಗ, ಪರಸ್ಪರ ಪರಿಚಯಗಳಾದ ಮೇಲೆ ಅರಿಶಿನ ಕುಂಕುಮ ತಾಂಬೂಲಗಳನ್ನು ನೀಡಿ ಬೀಳ್ಕೊಟ್ಟರು. ಇವರ ಹೃದಯವಂತಿಕೆಗೆ ನಾನು ಮಾರುಹೋದೆನೆಂದು ಮತ್ತೆ ವಿಶೇಷವಾಗಿ ಹೇಳಬೇಕಿಲ್ಲ. ‘ಏರಿದವನು ಚಿಕ್ಕವನಿರಲೇಬೇಕೆಂಬ ತತ್ವವ ಸಾರುವನು’ ಎನ್ನುವ ಕವಿತೆಯ ಸಾಲುಗಳು ಸಾಕಾರಗೊಂಡ ಕ್ಷಣವದು.

ನಂತರದ ದಿನಗಳಲ್ಲಿ ಕವಿಗೋಷ್ಠಿಗಳಲ್ಲಿ ಅವರೊಡನೆ ವೇದಿಕೆಯನ್ನು ಹಂಚಿಕೊಳ್ಳುವ ಹಲವಾರು ಅವಕಾಶಗಳು ದೊರೆತಿದೆ. ಕಳೆದ ತಿಂಗಳು ಏಫ್ರಿಲ್ 4ರಂದು ಅವರ ಮನೆಯನ್ನು ಕಟ್ಟಿ 25 ವರ್ಷಗಳಾದ ಸಂಭ್ರಮದಲ್ಲಿ ಸುತ್ತೂರು ಶ್ರೀಗಳನ್ನು ಕರೆಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದರು. ಇದಕ್ಕೆ ನೂರಾರು ಜನ ಸಾಕ್ಷಿಯಾದರು. ಅವರಲ್ಲಿ ನಾನೂ ಒಬ್ಬಳು. ಆದರೆ ವಿಧಿಯಾಟ, ಕೇವಲ ಒಂದೇ ತಿಂಗಳಿಗೆ ಅವರಿಲ್ಲ.  ಜೀವನ‌ ಅದೆಷ್ಟು ಅನಿಶ್ಚಿತ ಅಲ್ಲವೇ? ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ.

ದುಃಖದಿಂದ ಗಂಟಲು ಗದ್ಗದಿತವಾಗಿ, ಕಣ್ಣಾವೆಗಳು ತುಂಬಿದೆ. ಟೈಪಿಸುತ್ತಿರುವ ಅಕ್ಷರಗಳು ಮಂಜಾಗುತ್ತಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಕುಟುಂಬಕ್ಕೆ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಅವರ ಒಂದು ಹನಿಗವನ ಅವರ ನೆನಪಿಗಾಗಿ:
‘ರಾಮ ಮಂದಿರ
ಕನಕ ಗೋಪುರವನ್ನು ಕಂಡರೆ
ಭಕ್ತಿ ಅಪಾರ
ಪಕ್ಕದಲ್ಲಿರುವ ಸೋರುವ
ಗುಡಿಸಲನ್ನು ಕಂಡರೆ
ಏಕೋ ತಾತ್ಸಾರ’
ಜರಗನಹಳ್ಳಿ ಶಿವಶಂಕರ್

‍ಲೇಖಕರು Avadhi

5 May, 2021

1 Comment

  1. T S SHRAVANA KUMARI

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading