ಪರಮೇಶ್ವರ ಗುರುಸ್ವಾಮಿ
30 ವರ್ಷಗಳ ಹಿಂದಿನ ನೆಗೆಟೀವ್ ನ ಪಾಸಿಟೀವ್ ಚಿತ್ರ ಮಾಡಿಕೊಂಡು ಮೆಜೆಸ್ಟಿಕ್ ನಲ್ಲಿರುವ ಸ್ಕೈವಾಕರ್ ಹತ್ತಿ ಅದೇ ಫ್ರೇಮ್ ಹಿಡಿದೆ.
ಬಹಳ ಬದಲಾವಣೆಗಳಾಗಿವೆ.
ಈ ಬದಲಾವಣೆಗಳಲ್ಲಿ ಬೇಸರ ತಂದ ವಿಷಯವೆಂದರೆ ಎಸ್.ಜಿ.ವಾಸುದೇವ್ ಅವರ ಕಲಾಕೃತಿಗಳ ಕುರಿತ ಉಪೇಕ್ಷೆ. ವ್ಯಾಪಾರೀ ಉಮೇದಿನಲ್ಲಿ ಸಂರಕ್ಷಿಸಬೇಕಾದ ಕಲೆ, ಒತ್ತರಿಸಲ್ಪಟ್ಟಿದೆ.
ಮೊದಲು ವಾಸುದೇವ್ ಅವರ ಬಗ್ಗೆ ನನಗೆ ತಿಳಿದದ್ದು ‘ಸಂಸ್ಕಾರ’ ಚಿತ್ರ ನೋಡಿದಾಗ. ಮಾಮೂಲೀ ಚಿತ್ರ ಪ್ರೇಕ್ಷಕನಾಗಿದ್ದ ನನಗೆ ‘ಸಂಸ್ಕಾರ’ ಆಗ ಅರ್ಥವಾಗದಿದ್ದರೂ ಚಲನಚಿತ್ರದ ಬಗ್ಗೆ ವಿಭಿನ್ನ ಅನಿಸಿಕೆಯೊಂದನ್ನು ತೆರೆದಿಟ್ಟಿತು. ಆ ಚಿತ್ರದ ಆರ್ಟ್ ಡೈರೆಕ್ಟರ್ ವಾಸುದೇವ್ ಅವರು. ಇವರು, ಛಾಯಾಗ್ರಾಹಕ ಟಾಮ್ ಕೊವಾನ್ ಮತ್ತು ಸಂಗೀತ ನೀಡಿದ್ದ ರಾಜೀವ್ ತಾರಾನಾಥ್ ರವರು ಈ ಚಿತ್ರದಲ್ಲಿನ ಇವರುಗಳ ವಿಭಿನ್ನ ಶೈಲಿಯಿಂದಾಗಿ ನನ್ನ ನೆನಪಿನಲ್ಲಿ ಅಚ್ಚೊತ್ತಿದಂತೆ ಉಳಿದುಬಿಟ್ಟಿದ್ದಾರೆ.
ತ್ರಿವೇಣಿ ಚಿತ್ರಮಂದಿರದ ಕಟ್ಟಡದಲ್ಲಿ ಮಾಮೂಲಿ ಪ್ಲಾಸ್ಟರಿಂಗ್ ಬದಲು ಪ್ಲಾಸ್ಟರಿಂಗ್ ಮೆಟೀರಿಯಲ್ ಅನ್ನೇ ಬಣ್ಣಗಳಲ್ಲಿ ಬಳಸಿ ಭಿತ್ತಿಚಿತ್ರಗಳನ್ನು ರಚಿಸಿದ್ದಾರೆ. ಬೆಂಗಳೂರಿಗೆ ಬಂದ ಹೊಸದರಲ್ಲಿ ಈ ಭಿತ್ತಿಚಿತ್ರಗಳನ್ನು ಮೊದಲ ಸಲ ಗಮನಿಸಿದಾಗ ಆ ಚಿತ್ರಮಂದಿರದ ಮಾಲೀಕರ ಬಗ್ಗೆ ಖುಷಿಯೆನಿಸಿತ್ತು. ಅಂಥ ಕಲಾವಿದರ ಕೈಯಲ್ಲಿ ಶಾಶ್ವತವಾದ(?) ಕಲೆಯನ್ನು ಗೋಡೆಯ ಮೇಲೆ ರಚಿಸಿಸಿದ್ದಾರಲ್ಲ ಎಂದು ಅವರ ಅಭಿರುಚಿಯ ಬಗ್ಗೆ ಮೆಚ್ಚುಗೆ ಪಟ್ಟಿದ್ದೆ. ಅಲ್ಲಿ ಹೋದಾಗಲೆಲ್ಲ ನಿಂತು ಆ ಭಿತ್ತಿಚಿತ್ರಗಳನ್ನು ನೋಡುತ್ತಿದ್ದೆ.
ಎರಡು ದಶಕಗಳಿಂದ ವಾಹನಾರೂಢತೆ ಹೆಚ್ಚಾದ್ದರಿಂದ ಆ ಕಡೆ ಹೋದರೂ ವಾಹನದಲ್ಲಿ ಹಾದು ಹೋಗುವುದಷ್ಟೆ. ನೆನಪೂ ಆಗುತ್ತಿರಲಿಲ್ಲ, ಗಮನಿಸಲೂ ಹೋಗಿರಲಿಲ್ಲ. ಈ ಹಳೆಯ ನೆಗೆಟೀವ್ ದೆಸೆಯಿಂದಾಗಿ ಪುನಃ ಹೋಗಿ ನೋಡಿದರೆ ಆ ಭಿತ್ತಿಚಿತ್ರಗಳಿಗೆ ಇನ್ನು ಉಳಿಗಾಲವಿಲ್ಲ ಅನಿಸುತ್ತಿದೆ.






0 Comments