
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
37
ನಾವು ವಿಶಾಖಪಟ್ಟಣದ ಪ್ರವಾಸ ಮುಗಿಸಿಕೊಂಡು ಬಂದ ಕೆಲ ದಿನಗಳಿಗೇ ಅಶೋಕನೂ ಬಿಜಾಪುರದಿಂದ ಮರಳಿ ಬಂದ. ಅವನು ಊರು ತಲುಪಿದ ಮೇಲೆ ಎರಡು ದಿನ ಅವನ ಅವ್ವ ಮಗನನ್ನು ಕಂಡ ಖುಷಿಯಲ್ಲಿ ಕೊಂಚ ಚೇತರಿಸಿಕೊಂಡರಂತೆ. ಆದರೆ ಅದು ಆರುವ ಮೊದಲು ಒಮ್ಮೆ ಪ್ರಜ್ವಲಿಸಿಬಿಡುವ ದೀಪದಂತೆ ಮಾತ್ರವೇ ಆಗಿ ಅವರ ಇಹಲೋಕ ಯಾತ್ರೆ ಪೂರ್ಣಗೊಂಡಿತಂತೆ.ಆ ಶೋಕದಿಂದ ಹೊರಬರಲು ಸ್ವಭಾವತಃ ಭಾವಜೀವಿಯೇ ಆಗಿದ್ದ ಅಶೋಕನಿಗೆ ಸಾಕಷ್ಟು ದಿನಗಳೇ ಬೇಕಾದವು.
ಇತ್ತ ಶಾಲೆಯಲ್ಲಿ ಬೆನವಿಟ್ಸ್ ಅವರು ಬ್ರೆಖ್ಟ್ ನ ನಾಟಕವನ್ನಾಡಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಶಾಲೆಯ ವಿದ್ಯಾರ್ಥಿಗಳಿಗೆ ಯಾವುದಾದರೂ ಒಂದೇ ಒಂದು ನಾಟಕವನ್ನು ಮಾಡಿಸುವುದಕ್ಕಿಂತ ಐದಾರು ನಾಟಕಗಳಿಂದ ದೃಶ್ಯಭಾಗಗಳನ್ನು ಆರಿಸಿಕೊಂಡು ಒಂದು ದೃಶ್ಯ ಸಮುಚ್ಚಯದಂತೆ ಪ್ರಸ್ತುತ ಪಡಿಸಿದರೆ ಒಳಿತಲ್ಲವೇ ಎಂದು ಬೆನವಿಟ್ಸ್ ಅವರು ಒಂದು ಅಭಿಪ್ರಾಯವನ್ನು ತೇಲಿಬಿಟ್ಟರು. ಇದರಿಂದಾಗುವ ಮುಖ್ಯ ಪ್ರಯೋಜನಗಳು ಎರಡು: ಮೊದಲನೆಯದು, ಬ್ರೆಖ್ಟ್ ನ ಪ್ರಾತಿನಿಧಿಕವೆನ್ನಬಹುದಾದ ನಾಲ್ಕಾರು ನಾಟಕಗಳ ದೃಶ್ಯ ಭಾಗಗಳನ್ನು ಪ್ರದರ್ಶನಕ್ಕೆ ಆರಿಸಿಕೊಂಡಾಗ ಅಷ್ಟೂ ನಾಟಕಗಳ ವಿನ್ಯಾಸದ ಅಧ್ಯಯನಕ್ಕೆ ಅವಕಾಶವಾಗುತ್ತದೆ ಎನ್ನುವುದು; ಮತ್ತೊಂದು, ಈ ಪ್ರಕ್ರಿಯೆಯ ಮೂಲಕ ಶಾಲೆಯ ಬಹಳಷ್ಟು ವಿದ್ಯಾರ್ಥಿಗಳಿಗೆ ಅಭಿನಯಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಅನ್ನುವುದು! ಬಹುಶಃ enemy of the people ನಾಟಕದ ವೇಳೆ ನಾವು ನಡೆಸಿದ ಹೋರಾಟದ ಪುನರಾವರ್ತನೆಯಾಗದಿರಲಿ ಎಂಬ ಕಾರಣವೂ ಇಂಥದೊಂದು ನಿರ್ಧಾರದ ಹಿಂದೆ ಇದ್ದಿರಬಹುದು! ಇರಲಿ.
mother courage, good person of szechwan, the resistable rise of arturo ui, the three penny opera ಹಾಗೂ caucasian chalk circle—ಈ ಐದು ನಾಟಕಗಳ ಆಯ್ದ ದೃಶ್ಯಭಾಗಗಳನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಲು ಬೆನವಿಟ್ಸ್ ತೀರ್ಮಾನಿಸಿದರು.
ಪ್ರಾರಂಭದಲ್ಲಿ ಅವರು ಬ್ರೆಕ್ಟ್ ನ ನಾಟಕಗಳ ಬಗ್ಗೆ, ಅವನ ತಾತ್ವಿಕ ಸಿದ್ಧಾಂತಗಳ ಬಗ್ಗೆ , ಅವನ ಎಪಿಕ್ ಥಿಯೇಟರ್ ಬಗ್ಗೆ ವಿವರಣೆಗಳನ್ನು ನೀಡಿದಾಗಲೇ ಹೊಸ ಅನುಭವದ-ಹೊಸ ಹೊಳವುಗಳ-ಹೊಸ ಜಗತ್ತಿನ ಹೊಸ್ತಿಲಲ್ಲಿ ನಾನು ನಿಂತಿದ್ದೇನೆಂದು ನನಗೆ ಅರಿವಾಗಿಹೋಯಿತು. ಬೆನವಿಟ್ಸ್ ಅವರಂತೂ ಸದಾ ಚಟುವಟಿಕೆಯಿಂದಿರುತ್ತಾ ಎಲ್ಲರಲ್ಲಿ ಉತ್ಸಾಹ—ಲವಲವಿಕೆಗಳನ್ನು ತುಂಬುತ್ತಾ ಓಡಾಡುತ್ತಿದ್ದ ಕ್ರಿಯಾಶೀಲ ವ್ಯಕ್ತಿ.ನಮಗೆ ಶಿಕ್ಷಕಿಯೂ ಆಗಿದ್ದ ರತಿ ಬಾರ್ತೊಲೋಮಿಯೋ ಅನ್ನುವವರು ಬೆನವಿಟ್ಸ್ ಅವರಿಗೆ ಸಹಾಯಕರಾಗಿದ್ದರಲ್ಲದೆ ಒಂದು ರೀತಿಯಲ್ಲಿ ದುಬಾಷಿಯಾಗಿಯೂ ಕೆಲಸ ಮಾಡುತ್ತಿದ್ದರು.

ಬೆನವಿಟ್ಸ್ ಅವರು ಇಂಗ್ಲೀಷ್ ನಲ್ಲೇ ನೀಡುತ್ತಿದ್ದ ಸೂಚನೆಗಳನ್ನು ನಮಗೆ ಅರ್ಥವಾಗುವ ಇಂಗ್ಲೀಷ್ ಗೆ ಅನುವಾದಿಸಿ ಹೇಳುವ ಗುರುತರ ಜವಾಬ್ದಾರಿಯೂ ಅವರ ಹೆಗಲೇರಿತ್ತು! ಬೆನವಿಟ್ಸ್ ಅವರು ಮೂರೂ ವರ್ಷದ ವಿದ್ಯಾರ್ಥಿಗಳನ್ನು ನೋಡಿ—ಪರಿಶೀಲಿಸಿ ತಮ್ಮ ಐದು ನಾಟಕಗಳ ಐದು ದೃಶ್ಯಭಾಗಗಳಿಗೆ ಆಯ್ಕೆ ಮಾಡಿಕೊಂಡ ಕಲಾವಿದರ ಪಟ್ಟಿಯನ್ನು ರತಿ ಮೇಡಂ ಅವರು ತಾಲೀಮಿನ ಸಮಯದಲ್ಲಿ ಪ್ರಕಟಿಸಿದಾಗ ಖುಷಿಯಿಂದ ನಾನು ಮೂರ್ಛೆ ಹೋಗುವುದೊಂದೇ ಬಾಕಿ! “good person of Szechuan” ನಾಟಕದ ದೃಶ್ಯಭಾಗದಲ್ಲಿ ಯಾಂಗ್ ಸುನ್ ನ ಪ್ರಮುಖ ಪಾತ್ರಕ್ಕೆ ನಾನು ಆಯ್ಕೆಯಾಗಿದ್ದೆ! ನನ್ನ ಜತೆಗೆ ಶೆನ್ ತೆ ಯ ಪಾತ್ರ ನಿರ್ವಹಿಸಲು ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದ ದೀಪಾ ಸಾಹಿ ಬೊಹಿದರ್ ಆಯ್ಕೆಯಾಗಿದ್ದಳು. ಆ ದೃಶ್ಯಭಾಗದಲ್ಲಿದ್ದದ್ದು ಅವೆರಡೇ ಪಾತ್ರಗಳು.ಬ್ರೆಖ್ಟನ ನಾಟಕದಲ್ಲಿ ಪಾತ್ರ ವಹಿಸುವ ಮುನ್ನ ಅವನ ನಾಟಕಗಳ ತಾತ್ವಿಕ ತಳಹದಿಯನ್ನು ಅರಿಯುವುದು ತುಂಬಾ ಮುಖ್ಯವಾದ್ದರಿಂದ ಬ್ರೆಖ್ಟ್ ನ ಕುರಿತ ವಿಶೇಷ ಅಧ್ಯಯನ ಆರಂಭವಾಯಿತು.
ನಾನು ಈ ಮೊದಲು ಮುಖ್ಯ ಪಾತ್ರ ನಿರ್ವಹಿಸಿದ್ದ “ಎನಿಮಿ ಆಫ್ ದಿ ಪೀಪಲ್” ವಾಸ್ತವವಾದಿ ನಾಟಕವಾದ್ದರಿಂದ ಹಾಗೂ ಅಲ್ಲಿ Stanslavsky ಯ ಮೆಥಡ್ ಆಕ್ಟಿಂಗ್ ವಿಧಾನವನ್ನು ಅಳವಡಿಸಿಕೊಂಡಿದ್ದರಿಂದ ಪಾತ್ರವನ್ನು ಕಟ್ಟಿ ಬೆಳೆಸುವ ಒಂದು ವಿಶಿಷ್ಟ ಕ್ರಮವನ್ನೇ ಅಳವಡಿಸಿಕೊಳ್ಳುವ ಜರೂರಿತ್ತು. ಪಾತ್ರದೊಂದಿಗೆ ಸಂಪೂರ್ಣ ತಾದಾತ್ಮ್ಯವನ್ನು ಸಾಧಿಸಿ ಪಾತ್ರದ ಭಾವ ಜಗತ್ತಿನ ಒಳಹೊಕ್ಕು ಶೋಧಿಸಿ ಆ ಪಾತ್ರದ ಬದುಕನ್ನೇ ಪರಿಭಾವಿಸಿಕೊಂಡು ಕಟ್ಟಿಕೊಡುವ ಅಗತ್ಯವಿತ್ತು. ಆದರೆ ಈಗ ಇಲ್ಲಿನ ಕ್ರಮ ಸಂಪೂರ್ಣವಾಗಿ ಬೇರೆ!
ಬ್ರೆಖ್ಟ್ ನ ಎಪಿಕ್ ಥಿಯೇಟರ್ ಮಾರ್ಕ್ಸ್ ವಾದದಿಂದ ಪ್ರಭಾವಿತವಾಗಿದ್ದು, ರಂಗದ ಮೇಲೆ ಸಾಮಾಜಿಕ—ನೈತಿಕ ಸಮಸ್ಯೆಗಳನ್ನು ಪ್ರಸ್ತುತ ಪಡಿಸುವಾಗ ಬ್ರೆಖ್ಟ್ ವೀಕ್ಷಕರನ್ನು ಚಿಂತನೆಗೆ ಹಚ್ಚುವುದರ ಮೂಲಕ ಅವರ ಬೌದ್ಧಿಕತೆಯನ್ನು ಮೀಟಲು ಯತ್ನಿಸುತ್ತಾನೆ! ಹಾಗಾಗಿಯೇ ನಟರು ಪಾತ್ರಗಳೊಂದಿಗೆ ಭಾವನಾತ್ಮಕವಾಗಿ ತೊಡಗುವುದಾಗಲೀ ತಾದಾತ್ಮ್ಯವನ್ನು ಸಾಧಿಸಿಕೊಂಡು ಅತೀವ ಸಹಾನುಭೂತಿಯಿಂದಿರುವುದಾಗಲೀ ಇಲ್ಲಿ ಸಲ್ಲ! ಇಲ್ಲಿನ ಸಿದ್ಧಾಂತವೇ alienation—ದೂರೀಕರಣ—ದೂರ ನಿಲ್ಲುವುದು! ಹಾಗೆ ದೂರ ನಿಂತಾಗಲೇ ಪ್ರೇಕ್ಷಕರೂ ಸಹಾ ನಟರು ಕಟ್ಟಿಕೊಡುವ ಪಾತ್ರಗಳಲ್ಲಿ ತಲ್ಲೀನರಾಗದೇ ಪಾತ್ರಗಳಿಗೆ ಮುಖಾಮುಖಿಯಾಗುತ್ತಾ ಹೋಗುತ್ತಾರೆ!
ಹೀಗೆ ಸಂಪೂರ್ಣವಾಗಿ ಬೇರೆಯದೇ ಆದ ಕ್ರಮದಲ್ಲಿ ಸಿದ್ಧತೆಗೆ ತೊಡಗಿದ್ದದ್ದು ಸವಾಲುಗಳನ್ನು ಒಡ್ಡುವುದರ ಜತೆಗೆ ರಂಗಭೂಮಿಯ ಅನಂತ ಸಾಧ್ಯತೆಗಳ ವಿವಿಧ ಪಾತಳಿಗಳನ್ನೂ ಅನಾವರಣಗೊಳಿಸುತ್ತಾ ಹೋಯಿತು;ಒಂದೊಂದು ದಿನದ ತಾಲೀಮೂ ಹೊಸ ಹೊಸ ಹೊಳಹುಗಳ ಸಾಕ್ಷಾತ್ಕಾರ ಮಾಡಿಸುವಲ್ಲಿ ಯಶಸ್ವಿಯಾಗುತ್ತಾ ಹೋಯಿತು.
ಇನ್ನು ಗುಡ್ ಪರ್ಸನ್ ಆಫ್ ಸೆಜು಼ವಾನ್ ನಾಟಕದ ನನ್ನ ಪಾತ್ರದ ಬಗ್ಗೆ ಹೇಳುವುದಾದರೆ: ಪೈಲಟ್ ಆಗುವ ಮಹದಾಸೆ ಹೊಂದಿದ್ದ ಯಾಂಗ್ ಸುನ್ ಒಬ್ಬ ಬಡ ನಿರುದ್ಯೋಗಿ ಯುವಕ; ಕೆಲಸವೂ ಸಿಗದ, ಆಸೆಯೂ ಈಡೇರದ ಹತಾಶ ಸ್ಥಿತಿಯಲ್ಲಿ ಒಂದು ಮಳೆಗಾಲದ ರಾತ್ರಿ ಆತ್ಮಹತ್ಯೆಗೆ ಉದ್ಯುಕ್ತನಾಗುತ್ತಾನೆ. ಆ ಸಂದರ್ಭದಲ್ಲೇ ನಾಟಕದ ಕೇಂದ್ರ ಪಾತ್ರವಾದ ಶೆನ್ ತೆ ಅವನನ್ನು ಅಕಸ್ಮಾತ್ತಾಗಿ ಭೇಟಿಯಾಗಿ ನೇಣುಹಾಕಿಕೊಳ್ಳುವ ಅವನ ಪ್ರಯತ್ನವನ್ನು ತಪ್ಪಿಸಿ,ಉಳಿದು ಬದುಕನ್ನೆದುರಿಸಲು ಮನ ಒಲಿಸುತ್ತಾಳೆ. ಮುಂದೆ ಅವರಿಬ್ಬರ ನಡುವೆ ಪ್ರೀತಿಯೂ ಮೊಳೆಯುತ್ತದೆ.
ತಾಲೀಮಿನ ಪ್ರಾರಂಭದಲ್ಲೇ ಒಂದು ದಿನ ನಾನು ಬೆನವಿಟ್ಸ್ ಅವರನ್ನು ಕೇಳಿದೆ: “ನಾನು ಹೇಗೆ ಈ ಪಾತ್ರಕ್ಕೆ ಸಿದ್ಧನಾಗಬೇಕು? ಭಾವಪೂರ್ಣವಾಗಿ ಅಭಿನಯಿಸುವುದು ಇಲ್ಲಿ—ಈ ಕ್ರಮದಲ್ಲಿ— ನಿಷಿದ್ಧವೇ? ” ಬೆನವಿಟ್ಸ್ ಅವರು ಒಮ್ಮೆ ನಕ್ಕು ಬ್ರೆಖ್ಟನ ಸಿದ್ಧಾಂತದ ಸಾರವನ್ನೇ ಸಾರುವಂತೆ ನುಡಿದರು: ” ಖಂಡಿತ ಅಲ್ಲ! alienation—ದೂರೀಕರಣ ಎಂದರೆ ಖಂಡಿತ ಭಾವ ರಾಹಿತ್ಯವಲ್ಲ! ಭಾವನೆಗಳ ಅಭಿವ್ಯಕ್ತಿ ಆಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ! ಆದರೆ ಆ ಭಾವನೆಗಳ ಹುಚ್ಚುಹೊಳೆಯಲ್ಲಿ ನಟರಾದ ನೀವೂ ಕೊಚ್ಚಿಹೋಗಬಾರದು; ಪ್ರೇಕ್ಷಕರನ್ನೂ ನಿಮ್ಮ ಜೊತೆ ಸೆಳೆದೊಯ್ಯಬಾರದು ಅನ್ನುವುದು ಬಹಳ ಮುಖ್ಯ!
ನಿಮ್ಮಅನುಭವಗಳ ಭಾವಾಭಿವ್ಯಕ್ತಿಯನ್ನು ದೂರದಿಂದ ನೋಡುತ್ತಲೇ ಅದನ್ನು ಪ್ರೇಕ್ಷಕ ಅಭ್ಯಸಿಸಿ ವಿಶ್ಲೇಷಿಸುವುದು ಮುಖ್ಯ!ಮತ್ತು ಅದೇ ಕಾರಣವಾಗಿ ನಿಮ್ಮ ಅಭಿನಯವು ಅನುಭವಗಳ ಸೃಷ್ಟಿಯಂತಾಗದೇ ಬದುಕಿನ ಚಿತ್ರವೊಂದರ ಪ್ರಸ್ತುತಿಯಂತೆ ಭಾಸವಾಗುವುದು ಎಲ್ಲಕ್ಕಿಂತ ಮುಖ್ಯ!” ಬೆನವಿಟ್ಸ್ ರ ಈ ಮಾತುಗಳು ಹೊಸ ವ್ಯಾಖ್ಯಾನವೊಂದರ, ಹೊಸ ತಾತ್ವಿಕ ತೊಡಗುವಿಕೆಯೊಂದರ ಪರಿಚಯವನ್ನು ಸಮರ್ಥವಾಗಿ ಹಾಗೂ ಸಮರ್ಪಕವಾಗಿ ಮಾಡಿಕೊಟ್ಟವು. ಈ ಅಭಿನಯ ಶೈಲಿ ಹೆಚ್ಚು ಜವಾಬ್ದಾರಿಯುತವಾದ್ದು,ಹೆಚ್ಚು ಸಂಯಮವನ್ನು ನಿರೀಕ್ಷಿಸುವಂಥದ್ದು ಹಾಗೂ ಹೆಚ್ಚು ಕ್ಲಿಷ್ಟಕರವಾದ್ದು ಎಂದು ಆರಂಭದಲ್ಲಿ ಭಾಸವಾದರೂ ಕ್ರಮೇಣ ಈ ಶೈಲಿಗೆ ನಾನು ಹೊಂದಿಕೊಂಡೆ.

ಬೆನವಿಟ್ಸ್ ನಿರ್ದೇಶನದ ಈ “ಬ್ರೆಖ್ಟ್ ಆನ್ ಟ್ರಯಲ್” ನಾಟಕ ಪ್ರದರ್ಶನ ನಮ್ಮ ನಾಟಕಶಾಲೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ನಿಸ್ಸಂಶಯವಾಗಿ ಹೇಳಬಹುದು. ನಮ್ಮ ನಾಟಕಕ್ಕೆ, ವೈಯಕ್ತಿಕವಾಗಿ ನನ್ನ ಪಾತ್ರ ನಿರ್ವಹಣೆಗೆ ಸಹೃದಯರಿಂದ ಹಾಗೂ ವಿಮರ್ಶಾ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾದದ್ದು ಒಂದೆಡೆ ಸಂತಸವನ್ನು ತಂದರೆ ಮತ್ತೊಂದೆಡೆ ಅಂಥ ಮಹಾನ್ ನಿರ್ದೇಶಕರ ಸಾರಥ್ಯದಲ್ಲಿ , ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು ನನ್ನ ರಂಗ ಬದುಕಿನ ಒಂದು ಸ್ಮರಣೀಯ ಸಂದರ್ಭವಾಗಿ ದಾಖಲಾಯಿತು.ಬೆನವಿಟ್ಸ್ ರಿಂದ ದೊರೆತ ಮತ್ತೊಂದು ಹೂ ಮುತ್ತುˌ ನಾನು ಗಳಿಸಿದ ಅಮೂಲ್ಯ ಕೊಡುಗೆಗಳ ಖಜಾನೆಯನ್ನು ಸದ್ದಿಲ್ಲದೇ ಸೇರಿಕೊಂಡಿತು!
ಬೆನವಿಟ್ಸ್ ಅವರು ನಮ್ಮ ರೆಪರ್ಟರಿ ತಂಡಕ್ಕೆ ನಿರ್ದೇಶಿಸಿದ ಬ್ರೆಖ್ಟನ “ಪುಂಟಿಲಾ ಎಂಡ್ ಹಿಸ್ ಮ್ಯಾನ್ ಮಟ್ಟಿ” ನಾಟಕದಲ್ಲಿ ಅದ್ಭುತ ನಟ ಪಂಕಜ್ ಕಪೂರ್ ಹಾಗೂ ಕೆ.ಕೆ.ರೈನಾ ಅವರು ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಬಿಡುವಿದ್ದಾಗಲೆಲ್ಲಾ ಅವರು ರಿಹರ್ಸಲ್ ಮಾಡುತ್ತಿದ್ದ ಹಾಲ್ ಗೆ ಹೋಗಿ ಕುಳಿತು ಬೆನವಿಟ್ಸ್ ಅವರು ನಾಟಕ ಕಟ್ಟುವ ಕ್ರಮವನ್ನು ಗಮನಿಸುತ್ತಿದ್ದೆ. ಪುಂಟಿಲಾ ನಾಟಕ ಪ್ರದರ್ಶನವೂ ಸತತವಾಗಿ ಒಂದು ವಾರ ನಡೆದು ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿತು.
ನಾವು ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ಅಲ್ಲಿ ನಡೆದ ಕೆಲ ಅದ್ಭುತ ಪ್ರಯೋಗಗಳನ್ನು ಇಲ್ಲಿ ನೆನಪಿಸಿ ಕೊಳ್ಳಲೇಬೇಕು.
ರಣಜೀತ್ ಕಪೂರ್ ಅವರು ರಚಿಸಿ ನಿರ್ದೇಶಿಸಿದ “ಬೇಗಂ ಕಾ ತಕಿಯಾ ” ನಾಟಕ ಆ ಕಾಲದ ಒಂದು ಅತ್ಯಂತ ಜನಪ್ರಿಯ ರಂಗ ಪ್ರಯೋಗ. ಮುಖ್ಯಪಾತ್ರದಲ್ಲಿ ನಟಿಸಿದ್ದ ಸುರೇಖಾ ಸಿಕ್ರಿಯವರು ತಮ್ಮ ಅಮೋಘ ಅಭಿನಯದಿಂದ ಜನಮನ ಸೂರೆ ಗೊಂಡದ್ದೇ ಅಲ್ಲದೆ ರಂಗಭೂಮಿಯ ‘ತಾರೆ’ಯೇ ಆಗಿಬಿಟ್ಟರು!ಅತ್ಯಂತ ಜನಪ್ರಿಯ ಟಿ ವಿ ಧಾರಾವಾಹಿ ‘ಬಾಲಿಕಾ ಬಧು’ವಿನಲ್ಲಿ ದಾದೀ ಸಾ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದವರೇ ಈ ಸುರೇಖಾ ಸಿಕ್ರಿ.
ರಣಜೀತ್ ಕಪೂರ್ ಅವರೇ ನಿರ್ದೇಶಿಸಿದ ಮತ್ತೊಂದು ಅಪೂರ್ವ ನಾಟಕ ‘ಮುಖ್ಯಮಂತ್ರಿ’. ಇಂದಿಗೂ ಕನ್ನಡ ರಂಗಭೂಮಿಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿರುವ, ಡಾ॥ಬಿ.ವಿ.ರಾಜಾರಾಂ ನಿರ್ದೇಶನದ ‘ಮುಖ್ಯಮಂತ್ರಿ’ ನಾಟಕ ಇದೇ ನಾಟಕದ ಆಧಾರದ ಮೇಲೆ ರಚಿತವಾದ್ದು.ಕನ್ನಡದಲ್ಲಿ ಚಂದ್ರು ಅವರು ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಿ ನಮ್ಮ ನಾಡಿನ ‘ಶಾಶ್ವತ ಮುಖ್ಯಮಂತ್ರಿ’ ಎಂದು ಹೆಸರು ಪಡೆದದ್ದಲ್ಲದೇ ‘ಮುಖ್ಯಮಂತ್ರಿ ಚಂದ್ರು’ ಎಂದೇ ಪ್ರಖ್ಯಾತರಾಗಿಬಿಟ್ಟರು!ಮೂಲ ಹಿಂದಿ ನಾಟಕದಲ್ಲಿ ಮುಖ್ಯಮಂತ್ರಿಗಳ ಪಾತ್ರದಲ್ಲಿ ನಟಿಸಿದ ವಸಂತ್ ಜೋಸಾಲ್ಕರ್ ಅವರದೂ ಸಹಾ ಅವಿಸ್ಮರಣೀಯ ಅಭಿನಯ.
ಬಿ.ವಿ.ಕಾರಂತರು ಯಕ್ಷಗಾನ ಶೈಲಿಯನ್ನು ಅಳವಡಿಸಿಕೊಂಡು ಶೇಕ್ಸ್ ಪಿಯರನ ಮ್ಯಾಕಬೆತ್ ನಾಟಕವನ್ನು ಹಿಂದಿಯಲ್ಲಿ ‘ಬರನಮ್ ವನ’ ಎಂಬುದಾಗಿ ನಿರ್ದೇಶಿಸಿದರು. ನನ್ನ ಮೇಲೆ ಅಗಾಧ ಪರಿಣಾಮ ಬೀರಿದ ನಾಟಕ ಇದು. ಮ್ಯಾಕ್ ಬೆತ್ ನಾಟಕದ ರಕ್ತಸಿಕ್ತ ‘ಧ್ವನಿ’ಯ ಭೀಕರತೆಯನ್ನು ಚಂಡೆಗಿಂತ ಮತ್ತಾವ ವಾದ್ಯ ತಾನೇ ಸಮರ್ಥವಾಗಿ ಅನುರಣಿಸಲು ಸಾಧ್ಯ?! ಯಕ್ಷಗಾನದ ಹೆಜ್ಜೆ ಹಾಕುತ್ತಾ ಕುಣಿಯಲು ಉತ್ತರ ಭಾರತೀಯ ನಟರಿಗೆ ಸ್ವಲ್ಪ ಕಷ್ಟವಾಯಿತು ಅನ್ನಿಸಿದರೂ ನಾಟಕದ ಒಟ್ಟಾರೆ ಪರಿಣಾಮಕ್ಕೆ ಅದರಿಂದೇನೂ ಕುಂದಾಗಲಿಲ್ಲ.ಕಾಡಿಗೆ ಕಾಡೇ ಚಲಿಸುವಂತೆ ಕಾರಂತರು ರೂಪಿಸಿದ್ದ ದೃಶ್ಯ ಸಂಯೋಜನೆಯಂತೂ ಅತ್ಯದ್ಭುತವಾಗಿತ್ತು.
ನಾನು ನೇಪಥ್ಯದಲ್ಲಿ,ವಿಶೇಷವಾಗಿ ರಂಗಸಜ್ಜಿಕೆಯಲ್ಲಿ ಕೆಲಸ ಮಾಡಿದ ಮತ್ತೊಂದು ಮಹತ್ವದ ನಾಟಕವೆಂದರೆ ಗೆರ್ ಹಾರ್ಟ್ ಹಾಫ್ ಮನ್ ನ (Gerhart Hauptmann) “ವೀವರ್ಸ್”. ಶ್ರಮಜೀವಿ ನೇಕಾರರ ಬದುಕು ಹಾಗೂ ತಮ್ಮ ಹಕ್ಕುಗಳಿಗಾಗಿ ಅವರು ನಡೆಸುವ ಹೋರಾಟವನ್ನು ಕೇಂದ್ರವಾಗಿ ಹೊಂದಿದ್ದ ಈ ವಾಸ್ತವವಾದಿ ನಾಟಕವನ್ನು ನಿರ್ದೇಶಿಸಿದ್ದವರು ನಮ್ಮ ಶಿಕ್ಷಕರೇ ಆಗಿದ್ದ ರಾಬಿನ್ ದಾಸ್. ಶ್ರೀರಾಮ ಆರ್ಟ್ ಸೆಂಟರ್ ನ ಪ್ರಧಾನ ವೇದಿಕೆಯಲ್ಲಿ ನಡೆದ ಈ ನಾಟಕದ ರಂಗಸಜ್ಜಿಕೆಯ ಭಾರಿ ಭಾರೀ ಸಲಕರಣೆಗಳನ್ನು ಮೊದಲ ಮಹಡಿಗೆ ಸಾಗಿಸಿ ಸಜ್ಜುಗೊಳಿಸುವುದೇ ಒಂದು ದೊಡ್ಡ ಸವಾಲಿನ ಸಂಗತಿಯಾಗಿತ್ತು. ನಾಟಕ ರಂಗದ ಮೇಲೆ ಸೊಗಸಾಗಿ ಮೂಡಿಬಂದರೂ ಒಂದು ಪ್ರದರ್ಶನದಲ್ಲಿ ನಡೆದ ಒಂದು ತಾಂತ್ರಿಕ ಅಚಾತುರ್ಯ ರಂಗ ಪ್ರದರ್ಶನದಲ್ಲಿ ನಾವು ಕಾಯ್ದುಕೊಳ್ಳಬೇಕಾದ ಕಟ್ಟೆಚ್ಚರಕ್ಕೆ ತೋರುಬೆರಳಾಗಿತ್ತು. ಅದೇನಾಯಿತೆಂದರೆ:
ನಾಟಕದ ಕೊನೆಯ ದೃಶ್ಯದಲ್ಲಿ ಒಬ್ಬ ನೇಕಾರ ನೇಯ್ಗೆ ಯಂತ್ರದ ಮುಂದೆ ಕುಳಿತು ನೇಯ್ಗೆಯ ಕಾಯಕದಲ್ಲಿ ತೊಡಗಿರುತ್ತಾನೆ. ಹೊರಗೆ ತೀವ್ರ ಗಲಭೆ ನಡೆಯುತ್ತಿದ್ದು ಅಚಾನಕ್ಕಾಗಿ ಸಿಡಿದ ಒಂದು ಗುಂಡು ಹಾರಿ ಬಂದು ನೇಕಾರನ ಎದೆಗೆ ಬಿದ್ದು ಆತ ಅಲ್ಲೇ ಕುಸಿಯುತ್ತಾನೆ. ಅದು ನಾಟಕದ ಮುಕ್ತಾಯ. ಅಲ್ಲಿಯವರೆಗೆ ಯಾವ ತೊಂದರೆಯೂ ಇಲ್ಲದೆ ನಾಟಕ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿತ್ತು. ನಾಟಕದ ಕೊನೆಯ ಕ್ಷಣಗಳು… ಢಮಾರ್ ಎಂಬ ಶಬ್ದದೊಡನೆ ಗುಂಡು ಸಿಡಿಯಬೇಕು…ನೇಕಾರ ಕುಸಿಯಬೇಕು…ಆದರೆ ಏನೋ ತಾಂತ್ರಿಕ ತೊಂದರೆಯ ಕಾರಣವಾಗಿ ಗುಂಡು ಸಿಡಿಯುತ್ತಿಲ್ಲ..ಗುಂಡಿನ ಸದ್ದು ಕೇಳುತ್ತಿಲ್ಲ.. ಗುಂಡು ಸಿಡಿಯದೆ ನೇಕಾರ ಕುಸಿಯುವಂತಿಲ್ಲ! ಪಾಪ, ನೇಕಾರನ ಪಾತ್ರಧಾರಿ ನೇಯುತ್ತಲೇ ಇದ್ದಾನೆ… ಕ್ಷಣಗಳುರುಳುತ್ತಿವೆ..
ರಂಗದ ಮೇಲೆ ಕ್ರಿಯಾಹೀನವಾದ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗಿಬಿಡುತ್ತದೆ! ಇತ್ತ ಯಾರಿಗೂ ಏನು ಮಾಡಲೂ ತೋಚುತ್ತಿಲ್ಲ.. ಕೊನೆಗೆ ವಿಂಗ್ಸ್ ನಲ್ಲಿ ನಿಂತಿದ್ದ ಮತ್ತೊಬ್ಬ ಪಾತ್ರಧಾರಿ—ನನ್ನ ಆಪ್ತ ಗೆಳೆಯ ಯುವರಾಜ ಶರ್ಮ—’ಢಿಶುಂ’ ಎಂದು ಗುಂಡಿನ ಸದ್ದನ್ನು ಅನುಕರಿಸಿ ಧ್ವನಿಯೊಂದನ್ನು ಹೊರಡಿಸುತ್ತಾನೆ.. ಕೂಡಲೇ ನೇಕಾರ ಒಂದು ಆರ್ತನಾದದೊಂದಿಗೆ ಗತಪ್ರಾಣನಾಗಿ ಕುಸಿಯುತ್ತಾನೆ! ಹೀಗೆ ದುಃಖಾಂತದ ಸನ್ನಿವೇಶದಲ್ಲಿ ಸಣ್ಣ ನಗು ಮೂಡುವಂತಾಗಿ, ಅಂತಿಮ ಪರಿಣಾಮದ ತೀವ್ರತೆ ಈ ತಾಂತ್ರಿಕ ಎಡವಟ್ಟಿನ ಕಾರಣಕ್ಕೆ ಕೊಂಚ ಮುಕ್ಕಾದದ್ದಂತೂ ಸತ್ಯ..ಜೀವಂತ ರಂಗಭೂಮಿಯ ಕಠಿಣಾತಿ ಕಠಿಣ ಸವಾಲು ಹಾಗೂ ಜವಾಬ್ದಾರಿಗಳು ನಮಗೆ ಢಾಳಾಗಿ ಪರಿಚಯವಾಗತೊಡಗಿದ್ದೂ ಆಗಲೇ ಅನ್ನಬೇಕು.
ನನ್ನ ದೆಹಲಿ ಡೈರಿಯ ಪುಟಗಳನ್ನು ಹೊರಳಿಸುವಾಗ ಒಂದು ನಸುನಗೆಯೊಂದಿಗೆ ನಾನು ಸದಾ ನೆನೆಸಿಕೊಳ್ಳುವುದು ನಾವು ಹೋಲಿ ಆಚರಿಸಿ ಭಾಂಗ್ ಸೇವಿಸಿದ ಪ್ರಸಂಗ.ದೆಹಲಿ ಹಾಗೂ ಉತ್ತರ ಭಾರತದವರಿಗಂತೂ ಹೋಲಿ ಬಲು ದೊಡ್ಡ ಹಬ್ಬ. ಬಣ್ಣಗಳ ಓಕುಳಿಯಲ್ಲಿ ಮಿಂದು ಭಾಂಗ್ ಸೇವಿಸಿ ಸಿಹಿ ತಿಂದು—ತಿನ್ನಿಸಿ ಸಂಭ್ರಮಿಸುವುದು ಅಲ್ಲಿನ ಬೀದಿ ಬೀದಿಗಳಲ್ಲಿ ಕಂಡುಬರುವ ಸಾಧಾರಣ ದೃಶ್ಯ. ಈ ಹಬ್ಬದ ಸಂಭ್ರಮಾಚರಣೆಯಲ್ಲಿ ನಾವು, ನಾಟಕ ಶಾಲೆಯವರು ಹಿಂದೆ ಉಳಿಯುವುದುಂಟೇ? ನಮ್ಮ ಸಹಪಾಠಿಯೇ ಆಗಿದ್ದ ಶ್ರೀಕಾಂತ ಅಗತ್ಯವಿದ್ದ ಸಾಮಗ್ರಿಗಳೆಲ್ಲವನ್ನೂ ಮಾರುಕಟ್ಟೆಯಿಂದ ತಂದು ನಮ್ಮ ಹಾಸ್ಟೆಲ್ ನಲ್ಲಿಯೇ ಭಾಂಗ್ ತಯಾರಿಸಲು ಉದ್ಯುಕ್ತನಾದ.
ಹೋಲಿ ಹಬ್ಬದ ದಿನದ ನಸುಕು. ಶ್ರೀಕಾಂತ ಎಲ್ಲರ ಕೋಣೆಗಳ ಬಾಗಿಲನ್ನೂ ಬಡಿಬಡಿದು ಕರೆಯುತ್ತಿದ್ದಾನೆ: “ಆಜಾವೊ ಯಾರ್, ಹೋಲಿ ಮನಾಯೇಂಗೇ..ಭಾಂಗ್ ಪಿಯೇಂಗೇ!” ನಾವು ಹೊರಬಂದು ನೋಡಿದರೆ ಒಂದು ದೊಡ್ಡ ಕೊಳದಪ್ಪಲೆಯಂತಹ ಪಾತ್ರೆಯ ತುಂಬಾ ಭಾಂಗ್ ಪಾನೀಯವನ್ನು ತುಂಬಿಸಿಟ್ಟಿದ್ದಾನೆ ಶ್ರೀಕಾಂತ! ಹೊರಬಂದ ನನಗೂ ಅಶೋಕನಿಗೂ ಒಂದೊಂದು ಲೋಟದ ತುಂಬಾ ಭಾಂಗ್ ಪಾನೀಯವನ್ನು ಕೊಟ್ಟು, “ಹೋಲಿ ಡ್ರಿಂಕ್ ಹೈ..ಇಸ್ ಕೋ ಮನಾ ನಹೀ ಕರ್ ಸಕತೇ..ಪೀನಾ ಹೀ ಪಡೇಗಾ” ಎಂದ.
ವಾಸ್ತವವಾಗಿ ‘ಮನಾ’ ಮಾಡುವ—ನಿರಾಕರಿಸುವ ಇರಾದೆ ನಮಗೂ ಏನೂ ಇದ್ದಿರಲಿಲ್ಲ! ‘ಠೀಕ್ ಹೈ’ ಎನ್ನುತ್ತಾ ಲೋಟವನ್ನು ಕೈಗೆತ್ತಿಕೊಂಡು ನಿಧಾನವಾಗಿ ಗುಟುಕರಿಸ ತೊಡಗಿದೆವು. ಶ್ರೀಕಾಂತ ಅದ್ಭುತ ರುಚಿಯ ಪಾನೀಯವನ್ನೇ ತಯಾರಿಸಿಕೊಟ್ಟಿದ್ದ! ಅಶೋಕನಂತೂ, “ಹೊಗಾ ಇವನವ್ವನ..ಕಚ್ಚು ಕಹಿ ಇರೋ ರಮ್ ಅಂಥಾ ರಮ್ ಕುಡಿದೇ ಕಮಕ್ ಅನ್ನದ ನನ್ನಂಥಾ ಬಿಜಾಪುರೀ ಗಂಡಿಗೆ ಈ ಶರಬತ್ ಯಾ ಲೆಕ್ಕ?” ಎನ್ನುತ್ತಾ ಮತ್ತೂ ಒಂದೆರಡು ಲೋಟ ಸುರುವಿಕೊಂಡ. ನಾನಾದರೂ ಯಾಕೆ ಹಿಂದೆ ಬೀಳಲಿ? ಪವಿತ್ರ ಪಾನೀಯ , ಕುಡಿಯಲೇ ಬೇಕು ಎಂದು ಶ್ರೀಕಾಂತ ಬೇರೆ ಅಪ್ಪಣೆ ಹೊರಡಿಸಿ ಬಿಟ್ಟಿದ್ದಾನೆ! ಒಂದರ್ಧ ತಾಸು ಎಲ್ಲಾ ಹಿತವಾಗಿಯೇ ಇತ್ತು. ಸಹಪಾಠಿಗಳೆಲ್ಲರೂ ಒಬ್ಬೊಬ್ಬರಾಗಿ ಬಂದು ಪವಿತ್ರ ಪಾನೀಯವನ್ನು ಸೇವಿಸಿ ಕೃತಕೃತ್ಯರಾದರು. ಅದರ ಬೆನ್ನಿಗೇ ಶುರುವಾಯಿತು ಪವಿತ್ರ ತೀರ್ಥದ ಪರಮ ಪವಿತ್ರ ಕಾರ್ಯಾಚರಣೆ! ತಲೆ ಧಿಮ್ಮೆನ್ನತೊಡಗಿತು. ಕೆಲವರಿಗೆ ಒಳಗಿನಿಂದ ಆನಂದದ ಲಹರಿ ಉಕ್ಕಿ ಉಕ್ಕಿ ಹರಿದು ಬಂದು ಗಹಗಹಿಸಿ ನಗುತ್ತಿದ್ದಾರೆ! ಮತ್ತೆ ಕೆಲವರು ಇದ್ದಕ್ಕಿದ್ದಂತೆ ಶೋಕತಪ್ತರಾಗಿ ಕಣ್ಣೀರುಗರೆಯುತ್ತಾ ಬಿಕ್ಕುತ್ತಿದ್ದಾರೆ! ನನಗಾದರೋ ಅದಾವುದೋ ದರಿದ್ರ ಭಯ ಒಳಹೊಕ್ಕು ನನ್ನನ್ನು ಕೊಲ್ಲಲು ಯಾರೋ ಅಟ್ಟಿಸಿಕೊಂಡು ಬರುತ್ತಿದ್ದಾರೆಂಬ ಭ್ರಮೆ ಹತ್ತಿಬಿಟ್ಟಿದೆ! ನೋಡನೋಡುತ್ತಿದ್ದಂತೆ ನಮ್ಮ ಹಾಸ್ಟೆಲ್ ನ ಹೊರಭಾಗದ ಹುಲ್ಲು ಹಾಸಿನ ಆವರಣ ವಿವಿಧ ಭಾವ ರಸಗಳ ವರ್ಣರಂಜಿತ ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟುಹೋಗಿದೆ!
ಈ ನಡುವೆ ಅಶೋಕ ತೊಟ್ಟಿದ್ದ ಬಣ್ಣ ಬಣ್ಣದ ಲುಂಗಿ ಅಲ್ಲಿದ್ದ ಬೇಲಿಯ ಮುಳ್ಳಿಗೆ ಸಿಕ್ಕು ಹರಿದು ಅವನು ಅದರದ್ದೇ ಒಂದು ತುಂಡನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು ‘ಯೇ ಮೇರಾ ಟೈ ದೇಖೋ’ ಎಂದು ಕೇಕೆ ಹಾಕುತ್ತಾ ಪಟ್ಟೆ ಪಟ್ಟೆ ಚಡ್ಡಿಯಲ್ಲಿ ಕಂಗೊಳಿಸುತ್ತಿದ್ದಾನೆ! ಒಂದು ಬದಿಯಲ್ಲಿ ಒಬ್ಬ ಸಹಪಾಠಿ—ಅಲೋಪಿ ವರ್ಮ—ಸತತವಾಗಿ ಯೋಗಾಭ್ಯಾಸ ನಿರತನಾಗಿಬಿಟ್ಟಿದ್ದಾನೆ! ಅಲ್ಲಿದ್ದ ಮೋಟು ಮರವೊಂದನ್ನು ಹತ್ತಲು ಯತ್ನಿಸುತ್ತಿದ್ದ ಮತ್ತೊಬ್ಬ ಹತ್ತಿ ಹತ್ತಿ ಬಿದ್ದು ಮತ್ತೆ ಮತ್ತೆ ಹತ್ತುತ್ತಿದ್ದಾನೆ! ಪರಸ್ಪರರನ್ನು ದಿಟ್ಟಿಸುತ್ತಾ ನಿಂತಿದ್ದ ಜೋಡಿಯೊಂದಕ್ಕೆ ತಾಸುಗಳು ಉರುಳಿದ ಪರಿವೆಯೇ ಇಲ್ಲ!

ಹೀಗೇ.. ಮತ್ತಷ್ಟು ಬಗೆ ಬಗೆಯ ಚಿತ್ರ ವಿಚಿತ್ರ ಸಂಗತಿಗಳು. ಇದಿಷ್ಟೇ ಆಗಿಬಿಟ್ಟಿದ್ದರೆ ಇದೂ ಒಂದು ಸಾಧಾರಣ ನಶೆಯ—ಅಮಲಿನ ಪ್ರಸಂಗವಾಗಿ ಮುಗಿದುಹೋಗುತ್ತಿತ್ತು. ಆದರೆ ಆಶ್ಚರ್ಯದ ಸಂಗತಿಯೆಂದರೆ ಅಲ್ಲಿ ನಡೆಯುತ್ತಿದ್ದ ಪ್ರತಿ ಘಟನೆಯ ಪ್ರತಿ ಸೂಕ್ಷ್ಮಾತಿಸೂಕ್ಷ್ಮ ವಿವರವೂ ಅಚ್ಚೊತ್ತಿದಂತೆ ನನ್ನ ಸ್ಮೃತಿಪಟಲದಲ್ಲಿ ದಾಖಲಾಗುತ್ತಿದೆ! ಯಾವುದೂ ಮರೆವಿನ ಮಡಿಲಿಗೆ ಜಾರುತ್ತಿಲ್ಲ! ಇಂಥದೊಂದು ವಿಶೇಷ ಅಮಲು ನಾನೆಂದೂ ಕಂಡು ಕೇಳರಿಯದಂಥದ್ದು.
ಈ ನಶೆ ಅವತ್ತಷ್ಟೇ ಅಲ್ಲ, ಮರುದಿನ ಸಂಜೆಯವರೆಗೂ ನನ್ನನ್ನು ಕಾಡಿ, ನನ್ನ ಸ್ಮೃತಿಕೋಶದಲ್ಲಿಯೂ ಬಂದಿಯಾಗಿಬಿಟ್ಟಿತ್ತು. ಅಷ್ಟು ಸಾಲದೆಂಬಂತೆ ಆ ನಶೆಯ ಗುಂಗಿನಲ್ಲೇ ನಮ್ಮ ಭಾಂಗ್ ಅವಾಂತರದ ಪ್ರಸಂಗಗಳನ್ನೆಲ್ಲಾ ವಿವರ ವಿವರವಾಗಿ ರೇಖಾಚಿತ್ರಗಳ ಸಮೇತ YNK ಅವರಿಗೆ ಪತ್ರಮುಖೇನ ಬರೆದು ಕಳಿಸಿದ್ದೆ! ‘ಭಾಂಗ್ ಶೂರ’ ಎಂದವರು ಮುಂದೆ ಸಾಕಷ್ಟು ಸಲ ನನ್ನನ್ನು ಛೇಡಿಸಿದ್ದರು ಕೂಡಾ!!!
ಇದಾದ ಒಂದೆರಡು ದಿನಕ್ಕೆ ಬ್ಯಾರಿ ಜಾನ್ ಅವರ improvisation ತರಗತಿಯಲ್ಲಿ ಪ್ರಾಸಂಗಿಕವಾಗಿ ನಮ್ಮ ಭಾಂಗ್ ಪರಾಕ್ರಮದ ವಿಷಯ ಚರ್ಚೆಗೆ ಬಂತು. ನಮ್ಮೆಲ್ಲರ ಅನುಭವಗಳನ್ನು ಆಲಿಸಿದ ಬ್ಯಾರಿ ಜಾನ್ ಕೇಳಿದರು: “ಯಾರಾದರೂ ನಿಮ್ಮ ಅನುಭವವನ್ನು ಒಂದು ಚೌಕಟ್ಟಿಗೆ ಅಳವಡಿಸಿ ಸ್ಫೂರ್ತವಿಸ್ತರಣದಲ್ಲಿ ಅಭಿನಯಿಸಲು ಸಾಧ್ಯವೇ?”. ನಡೆದ ಘಟನಾವಳಿಗಳ ಸೂಜಿಮೊನೆಯಷ್ಟು ಅಂಶವನ್ನೂ ಮರೆಯದಿದ್ದ ನಾನು ಎಲ್ಲವನ್ನೂ ಕ್ರೋಢೀಕರಿಸಿಕೊಂಡು ಒಂದು ರೂಪಕದಂತೆ ಅಭಿನಯಿಸಿಯೇ ಬಿಟ್ಟೆ! ನಾನು ಅಭಿನಯ ಮಾಡಿ ಮುಗಿಸಿದ ಮೇಲೆ ಒಂದು ಕ್ಷಣ ಸುಮ್ಮನಿದ್ದ ಬ್ಯಾರಿ ಜಾನ್ ಅವರು ಇದ್ದಕ್ಕಿದ್ದಂತೆ, “praaabhuuu…this is your best performance” ಎಂದು ಬಿಟ್ಟರು! ಜೊತೆಗೇ ಕಿವಿ ಮಾತೊಂದನ್ನೂ ಹೇಳಿದರು: “ಒಬ್ಬ ನಟನಿಗೆ ಅನುಭವವೇ ಮೂಲದ್ರವ್ಯ.ಯಾವ ಅನುಭವವೂ ವ್ಯರ್ಥವಲ್ಲ.. ಆದರೆ ಪ್ರತಿಯೊಂದನ್ನೂ ನಿಮ್ಮ ಅನುಭವದಿಂದಲೇ ಗಳಿಸಿಕೊಳ್ಳಬೇಕೆಂದಿಲ್ಲ! I have witnessed many proclamations of attaining experiences are actually ‘guised excuses’ in reality!”
ಬ್ಯಾರಿ ಜಾನ್ ರ ಮಾತು ಕೇಳುತ್ತಿದ್ದಂತೆ ಸೋಮೇಶ್ವರ ಶತಕದ ಒಂದು ಪದ್ಯ ನೆನಪಾಯಿತು:
“ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳಂ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ”!
‘ಸರ್ವಜ್ಞನಪ್ಪಂ ನರಂ’ ಎಂಬಲ್ಲಿ ‘ಸಮರ್ಥ ನಟನಪ್ಪಂ ನರಂ’ ಎಂದಿದ್ದರೂ ಸೂಕ್ತವಾಗಿಯೇ ಇರುತ್ತಿತ್ತೇನೋ ಎಂದೂ ನನಗನ್ನಿಸಿದ್ದುಂಟು!! ಅಲ್ಲವೇ!!!
। ಇನ್ನು ಮುಂದಿನ ವಾರಕ್ಕೆ ।






0 Comments