
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
41
ಅವಳು ಫೋನಿನಲ್ಲಿ ಮಾತಾಡುತ್ತಿದ್ದಳು. ಮಾತು ಸಾಗಿಯೇ ಇತ್ತು. ಸುಮಾರು ಐದು ನಿಮಿಷಗಳು ಕಳೆದಿರಬಹುದು. ಅವಳ ಮೊಬೈಲ್‌ಗೆ ಇನ್ನೊಂದು ಕರೆ ಬಂದು, ಒಂದೆರಡು ಸೆಕೆಂಡ್ ಕಾದು ಹೊರಟು ಹೊಯಿತು. ಅತ್ತ ಕಡೆ ಅವನಿಗೆ ‘ನೀವು ಕರೆ ಮಾಡಿರುವ ಚಂದಾದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ’ ಎಂದು ಹೇಳುತ್ತಿತ್ತು. ಅವಳು ತಕ್ಷಣ ಮೊಬೈಲ್ ಸ್ಕ್ರೀನ್ ಗಮನಿಸಿದಳು. ಓಹ್ ಅವನ ಕರೆ..
ನೋಡೋಣ ಇಂದು ಪರೀಕ್ಷೆ ಮಾಡಿಯೇ ಬಿಡೋಣ ಎನ್ನುತ್ತಾ ಮಾತು ಮುಂದುವರೆಸಿದಳು. ಸತತ ಒಂದು ಗಂಟೆ ಮಾತಾಡಿದಳು. ಮಾತು ಸಾಕಾಗಿ ಫೋನಿಟ್ಟಳು. ಅವನ ಕರೆ ಮತ್ತೆ ಬರಲಿಲ್ಲ. ಫೋನಿಟ್ಟು ಕೂತ ಮೇಲೆಯೂ ಬರಲಿಲ್ಲ… ಒಂದು ಕ್ಷಣ ಖೇದವೆನಿಸಿತು ಅವಳಿಗೆ.
ಅವನು ಕರೆ ಮಾಡಬೇಕಿತ್ತು… ತನ್ನಷ್ಟಕ್ಕೆ ತಾನೇ ಹತ್ತಾರು ಬಾರಿ ಹೇಳಿಕೊಂಡಳು. ಆದರೆ ಅವನು ಮಾಡಿರಲಿಲ್ಲ. ಮಾಡುವಂತೆಯೂ ಕಾಣಿಸಲಿಲ್ಲ. ಇವಳೇ ಅವನಿಗೆ ಕರೆ ಮಾಡಿ ಕಿವಿಗಿಟ್ಟುಕೊಂಡಳು.
‘ಹಾಯ್… ಏನೇ ಎಲ್ಲಿದೀಯಾ?’ ಅವನ ದನಿ ತುಂಬಾ ಜೋಶಿನಲ್ಲಿತ್ತು…
‘ಯಾರೊಂದಿಗೆ ಮಾತಾಡುತ್ತಿದ್ದೆ ನೀನು..?’ ಇಂಥದೊಂದು ಮಾತು ಬೇಕಿತ್ತು ಅವಳಿಗೆ… ಇದುವರೆಗೂ ತಾನು ಮಾತಾಡಿದ್ದು ಅವನಿಗೇನು ಅನಿಸಿಯೇ ಇಲ್ವ… ನಮ್ಮ ಮೇಲಿರುವ ಇನ್ನೊಬ್ಬರ ಚಡಪಡಿಕೆ, ತವಕ, ತಲ್ಲಣಗಳಿಂದ ನಮ್ಮ ಪ್ರೀತಿ ಅಳೆದುಕೊಳ್ಳಬೇಕು, ನಮ್ಮ ಎದೆಯನ್ನು ಉಬ್ಬಿಸಿಕೊಳ್ಳಬೇಕು, ತನ್ನ ಪರವಾಗಿ ತುಡಿಯುವ ಸಂಕಟವನ್ನು ಸಂಭ್ರಮಿಸಬೇಕು ಅನ್ನುವ ಅಗ್ದಿ ಸಹಜ ಗುಣದ ಹುಡುಗಿ ಅವಳು.
ಇಂತಹ ಸಹಜ ಗುಣ ಅವನಿಗೇಕೆ ಇಲ್ಲ? ಅವನಿಗೆ ತನ್ನ ಕಡೆ ಪ್ರೀತಿಯೆ ಇಲ್ಲವೇ… ಎಂದೂ ಕೂಡ ಅವಳಿಗೆ ಹಾಗೆ ಅನಿಸಿಲ್ಲ… ಅವನ ಪ್ರೀತಿ ನೆನೆದರೆ ಇವಳ ಮನಸು ಅರಳುತ್ತದೆ…
ಎಂತಹ ಸಂದರ್ಭದಲ್ಲಿದ್ದರೂ ಕರೆ ತೆಗೆಯುತ್ತಾನೆ. ಕರೆಗಾಗಿ ಕಾದು ಕೂತವನಂತೆ ಇರುತ್ತಾನೆ. ಅದು ಕಾದಿರುವುದಾ…? ಕಾಯದೆ ಸುಮ್ಮನೆ ಇದ್ದದ್ದಾ? ಅವಳಿಗೆ ಅದು ಗೊತ್ತಾಗುವುದಿಲ್ಲ. ಎಂತಹ ಮುಖ್ಯ ಕಾಲ್ನಲ್ಲಿದ್ರೂ ಕಾಲ್ ಕತ್ತರಿಸಿ ಇವಳಿಗೆ ಕರೆ ಮಾಡುತ್ತಾನೆ… ತನ್ನ ಕಷ್ಟಗಳು ಏನೇ ಇದ್ದರೂ ಅವಳಿಗೆ ಸಮಯ ಕೊಡ್ತಾನೆ.
ಇದು ಬರೀ ಕರೆಯ ಮಾತಲ್ಲ… ಅವಳಿಗೆ ಗೊತ್ತು…
‘ಹಲೋ ಡಿಯರ್… ಏನು ಯೋಚಿಸ್ತಾ ಇದೀಯ? ಮಾತಾಡು…’ ಯೋಚನೆಯಲ್ಲಿದ್ದ ಇವಳನ್ನು ಅವನು ಎಚ್ಚರಿಸುತ್ತಾನೆ…

ಅವಳಿಗೆ ಮಾತಿನ ಮೂಡಿಲ್ಲ… ಅದೇ ಯೋಚನೆ… ‘ಈಗ ನೀನೇಕೆ ಕೇಳಲಿಲ್ಲ. ಇಷ್ಟು ಹೊತ್ತು ಯಾರೊಡನೆ ಮಾತು ಅಂತ…’ ಹಾಗಂತ ಕೇಳಬೇಕು ಅಂದುಕೊಳ್ಳುತ್ತಾಳೆ. ಆದರೆ ಎಷ್ಟು ಬಾರಿ ಅದನ್ನೇ ಕೇಳೋದು?
‘ಹೇಳೊ… ಎಲ್ಲಿದೀಯ?’ ಕೇಳುತ್ತಾಳೆ.
ನೀ ಕೂತಿರುವ ಪಾರ್ಕಿನ ಹೊರಗೆ ಇದೀನಿ. ಬಂದು ಒಂದು ಗಂಟೆಯಾಯ್ತು. ಮಾತು ಮುಗಿದ ಮೇಲೆ ನೀನೆ ಕರೆ ಮಾಡ್ತೀಯ ಅಂತ ಇಲ್ಲೇ ಹೊರಗೆ ಕಾಯ್ತಾ ಇದ್ದೆ…’ ಅದೇ ಜೋಶ್‌ನಲ್ಲಿ ಹೇಳುತ್ತಾನೆ…
ಅವಳಿಗೆ ವಿಲವಿಲ ಒದ್ದಾಡಬೇಕು ಅನ್ನುವಷ್ಟು ಭಾವುಕತನ…
***
‘ನಾನು ನಾಲ್ಕು ದಿನ ಫ್ರೆಂಡ್ಸ್ ಜೊತೆ ಆಚೆ ಹೋಗ್ತೀನಿ ಕಣೋ…’
ಇದನ್ನು ಅವನನ್ನು ಪರೀಕ್ಷೆ ಮಾಡಬೇಕು ಅಂತ ಅವಳು ಕೇಳುವುದಿಲ್ಲ… ನಿಜಕ್ಕೂ ಅವಳಿಗೆ ಹೋಗುವ ಅನಿವಾರ್ಯತೆ ಇತ್ತು.
‘ಓಹ್ ನೈಸ್ ಆಫ್ ಯು… ಹೊರಡು. ಬಟ್ ಬಿ ಕೇರ್ಫುಲ್. ಯಾವಾಗ? ಕಾರು ತಗೊಂಡು ಹೋಗು…’
ಎಲ್ಲಿಗೆ…? ಯಾರ ಜೊತೆ? ಫ್ರೆಂಡ್ಸ್ ಅಂತ ಇರೋದು ಹುಡುಗರಾ? ಹುಡುಗಿಯರಾ? ಯಾವ ಕಾರಣಕ್ಕೆ ಹೊರಗೆ ಹೋಗ್ತಾ ಇರೋದು? ಎಲ್ಲಿ ಸ್ಟೇ ಮಾಡ್ತೀರಿ? ಇಂತಹ ಪ್ರಶ್ನೆಗಳನ್ನು ಅವನು ಕೇಳಬೇಕು. ಫ್ರೆಂಡ್ಸ್ ಫೋನ್ ನಂಬರ್ ತಗೊಬೇಕು… ಫ್ರೆಂಡ್ಸ್ ಯಾರು? ಅವರ ಹಿಂದೆ ಮುಂದೆ ವಿಚಾರಿಸಿಬೇಕು? ಅರ್ಧ ಗಂಟೆಗೊಮ್ಮೆ ತನಿಖೆ ರೀತಿ ಕೇಳಬೇಕು… ಫೋನ್ ತೆಗೆಯದೆ ಇದ್ದಾಗ ತಕ್ಷಣ ಫ್ರೆಂಡ್ಸ್‌ಗೆ ಫೋನ್ ಮಾಡಿ ‘ಅವಳಿಗೆ ಕೊಡಿ…’ ಅನ್ನಬೇಕು ಇದು ಅವಳ ಆಸೆ. ಇದು ಅವನು ತನ್ನನ್ನು ಪ್ರೀತಿಸುವ ಕುರುಹು ಅಂದುಕೊಳ್ಳುತ್ತಾಳೆ ಅವಳು…
ಅವನು ಕೇಳುವುದಿಲ್ಲ; ಬರೀ ಹೇಳುತ್ತಾನೆ. ಆ ಹೇಳುವ ದನಿಯಲ್ಲಿ ‘ಕೇಳಿದಂತೆ’ ಬರುವ ಸಣ್ಣ ದನಿಯೂ ಇರುವುದಿಲ್ಲ…
ಅವಳಿಗೆ ಹೋಗಲು ಮನಸಾಗುವುದಿಲ್ಲ… ಆದರೂ ಹೋಗಬೇಕಾಗುತ್ತದೆ… ಇವಳೇ ಹೇಳಿಕೊಳ್ಳುತ್ತಾಳೆ… ಯಾವ ಊರು? ಯಾರು ಫ್ರೆಂಡ್ಸ್? ಏನು ಕೆಲಸ ಅಂತ…
ಇವರು ಹೋಗಿ ತಲುಪುವುದರೊಳಗೆ ಅವನು ಇಲ್ಲಿಂದಲೇ ಎಲ್ಲಾ ವ್ಯವಸ್ಥೆ ಮಾಡಿರುತ್ತಾನೆ… ಪದೇಪದೆ ಫೋನ್ ಮಾಡದೆ ನಿನಗೆ ಬಿಡುವಾದಾಗ ಕರೆ ಮಾಡು ಅಂತಾನೆ… ಅವಳು ಕರೆ ಮಾಡಿದಾಗ ತಪ್ಪದೆ ಕರೆ ಸ್ವೀಕರಿಸಿ ಮಾತಾಡುತ್ತಾನೆ… ಮಾತಲ್ಲಿ ಕೇರ್ ಮಾಡ್ತಾನೆ…
ಅವಳಿಗೆ ಇವನದೇ ಧ್ಯಾನ…
ಅವನನ್ನು ನೆನೆದು ಇದ್ದಲ್ಲಿಂದಲೇ ಕಣ್ಣು ತುಂಬಿಕೊಳ್ಳುತ್ತಾಳೆ…
***
ಒಂದೇ ಹಾಸಿಗೆಗೆ ಇಬ್ಬರೂ ಮೈಚೆಲ್ಲುತ್ತಾರೆ. ತೋಳುಗಳು, ಕಾಲುಗಳು ಹರಿದಾಡುತ್ತವೆ. ಇವನು ಅವಳ ಆಸೆಯ ನಾಡಿ ಹಿಡಿಯುತ್ತಾನೆ… ಅಷ್ಟೇ, ಅವಳೊಳಗೆ ಸಾಕು ಅನ್ನುವಷ್ಟು ಭೋರ್ಗರೆಯುತ್ತಾನೆ. ಇಲ್ಲಾದರೂ ಅವನ ತಪ್ಪು ಹುಡುಕುಬೇಕು ಅಂತ ಕಾಯುತ್ತಾಳೆ. ಅವನು ಬರೀ ಸುಖ ಸುರಿಯುತ್ತಾನೆ. ಇವಳು ನದಿಯಾಗುತ್ತಾಳೆ, ತೇಲುತ್ತಾಳೆ… ಅವನು ಮಳೆ ಸುರಿಸಿ ಹಗುರಾದ ಮುಗಿಲು.
ಒಮ್ಮೊಮ್ಮೆ ಬೇಕಂತಲೆ ಅವಳು… ಸುಮ್ಮನೆ ಅವನು ಮೈಮೇಲೆ ಹಾಕಿದ ಕೈಯನ್ನು ಎತ್ತಿ ಆಚೆ ನೂಕುತ್ತಾಳೆ. ಅವನು ಸುಮ್ಮನೆ ಮುದ್ದುಗೆರೆಯುತ್ತಾನೆ. ಅವಳ ನಾಡಿ ಓದಿಕೊಳ್ಳುತ್ತಾನೆ… ನಿಜಕ್ಕೂ ಅವಳಿಗೆ ಅದು ಬೇಡ ಅನಿಸಿದ್ದು ಗೊತ್ತಾಗಿ ಅವಳನ್ನು ಸುಮ್ಮನೆ ಎದೆಗೆ ಎಳೆದುಕೊಂಡು ಮಲಗುತ್ತಾನೆ… ಚೆನ್ನಾಗಿ ನಿದ್ದೆ ಮಾಡುತ್ತಾಳೆ… ಸುಖಿಸಿದ ದಿನ ಹರಿದ ಕಣ್ಣೀರಿಗಿಂತ ಇಂದು ಅವಳ ಕಣ್ಣಲ್ಲಿ ಹೆಚ್ಚು ನೀರು…
ಬೇಕು ಅನಿಸಿದರೂ ಬೇಡ ಎನ್ನುವಂತೆ ನಟಿಸುತ್ತಿದ್ದರೆ ಅವನಿಗೆ ಗೊತ್ತಾಗಿ ಬಿಡುತ್ತದೆ… ದೇಹದ ರುಚಿ ಗೊತ್ತಾದವನಿಗೆ ಮನಸಿನ ರುಚಿಯ ಜಾಡು ಹಿಡಿಯುವುದು ಯಾವ ಕಷ್ಟ? ಎರಡೇ ಎರಡು ಮುತ್ತಿನಲ್ಲಿ ಅವಳನ್ನು ದಾರಿಗೆ ಎಳೆದುಕೊಳ್ಳುತ್ತಾನೆ.
ಬಲವಂತ ಮಾಡ್ಬೇಕು… ನಿನ್ನ ದೇಹ ನನ್ನ ಸ್ವತ್ತು, ಹಸಿದಾಗಲೆಲ್ಲಾ ಕೊಡು ಅನ್ನಬೇಕು… ಇಷ್ಟವಿಲ್ಲದಿದ್ದರೂ ಮೈಮೇಲೆ ಬೀಳಬೇಕು… ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಲಾಟೆ ತೆಗೆಯಬೇಕು… ಬೇಡ ಎಂದರೂ ಹಿಂಸೆ ಕೊಟ್ಟು ಮುಕ್ಕಬೇಕು… ಎನ್ನುವುದು ಅವಳ ಆಸೆ. ಇದೆಲ್ಲವೂ ಅವನಿಗೆ ಗೊತ್ತಾಗುತ್ತದೆ… ಅವಳನ್ನು ಪಕ್ಕಕ್ಕೆ ಕೂರಿಸಿಕೊಂಡು ಸುಮ್ಮನೆ ಅವಳ ತಲೆ ನೇವರಿಸುತ್ತಾನೆ.
‘ನೀನು ಕೊಟ್ಟೆ ನಾನು ಪಡೆದುಕೊಂಡೆ, ನಾನು ಸುಖ ಕೊಟ್ಟೆ, ನೀನು ಅನುಭವಿಸಿದೆ… ಅನ್ನೋದು ತಪ್ಪು. ನಾವಿಬ್ಬರೂ ಸೇರಿ ಖುಷಿ ಗೆದ್ದುಕೊಂಡೆವು. ಇದರಲ್ಲಿ ಇಬ್ಬರೂ ಸಮಭಾಗಿಗಳು. ಕೊಟ್ಟೆ, ಪಡೆದುಕೊಂಡೆ ಅನ್ನೋದು ಬಿಟ್ಟಾಗ ಮಾತ್ರ ನಿಜವಾದ ಖುಷಿ ಸಿಗುತ್ತೆ…’ ಹಾಗಂತ ಹೇಳಬೇಕು ಅಂತ ಅವನು ಮಾತು ಒಟ್ಟಿಗೂಡಿಸಿಕೊಳ್ಳುತ್ತಾನೆ. ಹೇಳಲಾಗದೆ ಕೈ ಬಿಡುತ್ತಾನೆ…
ಅವನು ಹೇಳದೆಯೂ ನಿರಾಳನಾಗುತ್ತಾನೆ… ಇವಳು ಹೇಳಿಯೂ ಕಳೆದುಕೊಳ್ಳಲಾಗದೆ ಕನಲುತ್ತಾಳೆ…
***
ಒಂದು ಸಣ್ಣ ಪೊಸ್ಸೇಸಿವ್ ಇಲ್ಲದ್ದು ಇದ್ಯಾವ ಪ್ರೀತಿ ಅಂದುಕೊಳ್ಳುತ್ತಾಳೆ ಅವಳು. ಅಷ್ಟು ಪ್ರೀತಿಸಿದರೂ ಒಂದು ಸಣ್ಣ ಬೇಲಿ ಹಾಕದೆ ಬಿಟ್ಟಿರುವ ಅವನ ಕಡೆ ಅವಳಿಗೆ ಸದಾ ಒಂದು ಗುಮಾನಿ… ಇನ್ನೊಂದು ಕಡೆ ಎಲ್ಲೋ ಇವನ ಪ್ರೀತಿ ಬೇರು ಬಿಡುತ್ತಿರಬಹುದಾ? ಅದಕ್ಕಾಗಿ ಇವನು ಹೀಗೆಲ್ಲಾ ಆಡುತ್ತಿರಬಹುದಾ? ಎಲ್ಲರಿಗೂ ಸುಳಿಯುವಂತೆ ಅವಳಲ್ಲೂ ಒಂದು ಕಿಡಿ ಅನುಮಾನ ಹೊತ್ತಿಕೊಳ್ಳುತ್ತದೆ…
ಹಾಗೇನಾದ್ರೂ ಇದ್ದರೆ ಖಂಡಿತ ಮೊಬೈಲ್‌ನಲ್ಲಿ ಅದರ ವಾಸನೆ ಸಿಕ್ಕೇ ಸಿಗುತ್ತದೆ ಅನ್ನುವುದು ಅವಳಿಗೆ ಗೊತ್ತು. ಹೌದು ಅವನ ಮೊಬೈಲ್ ಅನ್ನು ಒಮ್ಮೆ ತಡಕಾಡಬೇಕು… ಏನಾದ್ರೂ ಸಿಗುತ್ತದಾ ನೋಡಬೇಕು… ಇದುವರೆಗೂ ಒಮ್ಮೆಯೂ ಅವನ ಮೊಬೈಲ್ ಇಣುಕಿಲ್ಲ… ಹೌದು ಇಣುಕಿಲ್ಲ… ಇಣುಕಬೇಕಿತ್ತು… ಆ ಸಲುಗೆಯನ್ನು ಅವನು ಬೇರೆ ತರಹ ಬಳಸಿಕೊಂಡನೆ? ಅವಳ ಆ ಪ್ರಶ್ನೆಯಿಂದ ಸ್ವತಃ ಅವಳಿಗೇ ಸಮಾಧಾನವಾಗಲಿಲ್ಲ…
ಕಾದು ಕೂತು, ಅವನ ಸ್ನಾನಕ್ಕೆ ಹೋದ ತಕ್ಷಣ ಅವನ ಮೊಬೈಲ್ ಎತ್ತಿಕೊಂಡಳು. ತೆರೆಯಲು ನೋಡಿದಳು. ಉಹೂಂ ತೆರೆಯುತ್ತಿಲ್ಲ. ಪಾಸ್ವರ್ಡ್‌ನ ರಕ್ಷಣೆ ಇದೆ. ಅವಳ ಎದೆ ದಸಕ್ ಎಂದಿತು… ಏನೂ ಇಲ್ಲದೆ ಮೇಲೆ ಪಾಸ್ವರ್ಡ್ ಏನಕ್ಕೆ? ಏನೋ ಇದೆ ಅದಕ್ಕೆ ಇಷ್ಟೊಂದು ಬೇಲಿ ಮೊಬೈಲ್‌ಗೆ… ಅವಳಿಗೆ ಚಡಪಡಿಕೆ ಶುರುವಾಯಿತು… ಸರಿ ಪಾಸ್ವರ್ಡ್ ತಿಳಿಯುವುದು ಹೇಗೆ? ಅದಕ್ಕೂ ಹೊಂಚುಹಾಕಿದಳು…
ಎರಡ್ಮೂರು ದಿನಗಳ ನಂತರ ಸಹಜವೆಂಬಂತೆ ‘ಮೊಬೈಲ್ ಕೊಡಿ… ನನ್ನ ಬಳಿ ಇಂಟರ್ನೆಟ್ ಖಾಲಿಯಾಗಿದೆ’ ಎಂದು ಕೇಳಿದಳು… ಇವಳ ಒಂದೇ ಮಾತಿಗೆ…
‘ಓಹ್… ವೈ ನಾಟ್. ತಗೊ. ಪಾಸ್ವರ್ಡ್ ಲಾಕ್ ಇದೆ. ಆ ಪಾಸ್ವರ್ಡ್ ಬಂದು ನಿನ್ನ ಹುಟ್ಟಿದ ದಿನಾಂಕ ಮತ್ತು ತಿಂಗಳು…’ ಎಂದ.

ಅವಳು ಸಣ್ಣ ಅವಮಾನದಿಂದ ತತ್ತರಿಸಿದಳು. ಅವನು ಮೊಬೈಲ್ ಕೊಟ್ಟು ಟಿವಿ ನೋಡುತ್ತಾ ಕೂತನು. ಇವಳು ಇಂಟರ್ನೆಟ್ ನೆಪದಲ್ಲಿ ಮೊಬೈಲ್ ಜಾಲಾಡತೊಡಗಿದಳು. ಗ್ಯಾಲರಿಯಲ್ಲಿ ಅವಳ ಮುದ್ದಾದ ಫೋಟೊ ಬಿಟ್ಟು ಮತ್ತೇನು ಇರಲಿಲ್ಲ. ವಾಟ್ಸಪ್‌ನಲ್ಲಿ ಯಾವ ಸುಳಿವೂ ಸಿಗಲಿಲ್ಲ. ಸಿಕ್ಕಿದ್ದು ಹೊಟ್ಟೆ ಹುಣ್ಣಾಗಿಸುವ ಜೋಕ್‌ಗಳ ರಾಶಿ… ಮೊದಲ ದಿನದಿಂದ ಇಲ್ಲಿಯುವರೆಗೂ ಅವಳು ಕಳುಹಿಸಿದ ಎಲ್ಲಾ ಮೆಸೇಜ್‌ಗಳನ್ನು ಹಾಗೆ ಉಳಿಸಿಕೊಂಡಿದ್ದ. ಅವಳಿಗೆ ಈ ಮೊದಲು ಬರೆದಿದ್ದ ಒಂದೆರಡು ಕವಿತೆಗಳೂ ಇದ್ದವು…
ಎಲ್ಲವನ್ನು ನೋಡಿದ ಬಳಿಕ… ಅವಳ ಕಣ್ಣುಗಳು ತೇವವಾದವು… ಆದರೂ ಕೇಳಿದಳು… ಯಾಕೆ ಪಾಸ್ವರ್ಡ್ ಇಟ್ಟಿದ್ದೀರಿ ಮೊಬೈಲ್‌ಗೆ?
‘ಹೊಲಕ್ಕೆ ಬೇಲಿ ಹಾಕಿದ್ರೇನೆ ಜಾಸ್ತಿ ಕದಿಯುವ ಮನಸು ಮಾಡೋದು… ಪೂರ್ತಿ ಬೇಲಿಯೆ ತೆಗೆದುಬಿಟ್ಟರೆ ಕದಿಯುವವನಿಗೆ ಭಯ… ಬೇಲಿಯೇ ಇಲ್ಲ, ಎಂತೋ, ಏನೋ ಅಂತ ಸುಮ್ಮನೆ ಹೊರಟು ಹೋಗುತ್ತಾನೆ…’ ಎಂದನು ಅವನು…
ಮಾತುಗಳು ಅರ್ಥ ಆಗದೆ… ಯೋಚಿಸುತ್ತಾ ಕೂತಳು.
***
‘ಹೇ ನಿನ್ನ ಕೈಯಲ್ಲಿ ನೀನು ಸಾಕಿದ ಬೆಕ್ಕು ಇದೆ ಅಂತಿಟ್ಕೊ… ಅದು ನಿನ್ನ ಬಿಟ್ಟು ಹೋಗಬಾರದು… ನಿನ್ನ ಬಳಿಯೆ ಇರಬೇಕ ಅಂದ್ರೆ ಏನ್ ಮಾಡ್ತೀಯ?’
ಅವಳು ಜಾಣತನದ ಪ್ರಶ್ನೆ ಕೇಳಿದಳು…
‘ನೋಡೇ ನೀನು ಯಾವುದೊ ಭಾಷಣದಲ್ಲಿ ಸಂಬಂಧ ಉಳಿಸುವುದು ಹೇಗೆ ಅನ್ನುವುದನ್ನು ಕೇಳಿಕೊಂಡು ಬಂದು ಈ ಉದಾಹರಣೆ ನನ್ನ ಮುಂದೆ ಇಟ್ಟಿದೀಯ ಅಂತ ಗೊತ್ತು…’ ಅಂದ.
ಅವಳು ಸೋತಂತೆ ಅವನ ಕಡೆ ನೋಡಿದಳು…
‘ಬಿಗಿಯಾಗಿ ಹಿಡ್ಕೊಂಡ್ರೆ ಬೆಕ್ಕು ಕಚ್ಚುತ್ತೆ… ಮತ್ತೆ ಬರಲ್ಲ… ಫ್ರೀಯಾಗಿ ಬಿಟ್ರೆ ಎಲ್ಲಾದರೂ ಓಡಿ ಹೋಗುತ್ತೆ ಮತ್ತೆ ಬರಲ್ಲ… ಅದನ್ನು ಒಂದು ಹದದಲ್ಲಿ ಹಿಡಿಯಬೇಕು… ಅಂತ ಅಲ್ವ ನೀನು ಹೇಳಬೇಕು… ಅಂತಿರೋದು’ ಅವನು ಕೇಳಿದ…
ಅವಳಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ…
‘ನಾನು ಬೆಕ್ಕನ್ನು ಪೂರ್ತಿ ಬಿಟ್ಟು ಬಿಡುತ್ತೇನೆ… ಯಾವಾತ್ತೂ ಹಿಡಿಯಲ್ಲ. ಯಾವ ಹದದಲ್ಲೂ ಹಿಡಿಯಲ್ಲ… ಅದಕ್ಕೆ ಹೋಗಲೇಬೇಕು ಅಂತ ಇದ್ರೆ ಹೋಗಲಿ. ಇದಕ್ಕಿಂದ ಚೆಂದದ ಮಡಿಲು ಸಿಕ್ಕರೆ ಅದು ಕೂತುಕೊಳ್ಳಲಿ, ಅವರ ಬಳಿಯೇ ಇರಲಿ… ನನಗೆ ನನ್ನ ಬೆಕ್ಕು ಚೆನ್ನಾಗಿರೋದು ಅಷ್ಟೆ ಮುಖ್ಯ. ಅದು ನನ್ನ ಬಳಿ ಮಾತ್ರ ಚೆನ್ನಾಗಿರುತ್ತೆ ಅಂದುಕೊಳ್ಳೊದು ಮೂರ್ಖತನ… ಹದದಲ್ಲಿ ಹಿಡಿದು ಮಾಡಿಕೊಳ್ಳೊದು ನಾವು ಬೆಕ್ಕಿಗೆ ಮಾಡುವ ವ್ಯವಸ್ಥಿತವಾದ ಮೋಸ ಅನಿಸುತ್ತೆ… ಪ್ರೀತಿಸಿದವರು ಚೆನ್ನಾಗಿರಲಿ ಅಂತ ಬಯಸೋದೆ ನಿಜವಾದ ಪ್ರೀತಿ… ಅವರು ಎಲ್ಲಾದರೂ ಇರಲಿ… ಯಾರೊಂದಿಗೆ ಬೇಕಾದರೂ ಇರಲಿ… ಹೇಗಿದ್ದರೂ ಸರಿ ನಮ್ ಜೊತೆ ಮಾತ್ರ ಇರಬೇಕು ಅನ್ನೋದು ಪ್ರೀತಿ ಹೇಗೆ ಆಗುತ್ತೆ…
ಅವಳು ಅಥವಾ ಅವನು ಚೆನ್ನಾಗಿ ಇರಲಿ ಅಂತ ಬಯಸೋದೆ ನಿಮ್ಮ ಪ್ರೀತಿ ಅಂತಾದರೆ ಖಂಡಿತ ಅದು ನಿಮ್ಮ ಬಳಿಯೇ ಬರುತ್ತದೆ… ಯಾರೇ ನಮ್ಮಿಂದ ಹೊರಟು ಹೋದರು ಅಂದ್ರೆ ಅದಕ್ಕೆ ನಾವೇ ಪೂರ್ತಿ ಕಾರಣರು… ಹೋದವರಲ್ಲ…’ ಎಂದು ತನ್ನ ಮನಸಿನಲ್ಲಿರುವುದನ್ನು ಹೇಳಿಬಿಟ್ಟ…
ಈಗ ಅವಳ ಮನಸು ಹೊಯ್ದಾಡುತ್ತಿರುವ ಕಡಲು…
***
ಇವನನ್ನು ಬಿಟ್ಟು ಬಿಡಬೇಕು ಅನಿಸಿಬಿಡುತ್ತದೆ ಅವಳಿಗೆ. ಮನುಷ್ಯನಿಗೆ ಒಂದಾಗಲು ಕಾರಣ ಇರುವಂತೆ ಬಿಡಲು ಕೂಡ ಕಾರಣ ಇರುತ್ತವೆ.
ಅವನು ಹಿಡಿಯುವುದಿಲ್ಲ; ಹರಿಯ ಬಿಡುತ್ತಾನೆ. ಕಾಡುವುದಿಲ್ಲ; ಕಾಯುತ್ತಾನೆ. ಅನುಮಾನಿಸುವುದಿಲ್ಲ; ಅಭಿಮಾನಿಸುತ್ತಾನೆ. ಅವನು ಕೇಳುವುದಿಲ್ಲ; ಕೊಡುತ್ತಾನೆ. ಕಳೆದುಕೊಳ್ಳುವ ಆತಂಕವಿಲ್ಲ; ಇರುತ್ತೆ ಬಿಡು ಅನ್ನುವ ಉಡಾಫೆ ಇಲ್ಲ… ಇದೆಲ್ಲವೂ ತನಗೆ ಗೊತ್ತು…
ಆದರೆ ತುಂಬಾ ಒಳ್ಳೆಯ ಪ್ರೀತಿ ಜೊತೆ ಬದುಕುವುದು ಕೂಡ ಕಷ್ಟ. ಸಾಮಾನ್ಯರಿಗೆ ಸಾಮಾನ್ಯ ಪ್ರೀತಿ ಸಾಕು. ಅನುಮಾನ, ಜಗಳ, ಕೋಪ, ಸಣ್ಣತನ, ಬಲವಂತ, ಚೂರು ಸುಳ್ಳು, ಇಷ್ಟೇ ಇಷ್ಟು ಮೋಸ, ಒಮ್ಮೊಮ್ಮೆ ತಿರಸ್ಕಾರ, ಮಗದೊಮ್ಮೆ ಮಮಕಾರ… ಇವೆಲ್ಲಾ ಬೇಕು. ದೇವರನ್ನು ಪೂಜಿಸಬಹುದಷ್ಟೆ ಆದರೆ ಪ್ರೀತಿಸಲು ಆಗಲ್ಲ. ಡಿವೈನ್ ಲವ್ ಸ್ವರ್ಗದಲ್ಲಿ ಮಾಡಬಹುದು, ಆದರೆ ಈ ಭೂಮಿಗೆ ಭೂಮಿಯಂತದ್ದೆ ಪ್ರೀತಿ ಬೇಕು…
ಹೌದು… ಇದು ಅವನಲ್ಲಿ ಎಲ್ಲಿದೆ…?
***
‘ಇವನಿಗೆ ನಾನು ಇಷ್ಟ ಇಲ್ಲ ಅಂತ, ಪ್ರೀತಿಸಲು ಬರಲ್ಲ ಅಂತ ನೀನು ಹೊರಡಬಾರದು. ಅದು ತಪ್ಪು. ನೀನು ನಿನಗೆ ಇಷ್ಟ ಇಲ್ಲ ಅಂದುಕೊಂಡು ಬೇಕಾದರೆ ಹೊರಡಬೇಕು. ಹೊರಟಹೋದ ಮಾತ್ರಕ್ಕೆ ಪ್ರೀತಿ ಮುಗಿಯುವುದಿಲ್ಲ…’ ಎಂದನು ಅವನು.
ಅವಳ ಸರಿಯಾಗಿ ಅರ್ಥವಾಗಲಿಲ್ಲ.. ಅವನನ್ನೇ ನೋಡಿದಳು…
ಇಬ್ಬರೂ ಪ್ರೀತಿಸುವಾಗ, ಇಬ್ಬರೂ ಸೇರುವಾಗ… ಇಬ್ಬರಿಗೂ ಒಪ್ಪಿಗೆ ಇರುತ್ತದೆ. ಆ ಒಪ್ಪಿಗೆಯಿಂದಲೇ ಆ ಇಬ್ಬರೂ ಒಂದಾಗುತ್ತಾರೆ. ಒಬ್ಬರಿಗೆ ಒಪ್ಪಿಗೆ ಇದ್ದು ಇನ್ನೊಬ್ಬರಿಗೆ ಒಪ್ಪಿಗೆಯಿಲ್ಲ ಅಂದರೆ ಸೇರಲು ಸಾಧ್ಯನಾ?’ ಅವನ ಮುಂದುವರೆದ ಮಾತು…
‘ಅದು ಸರಿ… ಇಬ್ಬರ ಒಪ್ಪಿಗೆ ಇತ್ತು. ಸೇರಿದೆವು… ಈಗ ಒಬ್ಬರ ಒಪ್ಪಿಗೆ ನಶಿಸಿ ಹೊಯಿತು ಅಂದಮೇಲೆ ಸಂಬಂಧ ಮುಗಿದ ಹೋದ ಕಥೆ ತಾನೇ…?’ ಅವಳ ಪ್ರಶ್ನೆ.
‘ನೋ ಅದು ಮುಗಿಯಲ್ಲ. ಒಬ್ಬರಿಗೆ ಬೇಡ ಅಂದ ತಕ್ಷಣ ಅದು ಮುಗಿದು ಹೋಗಲ್ಲ. ಇಬ್ಬರು ಒಪ್ಪಿದರೆ ಮಾತ್ರ ಹೇಗೆ ಸಂಬಂಧ ಹುಟ್ಟುತ್ತದೊ… ಹಾಗೆಯೆ ಇಬ್ಬರೂ ಬೇಡ ಅಂದಾಗ ಮಾತ್ರ ಸಂಬಂಧ ಸಾಯುತ್ತದೆ…’
ಅವಳು ಅವನ ಮುಖವನ್ನೇ ದಿಟ್ಟಿಸುತ್ತಾ ಅವನ ಮಾತುಗಳನ್ನು ಕೇಳಿಸಿಕೊಳ್ಳತೊಡಗಿದ್ದಳು…
ʻಇಬ್ಬರಲ್ಲಿ ಒಬ್ಬರಿಗೆ ಇಷ್ಟ ಇದ್ದರೂ ಆ ಸಂಬಂಧ ಉಸಿರಾಡುತ್ತದೆ. ಸಾಯುವುದಿಲ್ಲ. ಅದರ ಆಯಸ್ಸು ತೀರುವವರೆಗೂ ನರಳುತ್ತದೆ. ಮನುಷ್ಯನ ಆಯಸ್ಸನ್ನು ಮೊದಲೇ ಊಹಿಸಲು ಯಾರಿಗೂ ಬರಲ್ವೋ ಹಾಗೆ ಈ ಸಂಬಂಧಗಳ ಆಯಸ್ಸು ಕೂಡ. ನೀನು ಹೋದ ತಕ್ಷಣ ಇದು ಸತ್ತು ಹೋಗಲು ನೀನು ವಿಷ ಬೆರೆಸಿಲ್ಲ… ಅಷ್ಟಕ್ಕೂ ನೀನು ಬಡಿಸಿದ್ದು ಅಮೃತ…
ನೀನು ಹೋಗಬಹುದು… ನಾನು ನನ್ನ ಸಂಬಂಧಕ್ಕೆ ಒಂಟಿ ಪೋಷಕ. ಸಾಕಿಕೊಳ್ಳುತ್ತೇನೆ…’ ಎಂದವನು ಏಕಾಏಕಿ ಮೌನಿಯಾದ…
ಅವಳು ಹಿಂದಿನಿಂದ ಓಡಿ ಬಂದು ತಬ್ಬಿಕೊಂಡಳು… ತಬ್ಬಿ ಸಾಕಾದ ಮೇಲೆ ಅವನ ಮುಂದಕ್ಕೆ ಬಂದು ಅವನ ಕೆನ್ನೆಗೆ ಎರಡು ಬಾರಿಸಿದಳು. ಅವನು ಸುಮ್ಮನೆ ಅವಳ ಹಣೆಗೆ ಮುತ್ತಿಟ್ಟ.






0 Comments