ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಪ್ರೀತಿಯಿಂದ ಹರಸಿದರು ವಿಜಯಮ್ಮ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

51

ಮಂಗಳೂರಿನ ಶ್ರೀಧರ್ —ಲೂಸಿ ದಂಪತಿಗಳು ಆತ್ಮೀಯರಾದ ಮೇಲೆ ಆಗಾಗ್ಗೆ ನಾನು ಅವರಲ್ಲಿಗೆ ಹೋಗುತ್ತಿದ್ದುದುಂಟು. ಹಾಗೆ ಹೋಗಿದ್ದ ಒಂದು ಸಂದರ್ಭದಲ್ಲಿಯೇ ಅಲ್ಲಿಯೇ ನನಗೆ ಪರಿಚಯವಾದವನು ರಂಗಕರ್ಮಿ ಶ್ರೀನಿವಾಸ ನಾಯಕ್ ಅಲಿಯಾಸ್ ಕಾಸರಗೋಡು ಚಿನ್ನಾ!ನನ್ನನ್ನು ಕಂಡು ಮಾತಾಡಿಸಿಕೊಂಡು ಹೋಗುವ ಸಲುವಾಗಿ ಶ್ರೀಧರನ ಮನೆಗೆ ಬಂದಿದ್ದ ಚಿನ್ನಾ,”ಪ್ರಭುಗಳೇ, ನೀವು ನಮ್ಮ ತಂಡಕ್ಕೆ ಯಾಕೆ ಒಂದು ನಾಟಕ ಮಾಡಿಸಬಾರದು? ನಮ್ಮಲ್ಲಿಯೂ ಒಳ್ಳೆಯ ಕಲಾವಿದರಿದ್ದಾರೆ… ನೋಡಿ ಮೆಚ್ಚಿ ಆನಂದಿಸುವ ಕನ್ನಡ ಪ್ರೇಕ್ಷಕರಿದ್ದಾರೆ.. ಒಮ್ಮೆ ಬನ್ನಿ” ಎಂದು ಪ್ರೀತಿಯಿಂದ ಆಹ್ವಾನಿಸಿದ.

ಕಾಸರಗೋಡು ಭೌಗೋಳಿಕವಾಗಿ ಕೇರಳದಲ್ಲಿದ್ದರೂ ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಅದು ನಮಗೆ ಕನ್ನಡದ ನೆಲವೇ! “ಆಗಲಿ ಚಿನ್ನಾ, ಖಂಡಿತ ಬಂದು ನಿಮ್ಮ ತಂಡಕ್ಕೊಂದು ನಾಟಕ ಮಾಡಿಸುತ್ತೇನೆ” ಎಂದು ನಾನು ಹೇಳಿದ್ದಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ, ಬಹುಶಃ ಮಂಗಳೂರಿನಿಂದಲೇ ಎಂದು ಕಾಣುತ್ತದೆ—ಕಾಸರಗೋಡಿಗೆ ಪ್ರಯಾಣ ಬೆಳೆಸಿಯೇ ಬಿಟ್ಟೆ! ಅಲ್ಲಿ ಈಗಾಗಲೇ ಮಾಡಿಸಿರುವ ಯಾವುದಾದರೂ ನಾಟಕವನ್ನೋ ಅಥವಾ ಹೊಸದಾಗಿ ಬರೆದಿದ್ದ ಒಂದು ನಾಟಕವನ್ನೋ ಮಾಡಿಸುವ ವಿಚಾರವಿತ್ತು ನನಗೆ. ಆದರೆ ಅಲ್ಲಿಗೆ ಹೋದೊಡನೆ ಹೊಸದೊಂದು ಸಮಸ್ಯೆ ಎದುರಾಯಿತು.. ಅಲ್ಲಿ ನಾಟಕದಲ್ಲಿ ಪಾತ್ರ ಮಾಡಲು ಹೆಣ್ಣುಮಕ್ಕಳು ಮುಂದೆ ಬರುತ್ತಿಲ್ಲ! ನನ್ನ ಬಳಿ ಸಿದ್ಧವಿದ್ದ ನಾಟಕಗಳಲ್ಲೆಲ್ಲಾ ಸ್ತ್ರೀ ಪಾತ್ರಗಳಿವೆಯಷ್ಟೇ ಅಲ್ಲ, ಅವುಗಳನ್ನು ತೆಗೆದುಹಾಕಿ ನಾಟಕ ಮಾಡುವುದು ಶಕ್ಯವೇ ಇಲ್ಲ! ಏನು ಮಾಡುವುದು? ನನ್ನ ಜೋಳಿಗೆಯಲ್ಲಿ ಬಿಡುವಿನ ವೇಳೆಯಲ್ಲಿ ಓದಲೆಂದು ಒಯ್ದಿದ್ದ ಕೆಲ ನಾಟಕ ಕೃತಿಗಳಲ್ಲಿ ರಷ್ಯನ್ ನಾಟಕಕಾರ ಗೊಗೋಲ್ ನ ‘the inspector general’ ಎಂಬ ವಿಡಂಬನಾತ್ಮಕ ನಾಟಕ ನನ್ನ ಗಮನ ಸೆಳೆಯಿತು. ಅದರಲ್ಲಿಯೂ ಸ್ತ್ರೀ ಪಾತ್ರಗಳಿದ್ದರೂ ಅವುಗಳನ್ನು ತೆಗೆದುಹಾಕಿಯೂ ನಾಟಕವನ್ನು ಮೂಲೋದ್ದೇಶಕ್ಕೆ ಚ್ಯುತಿ ಬಾರದಂತೆ ಪ್ರದರ್ಶಿಸಬಹುದು ಎಂದು ಖಾತ್ರಿ ಮಾಡಿಕೊಂಡು ತಕ್ಷಣವೇ ಕಾರ್ಯೋನ್ಮುಖನಾದೆ.

ನನಗೆ ತಂಗಲು ಏರ್ ಲೈನ್ಸ್ ಹೋಟಲಿನಲ್ಲಿ ವ್ಯವಸ್ಥೆ ಮಾಡಿದ್ದ ಚಿನ್ನಾ. ಹಗಲೆಲ್ಲಾ ಹೋಟಲಿನಲ್ಲಿ ಕುಳಿತು ನಾಟಕದ ದೃಶ್ಯಭಾಗಗಳನ್ನು ಸಿದ್ಧ ಪಡಿಸಿಕೊಂಡು ಸಂಜೆ ತಾಲೀಮಿನಲ್ಲಿ ಕಲಾವಿದರಿಗೆ ಕಲಿಸುತ್ತಿದ್ದೆ. ಆಗಲೇ ಹೇಳಿದಂತೆ ಇದೊಂದು ವಿಡಂಬನಾತ್ಮಕ ನಾಟಕ; ತಪ್ಪು ತಿಳುವಳಿಕೆಗಳಿಂದ ಪುಟಿಯುವ ಹಾಸ್ಯ, ಮನುಷ್ಯನ ದುರಾಸೆ—ಮೂರ್ಖತನಗಳ ಅಣಕು,ಇಂಪೀರಿಯಲ್ ರಷ್ಯಾದಲ್ಲಿ ಆಗ ವ್ಯಾಪಕವಾಗಿ ಹರಡಿದ್ದ ರಾಜಕೀಯ ಭ್ರಷ್ಟತೆ..ಇವೆಲ್ಲಾ ಸಂಗತಿಗಳು inspector general ನಾಟಕದ ಹೂರಣವಾಗಿದ್ದವು. ನಮ್ಮ ಸನ್ನಿವೇಶಕ್ಕೆ ಒಗ್ಗುವಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಂಡು ‘ಬಂದಾ ಬಂದಾ ಸರದಾರ’ ಎಂಬ ಹೆಸರಿನಲ್ಲಿ ಆ ನಾಟಕವನ್ನು ರೂಪಾಂತರಿಸಿದೆ.3—4 ಹಾಡುಗಳನ್ನೂ ಸಹಾ ಹೊಸದಾಗಿ ಬರೆದು ಸೇರಿಸಿದೆ!ಅದೊಂದು ರೀತಿಯಲ್ಲಿ ‘ಸರಳೀಕೃತ ಮುಕ್ತ ರೂಪಾಂತರ’ ಎನ್ನಬಹುದೇನೋ! ಮುಂದೆ ಮೂಲನಾಟಕದ ಎಲ್ಲ ಪಾತ್ರಗಳನ್ನೂ ಉಳಿಸಿಕೊಂಡು ಹೆಚ್ಚು ‘ವಿಧೇಯ’ವಾದ ರೂಪಾಂತರವನ್ನು ಸಿದ್ಧಪಡಿಸುವ ವಿಚಾರ ನನಗಿತ್ತಾದರೂ ಆ ವೇಳೆಗೆ ಕೆ.ವಿ.ಸುಬ್ಬಣ್ಣ ಅವರು ಈ ನಾಟಕದ ರೂಪಾಂತರವನ್ನು ‘ಸಾಹೇಬರು ಬರುತ್ತಾರೆ’ ಎಂಬ ಹೆಸರಿನಲ್ಲಿ ಹೊರತಂದಿರುವ ವಿಷಯ ತಿಳಿದು ನನ್ನ ಮರು ರೂಪಾಂತರದ ಯೋಜನೆಯನ್ನು ಕೈಬಿಟ್ಟೆ! ಇರಲಿ.

ಚಿನ್ನಾ ಅವರ ಗಿರಿಧರ್ ಸ್ಟೋರ್ಸ್ ಕಾಸರಗೋಡು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಹೆಸರುವಾಸಿಯಾದ ಅಂಗಡಿ. ಮೂಲ ವೃತ್ತಿಯನ್ನೂ ಕೈಬಿಡದೆ ತನ್ನ ಬಿಡುವಿನ ಸಮಯವನ್ನೆಲ್ಲಾ ರಂಗಭೂಮಿಯ ಚಟುವಟಿಕೆಗಳಿಗಾಗಿ ಮೀಸಲಿಟ್ಟಿದ್ದ ಚಿನ್ನಾ ಅಪರೂಪದ ಕಲಾವಿದ; ಸಹೃದಯಿ; ನುರಿತ ಸಂಘಟಕ; ಅತಿಥಿ ಸತ್ಕಾರದಲ್ಲಂತೂ ಅವನಿಗೆ ಅವನೇ ಸಾಟಿ! ಕಾಸರಗೋಡು ಚಿನ್ನಾ ಹೆಸರಿನ ಸಂಕ್ಷಿಪ್ತ ರೂಪ kg ಚಿನ್ನಾ ಎನ್ನುತ್ತಿದ್ದ ಚಿನ್ನಾ. ನಾನು, “ಬರೀ kg ಅಲ್ಲ.. ಕೆಜಿಗಟ್ಟಲೆ ಚಿನ್ನಾ” ಎಂದು ತಮಾಷೆ ಮಾಡುತ್ತಿದ್ದೆ! ಪ್ರತಿನಿತ್ಯ ಬಿ ಇ ಎಂ ಹೈಸ್ಕೂಲ್ ನ ಒಂದು ಕೊಠಡಿಯಲ್ಲಿ ನಮ್ಮ ತಾಲೀಮು ನಡೆದಿತ್ತು. ಬಾಬೂಜಿ ಭಟ್ ಅವರ ಸಂಗೀತ ನಿರ್ದೇಶನ; ಮೇಳದಲ್ಲಿ ಶ್ರೀನಾಥ್ ಶೆಣೈ ಹಾಗೂ ತಾರಾನಾಥ ಭಟ್.

ಕಾಸರಗೋಡು ಚಿನ್ನಾ ‘ಸರದಾರ’ನ ಕೇಂದ್ರಪಾತ್ರವನ್ನು ನಿರ್ವಹಿಸಿದರೆ ತಿಲಕ್, ಪಬ್ಬ ಕೊರಕೋಡು, ಪ್ರೇಂ ಪ್ರಕಾಶ್, ಚಂದ್ರಕಾಂತ ಪಟ್ಟತ್ತಾನ್, ಮಂಜುನಾಥ ಭಟ್ಟ, ಚಿತ್ತರಂಜನ್, ವೇಣುಮಿತ್ರ, ಈಶ್ವರ್ ಮೊದಲಾದವರು ಇತರ ಮುಖ್ಯ ಪಾತ್ರಗಳಲ್ಲಿದ್ದರು. ಆಗಾಗ್ಗೆ ನಮ್ಮ ತಾಲೀಮಿಗೆ ಬರುತ್ತಿದ್ದ, ಕಾಸರಗೋಡಿನಲ್ಲೇ ನೆಲೆಸಿದ್ದ ನಾಟಕಕಾರ—ರಂಗಕರ್ಮಿ ವೇಣುಗೋಪಾಲ ಕಾಸರಗೋಡು ಕೆಲವೇ ದಿನಗಳಲ್ಲಿ ನನ್ನ ಆತ್ಮೀಯ ಗೆಳೆಯರಾಗಿಬಿಟ್ಟರು!”ಬಂದಾ ಬಂದಾ ಸರದಾರ” ನಾಟಕ ಕಾಸರಗೊಡಿನ ಲಲಿತ ಕಲಾ ಸದನದಲ್ಲಿ ಪ್ರದರ್ಶನಗೊಂಡು ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಚಿನ್ನನಂತೂ ಅಮೋಘವಾಗಿ ಅಭಿನಯಿಸಿ ನಾಟಕದ ಯಶಸ್ಸಿಗೆ ಸಿಂಹಪಾಲು ನೀಡಿದ. ಮುಂದೆ ರಾಜ್ಯಮಟ್ಟದ ನಾಟಕಸ್ಪರ್ಧೆಯಲ್ಲಿ ಭಾಗವಹಿಸಿದ ‘ಸರದಾರ’ ನಾಟಕ ಶ್ರೇಷ್ಠ ನಟ ಪ್ರಶಸ್ತಿಯೂ ಸೇರಿದಂತೆ ಆರು ಪ್ರಶಸ್ತಿಗಳನ್ನು ಬಾಚಿಕೊಂಡದ್ದೊಂದು ಹೆಮ್ಮೆಯ ಸಂಗತಿ. ಆ ನಂತರದಲ್ಲಿ ‘ಸರದಾರ’ನನ್ನು ಚಿನ್ನನೇ ಕೊಂಕಣಿ ಭಾಷೆಗೆ ಅನುವಾದಿಸಿದ. ಹಲವಾರು ಮಲಯಾಳಿ ನಾಟಕಗಳನ್ನು ಕನ್ನಡಕ್ಕೆ, ಕನ್ನಡ ನಾಟಕಗಳನ್ನು ಕೊಂಕಣಿಗೆ ಅನುವಾದಿಸಿರುವ ಈ ಚಿನ್ನಾ ನನ್ನ ಅತ್ಯಂತ ಆತ್ಮೀಯ ಮಿತ್ರ ಬಳಗದಲ್ಲಿ ಒಬ್ಬ. ಈಗಲೂ ಆಗಾಗ್ಗೆ—ಅವನ ಮಾತಿನಲ್ಲೇ ಹೇಳುವುದಾದರೆ—’ಗುಂಡು’ಮೇಜಿನ ಪರಿಷತ್ತಿನಲ್ಲಿ ಸಕ್ರಿಯವಾಗಿ ಭೇಟಿಯಾಗುತ್ತಿರುತ್ತೇವೆ!

1980 ರಲ್ಲಿ ದೆಹಲಿಯಿಂದ ಮರಳಿ ಬಂದ ಮೇಲೆ ಬೆಂಗಳೂರಿನಲ್ಲಿ ನಡೆದ ಮತ್ತಷ್ಟು ವಿದ್ಯಮಾನಗಳನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ವಿಜಯಮ್ಮ ಅವರು(ಡಾ॥ವಿಜಯಾ) ನಮ್ಮ ತಲೆಮಾರಿನ ಅನೇಕ ಯುವ ಕಲಾವಿದರಿಗೆ ಪ್ರೇರಣೆಯಾಗಿ ನಿಂತು ಮಾರ್ಗದರ್ಶನ ನೀಡುತ್ತಿದ್ದ ಕುರಿತಾಗಿ ಈಗಾಗಲೇ ಒಮ್ಮೆ ಪ್ರಸ್ತಾಪಿಸಿದ್ದೇನೆ. ಈ ಸಂದರ್ಭದಲ್ಲೇ ನಾನು ನೆನೆಯಬೇಕಾದ ಮತ್ತೊಂದು ಪ್ರಮುಖ ಹೆಸರೆಂದರೆ ಎ.ಎಸ್.ಮೂರ್ತಿಯವರು. ಕಲಾಮಂದಿರದ ಅ.ನ.ಸುಬ್ಬರಾಯರ ಸುಪುತ್ರ ಎ.ಎಸ್.ಮೂರ್ತಿಯವರು ತಮ್ಮದೇ ವಿಶಿಷ್ಟ ರೀತಿಯಲ್ಲಿ ಕನ್ನಡ ರಂಗಭೂಮಿಗೆ ಕೊಡುಗೆಗಳನ್ನು ಕೊಟ್ಟವರು. ಅನೇಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಅವರಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳನ್ನು ಅಣಿ ಮಾಡಿಕೊಡುತ್ತಾ ಜನಪ್ರಿಯ ಹಾಸ್ಯನಾಟಕಗಳನ್ನು ರಚಿಸಿ ಆಡಿಸುತ್ತಾ ಸದಾ ಚಟುವಟಿಕೆಯ ಸಾಕಾರವಾಗಿರುತ್ತಿದ್ದವರು ಮೂರ್ತಿ ಅವರು. ತುಟಿಗಳ ನಡುವೆ ಸದಾ ಉರಿಯುತ್ತಿದ್ದ ಸಿಗರೇಟು..ಮನಸ್ಸಿನಲ್ಲಿ ಸದಾ ರಂಗಭೂಮಿಯ ಕುರಿತ ಕನಸುಗಳು…ಕನ್ನಡ ಸಾಂಸ್ಕೃತಿಕ ಲೋಕದ ವಿವಿಧ ಕ್ಷೇತ್ರಗಳ ಮಹನೀಯರೊಂದಿಗೆ ಕೂತು ಒಂದಲ್ಲ ಒಂದು ಸಾರ್ಥಕ ಯೋಜನೆಯ ಕುರಿತು ಚರ್ಚೆ..ಇದು ಅವರ ದಿನಚರಿ! ನಾನು ಸೆಂಟ್ರಲ್ ಕಾಲೇಜ್ ನಲ್ಲಿ ಓದುತ್ತಿದ್ದಾಗಲೇ ನನಗೆ ಮೂರ್ತಿಯವರ ಪರಿಚಯವಾಗಿತ್ತು.ನಿರುದ್ಯೋಗಿಯಾಗಿ ಅಲೆಯುತ್ತಿದ್ದ ನನಗೆ ಅನೇಕ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಿ ಪ್ರೋತ್ಸಾಹಿಸಿದವರು ಮೂರ್ತಿಯವರು. ಆಕಾಶವಾಣಿಯಲ್ಲಿ ಗಣರಾಜ್ಯೋತ್ಸವ ಸಮಾರಂಭದ ನೇರ ಪ್ರಸಾರದಲ್ಲಿ ವೀಕ್ಷಕ ವಿವರಣೆ ನೀಡುವ ಅತ್ಯಂತ ಗುರುತರ ಜವಾಬ್ದಾರಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟಿದ್ದರು ಮೂರ್ತಿ ಅವರು.

ಕಲಾಮಂದಿರದಲ್ಲಿ ನಡೆಯುತ್ತಿದ್ದ ಅನೇಕ ಶಿಬಿರಗಳಿಗೆ ಹೋಗಿ ಅಭಿನಯ—ನಿರ್ದೇಶನಗಳನ್ನು ಕುರಿತು ನಾನು ಉಪನ್ಯಾಸ ನೀಡುತ್ತಿದ್ದೆ.

1980 ಕೊನೆ ಅಥವಾ 81 ಆರಂಭದಲ್ಲಿ ಎಂದು ತೋರುತ್ತದೆ—ಮೂರ್ತಿ ಹಾಗೂ ವಿಜಯಮ್ಮ ಅವರ ನೇತೃತ್ವದಲ್ಲಿ ‘ಅಭಿನಯ ತರಂಗ’ ಎಂಬ ವಾರಾಂತ್ಯದ ರಂಗ ಶಿಕ್ಷಣ ಕೇಂದ್ರ ಹನುಮಂತನಗರದ ಕಲಾಮಂದಿರದ ಆವರಣದಲ್ಲಿಯೇ ಪ್ರಾರಂಭವಾಯಿತು.ಒಂದರ್ಥದಲ್ಲಿ ಈ ರಂಗಶಾಲೆ ಮೂರ್ತಿ ಹಾಗೂ ವಿಜಯಮ್ಮನವರ ಕನಸಿನ ಕೂಸು.ಈ ಶಾಲೆಯ ಉದ್ಘಾಟನೆಗೆ ಹೋಗಿದ್ದ ನೆನಪಿನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ.ಅಂದಿನ ಸಂಸ್ಕೃತಿ ಸಚಿವರು (ಗಂಗಾಧರ ಮೂರ್ತಿಯವರೆಂದು ಕಾಣುತ್ತದೆ) ಉದ್ಘಾಟನೆಯನ್ನು ನೆರವೇರಿಸಿಕೊಟ್ಟಿದ್ದರು. ಗೆಳೆಯ ಅಶೋಕ ಬಾದರದಿನ್ನಿ ಈ ಶಾಲೆಯ ಪ್ರಥಮ ಪ್ರಾಂಶುಪಾಲನಾಗಿ ನೇಮಕಗೊಂಡಿದ್ದ. ಸಾಲ ಸೋಲ ಮಾಡಿಕೊಂಡು ಇದ್ದಬದ್ದ ವಶೀಲಿಗಳನ್ನು ಬಳಸಿಕೊಂಡು ನಾಲ್ಕು ಗೋಡೆಯ, ಕಲ್ನಾರಿನ ಶೀಟ್ ಗಳ ಸೂರಿನ,ಸುತ್ತ ಕಪ್ಪುಪರದೆಗಳ, ಮರಳು ಹಾಸಿನ ಒಂದು ಕೊಠಡಿಯನ್ನು ನಿರ್ಮಿಸಿ ಆಸಕ್ತರಿಗೆ ರಂಗಶಿಕ್ಷಣವನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿಯೇ ಬಿಟ್ಟರು ವಿಜಯಮ್ಮ ಹಾಗೂ ಮೂರ್ತಿ ಅವರು. ಅಂದು ಹಾಗೆ ಪ್ರಾರಂಭವಾದ ಈ ರಂಗಶಾಲೆ ‘ಅಭಿನಯತರಂಗ’ ಇಂದಿನ ತನಕವೂ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದು ನಿಜಕ್ಕೂ ಬಲು ದೊಡ್ಡ ಸಾಧನೆಯೇ ಸರಿ! ಮೂರ್ತಿಯವರ ನಂತರ ಈ ರಂಗ ಶಾಲೆಯ ಚುಕ್ಕಾಣಿ ಹಿಡಿದು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿರುವವರು ಎ.ಎಸ್.ಮೂರ್ತಿಯವರ ಸುಪುತ್ರಿ ಗೌರಿ ದತ್ತು ಅವರು.

ಹಾಗೆ ನೋಡಿದರೆ ಮೂರ್ತಿಯವರ ಇಡೀ ಕುಟುಂಬವೇ ಲಲಿತ ಕಲೆಗಳ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಾಂಸ್ಕೃತಿಕ ಲೋಕಕ್ಕೆ ಅಪೂರ್ವ ಕೊಡುಗೆಗಳನ್ನು ನೀಡುತ್ತಾ ಬಂದಿದೆ.ಗೌರಿಯವರ ಆಹ್ವಾನದ ಮೇರೆಗೆ ಅನೇಕ ಬಾರಿ ಅಭಿನಯ ತರಂಗ ಶಾಲೆಗೆ ಹೋಗಿ ಅಭಿನಯ—ನಿರ್ದೇಶನಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಬಂದಿದ್ದೇನೆ.ಬಿ.ಸುರೇಶ, ಪ್ರಕಾಶ್ ರೈ,ನಟ ಯಶ್ ,ಅಮರದೇವ,ಮಲ್ಲಿಕಾರ್ಜುನ ಮಹಾಮನೆ…ಮೊದಲಾದ ಅನೇಕ ಪ್ರತಿಭಾವಂತರು ಅಭಿನಯ ತರಂಗದಲ್ಲಿ ತಮ್ಮ ಮೊದಲ ಹೆಜ್ಜೆಗಳನ್ನೂರಿ ಮುನ್ನಡೆದವರು. ಅಭಿನಯ ತರಂಗದ ವಿದ್ಯಾರ್ಥಿಗಳಿಗಾಗಿ ಅನೇಕ ಪ್ರಸಿದ್ಧ ನಿರ್ದೇಶಕರು ಮಾಡಿಸಿದ ಅನೇಕ ರಂಗ ಪ್ರಯೋಗಗಳು ನಾಡಿನೆಲ್ಲೆಡೆ ಪ್ರದರ್ಶನಗೊಂಡು ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

ಅಭಿನಯ ತರಂಗ ಶಾಲೆಯ ವಿದ್ಯಾರ್ಥಿಗಳಿಗಾಗಿ ಒಂದು ನಾಟಕ ಮಾಡಿಸಿ ಎಂದು ಒಮ್ಮೆ ಎ.ಎಸ್.ಮೂರ್ತಿಯವರು ನನ್ನನ್ನು ಕೇಳಿಕೊಂಡರು. ಹೊಸ ನಾಟಕ ಯಾವುದನ್ನೂ ಸಿದ್ಧ ಪಡಿಸಿಕೊಂಡಿರಲಿಲ್ಲವಾದ್ದರಿಂದ ಕಾಸರಗೋಡಿನ ರಂಗತಂಡಕ್ಕೆ ಮಾಡಿಸಿದ್ದ ‘ಬಂದಾ ಬಂದಾ ಸರದಾರ’ ನಾಟಕವನ್ನೇ ಶಾಲೆಯ ವಿದ್ಯಾರ್ಥಿಗಳಿಗೆ ಮಾಡಿಸಲು ನಿರ್ಧರಿಸಿದೆ. ಆದರೆ ಆ ನಾಟಕದ ಕೇಂದ್ರಪಾತ್ರವನ್ನು ನಿರ್ವಹಿಸಲು ಸೂಕ್ತ ಕಲಾವಿದ ಆ ವರ್ಷದ ವಿದ್ಯಾರ್ಥಿಗಳ ತಂಡದಲ್ಲಿ ನನಗೆ ದೊರೆಯಲಿಲ್ಲ. ಹೀಗಾಗಿ ಕಳೆದ ವರ್ಷದ ವಿದ್ಯಾರ್ಥಿಯಾಗಿದ್ದ ಬಿ.ಸುರೇಶ್ ಅವರನ್ನು ಆ ಪಾತ್ರ ನಿರ್ವಹಿಸಲು ಆಹ್ವಾನಿಸಿದೆ. ಸುರೇಶ್ ಅವರು ಕೇಂದ್ರಪಾತ್ರದಲ್ಲಿ ಸೊಗಸಾದ ಅಭಿನಯವನ್ನು ನೀಡಿದರೆ ಉಳಿದ ಪಾತ್ರಧಾರಿಗಳೂ ಸಹಾ ಉತ್ಸಾಹದಿಂದ, ತನ್ಮಯತೆಯಿಂದ ಅಭಿನಯಿಸಿ ನಾಟಕದ ಯಶಸ್ಸಿಗೆ ಕಾರಣರಾದರು.ಪ್ರಸಿದ್ಧ ವಿಮರ್ಶಕ ಜಿ.ಹೆಚ್. ನಾಯಕ್, ವಿಜಯಮ್ಮ ಮೊದಲಾದವರು ನಾಟಕ ನೋಡಿ ಬೆನ್ನು ತಟ್ಟಿದ್ದಲ್ಲದೇ ಕೆಲ ಅಮೂಲ್ಯ ಸಲಹೆಗಳನ್ನೂ ನೀಡಿದರು.
ಹಾಗೆಯೇ ಇನ್ನೊಂದು ಮುಖ್ಯ ವಿಷಯವನ್ನೂ ಇಲ್ಲಿ ಸ್ಮರಿಸಿಕೊಳ್ಳಬೇಕು:

ಬೀದಿ ನಾಟಕಗಳಿಗೆ ಒಂದು ಖಚಿತ ಸ್ವರೂಪವನ್ನು ನೀಡಿ ಆ ಪ್ರಕಾರವನ್ನು ಜನಪ್ರಿಯಗೊಳಿಸಿದವರಲ್ಲಿ ‘ಸಮುದಾಯ’ ತಂಡದವರು ; ಎ ಎಸ್ ಮೂರ್ತಿ ಹಾಗೂ ವಿಜಯಮ್ಮ ಅಗ್ರಗಣ್ಯರಾಗಿದ್ದಾರೆ.ವಿಜಯಮ್ಮ ಹೀಗೆ ನೆನೆಸಿಕೊಳ್ಳುತ್ತಾರೆ: ” ಒಮ್ಮೆ ಕಾರಂತರು ಒಂದೆಡೆ ಭಾಷಣ ಮಾಡುತ್ತಾ,’ ನಾಟಕವನ್ನು ಪ್ರೇಕ್ಷಕರತ್ತ ಒಯ್ಯುವ, ಹೊಸ ಪ್ರೇಕ್ಷಕರನ್ನು ರಂಗಭೂಮಿಗೆ ಸೆಳೆಯುವ ಪ್ರಯತ್ನಗಳೇ ಆಗುತ್ತಿಲ್ಲ. ಕಲಾಕ್ಷೇತ್ರದಲ್ಲಿ ಯಾವುದೇ ನಾಟಕಕ್ಕೆ ಬಂದರೂ ಅವೇ ಚಿರಪರಿಚಿತ ಚಹರೆಗಳು ಎದುರಾಗುತ್ತವೆ.. ಬೀದಿಯಲ್ಲಿ ಕಡಲೇಕಾಯಿ ಮಾರುವವನಿಗೆ ನಾಟಕ ತಲುಪದೆ ಕಲಾಕ್ಷೇತ್ರದ ಗಾಜಿನ ಬಾಗಿಲುಗಳೇ ಅಡ್ಡಗೋಡೆಯಾಗಿಬಿಟ್ಟಿವೆ.. ನಾಟಕವನ್ನು ಪ್ರೇಕ್ಷಕನತ್ತ ಒಯ್ಯಬೇಕು.. ಆಗಲೇ ರಂಗಭೂಮಿ ಸಾರ್ಥಕವಾಗುವುದು’ ಎಂದಿದ್ದರು. ಅವರ ಮಾತುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಚಿಂತನೆಗೆ ತೊಡಗಿದಾಗಲೇ ಬೀದಿ ನಾಟಕಗಳನ್ನು ನಮ್ಮ ಪ್ರಬಲ ಅಸ್ತ್ರವಾಗಿ ಏಕೆ ಬಳಸಿಕೊಳ್ಳಬಾರದು ಎಂಬ ವಿಚಾರ ಮೂಡಿದ್ದು. ಬೀದಿಗೇ, ಪ್ರೇಕ್ಷಕನಿರುವಲ್ಲಿಗೇ ನಾಟಕವನ್ನು ಒಯ್ದು, ಜನಸಾಮಾನ್ಯ ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾನೆಂಬ ತಿಳುವಳಿಕೆಯನ್ನೂ ಅವನಿಗೆ ನೀಡುತ್ತಾ ಒಂದು ಮಟ್ಟದ ಸಾಮಾಜಿಕ ಎಚ್ಚರವನ್ನು ಮೂಡಿಸುವುದೂ ಸಹಾ ಈ ಬೀದಿ ನಾಟಕಗಳಿಂದ ಸಾಧ್ಯವಾಗುತ್ತದೆ ಅನ್ನಿಸಿತು..ಅಲ್ಲಿಂದ ಅನೇಕ ಬೀದಿ ನಾಟಕಗಳನ್ನು ರಚಿಸಿ ಸಿದ್ಧ ಪಡಿಸಿಕೊಂಡು ಬೀದಿ ಬೀದಿಗಳಲ್ಲಿ ಆಡಲು ತೀರ್ಮಾನಿಸಿದೆವು” ಎಂದು ವಿಜಯಮ್ಮ ನೆನಪಿನ ಬುತ್ತಿ ಬಿಚ್ಚುತ್ತಾರೆ. ಇದಿಷ್ಟೇ ಅಲ್ಲದೆ ಎ.ಎಸ್.ಮೂರ್ತಿಯವರು ‘ಬೀದಿ’ ಎಂಬ ರಂಗಭೂಮಿಗೇ ಮೀಸಲಾದ ಪತ್ರಿಕೆಯನ್ನೂ ಹೊರತಂದು ಹಲವಾರು ವರ್ಷಗಳ ಕಾಲ ನಡೆಸಿಕೊಂಡು ಬಂದರು!

ಇದೇ ಸಂದರ್ಭದಲ್ಲಿಯೇ ಐ ಬಿ ಹೆಚ್ ಪ್ರಕಾಶನ ಸಂಸ್ಥೆಯವರು ‘ಇಂಚರ’ ಎಂಬ ವಾರ ಪತ್ರಿಕೆಯನ್ನು ಆರಂಭಿಸಿದರು. ವಿಜಯಮ್ಮ ಅವರು ಈ ಪತ್ರಿಕೆಯ ಸಲಹಾ ಮಂಡಳಿಯಲ್ಲಿದ್ದರು. ರಂಗಭೂಮಿಯನ್ನು ಕುರಿತಾಗಿ ಒಂದು ಅಂಕಣವನ್ನು ಬರೆಯಲು ಸಾಧ್ಯವೇ ಎಂದು ನನ್ನನ್ನು ಕೇಳಿದರು ವಿಜಯಮ್ಮ!

ಪ್ರತಿವಾರ ರಂಗಭೂಮಿಗೆ ಸಂಬಂಧ ಪಟ್ಟಹಾಗೆ ಯಾವುದಾದರೊಂದು ವಿಷಯದ ಬಗ್ಗೆ ಮೂರು—ನಾಲ್ಕು ಪುಟಗಳ ಒಂದು ಅಂಕಣ ಬರಹವನ್ನು ಸಿದ್ಧಪಡಿಸಿ ಕೊಡಬೇಕಿತ್ತು.”ವಿಷಯದ ಆಯ್ಕೆ ನಿಮ್ಮದೇ; ಆದರೆ ಒಂದು ಸೂತ್ರವನ್ನಿಟ್ಟುಕೊಂಡು ಬರೆಯುತ್ತಾ ಹೋದರೆ ನಿಮಗೂ ಅನುಕೂಲ;ಓದುಗರ ಆಸಕ್ತಿಯನ್ನು ಕಾಪಾಡಿಕೊಂಡು ಹೋಗುವುದೂ ಸುಲಭವಾಗುತ್ತದೆ” ಎಂದು ಕಿವಿಮಾತು ಹೇಳಿದರು ವಿಜಯಮ್ಮ. ಅವರ ಮಾತಿನಂತೆಯೇ ‘ಉಗಮ’ದಿಂದ ಮೊದಲುಗೊಂಡು ರಂಗಭೂಮಿ ಬೆಳೆದುಬಂದ ಹಂತಗಳನ್ನು ದಾಖಲಿಸುವ ಪ್ರಯತ್ನವನ್ನು ನನ್ನ ಅಂಕಣದಲ್ಲಿ ಮಾಡಿದೆ.

ಇದೇ ಸಮಯದಲ್ಲೇ ಒಂದು ದಿನ ಕಲಾಕ್ಷೇತ್ರದಲ್ಲಿ ಭೇಟಿಯಾದ ವಿಜಯಮ್ಮ ಆಶ್ಚರ್ಯವೆನ್ನುವಂತೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ವಿಚಾರಿಸತೊಡಗಿದರು! “ರಂಗಭೂಮಿಯನ್ನೇ ನಂಬಿಕೊಂಡು ಬದುಕು ನಡೆಸುವುದು ಕಷ್ಟವಲ್ಲವೇ? ಎಲ್ಲಿಯಾದರೂ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ನಿಮ್ಮ ಬಿಡುವಿನ ವೇಳೆಯಲ್ಲಿ ರಂಗಭೂಮಿಯ ಚಟುವಟಿಕೆಗಳನ್ನೂ ಮುಂದುವರಿಸಿಕೊಂಡು ಹೋಗಬಹುದು..ಯೋಚನೆ ಮಾಡಿ” ಎಂದರು ವಿಜಯಮ್ಮ. ಅದುವರೆಗೆ ಕೆಲಸಕ್ಕಾಗಿ ನಾನು ಪಟ್ಟ ಬವಣೆಗಳನ್ನೂ, ರಂಗಭೂಮಿಯನ್ನು ಬಿಡಬೇಕಾದ ಸಂದರ್ಭ ಬಂದಲ್ಲಿ ಕೆಲಸಕ್ಕೆ ಸೇರುವ ಪ್ರಶ್ನೆಯೇ ಇಲ್ಲವೆಂಬ ನನ್ನ ನಿರ್ಧಾರವನ್ನೂ ಅವರಿಗೆ ತಿಳಿಸಿದೆ. “ನೇರ ವಿಷಯಕ್ಕೆ ಬರುತ್ತೇನೆ ಪ್ರಭೂ.. ಬೆಂಗಳೂರಿನಲ್ಲಿ ‘ಮುಂಜಾನೆ’ ಎಂಬ ಹೊಸತೊಂದು ಪತ್ರಿಕೆ ಆರಂಭವಾಗುತ್ತಿದೆ.. ಆ ಪತ್ರಿಕೆಯ ಸಂಪಾದಕರು ನನಗೆ ಆತ್ಮೀಯರಾದ ಎಸ್.ವಿ.ಜಯಶೀಲರಾವ್ ಅವರು. ಅವರಿಗೂ ಒಳ್ಳೆಯ ಉಪ ಸಂಪಾದಕರ ಅಗತ್ಯವಿದೆ.. ನಿಮ್ಮ ಯಾವ ರಂಗ ಚಟುವಟಿಕೆಗಳಿಗೂ ಅವರು ಖಂಡಿತ ನಿರ್ಬಂಧ ಹೇರುವವರಲ್ಲ.. ಬದಲಿಗೆ ಪ್ರೋತ್ಸಾಹವನ್ನೇ ನೀಡಿಯಾರು..ನಿಮ್ಮ ಬಗ್ಗೆ ನಾನವರಿಗೆ ಈಗಾಗಲೇ ಹೇಳಿದ್ದೇನೆ.. ಒಮ್ಮೆ ಹೋಗಿ ಅವರ ಜತೆ ಮಾತಾಡಿಕೊಂಡು ಬನ್ನಿ” ಅಂದರು ವಿಜಯಮ್ಮ.

ಈ ‘ಕೆಲಸ’ದ ವಿಚಾರವಾದರೂ ಏಕೆ ನನ್ನನ್ನು ಹೀಗೆ ಬಿಟ್ಟೂ ಬಿಡದಂತೆ ಕಾಡಿಸುತ್ತಿದೆ? ಹುಡುಕಿಕೊಂಡು ಅಲೆದಾಗ ದೂರ ಸರಿಯುತ್ತಾ,ನಾನು ದೂರ ಸರಿದಂತೆ ಪದೇ ಪದೇ ಬಂದು ಕಾಲಿಗೆ ತೊಡರಿಕೊಳ್ಳುತ್ತಾ ದ್ವಂದ್ವಕ್ಕೆ ದೂಡುತ್ತಿರುವ ಸಂಗತಿಯೇ ದೊಡ್ಡ ಸೋಜಿಗವೆನಿಸತೊಡಗಿತು! ಏನೇ ಆಗಲಿ,ವಿಜಯಮ್ಮ ನನ್ನ ಬಗ್ಗೆ ಅಷ್ಟು ಕಾಳಜಿ ವಹಿಸಿ ಈ ಒಂದು ಸಲಹೆ ನೀಡುತ್ತಿದ್ದಾರೆ;ಒಮ್ಮೆ ಹೋಗಿ ಮಾತಾಡಿಕೊಂಡು ಬಂದುಬಿಡೋಣ ಎಂದು ಮರುದಿನವೇ ಹೋಗಿ ಜಯಶೀಲರಾವ್ ಅವರನ್ನು ಭೇಟಿಯಾದೆ. ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ಜಯಶೀಲರಾವ್ ದೊಡ್ಡ ಹೆಸರು. ಅಷ್ಟೇ ಸರಳ ವ್ಯಕ್ತಿತ್ವ ಅವರದು. ನನ್ನ ಬಗ್ಗೆ ಎಲ್ಲಾ ವಿಚಾರಗಳನ್ನೂ ತಿಳಿದುಕೊಂಡು ನಂತರ ಹೀಗೆ ನುಡಿದರು: ” ಕನ್ನಡ ಎಂ ಎ ಮಾಡಿದೀರಿ..ಸುವರ್ಣ ಪದಕಗಳನ್ನ ಗಳಿಸಿದೀರಿ..nsd ಯಲ್ಲಿ ಕಲಿತು ಬಂದಿದೀರಿ..ಒಳ್ಳೆಯ ನಟ—ನಿರ್ದೇಶಕ ಅಂತ ಹೆಸರು ಮಾಡಿದೀರಿ..ನಿಮ್ಮನ್ನು ಸಂತೋಷವಾಗಿ ನನ್ನ ಸಂಪಾದಕ ವರ್ಗಕ್ಕೆ ಸ್ವಾಗತಿಸ್ತೇನೆ.ಆದರೆ ಒಂದು ತೊಡಕಿದೆ..” ಎಂದು ನುಡಿದು ಒಂದು ಕ್ಷಣ ಸುಮ್ಮನಾದರು. ನಾನು ಪ್ರಶ್ನಾರ್ಥಕವಾಗಿ ಅವರನ್ನೇ ನೋಡುತ್ತಿದ್ದೆ.” ಉಪಸಂಪಾದಕರ ಕೆಲಸ ಶಿಫ್ಟ್ ಗಳ ಕೆಲಸ..ಕೆಲ ದಿನ ಬೆಳಗಿನ ಪಾಳಿಯಾದರೆ ಕೆಲದಿನ ಮಧ್ಯಾಹ್ನ..ಕೆಲದಿನ ರಾತ್ರಿಯ ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ..ನಿಭಾಯಿಸಲು ನಿಮಗೆ ಸಾಧ್ಯವೇ?” ಎಂದರು ರಾಯರು.

ಓಹೋ! ಹಾಗಾದರೆ ಇದು ನನ್ನ ರಂಗಚಟುವಟಿಕೆಗಳಿಗೆ ಭಂಗ ತರುವುದರಲ್ಲಿ ಸಂದೇಹವೇ ಇಲ್ಲ! ಅಂದಮೇಲೆ ಈ ಕೆಲಸವನ್ನು ನಾನು ಒಪ್ಪಿಕೊಳ್ಳುವುದಾದರೂ ಹೇಗೆ? ಸಾಧ್ಯವೇ ಇಲ್ಲ! ಆದರೂ ಭಂಡತನದಿಂದ ಹೇಳಿದೆ:” ಸರ್, ಸಂಜೆಯ ವೇಳೆಗೆ ರಿಹರ್ಸಲ್ ಸಮಯಕ್ಕೆ ನನಗೆ ಬಿಡುವು ಸಿಗುವುದಾದರೆ ನಾನು ಕೆಲಸಕ್ಕೆ ಸೇರಲು ಸಿದ್ಧ” ಎಂದೆ! ರಾಯರು ನಕ್ಕುಬಿಟ್ಟರು. ” ಪ್ರಭೂ, ನಿಮ್ಮ ರಂಗಭೂಮಿಯ ಸೆಳೆತ ನಾನು ಬಲ್ಲೆ.. ವಿಜಯಮ್ಮ ಈ ಕುರಿತು ನನಗೆ ಹೇಳಿದ್ದಾರೆ..ಆದರೆ ನಿಮ್ಮೊಬ್ಬರಿಗಾಗಿ ನಿಯಮಗಳನ್ನೇ ಬದಲಾಯಿಸಲು ಸಾಧ್ಯವೇ ನೀವೇ ಹೇಳಿ” ಎಂದರು ರಾಯರು. “ಸಾಧ್ಯವಿಲ್ಲ ಸರ್…ನಾನು ಬಲ್ಲೆ. ಹಾಗೆಯೇ ಮಾಧ್ಯಮ ಕ್ಷೇತ್ರದಲ್ಲೂ ನಮ್ಮ ಪ್ರತಿಭೆ—ಸಾಮರ್ಥ್ಯಗಳನ್ನು ಸಾಬೀತು ಪಡಿಸಲು ಹೇರಳ ಅವಕಾಶಗಳಿವೆ ಎಂಬುದನ್ನೂ ಬಲ್ಲೆ. ಆದರೆ ರಂಗಭೂಮಿಯನ್ನೇ ನನ್ನ ಒಲವಿನ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡು, nsd ಯಲ್ಲಿ ಕಲಿತು ಇಷ್ಟು ತೊಡಗಿಕೊಂಡ ಮೇಲೆ ಈಗ ಅದರಿಂದ ವಿಮುಖನಾಗುವುದನ್ನು ನಾನು ಕಲ್ಪಿಸಿಕೊಳ್ಳಲಾರೆ. ದಯವಿಟ್ಟು ಕ್ಷಮಿಸಿ” ಎಂದು ನುಡಿದು ಅವರಿಗೆ ನಮಸ್ಕರಿಸಿ ಅವರ ಶುಭ ಹಾರೈಕೆಗಳನ್ನು ಪಡೆದುಕೊಂಡು ಹೊರಬಂದೆ. ವಿಜಯಮ್ಮನವರಿಗೆ ಈ ವಿಷಯ ನಾನು ತಿಳಿಸುವ ವೇಳೆಗಾಗಲೇ ಅವರಿಗೆ ಸುದ್ದಿ ಮುಟ್ಟಿತ್ತು! ” ನಿಜ ಹೇಳಬೇಕು ಅಂದರೆ ನಿಮ್ಮಿಂದ ಇದಕ್ಕಿಂತ ಭಿನ್ನವಾದ ವರ್ತನೇನ ನಾನು ನಿರೀಕ್ಷೆ ಮಾಡಿರಲಿಲ್ಲ ಪ್ರಭೂ.. ಹೋಗಲಿ ಬಿಡಿ..ರಂಗಭೂಮಿಗೆ ಇಂಥಾ ಬದ್ಧತೆಯ ಕಲಾವಿದರ ಅಗತ್ಯ ತುಂಬಾ ಇದೆ.. ಒಳ್ಳೇದಾಗಲಿ” ಎಂದು ಪ್ರೀತಿಯಿಂದ ಹರಸಿದರು ವಿಜಯಮ್ಮ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

26 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading