ಶಿವು ಮೊರಿಗೇರಿ
ಈ ಮಕರ ಸಂಕ್ರಾಂತಿ ಎಂದೊಡನೆ ನನಗೊಂದು ಘಟನೆ ಜ್ಞಾಪಕವಾಗುತ್ತೆ. ನಂಗೆ ತೀರಾ ಇತ್ತೀಚಿನವರೆಗೂ ಸಂಕ್ರಾಂತಿಯೆಂದರೆ ಹಳ್ಳಿಮೇಷ್ಟ್ರು ಸಿನಿಮಾದ ‘ಸಂಕ್ರಾಂತಿ ಬಂತು’ ಅನ್ನುವ ಹಾಡಿನಷ್ಟೇ ಮಾಹಿತಿ ಸಂಕ್ಷಿಪ್ತ ಸುಸ್ಪಷ್ಟ. ಈ ಹಬ್ಬದ ಬಗ್ಗೆ ತೀರಾ ಕೆದಕಿ ತಿಳಿದುಕೊಳ್ಳುವ ಗೋಜಿಗೇ ನಾನು ಹೋಗಲಿಲ್ಲ. ಆದರೆ ಈ ಸಂಕ್ರಾಂತಿಯ ಕುರಿತು ನನ್ನ ಊರಿನವರ ಆಚರಣೆ, ಆಚರಣೆಯಲ್ಲಿನ ಬದಲಾವಣೆ, ಹಬ್ಬದ ಮಹತ್ವ ಮತ್ತು ಮಹತ್ವದೊಳಗೆ ಹರಿದಾಡಿದ ಹಲವು ಕಥೆಗಳ ಕಥನಗಳ ಮೂಲಕ ಸಂಕ್ರಾಂತಿಯ ಸಿಹಿ ನನ್ನನ್ನು ಸೆಳೆಯುತ್ತಲೇ ಹೋಯಿತು.
ನಾನು ಗಮನಿಸಿದ ಹಾಗೆ ನಮ್ಮ ಊರಿನಲ್ಲಿ ಅಥವಾ ಬಹುತೇಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಕ್ರಾಂತಿಯನ್ನು ತೀರಾ ವಿಭಿನ್ನವಾಗಿಯೇನೂ ಆಚರಿಸುತ್ತಿರಲಿಲ್ಲ. ಸಂಕ್ರಾಂತಿಯ ದಿನ ಮುಂಚಾನೆ ಮನೆಯ ಅಂಗಳವನ್ನು ಸಾರಿಸಿ, ತುಸು ಭಿನ್ನವಾದ ರಂಗೋಲಿಗೆ ಬಣ್ಣ ತುಂಬಿ , ಮನೆಯಲ್ಲಿಯೇ ಸ್ನಾನ ಮಾಡಿ ಮನೆಯ ಒಂದು ಗೋಡೆಯೊಳಗೆ ಗೂಡು ಕಟ್ಟಿಕೊಂಡ ದೇವರ ಪೋಟೋಗಳಿಗೆ ಪೂಜೆ ಮಾಡಿ ಅದೇ ತಿಂಗಳು ಕಣದಲ್ಲಿ ಒಕ್ಕಲಿ ಮಾಡಿದ್ದ ಎಳ್ಳಿಗೆ ಬೆಲ್ಲವನ್ನು ಸೇರಿಸಿ ಒರಳು ಕಲ್ಲಿನಲ್ಲಿ ಹದವಾಗಿ ಕುಟ್ಟಿ ಕಣ್ಣಿಗೊತ್ತಿಕೊಂಡು ತಿಂದುಬಿಟ್ಟರೆ ಹರಿಹರಾ….ಮುಗೀತು ಸಂಕ್ರಾಂತಿ. ಆದರೆ ಇತ್ತೀಚೆಗೆ ಈ ಸಿದ್ಧ ಸೂತ್ರದಲ್ಲಿಷ್ಟು ಬದಲಾವಣೆಗಳು ಕ್ಷಿಪ್ರಗತಿಯನ್ನು ಪಡೆದು ಸಂಕ್ರಾಂತಿ ಹಬ್ಬಕ್ಕೊಂದು ಮೆರುಗು ತುಂಬುತ್ತಿದೆ. ಬಹುಷಃ ಒಂದು ಕ್ರೇಜ್ ಸೃಷ್ಟಿಸುತ್ತಿದೆ ಎನ್ನಬಹುದೇನೋ. ಮಕರ ಸಂಕ್ರಮಣದ ದಿನಕ್ಕೂ ಮೊದಲು ನಮ್ಮೂರಿನಲ್ಲಿನ ಬಹುತೇಕ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರುಗಳು ಅಷ್ಟೂ ದಿನಗಳ ಕಾಲ ಕೂಡಿಟ್ಟ ಉಳಿತಾಯದಲ್ಲೊಂದು ಕಿರು ಪ್ರವಾಸ ಹಮ್ಮಿಕೊಳ್ಳುತ್ತಾರೆ. ನಮ್ಮ ಊರಿಂದ ಹೊರಟ ಪಿಕ್ ನಿಕ್ ಪ್ರಯಾಣ, ತುಂಗಭದ್ರೆಯ ತಟದಲ್ಲಿ ತಂಗಿ ಪುಣ್ಯಸ್ನಾನ ಮತ್ತು ಪುಣ್ಯ ಪೂಜಾಭಿಷೇಕ, ಪುಣ್ಯ ಕ್ಷೇತ್ರ ದರ್ಶನದ ಜೊತೆಗೆ ಎಳ್ಳುಬೆಲ್ಲ ವಿನಿಮಯಗೊಂಡು ಹೊಸ ಆತ್ಮವಿಶ್ವಾಸದೊಂದಿಗೆ ಕಳೆದ ಕಾಲದ ಕಹಿಯನ್ನು ಮರೆತು ಮನೆಗೆ ಮರಳುತ್ತಿದ್ದರು. ಈ ರೀತಿಯ ಪರ್ವ ಶುರುವಾದ ಮೇಲೆ ಇದ್ದುದರಲ್ಲಿಯೇ ಇಂಥಹ ಅವಕಾಶವನ್ನು ಸದುಪಯೋಗಪಡಿಸಿಕೊಂಡವರಲ್ಲಿ ಪುರುಷರ ಪಾಲನ್ನೂ ಮರೆಯುವಂತಿಲ್ಲ.

ತುಂಗಭದ್ರೆಯ ಹಿನ್ನೀರಿನ ಪ್ರದೇಶಗಳಲ್ಲಿ ಪುಣ್ಯ ಕ್ಷೇತ್ರವೂ ಸೇರಿದ್ದೆಂದರೆ ಅದು ಮದಲಗಟ್ಟಿ, ಈ ಮದಲಗಟ್ಟಿ ಎನ್ನುವ ಗ್ರಾಮ ನಮಗೆ ಹತ್ತಿರವಾಗುತ್ತೆ. ಹೂವಿನ ಹಡಗಲಿ ತಾಲೂಕಿನ ಈ ಕ್ಷೇತ್ರದಲ್ಲಿ ಆಂಜನೇಯನ ದೇವಸ್ಥಾನ ಚಿರಪರಿಚಿತ. ಈ ದೇವಸ್ಥಾನಕ್ಕೆ ಹೊರಡಲು ಸಂಕ್ರಾಂತಿ ಹತ್ತಿರ ಬರುತ್ತಲೇ ಆಯಾ ವಯೋಮಾನದ ಸ್ನೇಹ ವೃತ್ತಗಳು ತಂತಾನೇ ನಿರ್ಮಿತಗೊಂಡಿರುತ್ತವೆ. ನಮ್ಮೂರಿನ ಬಹುತೇಕ ಅಂಥಹ ಎಲ್ಲ ತಂಡಗಳೂ ಒಂದೇ ಪುಣ್ಯ ಕ್ಷೇತ್ರದಲ್ಲಿಯೇ ಇಡೀ ದಿನ ಬೀಡುಬಿಟ್ಟರೂ ಒಂದು ತಂಡದವರನ್ನು ಮತ್ತೊಂದು ತಂಡದವರು ಮುಖಾಮುಖಿಯಾಗಿದ್ದು ತುಂಬಾತಿತುಂಬ ವಿರಳ. ಹಾಗಂತ ಆ ಕ್ಷೇತ್ರದಲ್ಲಿ ಅಂದು ಸೇರುವ ಜನಸಂದಣಿ ಕಾರಣವಲ್ಲ, ನಿಜವಾದ ಕಾರಣವೇನೆಂದರೆ ಈ ಸಂಕ್ರಾಂತಿಯ ಆಚರಣೆಗೆ ಹೊರಡುವ ತಂಡಗಳಲ್ಲಿ, ‘ಮೊದಲು ಪುಣ್ಯ ಸ್ನಾನ, ದೇವರ ದರ್ಶನ,ಎಳ್ಳುಬೆಲ್ಲ ತಿಂದು ಒಳ್ಳೇ ಮಾತಾಡೋಣ’ ಎನ್ನುವ ತಂಡವೂ ಇರುತ್ತೆ.
‘ಸಂಕ್ರಾಂತೀಲಿ ಹೊಳಿ ಸ್ನಾನಾನೇ ಶ್ರೇಷ್ಠ. ತೀರಾ ದೇವರ ದರ್ಶನ ಮಾಡಲೇಬೇಕಂತೇನಿಲ್ಲ ಎಳ್ಳುಬೆಲ್ಲ ಬೇಕಿದ್ರೆ ಥೇಟ್ರಲ್ಲಿ ಕೂತ್ಕೊಂಡು ತಿಂದ್ರೂ ನಡೆಯುತ್ತೆ’ ಎನ್ನುವ ನಿರ್ಧಾರದ ತಂಡವೂ ಇರುತ್ತೆ. ‘ಲೇ ತಮ್ಮಾ ಬರೋವಾಗ ಮಾತ್ರ ನಿಮ್ಮ ಜೊತೆ ಬರ್ತೀನಿ ಅಲ್ಲಿಗೆ ಹೋದ ಮೇಲೆ ನಮ್ಮ ಜೀವ ಕಲಿತೈತಿ (ಭಾವೀ ಪತ್ನಿ ) ಅಲ್ಲಿಂದ ವಾಪಾಸ್ ಬರೋಕ್ಕೆ ಮಾತ್ರ ನನ್ನ ದಾರಿ ಕಾಯಬೇಡ್ರಿ’ ಎನ್ನುವವರೂ ಇರ್ತಾರೆ, ‘ಬರೋವಾಗ ಕುಟುಂಬ ಸಮೇತ ಬರ್ತೀನಿ ಪೂಜೆ ಮುಗಿಸ್ಕಂಡು ಅವ್ರನ್ನ ನಮ್ಮೂರಿಂದ ಬಂದಿರ್ತಾರಲ್ಲ ಸಂಘದ ಹೆಣ್ಮಕ್ಳು ಅವ್ರ ಹತ್ರ ಬಿಟ್ಟು ನೇರಾ ನಿಮ್ಮ ಹತ್ರ ಬರ್ತಿನಿ ಆಟ ಎಲ್ಲಿ ಚಾಲೂ ಮಾಡಿರ್ತೀರಿ ಹೇಳ್ರಪ್ಪಾ’ ಎನ್ನುವವರೂ ಇರ್ತಾರೆ. ಈ ಮೇಲೆ ಹೇಳಿದ ಬಹುತೇಕ ಮನಸ್ಥಿತಿಯ ವ್ಯಕ್ತಿಗಳಲ್ಲಿ ಮಹತ್ವದ ಹಬ್ಬದ ಜೊತೆಗೆ ಮೋಜಿನ ಗಾಜೂ ಮಿಂಚುತ್ತಿರುತ್ತೆ.
ಅದಕ್ಕೆ ಸಂಕ್ರಾಂತಿ ಆಚರಣೆಯ ಪರಿಸರವೂ, ಪರಿಸ್ಥಿತಿಯೂ ಚೂರು ಪೂರಕವಾಗಿರುತ್ತೆ. ಅಲ್ಲದೆ ಒಟ್ಟಾರೆ ಪ್ರವಾಸಕ್ಕೆ ಹೋಗದೇನೆ ಮನೆಯಲ್ಲಿಯೇ ಮಹಾ ಪ್ರಸಾದವನ್ನು ತೆಗೆದುಕೊಂಡು ಟಿವಿಗಳಲ್ಲಿ ಪ್ರಸಾರವಾಗುವ ಸಂಕ್ರಾಂತಿ ವಿಶೇಷ ಕಾರ್ಯಕ್ರಮಗಳನ್ನು ಸವಿಯುತ್ತಾ ಮನೆಯಲ್ಲಿನ ಸಿಹಿಯುಂಡು ಹೊತ್ತು ಕಳೆಯುವವರೇನೂ ಕಡಿಮೆ ಸಂಖ್ಯೆಯಲ್ಲಿಲ್ಲ.
ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯಲ್ಲಿ ಹಂಪೆ,ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ, ತುಂಗಭದ್ರೆ ಹರಿಯುವ ತಟದುದ್ದಕ್ಕೂ ಇರುವ ಪುಣ್ಯ ಕ್ರೇತ್ರಗಳಲ್ಲಿ ಮತ್ತು ಜಿಲ್ಲೆಯ ಪ್ರತೀ ತಾಲೂಕುಗಳಲ್ಲಿ ಪೂಜಾ ಸಾಮಾಗ್ರಿಗಳ, ಎಳ್ಳುಬೆಲ್ಲದ, ಸಕ್ಕರೆ ಆರತಿ ಬೊಂಬೆಗಳ, ಕಬ್ಬಿನ ಕಂಬಗಳ, ತರೇವಾರಿ ಹೂ, ಕೇದಿಗೆ ಇವುಗಳ ವ್ಯಾಪಾರದಿಂದ ಸಣ್ಣ ವ್ಯಾಪಾರಿಗಳು ಹಾಕಿದ ಬಂಡವಾಳದ ಮೇಲೊಂದಿಷ್ಟು ಲಾಭವನ್ನೂ ಪಡೆಯುತ್ತಿರುವುದು ಹಬ್ಬದ ಹರ್ಷವನ್ನು ಇಮ್ಮಡಿಗೊಳಿಸುತ್ತಿರುವುದೂ ಉಂಟು.
ಒಂದರ್ಥದಲ್ಲಿ ತೀರಾ ಹಳ್ಳಿಗಳ ಮಟ್ಟದಲ್ಲೂ ಸಂಕ್ರಾಂತಿ ಆಚರಣೆಗೆ ಮೆರಗು ಪಡೆಯಲು ದೂರದರ್ಶನದ ಪಾತ್ರವೂ ಉಂಟು, ಐಯ್ಯಪ್ಪ ಸ್ವಾಮಿಯ ಜ್ಯೋತಿ ದರ್ಶನದ ಶಕ್ತಿಯೂ ಉಂಟು. ಈಗಲೂ ನಮ್ಮ ಹಳ್ಳಿಯಲ್ಲಿ ಅದೆಷ್ಟೋ ಕುಟುಂಬಗಳಿಗೆ ಸಂಕ್ರಮಣ ಅಂದ್ರೆ ಸಂಜಿ ಮುಂದ ಕೈ ಕಾಲು ಮುಖ ತೊಳಕೊಂಡು ದೇವ್ರ ಮುಂದೆ ದೀಪ ಹಚ್ಚಿ, ಟಿವಿ ಮುಂದೆ ಕುಂತುಬಿಟ್ರ ಸರ್ರಿಯಾಗಿ ಹೊತ್ತು ಮುಳುಗೋ ಟೈಂಗೆ ಟಿವಿಯೊಳಗ ಐಯ್ಯಪ್ಪ ಸ್ವಾಮಿಯ ಜ್ಯೋತಿ ನೋಡಿ ಕೈ ಮುಗೀಬಹುದು ಅಲ್ಲಿಗೆ ಸಂಕ್ರಾಂತಿ ಹಬ್ಬ ಮುಗದ್ಹಾಂಗ’ ಎನ್ನುವವರೂ ಉಂಟು.
ಆದರೆ ತೀರಾ ಇತ್ತೀಚಿಗೆ ವಧು ವರರನ್ನು ನೋಡಿಕೊಳ್ಳಲಿಕ್ಕೂ ನಮ್ಮ ಕಡೆ ಈ ಹಬ್ಬವನ್ನು ಬಳಸಿಕೊಂಡ ಯುವಕರುಂಟು. ‘ಇಳೇವು, ಲಗ್ನದ ವಿಚಾರಗಳನ್ನ ಬ್ಯಾಸಿಗಿ ದಿನಕ್ಕ ನೋಡಿಕೊಂಡ್ರಾಯಿತು, ಒಂದು ಸರತಿ ಗಂಡು ಹೆಣ್ಣು ಒಬ್ಬರಿಗೊಬ್ಬರು ನೋಡಿಕೊಳ್ಳಲಿ, ಸಂಕ್ರಮಣದ ದಿನ ಗುಡೀಗೆ ಬಂದಿರ್ತಾಳ ನೋಡು ನಮ್ಮ ಹುಡುಗಿ ನಿಮ್ಮ ಹುಡುಗನ್ನ ಕಳಿಸಿ ಕೊಡ್ರಿ ’ ಎನ್ನುವ ಮಾತುಗಳನ್ನೂ ಕೇಳಿದ್ದೇನೆ. ಒಂದು ಬಾರಿ ಮಾತ್ರ ತೀರಾ ವಿಪರ್ಯಾಸ ಎನ್ನುವಂಥಹ ಘಟನೆಯನ್ನು ನೋಡಿ ಸಂಕ್ರಾಂತಿ ಹಬ್ಬದಲ್ಲಿ ಖಿನ್ನನಾದದ್ದೂ ಐತೆ.
ಹೀಗೆ ಒಂದು ಸಂಕ್ರಾಂತಿಯ ದಿನ ದೇವಸ್ಥಾನದ ತುಸು ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ‘ನಾಳೆ ಸಂಕ್ರಾಂತಿಗೆ ನಿಕ್ಕಿ ಒಂದು ವರ್ಷ ಆಗುತ್ತೆ ನೋಡು. ಒಂದೇ ಒಂದು ಮಾತೂ ನಮ್ಮಿಬ್ಬರ ನಡುವೆ ಸುಳಿದಾಡಲಿಲ್ಲ. ನನ್ನ ಮನೆಯಂಗಳಕ್ಕೆ ಆಕೆ. ಆಕೆಯ ಓಣಿಯ ಕಡೆ ನಾನು ಒಮ್ಮೆಯೂ ತಿರುಗಿ ನೋಡಲಿಲ್ಲ. ಅವತ್ತು ಸಂಕ್ರಾಂತಿ ಹಬ್ಬದ ದಿನ ಆಕೆಯ ಗೆಳತಿಗೆ ಹೇಳಿ ಕಳಿಸಿದ್ದಕ್ಕೇನೋ ಗೊತ್ತಿಲ್ಲ ಅಂತೂ ದೇವರ ಗುಡಿಯ ಮುಂದೆ ನಿಂತಿದ್ದಾಗ ಎಳ್ಳುಬೆಲ್ಲ ನೀಡಲು ಕೈ ಮುಂದೆ ಚಾಚಿದರೆ ‘ನಿನ್ನ ಎಳ್ಳುಬೆಲ್ಲ ಯಾವಾಳಿಗೆ ಬೇಕು ಹೊಳಿಗೆ ವಸ್ಕೋ ಹೋಗು, ಹೆತ್ತೋರ ಮಾತು ಕೇಳಿ ಕತ್ತು ಕೊಯ್ಯೋರನ್ನ ಇಲ್ಲಿ ಕುಂತಿರಾ ದೇವರಾ ನೋಡಿಕಂತಾನ’ ಅಂತೇಳತಾಳ ಹಿಂಗಾ ಇನ್ನೂ ಅದೆಷ್ಟು ಸಂಕ್ರಾಂತಿಗಳನ್ನ ಕಳೀಬೇಕೋ ಏನೋ ? ಎಂದು ಹಲುಬಿದವನನ್ನೂ ನೋಡಿದ್ದೇನೆ. ಅಲ್ಲಿಗೆ ಸಂಕ್ರಾಂತಿ ಮತ್ತೇನೋ ನೆನಪುಗಳಿಗೂ ಸಾಕ್ಷಿಯಾಗುತ್ತಿದೆ. ಇದೆಲ್ಲಾ ನಮ್ಮ ಕಡೆಯ ಕಥೆಯಾಯ್ತು .
ಎಳ್ಳುಬೆಲ್ಲವನ್ನು ನಮ್ಮ ಆಪ್ತರಿಗಷ್ಟೇ ಅಲ್ಲದೆ ಮನೆಬಾಗಿಲಿಗೆ ಬರುವ ಕೋಲೆ ಬಸವ, ಅಥವಾ ಇತರೆ ರೀತಿ ಬೇಡಿ ಬಂದವರಿಗೆ, ಸಾಧ್ಯವಾದರೆ ನಿಮ್ಮ ಮನೆ ಅಥವಾ ಆಫೀಸಿನ ದಾರಿ ಮಧ್ಯದಲ್ಲೆಲ್ಲೋ ಪುಟ್ ಫಾತ್ ನಲ್ಲಿ ನಿಸ್ಸಹಾಯಕವಾಗಿ ಕುಳಿತ ಹಣ್ಣಣ್ಣು ಜೀವಗಳಿಗೂ ಹಂಚಿದರೆ ಕಲ್ಲು ದೇವರು ಕೂಡಾ ಕಣ್ತೆರೆಯಬಹುದು ನಿಮ್ಮ ಬದುಕಿನಲ್ಲಿ…




0 Comments