
ಗಿರಿಜಾ ಶಾಸ್ತ್ರೀ
‘ನೋಡಿ, ಫಿಸಿಕ್ಸ್ ಪ್ರಕಾರ, ನಾನು ಹೀಗೆ ಒಂದು ಬೆರಳನ್ನೆತ್ತಿದಾಕ್ಷಣ ವಿಶ್ವದ ಚಲನೆಯಲ್ಲಿ ಏನನ್ನೋ ಬದಲಾವಣೆ ಮಾಡುತ್ತಿರುತ್ತೇನೆ’, ಚಿತ್ತಾಲರು ತಮ್ಮ ತೋರು ಬೆರಳನ್ನೆತ್ತಿ ಅಭಿನಯ ಪೂರ್ವಕ ತೋರಿಸುವಾಗ ನನ್ನೊಳಗೆಲ್ಲಾ ಜುಂ ಎಂದಿತು. ಅವರ ಮಾಗಿದ ವಯಸ್ಸು, ವಿಷಯದ ಗಾಂಭೀರ್ಯ ಅವರ ಅಂಗ ಭಾವಗಳಲ್ಲಿ ವ್ಯಕ್ತವಾಗುತ್ತಾ ಅವರ ಕಣ್ಣುಗಳಲ್ಲಿ ಪ್ರತಿಫಲನಗೊಳ್ಳುತ್ತಿರುವಾಗ, ಅವರ ಎದುರಿಗೆ ಕುಳಿತು ಈ ಮಾತುಗಳನ್ನು ಕೇಳುತ್ತಿರುವ ವ್ಯಕ್ತಿ ನಾನೇ? ಎನ್ನುವ ವಿಸ್ಮಯ ಆವರಿಸತೊಡಗಿತು.
ಅಣುವಿನ ಮಹತ್ತನ್ನು ಕುರಿತು ಮಾತನಾಡುತ್ತಿರುವಂತೆ ತೋರಿತು. ಮಹತ್ತಿನ ಚಲನೆಯಲ್ಲಿ ಅಣುವಿನ ಪಾತ್ರ ಎಂಥ ಮಹತ್ತರವಾದದ್ದು, ಅಣುವಿನೊಳಗೆ ‘ಮಹತ್ತು’ಹೊಕ್ಕು, ಮಹತ್ತಿನೊಳಗೆ ‘ಅಣು’ ಸಂಚರಿಸಿ ವಿಶ್ವದ ವೃತ್ತಾಂತವನ್ನು ಪೂರ್ಣವಾಗಿಸುವ ಬಗೆ ಬೆರಗು ಹುಟ್ಟಿಸುವಂತಹದ್ದು. ಇಂತಹ ಬೆರಗಿಗೆ ಅರಬ್ಬಿ ಕಡಲು ಹಿನ್ನೆಲೆ ಒದಗಿಸಿತ್ತು. ಇದಕ್ಕೆ ಪೂರಕವಾಗಿ ಚಿತ್ತಾಲರು ತಮ್ಮ ಹೊಸದೊಂದು ಕತೆಯ ಹಿಂದಿರುವ ಪರಿಕಲ್ಪನೆಯನ್ನು ಪರಿಚಯ ಮಾಡಿಕೊಟ್ಟರು. ಅದು ಒಂದು ವೃತ್ತದೊಳಗೆ ಸಮ ದೂರದಲ್ಲಿ ಇಬ್ಬರು ಚಲಿಸುತ್ತಿರುವ/ಸುತ್ತುತ್ತಿರುವ ಕಥೆ. ‘who is chasing whom?’ ಎಂದರು. ಅರೆ! ಹೌದಲ್ಲಾ ಯಾರ ಹಿಂದೆ ಯಾರು? ಅಥವಾ ಯಾರು ಮುಂದೆ, ಯಾರು ಹಿಂದೆ? ಪ್ರತಿಯೊಬ್ಬರೂ ಏಕ ಕಾಲಕ್ಕೆ ಹಿಂದೆ ಹಾಗೂ ಮುಂದೆ ಇದ್ದಾರೆ.

ಹೀಗಾಗಿ ಇಬ್ಬರಿಗೂ ತಮ್ಮ ಹಿಂದೆಯೂ ಕಾಣುವುದಿಲ್ಲ ಮುಂದೆಯೂ ಕಾಣುವುದಿಲ್ಲ. ‘ಹಿಂದಣ ಹೆಜ್ಜೆಯ ಅರಿವಿ’ಲ್ಲ, ‘ಮುಂದಣ ಅನಂತ’ದ ಪರಿವೆಯಿಲ್ಲ. ಹಿಂದಣ ಹೆಜ್ಜೆಯ ಅಭಿಜ್ಞಾನವಾದರೆ ಮುಂದಿನ ಕಾಣ್ಕೆ ಕೃಪೆತೋರಬಹುದು. ಇದು ಒಂದು ರೀತಿಯ ‘ಸ್ವ’ ದ ಸುತ್ತಲೇ ಹೊಡೆಯುವ ಗಿರಕಿ. ನಮ್ಮ ಒಂದು ಸಣ್ಣ ಭೌತಿಕ ಚಲನೆಯೂ ವಿಶ್ವದ ಚಲನೆಯಲ್ಲಿ ಕಂಪನವುಂಟುಮಾಡಲು ಸಾಧ್ಯವಿರುವಾಗ, ‘ನಾ ತೊಟ್ಟ ದೇಹಗಳ’ ವಿಸ್ಮೃತಿಗೆ ಸಂದಿರುವ ಎಷ್ಟೆಲ್ಲಾ ಚಲನೆಗಳು ‘ವೃಥಾ ಹೋಗಲು’ ಹೇಗೆ ಸಾಧ್ಯ? ನನ್ನಂಗ, ಮನೋ ಚೇಷ್ಟೆಗಳಿಗೆ ನಾನು ಬ್ಯಾಧ್ಯ ಸ್ಥಳಾಗುವುದಿಲ್ಲವೆಂದರೆ ಹೇಗೆ? ಹಿನ್ನಡೆ, ಮುನ್ನಡೆಗೆ ಕಾರಣವಾದರೆ ಮುನ್ನಡೆಗೆ, ಹಿನ್ನಡೆ ಕಾರಣ, ಈ ವೃತ್ತಾಂತದಲ್ಲಿ ‘ನಡೆ’ ಅಥವಾ ಚಲನೆ ಮಾತ್ರ ಶಾಶ್ವತವಾದದ್ದು (ನಿತ್ಯವಾದದ್ದು), ಅದರ ಹಿಂದು ಮುಂದುಗಳಲ್ಲ.
ವೃತ್ತದ ಚಲನೆಯ ಜೊತೆಗೆ ಹಿಂದು ಮುಂದಾಗುವ ಅವು ಎಂದೂ ಸಾಪೇಕ್ಷವಾದವು. ಕಾಲದ ಚಲನೆಯ ಜೊತೆಗೆ ಚಲಿಸುತ್ತ ಚಲಿಸುತ್ತಾ ಅವು ವೃತ್ತದ ಪರಿಧಿಯಾಚೆಗೆ ಹಾರಿ ಬಿಡುವಂತಹವು. ದುರಂತವೆಂದರೆ ನಮಗೆ ಈ ಪರಿಭ್ರಮಣೆಯ ಅರಿವೇ ಆಗದಿರುವುದು. ಕೇಂದ್ರದಿಂದ ಪರಿಧಿಗೆ, ಪರಿಧಿಯಿಂದ ಮತ್ತೆ ಕೇಂದ್ರಕ್ಕೆ ಚಲಿಸುವ ಅರಿವು ಗೋಚರಿಸದಿರುವುದು ಮನುಷ್ಯಜಾತಿಯ ಮಿತಿ.
ಯಾವುದೇ ಒಂದು ಕಲೆಯ (ಕಾದಂಬರಿ) ಪರಿಕಲ್ಪನೆಯೂ ಈ ಕೇಂದ್ರ ವೃತ್ತಾಂತವೇ ಆಗಿರುತ್ತದೆ ಎಂಬುದು ಚಿತ್ತಾಲರ ನಂಬುಗೆ. ಇದೊಂದು ‘ಆಟ’. ಈ ‘ಆಟ’ದೊಳಗೆ ಸಾವೂ ಒಂದು ಭಾಗವಾಗಿರುತ್ತದೆ ಎಂಬ ಅರಿವೇ ಉಂಟಾಗದ ‘ಆಟ’ವಿದು, ಎಂದು ಚಿತ್ತಾಲರು ತಮ್ಮ ‘ಆಟ’ ಕತೆಯ ಕುರಿತು ಹೇಳಿದಾಗ, ಬೇಂದ್ರೆಯವರ ‘ನಾದಲೀಲೆ’ ಹೇಳುವುದೂ ಇದನ್ನೇ ಅಲ್ಲವಾ ಸರ್ ಎಂದದ್ದಕ್ಕೆ ಹೌದೆಂದು ತಲೆಯಲ್ಲಾಡಿಸಿದರು.
ದೂರದಿಂದ ಬಂದಿದ್ದ ವಸುಧೇಂದ್ರ ಅವರು ಚಿತ್ತಾಲರನ್ನು ನೋಡಲು ಬಯಸಿದಾಗ ಸೃಜನಾದ ಗೆಳತಿಯರಾದ ನಾವೂ ಕೆಲವರು ಅವರನ್ನು ಸೇರಿಕೊಂಡೆವು. ಮಿತ್ರಾ ವೆಂಕಟ್ರಾಜ್ ಅವರ ಸಾರಥ್ಯದಲ್ಲಿ ಚಿತ್ತಾಲರ ಮನೆಗೆ ಹೋದಾಗ, ಎದುರಿನ ಸಮುದ್ರದೊಳಕ್ಕೆ ಸಂಜೆ ಇಳಿಯುತ್ತಿತ್ತು. ಚಿತ್ತಾಲರು ಸಮುದ್ರಮುಖಿಯಾಗಿಯೇ ಕುಳಿತು ಯಾಕೆ ಯಾವಾಗಲೂ ತಮ್ಮ ಕೃತಿಗಳನ್ನು ಬರೆಯುತ್ತಾರೆ, ಎನ್ನುವ ವಿಸ್ಮಯಕ್ಕೆ ಸಮುದ್ರವೇ ಉತ್ತರ ಕೊಡುತ್ತದೆ. ವಿಸ್ಮಯಕ್ಕೆ ವಿಸ್ಮಯವೇ ಉತ್ತರವೆನ್ನುವ ಹಾಗೆ!
‘ಎಲ್ಲರೂ ನಾನೇ ‘ನಾಗಪ್ಪ’ ಎಂದು ತಿಳಿದುಕೊಂಡಿದ್ದಾರೆ. ಆದರೆ ನೋಡಿ, ನಾಗಪ್ಪನಿಗೆ ಕೈಮೇಲೆ ಸುಟ್ಟ ಕಲೆಯಿತ್ತು, ನನಗಿದೆಯಾ’ ಎಂದು ಕೈಮೇಲೆ ಮಾಡಿ ತೋರಿಸಿದರು. ಅದಕ್ಕೆ ನಾನು, ‘ಯಾಕಾಗಬಾರದು ನೀವು ಕೊಲಾಜ್ ಮಾಡಿರಬಹುದು. ಇಸ್ಕಿ ಟೋಪಿ ಉಸ್ಕಾ ಸರ್?’ ಲೇಖಕ ಮಾಡುವುದು ಇದನ್ನೇ ತಾನೇ? ಚಿತ್ತಾಲರ ಜೊತೆ ಎಲ್ಲರೂ ಭರಪೂರ ನಕ್ಕೆವು. ಚಿತ್ತಾಲರು ಕೃತಿಯ ರೂಪಕ್ಕೆ (form) ಹೆಚ್ಚು ಗಮನಕೊಡುತ್ತಾರೆನ್ನುವ ವಸುಧೇಂದ್ರರ ಪ್ರಶ್ನೆಗೆ, form ಮತ್ತು content ನ್ನು ಬೇರ್ಪಡಿಸಲು ಸಾಧ್ಯವಿಲ್ಲವೆಂದು ಉತ್ತರಿಸಿದರು. ಅವರು ಮುಂದುವರೆಯುತ್ತಾ, ‘ತೆಂಗಿನ ಮರದ’ ಮೇಲೆ ಪ್ರಬಂಧ ಬರೆಯಬಹುದೇ ಹೊರತು ಕತೆಯನ್ನಲ್ಲ. ಕತೆಯನ್ನುವುದು ಪ್ರತಿಮೆಯೊಳಗಿಂದಲೇ ಹುಟ್ಟಿಬರುವಂತಹುದು ಎಂದರು.

ಈ ಪ್ರತಿಮೆಯೇ ತನ್ನ formನ್ನೂ ಹುಡುಕಿಕೊಳ್ಳುತ್ತದೆ ಎಂಬುದೂ ನಿಜವಲ್ಲವೇ? ಎನ್ನುವ ಮಾತನ್ನು ಆ ಕ್ಷಣಕ್ಕೆ ಹೇಳಲಿಲ್ಲ. ಆದರೆ ವಸುಧೇಂದ್ರ ಮತ್ತು ನಾನು ಇದರ ಕುರಿತಾಗಿ ಕಾರಿನಲ್ಲಿ ಹೋಗುತ್ತಾ ಮಾತನಾಡಿಕೊಂಡೆವು. ‘ನೀವು ಯಾರನ್ನೂ ಅಥವಾ ಯಾವ ಹುಡುಗಿಯೂ ನಿಮ್ಮನ್ನು ಲವ್ ಮಾಡಲಿಲ್ಲವೇ ಸಾರ್’-ಎನ್ನುವ ನನ್ನ ಧಾಷ್ಟ್ರ್ಯದ, ಚೇಷ್ಟೆಯ ಪ್ರಶ್ನೆಗೆ ಕೋಪಗೊಳ್ಳದೇ, ತಾವು ಪ್ರೇಮಿಸಿದ ಸಂಬಂಧಿಕಳನ್ನೇ ಹೆಂಡತಿಯನ್ನಾಗಿ ಪಡೆದುದರ ಬಗ್ಗೆ ಬಹಳ ರೊಮ್ಯಾಂಟಿಕ್ ಆಗಿ ಉತ್ತರಿಸಿದರು. ಪ್ರೀತಿಯಿಂದ ಕಂಠ ಭರ್ತಿ ತಿನ್ನಿಸಿದರು.
ಸಮುದ್ರಕ್ಕೆ ಅಂದು low tide. ‘ಸರ್ ನಿಮ್ಮ ಸಮುದ್ರಕ್ಕೆ ಭರತ ಇಳಿದಿದೆ’ ಎಂದೆ, ನಕ್ಕರು. ಅಂದು ಚಿತ್ತಾಲರು ಕುಗ್ಗಿದ್ದರು ನಿಜ, ವೃದ್ಧಾಪ್ಯದ ಅಸಹಾಯಕತೆ ಅವರನ್ನು ಕಾಡುತ್ತಿತ್ತು, ಆದರೆ ನಮ್ಮನ್ನು ಕಂಡ ಅವರ ಉತ್ಸಾಹ, ಹೊಸ ಕತೆಯನ್ನು ಹೇಳುವ ಉಮೇದು, ಓದುವ ಹುಮ್ಮಸ್ಸು ಇವು ಯಾವುದಕ್ಕೂ ಕಾಲದ ಛಾಪು ಮೂಡಿರಲಿಲ್ಲ.






0 Comments