ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂವಿಧಾನವನ್ನು ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ?

ಸಂವಿಧಾನವನ್ನು ಮತೀಯ-ಸಾಂಸ್ಕೃತಿಕ ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ?

ಡಾ.ಶ್ರೀನಿವಾಸ ಕಕ್ಕಿಲ್ಲಾಯ.

ಸಂವಿಧಾನ ಅಂದರೆ ಸ್ವಾತಂತ್ರ್ಯ; ನಮಗೆ ನಾವು ಕೊಟ್ಟುಕೊಂಡ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಕರ್ತವ್ಯಗಳು. ಬೇಕೆನಿಸಿದ್ದನ್ನು ಓದುವ, ಬರೆಯುವ, ಮಾತಾಡುವ, ನೋಡುವ, ಕೇಳುವ, ಬೆರೆಯುವ, ಜೊತೆಗೂಡುವ, ತಿನ್ನುವ ಸ್ವಾತಂತ್ರ್ಯ. ಇವೆಲ್ಲಕ್ಕೂ ಈಗ ಸಂಚಕಾರ ಬಂದಿರುವುದು ದಿನನಿತ್ಯ ತೋರುತ್ತಿದೆ, ಬೇರೆ ಬೇರೆ ಭಾಗಗಳಲ್ಲಿ ಸ್ವಾತಂತ್ರ್ಯಕ್ಕೆ ಕೊಳ್ಳಿ ಇಟ್ಟು, ಕತ್ತು ಹಿಸುಕಿ, ಸಾಯಿಸುವುದನ್ನು ಕಾಣುತ್ತಿದ್ದೇವೆ. ತಮ್ಮ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳಲು ಯುವಜನರು ಒಗ್ಗೂಡಿ ಎದ್ದೇಳದಿದ್ದರೆ ಇದು ಇನ್ನೂ ವಿಷಮಿಸುವುದು ಖಂಡಿತ. ಸಂವಿಧಾನವನ್ನು ಮತೀಯ-ಸಾಂಸ್ಕೃತಿಕ ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ?

 

 

 

 

ನಾವು ನಮ್ಮ ದೇಶದ ಭವಿಷ್ಯವನ್ನು ಸಂವಿಧಾನದ ಅಡಿಗಲ್ಲಿನ ಮೇಲೆಯೇ ಕಟ್ಟಬೇಕು

ಹೆಚ್ . ಆರ್. ಸುಜಾತಾ

ಹಳೆಯ ರಾಜರ ಕಾಲ ಕಳೆದು ವಸಾಹತುಶಾಹಿ ದಿನಗಳು ಮುಗಿದು ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಮ್ಮ ಸಂವಿಧಾನದ ಗದ್ದುಗೆ ನಿಂತಿದೆ.

ಸಂವಿಧಾನ ನಮ್ಮ ದೇಶದ , ನಮ್ಮ ಸಮಾಜದ ಭದ್ರ ಬುನಾದಿ . ನಾವು ನಮ್ಮ ದೇಶದ ಭವಿಷ್ಯವನ್ನು ಸಂವಿಧಾನದ ಅಡಿಗಲ್ಲಿನ ಮೇಲೆಯೇ ಕಟ್ಟಬೇಕು. ಅದರ ಆಶಯಗಳು ಬಹಳ ಸ್ಪಷ್ಟವಾಗಿವೆ. ತಲೆ ತಲಾಂತರಗಳಿಂದ ಬೆಳೆದು ಬಂದಿರುವ ಅಸಮಾನತೆಯನ್ನು ನಿವಾರಿಸುವುದೇ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ.

ಸಮಾಜದ ಕಟ್ಟಕಡೆಯ ಮನುಷ್ಯನ ಒಳಿತನ್ನು ಗಮನದಲ್ಲಿಟ್ಟುಕೊಂಡು ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾಗಿರುವ ನಮ್ಮ ಸಂವಿಧಾನ ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಎನ್ನುವ ಖ್ಯಾತಿ ಪಡೆದಿದೆ. ಸಮಾನತೆ , ಸಹೋದರತೆ, ಜಾತ್ಯತೀತತೆ ಇದರ ಪ್ರಧಾನ ಲಕ್ಷಣ.

ನಾವು ಇದನ್ನು ಪರಿಣಾಮಕಾರಿಯಾಗಿ ಅನುಸರಿಸಿದರೆ ನಮ್ಮ ದೇಶದ ನೂರಾರು ಸಮಸ್ಯೆಗಳು ಏಕ ಕಾಲದಲ್ಲಿ ಬಗೆಹರಿಯುತ್ತವೆ. ಮಹಿಳೆಯರಿಗೆ ನಮ್ಮ ಸಂವಿಧಾನ ನೀಡಿರುವ ಪ್ರಾಧಾನ್ಯತೆ ಎಣೆ ಇಲ್ಲದ್ದು. ಮಕ್ಕಳ ಹಕ್ಕುಗಳ ಸಂರಕ್ಷಣೆಯಂತೂ ಇದರಲ್ಲಿ ಅಂತರ್ಗತವಾಗಿದೆ. ಇವತ್ತಿನ ಹುಸಿ ಅಭಿವೃದ್ಧಿಯ ಮಾತನ್ನಾಡುತ್ತಿರುವ ಪುಂಗಿದಾಸರ ಬಾಯಿ ಬಂದ್ ಮಾಡುವ ಶಕ್ತಿ ನಮ್ಮ ಸಂವಿಧಾನಕ್ಕಿದೆ.

ಅದಕ್ಕೆಂದೇ ರಾಷ್ಟ್ರ ಭಕ್ತರು ಸಂವಿಧಾನವನ್ನೇ ತಿದ್ದಬೇಕೆಂದು ಬೊಂಬಡಾ ಹೊಡೆಯುತ್ತಿರುವುದು. ದನಿ ಇಲ್ಲದವರ ದನಿಯಾಗಿರುವ ನಮ್ಮ ಸಂವಿಧಾನದ ಹಂದರವನ್ನು ಯಾರಾದರೂ ಸಡಿಲಗೊಳಿಸಿದರೆ ತಳ ಸಮುದಾಯಗಳು ತಳಕ್ಕೆ ಜಾರುವುದೇ ಸೈ.

ನಮ್ಮ ಹಿಂದಿನ ಹುಳುಕುಗಳನ್ನು
ಸರಿಪಡಿಸಿಕೊಳ್ಳೋಣ. ಆರೋಗ್ಯಕರವಾದ
ಪ್ರಜಾಪ್ರಭುತ್ವದ ಆಶಯವನ್ನು ಮುನ್ನಡೆಸೋಣ.

 

ಸಂವಿಧಾನ ಬದುಕಿನಲ್ಲಿ ಹಾಸುಹೊಕ್ಕಾಗಲಿ

ಸುವರ್ಣ ಶಿ. ಕಂಬಿ

ಸಂವಿಧಾನ ಒಬ್ಬ ಮನುಷ್ಯನ ಬದುಕಿಗೆ ಆಧಾರಸ್ತಂಭ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಪ್ರಮುಖ ಸ್ಥಾನ ಹೊಂದಿದೆ. ಸಂವಿಧಾನ ಇಲ್ಲ ಅಂದ್ರೆ ಸಮಾಜ ಹೇಗಿರುತ್ತೆ ಅಂತ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಬಡವರು, ಜನಸಾಮಾನ್ಯರು, ಜಾತಿ ತಾರತಮ್ಯ ಇಲ್ಲದೇ ಹಕ್ಕು ಚಲಾಯಿಸಬಹುದು, ಶಿಕ್ಷಣ ಪಡೆಯಬಹುದು. ವೈವಿದ್ಯತೆಯುಳ್ಳ ದೇಶದಲ್ಲಿ ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಜಾತ್ಯಾತೀತವಾಗಿ ಬದುಕುವ ಹಕ್ಕು ಸಂವಿಧಾನ ನೀಡಿದೆ. ಲಿಂಗ ತಾರತಮ್ಯ, ಧರ್ಮ, ಜಾತಿ-ಮತ, ಪಂಥದ ಭೇದ ಮರೆತು ದೇಶದ ಸಮಗ್ರತೆ ಕಾಪಾಡಿಕೊಂಡು ಜಾತ್ಯಾತೀತ ಜೀವನ ನಡೆಸುವುದಕ್ಕೆ ಸಂವಿಧಾನ ಅನುಕೂಲವಾಗಿದೆ. ಸುಲಲಿತ ಆಡಳಿತಕ್ಕೆ ಸಂವಿಧಾನದ ಅವಶ್ಯಕತೆ ಅತೀ ಮುಖ್ಯ. ಸಂವಿಧಾನ ಇಲ್ಲದಿದ್ದರೆ ಸರಕಾರ ನಡೆಸುವುದು, ಸಮಾಜದಲ್ಲಿ ವ್ಯಕ್ತಿ ನಿರ್ಭಯವಾಗಿ ಜೀವಿಸುವುದು ಕಷ್ಟ. ಅಮೂಲ್ಯ ಹಾಗೂ ಉದಾತ್ತವಾದ ಸರ್ವಕಾಲಿಕವಾದ, ಸರ್ವರ ಒಳಿತನ್ನೇ ಸಾರುವ ಒಂದು ಪ್ರಬುದ್ಧ ಸಂವಿಧಾನ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಬೇಕು.

‍ಲೇಖಕರು Avadhi GK

26 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading