ಸಂಧ್ಯಾ ಹೊನಗುಂಟಿಕರ್ ಓದಿದ ಕಾಲಗರ್ಭದಿಂದ ಅನೂಹ್ಯ ಲೋಕಕೆ…

ಹಿರಿಯ ಪತ್ರಕರ್ತ, ರಂಗಕರ್ಮಿ ಪ್ರಭಾಕರ ಜೋಶಿ ಅವರ ಸಮಗ್ರ ಕವನ ಸಂಕಲನ ಬಿಡುಗಡೆಯಾಗುತ್ತಿದೆ. ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿದ್ದ ಪ್ರಭಾಕರ ಜೋಶಿ ಅವರ ನಾಲ್ಕು ಕವನ ಸಂಕಲನಗಳನ್ನು ಇದು ಒಳಗೊಂಡಿದೆ.

ಕನ್ನಡದ ಮತ್ತೊಬ್ಬ ಮಹತ್ವದ ಲೇಖಕಿ, ಅಂಕನಕಾರರಾದ ಸಂಧ್ಯಾ ಹೊನಗುಂಟಿಕರ್ ಅವರು ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ-

ಸಂಧ್ಯಾ ಹೊನಗುಂಟಿಕರ್

ಇಂಗ್ಲಿಷ್ ಕವಿ ಸ್ಯಾಮ್ಯುವಲ್ ಜಾನ್ಸನ್‌ಗೆ what is poetry? ಎಂದು ಕೇಳಿದರೆ, you explain me what is light, then I will explain what is poetry ಎನ್ನುತ್ತಾನೆ. ಬೇಂದ್ರೆಯವರು ಹೇಳುವುದು ಇದೇ ಅರ್ಥದಲ್ಲಿ. ಕವಿತೆಯಲ್ಲಿ ಅರ್ಥವನ್ನು ಹುಡುಕಬಾರದು ಹಾಗೂ ಕವಿತೆ ಅರ್ಥವಾಗುವುದಲ್ಲ, ಅದು ಹೊಳೆಯುವಂತಹದ್ದು. ಕವಿಯು ತನ್ನ ಅನುಭವವನ್ನು ಶಬ್ಧಗಳ ಹೆಣಿಗೆಯಲ್ಲಿ ನೀಡಿದರೆ ಅದು ಕವಿತೆಯಾಗದು, ಅದು ಕೇವಲ ವಿವರವಾಗುತ್ತದೆ. ಕವಿಯು ಕಟ್ಟಿಕೊಟ್ಟ ಸಾಲುಗಳಲ್ಲಿ ಓದುಗನಿಗೆ ಹೊಸದೊಂದು ಅನುಭವ ದಕ್ಕುವಂತಾಗಬೇಕು. ಒಂದು ಕವಿತೆ ಹಲವು ಓದುಗರಿಗೆ ಹಲವು ಅರ್ಥವನ್ನು ಹೊಳೆಯಿಸುತ್ತದೆ.

ಕವಿ ತಾನು ಕಂಡುಕೊಂಡ ಅನುಭವವನ್ನು ಕವಿತೆಯ ಮೂಲಕ ಅಭಿವ್ಯಕ್ತಿಸಿದರೆ ಸಹೃದಯನು ಬೇರೊಂದು ಅನುಭವಕ್ಕೆ ಈಡಾಗುತ್ತಾನೆ. ಸಾಮಾನ್ಯವಾಗಿ ಗದ್ಯ ಸಾಹಿತ್ಯವು ನೇರವಾಗಿದ್ದು ಓದುಗನಿಗೆ ಯಾವ ತೊಡಕಿಲ್ಲದೆ ದಾಟಬಹುದು. ಆದಾಗ್ಯೂ ಅದಕ್ಕೂ ಹಲವು ಆಯಾಮಗಳಿದ್ದರೂ ಗ್ರಹಿಸುವುದು ಸುಲಭ ಸಾಧ್ಯ. ಆದರೆ ಪದ್ಯವು ವಾಚ್ಯಾರ್ಥವನ್ನು, ಲಕ್ಷ್ಯಾರ್ಥವನ್ನು ಹೊಂದಿರುತ್ತದೆ. ಕವಿತೆಯ ಗೂಢತೆಯನ್ನು ಅಂದರೆ ಅದರ ಒಳಗಿನ ಲಕ್ಷ್ಯಾರ್ಥವನ್ನು ಗ್ರಹಿಸಿದಾಗ ಮಾತ್ರ ರಸಾನುಭೂತಿಯಾಗುತ್ತದೆ. ಹಾಗಾಗಿ ಗದ್ಯಕಿಂತಲೂ ಪದ್ಯದ ಓದು ವಿಸ್ಮಯ, ವಿಚಿತ್ರ ಅನುಭೂತಿಯನ್ನು ಒದಗಿಸುವಂಥದ್ದು.

ಶ್ರೀಯುತ ಪ್ರಭಾಕರ್ ಜೋಶಿಯವರ “ಕಾಲಗರ್ಭದಲ್ಲಿ” ಸಮಗ್ರ ಕೃತಿಯಲ್ಲಿ ನಾಲ್ಕು ಕವನಸಂಕಲನಗಳು ಅಡಕವಾಗಿದ್ದು, 157 ಕವಿತೆಗಳಿವೆ. ಈ ಒಟ್ಟು ಕೃತಿಯನ್ನು ಗ್ರಹಿಸಿದಾಗ ಇವು ಯಾವ ಕಾಲಕ್ಕೆ ಸಲ್ಲಬಹುದಾದ ಕವಿತೆಗಳು ಎಂಬ ಸಹಜ ಪ್ರಶ್ನೆ ಮೂಡುತ್ತದೆ. ಇವು ಈ ಶೀರ್ಷಿಕೆಯ ಧಾಟಿಯಂತೆ ಕಾಲಗರ್ಭದಲ್ಲಿ ಕಳೆದು ಹೋಗಬಹುದಾದ ಕವಿತೆಗಳೇ…? ಅಲ್ಲ, ಖಂಡಿತ ಅಲ್ಲ. ಇವು ಕಾಲಗರ್ಭದಲ್ಲಿ ಅಡಕವಾದ ಕವಿತೆಗಳು. ಯಾವ ಕಾಲಕ್ಕೂ ಸಲ್ಲಬೇಕಾದ ಮತ್ತು ಆಯಾ ಕಾಲಗರ್ಭದ ಆಚೆ ತೆಗೆದ ಕಾಲಾತೀತವಾದ ಅನುಭವವನ್ನು ತುಂಬಿಕೊಂಡಿವೆ ಎಂಬುದು ನನ್ನ ಅಭಿಪ್ರಾಯ.

ಕಾಲದೊಂದಿಗೆ ದೊಂದಿ ಹಿಡಿದು ನಡೆಯುವ ಇಲ್ಲಿಯ ಕವಿತೆಗಳು ಬದುಕಿಗೆ ಸಹನೆಯನ್ನು ಕಲಿಸುತ್ತದೆ “ಕಾಲವನ್ನು ಕಾಯಬೇಕು” ಎಂಬ  ಕವಿತೆಯಲ್ಲಿ

“ಕನಸುಗಳನ್ನು ನಿಷೇಧಿಸಿದ ಸ್ಥಳವಿದು

ಕಾಲವನ್ನು ಕನಸುಗಳೇ ಕಾಯಬೇಕು

ಭಯ ಕೇಕೆಗಳ ನಡುವೆ ಸಂತೂರ್ ಸ್ವರ  

ಪ್ರವಹಿಸಿ ಸೂರ್ಯೋದಯ ಕಾಣಬೇಕು”

(ಕಾಲವನ್ನು ಕಾಯಬೇಕು)

ಪ್ರಾಕೃತಿಕ ವಿಕೋಪದಿಂದಾದ ನಷ್ಟವನ್ನು ತುಂಬಿಕೊಳ್ಳುವ ಉದಾಹರಣೆಯೊಂದಿಗೆ ಬದುಕನ್ನು ಮರುಕಟ್ಟಲು ಸಂಯಮ ಬೇಕು, ಬೆಳಕನ್ನು ಕಾಣಬೇಕು ಎಂಬ ಆಶಾವಾದವಿದೆ.

ಕಾವ್ಯದ ಲಕ್ಷಣಗಳಲ್ಲಿ ಪ್ರಮುಖವಾದದ್ದು ಏನೆಂದರೆ ಕವಿತೆ ಒಂದನ್ನು ಹೇಳಿ ಇನ್ನೊಂದನ್ನು ಧ್ವನಿಸುವುದು. ಬೇಂದ್ರೆಯವರ ಕವಿತೆಗಳಲ್ಲಿ ಇಂತಹ ಉದಾಹರಣೆಗಳನ್ನು ಅಸಂಖ್ಯಾತವಾಗಿ ಕಾಣುತ್ತೇವೆ. “ಕಡಲಿಗೂ ಬಂತು ಶ್ರಾವಣ, ಕುಣಿದಾಂಗ ರಾವಣ”, “ಗಿಡಗಂಟಿಗಳ ಕೊರಳದಿಂದ ಹಕ್ಕಿಗಳ ಹಾಡು”, “ಇದು ಬರೀ ಬೆಳಗಲ್ಲೋ ಅಣ್ಣ”, “ಬಿಸಿಲು ಕುಣಿದು ಬೆವತದ/ ಈಗ ಬಂದದ ಮಳಿಯ ಹದಕ”. ಇಂತಹ ಪ್ರತಿಮೆಗಳು ರೋಚಕತೆಯನ್ನು ಮೂಡಿಸುತ್ತವೆ. ಜೋಶಿಯವರ ಈ ಕೃತಿಯಲ್ಲಿಯೂ ಅಂತಹ ಪ್ರತಿಮೆಗಳ ಒಟ್ಟಂದವಿದೆ.

“ಮಹಡಿ ಸ್ವಪ್ನಗಳನ್ನು ಕಟ್ಟಿ

ಕಂಡು ಕಾಣದ ತಾರೆಗಳನ್ನು ತಡೆದು

ದೀಪಗೊಂಚಲಂತೆ ಇಳಿಬಿಟ್ಟು

ಬೆಳ್ಳಿ ಪುಡಿಯ ಬೆಳದಿಂಗಳನ್ನು

ಅಂಗಳದಲ್ಲಿ ಚಿಮುಕಿಸುತ್ತಾ…”

 (ನೀನು ನಾನು)

“ಚಪ್ಪಾಳೆಗಳು ರಂಗಮಂದಿರದೊಳಗೆ

ಮೀನು ಮರಿಗಳಂತೆ ಪ್ರವೇಶಿಸುತ್ತಿವೆ”

“ಪರಿಸರದಿಂದ ಅಕ್ಷರದಡವಿಗೆ ಹೋಗುತ್ತಾನೆ”

“ಸೂರ್ಯ ನೀರಿನ ಬೀಜವನ್ನು ಬಿತ್ತುತ್ತಾನೆ”

“ನಂಬಿಕೆ ಎಂಬ ಸಬ್‌ಮೆರಿನ್‌ ಹುಡುಕುತ್ತಾ”

ಈ ರೀತಿಯಾಗಿ ಬೆರಗುಗೊಳಿಸುವ ಪ್ರತಿಮೆಗಳು ಕವಿತೆಯ, ಕಾವ್ಯಸತ್ವವಾಗಿ ಅರಳಿವೆ. ಕೆಲವು ಕವಿತೆಗಳಂತೂ ಅನೂಹ್ಯ ಲೋಕದಡೆಗೆ ಸೆಳೆದೊಯ್ಯುವ magic carpetನಂತಿವೆ. ತಾನು ತಾನಾಗಿರದೆ ಇನ್ನೇನೋ ಆಗಿ ಅನುಭವಿಸಲು ಹವಣಿಸುವ ಅದಮ್ಯ ಆಕಾಂಕ್ಷೆಯನ್ನು ಈ ಕವಿತೆಗಳು ತೋರುತ್ತವೆ. ಕತ್ತಲ ಡೈರಿ ಎಂಬ ಕವಿತೆಯಲ್ಲಿ

      “ನೀರನ್ನು ಒದೆಯುತ್ತಾ ನಡೆದ ಆಕಾಶ ಪಕ್ಷಿ

      ನನ್ನ ಕವನಸಂಕಲನದ ಕೊನೆಯ ಪಟವಾಗುತ್ತದೆ

      ಯಾರಿಗಾಗಿಯೂ ತಿಳಿಯದ ಯುದ್ಧದಲ್ಲಿ ಸತ್ತ

      ಸೈನಿಕನ ಪತ್ರ ನನ್ನೊಳಗೆ

      ಕಣ್ಣೀರಹನಿಯಾಗಿ ಬೆಳಗುತ್ತಿದ್ದರೆ

      ಗುಂಪು ಗುಂಪಾಗಿ ನುಗ್ಗುವ ನೆನಪುಗಳು

      ತಪ್ಪು ವಿಳಾಸದೊಂದಿಗೆ ನನ್ನ ಕಿಟಕಿ ಒಳಗಿಂದ

      ಮುಕ್ಕಾಗಿಳಿಯುತ್ತಿವೆ”

ಹೀಗೆ ಇಂತಹ ಸಾಲುಗಳು ಈ ಸಂಕಲನದ ಹಲವಾರು ಕವಿತೆಗಳಲ್ಲಿದ್ದು ಹೊಸ ಅನುಭವವನ್ನು, ವಿಸ್ಮಯವನ್ನು ಎದೆಗೆ ದಾಟಿಸುತ್ತವೆ.

ಇಲ್ಲಿಯ ಇನ್ನೂ ಕೆಲವು ಕವಿತೆಗಳಲ್ಲಿ ಕತ್ತಲೆಯ ಜಗತ್ತಿನ ರಾಜಕತೆಯ ವಿಕೃತವನ್ನು ಕಂಡು ತಲ್ಲಣಗೊಂಡ ಮನಸ್ಸಿನ ಅನಾವರಣದೊಂದಿಗೆ ನರಳಿಕೆ, ಆಕ್ರೋಶ, ಉದ್ವೇಗ ಎಲ್ಲವೂ ಮಡುಗಟ್ಟಿವೆ.

“ಈ ಒಂದು ರಾತ್ರಿ ಶಿಲಾರಣ್ಯವನ್ನು ಹಸಿರಾಗಲು ಬಿಡು”.           (ನಗರ ರಾತ್ರಿ)

“ಇಲಾಖೆಯನ್ನೇ ಇಡಿಯಾಗಿ

ನುಂಗಿದವನಂತಿತ್ತವನ ಹೊಟ್ಟೆ

ಹಿಂದೆ ನೂರಾರು ಖಾಲಿ ತಟ್ಟೆ…”

(ಪ್ರವಾಸಿ ಮಂದಿರದಲ್ಲಿ)

ಇಲ್ಲಿ ಇಂತಹ ತೀಕ್ಷ್ಣವಾದ ಸಾಲುಗಳಿದ್ದರೆ,  “ಶಮಿ ವೃಕ್ಷದ ಮೇಲೆ” ಕವಿತೆಯಲ್ಲಿ ದೇಶದ ರಾಜಕೀಯ ಸ್ಥಿತಿ, ಸೋಗಲಾಡಿತನ, ಹೇಡಿತನಗಳ ವಿರುದ್ಧ ಕತ್ತಿಮಸೆಯುತ್ತಿರುವ ಪದಗಳಂತೆ ತೋರುತ್ತವೆ. “ಉಳ್ಳವರಿಗೆ” ಕವನದಲ್ಲಿ ಬಡತನ, ಅನಾಥಪ್ರಜ್ಞೆ, ಅವಮಾನ, ಎಲ್ಲವನ್ನೂ ಉಳ್ಳವರಿಗೇ ಅರ್ಥೈಸುವ ಸಮರ್ಥವಾದ ಪ್ರಯತ್ನವಿದೆ. “ದುಃಖದ ಕುರಿತು” ಕವಿತೆಯ ಭಾವ ವಿಶಿಷ್ಟವಾದದ್ದು. ಕಷ್ಟಕ್ಕೆ ಕಲ್ಲಾಗುವ ಎಂದು ಧ್ವನಿಸುವಲ್ಲಿ ದುಃಖಕ್ಕೆ ಎದುರಾಗದಿರುವವರು ಯಾವ ವಿಸ್ಫೋಟನೆಗೆ ತೆರೆದುಕೊಳ್ಳುವುದಿಲ್ಲ. ದುರ್ಬಲರನ್ನು ಸಬಲಗೊಳಿಸುವುದೇ ಈ ಕಷ್ಟಗಳು ಎಂಬ ಭಾವ ತಳೆದ ಕವನ ಇದಾಗಿದೆ.

        “ನನ್ನ ಪ್ರಪಂಚ ಅಟ್ಲಾಸ್ಸಿನಲ್ಲಿ ಆ

         ಹೊಸ ಬಣ್ಣದಿಂದ ಗುರುತಿಸಲ್ಪಟ್ಟಿದೆ

         ಹೇಳಿಕೊಳ್ಳಲಾರದಷ್ಟು ಭಯವಾದಾಗ

         ದುಃಖದ ವೃಕ್ಷದ ಕೆಳಗೆ ಉದುರಿದ ಎಲೆಯಿಂದ

         ಭಾಷಾ ಶಾಸ್ತ್ರ ಚರ್ಚಿಸಿದೆ

         ತಾತ್ವಿಕ ನದಿಯೊಳಗೆ ದೋಣಿಯಂತೆ ಉರುಳಿದ        

         ನನ್ನ ಮನೆ, ನಗರ, ದೇಶ, ಖಗೋಳಾಂತರ ರೇಖೆ

         ಎಲ್ಲಿಯಾದರೂ ಅಂಟಿಕೊಂಡಿದ್ದು ದುಃಖವೇ

         ತಿರುಗಾಡುವುದು ದುಃಖವೇ”

ಎನ್ನುವಂತೆ ಭಾವೋದ್ವೇಗಕ್ಕೊಳಗಾದಾಗಲೂ ಪ್ರಜ್ಞಾಶೀಲತೆಯನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಹೇಳುತ್ತವೆ ಈ ಸಾಲುಗಳು.

ಜೋಶಿ ಅವರ ಈ ಸಮಗ್ರ ಕೃತಿಯ ಕವಿತೆಗಳನ್ನು ಗಮನಿಸಿದಾಗ ಕವಿ ತನ್ನ ಅಸ್ಮಿತೆಯನ್ನು ಎಲ್ಲಿಯೂ ಬಿಟ್ಟು ಕೊಡುವುದಿಲ್ಲ. ಇಲ್ಲಿ ಕವಿಯ ಯಾವ ಅನುಭವಗಳು ವ್ಯಕ್ತಿನಿಷ್ಠವಾಗದೆ ಸಮಷ್ಟಿ ಪ್ರಜ್ಞೆಯತ್ತಲೇ ವಾಲುತ್ತವೆ. ಹಾಗೆಂದು ಈ ಕ್ರಿಯೆಯು ಪ್ರಜ್ಞಾಪೂರ್ವಕವಾಗಿ ನಡೆದಿದೆ ಎಂದು ಹೇಳಲಾಗದು. ಅಜ್ಞಾತನೊಬ್ಬನ ಅನುಭವಗಳು ಲೋಕಾಂತಕ್ಕೆ ತೆರೆದುಕೊಂಡು ತೇಲಿ ಬಿಟ್ಟಂತೆ ಕಾಣುತ್ತವೆ. ಇಲ್ಲಿಯ ಬಹುಸಂಖ್ಯೆಯ ಕವಿತೆಗಳು ಜಾಗರದ ಕವಿತೆಗಳು. ಯಾವುದೋ ಮೋಹದಲ್ಲಿ, ಭ್ರಮೆಯಲ್ಲಿ, ಕವಿತೆಯಾಗುವ ಹಂಬಲದಲ್ಲಿ ಮೂಡಿದವಲ್ಲ. ಹಾಗೆಂದು ಅತಿ ಪ್ರಜ್ಞಾಪೂರ್ವಕವಾಗಿ ಬರೆದವೂ ಅಲ್ಲ. ಆದರೆ ಇವುಗಳನ್ನು ಓದುವ, ಗ್ರಹಿಸುವವ ಮಾತ್ರ ಎಚ್ಚರದಲ್ಲಿರಬೇಕು. ಆಗಮಾತ್ರ ಕವಿತೆಯ ಮೋಡಿಗೆ ಒಳಗಾಗುವುದು ಸುಲಭ. ಇಲ್ಲಿ ಕುವೆಂಪು ಅವರ ಸಾಲು ನೆನಪಾಗುತ್ತದೆ.

  “ನೀನೇರಬಲ್ಲೆಯಾ ನಾನೇರುವೆತ್ತರಕೆ?

  ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ?” ಎಂಬಂತೆ ಸಹೃದಯನೂ ಕೂಡ ಈ ಕವಿತೆಗಳೊಂದಿಗೆ ಸಮನ್ವಯಗೊಳ್ಳಲು ಎಚ್ಚರವಾಗಿರಬೇಕು.

ಇಲ್ಲಿಯ ಪ್ರತಿ ಕವಿತೆಯಲ್ಲಿ ಕಾವ್ಯದ ಸರಕುಂಟು. ಬೆರಗುಂಟು. Poem is a mystery ಎಂದು ಹೇಳುವಂತೆ ರಹಸ್ಯಗಳೂ ಉಂಟು. ಬೆಳದಿಂಗಳನ್ನು, ಕತ್ತಲೆಯನ್ನು, ಸ್ವಾತಂತ್ರ್ಯವನ್ನು, ನಗರವನ್ನು, ಸ್ಪರ್ಶವನ್ನು, ಖಾಲಿತನವನ್ನು, ಮಳೆಹನಿಯನ್ನು, ಮಕ್ಕಳನ್ನು, ಯುದ್ಧವನ್ನು, ಮಳೆಕೀಟವನ್ನು, ದೇವರನ್ನು ಹೀಗೆ ಅನೇಕ ವಿಷಯವನ್ನು ಹೊಸ ರೀತಿಯಲ್ಲಿ ಕಾಣಿಸುವಂತಹ ಕವಿತೆಗಳು ಇಲ್ಲಿವೆ. ದಿನ ಬೆಳಗಿನ ಸಹಜ ಸಂಗತಿಗಳು ಬೆರಗಿನ ಉಡುಪು ತೊಟ್ಟು ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ, ಇಲ್ಲಿಯ ಹಲವಾರು ಕವಿತೆಗಳು ತೀವ್ರವಾದ ಭಾವುಕತೆಯನ್ನು ಮೈತುಂಬಿಕೊಂಡಿವೆ. ಏಡ್ಸ್ ರೋಗಿ ಮೆಹರುನ್ನಿಸಾ ಕವಿತೆಯಲ್ಲಿ

   “ಕಾಶಿಯಲ್ಲಿ ಹರೀಶ್ಚಂದ್ರ ಘಾಟಿನಲ್ಲಿ

    ಅರೆಸುತ್ತಾ ಶವದ ನೆರಳಿನಂತೆ ಅನಿಸುತ್ತಿ”

ಎಂತಹ ಹೃದಯವಿದ್ರಾವಕ ಸಾಲುಗಳಿವು ಎಂದು ಅನಿಸದಿರದು. ಸಾವಿನ ಮುಂದೆ ಕುಳಿತು ಬದುಕಿಗೆ ವಿದಾಯಗೀತೆ ಹಾಡುವಂತಿರುವ ಕವಿತೆ. ಲೋಕದ ಸಹಾನುಭೂತಿ ಮತ್ತು ಪ್ರೇಮಗಳೂ ಅಸಹನೀಯವೆನಿಸುವ ಗಳಿಗೆಯನ್ನು ಇಲ್ಲಿಯ ಸಾಲುಗಳು ಚಿತ್ರಿಸಿವೆ.

ಇನ್ನು ಕೆಲವು ಕವಿತೆಗಳಲ್ಲಿ ರಮ್ಯತೆಯೂ, ಮಾಧುರ್ಯವು ಮೌನದಲ್ಲಿ ಪಿಸುಗುಟ್ಟಿವೆ.

   “ಇಕ್ಕಟ್ಟಾದ ಜೀವನದಲ್ಲಿ ನೀನಿದ್ದರೆ

    ಯಾವತ್ತೂ ನೀನು ನನಗೆ ಪ್ರೇಮವೇ”

 (ಏಕಾಂತ ದೀಪ ಸನ್ನಿಧಿ)

     “ಮುಂಜಾನೆ ಕಿರಣಗಳು ಮಕ್ಕಳ ಕೆನ್ನೆಗಳಾಗಿ

      ಗಿಡದ ಪಕ್ಷಿಗಳಾಗಿ ಮೃಗಗಳಾಗಿ ನಿಲ್ಲುತ್ತವೆ

      ಅನುವಾದ ಮಾಡಿಕೊಂಡ ಪ್ರೀತಿಯನ್ನು

      ಎರಡು ಕಿರುನಗೆಯ ಮೇಲೆ

      ಎರಡು ಕಣ್ಣೀರು ಗುಳಿಯ ಮೇಲೆ

      ಎರಡು ಹಂಚಿಕೊಂಡ ಬೆವರ ಗಾಯಕ್ಕೆ

      ಹಚ್ಚಿಕೊಳ್ಳುತ್ತಾ ಅಳೋಣ”

ಏಕಾಂತದಲ್ಲಿ ಜೊತೆಯಾಗಿ ಬದುಕಿನ ಎಲ್ಲಾ ರಸಗಳನ್ನು, ಭಾವಗಳನ್ನು ಅನುಭವಿಸುತ್ತಾ ಪಯಣಿಸುವ ದಟ್ಟವಾದ ಈ ಬಯಕೆ ಇಷ್ಟಕ್ಕೆ ಮುಗಿಯದೇ,

              “ಆಕಾಶದ ಹೊದಿಕೆಯೊಳಗೆ

              ಮೈದಾನದಂತೆ ಶರೀರವನ್ನು ಒರಗಿಸೋಣ”

ಎಂತಹ ಆತ್ಮಸಂಗಾತಕ್ಕೆಳಿಸುವ ಸಾಲುಗಳು.

“ಚಲನವಲನ ನಿಂತ ಸ್ಥಳ” ಕವನದಲ್ಲಿ,

     “ಅಂಗೈಯಲ್ಲಿ ಅಶಾಂತಿ ನೂಲು ಹೆಣೆಯುತ್ತಿದೆ

      ಹಿಟ್ಟು ಚೆಲ್ಲಿದ ಬೆಳದಿಂಗಳು

     ಬಣ್ಣದ ಗಾಳಿಯನ್ನು ತೊಟ್ಟುಕೊಂಡು

     ಕಿಟಕಿ ತೆರೆದುಕೊಂಡ ಪ್ರಶಾಂತೋದಯ”

ಈ ಸಾಲುಗಳು ವಿಶಿಷ್ಟವಾದ ಲಹರಿಯನ್ನು ದ್ವನಿಸುತ್ತವೆ. ಇನ್ನೊಂದು ಪುಟ್ಟ ಕವಿತೆಯಲ್ಲಿ,

    “ಚಂದಮಾಮ ವಾಮನನಂತೆ

    ಪಾದವನ್ನು ಭೂಮಿ ಆಕಾಶದಲ್ಲಿಟ್ಟು

    ಮೂರನೇ ಪಾದಕ್ಕೆ

    ನನ್ನ ಹೃದಯ ತೋರಿಸಿದೆ”

(ವಿಶ್ವರೂಪಿ)

ಈ ಕವಿತೆ ಎಂತಹ ಪ್ರೇಮಿಯ ಮನಸ್ಸನ್ನು ಸೂರೆಗೊಳ್ಳುವುದು. ಕವಿ ಮನಸ್ಸುಗಳು ಮುದಗೊಳ್ಳುವವು.

“ಅಪ್ಪನೆಂಬ ಮಾಂತ್ರಿಕ ನೆರಳು” ಅತ್ಯಂತ ಸಶಕ್ತ ಪ್ರತಿಮೆಗಳನ್ನೊಳಗೊಂಡ ಕವಿತೆ.

   “ನನ್ನ ಪೆನ್ನಿನಲ್ಲಿ ಧೈರ್ಯವನ್ನು

   ಮಸಿಯಂತೆ ತುಂಬಿ

   ನಿಬ್ಬಿನಂತೆ ಚುಚ್ಚಿ

   ಹಠಾತ್ತನೆ ಅಸುನೀಗಿದ ಅಪ್ಪ”

ಅದೇ ಕವನ ಮುಂದುವರೆದು

      “ಸತ್ತ ಅಜ್ಞಾನ ವ್ಯಕ್ತಿಯ ದೇಹವನ್ನು

      ಗ್ರಂಥದಂತೆ ಓದಲು ಹೇಳಿದ್ದು ಅವನೇ”

ಬದಲಾವಣೆಯ ಗಾಳಿಗೆ ಪಕ್ಕಾಗಿ ಮಸಿ ತುಂಬಿ ಬರೆಯುವ ಪೆನ್ನುಗಳು ನಿಂತು ಹೋಗಿ ಕಾಲಗಳಾದವು. ಆದರೂ ಇಂಕ್‌ಪೆನ್ನುಗಳು ನಮ್ಮ ಮನಃಪಟಲದಿಂದ ಮರೆಯಾಗಿಲ್ಲ. ಏಕೆಂದರೆ ಪರಂಪರೆಯಾಗಿ ಇಂದಿನ ಪೆನ್ನುಗಳ ಇತಿಹಾಸವಾಗಿ ನಮ್ಮೊಂದಿಗೆ ಇವೆ. ಅಂತೇ ಜೀವನದಲ್ಲಿ ದಟ್ಟೈಸಿದವರ ಪ್ರಭಾವವು ಬೆಂಬತ್ತಿ ಬರುತ್ತದೆ.

ಅಪ್ಪ ಮತ್ತು ಮಸಿ ತುಂಬುವ ಪೆನ್ನು ಕಾಲಗರ್ಭದಲ್ಲಿ ಮರೆಯಾದರೂ ಕಲಿಸಿ ಹೋದ ಪಾಠಗಳು ಎದೆಯಲ್ಲಿಯೇ ಇವೆ ಎಂದು ಅಪ್ಪನ ನೆರಳಿಗಿರುವ ಮಾಂತ್ರಿಕ ಶಕ್ತಿಯನ್ನು ಅಚ್ಚರಿಯಿಂದ ಬಿಚ್ಚಿಡುತ್ತದೆ ಈ ಕವಿತೆ.

ಗಡಿನಾಡಿನ ಗಾಳಿಯಲ್ಲಿ ಮಿಂದ ಪ್ರಭಾಕರ ಜೋಶಿಯವರ ಕವಿಯ ಮನಸ್ಸು ತೆಲುಗು ಹಾಗೂ ಕನ್ನಡ ಭಾಷೆಯನ್ನು ಜೀವಿಸಿದೆ. ಬದುಕಮ್ಮ, ಮೊಹರಂ, ಮೆಹರುನ್ನಿಸಾ ಹೀಗೆ ಎರಡು ಸಂಸ್ಕೃತಿಯ ಸೊಗಡನ್ನು ಸಮನ್ವಯಗೊಳಿಸಿ ಅನೇಕ ಕವಿತೆಗಳಲ್ಲಿ ಬಿಂಬಿಸಿ ಚೆಂದಗಾಣಿಸಿದ್ದಾರೆ. ವೈರುಧ್ಯತೆಯನ್ನು ಉಸಿರಾಡಿಸದೆ ಅಮ್ಮ ಮತ್ತು ಚಿಕ್ಕಮ್ಮನ ಪ್ರೀತಿ ಉಂಡ ಕವಿತೆಗಳು ಇಲ್ಲಿವೆ.

ರಮ್ಯತೆಗೆ ಮಾಧುರ್ಯತೆಗೆ ಇನ್ನಷ್ಟು ಕವಿತೆಗಳು. “ಚಿಕ್ಕಂದಿನ ಗೊಂಬೆ” ಎಂಬ ಕವಿತೆಯಲ್ಲಿ ಎಳೆಯ ಮಗುವಿನ ಕೈ ಮುಖಕ್ಕೆ ತಾಕಿದರೆ ಎಳೆ ಬಿಸಿಲ ಅಲೆಯಂತೆ ಅನುಭವವಾಗುವುದು. ಆ ಮಗು ನಕ್ಕರೆ ವಸಂತ ಋತುವೇ ಹೂ ಕಣಿವೆಯೊಳಗೆ ನಡೆದಂತೆ ಎಂದು ಮುದ ನೀಡುವ ಸಾಲುಗಳಿವೆ.

ಮೊಂಬತ್ತಿ ಎಂಬ ಕವಿತೆಯಲ್ಲಿ ಮೇಣದಬತ್ತಿಗೆ ಉದ್ದವಾದ ನೆರಳಿದ್ದರೂ ಅದಕ್ಕೆ ಕಾಂತಿ ರೇಖೆ ಇಲ್ಲ ಎಂಬ ಸತ್ಯವನ್ನು ಬಿಚ್ಚಿಡುತ್ತಾ

“ಆರಿಸಿದ ಮೇಲೆ ನೋಡಿದರೆ

ಮೊಂಬತ್ತಿ ಮೇಜಿನ ಮೇಲೆ ಉಳಿದಿದೆ

ನೆರಳನ್ನು ಹಿಂದಿಟ್ಟುಕೊಂಡು ಬೆಳಕೆಲ್ಲೋ ಹೋಗಿ ಬಿಟ್ಟಿದೆ”

ಮೊಂಬತ್ತಿಯನ್ನು ತ್ಯಾಗಕ್ಕೆ ಕರಗುವ ಕಾರುಣ್ಯಕ್ಕೆ ಅನೇಕ ಕವಿಗಳು ಹೋಲಿಸಿದ್ದು ಸಾಮಾನ್ಯ ಸಂಗತಿ. ಆದರೆ ಪ್ರಭಾಕರ್ ಜೋಶಿ ಅವರು ಮೊಂಬತ್ತಿಯನ್ನು ಅನನ್ಯವಾಗಿ ಕಾಣುತ್ತಾರೆ. ಮೊಂಬತ್ತಿಯು ಬೆಳಕಿಗಷ್ಟೇ ಅಲ್ಲ ನೆರಳಿಗೂ ಸಂಬಂಧವನ್ನು ಕಟ್ಟಿಕೊಂಡಿದೆ ಎಂಬ ಅಂಶವನ್ನು ಬಿಚ್ಚಿಡುತ್ತಾರೆ. ಈ ಕವಿತೆಯನ್ನು ಮನುಷ್ಯನ ಬದುಕಿನ ತಾತ್ವಿಕ ನೆಲೆಯಲ್ಲಿ ಗ್ರಹಿಸಿದರೆ ದೇಹ ಮತ್ತು ಆತ್ಮದ ಸಂಬಂಧವನ್ನು ಧ್ವನಿಸಿದಂತಿದೆ. ಇಲ್ಲಿ ಆರಿಸಿದ ಮೇಲೂ ಉಳಿದುದ್ದು ಬೆಳಕಿಲ್ಲದ ಮೇಣ ಮಾತ್ರ. ಅಂದರೆ ಜೀವವಿಲ್ಲದ ದೇಹ ಮಾತ್ರ. ಹೋಗಿರುವುದು ಬೆಳಕು, ಅದೇ ಜೀವ ಚೈತನ್ಯ. ಕರಗಿರುವುದು ದೇಹ ಮಾತ್ರ. ಆತ್ಮವಲ್ಲ. ಅದು ಮತ್ತೆಲ್ಲೋ ಬೆಳಗುತ್ತದೆ. ಇಂತಹ ಉನ್ನತ ಚಿಂತನೆಯನ್ನು ಈ ಕವಿತೆ ತೆರೆದಿಡುತ್ತದೆ. ಹೀಗೆ ಓದುಗನಿಗೆ ಹೊಸದನ್ನು ಕಾಣಿಸುವುದೇ ಕಾವ್ಯದ ಪ್ರತಿಭೆ, ಹೊಳವು.

“ಮುಂಗಾರಿನ ಕನಸು” ನಿಸರ್ಗದ ಒಂದು ವಾಸ್ತವ ಕ್ರಿಯೆಯನ್ನು ಸುಂದರ ಕಲ್ಪನಾಲೋಕಕ್ಕೆ ಸೆಳೆದೊಯ್ಯುವ ಕವಿತೆ. “ಸೂರ್ಯ ನೀರಿನ ಬೀಜವನ್ನು ಬಿತ್ತುತ್ತಾನೆ” ಎಂದು ಹೇಳಿ ಮೋಡದ ಬೆಳೆಯು ಗಾಳಿಯಲ್ಲಿ ಬೇರು ಬಿಟ್ಟು ಅದರ ಹಿಂದೆಯೇ ತಿರುಗುತ್ತದೆ. ಮುಂದೆ ಮಳೆ ಬಂದು, ಹನಿಗಳು ನೆಲದಲ್ಲಿ ಕಾಣಿಸಿ, ಮಣ್ಣಿನಲ್ಲಿಯ ಬೀಜವನ್ನು ನಿದ್ದೆಯಿಂದ ನಿಧಾನವಾಗಿ ಎಬ್ಬಿಸಿ ಮೊಳಕೆಯಾಗುವುದನ್ನು ಕಲಿಸುತ್ತದೆ ಎಂದು ಅತ್ಯಂತ ಕಾವ್ಯಾತ್ಮಕ ಕಥೆಯನ್ನು ಒಳಗೊಂಡಿದೆ.

“ಇನ್ನೂ ಯುದ್ಧ ಮಾಡುತ್ತಿದ್ದೇವೆ” ಎಂಬ ಕವನವು ಮನುಕುಲದ ಪ್ರಜ್ಞಾವಂತಿಕೆಗೆ ಸವಾಲು ಎಸೆದಿದೆ. ಮನುಷ್ಯನ ಸಹಸ್ರಾರು ವರ್ಷಗಳ ಸಾಧನೆಯ ಕಿರೀಟವು ಹೇಗೆ ಮಣ್ಣು ಪಾಲಾಗುತ್ತಿದೆ ಎಂಬುದು ಅತ್ಯಂತ ವಿಷಾದದಿಂದ ಅಭಿವ್ಯಕ್ತವಾಗಿದೆ.

     “ಶತ್ರು, ನಮ್ಮವನು ಯಾವ ವೀರನೇ ಸತ್ತರೂ

     ಯಾರೋ ಒಬ್ಬ ತಾಯಿ ಕಣ್ಣೀರು ಸುರಿಸುತ್ತಾಳೆ”

“ಬರ್ತೀನಮ್ಮ” ಎಂಬ ಕಿರುನಗೆಯೊಂದಿಗೆ ಹೋದ ಮಗ

ಕೊನೆಯ ನಗುವಿನೊಂದಿಗೆ ಬಂದಾಗ ಅವಳೇ   

ನಗುತ್ತಾಳೆ”

ಎಂತಹ ಮಾರ್ಮಿಕ ಸಾಲುಗಳು ಮನುಷ್ಯತ್ವವನ್ನು ನೆನಪಿಸುವ ಸಾಲುಗಳು. ಮಾನವೀಯ ಅಂತಃಕರಣವನ್ನು ಕಲಕುವ ಭಾವ ಮಡುಗಟ್ಟುತ್ತದೆ.

“ಯುದ್ಧ ಯಾರು ಗೆದ್ದರೇನು

ಅದು ಪ್ರಾರಂಭವಾದಾಗಲೇ

ಮನುಷ್ಯರಾಗಿ ನಾವು ಸೋತಿದ್ದೇವೆ” ಎಂಬ ಚಿಂತನೆ ಸ್ವಮರುಕಕ್ಕೆ, ಆತ್ಮಶೋಧನೆಗೆ ಒಡ್ಡುವಂತಹದ್ದು ಅಲ್ಲವೇ? ತನ್ನನ್ನು ತಾನು ಬಗೆದು ನೋಡಲು ಇದಕ್ಕಿಂತ ತೀಕ್ಷ್ಣವಾದ ವಾಕ್ಯ ಬೇಕೇ?

ಪ್ರಭಾಕರ ಜೋಶಿ ಅವರು ರಂಗ ಕಲಾವಿದರು, ನಿರ್ದೇಶಕರು, ನಾಟಕಕಾರರು, ಸಾಹಿತಿ, ಕವಿ, ಪತ್ರಕರ್ತರು. ಈ ಎಲ್ಲಾ ಸಾಧ್ಯತೆಗಳನ್ನು ಆಗುಗೊಳಿಸಿಕೊಂಡಿರುವ ಅವರ ಸಾಮರ್ಥ್ಯವು ವಿಶೇಷವೇ. ಇದೆಲ್ಲ ಸಾಧ್ಯಗೊಳಿಸುವುದಕ್ಕೆ ಕಾರಣ ಅವರ ವಿಸ್ತೃತ ದೃಷ್ಟಿಕೋನ, ಗ್ರಹಿಕೆ ಹಾಗೂ ದಕ್ಕಿದ ಅನುಭವವನ್ನು ಪ್ರಜ್ಞೆಯ ಮೂಸೆಯಲ್ಲಿ ಕಾವಿಗಿಟ್ಟದ್ದು. ಪ್ರಚಾರದ ಗಾಳಿಗೆ ಒಡ್ಡಿಕೊಳ್ಳದೆ ರೆಕ್ಕೆ ಬಲಿತ ಮೇಲೆಯೇ ಬಾನಿಗೆ ತೆರೆದುಕೊಳ್ಳುವ ಪಕ್ಷಿಯಂತೆ ಇವರ ಸ್ವಭಾವ. ಹಾಗಾಗಿ ಇಲ್ಲಿಯ ಕವಿತೆಗಳು ವಿಶಾಲವಾದ ಭಾವಲೋಕವನ್ನು, ಪ್ರಜ್ಞಾಲೋಕವನ್ನು ಮತ್ತು ತಾತ್ವಿಕ ವಲಯವನ್ನು ವಿಹರಿಸಿ ಬಂದಿವೆ. ಆ ಕಾರಣಕ್ಕಾಗಿ ಈ ಕವಿತೆಗಳು ಚರ್ವಿತ ಚರ್ವಣವಾಗಲಿ ಪುರಾತನ ಕವಿ ಸಮಯವನ್ನು ಉದ್ಘೋಷಿಸಿಕೊಳ್ಳುವುದಾಗಲಿ, ತೌಡು ಕುಟ್ಟುವ ಸಿದ್ಧಾಂತ, ತತ್ವಗಳನ್ನು ಮಂಡಿಸದೆ ಪ್ರಾಸ, ಗೇಯತೆಯನ್ನು ನಿರಾಕರಿಸಿ ತಮ್ಮವೇ ಆದ ಸ್ವತಂತ್ರ ಆಕಾರದಲ್ಲಿ ಮೈದಾಳಿವೆ. ಕಾವ್ಯದ ವಸ್ತುಗಳು ಘನವಾದದ್ದು, ಲಘುವಾದುದು ಎಂಬ ಚೌಕಟ್ಟಿನೊಳಗೆ ಸಿಲುಕಿಸಿಕೊಳ್ಳದೆ ಮಳೆಕೀಟದಿಂದ ವ್ಯಕ್ತಿ ಚಿತ್ರಣಗಳು, (ಕೆರಳ್ಳಿ ಗುರುನಾಥ ರೆಡ್ಡಿ, ಮಹಿಪಾಲ ರೆಡ್ಡಿ) ಇತಿಹಾಸ, ಸಾವು, ಯುದ್ಧದವರೆಗೆ, ಚಾಚಿಕೊಂಡಿವೆ. ಕಾವ್ಯದ ಬೀಜ ಎಂಬ ಕವಿತೆಯಲ್ಲಿ ಅವರು ಹೇಳಿಕೊಂಡಿದ್ದು

  “ನೆಟ್ಟು ಬೆಳೆಸುವುದಿಲ್ಲ

   ನನ್ನ ಕಾವ್ಯದ ಬೀಜ

   ಹಸನ ಆಗಿಲ್ಲ ಹೊಲ

   ಮುಚ್ಚಿಲ್ಲ ಬಿಲ

   ಉತ್ತಿಲ್ಲ ಬಿತ್ತಿಲ್ಲವಾದರೂ

   ಹೇರಳ ಕಳೆ ಕಂಗೊಳಿಸಿದೆ

    ಹಸಿರಾಗಿದೆ ಹೊಲ

    ಎಂಬ ಭ್ರಮೆಯಲ್ಲಿ

    ರಾಶಿಗೆ ಸಿದ್ಧತೆ ನಡೆಸಿರುವೆ

    ಕಾವ್ಯದ ಕಣ ಸಿದ್ಧ

    ……………..

    ಇವು ಬೀಜಗಳೇ”

    ……………..

ಹೀಗೆ ಕವಿತೆಗಳನ್ನು ಬರೆದು ನಿರ್ಮೋಹವನ್ನು ಧ್ವನಿಸುವ ಅವರ ನಿಲುವು ಪ್ರಶಂಸನೀಯ. ಈ ಕೃತಿಗೆ ಕಾಲಗರ್ಭದಲ್ಲಿ ಎಂದು ಹೆಸರಿಸಿದ್ದು ಅದೇ ಉದ್ದೇಶದಿಂದ. ಅಂದರೆ ಕಾಲಗರ್ಭದಲ್ಲಿ ಇವು ಕಳೆದು ಹೋಗುತ್ತವೆ ಎಂದು ಅವರೇ ಹೇಳಿದ್ದಾರೆ. ಇಂತಹ ಉದಾತ್ತ ನಿರಹಂಕಾರದಲ್ಲಿ ಕವಿ ಒಬ್ಬನು ಜೀವಿಸಿರುವುದು ಬಹಳ ಅಪರೂಪ.

ಯಾವುದೂ ಕಾಲಾತೀತವಲ್ಲ, ಸೀಮಾತೀತವಲ್ಲ. ಪರಿಪೂರ್ಣವೂ ಅಲ್ಲ. ಆ ಒಂದು ಎಚ್ಚರಿಕೆ ಇಲ್ಲಿಯ ಕವಿತೆಗಳಿಗೆ ಇವೆ. ಇಲ್ಲಿಯ ಅನೇಕ ಕವಿತೆಗಳು ಅತ್ಯಂತ ದೀರ್ಘವಾಗಿದ್ದು ಕಥನ ಕಾವ್ಯದಂತೆ ತೋರುತ್ತವೆ. ಆದರೆ ಅಲ್ಲಿ ಕಥನ ಕ್ರಿಯೆ ಇರದಿದ್ದರಿಂದ ಕವಿತೆಯು ಜಾಡಿನಿಂದ ತಪ್ಪಿಸಿಕೊಂಡು ಅತ್ತಿತ್ತ ಅಲೆಯುತ್ತ ಓದುಗನಿಗೆ ಎಳೆತಪ್ಪಿ ಕಕ್ಕಾಬಿಕ್ಕಿಯಾಗಿಸುತ್ತದೆ. ಇದು ಕವಿತೆಯ ತಪ್ಪು ಎಂದು ಮಾತ್ರವಲ್ಲ ಓದುಗನ ಅಸೂಕ್ಷ್ಮತೆಯೂ ಆಗಿರಬಹುದು.

ಪ್ರತಿಯೊಬ್ಬ ಕವಿಯ ಮೊದಲ ಕವಿತೆ ಪ್ರೇಮದ ಕುರಿತೇ ಇರುತ್ತದೆ ಎಂದು ಜನಜನಿತ ಮಾತು. ಈ ಜಗತ್ತಿನ ಒಟ್ಟು ಚಟುವಟಿಕೆಯಲ್ಲಿ ಪ್ರೀತಿ, ಪ್ರೇಮ, ಪ್ರಣಯವೂ ಆದ್ಯ ಸ್ಥಾನದಲ್ಲಿದೆ. ಪ್ರೀತಿ ಎಂಬುದೇ ಪ್ರಕೃತಿಯ ಸ್ಥಾಯಿ ಭಾವ. ಪ್ರೀತಿ ಇಲ್ಲದೆ ಸೃಷ್ಟಿಕ್ರಿಯೆ ಇಲ್ಲ. ಈ ಪ್ರಪಂಚವಿಲ್ಲ. ಪ್ರೀತಿ ಈ ನಿಸರ್ಗದ ಜಲ, ನೆಲ, ಬಾನು, ಗಿಡಮರ, ಪ್ರಾಣಿಪಕ್ಷಿ ಎಲ್ಲವುಗಳಲ್ಲಿಯೂ ಜೀವಂತ ಮತ್ತು ನಿರಂತರ. ಇಂತಹ ಪ್ರಮುಖವಾದ ವಿಷಯಕ್ಕೆ ಹೆಚ್ಚಾಗಿ ಜೋಶಿಯವರ ಪದಗಳು ತೆರೆದುಕೊಂಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಜಗತ್ತಿನ ಚರಾಚರ ವಸ್ತುಗಳಲ್ಲಿ ಅವಿನಾಭಾವ ಸಂಬಂಧವನ್ನು ಬೆಸೆದಿರುವುದೇ ಪ್ರೀತಿಪ್ರೇಮ ಎಂಬ ಭಾವ. ಈ ಭಾವ ಅತ್ಯಂತ ದೈವಿಕವಾದದ್ದು. ಈ ಸಮಗ್ರ ಕೃತಿಯಲ್ಲಿ ಅಲ್ಲಲ್ಲಿ ಕೆಲವು ಕವಿತೆಗಳು ನೀನು ನಾನು, ನನ್ನೊಳಗಿನ ಅವಳು, ಸಂಭಾಷಣೆ, ವಿಶ್ವರೂಪ, ಹೆಂಡತಿಗೆ ಮುಂತಾದ ಕವಿತೆಗಳು ಪ್ರೀತಿಪ್ರೇಮದ ಕುರಿತು ಸೂಕ್ಷ್ಮ ಸಂವೇದನೆಯನ್ನು ಸೂಸುತ್ತವೆ. ನವಿರಾದ ಭಾವಗಳನ್ನು ಚಿಗುರಿಸುತ್ತವೆ. ಮೌನದಲ್ಲಿ ಪಿಸುಗುಡುತ್ತವೆ. ಇಂತಹ ಕವಿತೆಗಳ ರಚನೆಯ ಸಾಧ್ಯತೆ ಇದ್ದರೂ ಒಟ್ಟು ಕೃತಿಯಲ್ಲಿ ಪ್ರೀತಿಪ್ರೇಮ ಶೃಂಗಾರರಸಗಳಿಗೆ ಸಿಗಬೇಕಾದ ಪ್ರಾಮುಖ್ಯದ ಮೊತ್ತ ಜೋಶಿ ಅವರು ನೀಡಿಲ್ಲವೇಕೆ ಎಂಬುದು ನನ್ನ ಪ್ರಶ್ನೆ.

ಒಟ್ಟಾರೆ ಈ ಕೃತಿಯನ್ನು ಓದುಗ ಕೈಯಲ್ಲಿ ಹಿಡಿದರೆ ಅವನಲ್ಲಿಯ ಕವಿ ಮನಸ್ಸು ಅರಳುವುದು. ಹೊಸತಿಗೆ ಹೊರಳುವುದು. ನೋವಿಗೆ ನರಳುವುದು. ಇಲ್ಲಿಯ ಕವಿತೆಗಳು ಸಹೃದಯನ ಪ್ರಜ್ಞಾವಲಯವನ್ನು ಹಿಗ್ಗಿಸುವುದರೊಂದಿಗೆ ಅದ್ಭುತವಾದ ರೂಪಕ ಮತ್ತು ಪ್ರತಿಮೆಗಳೊಂದಿಗೆ ಬೆರಗುಗೊಳಿಸುತ್ತವೆ. ಇಂತಹ ಸಮಗ್ರ ಸಂಕಲನದ ಕವಿತೆಗಳೊಂದಿಗೆ ನಾನು ಸಮರಸಭಾವದಿಂದ ತೊಡಗಿಸಿಕೊಂಡು ಸಹೃದಯಳಾಗುವದಕ್ಕೆ ಅವಕಾಶ ನೀಡಿದ ಶ್ರೀ ಪ್ರಭಾಕರ ಜೋಶಿಯವರಿಗೆ ಧನ್ಯವಾದಗಳು. ಕಾಲಗರ್ಭದಿಂದ ಹೆಕ್ಕಿ ಕಾವ್ಯಪ್ರಿಯರಿಗೆ ಸಮಗ್ರ ಕೃತಿಯಾಗಿ ನೀಡುತ್ತಿರುವುದಕ್ಕೆ ಹಾರ್ದಿಕ ಅಭಿನಂದನೆಗಳು.

‍ಲೇಖಕರು avadhi

August 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: