ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ- ಸಾಕು ಸಾಕು ಕಥೆಗಳ ಉಸಾಬರಿ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

37

ತಲೆ ಸ್ವಲ್ಪ ಕೆದರಿತ್ತು. ಕಟ್ಟಿಕೊಂಡ ತುರುಬಿನಿಂದ ತಪ್ಪಿಸಿಕೊಂಡು ನಾಲ್ಕಾರು ಕೂದಲುಗಳು ಅವಳ ಬೆನ್ನಿಗೆ ಅಂಟಿಕೊಂಡಿದ್ದವು. ಹೊಸ್ತಿಲು ದಾಟುವ ಮೊದಲೇ ಕೂದಲನ್ನು ಸರಿಮಾಡಿಕೊಂಡಿದ್ದಳೊ ಏನೊ ಆದರೆ ಆ ಕೂದಲುಗಳು ಅವಳ ಮಾತನ್ನು ಕೇಳಿರಲಿಲ್ಲ. ಮೂಡಣ ಮನೆಯಲ್ಲಿ ರಕ್ತದ ಕಲೆ. ಹುಟ್ಟಿದ ಸೂರ‍್ಯನಿಗೆ ಇನ್ನೂ ಹಲ್ಲುಗಳು ಮೂಡಿರಲಿಲ್ಲ; ಇನ್ನೂ ಬೊಚ್ಚುಬಾಯಿ. ಗಾಳಿಯಲ್ಲಿ ಇಬ್ಬನಿಯ ಪಸೆಯಿತ್ತು. ತಣ್ಣನೆಯ ಚಳಿಯಿತ್ತು. ಹಾಗೆ ಸುಳಿದು ಬಂದ ಗಾಳಿ ಅವಳ ಮೈಯನ್ನು ಸವರುತ್ತಿದ್ದಂತೆ ಆಕೆ ನಲುಗುತ್ತಿದ್ದಳು. ಕೈಗಳೆರಡನ್ನು ಪರಸ್ಪರ ಕಂಕುಳುದೊಳಗೆ ತಳ್ಳಿಕೊಂಡು ಸಾಧ್ಯವಾದರೆ ಇಡೀ ದೇಹವನ್ನು ಒಂದು ಹಿಡಿ ಆಗುವಷ್ಟರ ಮಟ್ಟಿಗೆ ಮುದುಡಲು ಪ್ರಯತ್ನಿಸುತ್ತಿದ್ದಳು.

ರಸ್ತೆ ಬದಿಯ ಒಂದು ಚಹಾದಂಗಡಿ. ಬರ‍್ರನೆ ಉರಿಯುತ್ತಿರುವ ಸ್ಟವ್ ಮೇಲೆ ಕೂತ ಒಂದು ಅಲ್ಯುಮಿನಿಯಂ ಪಾತ್ರೆಯಲ್ಲಿ ಜಗದ ಸಂಕಟದಂತೆ ಚಹಾ ಕುದಿಯುತ್ತಿತ್ತು. ಕುದಿಸುವವನು ಪ್ರತಿಬಾರಿ ಬರುತ್ತಿದ್ದ ಉಕ್ಕನ್ನು ಗದರಿಸಿ ಕಳುಹಿಸಿ ಬಾಯಿ ಮುಚ್ಚಿಸುತ್ತಿದ್ದ. ಕುದಿಯುತ್ತಿದ್ದ ಚಹಾ ತನ್ನ ಉಸಿರು ನುಂಗುತ್ತಿತ್ತು. ಕುದಿಯುವ ಚಹಾವನ್ನು ನೋಡುತ್ತಾ ಇಲ್ಲೇನಾದರೂ ಒಂದು ಕವನ ಹುಟ್ಟಬಹುದಾ ಎಂದು ಗಮನಿಸುತ್ತಿದ್ದೆ.

ನಾವು ನಾಲ್ಕೈದು ಜನ ಚಹಾಕ್ಕಾಗಿ ಕಾಯುತ್ತಿದ್ದೆವು. ನಾನು ಮೊಬೈಲನ್ನು ಮನೆಯಲ್ಲಿ ಮರೆತು ಬಂದಿದ್ದರಿಂದ ಜಗತ್ತು ತುಂಬಾ ಕ್ಲಿಯರ್ ಆಗಿ ಕಾಣಿಸುತ್ತಿತ್ತು. ಅವಳು ನನ್ನ ಮುಂದೆ ಬಂದು ನಿಂತಳು. ತೀರಾ ಪರಿಚಯವಿಲ್ಲದ ಹೆಂಗಸನ್ನು ನಾನು ಅಷ್ಟು ಹತ್ತಿರದಿಂದ ನೋಡುತ್ತಿರುವುದು ಇದೇ ಮೊದಲು. ನನ್ನ ಉಸಿರಾಟದ ವೇಗ ಆಯತಪ್ಪಿತು. ಜೋರಾಗಿ ಉಸಿರು ಬಿಟ್ಟರೆ ಎಲ್ಲಿ ಅವಳ ಕತ್ತಿಗೆ ನಾಟುತ್ತದೊ ಅನಿಸಿ ಸರಾಗ ಉಸಿರಾಟವೂ ಕಷ್ಟವೆನಿಸಿತು. ಆದರೆ ನಾನು ಮಾತ್ರ ಒಂದು ಹೆಜ್ಜೆಯನ್ನೂ ಹಿಂದೆ ತೆಗೆಯಲಿಲ್ಲ. ನನ್ನೊಳಗಿನ ಗಂಡಸಿಗೆ ನಾನು ಮಣಿಯಬೇಕಾಯಿತು. ಅಲ್ಯುಮಿನಿಯಂ ಪಾತ್ರೆಯಲ್ಲಿ ಚಹಾ ತನ್ನಪಾಡಿಗೆ ತಾನು ಕುದಿಯುತ್ತಿತ್ತು. ಅಲ್ಲಿ ಕೂತಿದ್ದವರ ಕಣ್ಣೊಳಗಿನ ಕಪ್ಪು ಗೋಲಿಗಳು ಅವಳ ಕಡೆಗೇ ಇದ್ದವು. ಅದು ನನ್ನ ಗಮನಕ್ಕೂ ಬಂದಿತ್ತು. ತೀರಾ ಹೆಂಗಸೊಬ್ಬಳು ಬರೀ ಗಂಡಸರು ಇರುವ ಅಂಗಡಿಯ ಮುಂದೆ ಚಹಾ ಕುಡಿಯಲು ಬರುವುದು ಆ ಕ್ಷಣಕ್ಕೆ ಅಲ್ಲಿ ಸ್ವಾಭಾವಿಕ ಅನಿಸುವಂತಿರಲಿಲ್ಲ.

ಕಿವಿಗೆ ಹಾಕಿಕೊಂಡಿದ್ದ ರಿಂಗುಗಳು ಅಲುಗಾಡುತ್ತಿದ್ದವು. ಒಂದು ಕಮ್ಮನೆಯ ವಾಸನೆ ಮೂಗಿಗೆ ಬಡಿಯಿತಿತ್ತು. ಅವಳು ಉದ್ದೇಶ ಪೂರ‍್ವಕವಾಗಿಯೇ ನನಗೆ ಹತ್ತಿರವಾಗಿದ್ದಳೊ ಅಥವಾ ನಾನು ಹಿಂದೆ ನಿಂತಿರುವುದು ಅವಳಿಗೆ ಗೊತ್ತಿಲ್ಲವೊ, ಸ್ವಾಭಾವಿಕವಾಗಿಯೇ ಹಿಂದೆ ಸರಿದು ತನ್ನ ಪಾಡಿಗೆ ತಾನು ನಿಂತಿದ್ದಳೊ ನನಗ್ಹೇಗೆ ಗೊತ್ತಾಗಬೇಕು? ನಾನೇಕೆ ಒಂದು ಹೆಜ್ಜೆ ಹಿಂದೆ ಸರಿದು ಕೈಗೆ ಇನ್ನೂ ಬಂದಿರದ ಚಹಾದ ಕಡೆ ಗಮನ ಹರಿಸಬಾರದಿತ್ತು? ಅರ್ಧ ತೆರೆದ ಅವಳ ಬೆನ್ನು, ಕಿವಿಯ ರಿಂಗು, ಚೂರೇ ಚೂರು ಪಕ್ಕಕ್ಕೆ ಕತ್ತು ಅಲುಗಾಡಿಸಿದಾಗ ಕಾಣುತ್ತಿದ್ದ ತುಂಬಿದ ಕೆನ್ನೆ, ನೀಳ ಮೂಗು, ದುಂಡನೆಯ ತುಟಿಗಳು, ತುಂಬಿದ ಎದೆಯ ಭಾಗ, ಸಣ್ಣನೆಯ ಸೊಂಟ.. ನೋಡುತ್ತಾ ಸಣ್ಣಗೆ ಬೆವರಿದೆ. ಇವೆಲ್ಲಕ್ಕಿಂತ ನನಗೆ ತುಂಬಾ ಇಷ್ಟವಾಗಿದ್ದು ಅವಳ ಎರಡೂ ಕೈಗಳಲ್ಲಿ ಮೆತ್ತಿಕೊಂಡಿದ್ದ ಕೆಂಪನೆಯ ಮೆಹಂದಿ.

“ತಗೊಳಿ ಸ್ವಾಮಿ..” ಅಂಗಡಿಯವ ಕೈಗೆ ಚಹಾ ಇಟ್ಟ. ಅವಳು ತುಸು ಮುಂದೆ ಸರಿದು ನಿಂತಳು. ನಾನು ಒಂದು ಹೆಜ್ಜೆ ಹಿಂದೆ ಬಂದೆ. ಕೈಗೆ ಬಂದು ಕೂತ ಚಹಾವನ್ನು ಅನಿವಾರ‍್ಯವಾಗಿ ತುಟಿಗೇರಿಸಿಕೊಳ್ಳುತ್ತಾ ಅವಳನ್ನು ನೋಡತೊಡಗಿದೆ. ಈಗ ಅವಳ ಮುಖ ಸಂಪೂರ್ಣವಾಗಿ ನನ್ನ ಎದುರಿಗಿದೆ. ಎಷ್ಟೊಂದು ಲಕ್ಷಣವಾಗಿದ್ದಾಳೆ!. ಅವಳ ಮುಖವನ್ನು ಮತ್ತೆ ಮತ್ತೆ ನೋಡಿದೆ. ಇವಳನ್ನು ಎಲ್ಲಿಯೋ ನೋಡಿದ್ದೇನೆ ಅನಿಸತೊಡಗಿತು. ಆದರೆ ಎಲ್ಲಿ ಎಂಬುದು ಮಾತ್ರ ನೆನಪಾಗುತ್ತಿರಲಿಲ್ಲ. “ನೀನ್ ಆಗ್ಲೇ ಇಲ್ಲಿದ್ದೀಯ? ನಾನು ಅಲ್ಲಿ ಹುಡ್ಕುತ್ತಿದ್ದೆ. ಟೈಮ್ ಆಗುತ್ತೆ ಬಾ..” ಅನ್ನುತ್ತಲೇ ಬಂದು ಗಂಡಸೊಬ್ಬ ಅವಳೊಂದಿಗೆ ಚಹಾ ಕುಡಿದು ಅವಳನ್ನು ಕರೆದುಕೊಂಡು ಹೊರಟ. ಅವಳು ಅವನೊಂದಿಗೆ ನಡೆಯುತ್ತಿದ್ದಾಗ ಕಣ್ಣಿಗೆ ಕಾಣಿಸುವಷ್ಟು ಹೊತ್ತು ಅವಳ ಕೈಯಲ್ಲಿದ್ದ ಮೆಹಂದಿಯನ್ನೇ ನೋಡುತ್ತಿದ್ದೆ. ನನ್ನ ಕೈಯೊಳಗಿನ ಚಹಾ ಮುಗಿದು ಯಾವ ಕಾಲವಾಗಿತ್ತೊ! ಖಾಲಿ ಗ್ಲಾಸನ್ನು ಹಿಡಿದುಕೊಂಡೆ ನಿಂತಿದ್ದೆ. ನನ್ನ ಈ ನೋಟಾಟವನ್ನು ಯಾರಾದರೂ ನೋಡಿರಬಹುದಾ ಅನ್ನುವ ಗುಮಾನಿಯಿಂದ ಸುತ್ತ ನೋಡಿದೆ. ಕುಡಿದ ಚಹಾದ ಗ್ಲಾಸ್ ಅನ್ನು ತೊಳೆಯುತ್ತಿದ್ದ ಚಹಾದಂಗಡಿಯ ತಾತ ಬಿಟ್ಟರೆ ಯಾರೂ ಇರಲಿಲ್ಲ.

ಅವಳನ್ನೆಲ್ಲೊ ನೋಡಿದೀನಿ ಅನ್ನುವ ವಿಚಾರವೇ ತಲೆಯಲ್ಲಿ ಮೊದಲಾಯಿತು. ಮನೆಗೆ ಹೊರಟ ದಾರಿಯಲ್ಲಿ ನಿಂತು ನಿಂತು ಯೋಚಿಸತೊಡಗಿದೆ. ಅವತ್ತು ಸೀನಾ ತೋರಿಸಿದ್ದು ಇವಳನ್ನೇನಾ? ಅವನು ತೋರಿಸಿದ ಆ ಹೆಂಗಸನ್ನು ನಾನು ಬರೀ ಒಂದು ಗುಕ್ಕಿನಷ್ಟು ನೋಡಿ ಸುಮ್ಮನಾಗಿದ್ದೆ. ಅವನಿಗೆ ಇದ್ದಷ್ಟು ಕುತೂಹಲ ನನಗೆ ಇರಲಿಲ್ಲವಾದ್ದರಿಂದ ನೋಟದಲ್ಲಿ ಕಾಳಜಿ ತಂದುಕೊಳ್ಳುವುದು ಬೇಕಾಗಿರಲಿಲ್ಲ. ಸೀನಾ ತೋರಿಸಿದ ಹೆಂಗಸನ್ನು ಹೋಲುತ್ತಿದ್ದಳು. ಅವಳೇ ಇರಬಹುದು ಅಥವಾ ಇವಳೇ ಅವಳಾಗಿರಬಹುದು. ಅವತ್ತು ಅವಳ ಕೈಯಲ್ಲೂ ಕೂಡ ಅಷ್ಟೇ ರಂಗಿನ ಮೆಹಂದಿ ಇತ್ತು. ಮುಖದಲ್ಲಿ ಅಷ್ಟೇ ಲಕ್ಷಣ. ಗುಂಗುರು ಕೂದಲು, ಅದೇ ಮೂಗು, ಮುಗುತಿ, ಮೈಬಣ್ಣ ಎಲ್ಲವೂ ನೆನಪಾಗುತ್ತಿವೆ. ಇದೇ ರಸ್ತೆಯಲ್ಲಿ ಮತ್ತೆ ಸಿಕ್ಕಿದ್ದಾಳೆ ಅಂದರೆ ಇವಳು ಅವಳೇ ಇರಬೇಕು ಅಂತ ತೀರ ಗಾಢವಾಗಿ ಅನಿಸತೊಡಗಿತು. ಅಯ್ಯೋ ಯಾರಾದರೆ ನನಗೇನು ಅನ್ನುವ ಮನಸ್ಥಿತಿಯೊಂದು ನನಗೆ ಬರಲಿಲ್ಲ. ಒಂದೊಳ್ಳೆ ಕಥೆಯಾಗಬಹುದಾದ ಈ ವಿಚಾರವನ್ನು ಸುಮ್ಮನೆ ರಸ್ತೆಯ ಪಕ್ಕ ಬಿಟ್ಟು ಹೋಗಲು ಮನಸಾಗಲಿಲ್ಲ. ಮನೆಗೆ ಬಂದವನೇ ಟಿಪ್ಪಣಿ ಬರೆದುಕೊಳ್ಳಲು ಇಟ್ಟುಕೊಂಡಿದ್ದ ಒಂದು ನೋಟ್ಬುಕ್ ಎತ್ತಿಕೊಂಡು ‘ಅವಳು ಮತ್ತು ಮೆಹಂದಿ’ ಅನ್ನುವ ಎರಡು ಪದಗಳನ್ನು ಬರೆದಿಟ್ಟು ಟೇಬಲ್ ಮೇಲಿದ್ದ ಮೊಬೈಲ್ ಮತ್ತು ನ್ಯೂಸ್ ಪೇಪರ್ ಎತ್ತಿಕೊಂಡು ಬಾಲ್ಕನಿ ತಲುಪಿದೆ.

ಅರಾಮು ಕುರ್ಚಿಯಲ್ಲಿ ಕೂತು ಎದುರಿಗಿದ್ದ ಟಪಾಯಿ ಮೇಲೆ ಕಾಲು ಚಾಚಿಕೊಂಡೆ. ಪತ್ರಿಕೆ ಕಡೆ ಮನಸು ಹೋಗಲಿಲ್ಲ. ಇಂತಹ ನೂರು ವಿಚಾರಗಳ ಬಗ್ಗೆ ಸದಾ ಚರ್ಚಿಸುತ್ತಿದ್ದ ಗೆಳತಿಯೊಬ್ಬಳಿಗೆ ‘ಮೆಹಂದಿಯ ಕೆಂಪು ಅನ್ನುವುದು ಬಿಕ್ಕಿಬಿಕ್ಕಿ ಅತ್ತ ನಂತರ ಉಳಿಯುವ ಕಣ್ಣಿನ ಬಣ್ಣವಾ..!?” ಅಂತ ಮೆಸೇಜ್ ಕಳುಹಿಸಿ ಮರದ ತುದಿಗಳನ್ನು ನೋಡುತ್ತಾ ಕೂತೆ. ಒತ್ತಿಬರುತ್ತಿದ್ದ ಕತೆಯ ಸೆಳವನ್ನು ತಹಬದಿಗೆ ತಂದು ಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕಥೆಗೆ ಸಿಕ್ಕ ಸರಕು ಅನ್ನುವ ಕಾರಣಕ್ಕೆ ಮಾತ್ರ ನಾನು ಅವಳ ಬಗ್ಗೆ ಮುತುವರ್ಜಿವಹಿಸುತ್ತಿಲ್ಲ ಅನ್ನುವುದು ನನಗೆ ಈಗೀಗ ಸ್ಪಷ್ಟವಾಗತೊಡಗಿತು.

ಆದರೆ ಸೀನಾ ಅವತ್ತು ಆ ಹೆಂಗಸನ್ನು ತೋರಿಸಿ ಹೇಳಿದ್ದೇನು? ಎಂಬುದು ನಿಮಗೆ ಗೊತ್ತಾಗಬೇಕು. “ಎಷ್ಟು ಚೆನ್ನಾಗಿದ್ದಾಳೆ ನೋಡು. ಆದರೆ ಅವ್ಳು ಆ ಥರ ಮಾರಾಯ..” ಅಂದಿದ್ದ. ನಾಲ್ಕು ಜನ ಆಡುವ ಮಾತನ್ನು ಇವನು ಐದನೇಯವನಾಗಿ ನನ್ನ ಮುಂದೆ ಹಂಚಿದ್ದ. ಆ ಥರ ಅನ್ನುವ ಪದ ನನ್ನ ಕಿವಿಗೆ ಬಿದ್ದ ತಕ್ಷಣ ನಾನು ಅವಳನ್ನು ಮತ್ತಷ್ಟು ಗಮನಿಸುವ ಪ್ರಯತ್ನ ಮಾಡಿದ್ದೆ. ಆದರೆ ಅವಳು ಆಗಲೇ ನಮ್ಮ ಕಡೆ ಬೆನ್ನು ತಿರುಗಿಸಿ ನಡೆದಿದ್ದಳು. ಸ್ಪಷ್ಟವಾಗಿ ಕಂಡಿದ್ದು ಅವಳು ಕೈಗಳಿಗೆ ಹಾಕಿಕೊಂಡಿದ್ದ ಮೆಹಂದಿ ಮಾತ್ರ. ಆದರೆ ಮೊದಲೇ ನೋಡಿದ್ದ ಮೂಗು, ಮೂಗುತಿ, ಮುಖದ ಬಣ್ಣ ಎಲ್ಲವೂ ತೀರಾ ನಿಖರವಲ್ಲದಿದ್ದರೂ ಗುರುತಿಸುವ ಮಟ್ಟಿಗೆ ನೆನಪಿತ್ತು. ಅವತ್ತು ಅವನು ನನ್ನೊಳಗೆ ಹಾಕಿ ಹೋದ ಬೀಜಕ್ಕೆ ಈ ಹೆಂಗಸು ತೀರಾ ಹತ್ತಿರ ಬಂದು ನಿಂತು ನೀರು ಸುರುವಿದ್ದಳು.‌ ಆಗಿನಿಂದ ಒಂದೇ ಸಮನೆ ಆ ಬೀಜ ನನ್ನೊಳಗೆ ಮೊಳೆಯುತ್ತಿದೆ. ಅದರ ವೇಗ ನೋಡಿದರೆ ಇವತ್ತು ಸಂಜೆಗೇನೆ ಹೂ ಬಿಡುವ, ಬೆಳಗ್ಗೆ ಹೊತ್ತಿಗೆ ಹಣ್ಣನ್ನೂ ಕೊಡಬಹುದೇನೋ! ಅವಳೇ ಇವಳು ಅಂತ ಮನಸ್ಸಿಗೆ ಸ್ಪಷ್ಟವಾಗುತ್ತಲೇ ಅವಳ ಬಗ್ಗೆ ಕಥೆ ಬರೆಯುವ ಹುಕಿ ಹತ್ತಿತ್ತು.

ನನ್ನನ್ನು ತುಂಬಾ ಭಾವನಾತ್ಮಕವಾಗಿ ಕೆಣಕಿದ್ದು ಅವಳ ಮೆಹಂದಿ. ಕೈಯಲ್ಲಿ ಮೆಹಂದಿ ರಂಗು ಹೊಳೆದಷ್ಟು ಒಂದು ಆಕರ್ಷಣೆ ಉಳಿಯುತ್ತದೆ. ಮಾಡಿಕೊಳ್ಳುವ ಅಲಂಕಾರಗಳು ಅಂದು ಮತ್ತು ಇಂದು ಒಂದೇ. ಆದರೆ ಉದ್ದೇಶಗಳು ಬೇರೆ. ಈಗೀಗ ಪ್ರತಿಬಾರಿಯೂ ಹಾಗೆ ಸಿಂಗರಿಸಿಕೊಳ್ಳುವಾಗ ಮೆಹಂದಿ ಬರೆದುಕೊಳ್ಳುವಾಗ ಅವಳೊಳಗೆ ಯಾವ ಭಾವನೆಗಳು ಹುಟ್ಟಬಹುದು ಎಂದು ಅಂದಾಜಿಸಿದೆ. ಆಕೆ ನನ್ನಷ್ಟು ಭಾವುಕಳೇ? ಮೆಹಂದಿಗೆ, ಹಣೆಗೆ ಇಟ್ಟುಕೊಳ್ಳುವ ಬೊಟ್ಟಿಗೂ ಜೀವ ತುಂಬಿಕೊಳ್ಳುವಂತವಳೇ? ಅಷ್ಟೊಂದು ಭಾವನಾತ್ಮಕವಾಗಿ ಉಳಿದಿದ್ದರೆ ದೇಹ ಮಾರಿಕೊಳ್ಳುವುದು ಸುಲಭವಾಗುತ್ತಿತ್ತೆ? ಅವಳ ಆ ಆಯ್ಕೆಗೆ ಅವಳ ಬಳಿ ಒಂದು ಸಮರ್ಥನೆ ಸಿಗಬಹುದು. ಆದರೆ ಅದನ್ನು ಅಳೆಯುವ ಸ್ವಾಸ್ಥ್ಯ ಕೇಳಿಸಿಕೊಂಡವರಿಗೆ ಇರುತ್ತದೆಯೇ? ಸ್ನಾನದ ಮನೆಯಲ್ಲಿ ನಿಂತುಕೊಂಡು ಶವರ್ ನೀರಿಗೆ ತಲೆಕೊಟ್ಟಿದ್ದೆ. ವಿಚಾರ ತುಂಬಾ ಆಳಕ್ಕೆ ಹೋಗುತ್ತಿದ್ದಂತೆ ಈ ಕಥೆಯ ಉಸಾಬರಿಯೇ ಬೇಡ ಅನಿಸಿತು. ಸುಮ್ಮನಾಗಿ ಬಿಡೋಣ ಅನ್ನುವ ಮನಸ್ಸಾಯಿತು. ತಲೆಯನ್ನು ಶಾಂಪು ತೊಳೆದಷ್ಟು ಸುಲಭವಾಗಿ ನನ್ನ ಮನಸ್ಸಿನಿಂದ ಅವಳನ್ನು ತೊಳೆದು ಹಾಕುವುದು ಸಾಧ್ಯವಿರಲಿಲ್ಲ. ಒಳಗೆ ಅವಳು ಬೆಳೆಯತೊಡಗಿದಳು.

ಕಥೆ ಬರೆಯದ ಹೊರೆತು ಕಥೆಗಾರನಿಗೆ ಅದರಿಂದ ಬಿಡುಗಡೆಯಿಲ್ಲ.

ಸ್ನಾನ ಮುಗಿಸಿ ಬಂದವನು ತಿಂಡಿ ತಿನ್ನದೆ ಪೆನ್ ಹಿಡಿದು ಕೂತೆ. ಎಲ್ಲಿಂದ ಆರಂಭಿಸುವುದು? ಮೆಹಂದಿ ವಿಚಾರ ಹಿಡಿದುಕೊಂಡು ಬರೆಯುತ್ತಾ ಹೋಗಿ ಓದುವವರಿಗೆ ಅವಳ ಬಗ್ಗೆ ಮರುಕ ಬರುವಂತೆ ಮಾಡುವುದೇ? ‘ಆ ಥರ’ ಅನ್ನುವ ಗೆಳೆಯನ ಮಾತಿಗೆ ಜೋತು ಬಿದ್ದು ಅವಳು ಆ ದಾರಿ ಆಯ್ದುಕೊಂಡಿದ್ದಕ್ಕೆ ಬಡತನ, ಮಗನ ಕಾಯಿಲೆ, ಗಂಡನ ಸ್ಥಿತಿಗತಿಗಳನ್ನು ಕಲ್ಪಿಸಿಕೊಂಡು ಇದಕ್ಕೆಲ್ಲ ಕಾರಣ ಅವಳ ಪರಿಸ್ಥಿತಿ ಅಂತ ಬರೆದು ಮತ್ತೊಂದು ಕನಿಕರವನ್ನು ಅವಳ ಒಡಲಿಗೆ ಹಾಕಲೇ? ಎಲ್ಲವೂ ಇದ್ದು ತಾನಾಗಿಯೇ ಆ ದಾರಿ ಆಯ್ದುಕೊಂಡಳು ಅನ್ನುವುದನ್ನು ತೀರಾ ವಿವರಣೆಗಳನ್ನು ಬಳಸಿ ಬರೆದು ಕೆಲವು ಮಹಿಳಾ ಓದುಗರ ಕೆಂಗಣ್ಣಿಗೆ ಗುರಿಯಾಗಿಲೇ? ಅವಳ ದೇಹ ಮತ್ತು ಹಾಸಿಗೆಯ ಕ್ರಿಯೆಗಳನ್ನು ವರ್ಣಿಸುವುದಕ್ಕೆ ಕಥೆಯ ಮುಕ್ಕಾಲು ಭಾಗವನ್ನು ಬಳಸಿಕೊಂಡು ಉಳಿದ ಕಾಲು ಭಾಗದಲ್ಲಿ ಚೂರು ಪಾರು ಕಾರಣಗಳನ್ನು ತುರುಕಿ ಪುರುಷ ಓದುಗರು ಮತ್ತೆ ಮತ್ತೆ ಓದುವಂತೆ ಮಾಡಲೇ? ಅವಳು ಆ ದಾರಿಯವಳೇ ಅಲ್ಲ ಯಾರೊ ಯಾವುದೋ ಒಂದು ಕಾರಣಕ್ಕೆ ಅಪಾರ್ಥ ಮಾಡಿಕೊಂಡಿದ್ದರಿಂದ ಅವಳಿಗೆ ಆ ಪಟ್ಟ ಬಂದಿದೆ ಅಂತ ಬರೆಯಲೇ? ಏನೇ ಆಗಲಿ ಅವಳು ಮಾಡಿದ್ದೆ ಸರಿ ಅಂತ ಗಣಿತದ ಪ್ರಮೆಯಗಳಂತೆ ಸಾಧಿಸಲೇ? ಇನ್ನೂ ಹುಟ್ಟೆ ಇರದ ಕಥೆಗೆ ನಾನು ಸೋಲಲಾರಂಭಿಸಿದ್ದೆ..
ಅದು ಕಥೆಯ ಹೆಚ್ಚುಗಾರಿಕೆಯೊ? ಅಥವಾ ಕಥೆಗಾರನ ಹೆಚ್ಚುಗಾರಿಕೆಯೊ?
ಫೋನ್ ರಿಂಗಾಯಿತು. ಆಗ ಮೆಸೇಜು ಕಳಿಸಿದ್ದಕ್ಕೆ ಪುಣ್ಯಾತ್ಗಿತ್ತಿ ಈಗ ಕಾಲ್ ಮಾಡುತ್ತಿದ್ದಾಳೆ. ರಿಸೀವ್ ಮಾಡಿ ಕಿವಿಗಿಟ್ಟುಕೊಂಡೆ. “ಏನೋ ಅದು? ಹೊಸ ಕವನ ಏನಾದ್ರೂ ಬರೆದ್ಯಾ?” ಅಂತ ಕೇಳಿದಳು. ಏನಿಲ್ಲ ಸುಮ್ಮನೆ ಒಂದು ಸಾಲು ನೆನಪಾಯ್ತು ಅಂತ ಹೇಳಿ ಸುಮ್ಮನಾದೆ. ಬೆಳಗ್ಗೆ ಕಂಡ ಅವಳು ಮತ್ತು ನನ್ನೊಳಗೆ ಎದ್ದಿದ್ದ ಕಥೆಯ ಎಳೆಗಳ ಬಗ್ಗೆ ಅವಳ ಬಳಿ ಹೇಳಿಕೊಳ್ಳಬೇಕು ಅನಿಸಲಿಲ್ಲ. ಒಂದು ಹೆಣ್ಣಿನ ಬಗ್ಗೆ ಮತ್ತೊಂದು ಹೆಣ್ಣಿನ ಬಳಿ ಕೇಳುವುದು ಸರಿ ಅನಿಸಲಿಲ್ಲ. ಸಲಹೆ ಪಡೆದು ಬರೆಯಲಿಕ್ಕೆ ಇದು ಭಾರತ ಹಣಕಾಸು ನೀತಿಯ ಪ್ರಬಂಧವಾಗಿರಲಿಲ್ಲ. “ಸರಿ ಮತ್ತೆ ಮಾಡ್ತೀನಿ” ಅಂದು ಕಾಲ್ ಕಟ್ ಮಾಡಿ ಫೋನ್ ದೂರಕ್ಕೆ ತಳ್ಳಿದೆ. ಎದ್ದು ಬಾಲ್ಕನಿಯ ಒಂದು ಅಂಚಿಗೆ ಬಂದು ನಿಂತೆ.

ಬೆಳಗ್ಗೆ ಕಂಡ ಹೆಂಗಸಿನ ಮುಖವನ್ನು ನೆನಪಿಸಿಕೊಂಡೆ. ಎಷ್ಟು ಚಂದವಾಗಿದ್ದಾಳೆ! ಮೂಗು, ಮೂಗುತಿ, ಕಣ್ಣಮುಂದೆ ಬಂದಿದ್ದ ಎರಡೇ ಎರಡು ಮುಂಗುರುಳು, ತುಟಿಯ ಕೆಳಗಿನ ಮಚ್ಚೆ, ಅಮಲು ತುಂಬಿಕೊಂಡಿರುವ ಕಣ್ಣುಗಳು ಈ ಕ್ಷಣಕ್ಕೆ ಓಡಿಹೋಗಿ ಆ ರಸ್ತೆಗಳಲ್ಲಿ ಅವಳನ್ನು ಹುಡುಕಬೇಕು ಅನಿಸಿತು. ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಹೊರಟುಹೋದವವು. ನನ್ನ ಕಥೆಯ ಪಾತ್ರವನ್ನು ನಾನೇ ಮೋಹಿಸತೊಡಗಿದ್ದೆ!

ಆ ದಿನ ಅವಳ ಗುಂಗಿನಲ್ಲೇ ಕಳೆದು ಹೋಯಿತು. ಸಂಜೆ ಹೊತ್ತಿಗೆ ಬಾಲ್ಕನಿಯಲ್ಲಿ ಕೂತು ಒಂದಷ್ಟು ಬರೆದೆ. ಚಂದಿರನಿದ್ದಿದ್ದರೆ ಕಥೆಗೆ ಇನ್ನಷ್ಟು ಒಳ್ಳೆಯ ಸಾಲು ಹೊಳೆದಿರೊವು ಆದರೆ ಅವನಿರಲಿಲ್ಲ. ಮೆಹಂದಿಯನ್ನು ಬಿಟ್ಟು ಮತ್ತೆಲ್ಲಿಂದನೂ ಕಥೆಯನ್ನು ಆರಂಭಿಸಲು ಸಾಧ್ಯವಾಗಲಿಲ್ಲ. ಅವಳು ಮತ್ತು ಬೆಳಗ್ಗೆ ಸಿಕ್ಕಿದ್ದ ಇವಳು ಕಥೆಯಲ್ಲಿ ಬೇರೆ ಬೇರೆಯಾಗಿಯೇ ಸಾಗಿದ್ದರು. ಕೊನೆಯಲ್ಲಿ ಇಬ್ಬರು ಒಬ್ಬರೇ ಅನ್ನುವ ತೀರ್ಮಾನ ಕೊಟ್ಟು ಕಥೆ ಮುಗಿಸುವ ಯೋಚನೆಯಲ್ಲಿದ್ದೆ. ಅವಳನ್ನು ಮೋಹಿಸಿದ ನನಗೆ ಅವಳು ‘ಆ ಥರ’ ಅಂತ ಕಥೆಯಲ್ಲಿ ನಿರೂಪಿಸಲು ಕಷ್ಟವಾಗತೊಡಗಿತು. ಅದಿಲ್ಲದಿದ್ದರೆ ಕಥೆಗೊಂದು ತೂಕವೇ ದಕ್ಕುವುದಿಲ್ಲ. ಮಧ್ಯರಾತ್ರಿ ಕಳೆದರೂ ಕಥೆ ಎರಡು ಪುಟ ಬಿಟ್ಟು ಮುಂದೆ ಸಾಗಲಿಲ್ಲ. ಯೋಚಿಸುತ್ತಾ ಯೋಚಿಸುತ್ತಾ ಯಾವ ಹೊತ್ತಿಗೆ ಮಲಗಿದೆನೋ ಗೊತ್ತಾಗಲಿಲ್ಲ.

ಬೆಳಗ್ಗೆ ಎದ್ದವನೇ ಮತ್ತೆ ಅದೇ ಟೀ ಅಂಗಡಿ ಹತ್ತಿರ ಬಂದು ನಿಂತಿದ್ದೆ. ಅವಳು ಬರುವ ನಂಬಿಕೆ ಇಲ್ಲದಿದ್ದರೂ ತುಂಬಾ ಹೊತ್ತು ಕಾದಿದ್ದೆ. ಕುದಿಯುತ್ತಿದ್ದ ಚಹಾದ ಸಂಕಟದಲ್ಲಿ ನನಗೆ ಅವಳು ಕಾಣಿಸಿದಳು. ಅಂಗಡಿಯವನು “ಏನ್ ಸಾಮಿ ಯಾರ‍್ನೊ ಕಾಯ್ತಾ ಇದ್ದೀರಿ” ಅಂತ ಕೇಳಿ ಬಿಟ್ಟ. ನಾನು ಸಬೂಬು ಹೇಳಿ ಅಲ್ಲಿಂದ ಹೊರಟು ಬೀದಿಯ ತುಂಬಾ ಹಾಗೆ ಸುತ್ತಾಡಿದೆ. ಎಲ್ಲಾದರೂ ಕಣ್ಣಿಗೆ ಬೀಳಬಹುದು ಅನ್ನುವ ಆಸೆ. ನಿಜಕ್ಕೂ ಅವಳು ಮತ್ತೆ ಎದುರಾಗುವುದನ್ನು ನಾನು ಬಯಸಿದ್ದೆನೆ? ಅವಳು ಸಿಗಬಾರದು ಅಂದುಕೊಂಡೆ ಹುಡುಕುತ್ತಿದ್ದೆನೆ? ಗೊತ್ತಿಲ್ಲ. ಸಿಗುವುದರ ಖಚಿತತೆ ಇಲ್ಲದನ್ನು ಹುಡುಕುವುದರಲ್ಲೇ ಬದುಕಿಗೊಂದು ಮಜಾ ಇದೆ.

ಮರುದಿನವೂ ಏನನ್ನೂ ಬರೆಯಲಾಗಲಿಲ್ಲ. ಸಂಜೆ ಕಿವಿಗೆ ಹೆಡ್ಫೋನ್ ತೂರಿಸಿಕೊಂಡು ಒಂದು ಲಾಂಗ್ ವಾಕ್ ಹೊರಟೆ. ವಾಪಸ್ಸು ಬರುವಾಗ ದಾರಿಯಲ್ಲಿ ಆ ಥರ ಅಂತ ವ್ಯಾಖ್ಯಾನ ಕೊಟ್ಟಿದ್ದ ಸೀನಾ ಸಿಕ್ಕ. ಅವನ ಮುಂದೆ ನಿನ್ನೆಯಿಂದ ನಡೆದುದೆಲ್ಲವನ್ನು ಹೇಳಿಕೊಳ್ಳಬೇಕು ಅನಿಸಿತು ಆದರೂ ಹೇಳಿಕೊಳ್ಳಲು ಮನಸಾಗಲಿಲ್ಲ. ಅವಳ ಕುರಿತು ನಾನು ಕೇಳಿದರೆ ಏನೆಂದುಕೊಂಡಾನು? ನಾನು ಕೂಡ ಅವಳ ಪಾಲಿನ ಮತ್ತೊಬ್ಬ ಗಿರಾಕಿಯಾಗಲು ಹೊರಟವನು ಅಂದುಕೊಂಡು ಬಿಟ್ಟರೆ? ಇದೊಳ್ಳೆ ರಗಳೆಯಾದೀತು ಅಂದುಕೊಂಡು ಸುಮ್ಮನಾದೆ. ಮನುಷ್ಯನಿಗೆ ಸುಖ ಬೇಕು ಆದರೆ ಅದರೊಂದಿಗಿನ ದೂರುಗಳು ಬೇಡ. ಇಬ್ಬರು ಒಂದು ಟೀ ಅಂಗಡಿಗೆ ಹೋಗಿ ಕೂತೆವು. ಮಾತಿಗೆ ಮಾತು ಪೋಣಿಸುವುದಕ್ಕೆ ಟೀದಂತಹ ಜೊತೆಗಾರ ಬೇರಿಲ್ಲ! ಟೀ ಗ್ಲಾಸ್ ಕೈಗೆತ್ತಿಕೊಂಡು ಅವನು ನನ್ನ ಮನಸ್ಸು ಓದಿಕೊಂಡವನಂತೆ “ನಿನಗೆ ಇದ್ನ ಹೇಳಬೇಕು ಅಂತಾನೇ ಹುಡುಕ್ತಿದ್ದೆ ನೋಡು. ಅವತ್ತು ನಿನಗೆ ತೋರಿಸಿದ್ನಲ್ಲ ಅದೇ ಆ ಥರದೊಳು ಅಂತ. ನಿನ್ನೆ ಸತ್ತೊಗಿ ಬಿಟ್ಳು ಮಾರಾಯ. ಯಾರನ್ನೂ ಲವ್ ಮಾಡ್ತಿದ್ಲಂತೆ. ಆ ಹುಡುಗನ ಜೊತೆ ಸಲುಗೆ ಇತ್ತಂತೆ. ಆವಾಗ ಅವನು ವಿಡಿಯೋ ಮಾಡಿಕೊಂಡು ಇಟ್ಟುಕೊಂಡಿದ್ನಂತೆ. ಯಾವುದೋ ಕಾರಣಕ್ಕೆ ಲವ್ ಮುರಿದುಹೋಗಿದೆ. ಲವ್…” ಟೀ ನೆತ್ತಿಗೇರಬೇಕು ಕೆಮ್ಮ ತೊಡಗಿದ. “ನಿಧಾನ ಮಾರಾಯ..” ಅನ್ನುವ ಕನಿಷ್ಠ ಮಾತು ಕೂಡ ನನ್ನಿಂದ ಆಚೆ ಬರದಿರುವುದು ಗೊತ್ತಾಗಿ ನನ್ನಷ್ಟಕ್ಕೆ ನನಗೆ ಆಶ್ಚರ್ಯವಾಯಿತು. ಸಾವರಿಸಿಕೊಂಡು ಅವನು ಮತ್ತೆ ಮುಂದುವರೆಸಿದ “… ಲವ್ ಮಾಡಿದ ಹುಡುಗ ವಿಡಿಯೋಗಳನ್ನು ವಾಟ್ಸಾಪ್ನಲ್ಲಿ ಹರಿ ಬಿಟ್ಟಿದ್ದಾನೆ. ಅದು ಜನರಿಗೆಲ್ಲ ಗೊತ್ತಾಗಿದೆ. ಅವಮಾನ ತಾಳೋಕೆ ಆಗ್ದೆ ನಿನ್ನೆ ಮನೆಯಲ್ಲಿ ನೇಣು ಹಾಕಿಕೊಂಡು ಸತ್ತೊದ್ಲು ಪಾಪ” ಅಂದು ಮಾತು ನಿಲ್ಲಿಸಿದ. ನನಗಂತೂ ಯಾರೋ ತಲೆಗೆ ಹಿಂದಿನಿಂದ ಬಾರಿಸಿದಂತಾಯಿತು. ಹೋಟೆಲ್ನಲ್ಲಿ ಗುಜುಗುಜು ಸದ್ದಿನ ನಡುವೆಯೂ ಏನು ಕೇಳಿಸದಂತಾಯಿತು. “ನಿನ್ನೆ ಬೆಳಗ್ಗೆಯಷ್ಟೇ ಅವಳನ್ನು ನೋಡಿದ್ದೆ..” ಅನ್ನುವ ಮಾತು ಗಂಟಲಿನಿಂದ ತುಟಿಗೆ ಬರುವುದರೊಳಗೆ ಸತ್ತುಹೋಯಿತು. ನಾನು ಏನ್ನೊಂದನ್ನು ಮಾತಾಡಲಿಲ್ಲ. ಅವನು ಬಿಲ್ಲು ಕೊಟ್ಟ. ನಾನು ಮನೆಯ ದಾರಿ ಹಿಡಿದೆ. ಅವನಿಗೆ “ಬರ‍್ತೀನಿ ಕಣೋ..” ಅಂತ ಅಂದೆನೋ ಇಲ್ವೋ ಗೊತ್ತಾಗಲಿಲ್ಲ. ನನ್ನ ಮನಸ್ಸಿನಂತಹ ಕತ್ತಲು ಆಚೆಗೂ ಇತ್ತು. ಮನೆ ಸೇರಿದವನೇ ಬಾಲ್ಕನಿ ತಲುಪಿ ದೂರದ ಶೂನ್ಯವನ್ನು ದಿಟ್ಟಿಸುತ್ತಾ ಕೂತೆ. ಕಥೆ ಮುಗಿಸುವ ಮುನ್ನ ಕಥೆಯ ಪಾತ್ರವೇ ಇಲ್ಲವೆಂದಮೇಲೆ, ನಾನು ಮೋಹಿಸಿದ ಪಾತ್ರವೇ ಇಲ್ಲವೆಂದಮೇಲೆ, ಕಥೆಯ ಹೊರತಾಗಿಯೂ ಒಂದು ಜೀವದ ಕೊನೆ.. ಇವೆಲ್ಲವೂ ನನ್ನನ್ನು ತುಂಬಾ ಕಾಡತೊಡಗಿದವು. ರೂಮಿಗೆ ಹೋಗಿ ಎರಡು ಪುಟದಷ್ಟು ಬರೆದಿದ್ದ ಕಥೆಯನ್ನು ಹರಿದು ಹಾಕಿದೆ. ಇನ್ಮೇಲೆ ಕಥೆ ಬರೆಯುವ ಉಸಾಬರಿಯೇ ಬೇಡ ಅಂದುಕೊಂಡೆ.

ಬೆಳಗ್ಗೆ ಎದ್ದಾಗ ಬಿಸಿಲಿತ್ತು. ಚಹಾದಂಗಡಿ ನೆನಪಾಯಿತು. ಮತ್ತದೇ ನೆನಪುಗಳಿಗೆ ಬೀಳುವುದು ಬೇಡವೆನಿಸಿತು. ಆದರೆ ಚಹಾದಂಗಡಿಗೆ ಹೋಗುವುದು ಪ್ರತಿ ಬೆಳಗಿನ ಒಂದು ಭಾಗವೇ ಆಗಿರುವಾಗ ತಪ್ಪಿಸಿಕೊಂಡು ಉಳಿಯಲು ಕೂಡ ಸಾಧ್ಯವಾಗಲಿಲ್ಲ. ಎದ್ದು ಹಾಗೆ ಚಹಾದಂಗಡಿಯ ಕಡೆ ಹೆಜ್ಜೆ ಹಾಕಿದೆ. ಟೀ ಅಂಗಡಿಯ ತಾತ ಬರ್ರ್ ಬರ್ರ ಅನ್ನುವ ಸ್ಟವ್ ಮೇಲೆ ಚಹಾ ಕುದಿಸುತ್ತಿದ್ದ. ನಾಲ್ಕಾರು ಜನ ಚಹಾಕ್ಕಾಗಿ ಕಾದಿದ್ದರು. ಅವಳು ಮತ್ತೆ ನೆನಪಾದಳು. ಅದನ್ನು ಮರೆಯುವ ಉದ್ದೇಶದಿಂದ “ಏನ್ ತಾತ ಮೊಮ್ಮಗಳದ್ದು ಬಿಎಸ್ಸಿ ಮುಗಿತೇನು..?” ಅನ್ನುತ್ತಾ ಮಾತಿಗೆಳೆದೆ. ತಾತ ಏನೇನೋ ಹೇಳತೊಡಗಿದರು. ಅದರಲ್ಲೂ ಇರಬಹುದಾದ ಕಥೆಯು ನನ್ನ ತಲೆ ಹೊಕ್ಕುವುದು ಇಷ್ಟವಿರಲಿಲ್ಲ. ಹಾಡು ಕೇಳಲು ಕಿವಿಗೆ ಹೆಡ್ಫೊನ್ ಸಿಕ್ಕಿಸಿಕೊಂಡು ಶಬ್ದ ಹೆಚ್ಚಿಸಿಕೊಂಡೆ. ಜಿಂದಗಿ ಕಾ ಸಫರ್..‌ ಎಂದು ಕಿಶೋರ್‌ ಕುಮಾರ್‌ ಹಾಡತೊಡಗಿದ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

8 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading