ಸದಾಶಿವ್ ಸೊರಟೂರು ಕಥಾ ಅಂಕಣ- ಅನ್‍ವಾಂಟೆಡ್‌ 72…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

33

ಮರದ ತುದಿಯಿಂದ ಹಕ್ಕಿಯೊಂದು ಚಿಮ್ಮಿ ಹಾರಿಹೊಯಿತು. ಅದರ ಜೊತೆಗಾರ ಹಕ್ಕಿಯು ಅದರೊಂದಿಗೆ ರೆಕ್ಕೆ ಕದಲಿಸಿತು. ಎರಡೂ ಹಕ್ಕಿಗಳು ನೀಲ ಮುಗಿಲ ಹೃದಯದೊಳಗೆ ಹಾದು ಹೋದವು.

ಅದೇ ಮರದ ಕೆಳಗೆ ಹಾಸಿದ್ದ ಕಲ್ಲುಬೆಂಚಿನ ಮೇಲೆ ಅವಳ ಪಕ್ಕ ಕೂತು.. ಮುಂಗೈ ಅದುಮಿ ಅವನು ಅವಳ ಎದೆಗೊಂದು ಸೇತುವೆ ಹೊಸೆದಿದ್ದ.‌ ಅವಳ ಮುಖದಲ್ಲಿ ತುಸು ಅಂಜಿಕೆ, ತುಸು ನಾಚಿಕೆ.‌ ಇವನ ಮುಖದಲ್ಲಿ ತುಸು ಸಂಭ್ರಮ, ತುಸು ಕಳವಳ.

ಅವನು ಮೆಲ್ಲಗೆ ತನ್ನೆಲ್ಲಾ ಉಸಿರನ್ನು ಒಟ್ಟು ಮಾಡಿ ‘ಈ ಬದುಕು ನಿನ್ನದು..’ ಅಂದ. ‘ನನ್ನ ಪ್ರತಿದಿನಗಳೂ ನೀ ಊರುವ ಹೆಜ್ಜೆಗಳು..’ ಅಂದ.. ಅವನ ಕವಿ ಆಗಿದ್ದು, ಅವಳು ಕವಿತೆಯಾಗಿದ್ದಳು. ಅವಳನ್ನು ಮತ್ತೆ ಮತ್ತೆ ತಿದ್ದುತ್ತಿದ್ದ, ಅವಳಲ್ಲಿ ಲಯ ತೊನೆಯುತ್ತಿತ್ತು.

ಬದುಕಿನ ಓಟದಲ್ಲಿ ಅವಳ ಕಾಲುಂಗುರ ಎಲ್ಲೊ‌ ಕಳೆದು ಹೋಗಿತ್ತು. ಸಿಗುವಂತದ್ದು ಹುಡುಕಬಹುದು. ಸಿಗದೆ ಇರುವುದನ್ನು ಹೇಗೆ ಹುಡುಕುವುದು. ಅವಳು ಹುಡುಕಲಿಲ್ಲ. ಹುಡುಕಲಿಕ್ಕೆ ಕಾಲುಂಗುರ ತೊಡಿಸಿದವನೇ ಇರಲಿಲ್ಲ. ಇದು ಅವನಿಗೂ ಗೊತ್ತು. ಇವಳಿಗೂ ಗೊತ್ತು.‌ ಅವನು ಕೇಳಲಿಲ್ಲ. ಇವಳೂ ಹೇಳಲಿಲ್ಲ. ಹೇಳಿ ಕೇಳುವ ಸಮಯವೂ ಅದಾಗಿರಲಿಲ್ಲ.

ಅವಳು ಮಾತಾಡಲಿಲ್ಲ.. ಬರೀ ನಕ್ಕಳು. ನಗು ಅಲೆ ಅಲೆಯಾಗಿ ಹರಿದಾಡಿತು. ನಗು ಎಲ್ಲವನ್ನೂ ಅವರ ನಡುವ ಹೊಸದಾಗಿ ಶುರು ಮಾಡಿತ್ತು..

ಅವಳು ಅವನ ಕೈ ಹಿಡಿದಿದ್ದಳು. ಹಿಡಿತದಲ್ಲಿ ಬಿಗಿ ಇತ್ತು. ಕಣ್ಣ ಅಂಚಲ್ಲಿ ಹನಿ ನೀರಿತ್ತು..

ಆ ನಗರಕ್ಕೆ ಒಂದು ಹೃದಯ ಇತ್ತು. ಹೃದಯ ಭಾಗದಲ್ಲಿ ಅಂಗಡಿ ಇಟ್ಟುಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರ ಜೀವನವೂ ಇತ್ತು. ಆ ಹೃದಯ ಭಾಗದಿಂದ ತುಸು ಕೆಳಕ್ಕೆ ಸರಿದರೆ ಅಲ್ಲೊಂದು ಪುಟ್ಟ ಹೂವಿನ ಅಂಗಡಿ. ಹೂವು ಮಾರುವುದು ಮತ್ತು ಒಲವು ಹಂಚುವುದು ಎರಡಕ್ಕೂ ಏನೊ ಸಾಮ್ಯತೆ ಇದೆ ಅನಿಸುತ್ತೆ. ಜನ ಒಬ್ಬರಿಗೊಬ್ಬರು ಹೂ ಕೊಟ್ಟುಕೊಂಡು ಬದುಕುವಂತಾದರೆ ಜಗತ್ತಿನಲ್ಲಿ ಪ್ರೀತಿಗೆಲ್ಲಿ ಬರಗಾಲ. ಬಾಳು ಹೂವುನಷ್ಟೆ ಸೊಗಸಾಗಬಹುದು.

ಆ ಅಂಗಡಿಯಲ್ಲಿ ಅಜ್ಜಿಯೊಬ್ಬಳು ಹೂ ಹರಡಿಕೊಂಡು ಕೂರುತ್ತಾಳೆ. ಬಣ್ಣದ ಹೂವುಗಳು. ತರಹೆವಾರಿ ಹೂವುಗಳು. ಅಲ್ಲಿ ಚೆಂದದ ಗುಲಾಬಿಗಳೂ ಸಿಗುತ್ತವೆ. ಇತ್ತಿತ್ತಲಾಗಿ ಆ ಅಂಗಡಿ ಗುಲಾಬಿಗೆ ಹೆಸರು. ಬಂದವರೆಲ್ಲಾ ಗುಲಾಬಿಗಳ ಮೇಲೆ ಮನಸಾಗಿ ಒಂದಾದರೂ ಗುಲಾಬಿ ಎತ್ತಿಕೊಂಡು ಹೋಗುತ್ತಾರೆ. ಗುಲಾಬಿಗಳು ಖರ್ಚಾಗುತ್ತವೆ. ಗುಲಾಬಿ ಎತ್ತಿಕೊಡುವ ಅಜ್ಜಿ ತನ್ನ ಸೋತ ತುಟಿಗಳಿಂದ ಬದುಕು ಹೂವಾಗಲಿ ಎನ್ನುತ್ತಾಳೆ. ಜನರ ಮನಸು ಅರಳುತ್ತದೆ. ಜನ ಬರೀ ಹೂವಿಗಾಗಿ ಬರುವುದಿಲ್ಲ. ಅಜ್ಜಿಯ ಹಾರೈಕೆಗಾಗಿಯೂ ಬರುತ್ತಾರೆ.

ಇತ್ತೀಚಿಗೆ ಅಲ್ಲೊಂದು ಹೂ ಕೊಳ್ಳುವ ‘ಕೈ..: ವಾರಕ್ಕೊಮ್ಮೆ ಹಾಜರಾಗುತ್ತದೆ. ತನ್ನಷ್ಟಕ್ಕೆ ತಾನು ಏನನ್ನೊ ಕನಲುತ್ತದೆ. ಒಂದೇ ಒಂದು ಚೆಂದದ ಹೂವು ಕೊಳ್ಳುತ್ತದೆ. ಅಜ್ಜಿಯ ಹಾರೈಕೆ ಪಡೆಯುತ್ತದೆ. ಬಂದ ದಾರಿಯಲ್ಲೆ ವಾಪಸ್ ಮರುಳುತ್ತದೆ.

ವಾರ ತಪ್ಪದೆ ಮರಳುತ್ತದೆ. ಆ ಕೈ ತಪ್ಪದೆ ಮರುಳುತ್ತದೆ. ಹೂ ಹಿಡಿದು ಗೆಲುವಿನಲ್ಲಿ ಹೊರಟ ಆ ಕೈಗೊಂದು ಪುಳಕವಿರುತ್ತದೆ. ಹೂ ಕೊಟ್ಟ ಅಜ್ಜಿಗೆ ಖುಷಿ ಇಮ್ಮಡಿಗೊಳ್ಳುತ್ತದೆ.

ಹೃದಯವಿರುವ ನಗರಕ್ಕೆ ತಲೆಯೂ ಇದೆ. ಹೊಟ್ಟೆಯೂ ಇದೆ. ಕೈ ಕಾಲುಗಳೂ ಇವೆ. ನಗರದ ಬಲಗಾಲ ತೊಡೆಯಂತಹ ಜಾಗದಲ್ಲಿ ಒಂದು ದೊಡ್ಡ ಮನೆಯೂ ಇದೆ. ಆ ಮನೆಯ ಹಿಂಭಾಗದಲ್ಲಿ ಸಾಲು ಸಾಲು ಹುಲ್ಲಿನ ಗುಡಿಸಲುಗಳೂ ಇವೆ. ಯಾರದೊ ಸವೆದ ಪಾದಗಳಂತೆ.

ಹೂವಿನ ಅಂಗಡಿಯಿಂದ ಹೊರಟ ತಾಜಾ ಗುಲಾಬಿ ಎರಡ್ಮೂರು ದಿನಗಳ ಬಳಿಕ ಬಾಡಿ ಬಾಡಿ ಅದೇ ಕಂಪು ಉಳಿಸಿಕೊಂಡು ಆ ಗುಡಿಸಲ ಅಂಗಳದಲ್ಲಿ ಬೀಳುತ್ತದೆ. ಒಮ್ಮೆ ಬಿದ್ದ ಬಾಡಿದ ಹೂವು ಗುಡಿಸಲಿ ಜನಕ್ಕೆ ಗಮನಕ್ಕೆ ಬರಲಿಲ್ಲ. ಗಮನಕ್ಕೆ ಬರುವುದಾದರೂ ಹೇಗೆ? ಆದರೆ ಪ್ರತಿವಾರ ತಪ್ಪದೆ ತೀರಾ ಬಾಡಿದ ಗುಲಾಬಿ ಅಂಗಳದಲ್ಲಿ ಬಿದ್ದರೆ ಯಾರಿಗೆ ಕುತೂಹಲ ಮೂಡುವುದಿಲ್ಲ? ಯಾವುದೊ ಹೊತ್ತಿನಲ್ಲಿ ಅಲ್ಲಿ ಗುಲಾಬಿ ಬೀಳುತ್ತದೆ. ಬಿದದ್ದು ಅವರಿಗೆ ತಿಳಿಯುವುದಿಲ್ಲ. ಆದರೆ ಗುಲಾಬಿ ಮಾತ್ರ ಕಾಣಿಸುತ್ತದೆ, ಕಾಡುತ್ತದೆ.

ಎಲ್ಲಿಂದ ಬೀಳುತ್ತದೆ? ಜನ ಮೇಲೆ ನೋಡುತ್ತಾರೆ. ಗಗನದ ಕಡೆ ಹೊರಟ ಕಟ್ಟಡಗಳು ಕಾಣಿಸುತ್ತವೆ. ಖಾಲಿ ಆಕಾಶ ಕಾಣಿಸುತ್ತದೆ. ಆಕಾಶ ಹೂ ಸುರಿಸುತ್ತದಾ? ಸುರಿಸಿದರೂ ಸುರಿಸಬಹುದು ಆದರೆ ಅದು ಬಾಡಿದ ಹೂವಂತೂ ಸುರಿಸುವುದಿಲ್ಲ. ಏಕೆಂದರೆ ಅಲ್ಲಿ ಮನುಷ್ಯರಿಲ್ಲ. ನಿಚ್ಚಳ ಆಕಾಶ ನಿಚ್ಚಳ ಪ್ರೇಮವನ್ನು ಸುರಿಸದೆ ಬೇರೇನು ಸುರಿಸುತ್ತದೆ? ಎಂಬುದು ಅವರ ಪ್ರಶ್ನೆ.

ಅವರು ಹೂವು ಎಲ್ಲಿಂದ ಬಂತು ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಎಷ್ಟು ಬಾಡಿದೆ ನೋಡುತ್ತಾರೆ. ಕಂಪು ಎಷ್ಟಿದೆ ನೋಡುತ್ತಾರೆ. ನೋಡಿ ನೋಡಿ ಗುಲಾಬಿ ಹಿಡಿದ ಕೈಯನ್ನು ಊಹಿಸುತ್ತಾರೆ. ಇವತ್ತು ಆ ಕೈಗೆ ಏನಾಗಿತ್ತು. ಆ ಗುಲಾಬಿ ಯಾರಿಗೆ ಕೊಡಲ್ಪಟ್ಟಿತ್ತು? ಅವರ ಮನಸೇನು, ಭಾವವೇನು ಅಳೆದು ಬಿಡುತ್ತಾರೆ. ಪಾಪ ಗುಲಾಬಿ ಚೂರು ಚೂರೇ ಗುಟ್ಟು ಬಿಟ್ಟುಕೊಡುತ್ತದೆ.‌

ಇಲ್ಲಿ ಹೂ ಮಾರುವ ಅಜ್ಜಿ ಅಂಗಡಿ ಪಕ್ಕ ಮೊನ್ನೆಯಷ್ಟೆ ತನ್ನ ಹಣೆಯ ಮೇಲೆ ಕೆಂಪನೆ ಫ್ಲಸ್ ಮಾರ್ಕ್ ಬರೆದುಕೊಂಡ ಔಷಧಾಲಯವೊಂದು ಶುರುವಾಗಿದೆ. ಔಷಧಿ ಮಾತ್ರೆಗಳ ಕಮ್ಮನೆ ವಾಸನೆ. ಔಷಧಿ ಕೊಳ್ಳುವವರ ಕಣ್ಣಲ್ಲಿ ಆತಂಕಗಳು, ಬಳಲಿಕೆಗಳು, ಇದೆಲ್ಲವೂ ಸಾಕು ಅನ್ನುವ ಸುಸ್ತು.‌.. ಚೆಂದದ ಹೂವಿನ ಪಕ್ಕ ಬದುಕಿನ ಈ ಎಷ್ಟೊಂದು ನರಳಿಕೆಗಳು. ಹೂ ಕೊಳ್ಳುವವರ ಖುಷಿ, ಸಂಭ್ರಮ, ಪುಳಕ..‌ ಔಷಧಿ ಅಂಗಡಿಯ ತಲ್ಲಣಗಳಿಗೆ ಯಾಕೊ ಹೊಂದುತ್ತಿಲ್ಲ.‌ ಆದರೂ ಎರಡೂ ಪಕ್ಕ ಪಕ್ಕ. ಬದುಕಿನ ವೈರುದ್ಯದಂತೆ.

ಔಷಧಿ ಅಂಗಡಿ ಪಕ್ಕ ಹೂವಿನ ಅಂಗಡಿಗೇನು ಕೆಲಸ? ಔಷಧಿ ಅಂಗಡಿ ಪಕ್ಕ ಒಂದು ಆಸ್ಪತ್ರೆ ಇರಬೇಕಿತ್ತು ಆದರೆ ಅದಿರಲಿಲ್ಲ. ಹೂವಿನ ಅಂಗಡಿಯ ಪಕ್ಕ ಒಂದು ಹಣ್ಣಿನ ಅಂಗಡಿ ಇರಬೇಕಿತ್ತು. ಅದೂ ಇಲ್ಲ. ಈ ಜಗತ್ತಿನ ಮನುಷ್ಯರಂತೆ. ಯಾರು ಯಾರ ಜೊತೆ ಇರಬೇಕಿತ್ತೊ ಅವರ ಜೊತೆ ಇಲ್ಲ. ಯಾರು ಯಾರೊಂದಿಗೆ ಇರಲಾಗದೊ ಅವರೊಂದಿಗೆ ಇದ್ದಾರೆ. ಇಡೀ ಬದುಕಿನ ಸಂಕಟಕ್ಕೆ ಇದೇ ಕಾರಣ.

ಔಷಧಿ ಕೊಳ್ಳುವ ಹೂ ಕೊಂಡಾನೇ? ಅವನ ನೋವೆ ಅವನಿಗಾಗಿರುವಾಗ ಹೂವಿನ ನಗು ಅವನನ್ನು ಸಂತೈಸಬಲ್ಲದೆ.. ಆ ನಗು ಅವನಿಗೆ ಒಗ್ಗಬಹುದೇ? ಹೂ ಕೊಳ್ಳುವ ಖುಷಿ ಮಂದಿ ಔಷಧಿ ಏಕೆ ಕೊಂಡಾರು? ಅತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಅದರ ಪಾಡಿಗೆ ಅದು, ಇದರ ಪಾಡಿಗೆ ಇದು. ಎರಡರದೂ ಹಾದಿ ಬೇರೆ.

ವಾರಕ್ಕೊಮ್ಮೆ ಹೂವು ಕೊಳ್ಳುತ್ತಿದ್ದ ಆ ಕೈ ಈಗಲೂ ತಪ್ಪದೆ ಬರುತ್ತದೆ. ಹೂ ಕೊಳ್ಳುತ್ತದೆ. ನಗುತ್ತದೆ. ಪುಳಕಗೊಳ್ಳುತ್ತದೆ. ಆದರೆ ಕಳೆದವಾರದಿಂದ ಹೂವು‌ ಕೊಂಡು.. ತುಸು ನಿಂತು.. ಆ ಕಡೆ ಈ ಕಡೆ ನೋಡಿ ಮೆಲ್ಲಗೆ ಔಷಧಾಲಯದ ಕಡೆ ತೆರಳುತ್ತದೆ. ಪಿಸು ದನಿಯಲ್ಲಿ ಏನನ್ನೊ ಕೇಳುತ್ತದೆ. ಕೊಟ್ಟ ಔಷಧಿಯನ್ನು ಮುಚ್ವಿಟ್ಟುಕೊಂಡು ದಡಬಡ ಹೊರಟು ಬಿಡುತ್ತದೆ. ‌ತಿಂಗಳಲ್ಲಿ ಎರಡು ವಾರವಂತೂ ಔಷಧಾಲಯ ಕಡೆ ಹೋಗುತ್ತದೆ. ಕೈಯಲ್ಲಿ ಗುಲಾಬಿಯೂ ಇರುತ್ತದೆ. ಔಷಧಿ ಅಂಗಡಿಯಲ್ಲಿ ಗುಲಾಬಿ.. ಎಷ್ಟೊಂದು ಅಸಂಬದ್ಧ!

ಇತ್ತ ಇಲ್ಲಿ ಈ ಗುಡಿಸಲುಗಳ ಮುಂದೆ ಈಗ ಬಾಡಿದ ಹೂವು ಬೀಳುತ್ತಿಲ್ಲ. ಬದಲಿಗೆ ಗುಲಾಬಿ ಪಕಳೆ ಪಕಳೆಯಾಗಿ ಕಳಚಿ ಬೀಳುತ್ತಿದೆ. ಪ್ರತಿಪಕಳೆಯ ಮೇಲೆ ಯಾವುದೊ ಗೀರಿನ ಗುರುತು. ಪಕಳೆಗಳನ್ನು ಉಜ್ಜಿ ಹಾಕಿದ ಗುರುತು ಕಾಣಿಸುತ್ತಿವೆ. ಬರೀ ಪಕಳೆಗಳು ಬೀಳುತ್ತಿಲ್ಲ. ಆಗಾಗ ಅದರ ಜೊತೆ ಔಷಧಿಯ ಕವರೊಂದು ಬೀಳುತಿದೆ. ಜನಕ್ಕೆ ಇದೇನೆಂದು ಹೊಳೆಯುವುದಿಲ್ಲ. ಅವರು ಕತ್ತು ಎತ್ತಿ ಆಕಾಶ ನೋಡುತ್ತಾರೆ. ಅಲ್ಲಿ ಒಂದು ತುಣುಕು ಮೋಡ ದಾರಿ ತಪ್ಪಿ ಅಲೆಯುತ್ತದೆ. ಇದ್ಯಾಕೆಂದು ಅವರಿಗೆ ಹೊಳೆಯುವುದಿಲ್ಲ.

ಹೂವಿನ ಅಂಗಡಿಗೆ ಬರುತ್ತಿದ್ದ ಆ ಕೈ ಈಗ ಒಮ್ಮೆಯೂ ಹೂವಿನ ಅಂಗಡಿ ಮರೆಯುತ್ತದೆ. ಮರೆತು ಔಷಧಿ ಅಂಗಡಿ‌ ಕಡೆ ನಡೆಯುತ್ತದೆ. ಪಿಸು ಮಾತಲ್ಲಿ ಅದೇನೊ ಔಷಧಿ ಕೇಳುತ್ತದೆ. ಹೂವಿನ ಕಡೆ ತಿರುಗಿ ನೋಡದೆ ಹೊರಟು ಹೋಗುತ್ತದೆ. ಎಂದೊ ಒಮ್ಮೆ ಗುಲಾಬಿ ಎತ್ತಿಕೊಳ್ಳುತ್ತದೆ. ಅದರ ಕೈಗೆ ಪುಳಕವಿಲ್ಲ. ಅಜ್ಜಿಯ ಹಾರೈಕೆಗೆ ಕಾಯುವುದಿಲ್ಲ. ಹೂವು ಎತ್ತಿಕೊಂಡು ದುಡ್ಡು ನೋಡಿ ಏನೊ ಅವಸರವೊ ಎಂಬಂತೆ ಹೊರಟು ಹೋಗುತ್ತದೆ. ಅಜ್ಜಿಗೆ ಗಾಬರಿಯಿಲ್ಲ, ಯೋಚನೆಯೂ ಇಲ್ಲ. ಅಜ್ಜಿಯ ಮೈ ಸುಕ್ಕಿನಲ್ಲಿ ಇವೆಲ್ಲಕ್ಕೂ ಉತ್ತರವಿದೆ ಆದರೆ ಅಜ್ಜಿ ಹೇಳುವುದಿಲ್ಲ. ಹೇಳಿದರೂ ಹೂವು ಮಾರುವ ಬಡ ಅಜ್ಜಿ ಮಾತು ಕೇಳುವವರು ಯಾರು?

ಕೆಲವೇ ದಿನ ಆ ಕೈ ಹೂವಿನ ಅಂಗಡಿ ಹಾದಿ ಮರೆತು ಬಿಟ್ಟಿತು. ಅದರ ಕಡೆ ಕಣ್ಣು ಕೂಡ ಹಾಯಿಸುತ್ತಿರಲಿಲ್ಲ. ನೇರವಾಗಿ ಬಂದು ಔಷಧಾಲಯ ಮುಂದೆ ನಿಂತು ಆ ಔಷಧಿ ಕೇಳುತ್ತಿತ್ತು.‌ ಮೊದಲಿನಂತೆ ಪಿಸು ಮಾತಿಲ್ಲ. ಪುಳಕವಿಲ್ಲ. ಬರುವುದು ಹಣ ಕೊಡುವುದು ಔಷಧಿ ಜೇಬಿನಲ್ಲಿಟ್ಟುಕೊಳ್ಳುವುದು ದಡದಡ ಹೊರಟು ಹೋಗುವುದು.

ಅಲ್ಲಿ ಆ ಗುಡಿಸಲಿನ ಜನಕ್ಕೀಗ ಅಚ್ಚರಿ. ಈ ನಡುವೆ ಯಾಕೊ ಬಾಡಿದ ಹೂ ಬೀಳುತ್ತಿಲ್ಲ. ಅದರ ಕಿತ್ತು ಹೋದ ಪಕಳೆಗಳೂ ಬೀಳುತ್ತಿಲ್ಲ. ಗೀರಿನ ಪಕಳೆಗಳೂ ಇಲ್ಲ. ಆ ಜಾಗದಲ್ಲಿ ಬರೀ ಔಷಧಿಯ ಕವರ್ ಬೀಳುತ್ತಿದೆ. ಎರಡು ವಾರಕ್ಕೊಂದು ಕವರ್ ಅಂತೂ ಖಂಡಿತ ಬೀಳುತ್ತದೆ.‌ ಜನಕ್ಕೆ ಇದ್ಹೇಕೆ ಹೀಗೆಂದು ಅರ್ಥವಾಗುವುದಿಲ್ಲ. ಹೂವಿನ ಬದಲು ಏನಿದು ಔಷಧಿ ಅವರಿಗೆ ಅರ್ಥವಾಗುವುದಿಲ್ಲ.‌ ಅದರ ಮೇಲೆ unwanted 72 ಎಂಬ ಬರಹ. ಹೀಗಿರುವ ಔಷಧ ಯಾವುದು ಅವರಿಗೆ ಗೊತ್ತಿಲ್ಲ.

ಯಾರನ್ನಾದರೂ ಕೇಳುವುದಾ? ಅವರ ಪ್ರಶ್ನೆ? ಯಾಕೆ ಕೇಳಬೇಕು? ಕೊಡುವವರು ಯಾರೊ, ಸೇವೆಸುವವರು ಯಾರೊ.. ಅದರ ನಡುವೆ ನಾವ್ಯಾಕೆ ತೂರಿಕೊಳ್ಳಬೇಕು? ಅವರದೆ ಪ್ರಶ್ನೆ ಅವರದೆ ಉತ್ತರ. ಅವರದೇ ಬೀದಿಯ ಒಬ್ಬ ಯುವಕ ಇದೇನು ಈ ಮಾತ್ರೆಯ ಕವರ್ ಇಲ್ಲಿ ಬಿದ್ದಿದೆ. ದೇಹಗಳು ಸೇರಿದಾಗ ಒಳಗೊಂದು ಕೂಸು ಮೂಡದಂತೆ 72 ಗಂಟೆಯೊಳಗೆ ಹೆಣ್ಣು ತೆಗೆದುಕೊಳ್ಳಬೇಕಾದ ಮಾತ್ರೆ. ಇದು ಇಲ್ಯಾಕೆ ಬಿದ್ದಿದೆ ಅಂತಾನೆ. ಜನ ಅವನ ಮುಖವನ್ನು ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಾರೆ. ಆಶ್ಚರ್ಯ ಆ ಯುವಕನ ಮುಖದಲ್ಲೂ ಇದೆ.

ಅವರು ಮತ್ತೆ ಕತ್ತು ಎತ್ತಿ ಮುಗಿಲ ಕಡೆ ನೋಡುತ್ತಾರೆ. ತುಂಡು ಮೋಡ ಈಗ ತುಸು ಬೆಳೆದಿದೆ. ಕಪ್ಪಾಗಿದೆ. ಯಾರದೊ ಮನಸಿನ ಕಲೆಯಂತೆ ಮುಗಿಲಿಗೆ ಮೆತ್ತಿಕೊಂಡಿದೆ. ಅಲೆದಂತೆ ಕಾಣುತ್ತದೆ.. ಆದರೆ ಅದೆಲ್ಲೂ ಹೋಗುವುದಿಲ್ಲ..

ಔಷಧಿ ಕವರ್ ಬೀಳುತ್ತಲೇ ಇದೆ. ಈಗ ಬಾಡಿದ ಗುಲಾಬಿಯ ಸುಳಿವಿಲ್ಲ.

ಅದೇ ಪಾರ್ಕ್, ಅದೇ ಮರ, ಅದೇ ಕಲ್ಲು ಹಾಸು. ಆದರೆ ಕಾಲ ಅದಲ್ಲ.‌ ಕಲ್ಲು ಹಾಸು ಒಂದು ಕಡೆ ಮುರಿದು ಬಿದ್ದಿದೆ. ಪಾರ್ಕ್ ನಲ್ಲಿ ಎಷ್ಟೊ ಗಿಡಗಳು ಈಗ ಉಳಿದಿಲ್ಲ. ಮರ ಯಾವುದೊ ಹೊಡೆತಕ್ಕೆ ತತ್ತರಿಸಿ ಹೋದಂತೆ ನಿಂತಿದೆ. ಎಲೆಗಳಿಗೆ ಯಾವುದೊ ಬಳಲಿಕೆ. ತುದಿಯ ಚಿಗುರು ಮತ್ಯಾವುದೊ ನರಳಿಕೆ. ಅರ್ಧ ಹಸಿರು, ಅರ್ಧ ಬಡಕಲು..

ಅವರು ಮತ್ತೆ ಕೂತಿದ್ದಾರೆ. ಅವನ ಪಕ್ಕ ಅವಳು.‌ ಇಬ್ಬರ ನಡುವೆ ಅಂತರವೇನು ಇಲ್ಲ.‌ ಮರದ ತುದಿಯ ಮೇಲೆ ಒಂದು ಹಕ್ಕಿ ಬಂದು ಕೂತಿದೆ. ಅದಕ್ಕೆ ಹಾರಿ ಎತ್ತ ಹೋಗಬೇಕೆಂದು ತೋಚುತ್ತಿಲ್ಲ. ಅಲ್ಲಿರುವ ಮರ ಮತ್ತು ಅವಳ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ.

ಅವನ ಕಡೆ ನೋಡಿದಳು. ಅವನ ಕಣ್ಣಲ್ಲಿ ಅವನು ತಂದುಕೊಡುತ್ತಿದ್ದ ಬರೀ ಔಷಧಿ ಕಾಣಿಸಿತು. ಆದರೆ ಅವಳ ಕಣ್ಣಲ್ಲಿ ಅವನಿಗೆ ಇನ್ನೂ ತಾಜಾ ತಾಜಾ ಗುಲಾಬಿ ಹೂವುಗಳು ಕಂಡವು. ಕನಲಿದ.

‘ಎಲ್ಲಾ ನದಿಗಳು ಕೊನೆಯ ಸಮುದ್ರ ಹುಡುಕಿಕೊಳ್ಳುವಂತೆ ಎಲ್ಲಾ ಪ್ರೀತಿಗಳು‌ ಕೊನೆಗೆ ದೇಹ ಹುಡುಕಿಕೊಳ್ಳುತ್ತವಾ..?’ ಎಂದು ಕೇಳಬೇಕು ಅನಿಸುತ್ತದೆ ಅವಳಿಗೆ. ಮಾತು ನುಂಗಿಕೊಳ್ಳುತ್ತಾಳೆ.

ಏನೇನೊ ಹೇಳಬೇಕಿದೆ ಅವಳಿಗೆ. ಮಾತು ಸಿಗುತ್ತಿಲ್ಲ. ಅವು ತಪ್ಪಿಸಿಕೊಂಡು ಅಲೆದಾಡುತ್ತಿವೆ. ಉಸಿರು ಬಿಗಿ ಹಿಡಿದುಕೊಂಡು ನಾಲ್ಕು ಮಾತು ಒಟ್ಟುಗೂಡಿಸಿಕೊಂಡಳು.

‘ನೀನು ಕೊಟ್ಟ ಮಾತ್ರೆಗಳನ್ನು ನಾನು ಗುಲಾಬಿಯೆಂದೆ ತೆಗೆದುಕೊಂಡೆ. ಮಾತ್ರೆಗೂ ಪ್ರೇಮದ ಹೆಸರು ಬರೆದೆ..’

ಎಂದು ಒಮ್ಮೆ ಸಣ್ಣಗೆ ನಕ್ಕಳು..

‘ನನ್ನ ನಿನ್ನ ನಡುವೆ ಮಾತ್ರೆಗಳಿವೆ. ದೇಹ ಹಾಳಾದರೂ ಹಾಳಾಗಲಿ ಮನಸಿನ ಗತಿಯೇನೊ. ದೇಹಕ್ಕೆ ಹೂವಿನ ಪಕಳೆಗಳ ಸಲೀಗೆ ಬೇಕಿತ್ತು.. ಆದರೆ ಅದು ಮಾತ್ರೆ ಕಡೆ ಹೊರಳಿತು.‌ ಆಸ್ಪತ್ರೆಯ ಬೆಡ್ಡಿನ ಮೇಲೆ ಒಲವು ತುಂಬಿದ ನಿನ್ನ ಸೋತ ಕಣ್ಣುಗಳು ಕೈ ಹಿಡಿಯುವುದಿಲ್ಲ..’

ಎನ್ನುತ್ತಾ ಅವನ ಕೈ ಹಿಡಿದಳು. ಅವನ ಕೈ ತಣ್ಣಿಗಿತ್ತು. ಅವನ ಮುಖದಲ್ಲಿ ಏನಿತ್ತು? ನೋಡಬೇಕೆಂದು ಅವಳಿಗೆ ಅನಿಸಲಿಲ್ಲ. ಎದುರುಗಿದ್ದ ಗಿಡ ಮರಗಳು ಯಾಕೊ ಮಸುಕು ಮಸುಕಾದವು. ಅವಳ ಕಣ್ಣಲ್ಲಿ ಎದೆಗಡಲ ಅಲೆ ಚಿಮ್ಮುತ್ತಿತ್ತು..

ಮರದ ತುದಿಯ ಹಕ್ಕಿ.. ಎತ್ತ ಹಾರುವುದೆಂದು ತೋಚದೆ ಅತ್ತ ಇತ್ತ ನೋಡುತ್ತಿತ್ತು..

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: