ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಇತ್ತೀಚಿಗೆ ಧಾರವಾಡದಲ್ಲಿ ಮಾತನಾಡುತ್ತ ಸರ್ದಾರ್ ವಲ್ಲಬಾಯ್ ಪಟೇಲ್ ಹಾಗೂ ಗಾಂಧಿಯನ್ನು ಪ್ರಸ್ತಾಪಿಸಿದ್ದರು.
ಅದು ಚರ್ಚೆಗೆ ದಾರಿಮಾಡಿಕೊಟ್ಟಿದೆ.
ಸಾಹಿತಿ, ಪತ್ರಕರ್ತ ಜಗದೀಶ ಕೊಪ್ಪ ಅವರು ಈ ಭಾಷಣಕ್ಕೆ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ.
ಇದು ‘ಜುಗಾರಿ ಕ್ರಾಸ್’ – ಚರ್ಚೆಗೆ ಮುಕ್ತವಾದ ವೇದಿಕೆ
ನಿಮ್ಮ ಅಭಿಪ್ರಾಯವನ್ನು avadhimag@gmail.com ಗೆ ಮೇಲ್ ಮಾಡಿ.

ಶ್ರೀ ಎಸ್.ಎಲ್. ಭೈರಪ್ಪನವರಿಗೊಂದು ಕಿವಿಮಾತು.
ಜಗದೀಶ್ ಕೊಪ್ಪ
ಮಾನ್ಯರೇ,
ನಿನ್ನೆ ನೀವು ಧಾರವಾಡದಲ್ಲಿ ಸರ್ದಾರ್ ವಲ್ಲಬಾಯ್ ಪಟೇಲ್ ಕುರಿತು ಮಾತನಾಡುತ್ತಾ ಗಾಂಧಿಯನ್ನು ಪ್ರಸ್ತಾಪಿಸಿ ಅವರನ್ನು ಸರ್ವಾಧಿಕಾರಿಯಂತೆ ಬಿಂಬಿಸಿದ್ದೀರಿ.
ನೀವು ಜನಪ್ರಿಯ ಕಾದಂಬರಿಕಾರರು, ನಿಮ್ಮ ಕಾದಂಬರಿಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಆರಂಭದಲ್ಲಿ ಅಂದರೆ, ೧೯೬೯ ರಲ್ಲಿ ಎಂಟನೆಯ ತರಗತಿಯಲ್ಲಿ ಇದ್ದಾಗ ನಿಮ್ಮ ‘ಧರ್ಮಶ್ರೀ’ ಮತ್ತು ‘ಮತದಾನ’ಕಾದಂಬರಿಗಳ ಮೂಲಕ ಗಂಭೀರ ಓದಿಗೆ ತೊಡಗಿದ ನಾನು ೧೯೭೬ ರ ವರೆಗೆ ಅಂದರೆ ‘ವಂಶವೃಕ್ಷ’ದವರೆಗೆ ಓದಿ ಆನಂತರ ಕೈಬಿಟ್ಟವನು.
ನಿಮ್ಮ ಕಾದಂಬರಿಗಳು ಇಪ್ಪತ್ತು ನಾಲ್ಕು ಗಂಟೆಯೊಳಗೆ ಮರು ಮುದ್ರಣಗೊಳ್ಳುವುದು ಹಾಗೂ ಸೂಪರ್ ಸ್ಟಾರ್ ಎನಿಸಿಕೊಂಡ ನಾಯಕನ ಸಿನಿಮಾ ಮೊದಲ ದಿನ ಕೋಟಿ ರೂಪಾಯಿ ಬಾಚಿತು ಎಂಬ ಸುದ್ದಿ ಎರಡೂ ಒಂದೆ ಎಂದು ಭಾವಿಸಿ ಅವೆಲ್ಲವನ್ನೂ ಸಾರಾ ಸಗಟಾಗಿ ತಿರಸ್ಕರಿಸಿದವನು. ನಿಮ್ಮನ್ನು ಎಂದೂ ಶ್ರೇಷ್ಠ ಕಾದಂಬರಿಕಾರ ಎಂದು ಒಪ್ಪಿಕೊಳ್ಳದ ನಾನು ಬಡವರ ಮತ್ತು ಅನಾಥ ಮಕ್ಕಳ ಕುರಿತಾಗಿ ಅಂತಃಕರಣವುಳ್ಳ ಮನುಷ್ಯ ಎಂಬ ಕಾರಣಕ್ಕಾಗಿ ಅಪಾರವಾಗಿ ಗೌರವಿಸುತ್ತೇನೆ. ನೀವು ಪಡೆಯುವ ಪ್ರಶಸ್ತಿ ಯ ಹಣ, ಸಂಭಾವನೆಯನ್ನು ಎಲ್ಲಿಯೂ ಪ್ರಚಾರಕ್ಕೆ ಎಡೆ ಮಾಡಿಕೊಡದೆ ಮೈಸೂರಿನ ಅನಾಥಾಶ್ರಮಗಳಿಗೆ, ಬಡ ಮಕ್ಕಳ ಶಿಜ್ಷಣಕ್ಕೆ ವಿನಿಯೋಗಿಸಿದ್ದನ್ನು ನಾನು ಬಲ್ಲೆ.

ಆದರೆ, ಕಣ್ಣ ಮುಂದಿನ ವಾಸ್ತವ ಜಗತ್ತನ್ನು ಮತ್ತು ಭಾರತದ ರಾಜಕೀಯ ಇತಿಹಾಸವನ್ನು ಗ್ರಹಿಸುವಲ್ಲಿ ನೀವು ಶತಮೂರ್ಖರಾಗಿದ್ದೀರಿ. ಶತಮಾನಗಳ ಹಿಂದಿನ ಪುರಾಣದ ಕಥೆಗಳನ್ನು ತಂದು ಕಾದಂಬರಿಯಲ್ಲಿ ಕಾಗಕ್ಕ, ಗೂಬಕ್ಕನ ಪಾತ್ರಗಳಂತೆ ಚಿತ್ರಿಸುವ ರೀತಿಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ, ಗಾಂಧೀಜಿಯವರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಗಾಂಧೀಜಿಯವರ ಕುರಿತು ಮಾತನಾಡಲು ನಿಮಗಾಗಲಿ ಅಥವಾ ಅಂಬೇಡ್ಕರ್ ವಾದಿಗಳೆಂಬ ಕೆಲವು ಸ್ವಘೋಷಿತ ದೊಣ್ಣೆ ನಾಯಕರಿಗಾಗಲಿ ಯಾವುದೇ ನೈತಿಕ ಹಕ್ಕಿಲ್ಲ.
ಪುಣೆಯ ಆಗಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿದ್ದ ಸಂದರ್ಭದಲ್ಲಿ ಕಸ್ತೂರಬಾ ನಿಧನರಾದಾಗ, ಅರಮನೆಯ ಹಿಂಭಾಗದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. ಅವರ ಮೈ ಮೇಲಿದ್ದ ಓಲೆ, ತಾಳಿ ಇತ್ಯಾದಿ ಒಡವೆಗಳನ್ನು ಗಾಂಧೀಜಿಯವರು ತಮ್ಮ ಸೊಸೆಯಂದಿರುಗಳಿಗೆ ನೀಡದೆ, ಹರಿಜನ ಬಾಲಕಿಗೆ ನೀಡಿದರು. ಅದು ಕಸ್ತೂರಬಾ ಅವರ ಕೊನೆಯ ಆಸೆಯೂ ಕೂಡ ಆಗಿತ್ತು.
ಇನ್ನು ನೀವು ಸರ್ದಾರ್ ವಲ್ಲಬಾಯ್ ಪಟೇಲ್ ಕುರಿತು ನಿನ್ನೆ ಪುಂಖಾನು ಪುಂಖವಾಗಿ ಪುಂಗಿ ಊದಿದ್ದೀರಿ. ಪಟೇಲ್ ಕುರಿತು ಮಾತನಾಡುವ ಮೊದಲು ನೀವು ಮತ್ತು ನೀವು ಆರಾಧಿಸುವ ಸಂಘ ಪರಿವಾರದ ಬೆಂಕಿ ಹಚ್ಚುವ ವಾನರ ಸೇನೆ ಒಮ್ಮೆ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಗಂಭೀರವಾಗಿ ಓದಿಕೊಳ್ಳುವುದು ಒಳಿತು.
ಪಟೇಲರಿಗೆ ಪ್ರಧಾನ ಮಂತ್ರಿಗಿರಿಯನ್ನು ಗಾಂಧೀಜಿ ತಪ್ಪಿಸಿದರು ಎಂದು ವಿಷ ಕಕ್ಕುವ ನೀವು ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ಪಟೇಲ್ ಜೊತೆಗಿನ ಒಡನಾಟ, ಭಾಂಧವ್ಯ ಹೇಗಿತ್ತು ಎಂದು ಗಮನಿಸಿದ್ದೀರಾ? ನೀವು ಬಹಳ ವರ್ಷ ಗುಜರಾತ್ ನಲ್ಲಿ ಇದ್ದಿರಿ ಎಂದು ಕೇಳಿದ್ದೀನಿ. ಗಾಂಧೀಜಿಯವರ ಆಪ್ತ ಕಾರ್ಯದರ್ಶಿ ಮಹಾದೇಸಾಯಿ ಗುಜರಾತಿ ಭಾಷೆಯಲ್ಲಿ ೨೨ ಸಂಪುಟಗಳ ದಿನಚರಿ ಬರೆದಿದ್ದಾರೆ. ಈ ಕೃತಿಯಲ್ಲಿ ಪಟೇಲ್ ಅವರ ನಿಷ್ಠೆ ದೇಶ ಪ್ರೇಮ, ತನ್ನನ್ನು ಹೆತ್ತ ತಂದೆ ತಾಯಿಗಿಂತ ಗಾಂಧಿ, ಕಸ್ತೂರಬಾ ಅವರನ್ನು ಪ್ರೀತಿಸುತ್ತಿದ್ದ ಪರಿ ದಾಖಲಾಗಿದೆ. ಅದನ್ನು ಓದಿ ನಿಮಗೆ ಅರ್ಥವಾಗುತ್ತದೆ.
ಪಟೇಲರ್ ತಾವು ನಿಧನರಾಗುವ ಹತ್ತು ವಾರಗಳ ಮುಂಚೆ ಅಂದರೆ, ೧೯೫೦ ರ ಅಕ್ಟೋಬರ್ ೨ ರಂದು ಮಾತನಾಡಿದ ಮಾತುಗಳಿವು.
“ನಾನು ಈ ದಿನ ದೇಶದ ಗೃಹ ಸಚಿವನಾಗಿ ನಿಮ್ಮ ಮುಂದೆ ನಿಲ್ಲಲು ಬಾಪು ಮತ್ತು ಅವರ ಕುಟುಂಬದ ಪ್ರೀತಿ ಕಾರಣವಾಗಿದೆ. ಕಸ್ತೂರಬಾ ನನ್ನನ್ನು ಹೆತ್ತ ತಾಯಿಗಿಂತ ಮಿಗಿಲಾಗಿ ಪ್ರೀತಿಸಿದವರು. ನನ್ನ ತಂದೆ ತಾಯಿಗಳಿಗಿಂತ ಹೆಚ್ಚಿನ ಪ್ರೀತಿಯನ್ನು ಬಾಪು ಸನೀಹದಲ್ಲಿ ನಾನು ಗಳಿಸಿದ್ದೇನೆ. ಇದು ನನಗೆ ದೊರೆತ ಭಾಗ್ಯ. ಪ್ರಧಾನಿ ಮಂತ್ರಿ ಹುದ್ದೆ ಕುರಿತು ಹಲವಾರು ಊಹಾ ಪೋಹಗಳು ಚಾಲ್ತಿಯಲ್ಲಿವೆ. ನೆಹರೂ ನಮ್ಮೆಲ್ಲರ ನಾಯಕರು. ಇದು ಬಾಪೂರವರ ಆಯ್ಕೆ. ನಾವೆಲ್ಲರೂ ಬಾಪು ಸೇನೆಯ ನಿಷ್ಟಾವಂತ ಯೋಧರು. ಅವರಿಗೆ ಅವಿಧೇಯತೆ ತೋರಿದರೆ ಅದು ದೇವರಿಗೆ ದ್ರೋಹ ಬಗೆದಂತೆ..” – ಇದು ಪಟೇಲರ ಎದೆಯಾಳದ ಮಾತು.

ಅದೇ ವರ್ಷ ಅಂದರೆ, ೧೯೫೦ ರ ಡಿಸಂಬರ್ ತಿಂಗಳಲ್ಲಿ ಹೃದಯಾಘಾತಕ್ಕೆ ಒಳಗಾದ ಪಟೇಲರು ತಾವು ಸಾಯುವ ಮುನ್ನ ಹೇಳಿದ ಕೊನೆಯ ಮಾತುಗಳಿವು.
“ಬಾಪು ಏಕಾಂಗಿಯಾಗಿ ಇಲ್ಲಿಂದ ಹೊರಟು ಹೋಗಿದ್ದಾರೆ, ನಾನು ಕೂಡಲೇ ಹೋಗಿ ಅವರನ್ನು ಸೇರಿಕೊಳ್ಳಬೇಕು”
ಭೈರಪ್ಪನವರೇ,
ಗಾಂಧೀಜಿಯವರ ಮತ್ತು ಸರ್ದಾರ್ ಪಟೇಲ್ ರವರ ತಂದೆ ಮಗನಂತಹ ಬಾಂಧವ್ಯಕ್ಕೆ ಮಸಿ ಬಳಿಯುವ ಮುನ್ನ ಇತಿಹಾಸವನ್ನು ಮುಕ್ತ ಮನಸ್ಸಿನಿಂದ ಗ್ರಹಿಸುವುದನ್ನು ಕಲಿಯಿರಿ. ನಾನು ನಿಮ್ಮ ಹಾಗೆ ಕಾಗಕ್ಕ ಗೂಬಕ್ಕನ ಕಥೆ ಹೇಳುವ ಗಿರಾಕಿಯಲ್ಲ. ನೀವು ಮತ್ತು ಪಟೇಲರನ್ನು ಆರಾಧಿಸುವ ಸಂಘ ಪರಿವಾರದವರು ಸರ್ದಾರ್ ವಲ್ಲಬಾಯ್ ಪಟೇಲ್ ಕುರಿತು ವಿ. ಶಂಕರ್ ಎಂಬುವರು ಬರೆದಿರುವ ಎರಡು ಸಂಪುಟಗಳ ಕೃತಿ ಹಾಗೂ ೧೯೭೫ ರಲ್ಲಿ ಮ್ಯಾಕ್ ಮಿಲನ್ ಸಂಸ್ಥೆ ಪ್ರಕಟಿಸಿರುವ My Reminiscence of Sardar Vallabai Patel ಕೃತಿಯನ್ನು ಓದುವುದು ಒಳಿತು.
ಏಕೆಂದರೆ, ಈ ಇಳಿವಯಸ್ಸಿನಲ್ಲಿ ನೀವು ಕಕ್ಕುತ್ತಿರುವ ವಿಷವನ್ನು ಅಮೃತವೆಂದು ಭಾವಿಸಿ ಕುಡಿಯವ ಸಂತಾನ ಹೆಚ್ಚಾಗಿದೆ. ಇದು ಭಾರತದಂತಹ ಬಹುತ್ವದ ನೆಲಕ್ಕೆ ಒಳ್ಳೆಯದಲ್ಲ. ನಾನೀಗ ತಿಂಗಳಿಗೆ ಇಪ್ಪತ್ತು ದಿನ ಮೈಸೂರಿನಲ್ಲಿರುತ್ತೇನೆ. ನನ್ನ ಬಳಿ ಗಾಂಧೀಜಿ ಕುರಿತು ನೂರಕ್ಕೂ ಹೆಚ್ಚು ಮಹತ್ವದ ಕೃತಿಗಳಿವೆ. ನಿಮಗೆ ಓದುವ ಆಸಕ್ತಿ ಇದ್ದರೆ ಓದಲು ನಿಮಗೆ ನೀಡಬಲ್ಲೆ.
ಇಂತಿ ಪ್ರೀತಿ ಮತ್ತು ದ್ವೇಷ ವಿಲ್ಲದ
ನಿಮ್ಮವ
ಜಗದೀಶ್ ಕೊಪ್ಪ






ಹಿರಿಯ ಜೀವ ಯಾವುದಾದರಾಗಲೀ ಈ ರೀತಿ ಬಾಯಿಗೆ ಬಂದಂತೆ ಹೀನಾಯವಾಗಿ ಬರೆದಿರುವ ನೀವು ಯಾರೆಂದು ಇಲ್ಲಿಯವರೆಗೂ ನನಗೆ ತಿಳಿದಿಲ್ಲ.. ತಿಳಿಯುವ ಗೋಜಿಗೂ ನಾನು ಹೋಗುವುದಿಲ್ಲ… ಗಾಂಧಿಯ ಪರವಾದ ನಿಮ್ಮ ನಿಲುವುಗಳೇನೆ ಇರಲಿ ಅದನ್ನು ಮಾತ್ರ ಇಲ್ಲಿ ದಾಖಲಿಸಿದ್ದರೆ ಚೆನ್ನಾಗಿರುತ್ತಿತ್ತು..ಬದಲಿಗೆ ಹಿರಿಯ ಜೀವಕ್ಕೆ ಈ ರೀತಿ ಅವಳೇಹನ ಮಾಡಿರುವ ನೀವು ಹಾಗೂ ಅವಾಚ್ಯ ಪದಗಳ ಬಳಕೆಯ ಈ ಬರಹ ಎರಡೂ ತುಚ್ಛವೆನಿಸಿದ್ದಂತೂ ಸತ್ಯ…
ನೀವೆಷ್ಟೇ ದೊಡ್ಡವರಾದರೂ ಸರಿಯೇ ಹಿರಿತನಕ್ಕೆ ಅವರ ಸಾಹಿತ್ಯ ಸಾಧನೆಗೆ ಬೆಲೆ ಕೊಡುವುದನ್ನು ಮೊದಲು ಕಲಿಯಿರಿ…
As Jagadessh Koppa can have his views about Gandhi and Patel, so can SLB have his views about them. Jagadessh does not even have the decency to address a noted and popular elderly thinker/author of kannada, poorly reflects on Jagadeesh’s upbrining and culture. It is high time we removed the halo from the fake Mahatma and the Sarkari Chacha and objectively analyse what they really did before and after the Independence.
Jagadessh does not even have the decency to address a noted and popular elderly thinker/author of kannada ಅನ್ನುತ್ತೀರಿ….ಸರಿ..ಆದರೆ fake Mahatma and the Sarkari Chacha ಅನ್ನುತ್ತೀರಿ..FAKE MAHATMA…SARKARAI CHACHA….ತಮ್ಮ ಬದುಕಿನ ಒಂಬತ್ತು ವರುಷಗಳು ಮಿಕ್ಕು ಜೈಲಿನಲ್ಲಿದ್ದ ನೆಹರು ಬಗ್ಗೆ…ಅಲ್ಲದೆ…ತನ್ನ ಜೀವನವನ್ನೇ ಭಾರತಕ್ಕಾಗಿ ಮುಡುಪಾಗಿಟ್ಟ ಗಾಂಧೀಜಿಯ ಬಗ್ಗೆ ನಿಮ್ಮ ಮಾತು ಸರಿಯೇ ,,,ಆತ್ಮಾಲೋಕನ ಮಾಡಿಕೊಳ್ಳಿ…
ಜಗದೀಶ್ ಕೊಪ್ಪ ಅವರೇ ನಿಮ್ಮ ಲೇಖನ ಓದಿ ಮರೆತು ಬಿಡಬೇಕು ಅನ್ಕೊಂಡೆ.ಆದರೆ ಆಗಲಿಲ್ಲ.ಗಾಂಧಿಜೀಯವರ ಬಗ್ಗೆ ಇಷ್ಟು ಆಳವಾಗಿ ಅಭ್ಯಸಿಸಿ, ಅವರ ಬಗ್ಗೆ ಗಾಢವಾದ ಅಭಿಮಾನ ಹೊಂದಿರುವ ನೀವು ಅವರ ಸನ್ನಡತೆಯ ಒಂದೆಳೆಯನ್ನಾದರೂ ನಿಮ್ಮದಾಗಿಸಿ ಕೊಂಡಿದ್ದರೆ ಅದಕ್ಕೆ ಒಂದು ಸಾರ್ಥಕತೆ ಇರುತ್ತಿತ್ತು. ಒಬ್ಬ ಸಿನಿಮಾ ನಾಯಕನ ನಟನೆಗೂ ಭೈರಪ್ಪನವರ ಬರವಣಿಗೆಗೂ ಒಂದೇ ಮಾತಿನಲ್ಲಿ ಯಾವುದೇ ಪ್ರತಿಭೆಯ ಅಗತ್ಯವಿಲ್ಲ ಎಂದು ಸಾರಾಸಗಟಾಗಿ ಹೇಳಿಬಿಟ್ಟಿರಲ್ಲ !!ಇಷ್ಟ ಸಾಕು ನಿಮ್ಮ ಪ್ರತಿಭೆಯ ಆಳ ಅಳಿಯಲು.ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ.ಆದರೆ ಅದಕ್ಕೆ ಮರ್ಯಾದೆಯ ಒಂದು ಚೌಕಟ್ಟು ಇದೆ.ಮರೀಬೇಡಿ ಅದನ. ಅವರು ಕಾದಂಬರಿ ಓದೀರಾ ನೆಟ್ಟಗೆ? ಕಾಗಕ್ಕ ಗುಬ್ಬಕ್ಕನ ಆ ಕಥೆಯ ಒಂದು ಸಾಲಿಗೆ ಸರಿದೂಗಿಸುವ ಒಂದು ಸಾಲು ಬರೆದರೆ ಬೇಕಾದಷ್ಟಾಯ್ತು.ವಯಸ್ಸು, ಸಾಧನೆ ಯ ಪರಿವೆ ಇಲ್ಲದೇ ಈ ಪರಿ ಬರೆಯುವುದು ಸಲ್ಲ.ನಾವೂ ಎಲ್ಲಾ ಗಾಂಧೀಜಿಯವರ ಅಭಿಮಾನಿಗಳು.ನಮ್ಮ ದೇಶದ ಇತಿಹಾಸ, ಆದರ್ಶಗಳ ಪರಿಜ್ಞಾನ ಉಳ್ಳವರು.ನಿಮಗೆ ಹೇಳಬೇಕಾದ್ದನ್ನು ಒಂದು ಸೌಜನ್ಯತೆ ಯ ಪರಿಭಾಷೆಯಲ್ಲಿ ಹೇಳಿದ್ದರೆ ಅದಕ್ಕೊಂದು ಅರ್ಥ, ಬೆಲೆ ಇರುತ್ತಿತ್ತು.ಭೈರಪ್ಪನವರಿಗೆ ಪುಸ್ತಕ ಎರವಲು ಕೊಡೋ ಬದ್ಲು ನೀವೇ ಇನ್ನೊಮ್ಮೆ ಓದಿ ನೋಡಿ.ಸಾಧನೆ, ಹಿರಿತನಕ್ಕೆ ಗೌರವ ಕೊಡುವ ಬುದ್ಧಿ,ತಿಳು ತಿಳುವಳಿಕೆ ಬಂದೀತು
how you have rights to say something different about patel and gandhi relationship Dr Bairappa too has same rights to comment on them. India being a diverse country has its own capability to digest and flourish diverse thinking from diverse people.
ಭೈರಪ್ಪನವರು ಗಾಂಧೀಜಿ ಯನ್ನು ವಿರೋಧಿಸುವಂತೆಯೇ ನೀವೂ ಅಬ್ಬರದ ಭಾಷೆ ಉಪಯೋಗಿಸಿದರೆ ಸರಿಯೇ? ಇದು ಗಾಂಧಿ ಮಾರ್ಗ ಅಲ್ಲವಲ್ಲಾ ಸಾರ್!
ಈ ಲೇಖನ ಓದುವುದಕ್ಕೆ ಮುಂಚೆ ಭೈರಪ್ಪನವರ ಪಟೇಲರ ಬಗ್ಗೆ ಇತಿಹಾಸ ತಿರುಚಿದ ಹೇಳಿಕೆಯ ವರದಿಯನ್ನು ಓದಿದ್ದೆ. ಅಂಥ ಹೇಳಿಕೆ ಅವರಿಂದ ಮೊದಲು ಬಂದದ್ದಲ್ಲ. ಉದಾಹರಣೆಗೆ ಮೋದಿ ಸರ್ಕಾರ ಇನ್ನೂ ಮೂರು ಬಾರಿ ಅಧಿಕಾರಕ್ಕೆ ಬರಲಿ, ಹಾಗೆ ಆಗದಿದ್ದರೆ ಭಾರತ ದೇಶವು ಪಾಕಿಸ್ತಾನ, ಚೀನಾ ಪಾಲಾಗುತ್ತದೆ ಎಂದು ಹೇಳಿದ್ದರು ! ( ಪ್ರಜಾವಾಣಿ ೨೧ ನವೆಂಬರ್ ೨೦೧೮), ಅದಕ್ಕೆ ಪ್ರತ್ಯುತ್ತರವಾಗಿ ನಾನು ವಾಚಕರವಾಣಿಗೆ ಪತ್ರ ಬರೆದಿದ್ದೆ. ಪ್ರಕಟವಾಗಿತ್ತು. ಸಡಿಲ ನಾಲಿಗೆಯ ರಾಜಕಾರಣಿಗಳಂತೆ ಸಾಹಿತಿಗಳು ಇಂಥ ಅಸಂಬದ್ಧ ಹೇಳಿಕೆಗಳನ್ನು ಕೊಟ್ಟು ಜನಸಾಮಾನ್ಯರನ್ನು, ಅಭಿಮಾನಿಗಳನ್ನು ತಬ್ಬಿಬ್ಬುಗೊಳಿಸಬಾರದೆಂದು ಬರೆದಿದ್ದೆ ( ವಾಚಕರವಾಣಿ ೨೨ ೧೧ ೨೦೧೮). ಕನ್ನಡಿಗರು ಅವರ ಲೇಖನಗಳನ್ನು ಮೆಚ್ಚಿದ್ದಾರೆ. ಅವರೆಲ್ಲ ಸಾಹಿತ್ಯದ ಅಭಿಮಾನಿಗಳು. ಅಂಥ ಭೈರಪ್ಪರಂತಹ ಹಿರಿಯರು ವಯಸ್ಸಾದ ಹಾಗೆ ಪ್ರಬುದ್ಧತೆಯಿಂದ ಮೆರೆಯಬೇಕು. ಅದು ಬಿಟ್ಟು ತಮ್ಮ ಅಭೀಷ್ಟೆಯಂತೆ ನಡೆಯುವ, ನಡೆಯುತ್ತಿರುವ ರಾಜಕೀಯ ಮಂದಿಯನ್ನು ಓಲೈಸಲು ವೃಥಾ ಸುಳ್ಳು, ಅಸಂಬದ್ದ ಹೇಳಿಕೆಗಳನ್ನು ಕೊಡಬಾರದು. ಅದು ಅವರ ವಯಸ್ಸಿಗೆ ತಕ್ಕುದ್ದಲ್ಲ.
Your view can be accepted even having full respect to SLB. But Jagadeesh koppa has simply shown that he hates SLB.