–ಸದಾಶಿವ ಸೊರಟೂರು
*
ಅಮ್ಮ
ಇವತ್ತು ತುಸು ಹೆಚ್ಚೇ ಸುಸ್ತಾಗಿದೆ. ನನ್ನ ಜೊತೆಗಾರನಿಗೆ ತೀವ್ರ ಜ್ವರವಿತ್ತು. ಅವನಿಗೆ ಎರಡು ಮಾತ್ರೆ ನುಂಗಿಸಿ ಇಲ್ಲೆ ತರಕಾರಿ ತುಂಬುವ ಕೋಣೆಯಲ್ಲಿ ಮಲಗಿಸಿ ಅವನ ಕೆಲಸವನ್ನೂ ನಾನೇ ಮಾಡಿದೆ. ಸರ್ವರ್ ಕೆಲಸ ಮಾಡುವವನು ಕ್ಲೀನ್ ಮಾಡುವಂತಿಲ್ಲ. ಎಂಜಲು ಒರೆಸುವ ಕೈ, ತಿನಿಸು ಕೊಡುತ್ತದೆ ಎಂದು ಗಿರಾಕಿಗಳು ಮತ್ತೊಮ್ಮೆ ಈ ಹೋಟೆಲ್ ಕಡೆ ಮುಖ ಮಾಡುವುದಿಲ್ಲ ಎಂದು ಯಜಮಾನರು ಇದನ್ನು ಗಂಭೀರವಾಗಿ ಪರಿಗಣಿಸಿತ್ತಾರೆ. ಅವನು ಸರ್ವರ್ ಮಾಡುವ ಹುಡುಗ, ನಾನು ಕ್ಲೀನ್ ಮಾಡುವವನು. ಇನ್ನೊಬ್ಬ ಕ್ಲೀನ್ ಮಾಡುವವನಿಗೆ ಸರ್ವರ್ ಗೆ ಅವಕಾಶ ಕೊಟ್ಟು ಇಬ್ಬರು ಕ್ಲೀನ್ ಮಾಡುವ ಕೆಲಸ ನಾನೇ ಮಾಡಿದೆ. ನಾಳೆ ಅವನಿಗೂ ಸರ್ವರ್ ಮಾಡುವ ಕೆಲಸಕ್ಕೆ ಬಡ್ತಿಯಾದರೂ ಸಿಗಲಿ. ನೂರು ರೂಪಾಯಿ ಹೆಚ್ಚು ಸಿಕ್ಕರೆ ಅವನ ತಂಗಿ ಇನ್ನಷ್ಟು ಖುಷಿ ಪಟ್ಟಾಳು.
ಕಾಲುಗಳು ಸೆಳೆಯುತ್ತಿವೆ. ಹಿಮ್ಮಡಿಗಳಲಿ ಅಸಾಧಾರಣ ನೋವು. ಬಹುಶಃ ಕಣ್ಣು ಮುಚ್ಚಿದರೆ ಈ ಕ್ಷಣಕ್ಕೆ ನಿದ್ದೆ ನನ್ನನ್ನು ತಿಂದು ಹಾಕಬಹುದು. ನನ್ನ ಗೆಳೆಯರು ಎರಡು ಬಾಟಲಿಗಳಲ್ಲಿ ಮದ್ಯ ತಂದು ಇಟ್ಟುಕೊಂಡು ಕೂತಿದ್ದಾರೆ. ಇನ್ನೊಬ್ಬ ಜ್ವರ ಹಿಡಿದು ಮಲಗಿದ್ದಾನೆ. ಅವರಿಗೆ ಇಂದು ಕುಡಿಯುವ ಮನಸ್ಸಿಲ್ಲ. ಬಹುಶಃ ಅವರು ಇಂದು ರಾತ್ರಿ ಕುಡಿಯುವುದಿಲ್ಲ.
ಅವರು ನನ್ನನ್ನು ಕರೆಯುವುದಿಲ್ಲ. ನನ್ನ ಬಗ್ಗೆ ಅವರಿಗೆ ತಿಳಿದಿದೆ. ನನಗೆ ನಿನ್ನನ್ನು ಹಂತ ಹಂತವಾಗಿ ನನ್ನೊಳಗೆ ಕೊಂದುಕೊಳ್ಳುವುದು ಇಷ್ಟವಿಲ್ಲ. ಒಮ್ಮೆ ನಾನು ಸಿಗರೇಟ್ ಹಚ್ಚಿದ ದಿನ ನೀನು ಕನಸಲ್ಲಿ ಬಂದಿದ್ದೆ. ಯಾವುದೊ ಹೊಗೆಯಲ್ಲಿ ನೀನು ಸಿಕ್ಕಿಕೊಂಡು ಒದ್ದಾಡುತ್ತಿದ್ದೆ. ನಾನು ನಿನ್ನನ್ನು ಉಳಿಸಲು ಪ್ರಯತ್ನಿಸುತ್ತಿದ್ದೆ. ನೀನನ್ನು ನನ್ನೊಳಗಿನ ಹೊಗೆಯ ಗೂಡಿನಲ್ಲಿ ಕೂಡಿ ಹಾಕಿ ಕೊಲ್ಲುವುದಾದರೂ ಹೇಗೆ?
ರಾತ್ರಿ ಇಡೀ ನಮ್ಮ ಮೇಲೆ ಇಲಿಗಳು ಓಡಾಡುತ್ತವೆ. ಅವು ನಮ್ಮ ಬಂಧುಗಳು. ಸೊಳ್ಳೆ ಗುಂಯ್ ಗುಡುತ್ತವೆ. ಅವು ಅಳುತ್ತವೊ ನಗುತ್ತವೊ ನಮಗೆ ತಿಳಿಯದು. ನಾವು ಬೇಸರದಲ್ಲಿದ್ದಾಗ ಅವುಗಳ ದನಿ ಅತ್ತಂತೆ, ನಾವು ಖುಷಿಯಲ್ಲಿದ್ದಾಗ ಅವುಗಳ ದನಿ ನಕ್ಕಂತೆ ಕೇಳಿಸುತ್ತದೆ. ನಮ್ಮೊಂದಿಗೆ ಯಾರೊ ಇದಾರೆ ಅನ್ನುವ ಭಾವ ನಮಗಿದೆ. ಸೊಳ್ಳೆ ಕಚ್ಚಿದರೂ ನಮಗೆ ಏನೂ ಆಗದೆ ಇರುವುದು ಸೊಳ್ಳೆಗಳ ಕೃಪಕಟಾಕ್ಷವೂ, ನಮಗೆ ಯಾರೂ ಇಲ್ಲ ನೋಡಿಕೊಳ್ಳಲು ಎನ್ನುವ ವಿಧಿಯ ಕರುಣೆಯೊ.. ನಮಗೆ ಅದರ ಬಗ್ಗೆ ಅಂದಾಜಿಲ್ಲ.
ಹೋಟೆಲ್ ಯಜಮಾನ ಒಳ್ಳೆಯವನ್ನಲ್ಲ. ಕಳೆದವಾರ ಟೇಬಲ್ ಕ್ಲೀನ್ ಮಾಡುವಾಗ ಆದ ಸಣ್ಣ ಎಡವಟ್ಟಿಗೆ ಅಂದೇ ಸಂಜೆ ನನ್ನನ್ನು ರೂಮಿಗೆ ಹಾಕಿಕೊಂಡು ಹೊಡೆದ. ಮೊಣಕೈಯಲ್ಲಿ ರಕ್ತ ಹೆಪ್ಪುಗಟ್ಟಿದೆ. ನಾನು ಹೋಟೆಲ್ ಬಿಟ್ಟು ಹೊರಡಲು ಯೋಚಿಸಿದ್ದೆ. ಎಲ್ಲಾ ಕಡೆ ಅದೇ ಜನರೇ ಇರುವಾಗ ತಪ್ಪಿಸಿಕೊಂಡು ಓಡುವುದು ಹೇಗೆ? ಒಡೆಯುವ ಕೈಗಳು, ಶೋಷಿಸುವ ಕೈಗಳು ಬೇರೆ ಆದರೆ ನೋವು ಒಂದೇ ಅಲ್ವ?
ನಮ್ಮ ಹೋಟೆಲ್ ಗೆ ಹೊಸದಾಗಿ ಒಬ್ಬ ಹುಡುಗ ಬಂದಿದ್ದಾನೆ. ಅವನಿಗೂ ಅಮ್ಮ ಇಲ್ಲವಂತೆ. ಅಮ್ಮ ಇಲ್ಲದವರೇ ಜಗತ್ತಿನಲ್ಲಿ ನಿಜವಾದ ಅನಾಥರು ಅನಿಸುತ್ತೆ. ಅವರ ಅಪ್ಪ ಇನ್ನೊಂದು ಮದುವೆ ಆದರಂತೆ. ಅವನಿಗೆ ಅಮ್ಮನ ಬದಲು ಚಿಕ್ಕಮ್ಮ ಇದಾರಂತೆ. ಒಂದಿನ ಅಪ್ಪ ಮತ್ತು ಚಿಕ್ಕಪ್ಪ ಸೇರಿ ಇವನನ್ನು ಕೂಡಿ ಹಾಕಿ ಹೊಡೆದರಂತೆ. ನನ್ನ ಅಪ್ಪ ನೆನಪಾದರು. ನಾನು ಅವರನ್ನೂ ನೋಡಿಯೇ ಇಲ್ಲ. ಅವನನ್ನು ಅವರ ಅಪ್ಪ ಹೊಡೆದದ್ದು ನೋಡಿ ಅಪ್ಪ ಎಂದರೆ ಸದಾ ಹೊಡೆಯುವ ಪಾತ್ರವೇ? ಚಿಕ್ಕಮ್ಮ ಎನ್ನವವರ ಮನಸಿನಲ್ಲಿ ಅಮ್ಮನ ಗುಣ ಎಂಬುದು ತುಂಬಾ ಚಿಕ್ಕದಾಗಿ ಇರುತ್ತದೆಯೇ? ಚಿಕ್ಕ ಅಮ್ಮನವರ ಯೋಚನೆಗಳು ಚಿಕ್ಕವೇ? ನಾನು ಎಂದೂ ನೋಡದ ಆ ನನ್ನ ಅಪ್ಪನ ಪಾತ್ರ ಏನಾಯ್ತು? ನಿನ್ನ ಅರೆಕ್ಷಣದ ಗಂಡ ನಿನ್ನನ್ನು ಬದುಕಿನ ಯಾವ ತಿರುವಿನಲ್ಲಿ ನಿನ್ನನ್ನು ನೂಕಿ ಹೋದರು?
ಹೋಟೆಲ್ ನಲ್ಲಿ ಅಪ್ಪ ಅಮ್ಮಂದಿರೊಂದಿಗೆ ಮಕ್ಕಳು ಊಟಕ್ಕೆ ಬಂದಾಗ ನೀನು ತುಂಬಾ ನೆನಪಾಗುತ್ತೀಯ. ಒಂದೇ ಜೀವನಕ್ಕೆ ಎಷ್ಟೊಂದು ಬಣ್ಣಗಳು ಅಲ್ವ ಅಮ್ಮ? ಅವರದೇ ವಯಸ್ಸಿನ ನಾನು ಲೋಟ ತೊಳೀತೀನಿ ಅವರು ಅಮ್ಮನ ಪಕ್ಕ ಕೂತು ಇಷ್ಟದ ತಿಂಡಿ ಸವಿಯುತ್ತಾರೆ. ಅವರಿಗೆ ಅವರ ಅಪ್ಪ ದುಡ್ಡು ಕೊಡುತ್ತಾರೆ. ಇಲ್ಲಿ ನಾನು ದುಡ್ಡಿಗಾಗಿ ದುಡಿಯುತ್ತೀನಿ. ಬದುಕಿಗೆ ಯಾಕಮ್ಮ ಇಷ್ಟೊಂದು ವೈರುಧ್ಯಗಳು?
ದುಡ್ಡು ಉಳಿಸಿದ್ದೀನಿ ಒಂದಷ್ಟು. ನಿನ್ನೆ ನನ್ನ ಗೆಳೆಯನೊಬ್ಬ ಅವರ ಅಮ್ಮನಿಗೆ ಒಂದು ಸೀರೆ ಕೊಂಡ. ನನಗೂ ಕೊಳ್ಳುವ ಇಷ್ಟ ಆಗಿ ನಾನೂ ಕೊಂಡೆ. ಹಸಿರು ಬಣ್ಣದ ಅದಕ್ಕೆ ಬಂಗಾರದ ಬಣ್ಣದ ಅಂಚಿದೆ. ಅಂಗಡಿಯಲ್ಲಿನ ಹುಡುಗಿಯೇ ‘ನಿಮ್ಮ ಅಮ್ಮ ಯಾವ ಬಣ್ಣ? ಎಷ್ಟು ಹೈಟ್ ಇದಾರೆ? ಅಂತ ಕೇಳಿದರು. ನಾನು ಸುಮ್ಮನೆ ಇದ್ದೆ. ಅವರೇ ಅಂದಾಜಿಸಿ ಈ ಸೀರೆ ಕೊಟ್ಟರು. ನಾನು ಖುಷಿಯಿಂದಲೇ ಕೊಂಡು ತಂದೆ. ಹೋಟೆಲ್ ಗೆ ತಂದು ಎಷ್ಟೊ ಹೊತ್ತಿನ ಬಳಿಕ ಸ್ನೇಹಿತ ‘ಯಾಕೆ ತಂದೆ? ಯಾರಿಗೆ ತಂದೆ?’ ಅಂದಾಗಲೇ ಗೊತ್ತಾಗಿದ್ದೆ ನಿನಗದನು ಕೊಡಲಾಗುವುದಿಲ್ಲ ಎಂದು.
ಅವರ ಅಮ್ಮನಿಗೆ ಹಬ್ಬದ ಸೀರೆ ತಂದ ಆ ನನ್ನ ಗೆಳೆಯ ತುಂಬಾ ಖುಷಿಯಲ್ಲಿದ್ದಾನೆ. ಊರಿಗೆ ಹೋಗಲು ಇನ್ನೂ ವಾರವಿದೆ ಆಗಲೇ ಬಟ್ಟೆ ಜೋಡಿಸಿಕೊಂಡು ಇಟ್ಟಿದಾನೆ. ಅವರೂರಿನಲ್ಲಿ ಹಬ್ಬವಂತೆ. ಸೀರೆ ನೋಡಿ ಅವರ ಅಮ್ಮ ಅದೆಷ್ಟು ಖುಷಿಪಡಬಹುದೆಂದು ಯೋಚಿಸುತ್ತೇನೆ. ಊರಿಗೆ ಹೊರಡಲು ನಾನು ಬಟ್ಟೆ ಜೋಡಿಸಿಕೊಳ್ಳಬೇಕು ಅನಿಸಿದೆ. ಸೀರೆ ನಿನಗಾಗಿ ತಂದು ಅದನ್ನು ಸುಮ್ಮನೆ ಇಟ್ಟುಕೊಳ್ಳುವುದೆ ಹೇಗೆ? ಬ್ಯಾಗ್ ತುಂಬಿಕೊಂಡು ಸೀರೆ ಹಿಡಿದುಕೊಂಡು ನಾನು ಯಾವ ಬಸ್ಸು ಹತ್ತಲಿ? ಯಾವ ಊರಿನ ಟಿಕೇಟ್ ಕೊಳ್ಳಲಿ? ಹೋಗಲು ಒಂದು ಊರು; ನಡೆಸಲು ಒಂದು ಕಿರು ಬೆರಳು ಇಲ್ಲದ ಮೇಲೆ ಯಾಕಾದರೂ ಬದುಕಬೇಕು ಅನಿಸುತ್ತೆ ಅಮ್ಮ. ಆದರೆ ಈ ದೇಹ ನಿನ್ನದು, ಪ್ರಾಣವೂ ನಿನ್ನದು.. ನನ್ನದೇನು ಇಲ್ಲ. ನನ್ನದಲ್ಲದ ಮೇಲೆ ಅದರ ಯಾವ ಅಧಿಕಾರವೂ ನನಗಿಲ್ಲ. ನಾನು ನನ್ನನ್ನು ಕೊಂದು ಕೊಂಡರೆ ಅದು ನಿನ್ನನ್ನು ಕೊಂದಂತೆಯೇ! ಹೋಗಲಿ, ನೀನು ಇರುವ ಜಾಗಕ್ಕೆ ಬರುವ ದಾರಿ ಯಾವುದು? ಅಮ್ಮನ ಮಡಿಲು ಸೇರಲು ನನ್ನ ಪಾಲಿಗೆ ಒಂದು ವಿಳಾಸವೇ ಇಲ್ಲ. ನಾನು ವಿಳಾಸವೇ ಇರದ ಬರೀ ಪಿನಕೋಡ್ ‘ಇಂದ’ ಮತ್ತು ‘ಗೆ..’ ಇಲ್ಲದೆ ಗೋಡನ್ ನಲ್ಲಿ ಉಳಿದು ಹೋದ ಅನಾಮಿಕ ಪತ್ರ.
ತಂದಿಟ್ಟುಕೊಂಡಿರುವ ಸೀರೆಯ ಬಗ್ಗೆ ನನಗೆ ಕಾಳಜಿಯಾಗುತ್ತಿದೆ. ನಿನಗಾಗಿಯೇ ಕೊಂಡೆ. ಕೊಂಡ ಎಷ್ಟೊ ಹೊತ್ತಿನ ಬಳಿಕ ನಿನಗೆ ಕೊಡಲಾಗದು ಎನಿಸಿತು. ನೋಡು ಸೀರೆ ಕೊಳ್ಳುವಾಗ ನೀನು ಇದೆಯಾ ಎಂಬ ಭಾವ ಇತ್ತಲ್ಲ ಅಷ್ಟು ಸಾಕು..
ಅಮ್ಮಗೆಂದು ತಂದ ಸೀರೆ ಅಮ್ಮಂಗೆ ಸೇರಬೇಕು. ನೀನು ಯೋಚಿಸಬೇಡ.. ಇಲ್ಲೆ ಬಸ್ಸು ನಿಲ್ದಾಣದಲ್ಲಿ ಮಲಗಿ ರಾತ್ರಿ ಕಳೆಯುವ ಒಬ್ಬ ತಾಯಿಯಿದ್ದಾಳೆ. ಯಾರಿಗೆ ಗೊತ್ತು..ಇಂತಹ ಯಾವ ನಿಲ್ದಾಣದಲ್ಲಿ ನೀ ಇರುವೆಯೊ?
ನಾಳೆ ಬೆಳಗ್ಗೆ ಅಮ್ಮನಿಗೆ ಸೀರೆ ತಲುಪುತ್ತದೆ. ಅಮ್ಮನ ವಿಳಾಸವಿಲ್ಲದ ಮಕ್ಕಳಿಗೆ; ಮಕ್ಕಳ ವಿಳಾಸವಿಲ್ಲದ ಅಮ್ಮಂದಿರಿಗೆ ಒಂದು ತುಂಡು ಪ್ರೀತಿಯ ಬಟ್ಟೆಯಾದರೂ ಸಿಗಲಿ..
ಅಲ್ವ?
ಮತ್ತೊಮ್ಮೆ ಬರೆಯುವೆ ಅಮ್ಮ..
ಇತಿ
ಮಗ..?






0 Comments