ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮ್ಮೇಳನದಲ್ಲಿ ನನ್ನ ಮೊದಲ ದಿನ – ಶಿವು ಮೊರಿಗೇರಿ

ವಿಜಾಪುರ ಸಾಹಿತ್ಯ ಸಮ್ಮೇಳನದಾಗ ಮದ್ಲ ದಿನ ಮನಸಾರ ನೋಡಿದ್ದು

ಶಿವು ಮೊರಿಗೇರಿ

ಅಬ್ಬಾಬಬ್ಬಾ! ಏನ್ ಜನರೀ, ಬಿಜಾಪುರದ ತುಂಬ ನೀವು ಯಾ ಕಡಿಗರ ನೋಡ್ರಿ, ಜನದ ಹೊಳಿನ ಹರದೈತಿ ಬಿಡ್ರಿ. ನಾನು ಸಾಹಿತ್ಯ ಸಮ್ಮೇಳನ ನೋಡಾಕ ಬಂದ್ರ, ಇಡೀ ಬಿಜಾಪುರನ, ಮದುಮಗಳಂಗ ಲಕ ಲಕ ಅನ್ನಾಕ್ಕತ್ತೈತಿ ನೋಡ್ರಿ. ನಗರದ ಎಲ್ಲಾ ಬೀದಿಗಳ ಆಜು ಬಾಜು, ಕನ್ನಡದ ಬಾವುಟಗಳ ತೋರಣ ಮಿರಿ ಮಿರಿ ಮಿಂಚಾಕತ್ಯಾವು. ಗಾಳಿಗ್ಯ ಪಟ ಪಟ ಬಡಿಯಕ್ಕತ್ಯಾವು. ಅಲ್ಲಲ್ಲಿ ಚೌಕಿಗಳ ಅತ್ರ ಚಂದನ ರಂಗೋಲಿ, ಟಂಟಂಗಳ ಕಿವಿಗಳ ಮ್ಯಾಲ ಕನ್ನಡದ ಬಾವುಟ, ಯವಕ ಯುವತಿಯರ ಕೊಳ್ಳಾಗ ಬಾವುಟದ ಶಾಲುಗಳು, ಹೇ, ನೋಡಾಕ ಎಲ್ಡು ಕಣ್ಣು ಸಾಲ್ದು ನೋಡ್ರಿ.
 
ಅಂದಂಗ ಇಂಥ ಜಾತ್ರಿನೆಲ್ಲ ದಾಟಿಕೊಂಡು ಸಮ್ಮೇಳನ ನಡಿಯ ಮುಖ್ಯದ್ವಾರದ ಒಳಕ ಹೋದ್ರ, ಅಬ್ಬಾ! ಆ ಪಾಟಿ ಜನಗಳನ್ನ ನೋಡಿ ಭಾಳ ಖುಷಿಯಾತ್ರಿ. ಲಕ್ಷಗಟ್ಲ ಮಂದಿ ಎಷ್ಟು ಉತ್ಸಾಹದಿಂದ ಕಾರ್ಯಕ್ರಮಕ್ಕ ದೌಡಾಯಿಸಾರಂದ್ರ, ಹೆಂಡ್ರು, ಮಕ್ಳು, ಪಿಳ್ಳಿ, ಮುತ್ಯಾನರು, ಹೇ ಪೂರಾ ಕುಟುಂಬ ಸಮೇತ, ಮನಿ ಮದ್ವಿಗ್ಯ ಬಂದಂಗ, ಜಬರದಸ್ತ ಬಂದಾರ ನೋಡ್ರಿ. ಸೌರಾರು ಬುಕ್ ಸ್ಟಾಲ್ ಗಳು, ಕೋಟಿಗಟ್ಲೆ ಪುಸ್ತಕಗಳು, ಸಾವಿರಾರು ಪೋಲೀಸರು, ನೂರಾರು ಸ್ಕೌಟ್ಸು, ಎನ್.ಸಿ.ಸಿ ವಿದ್ಯಾರ್ಥಿಗಳು, ಗೈಡ್ ಗಳು, ಕಾರ್ಯಕತ್ರರು, ಸಂಘಟಕರು, ಸಂಚಾಲಕರು, ಇವ್ರಗಳ ಓಡಾಟ, ಆ ದೌಡು, ಅದೊಂದು ನೋಡಕ ಚೆಂದ ಬಿಡ್ರಿ.


ನಾನು ಕ್ಯಾಮರಗೆ ಕಣ್ಣು ಕೊಟ್ಟು ಪೋಟೊ ತೆಕ್ಕಂತ, ಒಬ್ಬ ಮುದ್ಕಿನ ‘ಯಾಕಬೇ ಯಮ್ಮಾ, ಇಂಥಾ ಗದ್ಲದಾಗ ಯಾಕ ಬಂದೀ’ ಅಂತ ಕೇಳಿದ್ರ, ‘ಅಲ್ಲಾ ತಮ್ಮಾ ನನಿಗಂತ್ರು ಓದಾಕ,ಬರಿಯಾಕ ಬರಲ್ಲ. ಆದ್ರ ಈ ಜಾತ್ರಿ ನೋಡಾಕ ದೂರದ ನಾಡಿನಿಂದ ಎಷ್ಟು ಜನ ಬಂದೈತಿ, ಇದಾ ಜಿಲ್ಲೆದಾಗ ಇದ್ಕಂಡು ನಾನು ಬರ್ಲಿಲ್ಲಂದ್ರ, ಏನು ಚೊಲೋ ಕಾಣ್ತೈತಿ ಹೇಳಪ್ಪಾ’ ಅಂದಾಗ ಅಜ್ಜಿಯ ಮಾತುಗಳಿಗ್ಯ ನನ್ನ ಬಳಿ ಬರಿ ಮೌನದ ಉತ್ರ ಮಾತ್ರ ಇತ್ತು ನೋಡ್ರಿ.
ಇಲ್ಲಿನ ಸಂಭ್ರಮ ನೋಡ್ತಾ ನೋಡ್ತಾ ನನಿಗ್ಯ ಹೊಟ್ಟಿ ಹಸ್ದಿದ್ದ ನೆಪ್ಪಿರಲಿಲ್ಲ. ಅಷ್ಟರಾಗ ಅಲ್ಲೇನ ಗದ್ದಲ ನಡಿತೈತಿ ಅಂತ ನೋಡಿದ್ರ , ಅದು ಊಟಕ್ಕ ನಡಿದಿದ್ದ ನೂಕ್ಯಾಟ. ಊಟದ ವಿಚಾರಕ್ಕ ಬಂದ್ರ ಆನಿಮುಂದ ಗಂಜಿ ಇಟ್ಟಂಗಾಗಿತ್ತು. ಬಿಳಿಜ್ವಾಳದ ರೊಟ್ಟಿ, ಚಜ್ಜಿ ರೊಟ್ಟಿ, ಯಾಕ ಕಸುವು ಕಳಕಂಡಿದ್ವು ಅನ್ನಿಸ್ತು. ಕಡ್ಲಿಪುಡಿ, ಕಾಳು ಪಲ್ಯ,ಜತಿಗ್ಯ ಆಲಗಡ್ಡಿ ಇನ್ನೊಂದು ಚೂರು ಕುದಿಬೇಕಿತ್ತು ನೋಡ್ರಿ, ವಸಡಾಗ ಅಂಗ ಸಿಕ್ಕಂತಾವು. ಉಣ್ಣಾಕ ಪತ್ರೆಳಿ ವ್ಯವಸ್ಥ ಮಾಡಿದ್ರ ಚೊಲೋ ಇತ್ತು. ಅಂದ್ಕಂತನ ಹನುಮಂತಪ್ಪ ಅನ್ನೋ ಮುತ್ಯಾ ಅನ್ನ ಸಾರು ಕಲಸತಿದ್ದ ನೋಡ್ರಿ.



ಅಲ್ಲಿಂದ ನಾನು ನೇರ ವೇದಿಕೆ ಹತ್ರ ಬಂದು ನೋಡಿದ್ಯ ನಿಂತ್ಕಣಕ ಜಾಗ ಸಿಗಲಿಲ್ಲ ಬಿಡ್ರಿ. ವೇದಿಕಿ ಮ್ಯಾಗ ಬರೆ ಸಾಹಿತ್ಯದ ಬಗ್ಗೆ ಅಷ್ಟ ಅಲ್ಲ ಬಿಡ್ರಿ, ರಾಜಕೀಯ ಮಾತಾಡಿದ್ರು, ಬಜೆಟ್ ಬಗ್ಗೆ ಮಾತಾಡಿದ್ರು, ಇತಿಯಾಸ, ಶರಣ ಸಂಸ್ಕೃತಿ, ನಾಡಿನ ಹಿರಿಯರ ಬಗ್ಗೆ, ಹಿಂಗ ಎಲ್ಲಾ ಇಚಾರಗಳೂ ಕೇಳಿ ಬಂದ್ವು. ಆದ್ರ ನನಿಗ್ಯ ನಿನ್ನಿಲಿದ್ದ ಕಾಡಕತ್ತಿರದು ಏನು ಅಂದ್ರ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮಾರಂಭ ಆದ್ರೂ, ನಮ್ಮ ಅಕ್ಕ ಪಕ್ಕದ ರಾಜ್ಯಗಳ ಯಾರಾದ್ರೂ ಮಹನೀಯರು ಬಂದಾರೇನ ಅಂತ ಹುಡ್ಕಿದ್ರ, ಯಾರೂ ಸಿಗಲಿಲ್ಲ.
ಇನ್ನೂ ನಾನು ಬಹುಶಃ ಎಲ್ಲಾ ಪುಸ್ತಕದ ಮಳಿಗಿಗಳನ್ನೂ ನೋಡಿನಿ. ಆದ್ರ ಲಾಸ್ಟಿಗ್ಯ ನನಿಗನ್ನಿಸಿದ್ದಂದ್ರ, ಇಪಾಟು, ಧ್ಯಾನ, ಧರ್ಮ, ದೇಶಭಕ್ತಿ, ಶರಣ ಸಂಸ್ಕೃತಿ, ಆಧ್ಯಾತ್ಮ, ಇಂಥಾ ಪುಸ್ತಕಗಳ ಜಾಸ್ತಿ ಇದ್ವು ಅನ್ನಿಸ್ತು.
ಕಬ್ಬಿನ ಹಾಲು, ಗೊಂಬಿಗಳ ವ್ಯಾಪಾರ, ಹೋಟೆಲ್ ಬಿಜಿನೆಸ್ಸು, ಬಾವುಟಗಳ ಮಾರಾಟ, ಬಟ್ಟಿ ವ್ಯಾಪಾರ,ಶೇಂಗಾ ಮಾರೊರ ಲಾಭ, ಇವು ಬುಕ್ಕದ ವ್ಯಾಪಾರಕ್ಕಿಂತ್ಲು ಜೋರು ಇತ್ತು ನೋಡ್ರಿ.
ರಾತ್ರಿ ಒಂದೀಟು ಭರತ ನಾಟ್ಯ,ಒಂದಾ ಒಂದು ಪವಾಡ ಬಯಲು ಕಾರ್ಯಕ್ರಮ,ಕವನ ವಾಚನ, ವಚನ ವಾಚನ, ಕಾರ್ಯಕ್ರಮಗಳನ್ನ ನೋಡಿನಿ. ಇದು ಒಂದಾ ದಿನಕ್ಕ ಮುಗಿಯ ಹಬ್ಬ ಅಲ್ಲ ನೋಡ್ರಿ ? ಅದ್ಕ ಎರಡನೇ ದಿನದಾಗ ಚೊಲೋ ಕಾರ್ಯಕ್ರಮಗಳು ಅದಾವು.ಅವನ್ನೂ ನೋಡಿ ಎಲ್ಲವನ್ನೂ ನಿಮ್ಮ ಜತಿಗ್ಯ ಹಂಚ್ಕತೀನಿ ನನಿಗ್ಯ ಕಾರ್ಯಕ್ರಮ ನೋಡಾಕ ಹೋತ್ತಾತು ನಾ ಇನ್ನು ಬಲ್ರೇನ್ರಿ ?

‍ಲೇಖಕರು G

10 February, 2013

1 Comment

  1. ಸುಧಾ ಚಿದಾನಂದಗೌಡ

    very nice write up shivu.
    ಊರಿನ ಭಾಷೆಯನ್ನು ತುಂಬ ಚೆನ್ನಾಗಿ ದುಡಿಸಿಕೊಂಡೀಪಾ.
    “ನೋಡ್ರಿ” ಅನ್ನೋದು ಸ್ವಲ್ಪ repeated ಅನಿಸಿತು
    ಕೊನೆಸಾಲಂತೂ ತುಂಬ ಹಿಡಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading