ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರಕಾರದ್ದೇ ಅಲ್ವಾ ಈ ನಿಯಮ ಕೂಡ?

ಅವರಿಗೆ ನೇರವಾಗಿ ಇಲ್ಲ ಎನ್ನುವ ಬಾಯಿಯೂ ಸರಕಾರದ ಬಳಿ ಇಲ್ಲ

ಆಂಗನ್ ವಾಡಿ ಕಾರ್ಯಕರ್ತೆಯರ ಪ್ರತಿಭಟನೆಯ ಗಾತ್ರ ಮತ್ತು ಅದನ್ನು ನೋಡಿ ಸರಕಾರ ಸಣ್ಣಗೆ ಮಿಸುಕಾಡಲಾರಂಭಿಸಿರುವುದು ಹೋರಾಟ ನಿರತರಿಗೆ ಸಂತಸದ ಸಂಗತಿಯೇ ಆದರೂ, ಸರ್ಕಾರ ಆ ಮೂಲಕ ಒಂದು  ತಪ್ಪು ಪೂರ್ವೋದಾಹರಣೆಯನ್ನೂ ಹಾಕಿಕೊಡುತ್ತಿದೆ.

ಗಾಂಧಿ ಒಬ್ಬ ವ್ಯಕ್ತಿ ಉಪವಾಸ ಕುಳಿತರೆ ಇಡಿಯ ದೇಶ ಕಣ್ಣು-ಕಿವಿ ನೆಟ್ಟಗಿಟ್ಟುಕೊಂಡು ಕೇಳುತ್ತಿದ್ದ ದಿನಗಳನ್ನೂ ಈ ದೇಶ ಕಂಡಿದೆ ಎಂದು ಕೇಳಿದ್ದೇವೆ-ಓದಿದ್ದೇವೆ. ಅಲ್ಲಿಂದೀಚೆಗೆ ಈಗ ನಾವು ತಲುಪಿರುವ ಸ್ಥಿತಿಯಲ್ಲಿ ಒಂದು ಪ್ರಾಮಾಣಿಕ ಪ್ರತಿಭಟನೆ ಕೂಡ “ ಸ್ಪೆಕ್ಟಾಕ್ಯುಲರ್” ಆಗದೇ ಅದನ್ನು ಕೇಳಿ ಸಮಸ್ಯೆ ಪರಿಹರಿಸಬೇಕಾದವರು ಎಚ್ಚೆತ್ತುಕೊಳ್ಳುವುದು ಕಷ್ಟ ಎನ್ನಿಸುತ್ತಿದೆ.

ರಾಜ್ಯದಲ್ಲಿ 1.24 ಲಕ್ಷ ಆಂಗನ್ ವಾಡೀ ಕಾರ್ಯಕರ್ತೆಯರಿದ್ದು, ಅವರೀಗ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ; ಸರಕಾರದ ಮೂಗು ಒತ್ತಿ ಬಾಯಿ ತೆರೆಸುವ ಸಂಖ್ಯೆ, ಸಾಮರ್ಥ್ಯಗಳೆರಡೂ ಇರುವವರು ಅವರು. ಎಲ್ಲಕ್ಕಿಂತ ಮಿಗಿಲಾಗಿ ಅವರು ತಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ನ್ಯಾಯಬದ್ಧವಾಗಿ ಕೇಳುತ್ತಿದ್ದಾರೆ. ದಿನಕ್ಕೆ ಏಳೆಂಟುಗಂಟೆಗಳ ಆಂಗನ್ ವಾಡಿ, ಶಿಶು ಮತ್ತು ಗರ್ಭಿಣಿಯರ ಆರೋಗ್ಯದ ಕಾಳಜಿಯ ಕೆಲಸಗಳಲ್ಲದೆ ಸರ್ಕಾರದ ಜನಗಣತಿ, ಭಾಗ್ಯಲಕ್ಶ್ಮೀ ಯೋಜನೆ, ಸ್ತ್ರೀಶಕ್ತಿ ಸಂಘ… ಇತ್ಯಾದಿ ಹಲವು ಯೋಜನೆಗಳಿಗಾಗಿ ಕೆಲಸ ನಿರ್ವಹಿಸಬೇಕಿರುತ್ತದೆ. ಹಾಗಾಗಿ ಅವರಿಗೆ  ನೇರವಾಗಿ ಇಲ್ಲ ಎನ್ನುವ ಬಾಯಿಯೂ ಸರಕಾರದ ಬಳಿ ಇಲ್ಲ. ಅದಕ್ಕೆಂದೇ ಕೇಂದ್ರದ ಪಾಲು-ರಾಜ್ಯದ ಪಾಲು ಎಂದೆಲ್ಲ ನುಸುಳು ದಾರಿಗಳನ್ನು ಹುಡುಕಲಾಗುತ್ತಿದೆ.

ಇಲ್ಲಿ ಒಂದು ಸಣ್ಣ ಪ್ರಶ್ನೆ ಇದೆ. ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ, ಖಾಸಗಿ ಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ “ಕನಿಷ್ಟ ವೇತನದ” ಕಾನೂನೊಂದನ್ನು ಹೊಂದಿದೆ. ಆ ಕಾನೂನಿನ ಪ್ರಕಾರ ನನಗೆ ತಿಳಿದಿರುವಂತೆ 2016ರ ಜೂನ್ ವೇಳೆಗೆ ಲಭ್ಯ ಇರುವ ದಾಖಲೆಗಳಂತೆ ಅತ್ಯಂತ ಕನಿಷ್ಟ ಎಂದರೆ 7500 ರೂಪಾಯಿಗಳ ಸಂಬಳವನ್ನಂತೂ ಒಬ್ಬ ವ್ಯಕ್ತಿ ಪಡೆಯಲೇ ಬೇಕಾಗುತ್ತದೆ. (ವಿವರಗಳು ಇಲ್ಲಿವೆ: http://labour.kar.nic.in/labou r/2016-17%20Minimum%20wages% 20rates.pdf). ಆದರೆ, ಈಗ ಬಜೆಟ್ಟಿನಲ್ಲಿ ಸರ್ಕಾರ ಆಂಗನ್ ವಾಡಿ ಕಾರ್ಯಕರ್ತೆಯರಿಗೆ ಸಂಬಳವನ್ನು ಒಂದು ಸಾವಿರದಷ್ಟು ಏರಿಸಿ, 7000ಕ್ಕೆ ನಿಗದಿ ಮಾಡಿದೆ ಎನ್ನುತ್ತಿವೆ ಸುದ್ದಿಗಳು. labour.kar.nic.in

ಹಾಗಾದರೆ, ಸರಕಾರವೇ ರೂಪಿಸಿರುವ ಕನಿಷ್ಟ ವೇತನ ಕಾನೂನು ಸ್ವತಃ ಆ ಸರಕಾರಕ್ಕೆ ಅನ್ವಯ ಆಗುವುದಿಲ್ಲವೇ? ಆಂಗನ್ ವಾಡಿ ಜವಾಬ್ದಾರಿಗಳು ಮಾತ್ರವಲ್ಲದೇ ಊರ ಉಸಾಬರಿಗಳನ್ನೂ ಮುಲಾಜಿಲ್ಲದೆ ಆಂಗನ್ ವಾಡಿ ಕಾರ್ಯಕರ್ತೆಯರ ಮೇಲೆ ಹೇರಿರುವ “ ಕುಳಿತುಣ್ಣುವ ಐ ಎ ಎಸ್” ಅಧಿಕಾರಿ ವರ್ಗಕ್ಕೆ, ಈ ದುಡಿಯುವ ಮಹಿಳೆಯರಿಗೆ ಮನುಷ್ಯರಂತೆ ಬದುಕುವಷ್ಟಾದರೂ ಸಂಬಳ ಸವಲತ್ತು ಕೊಡಿಸಬೇಕು ಎಂಬ ನೈತಿಕ ಜವಾಬ್ದಾರಿ ಇಲ್ಲವೆ?

ತಪ್ಪು ಪೂರ್ವೋದಾಹರಣೆ

ಪ್ರತಿಭಟನೆಯಲ್ಲಿ ಗಾತ್ರ ಇದ್ದಾಗ ಮಾತ್ರ ಸರ್ಕಾರಿ ಕೋಣದ ಚರ್ಮದಾಳಕ್ಕೆ ಅದು ತಲುಪುತ್ತದೆ ಎಂಬುದು ಖಂಡಿತ ತಪ್ಪು ಪೂರ್ವೋದಾಹರಣೆ. ಪ್ರತೀವರ್ಷ ಉತ್ತರ ಪತ್ರಿಕೆಗಳನ್ನು ತಿದ್ದುವ ಕೆಲವೇ ದಿನಗಳ ಮೊದಲು ಆರಂಭ ಆಗುವ ಉಪನ್ಯಾಸಕರು –ಶಿಕ್ಷಕರ ವಾರ್ಷಿಕ ಮುಷ್ಕರ ಸೇವೆ ಕೂಡ ಇಂತಹದೇ ತಾಕತ್ತಿನ ಪ್ರದರ್ಶನ. ರಾಜ್ಯದಲ್ಲಿ ಗಾತ್ರದಲ್ಲಿ, ಸಾಮರ್ಥ್ಯದಲ್ಲಿ ಕಡಿಮೆ ಇದ್ದರೂ ಇಂತಹದೇ ಅಥವಾ ಇದಕ್ಕಿಂತ ಹೆಚ್ಚಿನ ಸಮಸ್ಯೆಗಳಿರುವ ನೂರಾರು ಅತಂತ್ರ ಜನರಿದ್ದಾರೆ. ಅತ್ತ ಗಾತ್ರವೂ ಇಲ್ಲದೆ ಇತ್ತ ಎತ್ತಬಲ್ಲ ಧ್ವನಿಯೂ ಇಲ್ಲದೆ ಪ್ರತಿದಿನ ನಂಜುಂಡು  ಬದುಕುತ್ತಿರುವ ಈ ಜನಸಮುದಾಯಗಳಿಗೆ ಸರ್ಕಾರ ಈಗ ತಪ್ಪು ಪೂರ್ವೋದಾಹರಣೆಯೊಂದನ್ನು ಹಾಕಿಕೊಡುತ್ತಿದೆ. ನಾವು ಕೇಳುವಷ್ಟು ಗಾತ್ರದ ಪ್ರತಿಭಟನೆ ಮಾಡದಿದ್ದರೆ ಅಥವಾ ನೀವು ರಿಯಲ್ ಎಸ್ಟೇಟಿನವರು, ಮರಳಿನವರಂತೆ ಕಾಸಿನ ಗಂಟು ಹೊಂದಿಲ್ಲದಿದ್ದರೆ ನಾವು ನಿಮ್ಮತ್ತ, ನಿಮ್ಮ ಸಮಸ್ಯೆಗಳತ್ತ ತಲೆಹಾಕುವುದಿಲ್ಲ ಎಂಬ ಸ್ಪಷ್ಟ ಸೂಚನೆ ಇದು.

‍ಲೇಖಕರು admin

24 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading