ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಫ್ದರ್ ಹಶ್ಮಿ: ಪ್ರತಿರೋಧದ ಅಸ್ತ್ರವಾಗಿ ರಂಗಭೂಮಿ

-ಮೇಟಿ ಮಲ್ಲಿಕಾರ್ಜುನ

ಸಮುದಾಯ ಜಾಥಾ 50ರ ನೆನಪಿನ ನಾಟಕೋತ್ಸವದಲ್ಲಿ, ಶಿವಮೊಗ್ಗ ಸಮುದಾಯ ಪ್ರಸ್ತುತಪಡಿಸಿದ “ನೀರೊಳಗಣ ಕಿಚ್ಚು” (ಸಫ್ದರ್ ಹಶ್ಮಿ ಬದುಕು-ಕಥೆ) ಎಂಬ ನಾಟಕವು ದಿನಾಂಕ 08/11/2025ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು. ಸಾಸ್ವೆಹಳ್ಳಿ ಸತೀಶ್ ಮತ್ತು ಐ.ಕೆ. ಬೋಳವಾರು ಅವರ ರಂಗರೂಪಗೊಳಿಸಿದ ಈ ನಾಟಕವನ್ನು ಸಾಸ್ವೆಹಳ್ಳಿ ಅವರೇ ನಿರ್ದೇಶಿಸಿದರು. ಈ ನಾಟಕದ ಬೆಳಕು, ವಸ್ತ್ರವಿನ್ಯಾಸ, ಸಂಗೀತ ಹಾಗೂ ರಂಗಸಜ್ಜಿಕೆ ಮೊದಲಾದವುಗಳ ಜೊತೆಗೆ ಪಾತ್ರಗಳನ್ನು ಹೊಂಗಿರಣದ ಕಲಾವಿದರು ಮತ್ತು ತಂತ್ರಜ್ಞರು ನಿರ್ವಹಿಸಿದರು.

ಈ ನಾಟಕವು “ಸಫ್ದರ್ ಹಶ್ಮಿ” (Safdar Hashmi) ಎಂಬ ಭಾರತೀಯ ಕಮ್ಯುನಿಸ್ಟ್ ನಾಟಕಕಾರ, ನಿರ್ದೇಶಕ ಮತ್ತು ರಂಗಭೂಮಿ ಕಾರ್ಯಕರ್ತರಿಗೆ ಸಂಬಂಧಿಸಿದೆ. ಅವರು ಭಾರತದ ರಾಜಕೀಯ ರಂಗಭೂಮಿ, ವಿಶೇಷವಾಗಿ ಬೀದಿ ನಾಟಕ ರಂಗಭೂಮಿಯಲ್ಲಿ ಮಹತ್ವದ ವ್ಯಕ್ತಿಯಾಗಿದ್ದರು. ಇವರನ್ನು ಸ್ಮರಿಸಿ ಈ ನಾಟಕ ಪ್ರದರ್ಶನಗೊಂಡಿತು. ಸಫ್ದರ್ ಹಾಶ್ಮಿ ಅವರು ಏಪ್ರಿಲ್ 12, 1954ರಂದು ದೆಹಲಿಯಲ್ಲಿ ಹುಸೈನ್ ಹಾಶ್ಮಿ ಮತ್ತು ಕಮರ್ ಆಜದ್ ಹಾಶ್ಮಿ ಅವರಿಗೆ ಜನಿಸಿದರು. ಅವರ ಬಾಲ್ಯವನ್ನು ದೆಹಲಿ ಮತ್ತು ಅಲಿಗಢದಲ್ಲಿ ಕಳೆದರು. ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ನಂತರ ಗಢ್ವಾಲ್, ಕಾಶ್ಮೀರ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಸ್ವಲ್ಪ ಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದರು. ಪ್ರೆಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಆಫೀಸಿನಲ್ಲಿ ಕೆಲಸ ಮಾಡಿದರು. ಆದರೆ ಇವರ ನಿಜವಾದ ಆಸಕ್ತಿ ರಂಗಭೂಮಿ ಮತ್ತು ರಾಜಕೀಯದಲ್ಲಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (CPI(M))ನ ಸದಸ್ಯರಾಗಿ ಸಕ್ರಿಯರಾಗಿದ್ದರು. ಅವರು ಕಲೆಯನ್ನು ಜನರಿಗಾಗಿ, ಸಾಮಾಜಿಕ ಬದಲಾವಣೆಗಾಗಿ ಬಳಸಬೇಕೆಂದು ನಂಬಿದರು. ಕಲೆ ಕೇವಲ ಕಲೆಗಲ್ಲ, ಬದುಕಿಗೆ ಎಂಬ ತತ್ವದಲ್ಲಿ ನಂಬಿಕೆಯನ್ನು ಆಚರಣೆಗೂ ತಂದವರಾಗಿದ್ದರು.

ಹಾಶ್ಮಿ ಅವರು ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. 1973ರಲ್ಲಿ ಸಫ್ದರ್ ಅವರು ಜನ ನಾಟ್ಯ ಮಂಚ (JANAM) ಥಿಯೇಟರ್ ಗುಂಪನ್ನು ಸ್ಥಾಪಿಸಿದರು. ಬೀದಿ ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ ಶ್ರೇಯ ಇವರಿಗೆ ಸಲ್ಲುತ್ತದೆ. ಇದು ಕೇವಲ ರಂಗಭೂಮಿ ಗುಂಪು ಮಾತ್ರವಲ್ಲ, ಬದಲಿಗೆ ಒಂದು ಚಳವಳಿಯಾಗಿ ಹೊರಹೊಮ್ಮಿತು. ಹಾಶ್ಮಿಯವರು ನಾಟಕಕಾರ, ನಿರ್ದೇಶಕ, ನಟ, ಗೀತರಚನಾಕಾರ, ರಂಗರೂಪ ಮತ್ತು ನಾಟಕ ರಚನಾಕಾರರಾಗಿದ್ದರು. ಒಟ್ಟಿನಲ್ಲಿ ಬಹುಮುಖ ಪ್ರತಿಭಾನ್ವಿತರಾಗಿದ್ದರು.

ಕಾರ್ಮಿಕರ ಹಕ್ಕು, ಮಹಿಳಾ ಸಬಲೀಕರಣ, ಜಾತಿ-ವರ್ಗ ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಮಾದರಿಗಳನ್ನು ಜನರಿಗೆ ಮನವರಿಕೆ ಮಾಡುವುದು ಹಾಗೂ ಅಂತಹ ಪ್ರತಿರೋಧದ ಮಾದರಿಗಳು ಸಮುದಾಯಗಳ ಬಿಡುಗಡೆಗೆ ಹೇಗೆ ನೆರವಾಗಬಲ್ಲವು ಎಂಬ ದೃಷ್ಟಿಕೋನವೇ ಇವರ ರಂಗಭೂಮಿ ಹೋರಾಟದ ಮುಖ್ಯ ಮಾದರಿಯಾಗಿದೆ. ‘ಹಲ್ಲಾ ಬೊಲ್’ (Halla Bol) ಕಾರ್ಮಿಕರ ಹೋರಾಟಕ್ಕೆ ಸಂಬಂಧಿಸಿದರೆ, ‘ಔರತ್’ (Aurat) ಮಹಿಳಾ ಸಬಲೀಕರಣವನ್ನು ಕುರಿತಾಗಿದೆ. ‘ಮೇ ದಿವಸ್ ಕಿ ಕಹಾನಿ’ (May Day Ki Kahani) ಕಾರ್ಮಿಕ ದಿನದ ಕಥೆಯಾಗಿದೆ. ‘ಮಶೀನ್’ (Machine) ಕಾರ್ಖಾನೆಯ ಶೋಷಣೆಯ ಬಗೆಗಿನ ನಾಟಕವಾಗಿದೆ. ಯಾವುದೇ ವಿಷಯಕ್ಕೆ ಅನ್ವಯಿಸಿದ ಬೀದಿ ನಾಟಕವಾದರೂ, ಈ ನಾಟಕಗಳ ಶೈಲಿ ಸರಳ, ಜನಪ್ರಿಯ, ಜನಪದ ಹಾಡುಗಳು ಮತ್ತು ದಸ್ತಾಂಗೊಯಿ (ವಾಚಿಕ ಕಥೆ)ಗಳನ್ನು ಬಳಸಿಕೊಂಡು ಹೊರಹೊಮ್ಮುತ್ತಿತ್ತು. ಇದನ್ನೇ ಹಾಶ್ಮಿ “ಜನರ ಸಾಮೂಹಿಕ ದೃಷ್ಟಿಕೋನ” ಎಂದು ಕರೆದರು. ಬೂರ್ಜುವಾಗಳ ವಿರುದ್ಧ ಕಥನಗಳನ್ನು ಕಟ್ಟುವುದೇ ಹಾಶ್ಮಿಯ ಗುರಿಯಾಗಿತ್ತು. 

ಜನವರಿ 1, 1989ರಂದು ದೆಹಲಿಯ ಜ್ಹಂಡಾಪುರದಲ್ಲಿ (ಉತ್ತರ ಪ್ರದೇಶ) JANAM ಗುಂಪು “ಹಲ್ಲಾ ಬೊಲ್” ನಾಟಕವನ್ನು CITU (ಕೇಂದ್ರೀಯ ಕಾರ್ಮಿಕ ಒಕ್ಕೂಟ)ದ ಕೆಲಸಗಾರರ ಬೆಂಬಲಕ್ಕಾಗಿ ಪ್ರದರ್ಶಿಸುತ್ತಿತ್ತು. ರಾಜಕೀಯ ವಿರೋಧಿಗಳು ದಾಳಿ ಮಾಡಿ, ಸಫ್ದರ್ ಅವರ ಮೇಲೆ ಹಲ್ಲೆ ನಡೆಸಿದರು. ಹೀಗಾಗಿ ಜನವರಿ 2ರಂದು 34 ವರ್ಷ ವಯಸ್ಸಿನಲ್ಲಿ ಇವರು ಮರಣಹೊಂದಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರ ಪತ್ನಿ ಮೊಲೋಯಶ್ರೀ ಹಾಶ್ಮಿ ನಾಲ್ಕು ದಿನಗಳಲ್ಲಿ ಅದೇ ಸ್ಥಳದಲ್ಲಿ ನಾಟಕವನ್ನು ಪೂರ್ಣಗೊಳಿಸಿ ಪ್ರತಿರೋಧದ ಸಂದೇಶ ನೀಡಿದರು. ಭಾರತದ ಬೀದಿ ನಾಟಕ ರಂಗಭೂಮಿಯ ಇತಿಹಾಸದಲ್ಲಿ ಇದು ಅತ್ಯಂತ ಪ್ರಮುಖ ಪ್ರದರ್ಶನವಾಗಿದೆ.

“ಸಮುದಾಯ” (ಕರ್ನಾಟಕದ ಪ್ರಗತಿಪರ ಥಿಯೇಟರ್ ಗುಂಪು) ತನ್ನ 50ನೇ ವರ್ಷದ ಉತ್ಸವದಲ್ಲಿ “ನೀರೊಳಗಣ ಕಿಚ್ಚು” ನಾಟಕವನ್ನು ಪ್ರದರ್ಶಿಸಿತು. ಸಫ್ದರ್ ಹಾಶ್ಮಿಯ ಜೀವನ ಮತ್ತು ಹೋರಾಟದ ವಸ್ತುವನ್ನಾಧರಿಸಿದ ಈ ನಾಟಕವು ಅವರ ಮೇಲಿನ ದಾಳಿ ಮತ್ತು ಪ್ರತಿರೋಧದ ಕಥೆಯನ್ನು ಚಿತ್ರಿಸುತ್ತದೆ. ಶೋಷಣೆಯ ವಿರುದ್ಧ ಧ್ವನಿ ಎತ್ತಿ, ಕಲೆಯನ್ನು ಅಧಿಕಾರಕ್ಕಾಗಿ ಅಲ್ಲ, ಜನರಿಗಾಗಿ ಬಳಸಿ ಎಂಬ ಸಂದೇಶವನ್ನು ನೀಡಿರುವುದು ಗಮನಾರ್ಹ. ಸಫ್ದರ್ ಹಾಶ್ಮಿ ಅವರ ಜೀವನವು ರಂಗಭೂಮಿಯನ್ನು ಪ್ರತಿರೋಧದ ಆಯುಧವನ್ನಾಗಿ ಮಾಡಿದ ಪ್ರಕ್ರಿಯೆಗೆ ಒಳ್ಳೆಯ ಉದಾಹರಣೆ.

ಹಾಶ್ಮಿಯವರ ಬದುಕಿನ ಎಲ್ಲ ವಿದ್ಯಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ಕ್ರೂಢೀಕರಿಸಿ ‘ನೀರೊಳಗಣ ಕಿಚ್ಚು’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಹಾಶ್ಮಿ ಹೋರಾಟದ ತಿರುಳು ಏನು? ಅವರ ಹೋರಾಟದ ಬಹುಮುಖ್ಯ ಕಾಳಜಿ ಏನಾಗಿತ್ತು? ಜನಸಮುದಾಯಗಳ ಬದುಕಿನ ಪ್ರಶ್ನೆಗಳನ್ನು ತಮ್ಮ ಹೋರಾಟದ ಪ್ರಣಾಲಿಕೆಯನ್ನಾಗಿ ಮಾಡಿಕೊಂಡು, ಹಾಶ್ಮಿಯವರು ರೂಪಿಸಿದ ಪ್ರತಿರೋಧದ ಕಥನ ಎಂತಹದು? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸತೀಶ್ ಸಾಸ್ವೆಹಳ್ಳಿಯವರು ಅತ್ಯಂತ ಪ್ರಾತಿನಿಧಿಕವಾಗಿ ಈ ನಾಟಕದಲ್ಲಿ ಮೇಳೈಸಿದ್ದಾರೆ. ಇದು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶನದಲ್ಲಿ ಅನಾವರಣಗೊಂಡಿತು. ಪ್ರಸ್ತುತ ರಾಜಕಾರಣ, ಪ್ರಭುತ್ವ, ಜಮೀನದಾರ ಧೋರಣೆಗಳ ಮೂಲಕ ನೆಲೆಗೊಂಡಿರುವ ಶೋಷಣೆಯ ಮಾದರಿ ಮತ್ತು ವಿನ್ಯಾಸಗಳನ್ನು ಸೂಕ್ಷ್ಮವಾದ ವಿಡಂಬನಾತ್ಮಕ ನಟನೆಯಲ್ಲಿ ಬಹಳ ನಾಜೂಕಾಗಿ ಪ್ರದರ್ಶಿಸಲಾಯಿತು. ಪ್ರಭುತ್ವದ ದೋಷಗಳು ಜನರ ಬದುಕಿನ ಜೊತೆಗೆ ಹೇಗೆ ಆಟವಾಡುತ್ತವೆ ಎಂಬುದು ಈ ನಾಟಕ ಪ್ರದರ್ಶನದಲ್ಲಿ ಅನಾವರಣಗೊಂಡಿತು. ಯಜಮಾನನ ತಣ್ಣನೆಯ ಕ್ರೌರ್ಯದ ಪರಿಣಾಮ, ಗುಲಾಮನ ಬದುಕು ಹಾಗೂ ಗುಲಾಮನ ಪ್ರತಿರೋಧದ ನಿಲುವುಗಳು, ಈ ಹೊತ್ತಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗುವ ಹಾಗೂ ಅನುಸಂಧಾನ ಮಾಡುವ ವಿಭಿನ್ನ ತಂತ್ರಗಾರಿಕೆಯನ್ನು ಬಾಬಾ, ಮಂತ್ರಗಾರಿಕೆ ಹಾಗೂ ಅಧಿಕಾರದ ಮುಖೇನ ಪಾತ್ರಧಾರಿಗಳು ಅಭಿನಯಿಸಿದ ಬಗೆಯೇ ಹಾಶ್ಮಿಯ ಬದುಕಿನ ಸಾರ್ಥಕತೆಯನ್ನು ಮಂಡಿಸುತ್ತಿತ್ತು. ಯಜಮಾನ ಮತ್ತು ಗುಲಾಮ ಪಾತ್ರಧಾರಿಗಳ ದೇಹಭಾಷೆ, ಅಭಿನಯ, ಡೈಲಾಗ್ ಡೆಲಿವರಿ ಅತ್ಯಂತ ವೃತ್ತಿಪರವಾಗಿತ್ತು ಮತ್ತು ಪರಿಣಾಮಕಾರಿಯಾಗಿ ಮೂಡಿಬಂದಿತು.

ರಂಗಸ್ಥಳದ ಬಳಕೆ, ದೀಪಗಳು (ಲೈಟಿಂಗ್), ಧ್ವನಿ (ಸೌಂಡ್), ಸಂಗೀತ, ವೇಷಭೂಷಣ, ರಂಗಸಜ್ಜಿಕೆ ಇವೆಲ್ಲವನ್ನೂ ಅತ್ಯುತ್ತಮವಾಗಿ ಬಳಸಿಕೊಂಡಿದ್ದು ವಿಶೇಷವಾಗಿತ್ತು. ಬಹುತೇಕ ಪಾತ್ರಧಾರಿಗಳ ಧ್ವನಿ, ದೇಹಭಾಷೆ, ಸಂಭಾಷಣೆಯ ಲಯ, ಭಾವನೆಗಳ ಪ್ರಕಟಣೆ ಸಮಂಜಸವಾಗಿ ಮೂಡಿಬಂದಿತು. ಉದಾಹರಣೆಗೆ, ಪ್ರಧಾನ ಪಾತ್ರದಲ್ಲಿ ನಟಿಸಿದ ಗುಲಾಮನ ದುಃಖದ ಭಾವನೆಯನ್ನು ತೋರಿಸುವ ರೀತಿ ಹೃದಯಸ್ಪರ್ಶಿಯಾಗಿತ್ತು; ಯಜಮಾನನ ದರ್ಪದ ಭಾವನೆ ಹಾಗೂ ಕ್ರೌರ್ಯದ ನಡೆಗಳನ್ನು ಆ ಪಾತ್ರಧಾರಿ ಅತ್ಯಂತ ತೀಕ್ಷ್ಣವಾಗಿ ಅಭಿನಯಿಸಿದ್ದು ವಿಶೇಷವಾಗಿತ್ತು. ನಾಟಕವು ಯಾವ ಸಾಮಾಜಿಕ, ರಾಜಕೀಯ, ವೈಯಕ್ತಿಕ ಸಂದೇಶವನ್ನು ಕೊಡುತ್ತದೆ ಎಂಬುದು ಪ್ರೇಕ್ಷಕರಿಗೆ ಅರ್ಥವಾಗುವ ವಿಧಾನಗಳು ನಟರ ಅಭಿನಯದಲ್ಲಿ ಹೊರಹೊಮ್ಮಿದವು. ಸಂಭಾಷಣೆಗಳ ಲಯ, ಭಾವ ಹಾಗೂ ತೀವ್ರತೆ ಹದವಾಗಿ ನೆಲೆಗೊಂಡಿತ್ತು ಮತ್ತು ಸಮಂಜಸವಾಗಿತ್ತು. ನಾಟಕಕ್ಕೆ ಬಳಸಿದ ಹೋರಾಟದ ಹಾಡುಗಳು ಮತ್ತು ಪ್ರಾಸಂಗಿಕವಾಗಿ ಬಳಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉಲ್ಲೇಖಗಳು ಪ್ರಸ್ತುತವಾಗಿದ್ದವು ಮತ್ತು ಇಂದಿನ ರಾಜಕೀಯ ಹಾಗೂ ಸಾಂಸ್ಕೃತಿಕ ಪರಿಸ್ಥಿತಿಯನ್ನು ವ್ಯಾಖ್ಯಾನಿಸಲು ಒತ್ತಾಸೆಯಾಗಿದ್ದವು.

ಹಾಶ್ಮಿಯವರ ಹೋರಾಟದ ಬಹುಮುಖ್ಯ ನಿಲುವು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿತ್ತು. ಆದರೆ ಇಡೀ ನಾಟಕದ ಉದ್ದಕ್ಕೂ ಮಹಿಳಾ ಪಾತ್ರಗಳ ಮೊಬಿಲಿಟಿ ಮತ್ತು ವಿಸಿಬಿಲಿಟಿ ಅತ್ಯಂತ ಕಡಿಮೆ ಅವಕಾಶವನ್ನು ಕಲ್ಪಿಸಲಾಗಿದೆ. ಮಹಿಳಾ ಸಬಲೀಕರಣದ ಪ್ರಶ್ನೆಗಳು ಹಾಗೂ ಶೋಷಣೆಗೊಳಗಾದ ಸಮೂಹಗಳ ಬಿಡುಗಡೆಯ ಆಯಾಮಗಳನ್ನು ಇನ್ನಷ್ಟು ಮುತುವರ್ಜಿ ವಹಿಸಿ ನಿರೂಪಿಸುವ ಅಗತ್ಯವಿತ್ತು. ಲೈಟಿಂಗ್ ನಿರ್ವಹಣೆಯಲ್ಲಿ ಚಿಕ್ಕಪುಟ್ಟ ದೋಷಗಳಿದ್ದವು; ಉದಾಹರಣೆಗೆ, ದೀಪಗಳ ಬಳಕೆಯ ಮೂಲಕ ಭಾವನಾತ್ಮಕ ದೃಶ್ಯಗಳನ್ನು ಇನ್ನಷ್ಟು ಆಳಗೊಳಿಸುವ ಅಗತ್ಯವಿತ್ತು. ಕೆಲವು ಭಾವನಾತ್ಮಕ ದೃಶ್ಯಗಳಲ್ಲಿ ಲೈಟಿಂಗ್ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿಲ್ಲ.

ಒಟ್ಟಿನಲ್ಲಿ, ಪ್ರೇಕ್ಷಕರ ಭಾವಲೋಕದ ಸೂಚಕಗಳಾದ ಚಪ್ಪಾಳೆ, ನಗು, ಮೌನ, ಕಣ್ಣೀರು ಎಲ್ಲವೂ ಈ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಹೊರಹೊಮ್ಮಿರುವುದು ವಿಶೇಷವಾಗಿತ್ತು.

‍ಲೇಖಕರು Admin

31 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading