ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಮತ್ತೊಮ್ಮೆ ಎದೆ ಧಸಕ್ ಎಂದಿತು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 156

ಮರುದಿನ ಎದ್ದು ಶೂಟಿಂಗ್ ಗೆ ಹೊರಡಲು ತಯಾರಾಗುತ್ತಿದ್ದೆ. ಕಾಲೇಜಿಗೆ ಹೋಗಲು ರಂಜನಿಯೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಏನೋ ಹೊಳೆದವಳಂತೆ ರಂಜನಿ ನನ್ನತ್ತ ತಿರುಗಿ, “ಪ್ರಭೂಜೀ, ನಾವು ಮನೆ ಬೀಗ ಬದಲಾಯಿಸಿದರೆ ಒಳ್ಳೇದಲ್ಲವೇ? ಪುಟ್ಟಣ್ಣ ಬೇರೆ ಕೀ ಕಳಕೊಂಡಿದಾನೆ..” ಎಂದಳು. ಕೀ ಎಲ್ಲಿ ಕಳೆದಿದೆ ಅನ್ನುವುದು ಖಚಿತವಿಲ್ಲ;(ಹೊರಗೆಲ್ಲೋ ಬಿದ್ದಿದೆ ಎಂದು ಅವನು ಹೇಳಿದ್ದರೂ ಕೂಡಾ) ಜೊತೆಗೆ ಕೀ ಚೈನಿನ ಜತೆಗಿದ್ದ ಪ್ಲಾಸ್ಟಿಕ್ ಬಿಲ್ಲೆಯ ಮೇಲೆ ನಮ್ಮ ಮನೆ ನಂಬರ್ ‘ಡಿ 501’ ಅನ್ನುವುದು ಲಕ್ಷಣವಾಗಿ ನಮೂದಾಗಿತ್ತು! ಹೊರಗಿನವರಿಗೆ ಸಿಕ್ಕರೆ ಅವರಿಗೆ ಎಲ್ಲಿಯದು ಎಂದು ತಲೆಬುಡ ತಿಳಿಯುವುದಿಲ್ಲ; ಅಕಸ್ಮಾತ್ ಅಪಾರ್ಟ್ ಮೆಂಟ್ ನಲ್ಲಿಯೇ ಯಾರಾದರೂ ಹೊರಗಿನಿಂದ ಬಂದವರಿಗೆ ಸಿಕ್ಕು, ಅವರಲ್ಲಿ ದುಷ್ಟಬುದ್ಧಿ ಜಾಗೃತವಾಗಿ ಅವರು ನಮ್ಮ ಚಲನ ವಲನಗಳನ್ನು ಗಮನಿಸಿ ಮನೆಗೆ ಕಳ್ಳತನದಲ್ಲಿ ಬಂದಿರುವ ಸಾಧ್ಯತೆಯನ್ನು , ಅದೆಷ್ಟೇ ಕನಿಷ್ಠ ಪ್ರಮಾಣದಲ್ಲಾಗಲೀ, ನಿರಾಕರಿಸುವಂತಿಲ್ಲ!! ಮನಸ್ಸಿಗೆ ಆಘಾತವಾದ ಸಂದರ್ಭಗಳಲ್ಲಿ ಇಂಥ ವಿಪರೀತದ ಯೋಚನೆಗಳು ನುಗ್ಗಿ ಬರುತ್ತಲೇ ಇರುತ್ತವೆ! ಅದೇನೇ ಇರಲಿ ಬೀಗ ಬದಲಿಸಿಬಿಡುವುದೆಂದು ತೀರ್ಮಾನಿಸಿಬಿಟ್ಟೆವು. ಆ ಜವಾಬ್ದಾರಿಯನ್ನು ನಮ್ಮ ಚಾಲಕ ಇಬ್ರಾಹಿಂಗೇ ವಹಿಸಿಬಿಟ್ಟೆ. ಮರುದಿನ ರಾಧಿಕಾ, ಇಬ್ರಾಹಿಂ ಜೊತೆಯಲ್ಲೇ ಅಂಗಡಿಗೆ ಹೋಗಿ ಮಜಬೂತಾದ ಡೋರ್ ಲಾಕ್ ಅನ್ನು ಖರೀದಿಸಿ ತಂದಳು. ಜೊತೆಯಲ್ಲೇ ಬಂದಿದ್ದ ಅಂಗಡಿಯ ಟೆಕ್ನೀಷಿಯನ್ ಬಾಗಿಲಿಗೆ ಬೀಗವನ್ನು ಭದ್ರವಾಗಿ ಹಾಕಿಕೊಟ್ಟ.

ನಾನು ಸಂಜೆ ಶೂಟಿಂಗ್ ನಿಂದ ಬರುವ ವೇಳೆಗಾಗಲೇ ಮನೆಗೆ ಬಂದಿದ್ದ ರಂಜನಿ ನನ್ನ ಬರವನ್ನೇ ಕಾಯುತ್ತಿದ್ದಳು. “ಶಾಹೀನ್ ಳನ್ನು ನಾನು ಮನೆಗೆ ಕಳಿಸಿದ್ದು ಏಪ್ರಿಲ್ 10 ನೇ ತಾರೀಖು” ಎಂದಳು. ಅದು ಹೇಗೆ ಅಷ್ಟು ಖಚಿತವಾಗಿ ಹೇಳುತ್ತೀಯಾ ಎಂದು ನಾನು ಕೇಳಿದರೆ ಮತ್ತೊಂದು ಸ್ವಾರಸ್ಯಕರ ಪ್ರಸಂಗ ತೆರೆದುಕೊಂಡಿತು! ರಂಜನಿ ಶಾಹೀನ್ ಳನ್ನು ಗ್ಯಾಸ್ ಸ್ಟವ್ ಪರೀಕ್ಷಿಸಲು ಮನೆಗೆ ಕಳಿಸಿದ್ದ ವಿಷಯವನ್ನು ಕಾಲೇಜ್ ಗೆ ಹೋಗುತ್ತಿದ್ದ ಹಾಗೇ ಅವಳ ಆಪ್ತ ಗೆಳತಿಯರೊಂದಿಗೆ (elegant eight) ಹಂಚಿಕೊಂಡಿದ್ದಾಳೆ; ‘ಬುದ್ಧಿ ಇದೆಯಾ ನಿಮಗೆ? ಯಾರಾದರೂ ಯಾರೂ ಇಲ್ಲದ ಮನೆಗೆ ಹಾಗೆ ಕೀ ಕೊಟ್ಟು ಕಳಿಸುತ್ತಾರೆಯೇ? ಎಲ್ಲರನ್ನೂ ಅನುಮಾನಿಸೋದಕ್ಕೆ ಆಗೋದಿಲ್ಲ ಅನ್ನೋದು ನಿಜವಾದರೂ ನಮ್ಮ ಎಚ್ಚರದಲ್ಲಿ ನಾವಿರಬೇಕಲ್ಲವೇ? ತೀರಾ ಇಷ್ಟು ಮುಗ್ಧತೆ ಖಂಡಿತಾ ಒಳ್ಳೇದಲ್ಲ” ಎಂದು ಅವರೆಲ್ಲರೂ ಚೆನ್ನಾಗಿ ಪಾಠ ಮಾಡಿ ಕಿವಿ ಹಿಂಡಿದ್ದಾರೆ ರಂಜನಿಗೆ! ಅಂದೇ ಅವಳ ಒಬ್ಬ ಗೆಳತಿ, ಕಾಲೇಜ್ ಗೆ ಬರುವ ಹಾದಿಯಲ್ಲಿ ಚಿನ್ನದಂಗಡಿಗೆ ಹೋಗಿ ಒಡವೆ ಮಾಡಿಸಲು ಮುಂಗಡ ಹಣ ಕೊಟ್ಟು ಬಂದ ಸುದ್ದಿಯನ್ನು ಹೇಳಿದ್ದಾರೆ! ಆ ಅಂಗಡಿಯವನು ಕೊಟ್ಟಿದ್ದ ರಶೀದಿಯ ಮೇಲೆ ಅಂದಿನ ದಿನಾಂಕ ನಮೂದಾಗಿದೆ—ಏಪ್ರಿಲ್ 10! ಇಂದು ಶಾಹೀನ್ ನಮ್ಮ ಮನೆ ಒಳಗೆ ಹೋಗಿದ್ದ ದಿನಾಂಕವನ್ನು ಪತ್ತೆ ಮಾಡುವ ಪ್ರಯತ್ನದ ಸಮಯಕ್ಕೆ ಅಂದಿನ ಪ್ರಸಂಗ ನೆನಪಾಗಿದೆ, ದಿನಾಂಕ ಪತ್ತೆಯಾಗಿದೆ! ಅಬ್ಬಾ!! ಕಡುಗತ್ತಲಲ್ಲಿ ತಡಕುತ್ತಿದ್ದವರಿಗೆ ಮಿಣುಕುಹುಳುವೊಂದು ಹಾರಿ ಬಂದ ಹಾಗಾಯಿತು.

ನಮ್ಮ ಅಪಾರ್ಟ್ ಮೆಂಟ್ ನಲ್ಲಿ ಆರು ಸಿ ಸಿ ಟಿವಿಗಳಿವೆ. ಅದರಲ್ಲಿ ನಮಗೆ ಮುಖ್ಯವಾಗಿ ಬೇಕಾದದ್ದು ಅಪಾರ್ಟ್ ಮೆಂಟ್ ನ ಗೇಟ್ ನಿಂದ ನಮ್ಮ ಡಿ ಬ್ಲಾಕ್ ಗೆ ಹೋಗುವ ದಾರಿಯಲ್ಲಿದ್ದ ಸಿ ಸಿ ಟಿ ವಿ. ನಾನು ಅಂದೇ ರಾತ್ರಿ ನಮ್ಮ ನಿರ್ವಹಣಾ ಕೊಠಡಿಗೆ ಹೋಗಿ ನಮ್ಮ ಮಿತ್ರ ಚಂದ್ರೇಶ್ ಅವರ ನೆರವಿನಿಂದ ಏಪ್ರಿಲ್ ಹತ್ತನೇ ತಾರೀಖಿನ ಮುದ್ರಿತ ದೃಶ್ಯಾವಳಿಗಳನ್ನು ನೋಡತೊಡಗಿದೆ. ನಿಜಕ್ಕೂ ತಾಳ್ಮೆಯನ್ನು ಪರೀಕ್ಷಿಸುವ ಕೆಲಸವೇ ಅದಾಗಿತ್ತು. ಏನೇ ಆದರೂ ಶಾಹೀನ್ ನಮ್ಮ ಮನೆಗೆ ಹೋಗಿದ್ದ ಸಮಯ ಹೆಚ್ಚುಕಡಿಮೆ ಖಚಿತವಾಗಿ ಗೊತ್ತಿದ್ದರಿಂದ ಶ್ರಮ ಕೊಂಚ ಕಡಿಮೆಯಾಯಿತು. ರಂಜನಿ ಮನೆ ಬಿಟ್ಟದ್ದು 8 ಗಂಟೆಗೆ. ಗ್ಯಾಸ್ ಸ್ಟವ್ ನ ಅನುಮಾನದ ಭೂತ ಕಾಡಿದ್ದು ಸುಮಾರು 8.20 -8.25 ರ ಹೊತ್ತಿಗೆ; ಶಾಹೀನ್ ಗೆ ಫೋನ್ ಮಾಡಿದ ಮೇಲೆ ಆಕೆ ಪಕ್ಕದಲ್ಲೇ ಇದ್ದ ಅವರ ಮನೆಯಿಂದ ನಮ್ಮ ಅಪಾರ್ಟ್ ಮೆಂಟ್ ಗೆ ಒಂದೈದು ನಿಮಿಷದಲ್ಲೇ ಬಂದಿರುತ್ತಾರೆ..ಅಂದರೆ ಸುಮಾರು 8.30 ರ ವೇಳೆಗೆ. ಆ ಸಮಯದ ಸಿ ಸಿ ಟಿ ವಿ ಫುಟೇಜ್ ಅನ್ನು ನಾನು ನೋಡತೊಡಗಿದೆ. 8.25 ರಿಂದಲೇ ಆರಂಭಿಸಿ ನೋಡುತ್ತಾ ಕುಳಿತೆ. ಅಂದುಕೊಂಡಿದ್ದಂತೆಯೇ ಶಾಹೀನ್ 8.35 ರ ವೇಳೆಗೆ ನಮ್ಮ ಗೇಟ್ ಬಳಿ ಬಂದರು. ಕೀ ತೆಗೆದುಕೊಂಡು ಹೆಚ್ಚುಕಡಿಮೆ ಓಡುತ್ತಲೇ ನಮ್ಮ ಬ್ಲಾಕ್ ಕಡೆಗೆ ಧಾವಿಸಿ ಒಳಹೋದರು. ನಾನು ಸಮಯವನ್ನೇ ಗಮನಿಸುತ್ತಾ ಅವರ ಹೆಜ್ಜೆಗಳನ್ನು ಲೆಕ್ಕ ಹಾಕುತ್ತಾ ಕಾತರದಿಂದ ಟಿವಿ ಮಾನೀಟರ್ ಅನ್ನೇ ನೋಡುತ್ತಿದ್ದೆ! ಒಂದು..ಎರಡು..ಮೂರು..ನಾಲ್ಕು..ಐದು.. ಲಿಫ್ಟ್ ನಲ್ಲಿ ಐದನೇ ಮಹಡಿಗೆ ಹೋಗಿ ಮನೆಯ ಬಾಗಿಲು ತೆಗೆದು ಸ್ಟವ್ ಪರೀಕ್ಷಿಸಿ ಹೊರಬಂದು ಬಾಗಿಲು ಹಾಕಿ ಲಿಫ್ಟ್ ಮೂಲಕ ಕೆಳಗಿಳಿದು ಬರಲು 4—5 ನಿಮಿಷಗಳಾದರೂ ಬೇಕು. ಅಷ್ಟರೊಳಗೇ – ಅಥವಾ ಇನ್ನೂ ಕಡಿಮೆ ಸಮಯದಲ್ಲಿ ಅನ್ನುವಂತೆಯೇ ಶಾಹೀನ್ ಕೆಳಗಿಳಿದು ಬಂದಿದ್ದಾರೆ! ಅಂದರೆ ಆಕೆ ಮನೆಯಲ್ಲಿ ಬೇರಾವ ಚಟುವಟಿಕೆಯನ್ನೂ ನಡೆಸಿಲ್ಲ! ಮನೆಯನ್ನು ಶೋಧಿಸುವ ಸಾಹಸಕ್ಕೆ ಕೈ ಹಾಕಿಲ್ಲ! ಶಾಹೀನ್ ಶುದ್ಧ ಹಸ್ತರು! ಅನುಮಾನ ಮುಕ್ತರು!

ಸರಿ, ಇನ್ನು ಮುಂದಿನ ಕ್ರಮಗಳ ಬಗ್ಗೆ ಆಲೋಚನೆ ಮಾಡಬೇಕು. ಈಗ ಆಗಬೇಕಾಗಿರುವ ಮುಖ್ಯ ಕೆಲಸಗಳೆಂದರೆ:
ಮೊಟ್ಟಮೊದಲನೆಯದಾಗಿ ಕಳ್ಳತನ ಆಗಿರುವ ದಿನ ಯಾವುದಿರಬಹುದು ಎಂಬುದನ್ನು ಪತ್ತೆ ಮಾಡಬೇಕು.
ರಂಜನಿಯನ್ನು ನಾನು ಮಾತುಕತೆಗೆ ಕೂರಿಸಿಕೊಂಡು ಪ್ರಶ್ನೆಗಳನ್ನು ಕೇಳಲಾರಂಭಿಸಿದೆ. ಕಳ್ಳತನವಾಗಿ 2—3 ದಿನ ಕಳೆದಿತ್ತಾಗಿ ಅವಳ ಮನಸ್ಸೂ ಕೊಂಚ ಸಮಾಧಾನದ ಸ್ಥಿತಿಗೆ ಬಂದಿತ್ತು. ನಾನು ಕೇಳಿದೆ: “ಚಿನ್ನದ ಒಡವೆಗಳೆಲ್ಲವೂ ಬೀರುವಿನಲ್ಲೇ ಸುರಕ್ಷಿತವಾಗಿ ಇದ್ದುದನ್ನು ನೀನು ಕಡೆಯ ಬಾರಿಗೆ ನೋಡಿದ್ದು ಯಾವಾಗ?”.

ಒಂದಷ್ಟು ಹೊತ್ತು ಯೋಚಿಸಿ ನೆನಪಿಸಿಕೊಂಡು ಕೊನೆಗೆ,”ಊರಿಗೆ ಹೊರಡುವ ಮುನ್ನ ಅಂದರೆ ಏಪ್ರಿಲ್ 5 ರ ಮೊದಲು-ಬಹುಶಃ ಅದರ ಹಿಂದಿನ ದಿನವೇ- ನೋಡಿದ್ದೆ; ಎಲ್ಲಾ ಸರಿಯಾಗಿತ್ತು” ಅಂದಳು ರಂಜನಿ.

ನಾನು: “ಅಂದರೆ ಏಪ್ರಿಲ್ ನಾಲ್ಕನೇ ತಾರೀಖಿನಿಂದ ಕಳ್ಳತನವಾಗಿದೆ ಎಂದು ಗೊತ್ತಾದ ದಿನದೊಳಗೆ-ಅಂದರೆ ಏಪ್ರಿಲ್ 16 ರ ನಡುವಿನ ಅವಧಿಯಲ್ಲಿ ಕಳ್ಳತನವಾಗಿದೆ..ಇಷ್ಟು ಖಚಿತವಾಯಿತು”.

ರಂಜನಿ ಅನ್ಯಮನಸ್ಕಳಾಗಿ ಏನೋ ಯೋಚಿಸುತ್ತಾ “ಹೌದು” ಎಂದವಳು ಮತ್ತೇನೋ ಯೋಚನೆಯಲ್ಲಿ ಮುಳುಗಿದವಳು ಕೆಲ ನಿಮಿಷ ಬಿಟ್ಟು, “ಪ್ರಭೂಜೀ, ನಿಮಗೆ ನೆನಪಿದೆಯಾ? ನಾನು ಮತ್ತೂರಿನಲ್ಲಿ ಒಂದು ರಾತ್ರಿ ಮಲಗಿದ್ದಾಗ ತುಂಬಾ ಕನವರಿಸಿಕೊಂಡಿದ್ದೆ..ಬೆಚ್ಚಿಬಿದ್ದು ನರಳ್ತಿದ್ದೆ..ನೀವೇ ತಟ್ಟಿ ಎಬ್ಬಿಸಿ ಸಮಾಧಾನ ಮಾಡಿ ಮಲಗಿಸಿದ್ದಿರಿ..ನೆನಪಿದೆಯಾ?” ಎಂದಳು. “ಚೆನ್ನಾಗಿ ನೆನಪಿದೆ. ಈಗ್ಯಾಕೆ ಬಂತು ಆ ಮಾತು?” ಎಂದೆ ನಾನು. ರಂಜನಿ ಹೇಳತೊಡಗಿದಳು.ಅವಳ ಧ್ವನಿ ಉದ್ವೇಗದಿಂದ ನಡುಗುತ್ತಿತ್ತು. “ಪ್ರಭೂಜೀ..ಅವತ್ತು ನನಗೊಂದು ಕೆಟ್ಟ ಕನಸು ಬಿದ್ದಿತ್ತು. ಆ ಕನಸಿನಲ್ಲಿ ನಮ್ಮ ಮನೆ ಒಡವೆಗಳೆಲ್ಲಾ ಕಳುವಾಗಿಹೋಗಿದ್ದವು. ಒಂದು ಚಿಕ್ಕ ಡಬ್ಬಿಯಲ್ಲಿ ಒಂದು ಓಲೆ ಜೊತೆ ಮಾತ್ರ ಉಳಿದಿತ್ತು. ಅದು ನನ್ನನ್ನ ನೋಡಿ ಅಣಕಿಸಿಕೊಂಡು ಜೋರಾಗಿ ನಗೋದಕ್ಕೆ ಶುರುಮಾಡ್ತು. ಆಗಲೇ ನನಗೆ ಗಾಬರಿಯಾಗಿ ನರಳಾಡ್ತಿದ್ದೆ ಅಂತ ಕಾಣುತ್ತೆ”!.

ಅವಳ ಮಾತು ಕೇಳಿ ನಾನು ಗರಬಡಿದು ಹೋದೆ. “ಏನು ಹೇಳ್ತಿದೀಯಾ ರಂಜೂ? ನಿಜವಾಗಲೂ ಹಾಗೆ ಕನಸು ಬಿದ್ದಿತ್ತಾ ಅಥವಾ ಹಾಗೇ ಈಗ ನಮ್ಮ ಮನೇಲಿ ಕಳ್ಳತನ ನಡೆದಿರೋದರಿಂದ ಈ ಘಟನೇನ ಅವತ್ತಿನ ನರಳಾಟಕ್ಕೆ ತಳುಕು ಹಾಕ್ತಿದೀಯಾ? ಸರಿಯಾಗಿ ಯೋಚಿಸಿ ಹೇಳು” ಎಂದೆ. “ಇಲ್ಲ ಪ್ರಭೂಜೀ..ಆಣೆ ಮಾಡಿ ಹೇಳ್ತೀನಿ..ಹಾಗೇ ನನಗೆ ಕನಸು ಬಿದ್ದಿದ್ದು; ಇಲ್ಲಿ ಯಥಾವತ್ತಾಗಿ ನಡೆದಿರೋದು ಕೂಡಾ ಹಾಗೇನೇ! ಇದ್ದ ಒಡವೆಗಳಲ್ಲಿ ಉಳಿದಿರೋದು ಒಂದು ಜೊತೆ ಓಲೆ ಮಾತ್ರ”!.

ನಾನು: “ಛೆ! ಮೊದಲೇ ನಿನ್ನ ಈ ಕನಸು ಜ್ಞಾಪಕಕ್ಕೆ ಬಂದಿದ್ರೆ ಊರಿಗೆ ಬಂದ ತಕ್ಷಣವೇ ಒಂದು ಸಲ ಬೀರು ತೆಗೆದು ನೋಡಿಬಿಡಬಹುದಾಗಿತ್ತು. ಕಡೇಪಕ್ಷ ವಿಷಯ ಮೊದಲೇ ಗೊತ್ತಾಗಿರೋದು.”

ರಂಜನಿ: ” ನಿಜ. ಆದರೆ ಏನು ಮಾಡಲಿ? ಬೆಳಿಗ್ಗೆ ಏಳೋಹೊತ್ತಿಗೇ ರಾತ್ರಿ ಕನಸು ಬಿದ್ದದ್ದು ನೆನಪಿನಿಂದ ಜಾರಿಹೋಗಿತ್ತು. ಈಗ ಮತ್ತೆ ಮತ್ತೆ ಕಳ್ಳತನದ ವಿಷಯಾನೇ ಮಾತಾಡ್ತಿದೀವಲ್ಲಾ, ಹಾಗಾಗಿ ಜ್ಞಾಪಕಕ್ಕೆ ಬಂತು.”

ವಾಸ್ತವವಾಗಿ ರಂಜನಿಗೆ ಆಗಾಗ್ಗೆ ಹೀಗೆ ಕನಸುಗಳು ಬೀಳುವುದುಂಟು. ಬರಲಿರುವ ಯಾವುದೋ ಅಪಾಯವನ್ನೋ ಖುಷಿಯನ್ನೋ ಪೂರ್ವಭಾವಿಯಾಗಿ ಸೂಚಿಸುವ ರೀತಿಯಲ್ಲಿ ಕನಸುಗಳು ಅವಳನ್ನು ಕಾಡಿವೆ. ಈ ಬಾರಿಯದು ಮಾತ್ರ ಯಥಾವತ್ ಪೂರ್ವಭಾವೀ ಅನುಕರಣ!

ಈ ವೇಳೆಗಾಗಲೇ ನಮ್ಮ ಹಲವಾರು ಬಂಧುಗಳಿಗೆ, ಗುರುಗಳಿಗೆ ವಿಷಯ ಮುಟ್ಟಿಯಾಗಿತ್ತು. ನಮ್ಮ ಎಂದಿನ ಮಾರ್ಗದರ್ಶಕರಾದ ಹರೀಶ್ ಜೀ ಅವರು,ಬಸವೇಶ್ವರ ನಗರದ ಶಿವ ದೇವಾಲಯದ ಪ್ರಧಾನ ಅರ್ಚಕರಾದ ರಾಮಶರ್ಮಾಜೀ ಅವರು ಹಾಗೂ ನನ್ನ ತಂದೆಯವರ ಪ್ರಿಯ ಶಿಷ್ಯರಾದ ಸೂರ್ಯನಾರಾಯಣ ಅವರು—ಇವರೆಲ್ಲರೂ ಹೇಳಿದ್ದು ಒಂದೇ: ಕಳ್ಳತನ ಪತ್ತೆಯಾಗುತ್ತದೆ! ಕಳ್ಳ ಸಿಕ್ಕಿಹಾಕಿಕೊಳ್ಳುತ್ತಾನೆ! ಹರೀಶ್ ಜೀ ಅವರು ಕಳೆದಿರುವುದಷ್ಟೂ ಸಿಕ್ಕೇಸಿಗುತ್ತದೆ ಎಂದರೆ ಶರ್ಮಾಜೀ ಅವರು ಈ ಮಾಸಾಂತ್ಯದೊಳಗೇ ಪತ್ತೆಯಾಗುತ್ತದೆ ಎಂದಿದ್ದರು! ಸೂರ್ಯನಾರಾಯಣ ಅವರು “ಒಂದು ಹೆಣ್ಣಿನ ತೊಡಗುವಿಕೆಯೂ ಇರುವ ಹಾಗೆ ಕಾಣುತ್ತಿದೆ!” ಎಂದಿದ್ದರು! ವಾಸ್ತವವಾಗಿ ನಾನು ಲಲಿತಮ್ಮನವರ ವಿಚಾರಣೆಗೆ ಒಪ್ಪಿಗೆ ಕೊಡಲು ಆ ಮೊದಲೇ ಹೇಳಿದ್ದ ಸೂರ್ಯನಾರಾಯಣ ಅವರ ಈ ಮಾತೂ ಕಾರಣವಿದ್ದಿರಬಹುದು! ಆದರೆ ಅದಾಗಲಿಲ್ಲ. ಅನುಮಾನ ಪಟ್ಟಿದ್ದ ಮತ್ತೊಬ್ಬ ಹೆಣ್ಣುಮಗಳೂ ಸಹಾ (ಶಾಹೀನ್) ಆರೋಪಮುಕ್ತಳಾಗಿಬಿಟ್ಟಳು. ಅಂದಮಾತ್ರಕ್ಕೆ ಗುರುಗಳ ಮಾತು ಸುಳ್ಳಾಗಬೇಕೆಂದೇನಿಲ್ಲವಲ್ಲಾ! ಬೇರೆ ಬೇರೆ ಸಾಧ್ಯತೆಗಳು ಅಗೋಚರ ರಹಸ್ಯದ ಚೀಲದಲ್ಲಡಗಿರುತ್ತವೆ!

ಮರುದಿನ ಸಂಜೆ ಶೂಟಿಂಗ್ ನಿಂದ ಬಂದ ನಂತರ ಪೋಲೀಸ್ ಸ್ಟೇಷನ್ ಗೆ ಹೋದೆ-ಏನಾದರೂ ಅನಿರೀಕ್ಷಿತ ಬೆಳವಣಿಗೆ ಆಗಿರಬಹುದೇ ಎಂಬ ದೂರದ ಆಸೆಯಿಂದ! ಅಂಥದ್ದೇನೂ ಆಗಿರಲಿಲ್ಲ. ಅಲ್ಲಿನ ಒಬ್ಬ ದಫೇದಾರರು ಬನ್ನಿ ಸರ್ ಎಂದು ಕರೆದು ಕೂರಿಸಿಕೊಂಡರು. “ನಾನು ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡಿ ಸರ್..ಕಳೆದ ಚಿನ್ನ ಸಿಗೋದು ತುಂಬಾ ಅಪರೂಪ ಸರ್.. ಯಾಕಂದ್ರೆ ಚಿನ್ನದ ಕಳ್ಳರಿಗೆ ಬೇರೆ ಬೇರೆ ಥರದ ಸಂಪರ್ಕಗಳಿರುತ್ವವೆ…ನೀವು ನಿಮ್ಮ ಒಡವೇನ ಗುರ್ತು ಹಿಡೀಬಹುದು..ಆದ್ರೆ ಆ ಒಡವೇನ ಕರಗಿಸಿಬಿಟ್ರೆ ಹ್ಯಾಗೆ ಪತ್ತೆ ಮಾಡ್ತೀರಿ? ಎಲ್ರ ಮನೆ ಚಿನ್ನಾನೂ ಒಂದೇ ಥರಾನೇ ಕಾಣುತ್ತೆ ಅಲ್ಲವೇ? ” ಎಂದರು ಆ ದಫೇದಾರರು! ಏನೋ ಒಂದು ದೂರದ ಆಸೆಯಿಂದ ಹೋಗಿದ್ದ ನನಗೆ ಅವರ ಮಾತು ಕೇಳಿ ಧಸಕ್ ಎಂದಿತು! “ಅಂದರೆ ಕಳುವಾದ ಚಿನ್ನಾನ ಮರೆತು ಬಿಡಿ ಅಂತಿದೀರಾ?” ಎಂದೆ ನಾನು. “ಹಾಗಲ್ಲ ಸರ್..ನಿನ್ನೆ ಸಾಹೇಬರು ಹೇಳ್ತಾ ಇದ್ರು…ನಿಮಗೆ ಹೇಗಾದ್ರೂ ಸ್ವಲ್ಪನಾದ್ರೂ ಸಹಾಯ ಮಾಡಬೇಕೂಂತ.” ಎಂದು ದಫೇದಾರರು ನುಡಿದಾಗ ಮತ್ತೆ ಸಣ್ಣದಾಗಿ ಆಸೆ ಚಿಗುರೊಡೆಯಿತು. “ಆದ್ರೆ ಚಿನ್ನ ಸಿಗೋದು ಕಷ್ಟ ಅಂತ ನೀವೇ ಹೇಳಿದ್ರಲ್ಲಾ ಸಾಹೇಬ್ರೇ” ಎಂದೆ ನಾನು ಕೆದಕುವ ಧ್ವನಿಯಲ್ಲಿ. ಅವರು ಗಂಟಲು ಸರಿ ಮಾಡಿಕೊಂಡು, “ಎಲ್ಲಾನೂ ಬಾಯಿ ಬಿಟ್ಟು ಹೇಳೋಕಾಗಲ್ಲ ಸರ್..ಕೆಲವು ಸೂಕ್ಷ್ಮಗಳಿರುತ್ತವೆ…ಕೆಲವು ಸಲ ಕಳ್ಳರಿಂದ ಚಿನ್ನ ರಿಕವರಿ ಆಗುತ್ತೆ ಸರ್..ಆದರೆ ಅದರ ವಾರಸುದಾರರು ಯಾರು ಅಂತ ಗೊತ್ತಾಗೋದೇ ಇಲ್ಲ! ಅಂದರೆ ಕೆಲವು ದೊಡ್ಡ ಜನ ಅವರ ಮನೇಲಿ ಚಿನ್ನ ಕಳುವಾಗಿದ್ರೂ ಕಂಪಲೇಂಟೇ ಕೊಟ್ಟಿರೋಲ್ಲ..ಸ್ವತ್ತು ಡಿಕ್ಲೇರ್ ಮಾಡಿಕೊಂಡಿರೋಲ್ಲವೋ ಟ್ಯಾಕ್ಸ್ ಭಯಾನೋ ಮತ್ತೊಂದೋ ಕಾರಣಕ್ಕೆ ಆ ಚಿನ್ನ ಸ್ಟೇಷನ್ ನಲ್ಲೇ ಉಳಕೊಂಡಿರುತ್ತೆ.. ಅಗತ್ಯ ಇಲ್ಲದೋರ ಸ್ವತ್ತನ್ನ ಅಗತ್ಯ ಇರೋರಿಗೆ ಸ್ವಲ್ಪ ಆಗಾಗ್ಗೆ ದಾಟಿಸೋ ಕೆಲಸ ಮಾಡ್ತೀವಿ ನಾವು..ಇದನ್ನೆಲ್ಲಾ ನಿಮಗೆ ಹೇಳಬಾರದು ನಾನು. ಜೊತೆಗೆ ಇದು ಎಷ್ಟು ದಿನದೊಳಗೆ ಆಗಬಹುದು ಅಂತ ಹೇಳೋಕೆ ಬರೋಲ್ಲ ಸರ್..ನಾಳೇನೇ ಸಿಗಬಹುದು…ಮೂರು ತಿಂಗಳಾಗಬಹುದು..ಅಥವಾ ಒಂದು ವರ್ಷ…ಹೀಗೆ” ಎಂದರು ಆ ದಫೇದಾರರು. ಅವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟೆ. ಒಂದಂತೂ ಖಾತ್ರಿಯಾಯಿತು: ಯಾವಾಗಲೋ ಒಂದು ದಿನ ಒಂದಷ್ಟು ಚಿನ್ನ ನಮಗೆ ಸಿಗಬಹುದು..ಯಾವಾಗ, ಎಷ್ಟು ಅನ್ನುವುದು ನಮ್ಮ ಅದೃಷ್ಟ ಎಷ್ಟಿದೆಯೋ ಅಷ್ಟು!

ದಫೇದಾರರು ಹೇಳಿದ ಮಾತೇ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಹೌದು..ಕಳ್ಳ ಯಾರೋ ಅಕ್ಕಸಾಲಿಗರ ಬಳಿ ಒಪ್ಪಂದ ಮಾಡಿಕೊಂಡು ನಮ್ಮ ಚಿನ್ನವನ್ನೆಲ್ಲಾ ಕರಗಿಸಿಯೇ ಬಿಟ್ಟಿದ್ದರೆ? ಆ ಯೋಚನೆಯಿಂದಲೇ ಮತ್ತೊಮ್ಮೆ ಎದೆ ಧಸಕ್ ಎಂದಿತು.

ಮರುದಿನ ಬೆಳಿಗ್ಗೆ ಶೂಟಿಂಗ್ ಗೆ ಹೊರಡಲು ತಯಾರಾಗಿ ಕುಳಿತು ಪೇಪರ್ ತಿರುವಿ ಹಾಕುತ್ತಿದ್ದೆ. ಆರನೇ ಪುಟದ ಒಂದು ಸುದ್ದಿ ಥಟ್ಟನೆ ಗಮನ ಸೆಳೆಯಿತು: “ಇಪ್ಪತ್ತನೇ ದಿನಕ್ಕೆ ಕಾಲಿಟ್ಟ ಚಿನ್ನದ ವ್ಯಾಪಾರಿಗಳ ಮುಷ್ಕರ!” ಅರೆ! ಇದೇನಿದು ಇಂಥ ಒಳ್ಳೆಯ ಸುದ್ದಿ! ಇಪ್ಪತ್ತು ದಿನ ಅಂದರೆ ನಮ್ಮ ಮನೆಯ ಕಳ್ಳತನವಾದಂದಿನಿಂದಲೂ ಮುಷ್ಕರ ನಡೆಯುತ್ತಲೇ ಇದೆ! ಕಳ್ಳ ಚಿನ್ನದ ವ್ಯಾಪಾರಿಗಳ ಬಳಿ ಹೋಗಿರುವ ಸಾಧ್ಯತೆ, ಹಾಗಾಗಿ ನಮ್ಮ ಚಿನ್ನ ಕರಗದಿರುವ ಸಾಧ್ಯತೆ ಒಂದಷ್ಟು ಮಟ್ಟಿಗಾದರೂ ಖಂಡಿತ ಕಡಿಮೆಯಾಗಿದೆ!

‍ಲೇಖಕರು Admin

28 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading