ಸಹಸ್ರಾರದೆಡೆಗೆ…..
ಗಿರಿಜಾಶಾಸ್ತ್ರಿ
ಮುಂಬಯಿ
ವೀಣಾ ಅವರು ಒಮ್ಮೆ ಮುಂಬಯಿಗೆ ಬಂದಿದ್ದಾಗ, ನಿಮ್ಮ ಹೃಷಿಕೇಶದ ಅನುಭವಗಳನ್ನು ಹೇಳಿ ಎಂದು ಕೇಳಿದ್ದೆ. ಅದಕ್ಕೆ ಅವರು ಅದು ಮಾತಿಗೆ ಮೀರಿದ್ದು ಎನ್ನುವ ಭಾವದಲ್ಲಿ ಒಲ್ಲೆನೆನುವಂತೆ ಸುಮ್ಮನೆ ನಕ್ಕಿದ್ದರು. ಒಂದೆರೆಡು ಸಲ ಪತ್ರಿಕೆಗಳಲ್ಲಿ ಬಂದಿದ್ದ ಅವರ ಲೇಖನಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಇ-ಮೇಲ್ ಕೂಡ ಮಾಡಿದ್ದೆ. ಎಲ್ಲದಕ್ಕೂ ಅವರ ಮೌನವೇ ಉತ್ತರವಾಗಿತ್ತು. ಬಹುಶಃ ನನ್ನ ಪ್ರಶ್ನೆಗಳಲ್ಲಿ ಅವರಿಗೆ ಅಹಂಕಾರದ ವಾಸನೆ ಹೊಡೆಯಿತೇನೋ.
ಈಗ ಅವರು ಅಂತಹ ‘ಅವಾಕ್ಕಿ’ಗೆ ಮಾತಿನ ಉಡುಗೊರೆಯನ್ನು ತೊಡಿಸಿದ್ದಾರೆ, ಸತ್ಯಕಾಮರೊಡನೆ ತಮ್ಮ, ಸಾವು ಇರದ ದಿನಗಳನ್ನು, ಅಂದರೆ ಪ್ರತಿಕ್ಷಣ ವರ್ತಮಾನದಲ್ಲಿ ಬದುಕುವ ಅಂತರಂಗದ ಲೋಕವನ್ನು ಬಯಲಾಗಿಸಿದ್ದಾರೆ. ಹಾಗೆ ಬದುಕುವವರಿಗೆ ಭೂತಕಾಲವೂ ಇಲ್ಲ, ಭವಿಷ್ಯತ್ ಕಾಲವೂ ಇಲ್ಲ. ಕೌಲಗಿ ಮೋಹನ್ ಅವರಿಗೆ ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು ಪುಸ್ತಕವನ್ನು ಕೊಡುವಾಗ ನೆನಪು ಸಾಯಲಿ ಎಂದು ಹಾರೈಸಿದ್ದಾರೆ. ಹಾಗೆ ನೆನಪು ಸತ್ತಿದ್ದ್ತರೆ ಈ ಪುಸ್ತಕವನ್ನು ಅವರು ಯಾವುದರ ಆಧಾರದ ಮೇಲೆ ಬರೆದರು ಎಂದು ಚೇಷ್ಟೆಯ ಪ್ರಶ್ನೆಯನ್ನು ಕೇಳಬಹುದೇನೋ. ಆದರೆ, ನೆನಪು ಮತ್ತು ಮರೆವು ವರವೂ ಹೌದು, ಶಾಪವೂ ಹೌದು, ಅದನ್ನು ವರವನ್ನಾಗಲೀ ಶಾಪವನ್ನಾಗಲೀ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎನ್ನುವುದಕ್ಕೆ ನಿದರ್ಶನ ಈ ಕೃತಿ.
ಧ್ಯಾನದಲ್ಲಿ ಪಡೆದುಕೊಳ್ಳುವ ಅನುಭಗಳಿಗೆ ಮಾತಿನ ಹಂಗಿಲ್ಲ ಎನ್ನುವ ಅನೇಕ ಅನುಭಾವಿಗಳಿದ್ದಾರೆ. ಅವರಿಗೆ ಮಾತು ಮೈಲಿಗೆ. ಆದರೆ ಇನ್ನು ಕೆಲವರಿಗೆ ಮಾತು ಜ್ಯೋತಿಲರ್ಿಂಗ. ಅಂತಹ ಜ್ಯೋತಿಲರ್ಿಂಗದ ಪ್ರಕಾಶವನ್ನು ತೋರಿಸುವ ಸಾಹಸವನ್ನು ಮಾಡಿದವರಲ್ಲಿ ವೀಣಾ ಅವರೂ ಒಬ್ಬರಾಗಿದ್ದಾರೆ. ಇಂದಿನ ಆಧುನಿಕ ಕಾಲದಲ್ಲಿ ಇಂತಹ ಅನುಭವಗಳನ್ನು ಅಕ್ಷರದೊಳಗೆ ತೆರೆದಿಟ್ಟಿರುವ ಅನೇಕ ಮಂದಿ ಇದ್ದಾರೆ. ಆದರೆ ಈ ನೆಲೆಯಲ್ಲಿ ಹೆಣ್ಣೊಬ್ಬಳು ನಿಭರ್ಿಡೆಯಿಂದ ತನ್ನ ಖಾಸಗಿ ಲೋಕವನ್ನು, ಅದರ ಬಂಧನ ಮತ್ತು ಬಿಡುಗಡೆಯ ಹೋರಾಟದ ಸ್ವರೂಪವನ್ನು ತೆರೆದಿಟ್ಟಿರುವುದು ಅಚ್ಚರಿಗೊಳಿಸುತ್ತದೆ.
ಬಹಿರಂಗ
ಸತ್ಯಕಾಮರೊಡನೆ ಸಾವಿರದ ದಿನಗಳು ವೀಣಾ ಅವರ ಆಂತರಿಕ ಹಾಗೂ ಬಾಹ್ಯ ವ್ಯಕ್ತಿತ್ವ ವಿಕಾಸದ ಕತೆ. ಅಂತರಂಗದ ವಿಕಾಸವಾದರಷ್ಟೇ ಸಾಲದು, ಬಹಿರಂಗದ ವಿಕಾಸವೂ ಅಷ್ಟೇ ಮುಖ್ಯವಾದುದು. ಆದುದರಿಂದಲೇ ಸತ್ಯಕಾಮರು ಲೇಖಕಿಯ ಅಂತರಂಗದ ಬದುಕನ್ನು ಅರಳಿಸುವ ಮುನ್ನ ಅವಳ ಸಾಮಾಜಿಕ ಬದುಕಿನ ಬಗೆಗಿನ ಪ್ರಜ್ಞೆಯನ್ನು ವಿಸ್ತಾರಗೊಳಿಸುತ್ತಾರೆ. ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಮಗುವೊಂದು ಮಲಮೂತ್ರ ಮಾಡಿಕೊಂಡಾಗ ಅದರಿಂದ ಅಸಹ್ಯಗೊಂಡ ಲೇಖಕಿ ಮೇಲಿನ ಬರ್ಥ್ ನಿಂದ ಕೆಳಗಿಳಿದು ಬರುವುದೇ ಇಲ್ಲ. ಆಗ ಸತ್ಯಕಾಮರು, ಲೇಖಕಿಯ ಅಣ್ಣನ ಮಗು ‘ಯಾಸ್ಕ’ ಅವಳ ಮೇಲೆ ಮಲಮೂತ್ರ ಮಾಡಿದಾಗ ಅವಳಿಗೆ ಏನೂ ಅನ್ನಿಸದ್ದು ಈಗ ಯಾಕೆ ಅನ್ನಿಸಬೇಕು ಎಂದು ಕೇಳುತ್ತಲೇ ಅವಳಿಗೆ ಸಮಾನತೆಯ ಪಾಠ ಕಲಿಸುತ್ತಾರೆ. ‘ನೀವು ಪೂಜೆ ಮಾಡುತ್ತೀರಿ ಆದ್ದರಿಂದ ಪೂಜಾರಿಗಳು, ನಾನು ಪೂಜೆಯ ಶತ್ರು, ಆದ್ದರಿಂದ ನಾನೂ ಪೂಜಾರಿ’ ಎಂದು ಚೇಷ್ಟೆಯ ಮಾತುಗಳಿಂದಲೇ ಅನ್ಯ ಜಾತಿಯವರನ್ನು ತನ್ನಂತೆ ಕಾಣುವ ದೃಷ್ಟಿಯನ್ನು ಅವಳಿಗೆ ದಯಪಾಲಿಸುತ್ತಾರೆ.
ಪ್ರೀತಿಯಿಂದ ಉಣಬಡಿಸಿದ್ದನ್ನು ಚೆಲ್ಲಬಾರದು. ಅತಿಥೇಯರಿಗೆ ನೋವನ್ನುಂಟುಮಾಡಬಾರದು, ಮುಂದೆ ಎರಡು ದಿನ ಉಪವಾಸವಿದ್ದರೂ ಚಿಂತೆಯಿಲ್ಲ ಎನ್ನುತ್ತಾರೆ. ತಾವೇ ಕೈಯಾರೆ ಅಟ್ಟು (?) ತಮ್ಮ ಮನೆಗೆ ಬಂದ ಅತಿಥಿಗಳಿಗೆ ಉಣಬಡಿಸುತ್ತಾರೆ. ಗೆಳೆಯ ರಘು ಹೊರಟು ಹೋಗುವಾಗ ಅಳುವ ಲೇಖಕಿಯನ್ನು ಉತ್ತೇಜಿಸಿ, ನೀನು ‘ಕರಗಬೇಕು’ ಎನ್ನುವ ಅವರೇ ತನ್ನ ತಾಯಿ ತಂದೆಯರನ್ನು ಬಿಟ್ಟು ಬರುವಾಗ ಅಳುವ ಲೇಖಕಿಯ ಮೇಲೆ ಕೆಂಗಣ್ಣು ಬೀರುತ್ತಾರೆ. ತನ್ನವರಿಗಾಗಿ ಅಳುವುದು ದೊಡ್ಡ ಸಂಗತಿಯಲ್ಲ, ಹೆರವರಿಗಾಗಿ ಕರಗುವುದೇ ಮುಖ್ಯ ಎನ್ನುತ್ತಾರೆ. ತಂಗಿಯ ಮದುವೆಗೆ ಹೋಗಲು ಒಪ್ಪದ ಲೇಖಕಿಯನ್ನು ಸಮಾಜದ ದೃಷ್ಟಿಯಿಂದ ಅದು ಹೇಗೆ ಮುಖ್ಯ ಎಂದು ಹೇಳಿ ಅವಳನ್ನು ಒಪ್ಪಿಸುತ್ತಾರೆ. ಮುಖ್ಯವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಂತಹ ಸಂದರ್ಭದಲ್ಲಿ ಅದೇ ತಂಗಿ ಕಷ್ಟದಲ್ಲಿ ಸಿಲುಕಿದಾಗ ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಅವಳನ್ನು ನೋಡಲು ಲೇಖಕಿಯೊಂದಿಗೆ ಮುಂಬಯಿಗೆ ತೆರಳುತ್ತಾರೆ. ತನ್ನ ಶಿಷ್ಯಳನ್ನು ಪೋಷಿಸುವ ಸಲುವಾಗಿ ಅನೇಕ ಆರ್ಥಿಕ ಮುಗ್ಗಟ್ಟುಗಳನ್ನು ಮೈಮೇಲೆ ಹಾಕಿಕೊಳ್ಳುತ್ತಾರೆ. ಸಾವಿನ ದವಡೆಯಲ್ಲಿ ಕೂಡ ಯಾರಿಗೋ ಬಸ್ತ್ತಿ ಕಟ್ಟಿಸಿಕೊಡುವ, ಇನ್ನಾವ ರೈತನಿಗೋ ತನ್ನ ಜಮೀನನ್ನು ಬರೆದು ಕೊಡುವ ಔದಾರ್ಯ ತೋರುವುದಲ್ಲದೇ, ಯಾರ್ಯಾರಿಗೆ ಏನೇನು ಬೇಕೋ ಅದನ್ನು ಪೂರೈಸುವುದರ ಆಶ್ವಾಸನೆ ನೀಡುವುದರ ಮೂಲಕ ಇಡೀ ಮಾನವೀಯತೆಯನ್ನು ತಬ್ಬಿಕೊಳ್ಳುತ್ತಾರೆ.

ಮೇಲಿನ ಎಲ್ಲ ಬಾಹ್ಯ ಪಾಠಗಳು, ಗಲಿಬಿಲಿ ಗೊಳಿಸುವ ತರತರದ ಪರೀಕ್ಷೆಗಳು ಲೇಖಕಿಯ ಅಂತರಂಗದ ವಿಕಾಸಕ್ಕೆ ಭೂಮಿಕೆಯನ್ನು ಹದಗೊಳಿಸುತ್ತವೆ.
ಅಂತರಂಗ :
ಲೇಖಕಿಯ ಆಂತರಿಕ ವಿಕಾಸವೆಂದರೆ ಅದು ಮೂಲಾಧಾರದಿಂದ ಸಹಸ್ರಾರಕ್ಕೆ ತಲಪುವ ಏರು ನಡೆಯ ಒಂದು ಪಯಣದ ಕತೆ. ಇದು ಇನ್ನೂ ಮುಂದುವರೆಯಬೇಕಾದ ಕತೆ. ಕಾಮ ತನ್ನೊಳಗೆ ಏನಾದರೂ ಚೇಷ್ಟೆ ಆರಂಭಿಸಿದರೆ ಅವನ ಹಣೆ ಬರಹವನ್ನೇ ತೊಡೆವೆನು ಎಂದು ಪ್ರತಿಜ್ಞೆ ಮಾಡುತ್ತಾಳೆ, ಅಕ್ಕ. ಹಾಗೆ ಇದೂ ಕಾಮದೊಡನೆ ಸೆಣೆಸಿ ಗೆದ್ದ ಕತೆ.
ನನಗೆ ವೀಣಾ ಅವರ ಕತೆ ಮುಖ್ಯವೆನಿಸುವುದು, ಅವರು ಸಾಂಸ್ಥಿಕವಾದ ಸಂಬಂಧ ರೂಪಗಳನ್ನೆಲ್ಲಾ ಛಿದ್ರಗೊಳಿಸಿಬಿಡುವುದರಲ್ಲಿ. ನಿದರ್ಿಷ್ಟ ಸಂಬಂಧಗಳ ಚೌಕಟ್ಟಿನಲ್ಲಿಯೇ ಗಿರಕಿ ಹೊಡೆಯುವ ನಮ್ಮ ಸಾಮಾಜಿಕ ಪರಿಕಲ್ಪನೆಗೆ ಅವರು ಗಧಾಘಾತವನ್ನು ಕೊಡುತ್ತಾರೆ. ಗಂಡು ಹೆಣ್ಣಿನ ಗೆರೆಗಳಂತೂ ಅಳಿದೇ ಹೋಗಿವೆ. ತಾಯಿ, ತಂದೆ, ಮಗು , ಗಂಡ, ಗೆಳೆಯ, ಗುರು ಯಾರೂ ಏನೂ ಆಗಬಲ್ಲಂತಹ ಸಾಧ್ಯತೆಗಳು ಇವೆ. ಇದನ್ನು ನಮ್ಮ ಪೂರ್ವಜರು ಭಕ್ತಿಯ ನೆಲೆಯಲ್ಲಿ ಸಾಧಿಸಿದ್ದರೆ, ಲೇಖಕಿ ವಾಸ್ತವದ ನೆಲೆಯಲ್ಲಿಯೂ ಸಾಧಿಸಿರುವುದು ಬೆರಗುಹುಟ್ಟಿಸುತ್ತದೆ. ಇಂತಹ ಒಂದು ಅರಿವಿನ ಆಸ್ಫೋಟ, ನಾವು ಕಟ್ಟಿಕೊಂಡಿರುವ ಕೃತಕವಾದ ಸಾಂಸ್ಕೃತಿಕ ಅಡ್ಡಗೋಡೆಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ಈ ಕತೆಯಲ್ಲಿ ಬರುವ ಲತಕ್ಕ ಎನ್ನುವ ಪಾತ್ರ ಇದಕ್ಕೆ ಉದಾಹರಣೆಯಾಗಿದೆ. ಅನ್ಯ ಜಾತಿಗೆ ಸೇರಿದವರಾದರೂ ಆಕೆ ಅವರ ಆಪ್ತರಾಗುತ್ತಾರೆ. ಸತ್ಯಕಾಮರ ಹೃದಯದಲ್ಲಿ ನೆಲೆಯೂರುತ್ತಾರೆ. ಲೇಖಕಿಗೆ ತಾಯಿಯಾಗುತ್ತಾರೆ. ಆಕೆ ಸತ್ಯಕಾಮರಿಗೆ ಅರ್ಧಗಂಟೆ ಸತತವಾಗಿ ನಮಸ್ಕರಿಸುವ ಕ್ರಿಯೆ ಒಂದು ರೀತಿಯ ಣಡಿಚಿಟಿಛಿಜ ಅನ್ನು (ಪರವಶತೆ/ಸಮಾಧಿಸ್ಥಿತಿಯನ್ನು) ಸೃಷ್ಟಿಸುತ್ತದೆ. ಅದು ಅಹಂಕಾರವನ್ನು ಕಳೆದುಕೊಳ್ಳುವುದರ ಗರಿಷ್ಠ ಪ್ರತೀಕವಾಗಿದೆ.
ಅಲ್ಲಿ ಅವರಿಬ್ಬರ ನಡುವೆ ನಡೆಯುವ ಅಭೌತಿಕ, ಅಲೌಕಿಕ ಸಂವಾದ ಓದುಗರಲ್ಲೂ ಅಂತಹ ಒಂದು ಅನುಭವವನ್ನು ಉಂಟುಮಾಡಿ ಮೈಜುಮ್ಮೆನ್ನುವಂತೆ ಮಾಡುತ್ತದೆ. ಇದು ಕತೆಯ ತುರೀಯ ಹಂತಕ್ಕೆ ದಾರಿ ಮಾಡಿಕೊಡುತ್ತದೆ. ಲೇಖಕಿಗೆ ಕಾಳಿಯಾಗಿ ಕಾಣಿಸುವ ಲತಕ್ಕ, ಅವಳ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವ ಸಾಧನವೂ ಆಗುತ್ತಾರೆ. ‘ಕುಂಡಲಿನಿ’ಯ ಅಧಿದೇವತೆ ಕಾಳಿ ಮಾತೆ. ಅವಳನ್ನು ಯೋಗಿಗಳು ‘ತಾಯಿ’ ಎಂದು ಸಂಬೋಧಿಸಿ ಆವಾಹಿಸುತ್ತಾರೆ. ನಮ್ಮೆಲ್ಲರ ಆದಿಮ ನೆನಪುಗಳನ್ನು, ಆಸೆ ಆಕಾಂಕ್ಷೆಗಳನ್ನು ತನ್ನ ಸಿಂಬಿಯಂತಹ ಸುತ್ತುಗಳಲ್ಲಿ ಗುಪ್ತವಾಗಿ ಆಕೆ ಸಂಗ್ರಹಿಸಿಟ್ಟಿರುತ್ತಾಳೆ. ಅವಳನ್ನು ಜಾಗೃತಗೊಳಿಸುವುದೆಂದರೆ ಅರಿವಿನ ಆಸ್ಫೋಟಕ್ಕೆ ಕಾರಣವಾಗುವ ಹೊಸ ಜನ್ಮವನ್ನು ಪಡೆದ ಹಾಗೆ ಎಂಬೆಲ್ಲಾ ನಂಬಿಕೆಗಳು ನಮ್ಮಲ್ಲಿವೆ. ಇಲ್ಲಿ ಬರುವ ಲತಕ್ಕ ಆ ಕಾಳಿಯ ಪ್ರತೀಕವಾಗಿದ್ದಾರೆ. ಲೇಖಕಿ ನನಗೆ ಅಮ್ಮ ಬೇಕು ಎಂದು ಕೇಳುವುದು, ಸತ್ಯಕಾಮರು ನನಗೆ ಮಗು ಬೇಕು ಎಂದು ಕೇಳುವುದು, ಈ ಎರಡರ ಉದ್ದೇಶವೂ ಒಂದೇ ಆಗಿದೆ. ಕುಂಡಲಿನಿ ಧ್ಯಾನ ಮುಖೇನ ಜಾಗೃತವಾಗಬೇಕು, ಇಲ್ಲದಿದ್ದರೆ ಗುರುವಿನ ಕೃಪೆಯಿಂದ ಜಾಗೃತವಾಗಬೇಕು. ಸತ್ಯಕಾಮರು ಗುರುವಾಗಿ ಲೇಖಕಿಗೆ ಕೃಪೆ ತೋರುತ್ತಾರೆ. ಈ ಕೃಪೆ ಸುಮ್ಮನೇ ದೊರಕುವುದಿಲ್ಲ. ಅದನ್ನು ಪಡೆದು ಕೊಳ್ಳಲು ಅರ್ಹತೆ ಬೇಕು. ‘ವಜ್ರದಂತಹ ಕೂಸು’ ಜಾಗೃತವಾಗಬೇಕಾದರೆ ಅದನ್ನು ಆವರಿಸಿರುವ ಅಹಂಕಾರದ ದುರ್ಬಲ ಕೋಶ ಹರಿಯಬೇಕು. ಅದನ್ನು ಹರಿಯುವುದರ ಮೂಲಕ ಲೇಖಕಿಯೊಳಗಿನ ಕೂಸನ್ನು ಜಾಗೃತಗೊಳಿಸುವ ಕೆಲಸವನ್ನು ಅವರು ಮಾಡುತ್ತಾರೆ. ಕೂಸು ಜಾಗೃತವಾಯಿತೆಂದರೆ ಅಹಂಕಾರದ ಲೇಪ ನಾಶವಾಯಿತೆಂದೇ ಅರ್ಥ. ಆಗ ತಾಯಿಯ ಪ್ರವೇಶವಾಗುತ್ತದೆ. ತಾಯಿಯ ಪ್ರವೇಶವಾಗಬೇಕಾದರೆ ಅಲ್ಲೊಂದು ಕೂಸು ಇರಬೇಕು. ಹೀಗೆ ತಾಯಿ ಮತ್ತು ಕೂಸಿನ ಯೋಗ ಫಲಿತಗೊಳ್ಳುತ್ತದೆ.
ಆ ತಾಯಿ ಲೇಖಕಿಯನ್ನು ಯೋನಿ ಮುಖೇನ ಪ್ರವೇಶಿಸುತ್ತಾಳೆ. ತಾಯಿಯೆಂದರೆ ಯೋನಿಯೇ (ಕುಂಡ-ಕಾಳಿ). ತಾಯಿಯ ಯೋನಿಯಿಂದ ಮಗು ಹೊರಬರುತ್ತದೆ, ಅದೇ ಮಗುವಿನ ಜನನಾಂಗದ ಮೂಲಕವೇ ಚೈತನ್ಯ (ತಾಯಿ) ಪ್ರವೇಶ ಮಾಡುವ ವೈಚಿತ್ರ್ಯ ಅಧ್ಯಾತ್ಮದ ನೆಲೆಯಲ್ಲಿ ಮಾತ್ರ ಸಾಧ್ಯ. ಇದು ಜೀವಜಾಲದ ಸೃಷ್ಟಿಯ ಚಕ್ರೀಯ ಪ್ರಕ್ರಿಯೆಯನ್ನೂ ಸಂಕೇತಿಸುತ್ತದೆ. ತಾಯ್ತನ ಸ್ಥಾಪಿತವಾಗುವುದೂ ಯೋನಿ ಮೂಲಕವೇ. ಈ ತಾಯಿ ಎಲ್ಲರ ಮೂಲಾಧಾರದಲ್ಲಿ ಸುಪ್ತವಾಗಿ ನೆಲೆಸಿದ್ದಾಳೆ. ರಾಮಕೃಷ್ಣ ಪರಮಹಂಸರು ಕಂಡುಕೊಂಡ ಕಾಳಿಯ ಸ್ವರೂಪವೂ ಇದೆ. ಆದುದರಿಂದ ಹೆಣ್ಣು-ಗಂಡು, ಲೌಕಿಕ ಸಂಬಂಧಗಳು, ಜಡ-ಸಚೇತನ ಈ ಎಲ್ಲವುಗಳ ನಡುವೆ ಹೊಕ್ಕಿರಿಯುವ ಭೇದ ಕೇವಲ ಮೇಲು ಪದರದ್ದು. ಅರಿವಿನ ಸ್ಫೋಟಕ್ಕೆ ಒಳಗಾಗುವ ಜೀವಿಗಳೆಲ್ಲಾ ಇಂತಹ ಭೇದ ಹರಿದುಕೊಂಡ ಚೈತನ್ಯವನ್ನು ಆತ್ಮಸಾತ್ ಮಾಡಿಕೊಳ್ಳುತ್ತವೆ. ಇಲ್ಲಿ ಕಾಯದ ಲಜ್ಜೆ ಎನ್ನುವುದೂ ಕೂಡ ಒಂದು ಪೊರೆ. ಅದನ್ನು ಲೇಖಕಿ ಕಳಚಿಕೊಳ್ಳಲು ತಯಾರಾಗುವುದು ಒಂದು ಇತ್ಯಾತ್ಮಕ ಅಂಶ.
ಇಲ್ಲಿ ಆ ತಾಯಿ (ಕಾಳಿ) ಲೇಖಕಿಯ ಯೋನಿಮಾರ್ಗವಾಗಿ ಪ್ರವೇಶಿಸಿ ಸಹಸ್ರಾರಕ್ಕೆ ತಲಪುವ ನಡೆ ಅದ್ಭುತ ರೂಪಕವಾಗಿ ಅನುಭವಕ್ಕೆ ಬರುತ್ತದೆ. ಇದನ್ನು ದಾದಾ ಗಾವಂಡ್ ಅವರು (ವಿಶ್ವಪ್ರಜ್ಞೆಯ ಉದಯ) ಪ್ರಕಾಶಮಾನವಾದ ಬೆಳಕೊಂದು ದೇಹದ ಒಳಗೆಲ್ಲಾ ನಿರಂತರ ಸಂಚರಿಸುವುದರ ಮೂಲಕ ಅಥರ್ೈಸುತ್ತಾರೆ.
ಹಾವಿನ ಹಲ್ಲ ಕಳೆದು ಹಾವನಾಡಿಸ ಬಲ್ಲಡೆ ಹಾವಿನ ಸಂಗವೇ ಲೇಸು ಎಂದು ಅಕ್ಕ ಹೇಳುತ್ತಾಳೆ. ಹಾಗೆ ವೀಣಾ ಅವರ ಕತೆಯೂ ಹಾವಿನ ಹಲ್ಲ ಕಳೆದು ಹಾವನಾಡಿಸುವ ಕತೆ. ಹಾವಿನ ಹಲ್ಲ ಕಳೆದು ಹಾವನಾಡಿಸುವುದರಲ್ಲಿ ಯಾವ ಅಪಾಯವೂ ಇಲ್ಲ. ಆದರೆ ನಿಜವಾದ ಅಪಾಯವಿರುವುದು ಹಲ್ಲಿರುವ ಹಾವಿನಜೊತೆ ಆಡುವುದರಲ್ಲಿ. ಹೀಗೆ ಹಲ್ಲಿರುವ ಹಾವಿನ ಜೊತೆ ಆಡುತ್ತಲೇ ತಮ್ಮ ಗಮ್ಯವನ್ನು ದಾಟಿದ ಅನೇಕ ಮಹಿಳೆಯರು ನಮ್ಮ ಪರಂಪರೆಯಲ್ಲಿ ದೊರಕುತ್ತಾರೆ. ಸಂಸಾರದ ಎಲ್ಲ ಬವಣೆಗಳ ಜೊತೆಗೆ ಕುಟುಂಬದ ದುಡಿಮೆ, ಅತ್ತೆ-ಮಾವ, ನಾದಿನಿ-ಮೈದುನ, ಮಕ್ಕಳು-ಮರಿ ಈ ಸಂಸಾರದ ಕುಲುಮೆಯಲ್ಲಿ ಬೆಂದು ಪುಟವಿಟ್ಟ ಚಿನ್ನವಾಗಿ ತಮ್ಮ ಅಸ್ಮಿತೆಯನ್ನು ಮೆರೆದವರು ಇದ್ದಾರೆ.
ಸಮಸ್ಯೆ ಇರುವುದು ಸಂಸಾರವನ್ನು ವಿಷವಿರುವ ಹಾವು ಎಂದುಕೊಂಡಾಗ ಮಾತ್ರ. ಹಾಗೆ ನೋಡಿದರೆ, ಹಾವಿನ ಜೊತೆ ಆಡಬೇಕಾಗಿಯೂ ಇಲ್ಲ, ಅದರ ಹಲ್ಲನ್ನು ಕೀಳ ಬೇಕಾಗಿಯೂ ಇಲ್ಲ. ಹಾವು ಹಾವಿನ ಪಾಡಿಗೆ, ಮನುಷ್ಯ ಮನುಷ್ಯನ ಪಾಡಿಗೆ, ಒಂದು ಇನ್ನೊಂದು ಲೋಕದ ಅತಿಕ್ರಮಣ ಮಾಡದೇ ಒಂದು ಸಮಾನಾಂತರ ದೂರವನ್ನು ಇಟ್ಟುಕೊಂಡೇ ಬದುಕಬಹುದು, ಎಂಬುದನ್ನು ಪರಮಹಂಸ ಯೋಗಾನಂದ, ಲಾಹಿರಿ ಮಹಾಶಯ್, ರಮಣ ಮಹಷರ್ಿ, ದಾದಾ ಗಾವಂಡ್ ಮುಂತಾದ ಅನೇಕ ಯೋಗಿಗಳ ಕತೆಗಳು ಸಾರಿ ಹೇಳುತ್ತವೆ.
ನನಗೆ ಬಹಳ ಆಶ್ಚರ್ಯ ಎನಿಸಿದ್ದು ಸತ್ಯಕಾಮರು ಲೇಖಕಿಯ ಹಾಸಿಗೆಯ ಕೆಳಗೆ ಇದ್ದ ಹಾವನ್ನು ಬಡಿದು ಕೊಲ್ಲುತ್ತಾರೆ. ಆನಂತರ ಲೇಖಕಿಗೆ ಯಾವ ಜಂತುವೂ ಹತ್ತಿರ ಸುಳಿಯದಂತೆ ಕಾಪಾಡುವುದಾಗಿ ಆಶ್ವಾಸನೆ ಕೊಡುತ್ತಾರೆ. ಲೇಖಕಿಗೂ ಇದರ ಬಗ್ಗೆ ಪಶ್ಚಾತ್ತಾಪ ಉಂಟಾಗುವುದಿಲ್ಲ, ಬದಲಾಗಿ ತಾನೂ ಹಾಗೆ ಹಾವನ್ನು ಬಡಿದು ಕೊಂದ ಸಂಗತಿಯನ್ನು ನೆನಪಿಸಿಕೊಳ್ಳುತ್ತಾರೆ. ಲೇಖಕಿಯನ್ನು ಕಾಪಾಡುವ ಶಕ್ತಿಯುಳ್ಳ ಗುರುಗಳು ಹಾವನ್ನೂ ಕಾಪಾಡಬಹುದಿತ್ತು ಎಂಬ ವಿಷಾದ ಓದುಗರ ಮನಸ್ಸಿನಲ್ಲಿ ಉಂಟಾಗದೇ ಇರದು. ನಿಭಾಯಿಸುವ ಜಾಣ್ಮೆ ತಿಳಿದಿದ್ದರೆ ಹಾವು (ಸಂಸಾರ) ನಮಗೆ ಶತ್ರುವಾಗಬೇಕಾಗಿಲ್ಲ.
ನಮ್ಮ ದೇಶದಲ್ಲಿ ಅಧ್ಯಾತ್ಮದ ಹಂಬಲವನ್ನು ಹಚ್ಚಿಕೊಂಡವರ ಇಂತಹ ಕತೆಗಳು ಹೊಸದೇನಲ್ಲ. 6ನೆಯ ಶತಮಾನದಿಂದ ಹಿಡಿದು 17ನೆಯ ಶತಮಾನದ ಕಾಲಘಟ್ಟದಲ್ಲಿ ತಮಿಳುನಾಡಿನಿಂದ ಕಾಶ್ಮೀರದವರೆಗೆ ಇಂತಹ ಕತೆಗಳು ಹಬ್ಬಿ ಹರಡಿವೆ. ಆಂಡಾಳ್, ಅವ್ವೈಯ್ಯಾರ್ರವರಿಂದ ಹಿಡಿದು ಜನಾಬಾಯಿ, ಸಕ್ಕೂಬಾಯಿ (ಮಹಾರಾಷ್ಟ್ರ), ಗಂಗಾಸತಿ (ಗುಜರಾತ್), ಅಕ್ಕಮಹಾದೇವಿ, ಲಲ್ಲೇಶ್ವರಿವರೆಗೆ (ಕಾಶ್ಮೀರ) ಅನೇಕ ಮಹಿಳೆಯರು ಕಾಣಸಿಗುತ್ತಾರೆ. ಹೆಚ್ಚು ಕಮ್ಮಿ ಅವರೆಲ್ಲರದು ಒಂಟಿ ಪಯಣ. ಏಕಾಂಗಿಯಾದ ಹೋರಾಟ. ಅವರ ಮುಂದಿದ್ದ ಸವಾಲುಗಳು ಇಂದಿಂಗಿಂತ ಬಹಳ ತೀವ್ರವಾಗಿದ್ದವು. ಕುಟುಂಬದ ಒಳಗೆ ಹಾಗೂ ಕುಟುಂಬದ ಹೊರಗಿನ ವ್ಯವಸ್ಥೆಯ ವಿರುದ್ಧ ಹೋರಾಡುವುದು ಅವರಿಗೆ ಅನಿವಾರ್ಯವಾಗಿತ್ತು. ಮಹಿಳೆಯ ದನಿಯೇ ಇಲ್ಲವಾದ ಕಡೆ ಅದನ್ನು ಪ್ರಥಮವಾಗಿ ಮೊಳಗಿಸಿದವರು ಅವರು. ಇಂದಿನ ಹೊಸ ಮಹಿಳೆಯ ಆತ್ಮ ಶಕ್ತಿಯ ಸಂಚಯನಕ್ಕೆ ಅವರ ದೇಣಿಗೆಗಳನ್ನು ಮರೆಯುವ ಹಾಗೆಯೇ ಇಲ್ಲ.
ಹಾಗೆ ನೋಡಿದರೆ ವೀಣಾ ಬಹಳ ಅದೃಷ್ಟವಂತರು. ಅವರಿಗೆ ಸತ್ಯಕಾಮರಂಥ ತಂದೆ, ಗುರು ದೊರಕಿದರು. ಗುರುವನ್ನು ಹುಡುಕಿಕೊಂಡು ಅಲೆಯಬೇಕಾದ ಪ್ರಸಂಗವೇ ಅವರಿಗೆ ಬರಲಿಲ್ಲ. ಗುರುವೇ ಅವರ ಬಳಿಗೆ ಬಂದರು. ಭಕ್ತಿಪಂಥದ ಅನೇಕ ಮಹಿಳೆಯರಿಗೆ ಆ ಗುರುವಿನ ಕೃಪೆಯೂ ಇಲ್ಲ. ಅವರವರ ಅರಿವೇ ಅವರಿಗೆ ಗುರು.
ಅಧ್ಯಾತ್ಮ ಸಾಧಕರಲ್ಲಿ ನಾವು ಎರಡು ಬಗೆಯನ್ನು ಕಾಣುತ್ತೇವೆ. ಒಂದು, ಸಂಸಾರದಲ್ಲಿದ್ದುಕೊಂಡೇ, ಕೌಟುಂಬಿಕ ಸುಖಗಳನ್ನು ಅನುಭವಿಸುತ್ತಲೇ, ಅದರ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಅಧ್ಯಾತ್ಮ ಸಾಧನೆಯಲ್ಲಿ ಮುನ್ನಡೆದವರು ಮತ್ತು ಎರಡು, ಸಂಸಾರಕ್ಕೆ ವಿಮುಖರಾಗಿ, ಸನ್ಯಾಸಿಗಳಾಗಿ, ಬ್ರಹ್ಮಚರ್ಯೆ ಆಚರಿಸುತ್ತಾ ಅಧ್ಯಾತ್ಮ ಸಾಧನೆಯಲ್ಲಿ ನಿರತರಾದವರು.
ವೀಣಾ ಅವರ ಆಯ್ಕೆ ಎರಡನೆಯ ರೀತಿಯದು. ಕಾಮವನ್ನು ಗೆಲ್ಲುವ ಹಟದಲ್ಲಿ ದೇಹದ ಉರವಣೆಗಳನ್ನು ಅತ್ಯಂತ ನಿಭರ್ಿಡೆಯಿಂದ ತೆರೆದಿಟ್ಟಿದ್ದಾರೆ. ದೈಹಿಕವಾಗಿ ಕೂಡದಿದ್ದರೂ ಧ್ಯಾನದ ನೆಲೆಯಲ್ಲಿ ಮಾನಸಿಕವಾಗಿ ತನಗೆ ಪ್ರಿಯರಾದವರನ್ನು ಕೂಡಿದ್ದಾರೆ. ಅದನ್ನು ಗುರುಗಳೇ ಅನುಮೋದಿಸಿದ್ದಾರೆ. ಅದು ಬೇಸರವಾಗಿ ಕೊನೆಗೆ ಕೃಷ್ಣ, ಬುದ್ಧರನ್ನು ಕರೆದುಕೊಂಡಿದ್ದಾರೆ. ಈ ಕೂಡುವಿಕೆಯ ತಹತಹವನ್ನು ಅಕ್ಕ, ಮೀರಾ, ಆಂಡಾಳ್, ಲಲ್ಲೇಶ್ವರೀ ಮುಂತಾದ ಭಕ್ತೆಯರೂ ಕೂಡ ಇನ್ನಿಲ್ಲದಂತೆ ಬಹಳ ಪರಿಣಮಕಾರಿಯಾಗಿ ಹಂಚಿಕೊಂಡಿದ್ದಾರೆ. ಅಕ್ಕ, ಲಲ್ಲೇಶ್ವರಿಯರಂತೂ ಸಾರ್ವಜನಿಕವಾಗಿ, ದೈಹಿಕವಾಗಿ ಬತ್ತಲೆ ನಡೆದಿದ್ದಾರೆ.
ಇಲ್ಲಿರುವ ಪ್ರಶ್ನೆಯೆಂದರೆ ಮಾನಸಿಕವಾಗಿ ಕೂಡಿದರೂ, ದೈಹಿಕವಾಗಿ ಕೂಡಿದರೂ ಅದರ ಏಕತಾನತೆಯಿಂದ ಬೇಸರಬರುವುದು ಸಾಮಾನ್ಯವಾದುದು. ಅದು ಭಕ್ತಿಯ ನೆಲೆಯಲ್ಲಿ ಏಕೆ ವಿಶೇಷವಾಗಬೇಕು? ಕಾಮವನ್ನು ನೈಚ್ಯ ಅನುಸಂಧಾನಕ್ಕೆ ಯಾಕೆ ಒಗ್ಗಿಸಬೇಕು? ಅದು ನಿಸರ್ಗಕ್ಕೆ ನಾವು ಮಾಡುವ ಅಪಚಾರವಲ್ಲವೇ? ಕಾಮದ ಊಧ್ರ್ವಗಮನಕ್ಕೆ ಯಾಕೆ ಅಂತಹ ಮಹತ್ವ ಕೊಡಬೇಕು? ನಮ್ಮ ಋಷಿಮುನಿಗಳೆಲ್ಲಾ ಸಂಸಾರದಲ್ಲಿದ್ದುಕೊಂಡೇ, ಸಹಜ ಕಾಮವನ್ನು ಅನುಭವಿಸುತ್ತಲೇ, ಹೆಂಡತಿ ಮಕ್ಕಳನ್ನು ಪೋಷಿಸಿಕೊಂಡೇ ಅಧ್ಯಾತ್ಮದ ಉನ್ನತಿಯನ್ನು ಸಾಧಿಸಿದ್ದರಲ್ಲ? ಬ್ರಹ್ಮಚರ್ಯೆ ಎಂಬುದು ಕೇವಲ ದೈಹಿಕವಾದುದೇ? ದೇಹ ದಂಡನೆ ಯಾಕೆ ಶ್ರೇಷ್ಠವಾಗಬೇಕು? ಇರದುದರ ಕಡೆಗೆ ಓಡಿಹೋಗುವುದು ಪಲಾಯನವಲ್ಲವೇ? ಬದುಕಿನಲ್ಲಿನ ಎಲ್ಲಾ ಅನುಭವಗಳನ್ನು ಕಂಡುಂಡು ಮಾಗಿ, ತೊಟ್ಟು ಕಳಚುವ ಹೊತ್ತಿಗೆ ವಾನಪ್ರಸ್ಥಕ್ಕೆ ತೆರಳುವುದು ಅರ್ಥಪೂರ್ಣವಾದುದಲ್ಲವೇ? ಅದನ್ನು ಬಿಟ್ಟು ಮರಕ್ಕೆ ಅಂಟಿಕೊಂಡ ಕಾಯನ್ನು ತೊಟ್ಟು ಕಳಚುವ ಮೊದಲೇ ಕೊಯ್ದು ಗುದ್ದಿ ಹಣ್ಣುಮಾಡುವುದು ನಿಸರ್ಗದ ನಿಯಮಕ್ಕೆ ತಕ್ಕುದೇ? ಎಂಬಂತಹ ಅನೇಕ ಪ್ರಶ್ನೆಗಳು ಈ ಓದಿನಲ್ಲಿ ಉದ್ಭವಿಸುತ್ತವೆ.
ಆದುದರಿಂದಲೇ ಬಹುಶಃ ಅದು (ಬ್ರಹ್ಮಚರ್ಯೆ?) ಹಲವರ ದಾರಿಯಾಗದೇ ಕೇವಲ ಬೆರಳೆಣಿಕೆಯ ಕೆಲವರ ದಾರಿಯಾಗಿದೆ. ಆದರೂ ಇಂತಹ ಸಾಧನೆಗೆ ಪೂರ್ವ ಪೀಠಿಕೆಯಾಗಿ ಸತ್ಯಕಾಮರು ಲೇಖಕಿಗೆ ಕಲಿಸುವ ಮಾನವೀಯತೆಯ ಪಾಠಗಳು ಸಾಮಾಜಿಕವಾಗಿ ಬಹಳ ಮಹತ್ವದ್ದಾಗಿವೆ ಹಾಗೂ ಸಮಕಾಲೀನ ಸಂದರ್ಭದಲ್ಲಿ ಅರ್ಥಪೂರ್ಣವೂ ಆಗಿವೆ.






ಗಿರಿಜಾ ಶಾಸ್ತ್ರಿ – ನಿಮ್ಮ ಟಿಪ್ಪಣಿ ವೀಣಾ ಅವರ ಬರಹವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಬರೆದದ್ದು. ದೊಡ್ಡ ಲೇಖನವಾಗುವ ಸಾಧ್ಯತೆಯಿದ್ದದ್ದನ್ನು ಚಿಕ್ಕದಾಗಿ ಹೇಳಿದ್ದೀರಿ. ಆದರೆ ಮಂಡಿಸಿದ ವಿಷಯಗಳು ಮಾತ್ರ ತುಂಬಾ ಮಹತ್ವದ್ದು. ಇದಕ್ಕೆ ಥ್ಯಾಂಕ್ಸ್. ಈ ಪ್ರಶ್ನೆಗಳು ನನ್ನನ್ನೂ ಕಾಡಿವೆ ಮತ್ತು ಅದಕ್ಕೆ ಉತ್ತರ ಹೇಗೆ ಕಂಡುಕೊಳ್ಳಬೇಕು ಅಂತ ನೀವು ಸೂಚಿಸಿದ ರೀತಿ ತುಂಬಾ ಆಪ್ತವಾಗಿದೆ. ‘ಅವರವರ ಅರಿವೇ ಅವರಿಗೆ ಗುರು’ -ಇದು ವೀಣಾ ಅವರ ಪುಸ್ತಕದ ಬಗ್ಗೆಯೂ ಹೌದು ಮತ್ತು ಸಾಮಾನ್ಯವಾಗಿಯೂ ಹೌದು. Thanks.
ಗಿರಿಜಾ ಅವರೆ,
ಕೃತಿಯ ಆಳಕ್ಕಿಳಿದು ಸಶಕ್ತವಾಗಿ ಸಾಮಾನ್ಯ ಓದಿಗೆ ಅರ್ಥವಾಗುವಂತೆ ವಿಶ್ಲೇಶಿಸಿದ್ದೀರಿ. ನೀವು ಎತ್ತಿದ ಪ್ರಶ್ನೆಗಳು ಅರ್ಥಪೂರ್ಣವಾಗಿವೆ.
ಅನುಪಮಾ ಪ್ರಸಾದ್.
ವೀಣಾರವರ ಪುಸ್ತಕ ಪರಿಚಯ ಗಿರಿಜಾರವರು ಬಹಳ ಚೆನ್ನಾಗಿ ಮಾಡಿಕೊಟ್ಟಿದ್ದಾರೆ. ಅವರು ಆಧ್ಯಾತ್ಮಿಕ ಸಾಧನೆಯ ಎರಡು ಹಾದಿಗಳಲ್ಲಿ ಒಂದು ಸಹಜ ಮಾರ್ಗ,ಇನ್ನೊಂದು ಹಠದ ಮಾರ್ಗ ಎಂದು ಸರಿಯಾಗಿ ಗುರುತಿಸಿದ್ದಾರೆ. ಸಹಜ ಮಾರ್ಗದಲ್ಲಿ ಸಾಗುವವರು ಹಲವರು. ಹಠದ ಮಾರ್ಗದಲ್ಲಿ ಸಾಗುವವರು ಕೆಲವರು. ಈ ಕೆಲವರಲ್ಲೂ ಜೀವನದ ಒತ್ತಡಗಳಿಂದ ಹಠದ ಮಾರ್ಗ ಹಿಡಿದವರೇ ಹೆಚ್ಚಿನವರು.
ವೀಣಾರವರ ಅಸಮಾನ್ಯ ಆಧ್ಯಾತ್ಮಿಕ ಪುಸ್ತಕಕ್ಕೆ ನಮ್ಮಂತಹ ಸಮಾನ್ಯರಂತೆ ಗಿರಿಜಾರವರು ಪ್ರತಿಕ್ರಿಯಿಸಿದ್ದಾರೆ. ಆದರೆ ಅವರು ಕುಂಡಿಲಿನಿಯನ್ನು ಒಪ್ಪಿ ಬರೆದಿದ್ದಾರೆ. ಸಾಮಾನ್ಯರಿಗೆ ಕುಂಡಿಲಿನಿ ಸಹಜ ಸತ್ಯವೆನಿಸಿಲ್ಲ. ಅದೊಂದು ಕಾಲ್ಪನಿಕ ಸತ್ಯವಾಗಿದೆ.
ವೀಣಾರವರ ಪುಸ್ತಕವನ್ನು ಓದುವಂತೆ ಪ್ರೇರೇಪಿಸಿರುವ ಗಿರಿಜಾರವರಿಗೆ ಧನ್ಯವಾದಗಳು.
ವಾಸ್ತವದ ನೆಲೆಯಲ್ಲಿ ಈ ಸಂಬಂಧಗಳ ಸಾಧ್ಯತೆ ಬೆರಗುಗೊಳಿಸುವಂತಹದು. ಇದನ್ನು ಓದಲೇ ಬೇಕು ಎಂದುಕೊಂಡಿದ್ದೆ – ನಿಮ್ಮ ಲೇಖನ ಅದಕ್ಕೆ ಇನ್ನಷ್ಟು ಅವಸರ ಮಾಡುತ್ತಿದೆ. ಇನ್ನೊಬ್ಬರು ನೋಡದೆ ಇದ್ದಾಗಲೂ ತಾನು ಏನು ಮಾಡುತ್ತಿರಬೇಕಾಗಿತ್ತೋ ಅದನ್ನೆ ಮಾಡುವವರು ಉನ್ನತ ವ್ಯಕ್ತಿಗಳು ,ಅಂತಹವರನ್ನು ನಾನು ಕಂಡಿರುವದು ಕ್ವಚಿತ. ಸಹಸ್ರಾರ, ಪ್ರಕಾಶಮಾನವಾದ ಬೆಳಕು ನಂಬಬೇಕೋ ಬಿಡಬೇಕೋ ಎಂಬ ಸಂದಿಗ್ಧಕ್ಕೆ ಇದರಲ್ಲಿ ಏನಾದರೂ ಉತ್ತರಗಳಿವೆಯೋ ಎಂದು ನೋಡುವಾಸೆ.
~ಅನಿಲ
ಆಧ್ಯಾತ್ಮಿಕ ಅಥವಾ ತಂತ್ರದ ಪರಿಭಾಷೆಯಲ್ಲಿ ತೊದಕಾಗುವುದೇ ಇಲ್ಲಿ – “ಕಾಮದೊಂದಿಗೆ ಹೋರಾಡಿ ಗೆದ್ದಿದ್ದಾರೆ’ ಎನ್ದಿದ್ದೇರಿ. ಈ ಹೋರಾಡಿ ಗೆಲ್ಲುವುದೇ ಒಂದು ಇಗೋ ಟ್ರಿಪ್ ಅಲ್ಲವೇ!?. ಮಾತ್ರವಲ್ಲ, ಬಡಿದು ಕೊಂದ ಹಾವಿಗೋ ಆಧ್ಯಾತ್ಮಿಕ ಗೆಲುವಿಗೂ ಏನೂ ಸಮ್ಬನ್ಧವಿಲ್ಲ. ಹಾವು ಒಂದು ಜೀವ ಇರುವ ಜಂತು. ಏಕೋ ಅನಗತ್ಯವಾಗಿ ಪ್ರತಿಮೆಗಳ ಬಿಳಿಲಿಗೆ ಜೋತುಬಿದ್ದೆವೋ ಎನ್ನಿಸುವುದಿಲ್ಲವೇ!?
ಒಂದಷ್ಟು ದಿನ ತಲೆಕೆಡೆಸಿದ ಪುಸ್ತಕ ..
ಸಾಧನೆಯ ಗುರಿ ಮುಟ್ಟುವ ತವಕದಲ್ಲಿ ನಡೆಯಬಹುದಾದ ಸರ್ವೆ ಸಾಮನ್ಯ ತೊಟಕುಗಳನ್ನ ದಾಟಿ ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ವೀಣಕ್ಕ ತಮ್ಮ ಬರಹಗಳ ಮೂಲಕ ಜನರನ್ನ ಗೆದ್ದಿದ್ದಾರೆ.
ಇಷ್ಟವಾದ ಪುಸ್ತಕದ ವಿಮರ್ಷೆ ಓದೋ ಮಜವೆ ಬೇರೆ ..ಧನ್ಯವಾದ.
Avarobba abhutapurva jeevanta kruthi…