
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
68
ಇದೇ ಸಂದರ್ಭದಲ್ಲಿ ಸಂಕೇತ್ ತಂಡದಿಂದ ಹೊಸ ನಾಟಕದಲ್ಲಿ ಪಾತ್ರ ಮಾಡಲು ಆಹ್ವಾನ ಬಂದಿತು.ನಾಟಕದ ಹೆಸರು ‘ಆಟ ಬೊಂಬಾಟ್’.ಶಂಕರ ನಾಗ್ ಅವರೇ ಈ ನಾಟಕವನ್ನು ನಿರ್ದೇಶಿಸುವವರಿದ್ದರು.ವಾಸ್ತವವಾಗಿ ಮರಾಠಿ ನಾಟಕವೊಂದರ ಆಧಾರದ ಮೇಲೆ ರಚಿತವಾಗಿದ್ದ ಈ ನಾಟಕದ ಮೊದಲ ಕರಡನ್ನು ನಾನೇ ಸಿದ್ಧ ಪಡಿಸಿದ್ದೆ! ದೂರದರ್ಶನಕ್ಕೂ ಸೇರುವ ಮೊದಲು, ಎರಡು—ಮೂರು ದಿನಗಳ ಕಾಲ ಅರುಂಧತಿ ನಾಗ್ ಅವರೊಟ್ಟಿಗೆ ಕುಳಿತು ಈ ನಾಟಕದ ಮೊದಲ ಹಂತದ ಭಾಷಾಂತರವನ್ನು ಮುಗಿಸಿದ್ದೆ.ಆನಂತರದ ದಿನಗಳಲ್ಲಿ , ಬಹುಶಃ ನಾನು ಬಾಂಬೆಗೆ ಹೋಗಿದ್ದ ಸಮಯದಲ್ಲಿರಬೇಕು, ನಚ್ಚಿ (ಟಿ.ಎನ್.ನರಸಿಂಹನ್) ಈ ನಾಟಕವನ್ನು ಪೂರ್ತಿ ತಿದ್ದಿ ಹೊಸದಾಗಿಯೇ ಬರೆದಿದ್ದ.
‘ನಾಟಕ ರೂಪಾಂತರ ಮಾಡಿದವರು ಎಂದು ನಿಮ್ಮಿಬ್ಬರ ಹೆಸರನ್ನೂ ಹಾಕುತ್ತೇನೆ’ ಎಂದು ಶಂಕರ್ ನಾಗ್ ಹೇಳಿದರೂ ನನಗೇಕೋ ಅದು ಇಷ್ಟವಾಗಲಿಲ್ಲ.ಕಾರಣ ಇಷ್ಟೇ:ನಚ್ಚಿ ಅವನ ಶೈಲಿಗೆ ಅನುಗುಣವಾಗಿ ನನ್ನ ಬರವಣಿಗೆಯ ಬಹಳಷ್ಟು ಭಾಗಗಳನ್ನು ಬದಲಾಯಿಸಿದ್ದ.ನನ್ನದೆನ್ನುವುದು ಅಲ್ಲಿದ್ದದ್ದು ನೂರಕ್ಕೆ ಇಪ್ಪತ್ತರಷ್ಟು ಇದ್ದಿರಬಹುದಷ್ಟೇ! ಅಷ್ಟಕ್ಕೇ ಹೆಸರು ಹಾಕಿಕೊಳ್ಳುವುದು ಏಕೋ ಸರಿ ಕಾಣದೆ ರೂಪಾಂತರದ ಶ್ರೇಯ ನಚ್ಚಿ ಒಬ್ಬನಿಗೇ ದಕ್ಕಲಿ ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟೆ. ಈಗ ಆ ನಾಟಕದ ಒಂದು ಮುಖ್ಯಪಾತ್ರ—ಒಂದು ರೀತಿಯಲ್ಲಿ ನಾಯಕ ಪಾತ್ರವೆಂದೇ ಹೇಳಬೇಕು—ಅದರ ನಿರ್ವಹಣೆಗಾಗಿಯೇ ನನ್ನನ್ನು ಆಹ್ವಾನಿಸಿದ್ದು.ಅರುಂಧತಿ ಅವರು ನನ್ನ ಜೋಡಿ; ಉಳಿದ ಮುಖ್ಯ ಪಾತ್ರಗಳಲ್ಲಿ ಶಂಕರನಾಗ್ ,ರಮೇಶ್ ಭಟ್ ,ಸುಧೀಂದ್ರ,ಜಗದೀಶ್ ಮಲ್ನಾಡ್ , ಸಂಕೇತ್ ಕಾಶಿ,ಗಣೇಶ್, ಪುಟ್ಟಿ ಮುಂತಾದವರು ಅಭಿನಯಿಸುವವರಿದ್ದರು.
ನಾಟಕದ ತಾಲೀಮು ಆರಂಭವಾಯಿತು. ಮೊದಲ ಓದಿನ ನಂತರ ನನಗೆ ತಿಳಿದುಬಂದ ಒಂದು ಸಂಗತಿಯಿಂದ ನನಗೆ ಸಣ್ಣ ನಡುಕ ಆರಂಭವಾಯಿತು! ‘ಆಟ ಬೊಂಬಾಟ್’ ನಾಟಕದಲ್ಲಿ ನಾಲ್ಕು ಹಾಡುಗಳಿದ್ದವು; ಅದರಲ್ಲಿ ಒಂದು ನನ್ನ solo ಹಾಡು;ಎರಡು ಯುಗಳಗೀತೆಗಳು—ನಾನು ಹಾಗೂ ಅರುಂಧತಿ ಇಬ್ಬರೂ ಹಾಡುವುದು! ಅದೂ ರಂಗದ ಮೇಲೇ, ನಾವೇ ಹಾಡಬೇಕು! ಚಿಕ್ಕಂದಿನಿಂದಲೂ ಹಾಡು—ಸಂಗೀತಗಳಲ್ಲಿ ಅಪಾರವಾದ ಆಸಕ್ತಿ ಇದ್ದರೂ ನನ್ನ ಸ್ವಭಾವ ಜನ್ಯ ಸಂಕೋಚದಿಂದಾಗಿ ಹಾಡಲು ಕೊಂಚ ಹಿಂದೇಟು ಹಾಕುತ್ತಿದ್ದೆ.ಸ್ವರ—ಶೃತಿಬದ್ಧವಾಗಿ ಹಾಡಬಲ್ಲೆನಾಗಿದ್ದರೂ ‘ಅಕಸ್ಮಾತ್ ಅಪಸ್ವರ ಬಂದುಬಿಟ್ಟರೆ..ಶೃತಿ ತಾಳ ತಪ್ಪಿಬಿಟ್ಟರೆ’ ಎಂಬ ಅಳುಕಿನಿಂದ ಹಿನ್ನಡೆಯಾಗಿಬಿಡುತ್ತಿತ್ತು! ಬೇರೆಲ್ಲಾ ಸಂಕೋಚ—ನಾಚಿಕೆಗಳಿಂದ ಮುಕ್ತನಾಗಿದ್ದರೂ ಹಾಡಿಗೆ ಸಂಬಂಧ ಪಟ್ಟಹಾಗೆ ಮಾತ್ರ ಯಾಕೋ ಅಳುಕು ದೂರವಾಗಿರಲಿಲ್ಲ.ಅದನ್ನೇ ನೇರವಾಗಿ ಶಂಕರನಿಗೆ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಟ್ಟುಬಿಡುವ ಪೈಕಿಯವನಾಗಿರಲಿಲ್ಲ ಶಂಕರ! “ನೀನು ಈ ಪಾತ್ರ ಮಾಡಲೇಬೇಕು..stage ಮೇಲೆ ಹಾಡಲೇಬೇಕು..this is a challenge for you!” ಎಂದು ಹಠ ಹಿಡಿದುಬಿಟ್ಟ! ಉಪಾಯವೇ ಇಲ್ಲದೇ ತಾಲೀಮು ಶುರು ಮಾಡಿದೆ.ರಂಗದ ಮೇಲೆ ಒಂದು ದೊಡ್ಡ ಪಿಯಾನೋ..ಅದನ್ನು ನುಡಿಸಲು ಅನಿತಾ ಎಂಬ ಪರಿಣತ ವಾದಕಿ! ಜೊತೆಗೆ ಯುವ ಕಲಾವಿದ ವೆಂಕಿಯ ತಬಲಾ ಸಾಥಿ! ಹಾಡುಗಳನ್ನು ಬರೆದುಕೊಟ್ಟವ ಮತ್ತೊಬ್ಬ ಆತ್ಮೀಯ ಮಿತ್ರ—ಎಂ ಎನ್ ವ್ಯಾಸರಾವ್! ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದವರು ಸುಗಮ ಸಂಗೀತದ ‘ದೊರೆ’ ಮೈಸೂರು ಅನಂತಸ್ವಾಮಿಯವರು! ಅಯ್ಯೋ! ಇಂಥ ದಿಗ್ಗಜರ ರಚನೆ—ಸಂಯೋಜನೆಗಳನ್ನು ನಾನು ಹಾಡಬೇಕು! ಇದೆಂಥಾ ಸತ್ವ ಪರೀಕ್ಷೆ! ಅನಂತಸ್ವಾಮಿಯವರೇ ಒಂದೆರಡು ಬಾರಿ ಖುದ್ದಾಗಿ ಬಂದು ನನಗೆ ಹಾಡುಗಳನ್ನು ಹೇಳಿಕೊಟ್ಟಿದ್ದೂ ಆಯಿತು.”ಕೈ ಲಟಿಕೆ ಮುರಿದಾಗ..ಮೈಮುರಿದು ನಿಂತಾಗ ಎದೆಯಲ್ಲಿ ಅರಳಿತ್ತು ಹೆಸರು” ಎಂದು ಆರಂಭವಾಗುತ್ತಿದ್ದ ನನ್ನ solo ಹಾಡನ್ನು ಹಾಡುವಾಗ ಶಂಕರ ತಮಾಷೆ ಮಾಡುತ್ತಿದ್ದ: “ಇದು ತುಂಬಾ romantic song ಶ್ರೀನಿವಾಸ್! ಮುಕೇಶ್ ಥರಾ ಹಾಡಬೇಡ”!
ನನ್ನ ಒದ್ದಾಟ—ಆತಂಕಗಳನ್ನು ನೋಡಿ ತಡೆಯಲಾರದೆ ಒಂದು ದಿನ ಶಂಕರ ಸಂಕೇತ್ ಕಾಶಿಗೆ ಹೇಳಿದ: “ಕಾಶಿ, ಇವನ್ನ ಕರಕೊಂಡು ಹೋಗಿ ಒಂದು ಬೀರ್ ಕುಡಿಸಿಕೊಂಡು ಬಾರೋ..ಸ್ವಲ್ಪ ಛಳಿ ಬಿಟ್ಟು ಹಾಡ್ತಾನೆ ಅಂತ ಕಾಣುತ್ತೆ!” (ನನ್ನತ್ತ ತಿರುಗಿ) ” ಆಮೇಲೆ ದಿನಾ ಅದೇ ರೂಢಿ ಮಾಡಿಕೋಬೇಡ! ಏನಿದ್ರೂ initial hiccups ದೂರ ಆಗಲಿ ಅಂತಷ್ಟೇ ಈ ಬೀರ್ ಸೇವನೆ experiment ಉ !” ಎಂದು ಕಣ್ಣು ಮಿಟುಕಿಸಿದ! ಕೊನೆಗೆ ಆ ಪ್ರಯೋಗವೂ ಆಗಿ ಅಳುಕು ಓಡಿಸುವ ಪ್ರಯತ್ನ ಪಟ್ಟಿದ್ದಾಯಿತು. ಹಲವಾರು ದಿನಗಳ ಸತತ ಅಭ್ಯಾಸದ ನಂತರ ಧ್ವನಿ—ಸ್ವರ ಕೊಂಚ ಹತೋಟಿಗೆ ಬಂದು ಆತ್ಮವಿಶ್ವಾಸ ಹೆಚ್ಚಿತು! ಎಲ್ಲಕ್ಕಿಂತ ನನ್ನ ಜತೆಗೆ ಅಭಿನಯಿಸುತ್ತಿದ್ದ ಅರುಂಧತಿ ಅವರು ನೀಡುತ್ತಿದ್ದ ಪ್ರೋತ್ಸಾಹ—ಉತ್ತೇಜನ ನನಗೆ ತುಂಬಾ ನೆರವಿಗೆ ಬಂತು. ಆಕೆಯಂತೂ ಅಪರೂಪದ ಕಲಾವಿದೆ. ಪಾತ್ರದೊಳಗೆ ಲೀಲಾಜಾಲವಾಗಿ ಪ್ರವೇಶಿಸುವ ಅವರ ಕಲೆಗಾರಿಕೆ..ಪ್ರೇಕ್ಷಕರಿಗೆ ಮೋಡಿ ಮಾಡಿಬಿಡುವಂತಹ ಅಭಿನಯ ಚತುರತೆ..ವಾಹ್! ಎರಡು ಮಾತಿಲ್ಲ!

‘ಆಟ ಬೊಂಬಾಟ್ ‘ ನಾಟಕದ ಪ್ರಥಮ ಪ್ರಯೋಗಗಳಾಗಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿ. ಶಂಕರನ ಹೆಸರಿನ ವಿಶೇಷ ಆಕರ್ಷಣೆಯೂ ಇದ್ದುದರಿಂದ ನಾಟಕಕ್ಕೆ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ನಿರೀಕ್ಷೆಗೂ ಮೀರಿ ನಾಟಕ ಯಶಸ್ವಿಯಾಯಿತು! ರಂಗದ ಮೇಲೆ ಹಾಡುವ,ಹಾಡಿಕೊಂಡೇ ಅಭಿನಯಿಸುವ ನನ್ನ ಪ್ರಪ್ರಥಮ ಪ್ರಯೋಗದ ಅಗ್ನಿ ಪರೀಕ್ಷೆಯಲ್ಲಿ ನಾನು ಗೆದ್ದಿದ್ದೆ! ಅಳುಕು—ಆತಂಕ—ಸಂಕೋಚದ ಕೋಶಗಳನ್ನೆಲ್ಲಾ ಭೇದಿಸಿ ರಂಗದ ಮೇಲೆ ಪಾತ್ರಾನುಸಾರಿ ಸಹಜತೆಯನ್ನು ಸಾಧಿಸುವ ಪಾತ್ರಾನುಸಂಧಾನದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಂತಹ ಸಂತಸ—ತೃಪ್ತಿ ನನ್ನ ಪಾಲಿಗಾಯಿತು.
ಬೆಂಗಳೂರು ದೂರದರ್ಶನ ಕೇಂದ್ರದ ಪ್ರಥಮ ನಿರ್ದೇಶಕರಾಗಿದ್ದ ಜೆ.ಎನ್.ಕಮಲಾಪುರ್ ಅವರು ನಾನು ಬಂದು ಸೇರಿದ ಕೆಲ ತಿಂಗಳುಗಳಲ್ಲೇ ನಿವೃತ್ತರಾಗಿ ಅವರ ಜಾಗಕ್ಕೆ ಸಿ.ಗುರುನಾಥ್ ಅವರು ಹೊಸ ನಿರ್ದೇಶಕರಾಗಿ ಬಂದು ಅಧಿಕಾರ ವಹಿಸಿಕೊಂಡರು. ಗುರುನಾಥ್ ಅವರು ಪುಣೆಯ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ನಾನು ತರಬೇತಿ ಪಡೆಯುತ್ತಿದ್ದಾಗ ಅಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ನಾನು ಮಾಡಿದ್ದ ಎಲ್ಲ ಕಾರ್ಯಕ್ರಮ—ಕಿರುಚಿತ್ರಗಳನ್ನು ನೋಡಿ ಮೆಚ್ಚಿ ಅಭಿನಂದಿಸಿದ್ದರು ಕೂಡಾ. ಬೆಂಗಳೂರಿಗೆ ಬಂದು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಹೊಸ ಹೊಸ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖರಾದರು.
ನಮ್ಮಸ್ಟುಡಿಯೋದಲ್ಲಿ ನಾವು ಸಿದ್ಧ ಪಡಿಸುತ್ತಿದ್ದ ಕಾರ್ಯಕ್ರಮಗಳೆಲ್ಲವೂ ಕಪ್ಪು ಬಿಳುಪಿನಲ್ಲಿರುತ್ತಿದ್ದವು. ಅದೇ ಹೊರಾಂಗಣದಲ್ಲಿ eng ಕ್ಯಾಮರಾಗಳನ್ನು ಬಳಸಿ ಚಿತ್ರೀಕರಿಸುತ್ತಿದ್ದ ಕಾರ್ಯಕ್ರಮಗಳು ವರ್ಣರಂಜಿತವಾಗಿರುತ್ತಿದ್ದವು. ಗುರುನಾಥ್ ಅವರು ಒಮ್ಮೆ ನನ್ನನ್ನು ಕರೆದು, “ಕೆಲವು ನಾಟಕಗಳನ್ನು ಹೊರಾಂಗಣದಲ್ಲಿ ಚಿತ್ರೀಕರಿಸಲು ಯಾಕೆ ಪ್ರಯತ್ನಿಸಬಾರದು? ಹಾಗೆಯೇ ನಮ್ಮ ಸ್ಟುಡಿಯೋದಲ್ಲಿಯೇ ಕಥಾಸರಣಿಯೊಂದನ್ನು ಧಾರಾವಾಹಿಯಂತೆ—ವಾರಕ್ಕೊಂದು ಕಂತಿನಂತೆ ಪ್ರಸಾರ ಮಾಡಲು ಸಾಧ್ಯವೇ ಎಂದು ಯೋಚಿಸಬಹುದು ಅಲ್ಲವೇ?” ಎಂದು ಸೂಚಿಸಿದರು. ನಾನೂ ಆ ನಿಟ್ಟಿನಲ್ಲಿ ಚಿಂತಿಸಲು ಆರಂಭಿಸಿದೆ. ಏನೇ ಆದರೂ ಯಾವುದೇ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಚಿಂತನೆಗೆ ತೊಡಗಲು ನಮ್ಮ ಕೇಂದ್ರದಲ್ಲಿ ಸಾಕಷ್ಟು ಮಿತಿಗಳಿದ್ದವು.ಹೊರಾಂಗಣ ಚಿತ್ರೀಕರಣಕ್ಕೆಂದು ಇದ್ದದ್ದು ಕೇವಲ 2—3 ಕ್ಯಾಮರಾಗಳು ಮಾತ್ರ! ಇದ್ದ ಲೈಟ್ ಗಳ ಸಂಖ್ಯೆಯೂ ತೀರಾ ಕಡಿಮೆ..ಬಳಸುವ ತಂತ್ರಜ್ಞರ ಸಂಖ್ಯೆ ಮತ್ತೂ ಕಡಿಮೆ.”ಎಲ್ಲ ಅನುಕೂಲಗಳೂ ಇದ್ದಾಗ ಒಳ್ಳೆಯ ಕಾರ್ಯಕ್ರಮಗಳನ್ನು ಯಾರು ಬೇಕಾದರೂ ಮಾಡುತ್ತಾರೆ; ಎಲ್ಲ ಇತಿಮಿತಿಗಳ ನಡುವೆ ಒಳ್ಳೆಯ ಕಾರ್ಯಕ್ರಮ
ರೂಪಿಸುವವನೇ ನಿಜವಾದ ಸೃಜನಶೀಲ ನಿರ್ಮಾಪಕ” ಎಂದು ಗುರುನಾಥ್ ಹುರಿದುಂಬಿಸುತ್ತಿದ್ದರು.ಇದೇ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದ ಡಾ॥ವಸಂತಕವಲಿಯವರು ತಮ್ಮ ಒಂದು ನಾಟಕವನ್ನು ದೂರದರ್ಶನಕ್ಕೆ ಅಳವಡಿಸಿಕೊಳ್ಳಲು ಸಾಧ್ಯವೇ ಎಂದು ನನ್ನನ್ನು ಕೇಳಿದರು.
ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯನ್ನು ಆಧರಿಸಿ ಸಿದ್ಧ ಪಡಿಸಿದ ನಾಟಕವಾಗಿತ್ತು ಅದು. ನಮ್ಮ ಕೇಂದ್ರದಲ್ಲಿಯೇ ಸಹಾಯಕ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಲಿತಾಂಬಾ ಅವರು ಆ ನಾಟಕದ ರಂಗ ಪ್ರಯೋಗದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ವಸಂತಕವಲಿಯವರು ಬಹಳ ದೊಡ್ಡ ವಿದ್ವಾಂಸರು;ಹತ್ತಾರು ಭಾಷೆಗಳನ್ನು ಬಲ್ಲವರಾಗಿದ್ದ ಅವರು ಪ್ರಸಿದ್ಧ ಸಂಗೀತಗಾರರೂ ಆಗಿದ್ದರು.ಭಾಷಾಶುದ್ಧಿ—ಸ್ಪಷ್ಟತೆಗಳಿಗೆ ವಿಶೇಷ ಗಮನ ನೀಡುತ್ತಿದ್ದ ವಸಂತ ಕವಲಿಯವರದು ಮಹಾ ಶಿಸ್ತಿನ ಸ್ವಭಾವ ಬೇರೆ. ‘ಸರಸಮ್ಮನ ಸಮಾಧಿ’ ಕಾದಂಬರಿಗೆ ಅವರು ಸೊಗಸಾದ ರಂಗರೂಪವನ್ನು ಕಟ್ಟಿಕೊಟ್ಟಿದ್ದರು. ಸರಸಮ್ಮನ ಸಮಾಧಿ ಒಂದು ವಿಡಂಬನಾತ್ಮಕ ಕೃತಿಯಾಗಿದ್ದು ಶಿವರಾಮಕಾರಂತರ ಒಂದು ಪ್ರಮುಖ ‘ಸ್ತ್ರೀ ಕೇಂದ್ರಿತ ಕೃತಿ’ ಎಂದು ಪ್ರಸಿದ್ಧವಾಗಿದೆ.
‘ಸರಸಮ್ಮನ ಸಮಾಧಿ’ ನಾಟಕವನ್ನು ನಮ್ಮ ಪುಟ್ಟ ಸ್ಟುಡಿಯೋದಲ್ಲಿ ಚಿತ್ರೀಕರಿಸುವುದು ಅಸಾಧ್ಯದ ಮಾತಾಗಿದ್ದರಿಂದ ಸಂಪೂರ್ಣ ಹೊರಾಂಗಣದಲ್ಲಿಯೇ ಚಿತ್ರೀಕರಿಸಲು ನಿರ್ಧರಿಸಿದೆವು.ವಸಂತಪುರದ ವಲ್ಲಭರಾಯ ಸ್ವಾಮಿ ದೇವಾಲಯದ ಆವರಣ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಕಲ್ಯಾಣಿ ನಮ್ಮ ನಾಟಕದ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು. ನಾನು,ರಾಜೇಂದ್ರ ಕಟ್ಟಿ ಹಾಗೂ ವಸಂತ ಕವಲಿಯವರು ವಸಂತಪುರದ ದೇವಾಲಯಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಿಕೊಂಡು ಅಲ್ಲಿ ಚಿತ್ರೀಕರಣ ನಡೆಸಲು ಆಡಳಿತ ವರ್ಗದವರಿಂದ ಅನುಮತಿ ಪಡೆದುಕೊಂಡು ಬಂದೆವು.ದೂರದರ್ಶನಕ್ಕಾಗಿ ನಾನು ಅಳವಡಿಸಿಕೊಂಡ ಮೊಟ್ಟಮೊದಲ ಮಹತ್ವಾಕಾಂಕ್ಷೆಯ ನಾಟಕ ‘ಸರಸಮ್ಮನ ಸಮಾಧಿ’. ಹೆಚ್ಚು ಕಡಿಮೆ ಎರಡು ತಾಸಿನ ನಾಟಕವಾದ್ದರಿಂದ ನಾಲ್ಕೈದು ದಿನಗಳಾದರೂ ಚಿತ್ರೀಕರಣ ನಡೆಸುವುದು ಅಗತ್ಯವಾಗಿತ್ತು. ತೀರಾ ಸಿನೆಮಾದಂತೆ ಚಿತ್ರೀಕರಿಸುವಷ್ಟು ಸಮಯಾವಕಾಶವಾಗಲೀ ಅನುಕೂಲಗಳಾಗಲೀ ನಮಗಿರಲಿಲ್ಲವಾದರೂ ನಾಟಕದಂತೆ ಒಂದೇ ಬೀಸಿನಲ್ಲಿ ಚಿತ್ರೀಕರಣವನ್ನು ಮಾಡಿ ಮುಗಿಸುವುದು ಕೂಡಾ ನನಗೆ ಸರಿ ಕಾಣದೆ ಎರಡೂ ಮಾರ್ಗಗಳನ್ನು ಬೆಸೆಯುವಂತಹ ಟೆಲಿ ಚಿತ್ರದ ಸುವರ್ಣ ಮಾಧ್ಯಮವನ್ನು ನಾನು ಆರಿಸಿಕೊಂಡೆ. ಹಗಲು ಹೊತ್ತಿನಲ್ಲಿ ಚಿತ್ರೀಕರಿಸುವುದು ಸಮಸ್ಯೆಯಾಗದೇ ಹೋದರೂ ರಾತ್ರಿ ಹೊರಾಂಗಣದಲ್ಲಿ ಚಿತ್ರೀಕರಣ ನಡೆಸುವುದು ಸವಾಲಿನ ವಿಷಯವೇ ಆಗಿತ್ತು. ದೂರದರ್ಶನ ಕೇಂದ್ರದಲ್ಲಿ ಜನರೇಟರ್ ಸೌಕರ್ಯದ ಮಾತು ಒತ್ತಟ್ಟಿಗಿರಲಿ, ಅಗತ್ಯ ಸಂಖ್ಯೆಯ ಲೈಟ್ ಗಳೂ ಸಹಾ ಲಭ್ಯವಿರಲಿಲ್ಲ! ಹೇಗೋ ಕಷ್ಟಪಟ್ಟು ಇದ್ದ ಬದ್ದ ಲೈಟ್ ಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ರಾತ್ರಿಯ ಚಿತ್ರೀಕರಣ ಆರಂಭಿಸಿದೆವು.ದೇವಸ್ಥಾನದ ವಿದ್ಯುತ್ ವ್ಯವಸ್ಥೆಯಿಂದಲೇ ಒಂದು ಸಂಪರ್ಕವನ್ನು ತೆಗೆದುಕೊಂಡು ನಮ್ಮ ಲೈಟ್ ಗಳನ್ನು ಬೆಳಗಿಸಲು ವ್ಯವಸ್ಥೆ ಮಾಡಿಕೊಂಡೆವು. ವಸಂತ ಕವಲಿಯವರು ಮಹಾ ಜಿಗುಟು ಸ್ವಭಾವದವರು;ಯಾವುದೇ ರೀತಿಯಲ್ಲೂ ಹೊಂದಾಣಿಕೆ ಮಾಡಿಕೊಳ್ಳದ ಭಾರೀ ಶಿಸ್ತಿನ ಸಿಪಾಯಿ; ಜತೆಗೆ ಮೂಗಿನ ತುದಿಯಲ್ಲೇ ಸಿಟ್ಟು ಸಿಡಿಯಲು ಹೊಂಚು ಹಾಕುತ್ತಿರುತ್ತದೆ…ಎಂದೆಲ್ಲಾ ಕಲಾವಿದರು ವಿಧವಿಧವಾಗಿ ವರ್ಣಿಸುವುದನ್ನು ಕೇಳಿದ್ದ ನನಗೆ ಎಲ್ಲಿ ಯಾವ ಹೊತ್ತಿನಲ್ಲಿ ದೂರ್ವಾಸಮುನಿ ಪ್ರಕಟವಾಗಿಬಿಡುತ್ತಾರೋ ಎಂದು ಎದೆ ನಡುಗುತ್ತಲೇ ಇತ್ತು! ಪುಣ್ಯವಶಾತ್ ಅಂಥ ಅಹಿತಕರ ಪ್ರಸಂಗಗಳೇನೂ ಜರುಗದೆ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದೆವು. ಆಶ್ಚರ್ಯವೆನ್ನುವಂತೆ ಕವಲಿಯವರು ಚಿತ್ರೀಕರಣದುದ್ದಕ್ಕೂ ಕಲಾವಿದರೆಲ್ಲರೂ ಬೆರಗಾಗುವಷ್ಟು ಸಮಾಧಾನಚಿತ್ತರಾಗಿದ್ದರು! ಲಲಿತಾಂಬಾ,ಅನಿಲ್ ಕುಮಾರ್ (ಬಿಳಿ ಹೆಂಡ್ತಿ ಚಿತ್ರ ಖ್ಯಾತಿ), ಬಿ.ಎನ್.ಕೃಷ್ಣಮೂರ್ತಿ ಅವರುಗಳ ಸೊಗಸಾದ ಅಭಿನಯ, ಸಂಪೂರ್ಣ ಹೊರಾಂಗಣದಲ್ಲಿ ಬಣ್ಣದಲ್ಲಿ ಚಿತ್ರೀಕರಣ, ಒಂದು ಶ್ರೇಷ್ಠ ಸಾಹಿತ್ಯ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿಕೊಂಡಿದ್ದು…ಇವೆಲ್ಲವೂ ‘ಸರಸಮ್ಮನ ಸಮಾಧಿ’ ಪ್ರಸ್ತುತಿಯ ವಿಶೇಷ ಅಂಶಗಳಾಗಿದ್ದವು.ನಾಲ್ಕೈದು ಕಂತುಗಳಲ್ಲಿ ಪ್ರಸಾರವಾದ ಈ ಟೆಲಿ ನಾಟಕ ಆ ಕಾಲದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಷ್ಟೇ ಅಲ್ಲ, ನನಗೆ ವೈಯಕ್ತಿಕವಾಗಿ ಅಪಾರ ಆತ್ಮವಿಶ್ವಾಸವನ್ನೂ ಧೈರ್ಯವನ್ನೂ ಗಳಿಸಿಕೊಳ್ಳಲು ನೆರವಾಯಿತು. ನಮ್ಮ ಕೇಂದ್ರದ ನಿರ್ದೇಶಕ ಗುರುನಾಥ್ ಅವರು ಮುಕ್ತ ಕಂಠದಿಂದ ನಮ್ಮ ಈ ಪ್ರಯತ್ನವನ್ನು ಪ್ರಶಂಸಿಸಿ ಬೆನ್ನು ತಟ್ಟಿದರು. ಪ್ರಪ್ರಥಮ ಸಾಹಸದಲ್ಲೇ ದೊಡ್ಡ ಯಶಸ್ಸು ದೊರೆತದ್ದು ಹಿಗ್ಗಾಗದಿರುತ್ತದೆಯೇ? ಹಗಲಿರುಳೂ ಕಷ್ಟಪಟ್ಟು ಮಾಡಿದ್ದು ಸಾರ್ಥಕವಾಯಿತೆಂದು ಸಂತಸದಿಂದ ಬೀಗುತ್ತಿರುವಾಗಲೇ ನನಗೆ ಬಂದ ಪತ್ರವೊಂದು ಆತಂಕಕ್ಕೆ ಕಾರಣವಾಗಿ ಹೋಯಿತು.ಅದು ವಸಂತಪುರದ ದೇಗುಲದ ಮ್ಯಾನೇಜರ್ ಅವರಿಂದ ಬಂದ ಪತ್ರ! ಆ ಪತ್ರದ ಒಕ್ಕಣೆ ಹೀಗಿತ್ತು: “ಸ್ವಾಮೀ,ತಾವು ನಮ್ಮ ದೇವಾಲಯದ ಆವರಣದಲ್ಲಿ ನಾಲ್ಕಾರು ದಿನಗಳ ಚಿತ್ರೀಕರಣವನ್ನು ನಮ್ಮ ಒಪ್ಪಿಗೆ ಪಡೆದೇ ನಡೆಸಿರುತ್ತೀರಿ.ಸಂತೋಷ. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಇತರ ಸಿಬ್ಬಂದಿ ವರ್ಗದವರ ನೆರವಿನಿಂದ ವಿದ್ಯುತ್ ಸಂಪರ್ಕ ತೆಗೆದುಕೊಂಡು ರಾತ್ರಿಗಳಲ್ಲಿ ಚಿತ್ರೀಕರಣ ನಡೆಸಿರುತ್ತೀರಿ.ಇದಕ್ಕೆ ನಮ್ಮ ಪರವಾನಗಿ ಇರಲಿಲ್ಲ.ಈ ಬಾರಿಯ ವಿದ್ಯುತ್ ಬಳಕೆಯ ಶುಲ್ಕ ನಿಮ್ಮ ಚಿತ್ರೀಕರಣದ ಕಾರಣದಿಂದಾಗಿ ಮೂರುಪಟ್ಟು ಹೆಚ್ಚಾಗಿ ಬಂದಿದೆ. ಆ ಕಾರಣ ಈ ಹೆಚ್ಚುವರಿ ಶುಲ್ಕವನ್ನು ತಮ್ಮ ಕೇಂದ್ರದವರು ಈ ಕೂಡಲೇ ಭರಿಸಿಕೊಡಬೇಕೆಂದು ಈ ಮೂಲಕ ತಿಳಿಸುತ್ತಿದ್ದೇವೆ.” ಅಯ್ಯೋ! ಇದಾವುದೋ ಹೊಸ ಸಮಸ್ಯೆ ಎದುರಾಯಿತಲ್ಲಾ ಎಂದು ಕಳವಳಗೊಂಡು ನಮ್ಮ ಕೇಂದ್ರದ ಅಕೌಂಟ್ಸ್ ವಿಭಾಗಕ್ಕೆ ಪತ್ರದೊಂದಿಗೆ ಓಡಿದೆ. ಅಲ್ಲಿಯ ಅಧಿಕಾರಿಗಳು: “ನೀವು ಮೊದಲೇ ಈ ವಿಚಾರಗಳನ್ನು ನಮಗೆ ತಿಳಿಸಿ ಒಪ್ಪಿಗೆ ಪಡೆದುಕೊಳ್ಳಬೇಕು.ಮೊದಲೇ ಮಂಜೂರಾತಿಯಾಗದ ಯಾವ ವೆಚ್ಚವನ್ನೂ ನಂತರದಲ್ಲಿ ನಾವು ಭರಿಸುವ ಪ್ರಶ್ನೆಯೇ ಇಲ್ಲ” ಎಂದು ಸಾರಾ ಸಗಟಾಗಿ ನನ್ನ ಮನವಿಯನ್ನು ತಿರಸ್ಕರಿಸಿಬಿಟ್ಟರು.ಏನು ಮಾಡುವುದೆಂಬ ಚಿಂತೆಯಲ್ಲಿ ನಾನು ಮುಳುಗಿದ್ದ ವೇಳೆಯಲ್ಲೇ ದೇಗುಲದ ಮ್ಯಾನೇಜರ್ ಅವರಿಂದ ಮತ್ತೊಂದು ಪತ್ರ..ಅದರ ಬೆನ್ನಿಗೇ ಕೊಂಚ ಕಟುವಾಗಿಯೇ ಇದ್ದ ಮತ್ತೊಂದು ಪತ್ರ! ಸಾಲದೆಂಬಂತೆ ಫೋನ್ ಕರೆಗಳ ಕಿರಿಕಿರಿ! ಏನು ಮಾಡಲೆಂದು ನಿರ್ದೇಶಕರನ್ನು ಕೇಳಿದರೆ,”ಮೊದಲೇ ಇದೆಲ್ಲವನ್ನೂ ಯೋಚಿಸಿ ಮಂಜೂರಾತಿ ಪಡೆಯಬೇಕು ಶ್ರೀನಿವಾಸ್! well, this is also a lesson for you…you have to be more careful in future..” ಎಂದೊಂದು ಪುಟ್ಟ ಉಪದೇಶ ನೀಡಿ ತಾರಮ್ಮಯ್ಯ ಆಡಿಸಿಬಿಟ್ಟರು! ಅಂದರೆ ಈ ವೆಚ್ಚವನ್ನು ನಾನೇ ತುಂಬಿಕೊಡಬೇಕೇ ಹಾಗಾದರೆ?! ಕನಿಷ್ಠ ನನ್ನ 2—3 ತಿಂಗಳ ಸಂಬಳದ ಹಣ! ಜಂಘಾಬಲವೇ ಉಡುಗಿಹೋದಂತಾಗಿಹೋಯಿತು! ವೆಚ್ಚ ಭರಿಸುವ ವಿಚಾರ ಒಂದು ಕಡೆಗಾದರೆ ಟೀಕೆಯ ಮಾತುಗಳನ್ನು ಕೇಳುವುದು ಮತ್ತೊಂದು ಕಡೆಗಾಗಿ ಒಳ್ಳೆಯ ನಾಟಕವನ್ನು ಮಾಡಿಸಿದ ಸಂತಸವೇ ಮಾಸಿಹೋಯಿತು! ಒಂದೆರಡು ಬಾರಿ ದೇಗುಲದ ಮ್ಯಾನೇಜರ್ ಅವರ ಫೋನ್ ತೆಗೆದುಕೊಳ್ಳಲೇ ಇಲ್ಲ..ಕಟ್ಟಿಯ ಮುಖಾಂತರ ರಜೆಯಲ್ಲಿದ್ದೇನೆಂದು ಹೇಳಿಸಿಬಿಟ್ಟೆ.ಅಷ್ಟಕ್ಕೇ ಅವರು ಸುಮ್ಮನಾಗುವ ಲಕ್ಷಣಗಳು ಕಾಣದಿದ್ದಾಗ ಕೊನೆಗೊಂದು ದಿನ ದೇಗುಲದ ಮ್ಯಾನೇಜರ್ ಅವರಿಗೆ ನನಗೊದಗಿರುವ ಸಮಸ್ಯೆಯನ್ನೂ ನನ್ನ ಪರಿಸ್ಥಿತಿಯನ್ನೂ ವಿವರಿಸಿ ಹೇಳಿ ‘ನೀವೇ ನನಗೀಗ ಸಹಾಯ ಮಾಡಬೇಕು ಸರ್ ‘ ಎಂದು ಅಲವತ್ತುಕೊಂಡೆ. ಸಾಕಷ್ಟು ಕರುಣಾಜನಕವಾಗಿಯೇ ಬೇಡಿಕೊಂಡೆನೆಂದು ಕಾಣುತ್ತದೆ..’ಹೋಗಲಿ ಬಿಡಿ..ಆದದ್ದಾಗಿ ಹೋಯಿತು..ಆಡಳಿತ ವರ್ಗದವರಿಗೆ ನಾನೇ ಏನಾದರೂ ಸಮಜಾಯಿಷಿ ಕೊಟ್ಟು ವಿಷಯ ಬೆಳೆಸದಂತೆ ಕೇಳಿಕೊಳ್ಳುತ್ತೇನೆ’ ಎಂದು ನುಡಿದು ನನ್ನ ಚಿಂತೆಯ ಹೊರೆಯನ್ನಿಳಿಸಿದರು.

ಇದಾದ ಕೆಲ ದಿನಗಳಿಗೇ ವಸಂತ ಕವಲಿಯವರು ನನ್ನನ್ನು ಆಕಾಶವಾಣಿ ಕೇಂದ್ರಕ್ಕೆ ಕರೆಸಿಕೊಂಡರು. “ಪ್ರಭು ಅವರೇ, ನೀವು ನನ್ನ ನಾಟಕವನ್ನು ಬಹಳ ಸೊಗಸಾಗಿ ದೂರದರ್ಶನಕ್ಕೆ ಅಳವಡಿಸಿಕೊಂಡು ಪ್ರಸಾರ ಮಾಡಿ ಲಕ್ಷಾಂತರ ಮಂದಿಗೆ ತಲುಪಿಸಿದ್ದೀರಿ. ಅದಕ್ಕಾಗಿ ನಾನು ನಿಮಗೆ ಆಭಾರಿ. ಒಂದು ಮುಖ್ಯ ವಿಷಯ ಮಾತಾಡಬೇಕೆಂದು ಈಗ ನಿಮ್ಮನ್ನು ಕರೆಸಿರುವುದು..ನಿಮ್ಮ ಹ್ಯಾಮ್ಲೆಟ್ ನಾಟಕವನ್ನು ನಾನು ನೋಡಿದ್ದೇನೆ. ನಾಟಕ ಪ್ರದರ್ಶನದ ಬಗ್ಗೆ ನನಗೆ ಒಂದೆರಡು ತಕರಾರುಗಳಿದ್ದರೂ ನಿಮ್ಮ ಅಭಿನಯ ಚೇತೋಹಾರಿಯಾಗಿತ್ತು. ಆಕಾಶವಾಣಿಗೆ ನಿಮ್ಮ ಹ್ಯಾಮ್ಲೆಟ್ ನಾಟಕವನ್ನು ಅಳವಡಿಸಿಕೊಳ್ಳಬೇಕೆಂದಿದ್ದೇನೆ. ನಿಮ್ಮ ತಂಡದೊಂದಿಗೆ ಬರಲು ಸಾಧ್ಯವೇ? ಹಾಂ..ಮತ್ತೊಂದು ಸ್ಪಷ್ಟೀಕರಣ: ಯಾವುದೇ ಋಣಸಂದಾಯಕ್ಕೆ ನಾನು ಈ ಅವಕಾಶವನ್ನು ನೀಡುತ್ತಿದ್ದೇನೆಂದು ನೀವು ಭಾವಿಸುವ ಅಗತ್ಯವಿಲ್ಲ. ನಿಮ್ಮ ನಾಟಕ—ಅಭಿನಯ ಚೆನ್ನಾಗಿದ್ದ ಕಾರಣಕ್ಕೆ ಈ ಆಹ್ವಾನವಷ್ಟೇ” ಎಂದರು ಕವಲಿಯವರು. ಆಹಾ! ವಸಂತಕವಲಿಯವರಂತಹ ನಿಷ್ಠುರ ಹಾಗೂ ನೇರ ಮಾತಿನ ವಿದ್ವಾಂಸರಿಂದ ಎರಡೆರಡು ಕಾರಣಕ್ಕೆ ಮೆಚ್ಚುಗೆ ಗಳಿಸಿಕೊಳ್ಳುವುದೆಂದರೆ ಅದೇನು ಸಾಮಾನ್ಯದ ಮಾತೇ! “ಖಂಡಿತ ನಮ್ಮ ತಂಡವನ್ನು ಕರೆದುಕೊಂಡು ಬರುತ್ತೇನೆ ಸರ್.. ನಿಮ್ಮ ಮೆಚ್ಚುಗೆ ಸಾವಿರ ಮಂದಿಯ ಮೆಚ್ಚುಗೆಗೆ ಸಮ ನನಗೆ!” ಎಂದು ನುಡಿದು ಅವರಿಗೆ ನಮಸ್ಕರಿಸಿ ಹೊರಟೆ. ಅದಾದ ಕೆಲ ದಿನಗಳಲ್ಲೇ ಆಕಾಶವಾಣಿಗಾಗಿ ನಮ್ಮ ಹ್ಯಾಮ್ಲೆಟ್ ನಾಟಕದ ಧ್ವನಿ ಮುದ್ರಣ ಕಾರ್ಯ ಯಶಸ್ವಿಯಾಗಿ ನಡೆಯಿತು.
ಆ ಸಂದರ್ಭದ ಒಂದು ಘಟನೆ ನೆನಪಾಗುತ್ತಿದೆ: ನಾಟಕದ ಧ್ವನಿ ಮುದ್ರಣ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ನಿಲ್ಲಿಸಲು ಕವಲಿಯವರಿಂದ ನಮಗೆ ಆದೇಶ ಬಂತು. ಎಲ್ಲಾ ಸರಿಯಾಗಿಯೇ ಇದ್ದರೂ ಏಕೆ ನಿಲ್ಲಿಸಿದರೆಂದು ನಾನು ಯೋಚಿಸುತ್ತಿರುವಾಗಲೇ ನಮ್ಮ ಕೊಠಡಿಯೊಳಗೆ ಬಂದ ಕವಲಿಯವರು, “ಈಗ ಓದುತ್ತಿದ್ದ ಭಾಗವನ್ನು ಇನ್ನೊಮ್ಮೆ ಓದಿ” ಎಂದರು. ನಾವು ಓದುತ್ತಿದ್ದಂತೆ ಅವರ ಮುಖದಲ್ಲಿ ಆಲೋಚನೆಯ ಗೆರೆಗಳು ಮೂಡಿದವು.ಒಂದೆರಡು ಕ್ಷಣ ಏನನ್ನೋ ನೆನಪಿಸಿಕೊಂಡವರೇ,”ಇಲ್ಲ.. ಈ ಭಾಷಾಂತರ ಸೂಕ್ತವಾಗಿಲ್ಲ..ಮೂಲದ ಸಾಲುಗಳು ಹೀಗಿವೆ ನೋಡಿ” ಎಂದು ನುಡಿದು ಶೇಕ್ಸ್ ಪಿಯರ್ ನ ಮೂಲ ನಾಟಕದ ಆ ಭಾಗದ ಸಂಭಾಷಣೆಗಳನ್ನು ಪಟಪಟನೆ ಉದ್ಧರಿಸಿ, “ಈ ಮಾತುಗಳ ಭಾಷಾಂತರ ಹೀಗಾದರೆ ಸರಿಯಿರುತ್ತದೆ” ಎಂದು ಒಂದಿಷ್ಟು ಬದಲಾವಣೆಗಳನ್ನು ಸೂಚಿಸಿದರು! ನಮಗೆಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ! ಇಡೀ ನಾಟಕ ಹೀಗೆ ಕಂಠಸ್ಥವಾಗಿರುವುದೆಂದರೆ ಏನರ್ಥ?! ನೆನಪಿನ ಉಗ್ರಾಣದ ಸಾಮರ್ಥ್ಯಕ್ಕಾದರೂ ಒಂದು ಮಿತಿ ಬೇಡವೇ?! ವಸಂತಕವಲಿಯವರ ಅಪಾರ ವಿದ್ವತ್ತಿಗೆ—ಸಾಮರ್ಥ್ಯಕ್ಕೆ ಇದೊಂದು ಪುಟ್ಟ ತೋರು ಬೆರಳಷ್ಟೇ.
ಇದೇ ಸಂದರ್ಭದಲ್ಲಿ YNK ಅವರು ವಸಂತ ಕವಲಿಯವರ ಬಗ್ಗೆ ಮಾಡುತ್ತಿದ್ದ ತಮಾಷೆಯೊಂದು ನೆನಪಾಗುತ್ತಿದೆ: ವಸಂತ ಕವಲಿಯವರು ಮಾಡಿಸಿದ್ದ ಒಂದು ಸಂಗೀತ ಪ್ರಧಾನ ನಾಟಕದ ಹೆಸರು ‘ಘನ ಆನಂದ’. ಅದರ ಕುರಿತು YNK ಹೇಳುತ್ತಿದ್ದುದು:”ಸರಿಯಾಗಿದೆ ನಾಟಕದ title ಉ..ಘನ ಆನಂದ! ಸ್ವಲ್ಪ ಹೇಳೋ style ಬೇರೆ ಆಗಬೇಕು ಅಷ್ಟೇ..ಅದು ಘನ ಆನಂದ ಅಲ್ಲ..’ಘ’ ನ ಆನಂದ! ಅವರ ಆನಂದವನ್ನೇ title ಮಾಡಿಬಿಟ್ಟಿದಾರೆ ನೋಡಿ!..ಘಾ..he is a big ‘gha’!” ‘ಘಾ’ YNK ಅವರ ಅತ್ಯಂತ ಮೆಚ್ಚಿನ ಬೈಗುಳ..ಅಥವಾ ಟೀಕೆ ಅಥವಾ ಸಂಬೋಧನೆ! ನಾನೂ ಅವರ ಬಾಯಲ್ಲಿ ಸಾಕಷ್ಟು ಬಾರಿ ಘಾ ಆಗಿದ್ದೇನೆ! YNK ಹಾಗಂದರು ಅಂದ ಮಾತ್ರಕ್ಕೆ ಕವಲಿಯವರ ಬಗ್ಗೆ ಅವರಿಗೆ ಗೌರವ—ಅಭಿಮಾನಗಳಿರಲಿಲ್ಲವೆಂದಲ್ಲ.. ಎಲ್ಲರ ಬಗ್ಗೆಯೂ ಹಗುರವಾಗಿ ತಮಾಷೆ ಮಾಡುವುದು YNK ಅವರ ಸ್ವಭಾವವೇ ಆದ್ದರಿಂದ ಇದನ್ನು ನೆನಪಿಸಿಕೊಂಡೆನೇ ಸಿವಾಯಿ ಕವಲಿಯವರಿಗೆ ಯಾವುದೇ ಅಗೌರವ ತೋರಿಸಲೆಂದಲ್ಲ. ವಾಸ್ತವವಾಗಿ ವಸಂತಕವಲಿಯವರು ‘GHA’ ಆಗಿದ್ದರೇ (ಗುಂಡು ಹಾಕದ ಆಸಾಮಿ!) ಎಂಬುದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ!!
| ಇನ್ನು ಮುಂದಿನ ವಾರಕ್ಕೆ ।






0 Comments