ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಹಿಂದೆ ಅವಧಿಯ ಕತೆ ಕಿಟಕಿ ಅಂಕಣದಿಂದ ಇದೀಗ ಮತ್ತೊಂದು ಹೊಸ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ ೬
ಪ್ರಿಯ ಪೋಷಕರೆ..
ನಿಮ್ಮ ಪುಟ್ಟ ಮಗು ಮೊದಲಬಾರಿ ಈ ತರಗತಿಯಲ್ಲಿ ಕೂತಿದೆ. ಸಣ್ಣ ಗಾಬರಿ, ಭಯದಿಂದ ಮುದುಡಿದೆ. ಕಣ್ಣಗಳಲ್ಲಿ ಹೊಸ ಜಗತ್ತೊಂದು ಅಂಬೆಗಾಲಿಡುತಿದೆ. ಇನ್ಮೇಲೆ ನಿಮ್ಮ ಮಗು ತನ್ನ ಬದುಕಿನ ಕಾಲು ಭಾಗವನ್ನು ಬೇರೆ ಬೇರೆ ತರಗತಿ ಕೋಣೆಯಲ್ಲಿ ಕಳೆಯಬೇಕಿದೆ. ಅದರ ಪಾಲಿಗೆ ಇನ್ಮೇಲೆ ಎರಡು ಜಗತ್ತು. ಒಂದು ಮನೆ, ಇನ್ನೊಂದು ಶಾಲೆ. ಒಂದರಲ್ಲಿ ನಾವು ಇರುತ್ತೇವೆ, ಇನ್ನೊಂದರಲ್ಲಿ ನೀವು. ಇಬ್ಬರೂ ಸೇರಿ ಎಳೆಯಬೇಕು ಮಗುವಿನ ಬದುಕಿನ ತೇರು.
ಮಗುವನ್ನು ಶಾಲೆಗೆ ಹಾಕಿ ಆಯ್ತು, ನನ್ನ ಜವಾವ್ದಾರಿ ಮುಗಿಯಿತು ಎಂದು ನೀವು ಭಾವಿಸಬಾರದು. ಅಸಲಿಗೆ ನಿಮ್ಮ ಜವಾವ್ದಾರಿ ಇಂದಿನಿಂದ ಹೆಚ್ಚಾಗಿದೆ. ನಿಮ್ಮ ಮಗು ಈಗ ಸಮಾಜಕ್ಕೆ ತೆರೆದುಕೊಂಡಿದೆ. ಸಮಾಜವು ಒಡ್ಡುವ ಎಲ್ಲಾ ಸವಾಲುಗಳನ್ನು ಅದು ಎದುರಿಸಬೇಕು. ಅದಕ್ಕೆ ನೀವು, ನಾವೂ ಜೊತೆಯಿರಬೇಕು.
ನೀವು ಮಗುವನ್ನು ಶಾಲೆಗೆ ಸೇರಿಸಲು ಬಂದಾಗ ನಿಮ್ಮ ಕಣ್ಣಿನಲ್ಲಿ ಆಸೆ ನೋಡಿದೆ. ಮಗುವು ದೊಡ್ಡ ಹುದ್ದೆಯಲ್ಲಿ ಕೂತಂತೆ ನಿಮ್ಮ ಕಣ್ಣಿನಲ್ಲಿ ಕಾಣಿಸುತ್ತಿತ್ತು. ಒಳ್ಳೆಯದು, ಮನುಷ್ಯನಿಗೆ ಕನಸುಗಳಿರಬೇಕು. ಜೊತೆಗೆ ವಾಸ್ತವ ಬದುಕಿನ ಅರಿವೂ ಇರಬೇಕು. ಕನಸು ಬಿತ್ತಿ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಮಗುವಿನ ಮೇಲೆ ಒತ್ತಡ ಹಾಕಬೇಡಿ, ಹಿಂಸಿಸಬೇಡಿ. ಅಂಕಗಳ ಹುಚ್ಚು ಹಿಡಿಸಬೇಡಿ. ನಮ್ಮ ಪುಸ್ತಕದೊಳಗಿನ ಪಾಠಗಳು ಬದುಕು ಮುಖ್ಯ ಎಂದು ಹೇಳುತ್ತವೆ, ನೀವು ಅಂಕ ಮುಖ್ಯ ಅನ್ನುತ್ತೀರಿ. ಕೊನೆಯವರೆಗೂ ಮಗು ಈ ದ್ವಂದ್ವದಲ್ಲೇ ಒದ್ದಾಡುತ್ತದೆ.
ನಿಮ್ಮ ಬಳಿ ಹೆಚ್ಚು ಹಣ ಇರಬಹುದು. ಅದರ ಅಹಂ ನಿಮ್ಮ ಮಗುವಿಗೆ ತಲುಪದಂತೆ ನೋಡಿಕೊಳ್ಳಿ. ನಿಮ್ಮ ಬಳಿ ಬಡತನವಿದ್ದರೆ ಅದರ ಕಷ್ಟವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡಿ. ನಿಮ್ಮ ಸಮಯದ ಒಂದು ಪಾಲನ್ನು ಅವರಿಗೆ ಎತ್ತಿಡಿ. ನಿತ್ಯವೂ ಮಕ್ಕಳೊಂದಿಗೆ ಕೂತು ಊಟ ಮಾಡಿ, ಹರಟಿ. ಮಕ್ಕಳಿಗೆ ಹೇಳಲು ಕಥೆಗಳನ್ನು ಓದಿಕೊಳ್ಳಿ. ವಾರಕ್ಕೆ ಒಂದಾದರೂ ಕಥೆ ಹೇಳಿ. ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳಿ. ನಿಮ್ಮ ಕಪಟತನಗಳು ಮಕ್ಕಳನ್ನು ಖಂಡಿತ ದಾರಿ ತಪ್ಪಿಸುತ್ತವೆ. ಮಕ್ಕಳು ಹೇಗಿರಬೇಕು ಎಂದು ಬಯಸುವಿರೊ ನೀವು ಹಾಗೆಯೇ ಇರಿ.
ನೆನಪಿರಲಿ.. ಮಕ್ಕಳಷ್ಟೆ ಬೆಳೆಯುವುದಿಲ್ಲ, ಅದರೊಂದಿಗೆ ತಂದೆ-ತಾಯಿ ಕೂಡ. ನಿಮ್ಮ ಬೆಳವಣಿಗೆ ನಿಂತ ದಿನ ಅವರಾದರೂ ಹೇಗೆ ಬೆಳೆದಾರೂ. ಬೆಳೆಯುವುದು ಎಂದರೆ ಬರೀ ಭೌತಿಕವಾಗಿ ಬೆಳೆಯುವುದಿಲ್ಲ. ಅದು ಮಾನಸಿಕ, ಭಾವನಾತ್ಮಕ ಮತ್ತು ಬೌದ್ಧಿಕ.
ಒಳ್ಳೆಯ ಸ್ಕೂಲ್ನಲ್ಲಿ ನೀವು ಅವರಿಗೆ ಸೀಟ್ ಕೊಡಿಸಬಹುದು.. ದುಬಾರಿ ಬಟ್ಟೆ ಕೊಡಿಸಬಹುದು. ಖರ್ಚಿಗೆ ಹಣ ಕೊಡಬಹುದು, ಸಕಲ ಸವಲತ್ತುಗಳನ್ನು ನೀಡಬಹುದು. ಅಷ್ಟಕ್ಕೆ ಮಾತ್ರ ನಿಮ್ಮ ಮಗುವಿನ ಬಾಳು ಉಜ್ವಲವಾಗಿ ಬಿಟ್ಟಿತು ಅಂತಲ್ಲ. ನೀವು ಮಗುವಿಗೆ ಕೊಡುವ ಮತ್ತು ಕೊಡಿಸುವ ಶಿಕ್ಷಣ ಎಂತದ್ದು ಅನ್ನುವುದರ ಮೇಲೆ ಅವನ ಬಾಳು ನಿರ್ಧರಿತವಾಗುತ್ತದೆ.
ಮಗುವಿಗೆ ಹೊರ ಜಗತ್ತು ಪರಿಚಯಿಸಿಕೊಡಿ. ಸಂತೆಯಲ್ಲಿ ಸುತ್ತಾಡಿಸಿ, ಜಾತ್ರೆಯಲ್ಲಿ ಅಲೆದಾಡಿಸಿ. ಬಿಸಿಲಿನ ಪರಿಚಯ, ಮಳೆಯ ಗೆಳತನವೂ ಇರಲಿ. ಮಣ್ಣಿನಲ್ಲಿ ಆಡಲಿ, ಬಯಲಲಿ ಕುಣಿಯಲಿ. ಇರುವೆ ಸೊಬಗು, ಆನೆಯ ಬೆರಗು ತಿಳಿಯಲಿ. ಸದಾ ಪಂಜರದಲ್ಲಿ ಕೂಡಿ ಹಾಕಬೇಡಿ. ಅತೀ ಪ್ರೀತಿ ಮತ್ತು ಅತೀ ನಿರ್ಲಕ್ಷ್ಯವೂ ಮಗುವನ್ನು ದಾರಿ ತಪ್ಪಿಸಬಹುದು.
ಮಗುವಿನ ಗುರಿಯನ್ನು ನೀವೇ ನಿರ್ಧರಿಸಬೇಡಿ. ಹರಿಯುವ ನೀರು ತನ್ನ ದಾರಿ ಹುಡುಕಿಕೊಳ್ಳುವಂತೆ ಅವರು ಬೆಳೆಯುತ್ತಾ ತಮ್ಮ ಗುರಿಯನ್ನು ತಾವೇ ಕಂಡುಕೊಳ್ಳುತ್ತಾರೆ. ನೀವು ಪ್ರೋತ್ಸಾಯಿಸಿ. ಶಿಕ್ಷಕರೂ ಆ ನಿಟ್ಟಿನಲ್ಲೇ ದಾರಿ ತೋರಿಸುತ್ತಾರೆ ಅವರನ್ನು ಗೌರವಿಸಿ.
ನಿಮ್ಮ ಮಕ್ಕಳ ಗೆಳೆಯರ ಕೂಟದ ಬಗ್ಗೆ ಒಂದು ಕಣ್ಣಿರಲಿ. ಒಳ್ಳೆ ಗೆಳೆಯರ ಸಂಘ ನಿಮ್ಮ ಮಕ್ಕಳನ್ನು ಸರಿದಾರಿಗೆ ಕರೆದೊಯ್ಯುತ್ತದೆ. ಮಗುವಿಗೂ ಖಾಸಗಿತನ ಇರುತ್ತದೆ ಅದನ್ನು ಅವರಿಗೆ ಮುಕ್ತವಾಗಿ ನೀಡಿ.
ಪ್ರತಿ ದಿನ ಮಗು ಶಾಲೆಯಲ್ಲಿ ಏನು ಕಲಿಯಿತು ಎಂಬುದನ್ನು ಗಮನಿಸಿ. ಅಂದಿನ ಓದನ್ನು ಅಂದೇ ಮುಗಿಸುವಂತೆ ನೋಡಿಕೊಳ್ಳಿ. ಎಲ್ಲಾ ಮಕ್ಕಳ ಕಲಿಕೆಯ ವೇಗ ಒಂದೇ ಇರುವುದಿಲ್ಲ. ಬೇರೆ ಮಕ್ಕಳೊಂದಿಗೆ ಹೋಲಿಸುವುದು, ಗದರುವುದು ಎಂದೂ ಮಾಡಬೇಡಿ. ಕಲಿಕೆಯ ವಿಚಾರದಲ್ಲಿ ನಮ್ಮೊಂದಿಗೆ ಸಹಕರಿಸಿ. ಸತತವಾಗಿ ನಮ್ಮ ಸಂಪರ್ಕದಲ್ಲಿರಿ. ಮಗುವಿನ ಮನೆಯ ವರ್ತನೆಯನ್ನು ಆಗಾಗ ನಮ್ಮ ಗಮನಕ್ಕೆ ತನ್ನಿ. ಶಾಲೆಯಲ್ಲಿ ಬರೀ ಪಾಠಗಳಷ್ಟೇ ಇರುವುದಿಲ್ಲ ಮಗುವಿನ ಸಮಗ್ರ ವ್ಯಕ್ತಿತ್ವದ ರೂಪಿಸುವಿಕೆಗೆ ಬೇಕಾದ ಚಟುವಟಿಕೆಗಳಿರುತ್ತವೆ. ಮಕ್ಕಳು ಭಾಗವಹಿಸುವಂತಾಗಲು ನಿಮ್ಮ ಸಹಕಾರ ಅಗತ್ಯ. ಅಂಕ ಇಲ್ಲದೆಯೂ ಒಳ್ಳೆ ಬದುಕಿದೆ ಎಂಬುದನ್ನು ಅರ್ಥ ಮಾಡಿಸಿ. ಮಗುವಿನ ಕಲಿಕೆಗೆ ಸಂಬಂಧಿಸಿದಂತೆ ನಮ್ಮನ್ನು ಪ್ರಶ್ನಿಸುವ ಹಕ್ಕು ನಿಮಗಿದೆ. ನಿಮ್ಮ ಸಲಹೆ ಸೂಚನೆಗಳನ್ನೂ ನಾವು ಎದುರು ನೋಡುತ್ತೇವೆ.
ನಾವೀಗ ಗುರುಗಳಲ್ಲ ಬರೀ ಮೇಷ್ಟ್ರು. ನಾವೊಂದು ಮಿತಿಯಲ್ಲಿ ಬೋಧಿಸಬೇಕಿದೆ. ನಾವು ಬಿತ್ತುವ ಮೌಲ್ಯವನ್ನು ಸಮಾಜ ಸಲಹುವತ್ತೆ ಅನ್ನುವುದಕ್ಕೆ ಗ್ಯಾರಂಟಿ ಇಲ್ಲ. ದಿನೇ ದಿನೇ ಸಮಾಜದಲ್ಲಿ ಆಗುವ ನೈತಿಕ ಅಧಃಪತನದಿಂದ ಮಗುವನ್ನು ರಕ್ಷಿಸುವುದು ನಮಗೂ ಕಷ್ಟವಾಗಿದೆ. ಒಂದೇ ಕಂಬದ ಮೇಲೆ ಮಹಲು ಎಂದೂ ನಿಲ್ಲುವುದಿಲ್ಲ. ಈಗಿನ ಸಂದರ್ಭದಲ್ಲಿ ಶಿಕ್ಷಕನೊಬ್ಬನೇ ಎಲ್ಲವನ್ನೂ ಸರಿ ಮಾಡಬಲ್ಲ ಎಂಬ ನಿರೀಕ್ಷೆ ಸಾಧುವಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.
ನಾಳೆ ನಿಮ್ಮ ಮಗುವು ಏನಾದರೂ ಸಾಧಿಸಿದರೆ ‘ಯಾರ ಮಗ ಇವ್ನು?’ ಅಂತ ಕೇಳ್ತಾರೆ. ಅವನು ಸೋತರೆ ‘ಯಾರು ಕಲಿಸಿದ್ದು ಇವ್ನಿಗೆ?’ ಅಂತಾರೆ. ಇರಲಿ. ಮಗುವಿನ ಸೋಲುಗಳೆಲ್ಲಾ ಶಿಕ್ಷಕರ ಖಾತೆಗೆ ಜಮೆಯಾಗಲಿ. ಜಗತ್ತಿನ ಎಲ್ಲಾ ಮಕ್ಕಳು ‘ಇವ್ನು ಯಾರ ಮಗ?’ ಅನ್ನುವಂತೆ ಬೆಳೆಯಲಿ. ಮತ್ತು ನಿಮ್ಮ ಮಗುವೂ ಕೂಡ.
ಇತಿ
ನಿಮ್ಮ ಮಗುವಿನ ಮೇಷ್ಟ್ರು






0 Comments