ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ – ಅವಳು ಕೋಮಲಿ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

20

ಬಹಳ ದಿನಗಳಿಂದ ಆ ಮನೆಯಲ್ಲಿ ಟಿವಿ ಮಾತನಾಡಿಲ್ಲ. ಅದು ಮೌನವಾಗಿರಲು ಅಂತಹ ಉದ್ದೇಶಪೂರ್ವಕವಾದ ಕಾರಣವೇನಿಲ್ಲ. ಬಹುಶಃ ಅದನ್ನು ಯಾರೂ ಮಾತನಾಡಿಸಿಲ್ಲ. ಸಮಯವಿಲ್ಲ, ನೋಡಲು ಅಲ್ಲೇನು ಇಲ್ಲ, ಇಲ್ಲವೇ ನೋಡುವ ಮನಸ್ಸಿಲ್ಲ.. ಹೀಗೆ ಏನಾದರೂ ಒಂದನ್ನು ಊಹಿಸಿಕೊಳ್ಳಬಹುದು. ಅದಿರಲಿ ಇಲ್ಲೊಂದು ಮೂರೇ ಪದದ ಒಂದು ಸಾಲು ಮನೆ ತುಂಬಿಕೊಂಡಿದೆ. ‘ಯೋಧ ಆಕಾಶ್ ಸತ್ತ’ ಎಂಬುದದು. ಅವಳ ಪಾಲಿಗೆ ಮತ್ತು ಊರವರ ಪಾಲಿಗೆ ಅವನು ಸತ್ತ ಅನ್ನುವುದು ತೀರಾ ಮಾಮೂಲಿ ಅರ್ಥ ಕೊಡುವಂತದ್ದಲ್ಲ. ಯುದ್ಧದಲ್ಲಿ ಮಡಿದ ಅನ್ನುವುದು ಅಥವಾ ವೀರ ಮರಣ ಅನ್ನುವುದು ಹೆಚ್ಚು ಸರಿ. ನಾವು ಏನೇ ಅಂದರೂ ಪರಿಣಾಮಗಳು ಮಾತ್ರ ಒಂದೇ. ಜೀವ ಹೋಗುತ್ತದೆ, ದೇಹ ಹೆಣವಾಗುತ್ತದೆ, ನಂಬಿದವರು ಒಂಟಿಯಾಗುತ್ತಾರೆ, ಅನಾಥರಾಗುತ್ತಾರೆ. ಜಗತ್ತನ್ನು ಅರಿಯದ ಮಗುವಿದ್ದರೆ “ಅಪ್ಪ ಅಂದರೆ ಏನು!?” ಅಂತ ಕೇಳುತ್ತದೆ.

ಇದೂ ಕೂಡ ಇರಲಿ. ಇದೀಗ ಅಪ್ಪ ಅಂದರೇನು? ಎಂಬ ಪ್ರಶ್ನೆ ಮುಗಿದು, ಅಪ್ಪ ಎಲ್ಲಿದ್ದಾರೆ? ಅನ್ನುವ ಪ್ರಶ್ನೆಗೆ ಬಂದಿದ್ದಾನೆ ಮಗ. ಕೋಮಲಿ ಮಗನಿಗೆ ನಕ್ಷತ್ರವನ್ನು ತೋರಿಸಿ “ನೋಡು ಅಲ್ಲಿದ್ದಾರೆ ಅಪ್ಪ..!” ಅಂದು ಅದರ ಸುತ್ತ ಹತ್ತಾರು ಪುಟ್ಟ ಕತೆಗಳನ್ನು ಹುಟ್ಟಿಸಿಕೊಂಡು ಹೇಳಿ ಮಲಗಿಸಿದ್ದಾಳೆ. ಯಾವುದೊ ಚೆಂದಮಾಮನ ಕಥೆಯನ್ನು ಓದಿಕೊಂಡು ಅದರಂತೆ ಅವನನ್ನು ಸಮಾಧಾನಿಸುವುದನು ಅವಳು ಕಲಿತ್ತಿದ್ದಾಳೆ. ಕೋಮಲಿಗೆ ಈಗೀಗ ತಾನೊಬ್ಬ ಒಳ್ಳೆಯ ಕಥೆಗಾರ್ತಿಯಾಗುತ್ತಿದ್ದೇನೆ ಅಂತ ಅನ್ನಿಸಿ ಒಂದು ಸಣ್ಣ ನಗು; ಅದಕ್ಕಿಂತ ದೊಡ್ಡ ಅಳು.

ಮಗನನ್ನು ಮಲಗಿಸಿ ನಡುಮನೆಗೆ ಬಂದು ಕೂತಳು. ಇಂದಾದರೂ ಟಿವಿ ಹಾಕಿಕೊಂಡು ನೋಡೋಣವೇ ಅಂತ ಒಮ್ಮೆ ಅನಿಸಿತು. ಗಂಡ ಸತ್ತ ಸುದ್ದಿಯನ್ನು ಮೊದಲು ಹೇಳಿದ್ದು ಟಿವಿಯೆ. “ಜಮ್ಮುವಿನ ಗಡಿಯಲ್ಲಿ ಗುಂಡಿನ ಚಕಮಕಿ; ನಾಲ್ವರು ಭಾರತೀಯ ಯೋಧರು ಹುತಾತ್ಮ” ಅನ್ನುವ ಬ್ರೇಕಿಂಗ್ ನ್ಯೂಸ್. ಅದರ ಬೆನ್ನಲ್ಲೇ ಗಂಡನ ಹೆಸರು ಮತ್ತು ಫೋಟೋವನ್ನು ತೋರಿಸಿತ್ತು. ಅಮೇಲೆ ಆಗಿದ್ದೆಲ್ಲ ಇಂದು ಅಲ್ಲಿ ನಡೆಯುತ್ತಿರುವಂತದ್ದೆ! ಹೆಣ ಬಂದಿತು, ನಾಡು ಸೇರಿತು, ಊರು ನೆರೆಯಿತು, ಸಮಾಧಾನ, ಸಹಾಯ, ಸಾವಿಗೆ ಗೌರವ ಎಲ್ಲವೂ ಸಿಕ್ಕವು. ಈಗ ಟಿವಿ ಹಾಕಿದರೆ ಬಹುಶಃ ಇದಕ್ಕಿಂತ ಭಿನ್ನವಾದ ದೃಶ್ಯ ನನಗೆ ಸಿಗಲಿಕ್ಕಿಲ್ಲ ಅಂದುಕೊಂಡಳು. “ನಮ್ಮ ರಾಜ್ಯದ ಯೋಧನೊಬ್ಬ ಸತ್ತಿದ್ದಾನಂತೆ. ಟಿವಿ ಪೇಪರ್ ಗಳಲ್ಲಿ ಅದೇ ವಿಷಯ. ಇವತ್ತು ದೇಹ ಬರುತ್ತಂತೆ.” ಅನ್ನುವ ಸುದ್ದಿ ಅವಳ ಕಿವಿಗೆ ಬೆಳಗ್ಗೆಯೇ ಬಿದ್ದಿತ್ತು. ಆದರೂ ಟಿವಿ ಹಾಕಿಕೊಂಡು ನೋಡುವ ಮನಸ್ಸಾಗಿರಲಿಲ್ಲ. ಸತ್ತ ಅದೇ ಯೋಧನ ಮಗು ತನ್ನ ತಾಯಿಗೆ ಏನೇನು ಪ್ರಶ್ನೆಗಳನ್ನು ಕೇಳಬಹುದೆಂದು ಮನಸ್ಸು ಯೋಚಿಸುತ್ತಿತ್ತು. ಸುಮ್ಮನೆ ಮಲಗಿದ್ದ ತನ್ನ ಮಗನ ಕಡೆ ನೋಡಿದಳು.

ಸೋಫಾದ ಮೇಲೆ ಕಾಲು ಚಾಚಿಕೊಂಡಳು. ಗಂಡನಿದ್ದಿದ್ದರೆ ಮನಸನ್ನು ಕೂಡ ಚಾಚಿಸುತ್ತಿದ್ದ ಅನಿಸಿತು. ಸೈನಿಕನ ಹೆಂಡತಿ, ವೀರ ಯೋಧನ ಹೆಂಡತಿ ಎಂಬ ಬಿರುದುಗಳೇನೊ ಸರಿ ಆದರೆ ಊರಿಗೆ ಬಂದಾಗಲೆಲ್ಲಾ ತನಗೆ ಮುಟ್ಟಾದಾಗ ಯಾವಾಗಲೂ ಇರುವ ಹೊಟ್ಟೆ ನೋವಿಗೆ ಸಮಾಧಾನ ಮಾಡುವಂತೆ ತಲೆಯನ್ನು ತೊಡೆ ಮೇಲೆ ಇಟ್ಟುಕೊಂಡು ಪ್ರೀತಿ ಮಾಡುತ್ತಿದ್ದ ಗಂಡನನ್ನು ಯಾವುದು ತಾನೇ ಕೊಡುತ್ತದೆ?. ಬಿರುದು ಬಾವಲಿಗಳನ್ನು ಹೋರುವುದು ನಮ್ಮಂಥವರಿಗೆ ಭಾರವೆ! ಹೊತ್ತು ಹೊತ್ತು ಸಾಕಾಗಿದೆ! ಸಾಮಾನ್ಯನಿಗೆ ಬಿರುದು ಬೇಡ; ನೋವಿಗೆ, ಅಳುವಿಗೆ ಬೆರಳುಗಳ ಮಧ್ಯೆ ಬೆರಳು ತೊಡಿಸಿ ಸಮಾಧಾನ ಮಾಡುವ ಅಗ್ದಿ ತನ್ನವರೇ ಆದವರು ಬೇಕು “ಏನಮ್ಮ ದೇಶಕ್ಕಾಗಿ ಇಷ್ಟು ತ್ಯಾಗ ಮಾಡಲಾಗದೆ!?” ಅಂತ ಜನ ಕೇಳಿಯಾರು! ಆದರೆ ನಾವು ಸಣ್ಣವರು ಸ್ವಾಮಿ, ಬಿರುದು ತ್ಯಾಗ ಪದಗಳು ಅರ್ಥವಾಗುವುದಿಲ್ಲ. ಮಗ ಭಯದಲ್ಲಿ ಅಪ್ಪಾ ಅಂದಾಗ ಬಂದೆ ಮಗನೇ ಬಂದೆ ಅಂದು ಕಿರುಬೆರಳು ಹಿಡಿಯುವ ಸುಖವಷ್ಟೇ ಬೇಕು; ಮಗನ ಜ್ವರಕ್ಕೆ ದಿಗಿಲು ಬೀಳುವ ಅವನ ಅಪ್ಪ ಬೇಕು. ಎಂದಿಲ್ಲದ ಲಹರಿಗಳು ಅವಳನ್ನು ಇಂದು ಒಟ್ಟಾಗಿ ತಾಡುತ್ತಿವೆ.

ಮತ್ತೆ ಮತ್ತೆ ಎಲ್ಲವೂ ನೆನಪಾಗುತ್ತಿವೆ..

ಇಂದು ದಿನಪೂರ್ತಿ ಸಾಲಿನಲ್ಲಿ ನಿಂತು ಕಾದಿದ್ದಾಳೆ; ಮಗನನ್ನು ಶಾಲೆಗೆ ಸೇರಿಸುವ ಒಂದೇ ಒಂದು ಅರ್ಜಿಗಾಗಿ. ಬೆಳಿಗ್ಗೆಯಷ್ಟೆ ತಿಂಗಳ ರಕ್ತ ಕಳೆದುಕೊಂಡ ಸುಸ್ತು. ದಿನಪೂರ್ತಿ ನಿಲ್ಲುವ ಶಿಕ್ಷೆ. ಬೆನ್ನೊಳಗಿನ ನರ ಅದಾಗಲೇ ಅದರ ಸುಳಿವು ಕೊಟ್ಟಿತ್ತು. ಆಕೆಗದು ಪ್ರಾಣ ಹೋಗುವಂತಹ ಯಾತನೆ. ಗಂಡ ತುಂಬಾ ನೆನಪಾದ. ಗಂಡನ ನೆನಪಿಗೆ ಕಣ್ಣಲ್ಲಿ ನೀರು. ಅದು ಇಂದಿಗೂ ಬತ್ತಿಲ್ಲ; ಅದು ಬತ್ತುವ ನೀರಲ್ಲ! ಅವರಿದ್ದಿದ್ದರೆ ತನಗೆ ಇವೆಲ್ಲ ಕಷ್ಟಗಳೇ ಅನಿಸುತ್ತಿರಲಿಲ್ಲ. ತಾನು ಈ ನಡುವೆ ಗಂಡಿನಂತಾಗುತ್ತಿದ್ದೆನೆಯೆ ಅಂತ ಅನಿಸತೊಡಗಿತ್ತು. ಹೆಣ್ಣಿನಲ್ಲಿರಬೇಕಾದ ನಾಚಿಕೆ, ಭಯ, ಬಿಗುಮಾನ, ವಯ್ಯಾರಗಳು ಸತ್ತೇ ಹೋಗಿದ್ದವು. ಸುಮ್ಮನೆ ನಾಚಿಕೊಳ್ಳಬೇಕು ಅನಿಸುತ್ತೆ, ಹೂ ಮುಡಿಯಬೇಕು ಅನಿಸುತ್ತೆ, ಚೆಂದದ ಬಟ್ಟೆ ತೊಡಬೇಕು ಅನಿಸುತ್ತೆ. ಆದರೆ ಇವೆಲ್ಲ ಯಾವಾಗ? ಯಾಕೆ? ಬದುಕು ಬರೀ ಹೋರಾಟದಲ್ಲೇ ಕಳೆಯುತ್ತಿರುವಾಗ ಇವಕ್ಕೆ ಹೊತ್ತಾದರೂ ಎಲ್ಲಿದೆ? ಜನ ಗಟ್ಟಿಯಾಗು ಅಂತಾರೆ, ಆದರೆ ಅದ್ಹೇಗೆ ಅಂತ ಯಾರೂ ಹೇಳುವುದಿಲ್ಲ..

ಛೇ ಇದೇನಿದು.. ಇಂದು ಇಷ್ಟೊಂದು ತೊಳಲಾಟಗಳು.‌ ಒಮ್ಮೆ ಮೈ ಕೊಡವಿದಳು.
ಯಾಕಿಷ್ಟು ತುಮುಲಗಳೇಳುತ್ತಿವೆ?
ಟಿವಿಯಲ್ಲಿ ಬರುತ್ತಿರುವ ಒಬ್ಬ ಯೋಧನ ಸಾವಿನ ಕಾರಣಕ್ಕಾ?
ಬಹುಶಃ ಅದೂ ಇರಬಹುದು ಆದರೆ ಅದೇ ಅಲ್ಲ ಎಂಬುದು ಅವಳಿಗೆ ಸ್ಪಷ್ಟವಿತ್ತು.‌

“ನೀವು ಹೂಂ ಅಂದ್ರೆ ನಿಮ್ಮನ್ನು ಮದುವೆಯಾಗ್ಬೇಕು ಅಂದುಕೊಂಡಿದ್ದೀನಿ” ಅಂತ ಹರಿ ಅಂದಾಗ ತಟ್ಟನೆ ಕೇಳಿಯೆ ಬಿಟ್ಟಿದ್ದಳು ಕೋಮಲಿ.

“ಯಾಕೆ?”

ಯಾಕೋ ಅವನಿಂದ ಉಸಿರು ಆಚೆ ಬರಲಿಲ್ಲ. ಅವನ ಮುಖವನ್ನೇ ನೋಡುತ್ತ ಆಕೆ ಹೇಳಿದಳು “ಆದರ್ಶನಾ? ಆಸೆನಾ? ಪಾಪ ಅನ್ನುವ ಫೀಲಾ? ನೀ ಹೇಳಿದ್ರಲ್ಲಿ ಸರಿ ತಪ್ಪನ್ನು ನಾನು ಹುಡುಕುತ್ತಿಲ್ಲ. ಆದರೆ ನಾನು ಹೀಗೆಯೆ ಕೇಳಿದವರ ದನಿಯಲ್ಲಿ ಒಂದು ಉದ್ದೇಶ ಹುಡುಕ್ತೀನಿ.. ಎಂತಹ ಹಿಂಸೆ ಅನಿಸುತ್ತೆ ಗೊತ್ತಾ? ಬಿಡು ನೀನಿಲ್ಲದಿದ್ದರೆ ಮುಂದೆ ಇನ್ಯಾರೊ ಕೇಳ್ತಿದ್ರು, ಕೇಳ್ತಾರೆ ಕೂಡ. ನೋಡು ಹರಿ, ಹುಡುಗ್ರು ಕೆಲವು ಸಾರಿ ಇಂಥದೊಂದು ಆದರ್ಶಕ್ಕೆ ಬೀಳ್ತಾರೆ. ವಿಧವೆಯನ್ನು ಮದುವೆಯಾಗ್ತೀನಿ ಎನ್ನುವ ಆದರ್ಶ ಅದು. ವಿಧವೆಯರಿಗೆ ಅದಕ್ಕಿಂತ ದೊಡ್ಡ ಹಿಂಸೆ ಮತ್ತೊಂದಿಲ್ಲ. ವಿಧವೆಯನ್ನು ಮದುವೆಯಾಗುವುದು ತಪ್ಪಲ್ಲ ಆದರೆ ಈ ಸಮಾಜದಲ್ಲಿ ಒಬ್ಬ ಹುತಾತ್ಮ ಯೋಧನ ಪತ್ನಿ ಮದುವೆಯಾಗುವುದು ಅಷ್ಟು ಸುಲಭವಲ್ಲ. ನೋಡು ಅವನು ಗಡಿಯಲ್ಲಿ ದೇಶಕ್ಕೆ ಪ್ರಾಣಬಿಟ್ಟ. ಇವಳು ಅವನು ಸತ್ತ ಎರಡೇ ವರ್ಷಕ್ಕೆ ಬೇರೆ ಮದುವೆಯಾದ್ಲು ಅಂತಾರೆ.. ಹರಿಯುತ್ತಿರುವ ಮಾತನ್ನು ತಟ್ಟನೆ ನಿಲ್ಲಿಸಿದಳು. ಗಂಟಲಲ್ಲಿ ದುಃಖ ತುಂಬಿಕೊಂಡಿತು. ಅವಳ ಭಾರವಾದ ಉಸಿರು ಇಷ್ಟಿಷ್ಟೆ ಗಾಳಿ ಸೇರಿತು.

ಹರಿ ಏನನ್ನೋ ಮಾತಾಡಲು ಪ್ರಯತ್ನಿಸಿ ಸೋತ. ಅವಳು ಮತ್ತೇ ಅವನ ಕಡೆ ನೋಡಲಿಲ್ಲ. ನಂತರ ಹರಿ ಅಲ್ಲಿ ನಿಲ್ಲಲಿಲ್ಲ.

ನೆವ ತಂದುಕೊಂಡು ಮೈಕೈ ಮುಟ್ಟುವುದು, ಕಣ್ಣಿನಲ್ಲಿ ವಿಚಿತ್ರ ಆಸೆ ಕೂರಿಸಿಕೊಂಡು ನೋಡುವುದು ಮಾಡುವಾಗ ಇವ್ರಿಗೆ ಆಗ ಮಾತ್ರ ನಾನೊಬ್ಬಳು ಯೋಧನ ಪತ್ನಿಯನ್ನು ಅನ್ನೋದು ಗೊತ್ತಾಗಲ್ವಾ? ‘ಸುಮಾರು ಜನ ಗಂಡಸರ ಮಧ್ಯೆ ಹರಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಒಂದು ಖುಷಿಯೆ’ ಅಂದು ಕೊಂಡು ಎದ್ದು ನೇರವಾಗಿ ಬಂದು ಕನ್ನಡಿಯ ಮುಂದೆ ನಿಂತು ಕೊಂಡಳು.

ನನಗೇಕೆ ವಯಸ್ಸಾಗುತ್ತಿಲ್ಲ.‌ ಬೇಗ ಬೇಗ ಯಾಕೆ ಮುಖದಲ್ಲಿ ನೆರಿಗೆಗಳು ಮೂಡುತ್ತಿಲ್ಲ. ಆ ನೆರೆಗೆಗಳಲ್ಲಿ ನನ್ನ ಎಲ್ಲಾ ಆಸೆಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾದಿರುವಾಗ ಬದುಕೇಕೆ ಇಷ್ಟು ನಿಧಾನ. ಯಾವ ಹಸಿವಿಗೆ ದಿನಗಳು ಇಷ್ಟು ನಿಧಾನಕ್ಕೆ ಹೆಜ್ಜೆ ಹಾಕುತ್ತಿವೆ. ಕನ್ನಡಿಯಿಂದ ಬೇಗ ಮುಖ ಆಚೆ ತೆಗೆಯಬೇಕು ಅನಿಸಿತು.

ಇಂದು ಸಂಜೆಯಷ್ಟೆ ಹರಿ ತನ್ನ ಮುಂದೆ ನಿಂತು ಮದುವೆ ಪ್ರಸ್ತಾಪ ಮಾಡಿದಕ್ಕೆ ಆಕೆಯ ಯೋಚನೆಗಳು ಇಷ್ಟೊಂದು ಕೆಂಪಾಗಿದ್ದವು. ಹೊರಳಿ ಗಡಿಯಾರದ ಕಡೆ ನೋಡಿದಳು. ಸಣ್ಣ ಮುಳ್ಳು ಹನ್ನೊಂದು ದಾಟಿತ್ತು. ಬೆನ್ನಿನ ನರದಲ್ಲಿ ಇನ್ನೂ ಚುಳುಕು ಇದೆ. ದೇಹದ ತುಂಬಾ ತುಂಬಿಕೊಂಡ ಸುಸ್ತು ಹಾಗೆಯೇ ಉಳಿದಿದೆ. ಎದ್ದು ಮಗ ಮಲಗಿದ್ದ ರೂಮಿನ ಕಡೆ ಹೋದಳು. ಮಗ ಬಲಗೈಯನ್ನು ಬಿಗಿಯಾಗಿ ಮುಷ್ಟಿ ಕಟ್ಟಿಕೊಂಡು ಮಲಗಿದ್ದಾನೆ. ಅವನಿಗೆ ಹುಟ್ಟಿನಿಂದಲೂ ಅದೊಂದು ಅಭ್ಯಾಸ. ಅವರು ಮಗನ ಆ ಮುಷ್ಟಿಯಲ್ಲಿ ತನ್ನ ಬೆರಳನ್ನು ತೂರಿಸಿ “ನೋಡು ಮಗನಿಗೆ ಅಪ್ಪ ಅಂದ್ರೆ ಎಷ್ಟು ಇಷ್ಟ, ನನ್ನ ಬೆರಳು ಹಿಡ್ಕೊಂಡೆ ಮಲಗ್ತಾನೆ” ಅಂತ ಗಂಡ ದಿನಾ ಮಲಗುವ ಹೊತ್ತಿನಲ್ಲಿ ಆಡುತ್ತಿದ್ದ ಮಾತುಗಳು ನೆನಪಾದವು. ಕಣ್ಣುಗಳು ಮತ್ತೊಮ್ಮೆ ಒದ್ದೆ! ಮಗನ ಪಕ್ಕ ಮಲಗಿ ಅವನ ಮುಷ್ಟಿಯಲ್ಲಿ ನನ್ನ ಬೆರಳು ತೂರಿಸಿದಳು. ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡಳು. ನಿದ್ದೆ ತಂದುಕೊಳ್ಳುವ ಪ್ರಯತ್ನ ಮಾಡಿದಳು. ನಿದ್ದೆ ಬೆಟ್ಟದಾಚೆಯ ಏಳನೆ ಗವಿಯಲ್ಲಿ ಮಲಗಿತ್ತು.

ಬೆಳಗು ಎಂದಿನಂತೆಯೇ ಇತ್ತು. ಇಂದು ಮಗನಿಗೆ ಶಾಲೆಯಲ್ಲಿ ಅಡ್ಮಿಷನ್. ಅವಳಿಗೆ ಗೊತ್ತಿತ್ತು ಮಗನಿಗೆ ಸೀಟು ಸಿಕ್ಕೆ ಸಿಗುತ್ತೆ ಅನ್ನುವುದು “ಮಗುವಿನ ತಂದೆ ಹುತಾತ್ಮ ಯೋಧ ಅಂತಹ ಸೈನಿಕರ ಮಗನಿಗೆ ಸೀಟು ಇಲ್ಲ ಅಂತೀವಾ ಮೇಡಂ?” ಅಂತಾರೆ. ಆದರೆ ಅವಳ ಯೋಚನೆಗಳೇ ಬೇರೆ. ಮಗು ದಿನಾ ಶಾಲೆಯಿಂದ ಬಂದು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು? ತೀರಾ ನಾಲ್ಕು ವರ್ಷದ ಮಗುವಿಗೆ ಅಪ್ಪನ ಸಾವನ್ನು ಹೇಗೆ ಅರ್ಥ ಮಾಡಿಸುವುದು? ಪ್ರತಿ ತಿಂಗಳ ಪೇರೆಂಟ್ ಮೀಟಿಂಗ್ ನಲ್ಲಿ ಎಲ್ಲಾ ಮಕ್ಕಳು ಅಪ್ಪ ಅಮ್ಮನ ಜೊತೆ ಇದ್ದಾಗ ನನ್ನ ಮಗ ಕೇವಲ ತಾಯಿಯೊಂದಿಗೆ ಇದ್ದಾಗ ಅವನ ಮನಸ್ಸಿನಲ್ಲಿ ಏನೆಲ್ಲಾ ಯೋಚನೆಗಳು ಮೂಡಬಹುದು. ಯೋಚನೆಗಳನ್ನು, ಪ್ರಶ್ನೆಗಳನ್ನು ನೆನೆದು ಬೆಚ್ಚಿದಳು. ಮಗನ ಕೈಯಿಡಿದುಕೊಂಡು ರಸ್ತೆಗೆ ಇಳಿದಳು. ರಸ್ತೆಯ ಒಂದು ಬದಿಯಲ್ಲಿ ನಡೆಯತೊಡಗಿದಳು. ಮಗ ತಾಯಿಯ ಕೈ ಹಿಡಿದುಕೊಂಡು ಕಣ್ಣಲ್ಲಿ ಬೆರಗು ತುಂಬಿಕೊಳ್ಳುತ್ತಾ ಅಮ್ಮನ ಜೊತೆ ಹೆಜ್ಜೆ ಹಾಕತೊಡಗಿದ.

ಪುಟ್ಪಾತ್ ನಲ್ಲಿ ನಡೆಯುತ್ತಿದ್ದಾಗ ಟಿವಿ ಅಂಗಡಿಯಿಂದ ಬಂದ ಸುದ್ದಿಯ ಸಾಲೊಂದು ಅವಳನ್ನು ಮತ್ತೆ ತಿವಿಯಿತು. ‘ಗಡಿಯಲ್ಲಿ ಉದ್ವಿಗ್ನ ವಾತಾವರಣ, ಯಾವುದೇ ಸಮಯದಲ್ಲಿ ಯುದ್ಧ ಘೋಷಣೆ’ ಅನ್ನುವುದನ್ನು ನಿರೂಪಕ ತುಸು ಉನ್ಮಾದದಲ್ಲಿ ಹೇಳುತ್ತಿದ್ದ. ಅವನ ದನಿಯಲ್ಲಿ ಒಂದು ಜೋಶ್ ಇತ್ತು.

“ಅದು ಯುದ್ಧವಲ್ಲ ವಿಧವೆಯರನ್ನು ಸೃಷ್ಟಿಸುವ ಕಾರ್ಖಾನೆ. ಮಕ್ಕಳನ್ನು ಅನಾಥರನ್ನಾಗಿ ಮಾಡುವ ಕೇಂದ್ರ..” ಅಂತ ಗಟ್ಟಿಯಾಗಿ ಕೂಗಬೇಕು ಅಂದುಕೊಂಡಳು. ಬರೀ ಸ್ವಾರ್ಥದ ಗಜಿಬಿಜಿಯ ಬಜಾರಿನಲಿ ಅವಳ ಧ್ವನಿ ಎಷ್ಟು ಜನಕ್ಕೆ ಕೇಳಿಸೀತು?
ಕೇಳಿಸಿಕೊಂಡರೂ ಆಗುವುದೇನು? ಯಾರ ಉಸಾಬರಿ ಯಾರಿಗೂ ಬೇಕಿಲ್ಲ ಇಲ್ಲ.

ಆದರೆ ಅವಳ ಮಗ ಇದ್ಯಾವುದರ ಅರಿವಿಲ್ಲದೆ ಅಮ್ಮನ ಬೆರಳಿ ಹಿಡಿದುಕೊಂಡು ಸಾಗುತ್ತಿದ್ದ. ಮಗುವಿನ ಬೆರಗು ತುಂಬಿಕೊಳ್ಳುವ ಕ್ರಿಯೆಗೆ ಯಾವ ಅಡ್ಡಿಗಳೂ ಇರಲಿಲ್ಲ. ಯುದ್ಧ ತನ್ನ ತಂದೆಯನ್ನು ನುಂಗಿ ಹಾಕಿದೆ ಅನ್ನುವ ಸತ್ಯ ಮಗುವಿಗೆ ಹೇಗೆ ತಾನೆ ತಿಳಿಯಬೇಕು?

ಆರು ತಿಂಗಳ ಹಿಂದಷ್ಟೇ ಈ ಬಜಾರಿನಲಿ ಅಪ್ಪ ಆ ಮಗುವಿನ ಬೆರಳು ಹಿಡಿದು ನಡೆದಿದ್ದ ಮಗುವಿನ ನೆನಪಾಯಿತು. ಮಗು ಅಪ್ಪನನ್ನು ಕೇಳುಬೇಕು ಅನ್ನುವುದರೊಳಗೆ ಏನನ್ನೊ ನೋಡಿ ಮರೆತು ಬಿಟ್ಟಿತು.

ಸರಭರ ನಡೆಯುತ್ತಿದ್ದಳು ಕೋಮಲಿ. ಒಮ್ಮೆ ಕತ್ತೆತ್ತೆ ತುಂಬಿನ ಬಜಾರಿನ ಕಡೆ ನೋಡಿದಳು. ಅಲ್ಲೆಲ್ಲೊ ಹರಿಯ ಮುಖ ಕಂಡಂತಾಯ್ತು. ನಿಜಕ್ಕೂ ಇಲ್ಲಿ ಹರಿ ಇದ್ದಾನಾ? ಅಥವಾ ಸುಮ್ಮನೆ ತನಗೆ ಹಾಗೆ ಅನಿಸುತಿದೆಯಾ? ಅವಳಿಗೆ ಯಾವುದೂ ಸ್ಪಷ್ಟವಾಗಲಿಲ್ಲ.

ಆದರೆ ಯಾಕೊ ಅತ್ತ ಕಡೆ ಮತ್ತೆ ಮತ್ತೆ ನೋಡಬೇಕು ಅನಿಸಿತು ಅವಳಿಗೆ. ಒಂದು ಕ್ಷಣ ನಿಂತು ಅತ್ತ ನೋಡಿದಳು. ಇಲ್ಲ ಹರಿ ಇರಲಿಲ್ಲ.

ಮತ್ತೆ ನಡೆಯತೊಡಗಿದಳು..

ಹರಿ ಇರಬಹುದಾ? ಅನುಮಾನ ಮಾತ್ರ ಹೋಗಿರಲಿಲ್ಲ. ನಡೆಯುತ್ತಾ ತಿರುಗಿ-ತಿರುಗಿ ನೋಡಿದಳು. ಹರಿ ಕಾಣಿಸಲಿಲ್ಲ.

ಮತ್ತೆ ಸುಮ್ಮನೆ ನಡೆಯತೊಡಗಿದಳು.

ಆದರೆ ಈಗ
ನಿಜಕ್ಕೂ ದೂರದಲ್ಲಿ ಅದೇ ರಸ್ತೆಯಲ್ಲಿ ಅವಳ ಎದುರಿಗೆ ನಡೆದು ಬರುತಿದ್ದ.‌

ಅವನನ್ನು ನೋಡ್ಬೇಕೊ, ಮಾತಾಡಿಸಬೇಕೊ ಎಂಬ ಗೊಂದಲದಲ್ಲಿ ಅವಳು ಹೆಜ್ಜೆ ಇಡತೊಡಗಿದಳು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

10 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading