ಸಂದೀಪ್ ಈಶಾನ್ಯ
ಎಲ್ಲವೂ ಆರಂಭವಾಗಿದ್ದು ಡೇಟಿಂಗ್‍ಆಪ್‍ನಲ್ಲಿ ಅಂಜಲಿ ಕಾಣಿಸಿಕೊಂಡ ಮಾರನೇ ದಿನ. ಕಳೆದ ಎರಡು ವರ್ಷಗಳಿಂದ ಜತನವಾಗಿ ಬಚ್ಚಿಟ್ಟುಕೊಂಡಂತೆ ಬಂದಿದ್ದ ಗುಟ್ಟಿನಂತಹ ಅದೊಂದು ವಿಷಯ ಒಂದೇ ಕ್ಷಣದಲ್ಲಿ ವಿವೇಕನ ದೊಡ್ಡನಗುವಿನ ಸದ್ದಿನೊಂದಿಗೆ ಆಫೀಸಿನಲ್ಲಿ ಎಲ್ಲರ ಎದುರೇ ಸ್ಪೋಟಗೊಂಡಿತ್ತು. ಅಂಜಲಿ ಏನನ್ನೂ ಹೇಳಲಾಗದೆ ಕಂಪಿಸಿಬಿಟ್ಟಳು. ಅಲ್ಲಿಂದ ಎದ್ದು ಹೊರಟುಬಿಡಬೇಕು ಎನ್ನುಷ್ಟರಲ್ಲೇ ವಿವೇಕನ ಮತ್ತೊಂದಿಷ್ಟು ಮಾತುಗಳು ಅಂಜಲಿಯ ಎರಡೂ ಕಿವಿಗಳನ್ನು ತಲುಪಿ ಇನ್ನಷ್ಟು ಕಂಗೆಡಿಸಿದವು.
“ಮೂವತ್ತೆರಡು ವರ್ಷದ ಹುಡುಗಿಗೆ ಯಾವ ಹುಡುಗ ಸಿಗುತ್ತಾನೇ ಹೇಳಿ? ಊರಲ್ಲೂ ಸಿಗಲ್ಲ, ಶಾದಿ.ಕಾಮ್‍ನಲ್ಲೂ ಸಿಗಲ್ಲ. ಏನಿದ್ರೂ ಡೇಟಿಂಗ್ ಸೈಟ್‍ನಲ್ಲೇ ಹುಡುಕಬೇಕು” ಎಂದು ವಿವೇಕ ಮತ್ತೊಮ್ಮೆ ಜೋರಾಗಿ ನಗೆಯಾಡಿದ. ನೀನು ಎಷ್ಟೇ ಬಚ್ಚಿಟ್ಟುಕೊಂಡರೂ ನಾನು ಈಗಾಗಲೇ ನಿನ್ನ ಮೈಮೇಲಿನ ಸುಕ್ಕುಗಳನ್ನು ಎಣಿಸಿದ್ದೇನೆ ಎನ್ನುವಂತಹ ಅದಾವುದೋ ಕುಹಕ ಅವನ ದನಿಯಲ್ಲಿ ನಿರರ್ಗಳವಾಗಿ ಹರಿಯುತ್ತಿರುವಂತೆ ಭಾಸವಾಗಿ ಅಂಜಲಿ ಅವಕ್ಕಾದಳು. ಪ್ರತಿಕ್ರಿಯಿಸಬೇಕು ಎಂದುಕೊಂಡರು ಸಾಧ್ಯವಾಗದೇ ಇನ್ನಷ್ಟು ಮೌನವಾದಳು. ವಿವೇಕನ ಈ ಎಲ್ಲಾ ಮಾತುಗಳಿಗೆ ಅದುವರೆಗೂ ಆಫೀಸಿನಲ್ಲಿ ಅಂಜಲಿಯೊಂದಿಗೆ ಸಲುಗೆಯಿಂದ ಮಧ್ಯಾಹ್ನದ ಊಟಕ್ಕೆ ಜತೆಯಾಗುತ್ತಿದ್ದ, ಊರಿನಿಂದ ಮರಳಿದ ಮಾರನೇ ದಿನ ಅಪ್ಪಳ, ಉಪ್ಪಿನಕಾಯಿ, ಸೀಗೆಕಾಯಿಯನ್ನು ಹಂಚಿಕೊಳ್ಳುತ್ತಿದ್ದವರೇ ಹೆಚ್ಚು ಎನ್ನುವಂತೆ ನಕ್ಕುಬಿಟ್ಟಿದ್ದರು.
ಮೂವತ್ತೆರಡನೇ ವಯಸ್ಸು ತಲುಪಿದ್ದರೂ ಮದುವೆಯಾಗದಿರುವುದು, ಮದುವೆಯಾಗದೇ ಉಳಿದಿದ್ದಕ್ಕೆ ಕಾರಣ ಏನು ಎನ್ನುವುದನ್ನೂ ಯಾರಿಗೂ ಹೇಳದಿರುವುದು, ಕಿರುಬೆರಳಿಗೆ ಬೆಸೆದುಕೊಳ್ಳಬಹುದಾದ ಮತ್ತೊಂದು ಕಿರುಬೆರಳನ್ನು ಹುಡುಕುತ್ತಿರುವುದು, ಗಂಡುಜೀವವೊಂದಕ್ಕೆ ಎದುರು ನೋಡುತ್ತಾ ಡೇಟಿಂಗ್ ಆಪ್‍ನಲ್ಲಿ ಎದುರು ನೋಡಿದ್ದು ಎಲ್ಲವೂ ಅದೆಷ್ಟು ಬಾಲೀಶವಾದದ್ದು ಎನಿಸಿಹೋಗಿತ್ತು. ಅಂಜಲಿ ಏನನ್ನೂ ಮಾತನಾಡದೆ ಆಫೀಸ್‍ನಿಂದ ಹೊರಟುಬಿಟ್ಟಳು. ಆಫೀಸ್‍ನಿಂದ ಹೊರಗೆ ಬರುವಷ್ಟರಲ್ಲಿ ಆಕಾಶ ಕಪ್ಪಿಟ್ಟುಕೊಂಡಿತ್ತು. ಕತ್ತಲು ನಿಧಾನವಾಗಿ ಆವರಿಸುವ ಮೂಲಕ ತೆವಳುತ್ತ ಬೆಳಗಿನ ಕಂಬಳಿಹುಳದ ದಿನಗಳನ್ನು ಮುಗಿಸಿದ್ದ ಬೆಂಗಳೂರು ಸಂಜೆಯ ಹಾರುವ ಬಣ್ಣದಚಿಟ್ಟೆಯ ಬದುಕಿಗೆ ಪೊರೆಕಳಚಿ ಅಣಿಯಾಗುತ್ತಿತ್ತು. ರಸ್ತೆಬದಿಯಲ್ಲಿ ಪಾನಿಪೂರಿ, ಗೋಲ್‍ಗಪ್ಪಾ, ಗೋಬಿಮಂಚೂರಿಯ ಜತೆಗೆ ಗಾಜಿನಕೋಟೆಯಂತಹ ಪಿಜ್ಜಾ ಹಟ್‍ಗಳು ನಿಧಾನವಾಗಿ ಅರಳುತ್ತಿದ್ದವು.
ದೀಪದ ಬೆಳಕಿನಿಂದಲೇ ಆವೃತವಾಗಿರುವಂತೆ ತೋರುತ್ತಿದ್ದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ರಸ್ತೆಯಲ್ಲಿ ಉದ್ವೇಗಕ್ಕೆ ಅರ್ಪಿಸಿಕೊಂಡವಳಂತೆ ಕಾಣುತ್ತಿದ್ದ ಅಂಜಲಿ ತಾನಿದ್ದ ಅಪಾರ್ಟ್‍ಮೆಂಟ್‍ನ ಕಡೆಗೆ ಭರಭರನೆ ಹೆಜ್ಜೆಹಾಕಿದಳು. ಎಂಡೋಸಲ್ಫನ್ ಮಗುವಿನಂತೆ ದೈಹಿಕವಾಗಷ್ಟೇ ಬೆಳೆಯುತ್ತಿರುವ ಮಹಾನಗರಗಳು, ಯಾವುದೋ ದೇಶದ ಆರ್ಥಿಕಪ್ರಗತಿಗೆ ಇಲ್ಲಿಂದ ಬಡಿದಾಡುವ ಉದ್ಯೋಗ, ಅನುಮಾನದಲ್ಲೇ ಬೆಸೆದುಕೊಳ್ಳುವ ಮಹಾನಗರದ ಸಂಬಂಧ, ಇದ್ದಕ್ಕಿದ್ದಂತೆ ಧಕ್ಕಿಬಿಡುವ ಯಾರದೋ ಸಲುಗೆ, ಅಪರೂಪದ ಭೇಟಿ, ಪ್ರೀತಿ, ಸಾವಿರಾರು ವಿಚ್ಛೇಧನಗಳು, ಕೋರಮಂಗಲದ ಬಾರುಪಬ್‍ಗಳಲ್ಲಿ, ಕೆಲವೊಮ್ಮೆ ಅಸಾಧ್ಯ ಒಂಟಿತನದ ದೆಸೆಯಿಂದಲೇ ಜಾರಿಹೋಗುವ ವೀಕೆಂಡ್‍ಗಳು ಬೆಂಗಳೂರಿನ ದಿನಗಳನ್ನು ಹಿಪ್ಪೆಯಾಗಿಸುತ್ತಿದ್ದವು.

ಮೈಸೂರಿನಿಂದ ಏಳು ಕೀಲೋ ಮೀಟರ್ ದೂರಕ್ಕಿರುವ ಹಿನಕಲ್‍ನಲ್ಲಿ ಬೆಳೆದ ಅಂಜಲಿ, ಅಲ್ಲಿ ಏನೋ ಸರಿಯಾಗಿಲ್ಲ ಎನ್ನುವಂತೆ ರಾತ್ರೋರಾತ್ರಿ ಬಸ್ಸು ಹಿಡಿದು ಬೆಂಗಳೂರಿಗೆ ಬಂದಿದ್ದಳು. ಈಗ ಕೆಲವೇ ವರ್ಷಗಳಲ್ಲಿ ಬೆಂಗಳೂರು ಅಂಜಲಿಯ ಅವಿಭಾಜ್ಯ ಅಂಗವಾಗಿದೆ. ಮಹಾನಗರದ ತೋರುಬೆರಳ ನೇರಕ್ಕೆ ನಡೆಯಲು ಆರಂಭಿಸಿದ ದಿನಗಳಲ್ಲಿ ಗಾಂಧಿಬಜಾರಿನ ಟೆಕ್ಸ್‍ಟೈಲ್ಸ್ ಅಂಗಡಿಯ ಸೇಲ್ಸ್‍ಗರ್ಲ್, ಅಪೋಲೋ ಆಸ್ಪತ್ರೆಯ ರಿಶಪ್ಶನಿಸ್ಟ್, ನಂತರ ಯಾವುದೋ ಸ್ಟ್ರಾಟ್‍ಅಪ್ ಕಂಪನಿಯೊಂದರ ನೈಟ್‍ಶಿಫ್ಟ್ ಹೀಗೆ ಅಂಜಲಿ ಮೂರು ವರ್ಷಗಳಲ್ಲಿ ಹೊಸದೇ ಲೋಕಗಳ ಬಾಗಿಲನ್ನು ಸೀಳುತ್ತಾ ಬಂದಿದ್ದಾಳೆ.
ಈಗ ಎಲ್ಲವೂ ಬದಲಾಗಿದೆ. ಸಂಬಳ, ಆಲೋಚನೆ, ಬದುಕಿನ ರಿವಾಜುಗಳು ಅಂಜಲಿಯನ್ನು ಬೆಂಗಳೂರಿನ ಅಘೋಷಿತ ವೇಗಕ್ಕೆ ಒಗ್ಗಿಸಿದ್ದಾವೆ. ಮೈಸೂರು ಎಂದರೆ ಯಾವುದೋ ಕಾರಣಕ್ಕೆ ಅಸಾಧ್ಯವಾಗಿ ಕುದಿಯುವ ಅಂಜಲಿ ಈ ನಡುವೆ ಏನನ್ನೋ ಹುಡುಕುತ್ತಿರುವ ನಿಶ್ಚಿತಜೀವಿಯಂತೆ ಗೋಚರಿಸುತ್ತಾಳೆ. ಸಾಧ್ಯವಾದಷ್ಟು ಒಂಟಿಯಾಗಿದ್ದು, ಬೇಕು ಎನಿಸಿದಾಗಷ್ಟೇ ಅಡಿಗೆ ಮಾಡಿಕೊಳ್ಳುತ್ತ, ಆಫೀಸಿನ ಕೆಲಸ ಬೆನ್ನುಮೂಳೆಯನ್ನು ಮುರಿಯುವಷ್ಟು ಅತಿಯಾಗಿದ್ದ ದಿನಗಳಲ್ಲಿ ಮ್ಯಾಗಿ, ಓಟ್ಸ್‍ನ ಜತೆಗೆ ರೆಡಿಮೇಟ್ ಚಪಾತಿ, ಪರೋಟ ಅಥವಾ ಇನ್ಸ್ಟಾಂಟ್ ಪುಳಿಯೊಗರೆ ಎಂದು ಮೂರೇ ನಿಮಿಷದ ಅಡಿಗೆಯನ್ನು ಎರಡೇ ನಿಮಿಷದಲ್ಲಿ ತಿಂದು ಹೊರಟುಬಿಡುತ್ತಾಳೆ. ಆದರೆ ಕತ್ತಲು ತುಂಬಿದ ರೂಮ್‍ನಲ್ಲಿ ರಾತ್ರಿ ಒಬ್ಬಳೇ ಮಲಗಿರುವಾಗ ಏನೇನೋ ಆಲೋಚನೆಗಳು ಇಡೀರಾತ್ರಿ ಸೀಲಿಂಗ್ ಫ್ಯಾನ್‍ನಷ್ಟೇ ವೇಗವಾಗಿ ಅವಳ ತಲೆಯಲ್ಲಿ ತಿರುಗುತ್ತಿರುತ್ತವೆ.
ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರೆಲ್ಲ ಒಬ್ಬೊಬ್ಬರೇ ಮದುವೆಯಾಗುತ್ತಿದ್ದಂತೆ ಅಂಜಲಿಗೆ ಒಂಟಿತನದ ಕಸಿವಿಸಿಗಳು ಇನ್ನಷ್ಟು ತೀವ್ರವಾಗಿಬಿಡುತ್ತಿದ್ದವು. “ಥತ್ ನನಗೂ ಒಬ್ಬ ಬಾಯ್‍ಫ್ರೆಂಡ್ ಇರಬೇಕಿತ್ತು ಕಣ್ರೇ. ಇವತ್ತು ಮೆಟ್ರೋದಲ್ಲಿ ಯಾವನೋ ಒಬ್ಬ ಮುದುಕ ಸೂಳೆಮಗ ನನ್ನ ಮೊಲೆಗಳನ್ನೇ ಹಿಡಿಯುವವನಂತೆ ನೋಡುತ್ತಿದ್ದ. ದರಿದ್ರ, ಯಾವಾಗ ಮದುವೆಯಾಗ್ತೀನೋ ಅನಿಸಿದೆ” ಎಂದೆಲ್ಲ ಗೋಳು ತೋಡಿಕೊಳ್ಳುತ್ತಿದ್ದವರನ್ನು ನೋಡುವಾಗ ಒಂದು ರೀತಿಯ ಸಮಾಧಾನವಾಗುತ್ತಿತ್ತು. ಹಾಗೆ ಹೇಳಿಕೊಳ್ಳುತ್ತಿದ್ದ ಬಹುತೇಕರು ಮದುವೆಯಾಗಿದ್ದಾರೆ. ಅಂಜಲಿ ಮಾತ್ರ ಮದುವೆಯಾಗಿಲ್ಲ. ಬೆಳಗ್ಗೆ ಹಲ್ಲುಜ್ಜುತ್ತ ಕ್ಯಾಲೆಂಡರ್ ತಿರುಗಿಸುವಾಗ ಈ ಅಕ್ಟೋಬರ್‍ಗೆ ವಯಸ್ಸು ಮೂವತ್ತೆರಡು ತುಂಬಿಬಿಡುತ್ತದೆ ಎನ್ನುವುದನ್ನು ತಿಳಿದು ನಿಂತಲ್ಲೇ ಬೆವೆತುಬಿಟ್ಟಿದ್ದಳು.
ವಾರದ ಕಡೆಯ ದಿನದ ರಾತ್ರಿಯ ಊಟಕ್ಕೆ ಸರ್ಜಾಪುರದ ರಸ್ತೆಯಲ್ಲಿರುವ ಆಗುಂಬೆಯ ಕಸ್ತೂರಕ್ಕನ ಮೆಸ್‍ಗೆ ಹೋಗುವುದು ಅಂಜಲಿಗೆ ಇಷ್ಟ. ಅಂಜಲಿ ಎಂದರೆ ಕಸ್ತೂರಕ್ಕನಿಗೂ ಅವ್ಯಕ್ತ ಪ್ರೀತಿ. “ಬೇಗ ಒಂದು ಮದುವೆಯಾಗೇ ಅಂಜಲಿ. ಒಬ್ಬಳೇ ಬದುಕಿದ್ದು ಸಾಕು ಕಣೇ, ಈ ಊರಿನಲ್ಲಿ ನಮಗೆ ಅಂತ ಒಬ್ಬರು ಇರಬೇಕು ಆಯ್ತಾ. ಇರದಿದ್ದರೆ ಯಾರೋ ಪ್ರೀತಿಸುವ ಹುಡುಗರನ್ನು ನಾವು ನೋಡುತ್ತಲೇ ಕಳೆದು ಹೋಗಿಬಿಡಬೇಕಾಗುತ್ತದೆ ಆಯ್ತಾ” ಎಂದು ಜೋರಾಗಿ ನಗುತ್ತಿದ್ದಳು. ಆದರೆ ಅಂಜಲಿ ಮಾತ್ರ ಈ ನಡುವೆ ಮದುವೆ ಎಂದರೆ ಕನಲುತ್ತಾಳೆ. ಮದುವೆ ಎನ್ನುವ ಕ್ರಿಯೆಯೇ ಜಗತ್ತಿನ ಅಮಾನುಷ ಪ್ರಕ್ರಿಯೆ ಎನ್ನುವಂತೆ ನೋಡುತ್ತಾಳೆ.
ಎರಡೇ ವರ್ಷಗಳ ಹಿಂದೆ ಶಾದಿ.ಕಾಮ್‍ನಲ್ಲಿ ಅಂಜಲಿಗೆ ಹುಡುಗನೊಬ್ಬನ ಪರಿಚಯವಾಗಿತ್ತು. ಅವನು ಮದುವೆಯಾಗುವ ಇರಾದೆಯನ್ನೂ ತೋರಿದ್ದ. ಅಂಜಲಿಯ ಜತೆಗೆ ಅವಳ ವಯಕ್ತಿಕ ವಿವರಗಳನ್ನು ಮೆಚ್ಚಿಕೊಂಡಿದ್ದ. ಪ್ರತಿರಾತ್ರಿಯೂ ಫೋನ್‍ನಲ್ಲಿ ಮುದ್ದಾಗಿ ಹರಟುತ್ತಿದ್ದವನು ಮೊದಲ ಭೇಟಿಯಲ್ಲಿ ಮಾತ್ರ ಅಷ್ಟೇನೂ ಮುದ್ದಾಗಿ ಮಾತನಾಡದೇ ಹೊರಟುಹೋಗಿದ್ದ. ನಾನು ಬಯಸಿದ ಹುಡುಗಿ ಇವಳಲ್ಲ ಎನ್ನುವಂತೆ ಮುಖವನ್ನ ಎತ್ತಲೋ ತಿರುಗಿಸಿ ಮಾತನಾಡುತ್ತಾ, ಒಂದು ಲೋಟ ಕಾಪಿಯನ್ನು ಹಬೆಯಾಡುತ್ತಿರುವಾಗಲೇ ಕುಡಿದು ಅಪನಂಬಿಕೆಯಲ್ಲೇ ಕೈ ಕುಲುಕಿ ನಡೆದುಬಿಟ್ಟಿದ್ದ. ಅಂಜಲಿಗೆ ಪಿಚ್ಚೆನಿಸಿತ್ತು. ಮೂರು ದಿನಗಳಾದರೂ ಅವನ ಪ್ರತಿಕ್ರಿಯೆಗೆ ಕಾರಣಗಳೇ ಸಿಗದೆ ಒದ್ದಾಡಿಬಿಟ್ಟಿದ್ದಳು. ಮನುಷ್ಯನೊಬ್ಬ ತನ್ನೊಳಗೆ ಕಟ್ಟಿಕೊಂಡಿರುವ ಪ್ರಚಂಚ ವಾಸ್ತವದಲ್ಲಿ ಒಂದಿಷ್ಟೇ ವ್ಯತ್ಯಾಸವಾಗಿ ತೋರಿದರೂ ಅದೆಷ್ಟು ನರಳಿಬಿಡುತ್ತಾನೆ ಎನ್ನುವುದು ಅಂಜಲಿಯನ್ನು ಸ್ತಬ್ಧಗೊಳಿಸಿತ್ತು.
ಅದೇ ನೋವಿನ ದಿನಗಳಲ್ಲಿ ಆಫೀಸಿನ ಟೀಮ್‍ಲೀಡರ್ ನರೇಶ್, ಯಾರೂ ನೋಡುತ್ತಿಲ್ಲ ಎನ್ನುವಂತೆ ಅಂಜಲಿಯ ತೊಡೆಗಳನ್ನು ಸ್ಪರ್ಶಿಸಲು ಯತ್ನಿಸಿದ್ದು, ಎಲ್ಲರೂ ನೋಡುತ್ತಿರುವಾಗಲೇ ಅಂಜಲಿ ಕಿರುಚಿ ರಾದ್ಧಾಂತ ಮಾಡಿದ್ದು ಹೊಸ ಸಂಕಟಗಳನ್ನು ಉತ್ಪಾದಿಸಿದ್ದವು. ಅದೊಂದು ಘಟನೆಯ ನಂತರ ಅಂಜಲಿ ಯಾರೊಂದಿಗೂ ಹೆಚ್ಚಾಗಿ ಬೆರೆಯಲೇ ಇಲ್ಲ. ಆಫೀಸು ಮುಗಿಸಿ ಸೀದಾ ಕಸ್ತೂರಕ್ಕನ ಹೊಟೇಲ್‍ಗೆ ಹೊರಟುಬಿಡುತ್ತಿದ್ದಳು. ರಾತ್ರಿಯ ಊಟ ಮುಗಿಸಿ ಆಟೋ ಹಿಡಿದು ಅಪಾರ್ಟ್‍ಮೆಂಟ್ ತಲುಪಿ ಮೊಬೈಲ್ ಸ್ಪಿಚ್‍ಆಫ್ ಮಾಡಿ ಮಲಗಿಬಿಡುತ್ತಿದ್ದಳು.
“ You are unfit ಕಣೇ ಅಂಜಲಿ. ಗೊತ್ತಾಯ್ತಾ ನಿನಗೆ ಇನ್ನೂ ಏಕೆ ಮದುವೆಯಾಗಿಲ್ಲ ಅಂತ? ಫೂಲ್ ಕಣೇ ನೀನು. ನರೇಶ್ ರೀತಿಯ ಗಂಡಸರನ್ನು ಬಳಸಿಕೊಳ್ಳಬೇಕು. ಆದರೆ ಯಾರ ಕೈಗೂ ಸಿಗದೇ ಆಟವಾಡಿಸೋದನ್ನು ಕಲಿಯದಿದ್ದರೆ ನೀನು ಹೇಗೆ ಬದುಕುದೋ?, ಅವನನ್ನು ಸ್ಪಲ್ಪ ಇಂಪ್ರೆಸ್ ಮಾಡಿದ್ದರೂ ನೆಕ್ಸ್ಟ್ ಪ್ರಾಜೆಕ್ಟ್‍ಗೆ ಯು.ಎಸ್‍ನಲ್ಲಿ ಇರುತ್ತಿದ್ದೆ. ನೀನು ಯು.ಎಸ್‍ಗೆ ಹೋಗ್ತೀಯಾ ಅನ್ನೋದು ಗೊತ್ತಾದರೆ ಯಾರಾದ್ರೂ ನಿನ್ನ ಮದುವೆಯಾಗೋದಕ್ಕೆ ಮುಂದೆ ಬರ್ತಾರೆ ಗೊತ್ತಾಯ್ತಾ.” ಎಂದು ನೇಹಾ ಊಟದ ಬಿಡುವಿನಲ್ಲಿ ಹೇಳಿಹೋಗಿದ್ದ ಮಾತುಗಳು ನೆನಪಾಗುತ್ತಿದ್ದವು. ನೇಹಾಳ ಮಾತುಗಳಿಗೆ ಅಸಲಿ ಅರ್ಥವನ್ನು ವಿವವರಿಸುವ ಶಬ್ಧಕೋಶವನ್ನು ಒಳಗೇ ಸೃಷ್ಠಿಸಿಕೊಳ್ಳಲು ಯತ್ನಿಸುತ್ತಿದ್ದ ಅಂಜಲಿ ಪದೇ ಪದೇ ಸೋಲುತ್ತಿದ್ದಳು.
ಆಫೀಸ್‍ನ ಕ್ಯಾಬಿನ್‍ನಲ್ಲಿ ಕೂತು ಕಸ್ತೂರಕ್ಕ ಮತ್ತು ನೇಹಾಳ ಮಾತುಗಳನ್ನು ನೆನೆಯುವಾಗಲೇ ವೀಕೆಂಡ್ ರಾತ್ರಿಗಳನ್ನು ಒಟ್ಟಿಗೆ ಕಳೆದವರು ಆಫೀಸಿನಲ್ಲಿ ಕಣ್ಣುಮಿಟುಕಿಸುತ್ತ ಓಡಾಡುವುದು, ಈ ಮೊದಲು ಬಿಡದೇ ಜತೆಯಾಗಿದ್ದವರು ಈ ನಡುವೆ ಮುಖವನ್ನೇ ನೋಡದಂತೆ ಒಬ್ಬರಿಗೊಬ್ಬರು ತಪ್ಪಿಸಿಕೊಂಡು ಓಡಾಡುವುದನ್ನೆಲ್ಲ ನೋಡುವಾಗ ಅಂಜಲಿಗೆ ನಾನು ಅದುವರೆಗೂ ಪ್ರವೇಶಿಸಿರದ ನೂತನ ಲೋಕವೊಂದು ದೂರವೇ ಉಳಿದುಕೊಂಡಿದೆ ಎನಿಸಿಬಿಡುತ್ತಿತ್ತು. ಸೃಷ್ಠಿಯ ಎರಡು ಅದ್ಬುತಗಳಾದ ಗಂಡು ಹೆಣ್ಣಿನ ನಡುವಿನ ಸಂಬಂಧ ಮತ್ತು ತಾಕಲಾಟಗಳ ನಿಜವಾದ ಕೊಂಡಿ ಯಾವುದು ಎನ್ನುವುದೇ ಕಗ್ಗಾಂಟಾಗಿ ತೋರುತ್ತಿತ್ತು.
ಅಂಜಲಿ ಈಗ ಮೊದಲಿನಂತಿಲ್ಲ. ಮನಸ್ಸಿನ ಯಾವುದೋ ಮೂಲೆಯಲ್ಲಿ ನನಗೂ ಒಬ್ಬ ಸಂಗಾತಿ ಇರುವಂತಿದ್ದರೆ ಎಂದುಕೊಳ್ಳುತ್ತಾಳೆ. ಹುಡುಗನೊಬ್ಬನ ಅಸ್ಪಷ್ಟ ಚಿತ್ರಗಳು ಅವಳ ಕಣ್ಣುಮುಂದೆ ಚಲಿಸುತ್ತವೆ. ಆಲೋಚನೆಗಳು ತೀವ್ರವಾಗುತ್ತಿದ್ದಂತೆ ಊರು, ಮನೆ, ಅಮ್ಮನ ಅಸಹಾಯಕತೆ, ಜಾತಿಗಳ ಪ್ರತಿಷ್ಠೆ, ಅಪ್ಪನ ಅಸಾಧ್ಯ ಸೋಮಾರಿತನ, ಯಾರಿಗೂ ಹೇಳಿಕೊಳ್ಳಲು ಸಾಧ್ಯವಾಗದ ವಯಕ್ತಿಕ ಸಂಕಟಗಳು, ದೇಹದ ತಿರುವುಗಳನ್ನು ಪರಚುವ ಅಪರಿಚಿತರ ಕಣ್ಣುಗಳಂತೆ ಬೆಂಗಳೂರು ಕರುಣಿಸುವ ಅಸಾಧ್ಯ ಒಂಟಿತನದ ಕಪ್ಪುನೆರಳು ಅಂಜಲಿಯನ್ನು ಹಿಂಬಾಲಿಸಿ ಹೈರಾಣಗಿಸುತ್ತವೆ.
***

ಈ ಡೇಟಿಂಗ್ ಆಪ್‍ಗಳ ಬಗ್ಗೆ ಗೊತ್ತಾ? ಎಲೀಸಾ ಕೇಳಿದಾಗ ಗೊತ್ತಿಲ್ಲ ಎನ್ನುವಂತೆ ಅಂಜಲಿ ತಲೆಯಾಡಿಸಿದಳು. ದೂರದ ಕೇರಳದ ಕ್ಯಾಥೋಲಿಕ್ ಕ್ರೈಸ್ತರ ಹುಡುಗಿ ಎಲೀಸಾ, ಅಂಜಲಿಯ ರೂಮ್‍ಮೇಟ್. ಆರು ತಿಂಗಳ ಹಿಂದೆ ನಡೆದ ಪ್ರಾಜೆಕ್ಟ್‍ವರ್ಕ್ ಕುರಿತ ಸೆಮಿನಾರ್‍ನ ಟೀ ಬ್ರೇಕ್‍ನಲ್ಲಿ ಪರಿಚಯವಾದವಳು. ನಿರರ್ಗಳ ಮಾತು, ಊಟ, ನಿರಂತರ ಭೇಟಿಯ ನಂತರ ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ಇದೀಗ ಒಟ್ಟಿಗೆ ಉಳಿದುಕೊಂಡಿದ್ದಾಳೆ. ಅಪರೂಪಕ್ಕೊಮ್ಮೆ ಸಿಗರೇಟನ್ನು ಬಾಲ್ಕನಿಯಲ್ಲಿ ಸೇದುವ ಎಲೀಸಾ ಕೆಲವೊಮ್ಮೆ ಒಬ್ಬಳೇ ವೈನ್ ಕುಡಿಯುತ್ತ ಯಾವುದೋ ಕ್ಲಾಸಿಕ್ ಕಾದಂಬರಿಗಳನ್ನು ಓದುತ್ತ ಉಳಿದುಬಿಡುತ್ತಾಳೆ.
“ಡೇಟಿಂಗ್ ಆಪ್‍ನಲ್ಲಿ ಒಬ್ಬ ಇಂಟ್ರಸ್ಟಿಂಗ್ ಹುಡುಗ ಸಿಕ್ಕಿದ್ದಾನೆ. Non Smoker but he drinks occasionally ತುಂಬಾ ಚೆನ್ನಾಗಿ ಮಾತನಾಡುತ್ತಾನೆ” ಒಂದೊಂದೇ ವಿಚಾರಗಳನ್ನು ಹೇಳುತ್ತಾ ಎಲೀಸಾ ಡೇಟಿಂಗ್ ಸೈಟ್‍ನಲ್ಲಿ ಪರಿಚಯವಾದ ಹುಡುಗನ ವ್ಯಕ್ತಿತ್ವವನ್ನು ಅಂಜಲಿಗೆ ಪರಿಚಯಿಸಿಕೊಟ್ಟಳು. “ಈ ವಿಕೇಂಡ್ ಸಿಗೋದಕ್ಕೆ ಹೇಳಿದೀನಿ” ಎಂದು ಕಣ್ಣುಮಿಟುಕಿಸುತ್ತಾ ಹೊರಟವಳು ಬಾಲ್ಕನಿಯ ಮೂಲೆಯಲ್ಲಿ ನಿಂತು ಸಿಗರೇಟಿಗೆ ಲೈಟರ್‍ನಿಂದ ಕಿಡಿ ಹೊತ್ತಿಸಿದಳು. ಎಲೀಸಾ ಸಿಗರೇಟಿಗೆ ಹೊತ್ತಿಸಿದ ಕಿಡಿಯಷ್ಟೇ ಸಣ್ಣದಾದ ಕಿಡಿಯೊಂದು ಎದುರಿದ್ದ ಅಂಜಲಿಯ ಎದೆಯೊಳಗೆ ಉಲ್ಬಣಿಸಿ ಹೊಗೆಯೆಬ್ಬಿಸಿತು. “ಬೇಗ ಒಂದು ಮದುವೆಯಾಗೇ ಅಂಜಲಿ, ನಮಗೆ ಅಂತ ಯಾರಾದರೂ ಇರಬೇಕು ಕಣೇ” ಎನ್ನುವ ಕಸ್ತೂರಕ್ಕನ ಮಾತುಗಳು ಮತ್ತೊಮ್ಮೆ ಆವರಿಸಿಕೊಂಡವು.
ಅಂಜಲಿ ಗೂಗಲ್ ಪ್ಲೇಸ್ಟೋರ್‍ನಲ್ಲಿ ಡೇಟಿಂಗ್ ಆಪ್‍ಗಳನ್ನು ಹುಡುಕಲು ಆರಂಭಿಸಿದಳು. ಮೊಬೈಲ್ ಸ್ಕ್ರೀನ್‍ನನ್ನು ಸ್ಕ್ರಾಲ್ ಮಾಡುತ್ತಿದ್ದಂತೆ Where shall we meet. . . Break your daily routine. . . Find your partner. . . ಎನ್ನುವಂತಹ ಥಂಬ್‍ನೈಲ್‍ನೊಂದಿಗೆ ಹತ್ತಾರು ಡೇಟಿಂಗ್‍ಆಪ್‍ಗಳು ಸಾಲುಸಾಲಾಗಿ ತೆರೆದುಕೊಂಡವು. ಡೇಟಿಂಗ್‍ಆಪ್‍ಗಳು ಈ ಶತಮಾನದ ಭರವಸೆಯೋ, ಆತಂಕವೋ ಅರ್ಥವಾಗಲಿಲ್ಲ. ಒಂದೊಂದೇ ಡೇಟಿಂಗ್‍ಆಪ್‍ಗಳನ್ನು ಇಣುಕಿ ನೋಡುತ್ತಿದ್ದಂತೆ ಕಣ್ಣೆದುರಿದ್ದ ಉಕ್ತಿಯೂ ಹೊಸದಾಗಿ ಕಾಣುತ್ತಿತ್ತು. ಎಲೀಸಾಳನ್ನು ಡೇಟಿಂಗ್‍ಆಪ್‍ಗಳ ಬಗ್ಗೆ ಕೇಳಿದರೆ ಹೇಳುತ್ತಾಳೆ ಎನಿಸಿದರೂ ಯಾಕೋ ಮುಜುಗರವೆನಿಸಿತು. ಎಲೀಸಾಳ ಸಹಾಯ ಬೇಡ ಎಂದುಕೊಂಡಳು.
ಬದುಕಿನದ್ದಕ್ಕೂ ಜತೆಯಾಗುವ ಮದುವೆ ರೀತಿಯ ಕ್ರಿಯೆಗಳಿಗೂ ಇಬ್ಬರ ನಡುವೆ ತುಯ್ಯುವ ಸಂಬಂಧದ ನೂಲು ಒಂದಿಷ್ಟೇ ಸಡಿಲವಾದರೂ ಸಾಕು ಮರುಕ್ಷಣವೇ ಮಾಯವಾಗಿಬಿಡುವ ಅಥವಾ ಮತ್ತೊಬ್ಬರೊಂದಿಗೂ ಅದೇ ನೂಲಿನಿಂದ ಸಂಬಂಧವನ್ನು ಬಿಗಿಯಾಗಿಸಿಕೊಳ್ಳುವುದಕ್ಕೆ ಹೆಣಗಾಡುವ ಡೇಟಿಂಗ್ ಆಪ್‍ಗಳು ಕರುಣಿಸುವ ಸಂಬಂಧಗಳಿಗೂ ವ್ಯತ್ಯಾಸವಿದೆ ಎನಿಸಿತು. ಅಜ್ಞಾತ ಮೆಡಲ್‍ಗೆ ಒಲಿಂಪಿಕ್ಸ್‍ನಲ್ಲಿನ ಸ್ಪರ್ಧಾಳುವಿನಂತೆ ಓಡುತ್ತಿರುವ ಬೆಂಗಳೂರು, ಇವತ್ತಿನ ಗೆಳೆತನ, ಪ್ರೀತಿ, ಮದುವೆ ಎಲ್ಲವೂ ಫುಟ್‍ಪಾತ್‍ನಲ್ಲಿ ಹರಡಿಕೊಂಡಿರುವ ಕಡಿಮೆ ಆಯಸ್ಸಿನ ಅಗ್ಗದ ಪ್ಲಾಸ್ಟಿಕ್ ಸಾಮಾನುಗಳಂತೆ ಕಾಣಿಸಿಕೊಂಡು ಭಯಹುಟ್ಟಿಸಿದವು.
ಪದಗಳಿಗಿಂತ ಎಮೋಜಿಗಳ ಮೂಲಕವೇ ಮಾತನಾಡುವ ಡೇಟಿಂಗ್‍ಆಪ್‍ನ ಚಾಟಿಂಗ್ ಪ್ರಪಂಚಕ್ಕೆ ಅಂಜಲಿ ಪ್ರವೇಶ ಪಡೆದಿದ್ದಳು. ಹೆಸರು, ವಯಸ್ಸು, ಊರು, ಬಣ್ಣ, ಉದ್ಯೋಗ, ನಿರೀಕ್ಷೆ, ಆಸಕ್ತಿಗಳು ಎಲ್ಲವನ್ನೂ ನಮೂದಿಸಿ ಒಬ್ಬರಿಗೆ ಆಯ್ಕೆಯಾಗಿ ಮತ್ತೊಬ್ಬರ ಆಯ್ಕೆಗಾಗಿ ವಿಚಿತ್ರ ಕುತೂಹಲದಿಂದ ಕಾದವಳಂತೆ ನಿಂತಿದ್ದಳು. ಸಂಜೆಯಾಗಿತ್ತು. ಐದಾರು ಹೊಸ ಮುಖಗಳು ಡೇಟಿಂಗ್ ಸೈಟ್‍ನಲ್ಲಿ ಮಾತಿಗೆ ಆಹ್ವಾನವಿತ್ತಿದ್ದವು. ಬಲವಂತವಾಗಿ ನಗುತ್ತಿದ್ದೇವೆ ಎನ್ನುವಂತಹ ಗಡುಸುಮುಖಗಳು, ಶ್ರೀಮಂತಿಕೆಯನ್ನು ಬಯಲಿಗಿಟ್ಟ ಠೀವಿಯೊಂದಿಗೆ ಇಂಪೋರ್ಟ್‍ಟೆಡ್ ಕಾರ್‍ಗಳ ಜತೆಗೆ ತೆಗೆಸಿಕೊಂಡ ಸೆಲ್ಫಿಯಲ್ಲಿನ ಕೆಸರುಮುಖಗಳು ನಡುವೆ ಹೊಳಪು ಕಣ್ಣುಗಳ ವಿಶಾಖ ಎನ್ನುವ ಹೆಸರಿನ ಹುಡುಗ ವಿಶೇಷವಾಗಿ ಪ್ರಜ್ವಲಿಸುತ್ತಿದ್ದ. ಅಂಜಲಿ ಅವನಿಗೆ ದನಿ ಸೇರಿಸಿದವಳಂತೆ ಮಾತನ್ನು ಬೆಳೆಸಿದಳು. ಅದೇ ರಾತ್ರಿ ವಿಶಾಖ ಮಾತುಗಳನ್ನು ಮತ್ತಷ್ಟು ವಿಸ್ತರಿಸಿದ್ದ.
ಒಂದೇ ತಿಂಗಳಿಗೆ ವಿಶಾಖ ಅಪರಿಚಿತನ ಗೆರೆ ದಾಟಿಬಿಟ್ಟಿದ್ದ. ಹೆಸರಿಲ್ಲದ ಸಂಬಂಧವೊಂದಕ್ಕೆ ಇಬ್ಬರೂ ನೇತುಬಿದ್ದಿದ್ದರು. ಅವರಿಬ್ಬರು ಬೆಳಗ್ಗೆ ಎದ್ದವರು ಗುಡ್ ಮಾರ್ನಿಂಗ್ ಹೇಳಿಕೊಳ್ಳುತ್ತಾರೆ. ದೊಡ್ಡ ಮಗ್‍ಗಳಲ್ಲಿ ಕಾಫಿ ಹೀರುತ್ತ ರಾತ್ರಿಯ ಕನಸುಗಳನ್ನು ಚರ್ಚಿಸುತ್ತಾರೆ. ಸ್ನಾನಕ್ಕೆ ಹೊರಡುವ ಮೊದಲು ಅವರಿಗಷ್ಟೇ ಅರ್ಥವಾಗುವಂತೆ ಪೋಲಿಯಾಗಿ ಏನನ್ನೋ ಹೇಳಿಕೊಳ್ಳುತ್ತ ಕಿಸಕ್ಕನೆ ನಕ್ಕುಬಿಡುತ್ತಾರೆ. ಆಫೀಸಿಗೆ ಹೊರಡುವ ಮೊದಲು ಸಂಜೆ ಎಷ್ಟು ಗಂಟೆಗೆ ಬಿಡುವಾಗುತ್ತೇನೆ ಮಾತನಾಡಲು ಉಳಿದಿರುವುದು ಏನು ಎನ್ನುವುದನ್ನು ವಿನಿಮಯಗೊಳಿಸಿಕೊಳ್ಳುತ್ತಾರೆ. ಆಫೀಸಿನಲ್ಲಿ ಒಂದಿಷ್ಟೇ ಬಿಡುವು ದೊರೆತರು ಸಾಕೂ ವಾಟ್ಸ್‍ಆಪ್‍ನಲ್ಲಿ ಮಾತನಾಡಿ ಹಗುರಾಗುತ್ತಾರೆ.
ಹೀಗೆ ವಿಶಾಖನೊಂದಿಗೆ ಬೆಸೆದುಕೊಳ್ಳುತ್ತಿದ್ದ ಆಂತರ್ಯದ ದಾರವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಿರುವಾಗಲೇ ಆಫೀಸಿನಲ್ಲಿ ವಿವೇಕ ರಾಡಿಮಾಡಿದ್ದ. ಅಂಜಲಿ ಡೇಟಿಂಗ್‍ಆಪ್‍ನಲ್ಲಿ ಇದ್ದಾಳೆ ಎನ್ನುವುದನ್ನು ಯಾವುದೋ ಮೂಲದಿಂದ ಪತ್ತೆ ಮಾಡಿಬಿಟ್ಟಿದ್ದ. “ಅಂಜಲಿ ಮೂವತ್ತೆರಡನೇ ವಯಸ್ಸಿನಲ್ಲಿ ಡೇಟಿಂಗ್ ಆಪ್‍ನಲ್ಲಿ ಬಾಯ್‍ಫ್ರೆಂಡ್ ಹುಡುಕುತ್ತಿದ್ದಾಳೆ” ಎಂದು ಎಲ್ಲರ ಎದುರೇ ಹೇಳುವ ಮೂಲಕ ಅವಳ ಲೋಕವನ್ನೇ ಕಂಗೆಡಿಸಿಬಿಟ್ಟಿದ್ದ.
ಎಲ್ಲರೂ ನಗುತ್ತಿರುವಾಗಲೇ ಟೀಮ್‍ಲೀಡರ್ ನರೇಶ್ ಹರಿಸಿದ್ದ ವಿಚಿತ್ರವಾದ ನಗುವಿಗೆ ಇಷ್ಟು ವರ್ಷಗಳು ಕಟ್ಟಿಕೊಂಡಿದ್ದ ವ್ಯಕ್ತಿತ್ವವನ್ನೇ ಅಪಹಾಸ್ಯ ಮಾಡುವ ಶಕ್ತಿಯೊಂದು ಪ್ರಾಪ್ತಾವಗಿದೆ ಎನಿಸಿಬಿಟ್ಟಿತ್ತು ಅಂಜಲಿಗೆ. ಅಸಹಾಯಕಳಂತೆ ಸಿಟ್ಟಿನಿಂದ ಆಫೀಸಿನಿಂದ ಹೊರಬಂದ ಅಂಜಲಿ ಕಸ್ತೂರಕ್ಕನ ಮೆಸ್‍ಗೆ ಬಂದಿಬಿಟ್ಟಳು. ಕಲ್ಲುಬೆಂಚಿನ ಮೂಲೆಯಲ್ಲಿ ಕೂತು ಏನನ್ನೂ ಮಾತನಾಡದೇ ಊಟ ಮುಗಿಸಿ ಹೊರಟುಬಿಟ್ಟಿದ್ದಳು. ಹಾಸ್ಟೆಲ್ ಹುಡುಗಿಯಂತೆ ಉಳಿದುಹೋಗಿದ್ದ ಅಂಜಲಿಯ ಎದುರು ಕಸ್ತೂರಕ್ಕ ಬೇಕೆಂದೇ ಈ ಬಾರಿ ಮದುವೆಯ ವಿಚಾರವನ್ನು ಮಾತನಾಡಲಿಲ್ಲ.
ಫ್ಲಾಟ್ ತಲುಪಿದಾಗ ರಾತ್ರಿಯಾಗಿತ್ತು. ಗೀರುಬಿದ್ದಿದ್ದ ಅಂಗಿಯ ಜತೆಗೆ ಕಿರಿದಾದ ಚೆಡ್ಡಿಯೊಂದನ್ನು ತೊಟ್ಟಿದ್ದ ಎಲೀಸಾ ಬಾಲ್ಕನಿಯಲ್ಲಿ ವೈನ್ ಕುಡಿಯುತ್ತಾ ಮುಳುಗಿದ್ದಳು. ಅವಳ ಬಲಗೈನಲ್ಲಿದ್ದ ಸಿಗರೇಟು ಸಣ್ಣದಾಗಿ ಹೊಗೆಯನ್ನು ಉಗುಳುತ್ತಿತ್ತು. ಎದೆಯೊಳಗೆ ಕೆಂಡವನ್ನೇ ಇಟ್ಟುಕೊಂಡಿದ್ದೇವೆ ಎನ್ನುವಂತೆ ಕಾಣುತ್ತಿದ್ದ ಎಲೆಕ್ಟ್ರಾನಿಕ್ ಸಿಟಿಯ ಐಟಿ ಕಂಪನಿಗಳಲ್ಲಿನ ಹೈವೋಲ್ಟೇಜ್ ಬಲ್ಬ್‍ಗಳು ಸ್ಟಾಂಡೆರ್ಡ್ ಲೈಫ್ ಎನ್ನುವ ಆಕರ್ಶಕ ಹೆಸರಿನ ಮೂಲಕ ಎಷ್ಟೋ ಜನರ ವಯಕ್ತಿಕ ಬದುಕನ್ನೇ ದಹಿಸುತ್ತಿದ್ದೇವೆ ಬೇಕಿದ್ದರೆ ನೋಡಿ ಎನ್ನುವಂತೆ ಉರಿಯುತ್ತ ನಿಂತಿರುವಂತೆ ಕಾಣುತ್ತಿದ್ದವು.
ಅಂಜಲಿ ಆಫೀಸಿನಲ್ಲಿ ವಿವೇಕ ಎಬ್ಬಿಸಿದ ರಗಳೆ, ಕಸ್ತೂರಕ್ಕನ ಮಾತುಗಳು, ಡೇಟಿಂಗ್ ಆಪ್‍ನಲ್ಲಿ ಪರಿಚಯವಾಗಿರುವ ವಿಶಾಖ ಹೀಗೆ ಒಳಗೇ ಉಳಿಸಿಕೊಂಡಿದ್ದ ಎಲ್ಲವನ್ನು ಎಲೀಸಾಳ ಎದುರಿಟ್ಟು ನಿಂತುಬಿಟ್ಟಳು. ಅಂಜಲಿಯ ದನಿ ಕ್ಷೀಣಸಿಬಿಟ್ಟಿತ್ತು. “ವಿಶಾಖನನ್ನು ಭೇಟಿಯಾಗಬೇಕು, ಭಾನುವಾರ ಸಿಗುವುದಕ್ಕೆ ಹೇಳಿದೀನಿ” ಎಂದಳು. ಅಂಜಲಿಯ ಕೈ ಹಿಡಿದುಕೊಂಡ ಎಲೀಸಾ “If he is genuine, ask him to marry you Anjali” ಎಂದಳು. ಎಲೀಸಾಳ ಮಾತಿನಲ್ಲಿ ಸಂಕಟವೊಂದು ಪಾಚಿಕಟ್ಟಿರುವಂತೆ ಕಾಣುತ್ತಿತ್ತು.
ಎಲೀಸಾ ಎಂದರೆ ಪಬ್‍ಗಳಲ್ಲಿ ಕುಣಿದು ದಣಿಯುವ, ಆಫೀಸಿನ ಪಾರ್ಟಿಗಳಲ್ಲಿ ಕುಡಿದು ತಡರಾತ್ರಿ ಮನೆಸೇರುವ, ಹೈಹೀಲ್ಡ್ ಚಪ್ಪಲಿಗಳನ್ನು ಇನ್ನಿಲ್ಲದಷ್ಟು ಇಷ್ಟಪಡುವ, ಅಪರಾತ್ರಿಗಳಲ್ಲಿ ಒಬ್ಬಳೇ ಯಾವುದೋ ಉರ್ದು ಗಜಲ್‍ಗಳನ್ನು ಕೇಳುತ್ತಾ, ಏನನ್ನೋ ಓದುತ್ತ, ಸಿಗರೇಟು ಸುಡುವ ಅಪ್ಪಟ ಮೆಟ್ರೋಸಿಟಿಯ ಹುಡುಗಿ ಎಂದುಕೊಂಡಿದ್ದು ಸುಳ್ಳು ಎನ್ನುವ ಅನುಮಾನವಾಯಿತು. ಅದೇ ಮೊದಲು ಎಲೀಸಾಳ ಮಾತುಗಳಿಗೆ ಸೃಷ್ಠಿಸಹಜ ಹೆಣ್ಣಿನ ಆಂತರ್ಯದ ಎಳೆಯೊಂದು ಜತೆಯಾಗಿತ್ತು. ವಿಶಾಖನನ್ನು ಭೇಟಿಯಾಗಬೇಕು ಎನ್ನುವುದು ಅಂಜಲಿಗೆ ಇನ್ನಷ್ಟು ಗಟ್ಟಿಯಾಗುತ್ತಿರುವಾಗಲೇ, ಅವನನ್ನು ಮದುವೆಯಾಗುವುದು ಸಾಧ್ಯವ ಎನ್ನುವ ಪ್ರಶ್ನೆಯೊಂದು ಎದುರಾದಾಗ ಅಂಜಲಿಗೆ ಉತ್ತರವೇ ಹೊಳೆಯಲಿಲ್ಲ.
***

ಬ್ರಿಗೇಡ್ ರೋಡ್‍ನ ಇಂಡಿಯನ್ ಕಾಫಿಹೌಸ್‍ಗೆ ವಿಶಾಖಗೆ ಬಂದಿದ್ದ. ಅವನು ಇಪತ್ತೇಳು ವರ್ಷದ ಹುಡುಗ. ತುಂಬು ಕೂದಲು, ಹಾಸುನೆಲದ ಗರಿಕೆಯಂತಹ ದಾಡಿ, ಹುಬ್ಬು ಮುಚ್ಚಿಕೊಳ್ಳುವಷ್ಟು ದೊಡ್ಡದಾಗಿದ್ದ ಕಪ್ಪುಫ್ರೇಮಿನ ಕನ್ನಡಕದ ಜತೆಗೆ ಚಿಟ್ಟೆಯ ರೆಕ್ಕೆಯಬಣ್ಣದ ನೀಲಿ ಟೀಶರ್ಟ್‍ನ್ನ ಮೈಗೇರಿಸಿಕೊಂಡು ಬಂದಿದ್ದ ವಿಶಾಖ ಮೂವತ್ತೆರಡು ವರ್ಷಗಳ ಅಂಜಲಿಯ ಎದುರು ಕೂತು ಮಿಕಿಮಿಕಿ ನೋಡುತ್ತಿದ್ದ. ಕಾಫಿಹೌಸ್‍ನ ಗದ್ದಲದ ನಡುವೆಯೂ ಅವರಿಬ್ಬರು ಕೂತಿದ್ದ ಟೇಬಲ್‍ನಲ್ಲಿ ಮಾತ್ರ ಮಾತುಗಳಿಗೆ ತೀವ್ರವಾದ ಕ್ಷಾಮ ಉಂಟಾಗಿತ್ತು. ವಿಶಾಖ ಎಳೆಯ ಹುಡುಗ ಎನ್ನುವುದನ್ನು ಅಂಜಲಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಶಾಖ ಇಪ್ಪತ್ತೇಳು ವರ್ಷದ ಹುಡುಗ ಎನ್ನುವುದು ಅಂಜಲಿಗೆ ತಲ್ಲಣವೆನಿಸಿದರೆ ಮೂವತ್ತೆರಡು ವರ್ಷಗಳ ಅಂಜಲಿಯ ಮುಖದಲ್ಲಿ ಕಾಣಿಸಿದ ಒಂದೆರಡು ನೆರಿಗೆಗಳು ವಿಶಾಖನನ್ನು ಒಳಗೇ ತಳಮಳಿಸುವಂತೆ ಮಾಡಿಬಿಟ್ಟಿದ್ದವು.
“ಚರ್ಚ್‍ಸ್ಟ್ರೀಟ್ ನನ್ನ ರೂಮ್‍ಗೆ ಹತ್ತಿರ, ಎಂ.ಜಿ ರೋಡ್ ಮೆಟ್ರೋ ಹತ್ತಿದರೆ ಇಪ್ಪತ್ತು ನಿಮಿಷಗಳ ಹಾದಿ” ಎಂದು ವಿಶಾಖನೇ ಮಾತು ಆರಂಭಿಸಿದ. ಹತಭಾಗ್ಯದಂತ ಅದೊಂದು ಸಾಲು ಅಂಜಲಿಯನ್ನು ಯಾವ ಮಾತಿಗೂ ಪ್ರಚೋದಿಸಲಿಲ್ಲ. ವಿಶಾಖನ ಮಾತುಗಳಿಗೆ ಉತ್ತರಿಸುವುದು ಅರ್ಥವಾಗದೆ “ಫೈನ್, ಗುಡ್, ಇಸ್ ಇಟ್! ಎನ್ನುತ್ತಾ ಇಬ್ಬರ ನಡುವಿನ ಮಾತಿನ ಸಂಕದಲ್ಲಿ ಪ್ರಯಾಣಿಸುತ್ತಿದ್ದಳು. ಇದ್ದಕ್ಕಿದ್ದಂತೆ ಆರಂಭವಾಗುವ ಜೋರು ಮಳೆಯಂತೆ ಯಾವುದೋ ರಭಸವಾದ ತೀವ್ರತೆಯೊಂದು ಒತ್ತರಿಸಿ ಬಂದಿತ್ತು. ಮುದುಡಿದ ಹೂವಿನಂತೆ ಎದುರು ಕೂತಿದ್ದ ವಿಶಾಖನ ಬಲಗೈಯನ್ನು ಅಂಜಲಿ ನಿಧಾನವಾಗಿ ಹಿಡಿದುಕೊಂಡಳು. ವಿಶಾಖ ಒಂದಿಷ್ಟು ಅಲುಗದೇ ಕೂತುಬಿಟ್ಟಿದ್ದ.
“ಮದುವೆಯಾಗಬೇಕು ಎಂದುಕೊಳ್ಳುವವರಿಗೆ ವಯಸ್ಸು ಮುಖ್ಯವಾ? ಹೀಗೆ ಜಗತ್ತಿನ ರೂಢಿಗಳನ್ನು ಮುರಿದವರು ಎಲ್ಲರಂತೆ ಬದುಕುವುದು ಸಾಧ್ಯವಿದೆಯಾ ವಿಶಾಖ” ಎಂದು ಏನೇನೋ ಕೇಳಬೇಕು ಎನಿಸಿತು ಅಂಜಲಿಗೆ. ಮರುಕ್ಷಣವೇ ಮುಜುಗರವೆನಿಸಿ ಮಾತು ನಿಲ್ಲಿಸಿಬಿಟ್ಟಳು.
“ಹೆಣ್ಣು ಗಂಡಿನ ನಡುವೆ ನಡೆಯಬಹುದಾದರೂ ಏನು? ಹರಟುವುದು, ದೇಹದ ಉಬ್ಬುತಗ್ಗುಗಳ ಬಗ್ಗೆ ಪೋಲಿಯಾಗಿ ಮಾತನಾಡಿಕೊಳ್ಳುವುದು, ಸಾಧ್ಯವಾದರೆ ಸೆಕ್ಸ್‍ಲೈಫ್‍ಗೆ ತೆರೆದುಕೊಳ್ಳುವುದು, ಲೀವ್‍ಇನ್‍ಗೆ ಮುಂದುವರೆಯುವುದು ಮತ್ತೂ ಅಗತ್ಯವಿದ್ದರೆ ಎಲ್ಲರಂತೆ ಮದುವೆಯಾಗುವುದು” ಇದಷ್ಟೇ ಸಾಧ್ಯವಾ ಎಂದು ಮತ್ತೇನೋ ಕೇಳಬೇಕು ಎನಿಸಿದರೂ ಸಾಧ್ಯವಾಗದೆ ಮೌನವಾಗಿಬಿಟ್ಟಳು. ಅವಳ ಮೌನದಲ್ಲೇ ಅಸಹಾಯಕತೆಯ ಕಡಲು ಸದ್ದುಮಾಡದೆ ಭೋರ್ಗರೆಯುತ್ತಿತ್ತು. ಅವಳ ಮುಖದಲ್ಲಿನ ಕಂಪನಗಳು ಪ್ರತಿ ಸಂಬಂಧಗಳಿಗೂ ಭಾವನಾತ್ಮಾಕ ಪ್ರಚಂಪದ ಕೊಂಡಿಯೊಂದು ಇದ್ದೇ ಇರುತ್ತದೆ ಎನ್ನುವುದನ್ನು ನಿರೂಪಿಸಲು ಹೆಣಗಾಡುತ್ತಿರುವಂತೆ ತೋರುತ್ತಿತ್ತು. ಅಂಜಲಿ ಮಾತ್ರ ಮಾತನಾಡಲಿಲ್ಲ.
“ನಿನಗೆ ಎಲ್ಲವನ್ನೂ ಹೇಳಿಕೊಂಡಿದ್ದೇನೆ ಎನಿಸಿದರೂ ಹೇಳದ ಅದೊಂದು ವಿಷಯವಿದೆ ಅಂಜಲಿ” ಎಂದ ವಿಶಾಖ. ಕಾಫಿಹೌಸ್‍ನ ಗದ್ದಲ ಕ್ರಮೇಣವಾಗಿ ಇಳಿಮುಖವಾಗಿದ್ದು ಇಬ್ಬರ ನಡುವಿನ ಮಾತುಗಳಿಗೆ ಚೌಕಟ್ಟನ್ನು ಒದಗಿಸಿಕೊಟ್ಟಿತು. ವಿಶಾಖ ಏನನ್ನು ಹೇಳಬಹುದು ಎನ್ನುವುದನ್ನು ಅಂಜಲಿ ಆತುರವಾಗಿ ಕಾದಳು. “ಗೊತ್ತಾ, ಒಂದು ವರ್ಷದ ಹಿಂದೆ ಹುಡುಗಿಯೊಬ್ಬಳು ಜೊತೆಯಾಗಿದ್ದಳು. ಎಂ.ಜಿ ರೋಡಿನ ಮೆಟ್ರೋ ಇಳಿದು ಇದೇ ರಸ್ತೆಗಳಲ್ಲಿ ಕೈಗಳನ್ನು ಸೇರಿಸಿಕೊಂಡು ಅವಳೊಂದಿಗೆ ಸುತ್ತಾಡಿದ್ದೇನೆ.
“ನಾನು ಅವಳನ್ನೇ ಮದುವೆಯಾಗುತ್ತೇನೆ. ನೋಡಿ, ನನಗೆ ಈ ಜಾತಿಯಲ್ಲಿ ನಂಬಿಕೆ ಎನ್ನುವುದು ಒಂದಿಷ್ಟೂ ಇಲ್ಲ ಎಂದು ಮನೆಯಲ್ಲಿ ಹಟಕ್ಕೆ ಬಿದ್ದಿದ್ದೆ. ಸದ್ಯದ ಕೆಲಸದಲ್ಲಿ ಸಂಬಳ ಇಪ್ಪತ್ತೈದುಸಾವಿರಕ್ಕೆ ಏರಿದೆ. ಮುಂದಿನ ವರ್ಷದೊಳಗೆ ಮೂವತ್ತುಸಾವಿರವನ್ನು ತಲುಪಬಹುದು. ಅವಳೂ ದುಡಿಯುತ್ತಾಳೆ. ಹಠವಾದಿ ಹುಡುಗಿ. ಅಷ್ಟಿದ್ದರು ಸಾಕು ಈ ಬೆಂಗಳೂರು ನಮ್ಮನ್ನು ಬದುಕಿಸಿಬಿಡುತ್ತದೆ. ಬೆಂಗಳೂರಿನಲ್ಲಿ ಒಂದು ಕಿರಿದಾದ ಬಾಡಿಗೆಮನೆಗೆ ಹೆಚ್ಚೆಂದರೆ ಆರುಸಾವಿರ. ತಿಂಗಳಿಗೆ ಐದುಸಾವಿರದ ದಿನಸಿಯಾದರೂ ಸಾಕು. ಇಬ್ಬರಿಗೂ ಮೆಟ್ರೋ, ಬಸ್ಸಿನ ಟಿಕೆಟ್ ಖರ್ಚಿನ ಜತೆಗೆ ಉಳಿದ ಖರ್ಚುಗಳು ಸೇರಿ ಒಟ್ಟು ಹತ್ತುಸಾವಿರ. ಇಷ್ಟಾದರೆ ತಿಂಗಳಿಗೆ ಇಬ್ಬರಿಂದ ಕನಿಷ್ಟ ಇಪ್ಪತ್ತುಸಾವಿರ ಉಳಿಸಬಹುದು ಎಂದು ಬದುಕಿನ ವಿಚಿತ್ರ ಲೆಕ್ಕಚಾರಗಳನ್ನು ಮಾಡಿಕೊಂಡಿದ್ದೆ
ವಿಶಾಖ ಹೇಳುತ್ತಲೇಹೋದ. ಅಂಜಲಿ ಕಣ್ಣು ಮಿಟುಕಿಸದೆÀ ಅವನ ಮಾತುಗಳನ್ನು ಕೇಳುತ್ತಿದ್ದಳು. “ಬಾಯಲ್ಲಿಟ್ಟ ಐದೇ ನಿಮಿಷಗಳಿಗೆ ಬಣ್ಣ ಕಳೆದುಕೊಳ್ಳುವ ಪೆಪ್ಪರೆಮೆಂಟ್‍ಗಳು ಗೊತ್ತಾ ಅಂಜಲಿ? ಹಾಗೇ ನಮ್ಮ ನಿಶ್ಚಯಗಳು ಭದ್ರವಾಗಿಲ್ಲವೆಂದರೆ ಬದುಕಿನ ಬಣ್ಣಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ” ಎಂದು ಮತ್ತೊಮ್ಮೆ ಮಾತು ನಿಲ್ಲಿಸಿದ. ಇಪ್ಪತ್ತೇಳು ವರ್ಷದ ವಿಶಾಖನ ಮುಖದಲ್ಲಿ ಬರಿಗಾಲಿನಲ್ಲೇ ಕಡಲನ್ನು ಕ್ರಮಿಸಿದ ಧಣಿವು ಕಾಣುತ್ತಿತ್ತು.
ಒಂದೇ ಒಂದು ಮಾತು ಹೆಚ್ಚಾದರೂ ಅವನ ಲೋಕವೇ ಚೂರಾಗಿಬಿಡಬಹುದು ಎಂದು ಆತಂಕವಾಗಿದ್ದ ಅಂಜಲಿ ಏನನ್ನೂ ಹೇಳಲಿಲ್ಲ. “ನೋಡು, ನನಗೆ ಒಂದು ಮಾತು ಹೇಳದೇ ಈಗ ಆರು ತಿಂಗಳ ಹಿಂದೆ ಬೇರೊಬ್ಬ ಹುಡುಗನನ್ನು ಮದುವೆಯಾಗಿದ್ದಾಳೆ. ಅದಕ್ಕೆ ಬೇರೊಂದು ಹುಡುಗಿಯನ್ನು ಪ್ರೀತಿಸಿ, ಸಾಧ್ಯವಾದರೆ ಅವಳನ್ನೇ ಮದುವೆಯಾಗುತ್ತೇನೆ. ನಾವು ಮನುಷ್ಯರು ಎಷ್ಟೆಲ್ಲಾ ಸುಳ್ಳುಗಳನ್ನು ಒಪ್ಪಿಕೊಂಡು ಬದುಕಿಲ್ಲಾ ನೀನೇ ಹೇಳು? ಹೇಗೂ ಅವಳನ್ನು ಮನೆಯವರು ನೋಡಿಲ್ಲ, ನಾನು ಮದುವೆಯಾಗುವ ಹುಡುಗಿಯನ್ನು ಇವಳೇ ವಿಶಾಖ ಮೊದಲು ಪ್ರೀತಿಸಿದ ಹುಡುಗಿ ಎಂದುಕೊಳ್ಳುತ್ತಾರೆ ಅಷ್ಟೇ. ಬದುಕಬೇಕು, ಬೆಂಗಳೂರು ನಮಗೆ ಸೋಲುವುದನ್ನು ಕಲಿಸುವುದಿಲ್ಲ ಗೊತ್ತಾ ಅಂಜಲಿ” ಎಂದು ವಿಶಾಖ ಏನೇನೋ ಬಡಬಡಿಸಿದ.
ಖುಷಿಯನ್ನು ಹೊಸಕಿಹಾಕುವಷ್ಟೇ ವೇಗವಾಗಿ ಸಂಕಟವನ್ನೂ ಹೊಸಕಿಹಾಕಿಬಿಡುತ್ತೇನೆ ಎನ್ನುವಂತೆ ಬೆಂಗಳೂರು ಅಲ್ಲೆಲ್ಲೋ ಕೈಕಟ್ಟಿ ನಿಂತು ನಗುತ್ತಿತ್ತು. ಯಾಕೋ ಬೆಂಗಳೂರು ಗೆಲ್ಲುವುದನ್ನಷ್ಟೇ ಕಲಿಸುವುದು ಅಪಾಯವೆನಿಸಿತು. ಯಾವುದೋ ಕಾರಣಗಳಿಗೆ ಬಿಟ್ಟುಹೋದ ಹುಡುಗಿ, ಒಂಟಿಯಾಗಿ ಉಳಿದ ವಿಶಾಖ, ಡೇಟಿಂಗ್‍ಸೈಟ್‍ನಲ್ಲಿ ಹುಡುಕುತ್ತಿರುವ ಅಗ್ಗದ ಸಾಂಗತ್ಯ ಎಲ್ಲವೂ ಅಂಜಲಿಗೆ ಶಿಕ್ಷೆಗೂ ಅನರ್ಹ ಅಪರಾಧಗಳಂತೆ ಕಾಣುತ್ತಿದ್ದವು.
“ನಿನಗೂ ಹಳೆಯ ಕತೆ ಏನಾದರೂ ಇದೆಯಾ ಅಂಜಲಿ” ಎಂದು ನಡುಗುವ ದನಿಯಲ್ಲಿ ವಿಶಾಖ ಕೇಳಿದ. ಅಂಜಲಿಗೆ ಏನನ್ನೂ ಹೇಳಬೇಕು ಎನಿಸಲಿಲ್ಲ. ಖಾಲಿಜೇಬಿನಲ್ಲಿ ನಿಂತು ಜಾತ್ರೆಯ ಅಂಗಡಿಯ ಎದುರು ಹಟಮಾಡುತ್ತಿರುವ ಪುಟಾಣಿ ಹುಡುಗನಂತೆ ಕಾಣುತ್ತಿದ್ದ ವಿಶಾಖನನ್ನು ಕಂಡು ಅಕ್ಕರೆಯಾಗಿತ್ತು. ಅಂಜಲಿ ಹೋಟೆಲ್‍ನ ಮೂಲೆಯಲ್ಲಿದ್ದ ಮಾಣಿಯತ್ತ ತಿರುಗಿ ಎರಡು ಕಾಫಿ ಎಂದಳು. ಅವಳನ್ನೇ ನೋಡುತ್ತಿದ್ದ ವಿಶಾಖನ ನುಣುಪು ಕೂದಲಿನ ನಡುವೆ ಆತ್ಮೀಯವಾಗಿ ಬೆರಳಾಸಿದಳು. “ಈ ಬೆಂಗಳೂರು ಗೆಲ್ಲವುದನ್ನು ಹೇಳಿಕೊಡುತ್ತಲೇ ನಮ್ಮ ಎಲ್ಲಾ ಕನಸುಗಳನ್ನು ತಿಂದುಬಿಡುತ್ತದೆ ಕಣೋ ವಿಶಾಖ” ಎಂದಳು. ವಿಶಾಖ ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ.

ಹೊರಗೆ ಜೋರಾಗಿ ಮಳೆಯಾಗಲು ಆರಂಭವಾಗಿತ್ತು. ಚರ್ಚ್‍ಸ್ಟ್ರೀಟ್‍ನಲ್ಲಿ ಸಿಗರೇಟು ಸೇದುತ್ತ ಹರಟುತ್ತಿದ್ದವರೆಲ್ಲ ಧಿಕ್ಕಾಪಾಲಾಗಿ ಓಡುತ್ತಿದ್ದರು. ಕೂದಲಾಡಿಸುತ್ತಿದ್ದ ಅಂಜಲಿಯ ಕೈ ಹಿಡಿದುಕೊಂಡ ವಿಶಾಖ
ಬಿಕ್ಕಿಬಿಕ್ಕಿ ಅತ್ತುಬಿಟ್ಟ. “ಅಂಜಲಿ ನನಗೆ ಬೆಂಗಳೂರು ಬೇಡ, ನನಗೆ ಸಾಕಾಗಿದೆ. ನಾನು ನಮ್ಮೂರಿಗೆ ಹೋರಟ್ಹೋಗ್ತೀನಿ” ಎನ್ನುವ ಅವನ ಮಾತುಗಳು ನೋವಿನಿಂದ ಮುದ್ದೆಯಾಗಿದ್ದವು. ಬೆಂಗಳೂರಿನಂತಹ ಮಹಾನಗರ ಒಡ್ಡುವ ಧಾವಂತದ ಸವಾಲುಗಳು ವಿಶಾಖನನ್ನು ಕಂಗೆಡಿಸಿರುವುದು ನಿಚ್ಚಳವಾಗಿ ಕಾಣುತ್ತಿತ್ತು.
ಮಾಣಿ ಎರಡು ಕಪ್‍ಗಳಲ್ಲಿ ಬಿಸಿಯಾದ ಕಾಫಿ ತಂದಿಟ್ಟ. ಇದು ನಿನಗೆ ಎನ್ನುವಂತೆ ಕಪ್‍ವೊಂದನ್ನು ವಿಶಾಖನ ಎದುರಿಗೆ ಮುಂದುಮಾಡಿದಳು. “ನಿನ್ನ ಪುಟಾಣಿ ಕಾಲುಗಳ ಚಪ್ಪಲಿಗಳಿಗೆ ನನ್ನ ದೊಡ್ಡ ಸೈಜಿನ ಪಾದಗಳು ಹೊಂದುವುದಿಲ್ಲ ಹುಡುಗ” ಎಂದಳು ಕಾಫಿಯನ್ನು ಹೀರುತ್ತ. ವಿಶಾಖನಿಗೆ ಅರ್ಥವಾಗಿತ್ತು. ಹೊಳೆಯುವ ಕಣ್ಣುಗಳಲ್ಲಿ ಎದುರು ಕೂತಿದ್ದ ಅಂಜಲಿಯನ್ನೇ ನೋಡಿದ. ವಿಶಾಖ ನೋಡುತ್ತಿರುವಾಗಲೇ ಪಕ್ಕದಲ್ಲಿದ್ದ ಮೊಬೈಲ್‍ನಲ್ಲಿ ಇಬ್ಬರಿಗೂ ಸೇತುವೆಯಾಗಿದ್ದ ಡೇಟಿಂಗ್‍ಆಪ್‍ನ ಅಂಜಲಿ ಅನ್‍ಇನ್ಸ್ಟಾಲ್ ಮಾಡಿದಳು. ಯಾಕೋ ಡೇಟಿಂಗ್‍ಆಪ್ ಅನ್‍ಇನ್ಸ್ಟಾಲ್ ಆಗುತ್ತಿದ್ದಂತೆ ಅದುವರೆಗೂ ಒಳಗೇ ಬಂಧಿಸಿಟ್ಟುಕೊಂಡಿದ್ದ ಅದೃಶ್ಯ ಸೆರಮನೆಯಿಂದ ಬಿಡುಗಡೆಗೊಂಡವರಂತೆ ಇಬ್ಬರೂ ನಿರಾಳವಾದರು. ಬಿಗಿದುಕೊಂಡಿದ್ದೇವೆ ಎನ್ನುವಂತಿದ್ದ ದಾರವೊಂದು ನೋಡುನೋಡುತ್ತಿದ್ದಂತೆ ಕಣ್ಣೆದುರೇ ತುಂಡಾಗಿಹೋಗಿತ್ತು.
ವಿಶಾಖನಿಗೆ ಏನನ್ನೂ ಹೇಳುವುದಕ್ಕೆ ಹೊಳೆಯದೆ ಅಂಜಲಿಯ ಎರಡೂ ಕೈಗಳನ್ನು ಬಿಗಿಯಾಗಿ ಒತ್ತಿದವನು ಕಾಫಿಯ ಬಿಲ್ಲನ್ನು ತಾನೇ ನೀಡಿದ. ಅಂಜಲಿಯೂ ಹಟಮಾಡಲಿಲ್ಲ. ಒಂದಿಷ್ಟೇ ನಿಮಿಷಗಳಿದ್ದೂ ದೊರೆತಿರುವ ಅಮೂಲ್ಯವಾದ ಕ್ಷಣಗಳನ್ನು ಭಂಗಗೊಳಿಸಿಕೊಳ್ಳಲು ತಯಾರಿಲ್ಲದವನಂತೆ ಎದ್ದು ಕಾಫಿಹೌಸ್‍ನಿಂದ ಹೊರಟುಹೋದ. ಅಂಜಲಿಯೂ ವಿಶಾಖನನ್ನು ತಡೆಯಲಿಲ್ಲ. ಹೆಸರು, ವಯಸ್ಸು, ಊರು, ಆಸಕ್ತಿ, ಆಯ್ಕೆ ಎಲ್ಲವನ್ನೂ ಬಲವಂತವಾಗಿ ಕಸಿದುಕೊಂಡು ಸಂಬಂಧವನ್ನು ಕೃತಕವಾಗಿ ಬೆಸೆಯಲು ಹವಣಿಸುವ ಬೆಂಗಳೂರು ವಿಚಿತ್ರವಾದ ಭಂಗಿಯಲ್ಲಿ ಕುಣಿಯುತ್ತಿತ್ತು. ವಿಜೃಂಭಿಸಿದ ಜಾತ್ರೆಯೊಂದು ಮರುದಿನವೇ ಬೀದಿಯನ್ನು ಸ್ತಬ್ಧಗೊಳಿಸುವಂತೆ ಅಂಜಲಿಯೂ ನಿಸ್ತೇಜವಾಗಿವಾಗಿದ್ದಳು.
ಸುರಿಯುತ್ತಿದ್ದ ಮಳೆ ¸ಣ್ಣದಾಗಿತ್ತು. ಫ್ಲಾಟ್ ತಲುಪುವುದಕ್ಕೆ ರಾತ್ರಿಯಾಗುತ್ತದೆ ಎಂದು ಎಲೀಸಾಳಿಗೆ ಮೆಸೆಜ್ ಮಾಡಿದ ಅಂಜಲಿ ಮೆಟ್ರೋ ಸ್ಟೇಷನ್ ಕಡೆಗೆ ಹೆಜ್ಜೆ ಹಾಕಿದಳು. ಚರ್ಚ್‍ಸ್ಟ್ರೀಟ್‍ನ ಸೀರೆಯಂಗಡಿಯ ಮಳಿಗೆಯಲ್ಲಿ ಇಬ್ಬರು ಹುಡುಗರು ಹೆಣ್ಣು ಗೊಂಬೆಯೊಂದಕ್ಕೆ ಹೊಸ ಸೀರೆಯನ್ನುಡಿಸಿ ಮಾರಾಟಕ್ಕೆ ಅಣಿಯಾಗಿಸುತ್ತಿರುವುದು ಕಾಣಿಸಿತು. ಐದೇ ನಿಮಿಷಗಳಲ್ಲಿ ಸಿದ್ದಗೊಳಿಸಿದ ಹುಡುಗರು ಗೊಂಬೆಗೆ ಫಾರ್ ಸೇಲ್ ಬೋರ್ಡು ತಗುಲಿಹಾಕಿದರು. ಹನಿಯುತ್ತಿದ್ದ ಮಳೆಯಲ್ಲೂ ಅಂಜಲಿ ಮಾರಟಕ್ಕೆ ಅಣಿಗೊಳಿಸಿದ್ದ ಗೊಂಬೆಯನ್ನೇ ನೋಡುತ್ತಾ ನಿಂತಳು.
*






0 Comments