ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ – ಮುಖ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

22

ದುಬುದುಬು ನೀರು ಹಾಕಿಕೊಂಡು ಕೈ ತೊಳೆದುಕೊಂಡೆ. ಗುರುಗಳು ದೂರದಿಂದ ಕೂಗಿ ಹೇಳಿದರು ‘ಬಣ್ಣದ ನೀರಿನಿಂದ ಕೈತೊಳೆದುಕೊಂಡರೆ ಕೊಳೆ ಹೋಗುತ್ತದೆ, ಬಣ್ಣ ಉಳಿಯುತ್ತದೆ. ಬಣ್ಣ‌ ಕೊಳೆಯಲ್ಲ. ಬಣ್ಣವನ್ನು ಕೊಳೆ ಅಂದುಕೊಂಡ ದಿನ ನಿನ್ನ ಕೈಯೊಳಗೆ ಬ್ರಷಿನ ಹಿಡಿತ ತಪ್ಪುತ್ತದೆ’ ಎಂದಿದ್ದರು.

ನಾನು ಬಣ್ಣದ ನೀರಿನಲ್ಲೇ ಕೈತೊಳೆದುಕೊಂಡೆ. ಕೈ ತುಂಬಾ ರಂಗು.. ಈ ರಂಗನ್ನೂ ಕೂಡ ತೊಳೆದುಕೊಳ್ಳಲೊ, ಉಳಿಸಿಕೊಳ್ಳಲೊ ದ್ವಂದ್ವದಲ್ಲಿ ಹಾಗೆ ನಿಂತೆ. ನೀರು ಎಲ್ಲವನ್ನೂ ತೊಳೆದು ಬಿಡುತ್ತದೆ ನೀರಿಗೆ ಬಣ್ಣವೂ ಒಂದೇ, ಕೊಳೆಯೂ ಒಂದೆ. ಹೊಯ್ದುಕೊಂಡ ಬಣ್ಣದ ನೀರು ಖಾಲಿ, ಕೈಯಲ್ಲಿ ರಂಗು. ಹುಡುಕಬೇಕೆ ನೀರು?’ ಗೊಂದಲಕ್ಕೆ ಬಿದ್ದೆ.

‘ಎಷ್ಟೊತ್ತು ಮಾರಾಯ..’ ಗುರುಗಳು ಮತ್ತೊಮ್ಮೆ ಕೂಗಿದರು. ನಾನು ಕೈಯೊಳಗೆ ಬಣ್ಣ ಉಳಿಸಿಕೊಂಡೇ ಅವರ ಬಳಿ ಓಡಿದೆ.


ಅವರು ನಮ್ಮೂರಿನ ಪುರಸಭೆ ಹತ್ತಿರದ ಇರುವ ಪಾರ್ಕಿನ ಬಳಿ ಒಂದು ಮೂಲೆಯಲ್ಲಿ ತಾವೇ ಬರೆದ ಒಂದಷ್ಟು ಚಿತ್ರಗಳ ರಾಶಿ ಇಟ್ಟುಕೊಂಡು ಕೂತಿರುತ್ತಿದ್ದರು. ಅವು ಮಾರಾಟಕ್ಕಿಟ್ಟ ಚಿತ್ರಗಳು. ನಾನು ಅವುಗಳನ್ನು ನೋಡುತ್ತಲೇ ನಿಂತಿರುತ್ತಿದ್ದೆ. ಎಷ್ಟೊ ದಿನಗಳನ್ನು ನಾನು ಅಲ್ಲಿನ ಚಿತ್ರಗಳನ್ನು ನೋಡುತ್ತಲೇ ಕಳೆದುಬಿಟ್ಟಿದ್ದೆ.‌

ಒಂದಿನ ಅವರು ನನ್ನನ್ನು ಕುರಿತು ಕೇಳಿದರು.

‘ನಿನಗೆ ಚಿತ್ರ ಇಷ್ಟನಾ?’

ನನಗೆ ಆಸೆಯಾಯಿತು. ಕಣ್ಣಲ್ಲಿ ಹೊಳಪು ತುಂಬಿಕೊಂಡಿತು.

‘ಹೌದು..’ ಅಂದೆ.

ಅವರು ನನಗೆ ಕೆಲವು ಚಿತ್ರಗಳನ್ನು ಕೊಡಬಹುದೆಂದು ಭಾವಿಸಿದ್ದೆ. ಆದರೆ ಅವರು ಕೊಡಲಿಲ್ಲ.‌

‘ನಾನು ನಿನಗೆ ಚಿತ್ರ ಕೊಟ್ಟರೆ ಅಷ್ಟು ಮಾತ್ರ ನಿನ್ನ ಬಳಿ ಉಳಿಯುತ್ತದೆ. ನಾನು ನಿನಗೆ ಚಿತ್ರ ಬರೆಯುವುದು ಹೇಳಿಕೊಡುತ್ತೇನೆ. ನೀನು ನಿನ್ನ ಬದುಕನ್ನೇ ಚಿತ್ರವಾಗಿಸಿಕೊಳ್ಳಬಹುದು ಅಥವಾ ಚಿತ್ರವನ್ನೇ ಬದುಕಾಗಿಸಿಕೊಳ್ಳಬಹುದು’ ಎಂದರು.

ನನಗೆ ಅತೀವ ಖುಷಿಯಾಯಿತು.

ಮರುದಿನದಿಂದ ನಾನು ಅವರ ಬಳಿ ಪಾಠಕ್ಕೆ ಹೋಗತೊಡಗಿದೆ.

ಗೆರೆಗಳಿಂದ ಆರಂಭಿಸಿ ಮರ, ಸೂರ್ಯ, ‌ನವಿಲು, ಪ್ರಾಣಿಗಳು, ಬೆಟ್ಟ, ಗುಡ್ಡ ಇಂತಹವುಗಳನ್ನು ಬರೆಯುವುದನ್ನು ಕಲಿಸತೊಡಗಿದರು. ಚಿತ್ರ ಬರೆಯುವುದು ಮತ್ತು ಅದಕ್ಕೆ ಸರಿಯಾದ ಬಣ್ಣ ತುಂಬುವುದು ಇವುಗಳನ್ನು ಕಲಿಯತೊಡಗಿದೆ.

‘ಗುರುಗಳೇ, ಬರೀ ಪ್ರಾಣಿ ಪಕ್ಷಿಗಳದ್ದೆ ಆಯ್ತು‌. ಮನುಷ್ಯರ ಚಿತ್ರ ಬರೆಯುವುದು ಹೇಳಿಕೊಡಲಿಲ್ಲ ನೀವು!’ ಒಂಚೂರು ಅಸಮಾಧಾನದಿಂದ ಕೇಳಿದೆ.

ಅವರು ನಕ್ಕು ಹೇಳಿದರು ‘ಆಗಲಿ.. ನಿನಗೆ ನಾಳೆಯಿಂದ ಮನುಷ್ಯರ ಚಿತ್ರ ಬರೆಯುವುದು ಹೇಳಿಕೊಡುವೆ. ಆಗಬಹುದೊ?’ ಎಂದರು. ನನಗೆ ಖುಷಿಯಾಯಿತು.

ಮರುದಿನದಿಂದ ಮನುಷ್ಯರ ಚಿತ್ರ ಬರೆಯುವ ಪಾಠ ಶುರುವಾಯಿತು. ಆದರೆ ಅವರ ಪಾಠ ನನಗೆ ನಿಜಕ್ಕೂ ಸೋಜಿಗವೆನಿಸಿತು. ಮನುಷ್ಯರನ್ನು ಎಲ್ಲರೂ ಅವರ ತಲೆಯ ಭಾಗದಿಂದ ಬರೆದರೆ ಇವರು ಕಾಲಿನ ಭಾಗದಿಂದ ಬರೆಯಲು ಹೇಳಿಕೊಡತೊಡಗಿದರು.

ಕಾಲು, ತೊಡೆ, ಸೊಂಟ, ಹೊಟ್ಟೆ, ಎದೆ, ಕತ್ತು ಈ ಎಲ್ಲವನ್ನೂ ಸುಂದರವಾಗಿ ಬರೆಯುವುದು ಕಲಿತೆ. ತಲೆ ಮತ್ತು ತಲೆಗೊಂದು ಮುಖ ಬರೆಯುವುದನ್ನು ಕಲಿಯುವುದು ಬಾಕಿ ಇತ್ತು.

ಒಂದಿನ ಗುರುಗಳು ಏಕಾಏಕಿ ಹುಷಾರು ತಪ್ಪಿದರು. ಅವರ ಆರೋಗ್ಯ ತುಂಬಾ ಹಾಳಾಯಿತು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಶುರುವಾಯಿತು. ಒಂದೆರಡು ದಿನ ಆದಮೇಲೆ ಡಾಕ್ಟರ್ ‘ಇವರು ಉಳಿಯುವುದು ಕಷ್ಟ ಸಾಧ್ಯ’ ಅಂದು ಬಿಟ್ಟರು. ನನಗೆ ದುಃಖವಾಯಿತು.

ಒಮ್ಮೆ ಅವರ ಬಳಿ ಕೂತು ಮಾತಾಡುತ್ತಿದ್ದೆ. ಅವರಿಗೆ ಸಾಯುವ ಬಗ್ಗೆ ಯಾವುದೇ ಭಯ, ಆತಂಕ, ದುಃಖವಿರಲಿಲ್ಲ. ಇವರು ನನಗೆ ಮನುಷ್ಯರ ಮುಖ ಬರೆಯುವುದನ್ನು ಹೇಳಿಕೊಡದೆ ಹೊರಟು ಹೋಗುತ್ತಾರಲ್ಲ ಎಂಬ ಸಣ್ಣ ಕೊರಗೂ ಇತ್ತು..

ಯೋಚಿಸಿ, ತುಸು ತಡೆದು ಕೇಳಿದೆ..

‘ಗುರುಗಳೇ ಮುಖ ಬರೆಯುವುದು ನೀವು ಹೇಳಿಕೊಡಲಿಲ್ಲ..’ ಅಂದೆ.

ಅವರು ತುಸು ಹೊತ್ತು ಸುಮ್ಮನಿದ್ದು, ನಂತರ ನಕ್ಕು ಹೇಳಿದರು.

‘ಇಲ್ಲಿ ಯಾರಿಗೂ ಮುಖಗಳೇ ಇಲ್ಲ. ಬರೀ ದೇಹವಿದೆ ಅಷ್ಟೆ. ನೀನು ಯಾವ ಮುಖ ಬರೆದರು ಅದು ಆ ಕ್ಷಣಕ್ಕೆ ಬದಲಾಗುತ್ತದೆ. ಎಲ್ಲಾ ಮುಖಗಳೂ ಒಂದೇ ಅನಿಸುತ್ತೆ’ ಎಂದು ಹೇಳಿ ಒಂದು ನಿಟ್ಟುಸಿರು ತೆಗೆದುಕೊಂಡರು. ಅವರ ಮಾತು ನನಗೆ ಅರ್ಥವಾಗಲಿಲ್ಲ. ಸುಮ್ಮನೆ ನಿಂತಿದ್ದೆ. ನಂತರ ಒಂದರ್ಧ ಗಂಟೆಯೊಳಗೆ ಅವರ ಪ್ರಾಣ ಪಕ್ಷಿ ಹಾರಿ ಹೊಯಿತು.


ನನಗೆ ಮುಖಗಳನ್ನು ಬರೆಯುವುದರ ಕಲಿಕೆ ಕಷ್ಟವಾಗಲಿಲ್ಲ. ಗುರುಗಳು ಮುಖಗಳನ್ನು ಬರೆಯುವುದನ್ನು ಯಾಕೆ ಹೇಳಿಕೊಡಲಿಲ್ಲ ಅಂತ ಎಷ್ಟೊ ದಿನದ ಬಳಿಕ ತಿಳಿಯಿತು. ಮುಖಗಳನ್ನು ಬರೆಯುವುದನ್ನು ಯಾವ ಗುರುವೂ ಕಲಿಸಲಾಗುವುದಿಲ್ಲ. ನನಗೆ ಕಂಡಂತೆ ನಾನೆ ಬರೀಬೇಕು ಎಂಬುದು ಅರ್ಥವಾಯಿತು.

ನಾನು ಮುಖ ಬರೆಯುವುದನ್ನು ಕಲಿಯತೊಡಗಿದೆ. ಕನ್ನಡಿಯ ಮುಂದೆ ಕೂತು ನನ್ನ ಮುಖವನ್ನು ನಾನೇ ನೋಡುತ್ತಾ ಬರೆಯುವುದನ್ನು ಪ್ರಯತ್ನಿಸಿದೆ. ಹಾಗೆ ಬರೆಯುವಾಗಲೇ ಗೊತ್ತಾದ್ದು ನನ್ನ ಮುಖ ಎಷ್ಟೊಂದು ಭೀಕರವಾಗಿದೆ ಅಂತ. ಅದರಲ್ಲಿ ನಗು ತುಂಬುವುದು ನನಗೆ ಕಷ್ಟವಾಗುತ್ತಿತ್ತು.‌ ದುಃಖ ತುಂಬುವುದು ಕೂಡ.‌ ಏನನ್ನೊ ಕೂರಿಸುವುದು ಕೂಡ ಕಷ್ಟವಾಗುತ್ತಿತ್ತು. ಸುಮ್ಮನೆ ಖಾಲಿ ಬಿಡುವುದು ಅದಕ್ಕಿಂತಲೂ ಕಷ್ಟವಾಗುತ್ತಿತ್ತು.

ಈ‌ ನಡುವೆ
ನನಗೊಂದು ಚಿತ್ರ ಬರೆಯಲು ಆರ್ಡರ್ ಬಂತು. ಅದು ಒಬ್ಬ ಜಾಡಮಾಲಿದು.‌ ನನಗೆ ಅವರ ಮುಖ ಬರೆಯಲು ಸಾಧ್ಯವಾಗಲಿಲ್ಲ. ಚಿತ್ರ ಕೊಡಲು ಕೊನೆಯ ದಿನ ಹತ್ತಿರ ಬಂದಾಗ ಮುಖ ಬರೆಯಲು ತೋಚದೆ ನನ್ನ ಮುಖವನ್ನೇ ಅದಕ್ಕೆ ಇಟ್ಟು ಕಳುಹಿಸಿದೆ. ಅವರು ಚಿತ್ರ ಅದ್ಬುತ ಅಂದರು.

ಮತ್ತೊಮ್ಮೆ ಇನ್ನೊಂದು ಆರ್ಡರ್ ಬಂತು. ಎಲ್ಲರೂ ಬಿಟ್ಟು ಹೋದ ಒಂಟಿಗನದು. ಅಲ್ಲೂ ಕೂಡ ನಾನು ನನ್ನ ಮುಖವನ್ನೆ ಇಟ್ಟು ಕಳುಹಿಸಿದೆ. ಅವರೂ ಮೆಚ್ಚಿಕೊಂಡರು.

ಈ ನಡುವೆ ನನಗೆ ಒಂದು ಖಚಿತವಾಯಿತು. ಜನರ ಅವರ ಮುಖದ ಬದಲು ಬೇರ ಮುಖವನ್ನು ಇಟ್ಟರೆ ತುಂಬಾ ಖುಷಿ ಪಡುತ್ತಿದ್ದರು. ಅದು ಅವರಿಗೆ ಹೆಚ್ಚು ಖುಷಿಯಾಗುತ್ತಿತ್ತು. ಯಾರದೊ ಮುಖವನ್ನು ಯಾರಿಗೊ ಇಟ್ಟು ಬರೆದುಕೊಡತೊಡಗಿದೆ. ಜನರಿಗೆ ಗೊತ್ತೇ ಆಗುತ್ತಿರಲಿಲ್ಲ. ಎಲ್ಲಾ ಕಡೆಯಿಂದಲೂ ಅದ್ಬುತ ಮೆಚ್ಚುಗೆ.

ಅದೊಂದು ದಿನ ನನಗೆ ಅನಿಸಿತು. ಎಷ್ಟೊ ಜನರ ಚಿತ್ರ ಬರೆದುಕೊಟ್ಟಿದ್ದೀನಿ, ನನ್ನ ಚಿತ್ರವನ್ನು ನಾನೇ ಬರೆದುಕೊಂಡಿಲ್ಲವಲ್ಲ‌. ಗೆಳೆಯರ ಒತ್ತಾಯದ ಮೇರಿಗೆ ನಾನು ನನ್ನ ಚಿತ್ರ ಬರೆದುಕೊಳ್ಳಲು ಆರಂಭಿಸಿದೆ. ನನ್ನ ಗುರುಗಳು ಹೇಳಿದಂತೆ ಕಾಲಿನಿಂದ ಆರಂಭಿಸಿದೆ. ಕಾಲು, ತೊಡೆ, ಸೊಂಟ, ಹೊಟ್ಟೆ, ಎದೆ, ಕತ್ತು ಎಲ್ಲವನ್ನೂ ಬರೆದೆ. ಈಗ ಮುಖ..

ಹೌದು ಮುಖ ಬರೆಯಬೇಕು..!

ನನಗೊಂದು ಮುಖ ಇದೆಯಾ?
ಮುಟ್ಟಿ ನೋಡಿಕೊಂಡೆ
ನನ್ನ ಮುಖವನ್ನು ಈಗ ಯಾರ್ಯಾರಿಗೂ ಇಟ್ಟು ಕಳುಹಿಸಿದ್ದೇನೆ. ಹಾಗೆ ಕಳುಹಿಸಿದ್ದು ಅದು ನನ್ನ ಮುಖವಾ? ನನ್ನ ಮುಖದಂತೆ ಇದ್ದ ಅವರ ಮುಖವಾ? ಅವರ ಮುಖದಂತೆ ಇದ್ದ ನನ್ನ ಮುಖವಾ?

ಅವರಿವರಿಗೆ ನನ್ನ ಮುಖ ಇಟ್ಟು ಕಳುಹಿಸಿದ್ದೆ..
ಈಗ ನನ್ನ ಚಿತ್ರಕ್ಕೆ ಯಾರ ಮುಖ?

ನನಗೂ ಒಂದು ಮುಖವಿದೆಯಾ?

ನನಗೊಂದು ಮುಖಬೇಕು. ಎಲ್ಲಿ ಸಿಗುತ್ತದೆ!??

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

24 December, 2022

1 Comment

  1. Sarojini Padasalgi

    ತುಂಬ ಛಂದದ ಕತೆ ಸರ್. ನಿಜಕ್ಕೂ ಉಂಟಾ ನಮಗೊಂದು ಮುಖ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading