ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 166
—————
ದಾಖಲಿಸಲು ಮರೆತಿದ್ದ ಒಂದು ಸ್ವಾರಸ್ಯಕರ ಅನುಭವ ನೆನಪಾಗುತ್ತಿದೆ. ತಮಾಷೆಯೆಂದರೆ ಆ ಅನುಭವ ಕೂಡಾ ನೆನಪಿಗೆ ಸಂಬಂಧಪಟ್ಟದ್ದೇ! ಒಂದು ದಿನ ಬೆಳಗಿನ ಹೊತ್ತು ಕೆಲ ತಾಸುಗಳ ಮಟ್ಟಿಗೆ ನಾನು ‘ಘಜನಿ”ಯಾಗಿದ್ದೆ!
ರಾಧಿಕಾ exceptional artist visa ಗೆ ಅರ್ಜಿ ಹಾಕಿಕೊಂಡಿದ್ದ ಸಮಯವದು. ಲಂಡನ್ ನಿಂದ ಬರುವ ಸಿಹಿಸುದ್ದಿಗಾಗಿ ಅವಳು ತವಕದಿಂದ ಕಾಯುತ್ತಿದ್ದಳು. ಆ ಸಮಯದಲ್ಲೇ ‘ಅಸಾಧ್ಯ ಅಳಿಯ’ ಎನ್ನುವ ಒಂದು ಧಾರಾವಾಹಿಯಲ್ಲಿಯೂ ಮೂರು ನಾಲ್ಕು ಚಿತ್ರಗಳಲ್ಲಿಯೂ ನಾನು ಅಭಿನಯಿಸುತ್ತಿದ್ದೆ. ಕೊಂಚ ಒತ್ತಡದಲ್ಲಿಯೇ ಇದ್ದ ದಿನಗಳವು ಎನ್ನಬಹುದು.
ಒಂದು ದಿನ ಬೆಳಿಗ್ಗೆ ಎಂದಿನಂತೆ ಐದು ಗಂಟೆಗೆ ಎದ್ದು ಬೆಳಗಿನ ತಿಂಡಿ—ಅಡುಗೆಗಳ ಪ್ರಾಥಮಿಕ ಸಿದ್ಧತೆಗಳನ್ನು ಮುಗಿಸಿ ಹಾಲು ತರಲೆಂದು ಕೆಳಗಿಳಿದು ಹೊರಟೆ.
ಎಲ್ಲ ಕೆಲಸ ಮುಗಿಸಿ ಎಂಟುಗಂಟೆಯ ವೇಳೆಗೆ ಮನೆಯಿಂದ ಶೂಟಿಂಗ್ ಗೆ ಹೊರಡಬೇಕಿತ್ತು. ಹಿಂದಿನ ರಾತ್ರಿ ಸರಿಯಾಗಿ ನಿದ್ದೆಯಾಗಿರದ ಕಾರಣಕ್ಕೋ ಏನೋ ತಲೆ ಸಿಡಿಯುತ್ತಿತ್ತು. ಅಂಗಡಿಯಲ್ಲಿ ಹಾಲು ತೆಗೆದುಕೊಂಡು ಮರಳಿ ಬರುವಾಗ ಏನೋ ಒಂದು ರೀತಿಯ ವಿಚಿತ್ರ ಅನುಭವ..ಇದ್ದಕ್ಕಿದ್ದಂತೆ ಎಲ್ಲ ಮಸುಕಾದ ಹಾಗೆ…ತಲೆ ಸಣ್ಣಗೆ ತಿರುಗಿದ ಹಾಗೆ…ಹಾಗೇ ಸಾವರಿಸಿಕೊಂಡು ಅಪಾರ್ಟ್ ಮೆಂಟ್ ನ ಆವರಣದೊಳಗೇನೋ ಬಂದುಬಿಟ್ಟೆ; ಆದರೆ ಗೇಟ್ ನಿಂದ ನಮ್ಮ ಬ್ಲಾಕ್ ನ ಲಿಫ್ಟ್ ವರೆಗಿದ್ದ ನೂರೈವತ್ತು ಮೀಟರ್ ದೂರವನ್ನು ಕ್ರಮಿಸುವಷ್ಟರಲ್ಲಿ ನಾನು ಹೈರಾಣಾಗಿಹೋಗಿದ್ದೆ. ಒಂದು ಕ್ಷಣ ಅರಿವಿದ್ದಂತೆ ಭಾಸವಾದರೂ ಮರುಚಣ ಮತ್ತದೇ ಅಯೋಮಯ ಗೊಂದಲಿತ ಮಸುಕು ಮಸುಕು ಅನುಭವ! ಸಣ್ಣಗೆ ಗಾಬರಿಯಾಗತೊಡಗಿತು. ಅದು ಹೇಗೆ ಲಿಫ್ಟ್ ತನಕ ಬಂದು ಐದನೇ ಮಹಡಿ ತಲುಪಿ ನಮ್ಮ ಮನೆಯೊಳಗೆ ಬಂದು ಹಾಲ್ ನ ಸೋಫಾ ಮೇಲೆ ಕುಳಿತೆನೋ ನನಗೆ ಬೋಧವೇ ಇಲ್ಲ. ಸೂತ್ರದ ಗೊಂಬೆಯಂತಹ , ಯಾಂತ್ರಿಕ ಚಲನೆ ಅದಾಗಿತ್ತು. ಅಲ್ಲಿಂದಾಚೆಗೆ ಎಲ್ಲ ಶೂನ್ಯ.
ನಾನು ಸೋಫಾ ಮೇಲೆ ಮೂರ್ತಿಮತ್ತಾಗಿ ಕುಳಿತಲ್ಲಿಯೇ ಕುಳಿತಿದ್ದೇನೆ! ಚಲನವಲನವಿಲ್ಲ…ಮಾತಿಲ್ಲ ಕತೆಯಿಲ್ಲ..ರಂಜನಿ, ಮಕ್ಕಳು ಯಾರು ಬಂದು ಮಾತಾಡಿಸಿದರೂ ನನಗದು ಕೇಳಿಸುತ್ತಲೇ ಇಲ್ಲ..ಉತ್ತರಿಸುತ್ತಲೂ ಇಲ್ಲ! ಹಾಗಾಗಿದ್ದೂ ಸಹಾ ಅವರು ನಂತರ ನನಗದನ್ನು ಹೇಳಿ ಗೊತ್ತೇ ಹೊರತು ಆ ಕ್ಷಣದಲ್ಲಿ ಅರಿವಿಗೆ ಬಂದಿರುವುದಲ್ಲ! ನಾನಾಡಿದ್ದು ಒಂದೇ ಒಂದು ಮಾತಂತೆ: “ಹಾಲು ತಂದೆನಾ”?. ಅದನ್ನೇ ನಾಲ್ಕಾರು ಬಾರಿ ಕೇಳಿದ್ದೇನೆ..ರಂಜನಿ ಹೌದೆಂದು ಉತ್ತರಿಸಿದ್ದಾಳೆ..ನನಗದು ಅರ್ಥವಾಗಿಲ್ಲ. ಮತ್ತೆ ಶೂನ್ಯದತ್ತ ನೋಡುತ್ತಲೋ ತಲೆ ತಗ್ಗಿಸಿಕೊಂಡೋ ಕೂತಿದ್ದೇನೆ..ಯಾವ ಚಟುವಟಿಕೆಯೂ ಇಲ್ಲ!
ಹೀಗೆ ಸುಮಾರು ಎರಡೂವರೆ ತಾಸು ಕಳೆದಿರಬಹುದು…ತಲೆ ತಗ್ಗಿಸಿ ಕುಳಿತಿರುವ ನಾನು ಧಿಗ್ಗನೆದ್ದು ತಲೆಯೆತ್ತಿ ನೋಡುತ್ತೇನೆ— ನನ್ನೆದುರಿಗೆ ನಮ್ಮ ಕುಟುಂಬದ ವೈದ್ಯರಾದ ಡಾ॥ ಮಿಥುನ್ ಮಾಲಿ ಅವರು ನಿಂತಿದ್ದಾರೆ! ನಾನು ನಮ್ಮ ರೂಂನ ಮಂಚದ ಮೇಲೆ ಕುಳಿತಿದ್ದೇನೆ! ನಾನು ಚಕಿತನಾಗಿ ಉದ್ಗರಿಸುತ್ತೇನೆ: ” ಅರೆ! ಡಾಕ್ಟ್ರೇ! ನೀವು ಇಲ್ಲಿ!”.
ಆಗ ಡಾ॥ ಮಿಥುನ್ ಅವರು ಸಮಾಧಾನದ ಉಸಿರ ಬಿಡುತ್ತಾ,”ಅಬ್ಬಾ! ಇನ್ನು ಯೋಚನೆ ಇಲ್ಲ! ಪ್ರಭುಗಳಿಗೆ ಎಚ್ಚರವಾಯ್ತಲ್ಲಾ!” ಎಂದು ರಂಜನಿಯತ್ತ ನೋಡಿ ನಕ್ಕರು. ನಾನೂ ರಂಜನಿಯತ್ತ ತಿರುಗಿದೆ. ಆ ವೇಳೆಗಾಗಲೇ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡು ಕೆಂಪಗಾಗಿದ್ದವು. ಈಗ ನಾನು ಎಚ್ಚರಗೊಂಡದ್ದು ನೋಡಿ ಸಂತೋಷಕ್ಕೂ ಎರಡು ಹನಿಗಳು ಧುಮುಕಿಯೇಬಿಟ್ಟವು!
ಅದುವರೆಗೆ ಏನಾಗಿತ್ತೆಂಬ ಸಾಸಿವೆಯಷ್ಟೂ ಅರಿವು ನನಗೆ ಇರಲಿಲ್ಲವಾದ್ದರಿಂದ ನಾನು ಡಾ. ಮಿಥುನ್ ಅವರನ್ನು ಕೇಳಿದೆ: “ನನಗೇನಾಗಿತ್ತು ಡಾಕ್ಟ್ರೇ?”.
“ಅದೆಲ್ಲಾ ಆಮೇಲೆ ವಿವರವಾಗಿ ಮಾತಾಡೋಣ. ನೀವು ಸ್ವಲ್ಪ ಸುಧಾರಿಸಿಕೊಂಡು ಕ್ಲಿನಿಕ್ ಹತ್ರ ಬನ್ನಿ. ನಾನೂ ಮನೇಗೆ ಹೋಗಿ ರೆಡಿಯಾಗಿಬಂದುಬಿಡ್ತೀನಿ” ಎಂದು ನುಡಿದು ಹೊರಟರು.
ನಂತರ ಆವರೆಗೆ ನಡೆದದ್ದರ ಸಾರಾಂಶ ರಂಜನಿ ಹೇಳಿದಂತೆ ಹೀಗಿದೆ:
ಹಾಲ್ ನಲ್ಲಿ ಸೋಫಾ ಮೇಲೆ ಕುಳಿತು ನಾಲ್ಕಾರು ಬಾರಿ “ಹಾಲು ತಂದೆನಾ?” ಎಂದು ಕೇಳಿದ ನಾನು ನಂತರ ಯಾರೊಬ್ಬರ ಮಾತಿಗೂ ಸ್ಪಂದಿಸಲೇ ಇಲ್ಲವಂತೆ. ತಗ್ಗಿಸಿದ ತಲೆ…ಅಥವಾ ಶೂನ್ಯದತ್ತ ನೋಟ—ಅಷ್ಟೇ. ಸಹಜವಾಗಿಯೆ ರಂಜನಿಗೆ ವಿಪರೀತ ಗಾಬರಿಯಾಗಿದೆ! ಕಾಲೇಜ್ ಗೆ ಹೊರಟಿದ್ದ ಅನಿರುದ್ಧನನ್ನು ತಡೆದು ನಿಲ್ಲಿಸಿ ನನ್ನ ಜತೆಗಿರಲು ಹೇಳಿ ರಾಧಿಕಾಳನ್ನೂ ಕರೆದುಕೊಂಡು ತುಸುದೂರದಲ್ಲಿದ್ದ ಡಾ.ಮಿಥುನ್ ರ ಮನೆಗೆ ಅಕ್ಷರಶಃ ದೌಡಾಯಿಸಿದ್ದಾಳೆ! ರಂಜನಿಯ ಅಳುವನ್ನೂ ಅವಳ ತಲ್ಲಣವನ್ನೂ ನೋಡಿ ಗಾಬರಿಗೊಂಡ ಡಾ.ಮಿಥುನ್ ಆ ಕ್ಷಣವೇ ಅವಳೊಂದಿಗೆ ಹೊರಟು ಮನೆಗೆ ಬಂದಿದ್ದಾರೆ. ನನಗೆ ಎಚ್ಚರಾಗುವ ವೇಳೆಗಾಗಲೇ ಡಾ.ಮಿಥುನ್ ಮನೆಗೆ ಬಂದು ಒಂದು ತಾಸು ಕಳೆದುಹೋಗಿದೆ.
ಇಷ್ಟೂ ನಡೆದ ಘಟನೆಯನ್ನು ಮತ್ತೆ ಮತ್ತೆ ಪರಾಮರ್ಶಿಸಿದಾಗ ನಮಗೆ ಥಟ್ಟನೆ ಅನ್ನಿಸಿದ್ದು—’ಕಲಾಸಿಪಾಳ್ಯ’ ಶೂಟಿಂಗ್ ವೇಳೆಯಲ್ಲಿ ತಲೆಗೆ ಏಟು ಬಿದ್ದಿತ್ತಲ್ಲಾ, ಆ ಪೆಟ್ಟು ಹಿನ್ನೆಲೆಯಲ್ಲೇ ಇದ್ದು ಈಗ ಧಿಗ್ಗನೆ ಈ ರೂಪದಲ್ಲಿ ಮುನ್ನೆಲೆಗೆ ಬಂದಿರಬಹುದೇ? ಎಂದು! ಮರುಕ್ಷಣವೇ ಅಂದು ನನಗೆ ಅಸಾಧ್ಯ ಅಳಿಯ ಧಾರಾವಾಹಿಯ ಶೂಟಿಂಗ್ ಇದ್ದದ್ದು ನೆನಪಿಗೆ ಬಂದು ” ಅಯ್ಯೋ! ನಾನು ಶೂಟಿಂಗ್ ಗೆ ಹೊರಡಬೇಕು..ತಡವಾಗಿಬಿಟ್ಟಿದೆ” ಎಂದೆ. ರಂಜನಿ ತುಸು ಸಿಟ್ಟಿನಿಂದಳೇ ನುಡಿದಳು: “ಸರಿಹೋಯ್ತು! ಏನಾಗಿಹೋಯ್ತೋ ಏನೋ ಅಂತ ನಾವೂ ಆತಂಕ ಪಟ್ಟುಕೊಂಡು ಒದ್ದಾಡ್ತಿದ್ರೆ ಇವರಿಗಿಲ್ಲಿ ಶೂಟಿಂಗ್ ಚಿಂತೆ!”
“ಹಾಗಲ್ಲ ರಂಜು, ಕೊನೇಪಕ್ಷ ಅವರಿಗೆ ವಿಷಯ ತಿಳಿಸಬೇಕಲ್ಲವೇ? ಕಾಯ್ತಿರ್ತಾರೆ”.
” ಎಲ್ಲಾ ತಿಳಿಸಾಗಿದೆ. ಆಗಲೇ ಎಂಟುಹತ್ತು ಸಲ ಫೋನ್ ಮಾಡಿದ್ರು..ನಾನೇ ಮಾತಾಡಿ ನಿಮಗೆ ಹುಷಾರಿಲ್ಲ ಅಂತ ಹೇಳಿದೀನಿ. ಇನ್ನೊಂದು ವಾರ ತೊಂದರೆ ಕೊಡಬೇಡಿ ಅಂತಲೂ ಹೇಳಿಬಿಟ್ಟಿದೀನಿ” ಎಂದು ಮರುಮಾತಿಗೆ ಅವಕಾಶವಿಲ್ಲದಂತೆ ಖಡಾಖಂಡಿತ ದನಿಯಲ್ಲಿ ಹೇಳಿಬಿಟ್ಟಳು ರಂಜನಿ. ಆ ಹೊತ್ತಿಗೆ ಮೌನವೇ ಪರಮಸೂಕ್ತವೆನಿಸಿ ನಾನೂ ಸುಮ್ಮನಾಗಿಬಿಟ್ಟೆ.
ಅರ್ಧತಾಸು ಕಳೆದು ಪಕ್ಕದಲ್ಲೇ ಇದ್ದ ಡಾ.ಮಿಥುನ್ ಅವರ ಕ್ಲಿನಿಕ್ ಗೆ ಮೂವರೂ ಹೋದೆವು. ನಡೆದದ್ದಾದರೂ ಏನು? ಯಾಕಾಗಿ ಹಾಗಾಯಿತು? ಎಂಬುದನ್ನು ತಿಳಿದುಕೊಳ್ಳುವ ಆತಂಕ ತುಂಬಿದ ಕುತೂಹಲ ನಮ್ಮದು. ಡಾ.ಮಿಥುನ್ ಹೇಳಿದ್ದಿಷ್ಟು: “ಬಹುಶಃ ತುಂಬಾ ಒತ್ತಡದ ಸಮಯಗಳಲ್ಲಿ, ವಿಶ್ರಾಂತಿಯೇ ಇಲ್ಲದೆ ದುಡಿಯುವಾಗ, ನಿದ್ರೆ ತೀರಾ ಕಡಿಮೆಯಾದಾಗ ಮೆದುಳಿಗೆ ಸಿಗಬೇಕಾದಷ್ಟು ವಿಶ್ರಾಂತಿ ಸಿಕ್ಕಿರುವುದಿಲ್ಲ. ಅಂಥ ಸಮಯದಲ್ಲಿ ಮಿದುಳು ತನ್ನಂತಾನೇ ವಿಶ್ರಾಂತಿ ತೆಗೆದುಕೊಂಡುಬಿಡುತ್ತದೆ! ಇದನ್ನ ವೈದ್ಯಕೀಯ ಭಾಷೆಯಲ್ಲಿ brain fog ಅಂತ ಕರೀತಾರೆ. ತನ್ನ ಚಟುವಟಿಕೆಯನ್ನು ನಿಷ್ಕ್ರಿಯಗೊಳಿಸಿಕೊಂಡು ಮಲಗಿಬಿಡುವ ಮಿದುಳು ಅಂಥ ಸ್ಥಿತಿಯಲ್ಲಿ ಎಷ್ಟು ಸಮಯ ಬೇಕಾದರೂ ಇರಬಹುದು…ಕೆಲ ಗಂಟೆಗಳಿಂದ ಹಿಡಿದು ಕೆಲ ದಿನಗಳವರೆಗೆ ಅಥವಾ ತಿಂಗಳುಗಳ ವರೆಗೆ! ಅಂದರೆ ಯಾವಾಗಲೂ ಹೀಗೆ ಎಚ್ಚರ ತಪ್ಪಿದಂಥ ಸ್ಥಿತಿಯೇಇರುತ್ತದೆಂದಲ್ಲ.. ಒಂದು ರೀತಿಯ ಮಬ್ಬು ಮಬ್ಬು ಸ್ಥಿತಿ ಅದು..ಗಾಜಿನ ಮೇಲೆ ಮಂಜಿನ ಪರದೆ ಹರಡಿದ ಹಾಗೆ..”
ಡಾ.ಮಿಥುನ್ ಹೇಳುತ್ತಿದ್ದರೆ ನನಗೆ ಒಂದೆಡೆ ಎಂಥಾ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದೆನೆಂಬ ಆತಂಕ ಬಾಧಿಸುತ್ತಿದ್ದರೆ ಮತ್ತೊಂದೆಡೆ, “ಸಧ್ಯ..ಬೇಗನೇ ಎಚ್ಚರಗೊಂಡೆನಲ್ಲಾ” ಎಂಬ ಸಮಾಧಾನ ಬೆನ್ನು ನೇವರಿಸುತ್ತಿತ್ತು! “ಮುಂದೇನು ಮಾಡಬೇಕು ಡಾಕ್ಟ್ರೇ?” ಎಂದು ರಂಜನಿ ಆತಂಕದಿಂದ ಕೇಳಿದಳು. ಡಾ.ಮಿಥುನ್ ಅವಳ ಆತಂಕವನ್ನು ಗಮನಿಸಿ ನಸುನಗುತ್ತಾ, “ಹೆದರೊ ಅಂಥದ್ದೇನೂ ಇರೋಲ್ಲ ಮೇಡಂ..ಯಾವುದಕ್ಕೂ ಒಂದು brain scanning ಮಾಡಿಸಿಬಿಡಿ..just to rule out any ‘other’ possibilities.. ಏನೂ ಇಲ್ಲ ಅಂತ ಬಂದುಬಿಟ್ರೆ ವಿಶ್ರಾಂತಿಯ ಕೊರತೆಯಿಂದ ಹೀಗಾಗಿರೋದು ಅಂತ ಖಚಿತವಾಗಿಬಿಡುತ್ತೆ. ಈಗಲೇ ಹೋಗಿ scanning ಮಾಡಿಸಿಕೊಂಡು ಬಂದುಬಿಡಿ…tension ಮಾಡಿಕೋಬೇಡಿ..ಎಲ್ಲಾ ಸರಿಹೋಗುತ್ತೆ” ಎಂದು ನುಡಿದು ನಮ್ಮನ್ನು ಮನೆಗೆ ಹತ್ತಿರದಲ್ಲೇ ಇದ್ದ images diagnotics ಗೆ ಕಳಿಸಿಕೊಟ್ಟರು.
images diagnostics ನ ಮುಖ್ಯಸ್ಥರಾದ ಡಾ. ಶ್ರೀರಾಮ್ ಗೌಡರೂ ಸಹಾ ನಮ್ಮ ಆತ್ಮೀಯ ಗೆಳೆಯರೇ. ಅಲ್ಲಿಗೆ ಹೋಗುತ್ತಿದ್ದಂತೆ ಅವರೇ ಖುದ್ದಾಗಿ ನಮ್ಮ ಜೊತೆ ಬಂದು scanning ಮಾಡಿಸಿದರು. ತುಸು ಹೊತ್ತಿನಲ್ಲಿಯೇ ವರದಿಯೂ ಬಂದಿತು: “ಯಾವ ತೊಂದರೆಯೂ ಇಲ್ಲ ಪ್ರಭುಗಳೇ! ನಿಮ್ಮ ಮೆದುಳು ಸಕ್ರಿಯವಾಗಿ ಸಶಕ್ತವಾಗಿ ಕಾರ್ಯ ನಿರ್ವಹಿಸ್ತಿದೆ! ನಿಮ್ಮ ಮಿದುಳಿನ ವಯಸ್ಸು ಇನ್ನೂ ಮೂವತ್ತು ದಾಟಿಲ್ಲ ಅಂತ ಹೇಳಬಹುದು” ಎಂದು ಜೋರಾಗಿ ನಕ್ಕರು scanning ಮಾಡಿದ ವೈದ್ಯರು. ಮೂವತ್ತೇ? ಅಂದರೆ ಮೂವತ್ತರ ನಂತರ ನನ್ನ ಮೆದುಳು ಬೆಳೆದೇ ಇಲ್ಲವೇ ಎಂದು ಕೇಳಬೇಕೆನಿಸಿದರೂ ಅಧಿಕ ಪ್ರಸಂಗತನವಾದೀತೆಂದು ಎಣಿಸಿ ಅವರಿಗೆ ಧನ್ಯವಾದಗಳನ್ನರ್ಪಿಸಿ ಹೊರಬಂದೆ. ಶ್ರೀರಾಮ್ ಗೌಡರೂ ಸಹಾ ಬೆನ್ನು ತಟ್ಟಿ “ಚಿಂತೆ ಮಾಡಬೇಡಿ ಸರ್..ಕಲಾವಿದರಿಗೆ ಹಾಗೆಲ್ಲಾ ತೊಂದರೆ ಆಗೋದಕ್ಕೆ ನಾವು ಬಿಡೋದಿಲ್ಲ! we are with you”! ಎಂದಾಗ ನಿಜಕ್ಕೂ ಹೃದಯ ತುಂಬಿಬಂದಿತ್ತು!
ತಲೆಭಾರವೂ—ಖಚಿತವಾಗಿ ಹೇಳಬೇಕೆಂದರೆ ‘ಒಳತಲೆ’ ಭಾರವೂ ಇಳಿದಂತಾಗಿ ಹಗುರಾದಂತೆನಿಸತೊಡಗಿತ್ತು!
ಹೀಗೇ ಬಾಧೆಯನ್ನು ಅನುಭವಿಸಿದ ಮತ್ತೊಂದು ಪ್ರಸಂಗವೂ ನೆನಪಿಗೆ ಬರುತ್ತಿದೆ, ಹೇಳಿಯೇ ಬಿಡುತ್ತೇನೆ. ಇಲ್ಲಿ ಬಾಧೆಗೊಳಗಾಗಿದ್ದು ನನ್ನ ಮೆದುಳಲ್ಲ, ಕಣ್ಣು!
ಒಂದು ಧಾರಾವಾಹಿಯ ಚಿತ್ರೀಕರಣ ರಾಮೋಹಳ್ಳಿಯ ಜಿ.ವಿ.ಅಯ್ಯರ್ ಅವರ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಗುರುಕುಲವೊಂದರಲ್ಲಿ ಮಕ್ಕಳಿಗೆ ವೇದಾಭ್ಯಾಸ…ಹೋಮ ಹವನಾದಿಗಳ ಆಚರಣೆ ಇತ್ಯಾದಿಗಳೆಲ್ಲವೂ ಚಟುವಟಿಕೆಗಳ ಭಾಗವಾಗಿದ್ದವು. ಸಾಕಷ್ಟು ದೊಡ್ಡ ಅಗ್ನಿಕುಂಡವನ್ನೇ ಸಿದ್ಧಪಡಿಸಿದ್ದರು. ಬೆಳಗಿನಿಂದ ರಾತ್ರಿಯವರೆಗೆ ಚಿತ್ರೀಕರಣ ಒಂದೇ ಸಮ ನಡೆಯುತ್ತಲೇ ಇತ್ತು..ಅಗ್ನಿಕುಂಡ ಉರಿಯುತ್ತಲೇ ಇತ್ತು..ಆಗಾಗ್ಗೆ ಒಂದಷ್ಟು ಕಡ್ಡಿ ಕಟ್ಟಿಗೆ ತಂದು ಹೋಮಕುಂಡಕ್ಕೆ ಹಾಕುತ್ತಿದ್ದರು. ಇದು ಸಾಲದೆಂಬಂತೆ ಕಲರ್ ಟೋನ್ ಗಳು ಚಂದ ಬರಲೆಂದು ಸಾಂಬ್ರಾಣಿ ಹೊಗೆಯನ್ನು ಆಗಾಗ್ಗೆ ವಾತಾವರಣಕ್ಕೆ ಹಾಯಿಸುತ್ತಿದ್ದರು. ಸಂಜೆಯ ವೇಳೆಗೆ ಸಾಂಬ್ರಾಣಿ ಮುಗಿದುಹೋದ ಕಾರಣಕ್ಕೋ ಏನೋ ಕಟ್ಟಿಗೆಯ ತುಂಡುಗಳನ್ನೇ ಬಾಂಡಲಿಗಳಲ್ಲಿ ಉರಿಸಿ ಹೊಗೆ ಸಿದ್ಧಪಡಿಸಿ ಹಾಯಿಸತೊಡಗಿದರು. ಪ್ರಾರಂಭದಲ್ಲಿಯೇ ಯಾಕೋ ಇದು ಸರಿಹೋಗುತ್ತಿಲ್ಲವೆನ್ನಿಸಿತು…ಕಣ್ಣುಗಳಿಗೆ ಹಿಂಸೆಯಾಗತೊಡಗಿತು! ‘ದಯವಿಟ್ಟು ಸಾಂಬ್ರಾಣಿಯನ್ನೇ ಹಾಕಿ ಹೊಗೆ ತರಿಸಿ’ ಎಂದು ಕೇಳಿಕೊಂಡೆ. ‘ಸಾಂಬ್ರಾಣಿಯನ್ನೇ ಹಾಕ್ತಿರೋದು ಸಾರ್..’ಎಂಬ ಹಾರಿಕೆಯ ಉತ್ತರ ಬಂತು. ಹೊಗೆಯಿಂದಲ್ಲದಿದ್ದರೂ ಘಮದಿಂದ ಸಾಂಬ್ರಾಣಿ ಪತ್ತೆ ಆಗುವುದಿಲ್ಲವೇ! ಇವೆಲ್ಲಾ ಒಂದು ರೀತಿಯ ಉಡಾಫೆಯ ಧೋರಣೆ! ಸ್ವಲ್ಪ ಹೊತ್ತಿನ ಚಿತ್ರೀಕರಣಕ್ಕೋಸ್ಕರ ಹತ್ತಾರು ಕಿಮೀ ಹೋಗಿ ಸಾಂಬ್ರಾಣಿ ತರಲಾದೀತೇ? ಸ್ವಲ್ಲ ಅಡ್ಜಸ್ಟ್ ಮಾಡಿಕೊಳ್ಳಬೇಕಪ್ಪಾ ಅನ್ನುವ ಬೇಕಾಬಿಟ್ಟಿತನ! ಎಲ್ಲರೂ ಹಾಗೆಂದಲ್ಲ..ಆದರೆ ಸಿಗುವ ಇಂತಹ ಒಬ್ಬೊಬ್ಬರಿಂದಲೇ ಚಿತ್ರಹಿಂಸೆ!
ಹೇಗೋ ಸಹಿಸಿಕೊಂಡು ಚಿತ್ರೀಕರಣ ಮುಗಿಸಿ ರಾತ್ರಿ ಮನೆ ತಲುಪಿದಾಗ ರಾತ್ರಿ ಹನ್ನೊಂದು ದಾಟಿತ್ತು. ಕಣ್ಣುಗಳು ವಿಪರೀತ ಉರಿಯುತ್ತಿದ್ದವು. ಮನೆಗೆ ಬಂದೊಡನೆ ಮುಖ ತೊಳೆದುಕೊಂಡು ಮನೆಯಲ್ಲೇ ಇದ್ದ eye drops ಹಾಕಿಕೊಂಡು ಮಲಗಿದೆ. ತುಸು ಹೊತ್ತಿನಲ್ಲೇ ಸಹಿಸಲಾಗದಷ್ಟು ಉರಿ ಬಾಧಿಸತೊಡಗಿತು! ವಿಚಿತ್ರವೆಂದರೆ ಕಣ್ಣು ಮುಚ್ಚಿಕೊಂಡರೂ ಉರಿಯುತ್ತಿದೆ..ತೆರೆದರೂ ಉರಿಯುತ್ತಿದೆ! ಸುಮಾರು ಹೊತ್ತು ಸಂಕಟ ಅನುಭವಿಸಿದ ಮೇಲೆ ಇನ್ನು ಸಾಧ್ಯವೇ ಇಲ್ಲ ಅನ್ನಿಸಿದಾಗ ನಮ್ಮ ಆತ್ಮೀಯ ನೇತ್ರವೈದ್ಯರಾದ ಡಾ॥ಪುನೀತ್ ಕುಮಾರ್ ಅವರಿಗೆ ಫೋನ್ ಮಾಡಿದೆ. ಮಧ್ಯರಾತ್ರಿಯಲ್ಲಿ ಕರೆ ಮಾಡಿದ್ದರೂ ಕ್ಷಣಮಾತ್ರವೂ ವಿಳಂಬ ಮಾಡದೇ ಕರೆ ಸ್ವೀಕರಿಸಿದ ಡಾ॥ಪುನೀತ್ ಅವರು ತಮ್ಮ ಎಂದಿನ ಸಾಂತ್ವನದ ದನಿಯಲ್ಲಿ—’ಹೇಳಿ ಸರ್..ಇಷ್ಟು ಹೊತ್ತಿನಲ್ಲಿ ಫೋನ್ ಮಾಡಿದೀರಿ ಅಂದ್ರೆ ತುಂಬಾನೇ ತೊಂದರೆ ಆಗಿರಬೇಕು” ಎಂದರು. ನಾನು ತಡರಾತ್ರಿಯ ಕರೆಗೆ ಕ್ಷಮೆ ಯಾಚಿಸುತ್ತಾ ನಡೆದದ್ದೆಲ್ಲವನ್ನೂ ಸಾದ್ಯಂತವಾಗಿ ವಿವರಿಸಿದೆ. ಎಲ್ಲವನ್ನೂ ಕೇಳಿಸಿಕೊಂಡ ಡಾ॥ಪುನೀತ್ ಅವರು,”ಬಹುಶಃ ಯಾವುದೋ ಕೆಟ್ಟ ಕಾಡು ಗಿಡದ ಸೌದೇನೋ ಕಡ್ಡಿಗಳನ್ನೋ ಬಳಸಿದಾರೆ ಅಂತ ಕಾಣುತ್ತೆ.. ಅಂಥದ್ದೆಲ್ಲಾ ಬಳಸಲೇ ಬಾರದು..ಕಣ್ಣಿಗಷ್ಟೇ ಅಲ್ಲ, lungs ಗೂ ತುಂಬಾ ಅಪಾಯಕಾರಿ ಅದು. ನನಗನ್ನಿಸೋಮಟ್ಟಿಗೆ ನಿಮ್ಮ ಕಣ್ಣಗುಡ್ಡೆಯ ಮೇಲೆ scratch ಆಗಿದೆ..ಔಷಧಿ ಹಾಕಿದರೆ ಬೇಗ ಸರಿಹೋಗುತ್ತೆ ಆದ್ರೆ ಈ ಹೊತ್ತಲ್ಲಿ ಯಾವ ಅಂಗಡೀನೂ ತೆಗೆದಿರೋಲ್ಲ..ಬಹುಶಃ ಬೆಳತನಕ ನೀವು ಸ್ವಲ್ಪ ತಾಳ್ಮೆಯಿಂದ ನೋವು ಸಹಿಸಿಕೋಬೇಕಾಗುತ್ತೆ..ಒಂದು ಕೆಲಸ ಮಾಡಿ: ಐದೈದು ನಿಮಿಷಕ್ಕೊಂದ್ಸಲ ಕಣ್ಣಿನ ಮೇಲೆ ಒದ್ದೆ ಬಟ್ಟೆ ಇಟ್ಟುಕೊಂಡು ಮೃದುವಾಗಿ ಒತ್ತಿಕೋತಿರಿ..ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗುತ್ತೆ..ಬೆಳಿಗ್ಗೆ ಬೇಗ ಕ್ಲಿನಿಕ್ ಹತ್ರ ಬಂದುಬಿಡಿ..ನಿಮ್ಮ ಕಣ್ಣು ನಾನು ರೆಡಿ ಮಾಡಿಕೊಡ್ತೀನಿ” ಎಂದು ಸಮಾಧಾನ ಹೇಳಿದರು.
ಅವರು ಹೇಳಿದಂತೆಯೇ ರಾತ್ರಿಯಿಡೀ ರಂಜನಿ ತಣ್ಣೀರು ಬಟ್ಟೆ ಕಣ್ಣಿನ ಮೇಲೆ ಇಟ್ಟುಕೊಡುತ್ತಲೇ ಇದ್ದಳು.. ಆ ರಾತ್ರಿ ಕಳೆದು ಬೆಳಗಾಗುವುದೇ ಇಲ್ಲವೇನೋ ಎನಿಸುವಷ್ಟು ದೀರ್ಘರಾತ್ರಿ ಅದಾಗಿತ್ತು!
ಮರುದಿನ ಬೆಳಗಾಗುವುದನ್ನೇ ಕಾದಿದ್ದು ಬೇಗಬೇಗ ಸಿದ್ಧರಾಗಿ ಕ್ಲಿನಿಕ್ ಗೆ ಹೊರಟೆವು. ಪುನೀತ್ ಡಾಕ್ಟರ್ ಅವರನ್ನು ನೋಡುತ್ತಿದ್ದ ಹಾಗೇ ಅರ್ಧ ನಮ್ಮ ಬಾಧೆಗಳೆಲ್ಲಾ ದೂರವಾಗಿಬಿಡುತ್ತಿದ್ದವು! ಕಣ್ಣು ತಪಾಸಣೆ ಮಾಡಿದ ಡಾ॥ಪುನೀತ್ ಅವರು,”ನಾನು ಹೇಳಿದ ಹಾಗೇ ಆಗಿದೆ..ಒಳಭಾಗದಲ್ಲಿ ಕಣ್ಣಗುಡ್ಡೆ ಮೇಲೆ scratch ಆಗಿದೆ! ಚಿಂತೆ ಮಾಡಬೇಡಿ ಸರ್..ಒಳ್ಳೇ ointment ಕೊಡ್ತೀನಿ..ಮೂರು ಸಲ ಹಚ್ಚಿಕೊಳ್ಳೋ ಅಷ್ಟರಲ್ಲಿ you will be all right…ಆದರೂ ಎರಡು ದಿನ ರೆಸ್ಟ್ ತೊಗೊಂಡುಬಿಡಿ ” ಎಂದು ಸೂಕ್ತ ಸಲಹೆಗಳನ್ನು ನೀಡಿ ನಮ್ಮನ್ನು ಕಳಿಸಿಕೊಟ್ಟರು ಡಾ॥ಪುನೀತ್.
ಮನೆಗೆ ಬರುತ್ತಿದ್ದಂತೆ ಅದೇ ಧಾರಾವಾಹಿಯವರ ಫೋನ್ ಬಂದಿತು: “ಸರ್…ನಾಳೆ ಅರ್ಜೆಂಟ್ ನಿಮ್ಮ ಡೇಟ್ ಬೇಕು ಸರ್…” ಎಂದರು ಮ್ಯಾನೇಜರ್. ನಾನು ನಡೆದದ್ದೆಲ್ಲವನ್ನೂ ವಿವರಿಸಿ ಒಂದಿಬ್ಬರ ಹೊಣೆಗೇಡಿತನದಿಂದ ಏನೇನು ಅನಾಹುತಗಳಾಗುತ್ತವೆ ನೋಡಿ ಎಂದು ಭಾವಪೂರ್ಣವಾಗಿ ವಿವರಿಸುತ್ತಿದ್ದರೆ ಆ ಮ್ಯಾನೇಜರ್ ಮಹಾಶಯ “ಅಯ್ಯೋ ಶೂಟಿಂಗ್ ನಲ್ಲಿ ಇದೆಲ್ಲಾ ಕಾಮನ್ನು ಸರ್…ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು” ಎಂದುಬಿಡುವುದೇ! ನನ್ನ ಆಕ್ರಂದನವನ್ನು ಕೇಳಿಸಿಕೊಳ್ಳುವಷ್ಟಾದರೂ ತಾಳ್ಮೆ ಬೇಡವೇ ಅವನಿಗೆ! ಅಷ್ಟಕ್ಕೇ ಸುಮ್ಮನಾಗಲಿಲ್ಲ ಆ ಭೂಪತಿ! “ನಾಳೆ ಎಂಟುಗಂಟೆ ಅದೇ ಲೊಕೇಷನ್ನು ಸರ್” ಎಂದ! ನನಗೂ ಸಿಟ್ಟು ಉಕ್ಕಿ ಬಂದುಬಿಟ್ಟಿತು! “ನಾಳೆ ನನ್ನ ಡೇಟಿಲ್ಲ..ಇದ್ರೂ ನಾನು ಕೊಡೋಲ್ಲ..ನಾನು ಬರೋಲ್ಲ” ಎಂದು ಖಾರವಾಗಿಯೇ ನುಡಿದೆ. “ಸರ್..ಹಾಗನ್ನಬೇಡಿ ಸರ್..ಕುತ್ತಿಗೇಗೆ ಬಂದುಬಿಟ್ಟಿದೆ..ನಾಡಿದ್ದೇ ಆ ಸೀನ್ ಟೆಲಿಕಾಸ್ಟು” ಎಂದು ಪೇಚಾಡಿಕೊಂಡ ಆ ಮ್ಯಾನೇಜರ್. ನಾನು ಆಗ ಪರಮ ಶಾಂತಿಯಿಂದ ಅತ್ಯಂತ ಮೃದುವಾದ ಧ್ವನಿಯಲ್ಲಿ ಹೇಳಿದೆ:
“ಮ್ಯಾನೇಜರ್ ಸಾಹೇಬ್ರೇ..ಶೂಟಿಂಗ್ ನಲ್ಲಿ ಇದೆಲ್ಲಾ ತುಂಬಾ ಕಾಮನ್ನು ಬಿಡೀಪ್ಪಾ..ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು”!!!
| ಮುಂದಿನ ವಾರಕ್ಕೆ |






0 Comments