
ಉದಯ ಗಾಂವಕಾರ
ಪ್ರತಿಯೊಂದು ಅಭಿವ್ಯಕ್ತಿಯೂ ತನ್ನ ಉತ್ಕೃಷ್ಟ ಎತ್ತರವನ್ನು ತಲುಪಿದಾಗ ಕವಿತೆಯಾಗುತ್ತದೆ. ಡಾ. ಶ್ರೀಪಾದ ಭಟ್ಟರು ತನ್ನ ನಾಟಕಗಳನ್ನು ಪ್ರತಿಮೆಗಳ ಮೂಲಕ ಕಟ್ಟುತ್ತಾರೆ. ಎಲ್ಲವನ್ನೂ ಹೇಳದೇ ನೋಡುಗನ ಭಾವಲೋಕದಲ್ಲಿ ದೃಶ್ಯಗಳನ್ನು ಮುಂದುವರಿಸುತ್ತಾರೆ. ಸಾಲುಗಳ ನಡುವಿರುವ ಅರ್ಥವನ್ನು ಹುಡುಕಾಡುತ್ತಾರೆ. ಅವರ ನಾಟಕಗಳೆಲ್ಲ ಚೆಂದದ ಕವಿತೆಗಳೇ!
ಶ್ರೀಪಾದರು ನಾಟಕವಾಡಲೆಂದೇ ಉಸಿರಾಡುವವರು. ಜಿ. ಎಸ್ ಅವಧಾನಿ, ಡಾ. ಆರ್ ವಿ ಭಂಡಾರಿಯಂತವರ ಒಡನಾಟದಲ್ಲಿ ತನ್ನ ಯೋಚನೆಗಳಿಗೆ ಸ್ಪಷ್ಟತೆಯನ್ನು ಪಡೆದುಕೊಂಡು ಎದೆಯ ತೇವದಲ್ಲಿ ಸಂವಹನ ನಡೆಸಲು ಸಾಹಿತ್ಯ, ನಾಟಕ ಮುಂತಾದ ಸೃಜನಶೀಲ ಅಭಿವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬ ತಿಳಿವನ್ನು ತಮ್ಮದಾಗಿಸಿಕೊಂಡವರು.
ತನ್ನ ಮಾಸ್ತರಿಕೆ ವೃತ್ತಿಯ ನಿಮಿತ್ತ ಹಾವೇರಿಯ ಶೇಷಗಿರಿಯಲ್ಲಿರುವಾಗಲೂ ಅಲ್ಲಿ ನಾಟಕದ ಕಂಪನ್ನು ಪಸರಿಸಿದ್ದು ಮಾತ್ರವಲ್ಲ. ಹಾವೇರಿಯನ್ನು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಗುರುತಿಸಿಕೊಳ್ಳಲು ನೆರವಾಗುವಂತಹ ಶೇಷಗಿರಿಯ ರಂಗಮಂದಿರದ ನಿರ್ಮಾಣಕ್ಕೆ ಸ್ಪೂರ್ತಿಯಾದವರು ಡಾ. ಶ್ರೀಪಾದ ಭಟ್. ಅಲ್ಲಿ ತನ್ನ ಶಾಲಾ ಮಕ್ಕಳಿಗಾಗಿ ಅವರು ಅನೇಕ ನಾಟಕಗಳನ್ನು ನಿರ್ದೇಶಿಸಿದರು.
ಅವರು ನಿರ್ದೇಶಿಸಿದ `ದೇವರ ಕಾಡು’ ರಾಷ್ಟ್ರ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಮೊದಲ ಸ್ಥಾನ ಪಡೆಯಿತು. ಶ್ರೀಪಾದರು ನಿರ್ದೇಶಿಸಿದ ಕರ್ಣಭಾರ, ಚಿತ್ರಾ ನಾಟಕಗಳು ರಾಷ್ರೀಯ ನಾಟಕಶಾಲೆಯ ಭಾರತೀಯ ನಾಟಕ ಮಹೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಅವರ ಕಂಸಾಯಣ, ರೆಕ್ಕೆ ಕಟ್ಟುವಿರಾ, ಮಕ್ಕಳ ರವೀಂದ್ರ ನಾಟಕಗಳು ದೆಹಲಿಯ ಜಶ್ನೆ ಬಚಪನ್ ನಾಟಕೋತ್ಸವದಲ್ಲಿ ಪ್ರದರ್ಶಿತವಾಗಿವೆ.
ಕನ್ನಡದ ಕಥನ ಕಾವ್ಯಗಳನ್ನು ರಂಗದ ಮೇಲೆ ಓದುವ ಕಾವ್ಯರಂಗ ಎಂಬ ಹೊಸ ರಂಗಮಾರ್ಗವನ್ನೇ ಕನ್ನಡ ರಂಗಭೂಮಿಗೆ ಶ್ರೀಪಾದ ನೀಡಿದರು. ನಾಟಕ ಅಕಾಡೆಮಿಯ ಸಿ.ಜಿ.ಕೆ ಪ್ರಶಸ್ತಿ, ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿಗಳು ಶ್ರೀಪಾದರನ್ನು ಹುಡುಕಿಕೊಂಡು ಬಂದಿವೆ. ಸಮುದಾಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ತನ್ನ ತಿಳಿವು-ತೀವ್ರತೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ತನ್ನ ಕಸುಬುದಾರಿಕೆಯ ಮೂಲಕ ಸಮುದಾಯದ ಕಲಾಭಿವ್ಯಕ್ತಿಗೆ ಶ್ರೀಪಾದರು ಘನತೆಯನ್ನು ಒದಗಿಸಿರುವರು.
ಶ್ರೀಪಾದರು ಪೌರಾಣಿಕ ಕಥಾಭಾಗವೊಂದನ್ನು ಎತ್ತಿಕೊಂಡಾಗಲೂ ಸಮಕಾಲೀನ ವಿಷಯಗಳನ್ನು ಚರ್ಚಿಸುತ್ತಾರೆ. ಅದು ಬರಿಯ ಒಣ ಶಬ್ದಾಡಂಬರವಾಗದಂತೆಯೂ ನೋಡಿಕೊಳ್ಳುತ್ತಾರೆ. ಅವರ ಮಹಿಳಾ ಭಾರತ ನಾಟಕವು ವರ್ತಮಾನ, ಭೂತ ಮತ್ತು ಭವಿಷ್ಯತ್ತುಗಳನ್ನು ಒಂದಾಗಿಸುತ್ತಾ ಕಾಲದ ಎಲ್ಲೆಗಳನ್ನು ನಾಜೂಕಾಗಿ ಮುರಿಯುತ್ತದೆ.
ಸಮುದಾಯ ರೆಪರ್ಟರಿಗಾಗಿ ಅವರು ನಿರ್ದೇಶಿಸಿದ ಮೃತ್ಯುಂಜಯ ನಾಟಕದಲ್ಲಿ ಶ್ರೀಪಾದರು ಬರೀ ಕಾಲದ ಮೇರೆಗಳನ್ನು ಮಾತ್ರ ಮೀರುವುದಿಲ್ಲ; ಭೌಗೋಳಿಕ ಗಡಿಗಳನ್ನೂ ಜನಹೋರಾಟದ ಮಹಾಯಜ್ಞದಲ್ಲಿ ವಿಲೀನಗೊಳಿಸುತ್ತಾರೆ. ಮನುಷ್ಯನ ಸಣ್ಣತನಗಳು ಹೇಗೆ ಕಾಲದೇಶಗಳನ್ನು ಮೀರುತ್ತವೋ ಹಾಗೆ ಮನುಷ್ಯನ ಕಷ್ಟಗಳೂ ಕಾಲಾತೀತವೂ ದೇಶಾತೀತವೂ ಆಗಿರುತ್ತವೆ ಎಂಬುದನ್ನು ಸೂಚಿಸುತ್ತ ಅವರ ನಾಟಕಗಳು ನಮ್ಮ ಶತ್ರುವನ್ನು ಗುರುತಿಸಿಕೊಳ್ಳಲು ಸಮಸ್ತ ಮನುಷ್ಯ ಕುಲವೇ ಒಟ್ಟಿಗೆ ಸೇರಬೇಕೆಂಬ ಹೆಬ್ಬಯಕೆಯನ್ನು ವ್ಯಕ್ತಪಡಿಸುತ್ತವೆ.
ಶ್ರೀಪಾದರು ಒಬ್ಬರೇ ಇರುವವರಲ್ಲ. ನಾಲ್ಕು ಜನ ಸೇರಿದಲ್ಲೇ ಇರುವವರು. ಶಿಕ್ಷಕರಿಗಾಗಿ ನಡೆಯುವ ಕಾರ್ಯಾಗಾರಗಳಲ್ಲಿ, ನಾಟಕದ ಸೆಮಿನಾರು, ಚರ್ಚೆಗಳಲ್ಲಿ ಮಾತ್ರವಲ್ಲ ಬೀದಿ ಹೋರಾಟಗಳಲ್ಲೂ ಕಾಣಸಿಗುವವರು. ಸಮಯ ಸಿಕ್ಕಾಗ ಪಂಪನನ್ನೋ, ತಿರುಮಲೇಶರನ್ನೋ ಓದುತ್ತಾ, ಉಮೇದು ಬಂದಾಗ ಎಕ್ಕುಂಡಿಯವರನ್ನು ಹಾಡುತ್ತಾ, ಯಾವುದೋ ಊರಿನಲ್ಲಿ ಗುರುತೇ ಇಲ್ಲದ ಗಲ್ಲಿಯಲ್ಲಿ ಸಾಹಿತ್ಯ-ಸಂಸ್ಕೃತಿಗಳ ಮಾತಾಡುತ್ತಾ ಲೋಕವನ್ನೇ ಮರೆಯಬಲ್ಲವರು.
‘ಅವಧಿ’ಯ ಸಹಕಾರದಲ್ಲಿ ಜೂನ್ 15, 16 ಮತ್ತು 17 ರಂದು ಡಾ. ಶ್ರೀಪಾದ ಭಟ್ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ. ಠ್ಯಾಗೋರರ ಕೆಂಪುಕಣಗಿಲೆ ಮತ್ತು ಚಿತ್ರಾ ಹಾಗೂ ಮಾಂಟೋನ ಮಿಸ್ಟೇಕ್ ಆಧರಿಸಿದ ನಾಟಕಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ.
ಶ್ರೀಪಾದರು ಈ ಗೌರವಕ್ಕೆ ತುಂಬು ಅರ್ಹರು.






0 Comments