
ಸತ್ಯಮಂಗಲ ಮಹಾದೇವ
ಎಷ್ಟೋ ಅದೆಷ್ಟೋ ದಿನದ ನೆನಪು
ಬೆಳಕು ಅರಳಿ ಕತ್ತಲೆ ಹೊರಳಿ
ಕಣ್ಣು ಕಂಡ ನಿಮ್ಮ ನಗೆ ಮರಳಿ
ಇಂದು ನನ್ನ ಕಾಡಿತು
ನೆನಪು ಆಗಿ ಆಗಿ ಬೆಳಕಾಯ್ತು
ಚೆಂಬೆಳಕು ಈಗ ಮನದ ಬಯಲಲ್ಲಿ
ಕತ್ತಲೆಯ ತಬ್ಬಿದ ಬೆಳಕಲ್ಲಿ ಮಂದಹಾಸ
ಸುಡು ಸುಡು ಬಿಸಿಲು
ಮಧ್ಯಾಹ್ನದ ಸೂರ್ಯನ ಎದೆ ಮೇಲೆ
ಕಾಲು ಹಪ್ಪಳ ವಾದವೋ ಎಂದು
ಬಾಗಿಲ ಬಡಿದೆವು ಯಾರು
ಯಾರು ಎಂದು ಕ್ಷಣವೂ ತಡಮಾಡದೆ
ಆಗಂತುಕರನು ಆಲಂಗಿಸಿ
ಹೆಗಲಿಗೆ ಹೆಗಲೇರಿಸಿ ಕೂರು
ಎಂದು ನಿಮ್ಮ ಎತ್ತರಕ್ಕೆ ನನ್ನ ಎಳೆದುಕೊಂಡಿರಿ ಎತ್ತರೆತ್ತರಕ್ಕೆ ಏರಿತ್ತು ಮಂದಹಾಸ

ಬಿದ್ದರೆಷ್ಟು ನಾವು ಹಿಂದಕ್ಕೆ
ಕನ್ನಡಕೆ ಕನ್ನಡವ ತೊಡಿಸಲೋಸುಗ
ತಡವರಿಸಿ ತಡವರಿಸಿ ತಡೆಯಲಾರದೆ ಕೊರಗುತ್ತಾ
ಮುಪ್ಪಡರಿ ಮರೆವು ಮಾತಿಗೆ ಜಾರಿ
ನೆನಪುಗಳ ಪುಟ ತೆರೆಯೆ ಅಲ್ಲಿ
ತುಂತುರಿನ ಸೋನೆ ಮಳೆ ಹೂ ಪಕಳೆಗಳ
ಇಳೆವೆಣ್ಣು ಸಿಂಗರಿಸಿದ ಸಂಭ್ರಮವು
ಕಾವ್ಯ ನೇಯುವ ಶ್ರೀ ಕಾಂತಿಯಲಿ
ಕನ್ನಡವು ವಿಶ್ವನೂತನ ಮೆರುಗು ಪಡೆವಾಗ
ಕಣ್ಣರಳಿಸಿ ನಗುವಾಗ ಮಿಂಚುತಿತ್ತು ಮಂದಹಾಸ
ಹೂವು ಹಣ್ಣಾಗುವ ಸುದೀರ್ಘ
ದೀರ್ಘ ಋತುಗಳ ಉಚ್ವಾಸ ನಿಶ್ವಾಸ ಗಳಲ್ಲಿ
ನವವಧುವಾಗಿ ನಿಂದ ರಂಗು ಮೊಗದಲಿ
ತುಸು ಹೆಚ್ಚು ನಿಧಾನವನ್ನು ಕವಿತೆಗೆ ಕಲಿಸಿ
ಸಾಮಗಾನ ಕೆ ಸೋತು ಸಮನ್ವಯಕ್ಕೆ ಮನಸೋತು
ಅಂತರಂಗದ ಉಲ್ಕಾಪಾತಗಳಿಗೆ
ಮುಂಜಾವಿನ ತಂಪನು ತೊಡಿಸಿ
ಕಠೋರ ಖಂಡನೆಯನು ಮೆಲುದನಿಯಲಿ ಹೇಳುವಾಗ
ಹಗೆಯನ್ನು ಮೆಟ್ಟಿ ಮೀರುತ್ತಿತ್ತು ಮಂದಹಾಸ

ಸಹಜ ನಡೆಗೆ ಸಹಜ ನುಡಿಗೆ
ನುಡಿಸಿದಂತೆ ನಡೆಸಿದಂತೆ ಭಾವಗೀತ
ರುದ್ರ ನೆದೆಗೆ ಮದನ ಬಿಟ್ಟ ಹೂ ಬಾಣದಂತೆ
ಕನಸು ಕಣ್ಣ ತೆರೆಯುವಾಗ
ಉರಿಗಣ್ಣು ಉರಿಯುವಾಗ
ಲೋಕ ಯುದ್ಧರಂಗವಾಗಿ ರಾವಣನು ಕುಣಿಯುವಾಗ
ಹಣ್ಣಲಿ ರಸ ಹಬ್ಬಿದಂತೆ
ಹೂವಿನ ತನು ಬಲಿಯುವಂತೆ
ದಾಟುತ್ತಿತ್ತು ಮನವೊಲಿಸಿ ರಸವುಳಿಸಿ
ಹೂ ಅರಳಿದಂತೆ ಮಹಾ ಮಂದಹಾಸ






ಚೆಂಬೆಳಕಿನ ಕವಿಗೆ ಸುಂದರ ನುಡಿನಮನ